Pages

Sunday, 10 April 2011

ಅಂಬೇಡ್ಕರ್ ಸಂವಿಧಾv/s ಭಾರತದ ಸಂವಿಧಾನ! (ಭಾಗ-2)


ಮಂಗಳವಾರ - ಡಿಸೆಂಬರ್-14-2010

ಶುಕ್ರವಾರ - ಫೆಬ್ರವರಿ -04-2011

ಕಾಂಗ್ರೆಸ್‌ನ ಕುತಂತ್ರದಿಂದಾಗಿ 1946 ರಲ್ಲಿ ನಡೆದ ಪ್ರಾಂತಿಯ ಅಸೆಂಬ್ಲಿ ಚುನಾವಣೆ ಗಳಲ್ಲಿ ಬಾಂಬೆ ಪ್ರಾಂತ್ಯದಲ್ಲಿ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ ಸೋಲನ್ನಪ್ಪಿತ್ತು. ಈ ಅಸೆಂಬ್ಲಿ ಸದಸ್ಯರೇ ಸಂವಿಧಾನ ರಚನಾ ಸಭೆಯನ್ನು ಆಯ್ಕೆ ಮಾಡಬೇಕಾದ್ದರಿಂದ ಅಂಬೇಡ್ಕರ್‌ರ ಸೋಲು ಪೂರ್ವನಿಶ್ಚಿತವೇ ಆಗಿಬಿಟ್ಟಿತು. ಇದು ಪೂನಾ ಒಪ್ಪಂದದಲ್ಲಿ ದಲಿತರಿಗೆ ಪ್ರತ್ಯೇಕ ಮತ ಕ್ಷೇತ್ರ ಮತ್ತು ಮತದಾನ ನೀಡದೆ ಕೆಲವು ಸವರ್ಣೀಯರು ಮತ್ತು ದಲಿತರು ಇಬ್ಬರೂ ಓಟು ಹಾಕಿ ದಲಿತ ಅಭ್ಯರ್ಥಿಯನ್ನು ಗೆಲ್ಲಿಸುವ ಇಂದು ಜಾರಿಯಲ್ಲಿರುವ ಮತದಾನ ಪದ್ಧತಿಯ ಸಹಜ ಪರಿಣಾಮವೇ ಆಗಿತ್ತು.
ದಲಿತನೇ ಗೆದ್ದು ಬಂದರೂ ಮೇಲ್ಜಾತಿ ಹಂಗಿನಲ್ಲಿರುವ ದಲಿತ ಮಾತ್ರ ಗೆದ್ದು ಬರುವಂಥ ವ್ಯವಸ್ಥೆಯಲ್ಲಿ ಅಂಬೇ ಡ್ಕರ್ ಮತ್ತವರ ಫೆಡರೇಷನ್ ಗೆದ್ದು ಬರುವುದು ಕಷ್ಟವೇ ಆಗಿತ್ತು. ಆದುದರಿಂದಲೇ ಹಿರಿಯ ಅಂಬೇಡ್ಕರ್‌ವಾದಿ ಚಿಂತಕ ಭಗವಾನ್ ದಾಸ್‌ರು ಪೂನಾ ಒಪ್ಪಂದದ ಪರಿಣಾಮವನ್ನು ವಿಶ್ಲೇಷಿಸುತ್ತಾ ‘‘ದಲಿತರಿಗೆ ಹೆಚ್ಚಿನ ಸೀಟುಗಳು ಸಿಕ್ಕವು. ಆದರೆ ಹಕ್ಕುಗಳು ಸಿಕ್ಕಿದ್ದು ಕೆಲವು. ಅಧಿ ಕಾರವಂತೂ ಸಿಗಲೇ ಇಲ್ಲ’’ಎಂದು ಮಾರ್ಮಿಕ ವಾಗಿ ವಿಶ್ಲೇಷಣೆ ಮಾಡುತ್ತಾರೆ.
ಸಂವಿಧಾನ ರಚನಾ ಸಭೆಯಲ್ಲಿ 30 ದಲಿತರು ಆಯ್ಕೆಯಾದರು. ಆದರೆ ಅಂಬೇಡ್ಕರ್ ಆಯ್ಕೆ ಯಾಗಲಿಲ್ಲ. ಆದರೆ ಬಂಗಾಳ ಪ್ರಾಂತ್ಯದಿಂದ ಆಯ್ಕೆಯಾಗಿದ್ದ ಮತ್ತೊಬ್ಬ ದಲಿತ ನಾಯಕ ಜೋಗೇಂದ್ರನಾಥ್ ಮಂಡಲ್‌ರು ಬಂಗಾಳ ಪ್ರಾಂತ್ಯದಿಂದ ಅಂಬೇಡ್ಕರ್ ಗೆದ್ದು ಸಂವಿಧಾನ ರಚನಾ ಸಭೆ ಪ್ರವೇಶಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಆದರೆ 1947ರಲ್ಲಿ ದೇಶ ವಿಭಜನೆಯಾಗಿ ಬಂಗಾಳವೂ ವಿಭಜನೆ ಯಾದ ನಂತರ ಮತ್ತೆ ಅಂಬೇಡ್ಕರ್ ಸಂವಿ ಧಾನ ಸಭೆಯಿಂದ ಹೊರಗುಳಿಯ ಬೇಕಾ ಯಿತು. ಆದರೆ ಅಂಬೇಡ್ಕರ್ ಆ ವೇಳೆ ಗಾಗಲೆ ದೇಶದ ಮತ್ತು ಶೊಷಿತ ಜನರ ಪ್ರಶ್ನಾತೀತ ನಾಯಕರಾಗಿದ್ದರಿಂದ ಕಾಂಗ್ರೆ ಸ್‌ಗೆ ಅಂಬೇಡ್ಕರ್ ನುಂಗಲಾರದ ಬಿಸಿ ತುಪ್ಪವೇ ಆಗಿದ್ದರು.
ಆದರೇ ಸವರ್ಣೀಯ ಸಮಾಜದ ಔದಾರ್ಯ ರೂಪದ ಹಂಗಿನ ಕುತಂತ್ರವನ್ನು ಅರ್ಥ ಮಾಡಿಕೊಂಡಿದ್ದ ಏಕೈಕ ನಾಯಕರಾಗಿದ್ದ ಅಂಬೇಡ್ಕರ್‌ರನ್ನು ಹೊರಗಿಡುವುದು ತಮಗೇ ಅಪಾಯಕಾರಿ ಎಂದು ಅರ್ಥ ಮಾಡಿಕೊಂಡಿದ್ದ ಕಾಂಗ್ರೆಸ್ ನಾಯಕತ್ವ ಅವರನ್ನೂ ಸಹ ರಚನಾ ಸಮಿತಿಯ ಸದಸ್ಯರನ್ನಾಗಿಸಿಕೊಂಡಿತು. ತಮ್ಮ ರಾಜಕೀಯ ಹೋರಾಟದ ಉದ್ದಕ್ಕೂ ಕಾಂಗ್ರೆಸ್ಸನ್ನು ಎದುರಾಗುತ್ತಲೇ ಬಂದಿದ್ದ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯನ್ನೂ ಒಂದು ಸಂಘರ್ಷದ ಕಣವಾಗಿ ಪರಿಗಣಿಸಿ ಅದರ ಭಾಗವಾಗಲು ಒಪ್ಪಿದರು. ಮತ್ತೊಂದು ಕಡೆ ಮುಸ್ಲಿಂ ಭೂಮಾಲಕ ಹಾಗೂ ಶ್ರೀಮಂತರ ಪಕ್ಷವಾಗಿದ್ದ ಮುಸ್ಲಿಂ ಲೀಗ್ ತಾನು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲೆಲ್ಲಾ ಗೆದ್ದಿತು.
ಇಲ್ಲಿಯೂ ಮುಸ್ಲಿಮ್ ಬಡವರ ಅಥವಾ ಕೆಳಜಾತಿ ಅಜ್ಲಫ್ ಮತು ಅಲ್ಜಾರ್ ಮುಸ್ಲಿಮರ ಪ್ರಾತಿನಿಧ್ಯ ಇಲ್ಲವೆನ್ನುವಷ್ಟು ಕಡಿಮೆಯಿತ್ತು. ಕಾಂಗ್ರೆಸ್ಸಿನೊಳಗೆ ಆಚಾರ್ಯ ಕಪಲಾನಿಯಂಥ ಕಾಂಗ್ರೆಸ್ಸನ್ನು ಒಳಗಿನಿಂದ ಸಮಾಜಮುಖಿ ಮಾಡಲು ಪ್ರಯತ್ನಿಸುತ್ತಿದ್ದ ಕಾಂಗ್ರೆಸ್‌ನ ಕಾಂಗ್ರೆಸ್ ಸೋಷಿಯಲಿಸ್ಟ್ ಬಣದವರು ಆಯ್ಕೆಯಾದದ್ದು ಸಹ ಅಪವಾದವೇ ಹೊರತು ನಿಯಮವಾಗಿರಲಿಲ್ಲ. ಇನ್ನು ಕಮ್ಯುನಿಸ್ಟ್ ಪಕ್ಷದ ಸೋಮನಾಥ್ ಲಾಹರಿ ಎಂಬವರು ಬಂಗಾಳ ಪ್ರಾಂತ್ಯದಿಂದ ಆಯ್ಕೆಯಾದರೂ ದೇಶ ವಿಭಜ ನೆಯ ನಂತರ ಅವರು ಪೂರ್ವ ಪಾಕಿಸ್ತಾನದ ಭಾಗವಾದ್ದರಿಂದ ಭಾರತದ ಸಂವಿಧಾನ ಸಭೆಯಿಂದ ಹೊರ ಬಿದ್ದರು.
ಹೀಗೆ ಸಂವಿಧಾನದ ಕರ್ತ ಎಂದೇ ಕರೆಸಿ ಕೊಳ್ಳಲ್ಪಡುವ ಅಂಬೇಡ್ಕರ್ ಸಂವಿಧಾನ ರಚನಾ ಸಭೆಯ ಸದಸ್ಯರಾಗುವುದೇ ಕಷ್ಟವಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ಸಿಗರೇ ಅಂದರೆ ಮೇಲ್ಜಾತಿ ಮತ್ತು ಮೇಲ್ವರ್ಗದ ಜನ ಅಥವಾ ಅವರ ಹಿತಾಸಕ್ತಿಯನ್ನು ಪ್ರಶ್ನಿಸಿದ ಜನರೇ ಮೆಜಾರಿಟಿಯಲ್ಲಿದ್ದ ಸಂವಿಧಾನ ರಚನಾ ಸಭೆ ಎಷ್ಟರ ಮಟ್ಟಿಗೆ ಅಂಬೇಡ್ಕರ್ ಅವರ ನೀತಿ ನಿಲುವುಗಳನ್ನು ಒಪ್ಪಿಕೊಂಡಿರಲು ಸಾಧ್ಯ?
ಸಂವಿಧಾನ ರಚನಾ ಸಭೆಯ ಮೊದಲ ಹಂಗಾಮಿ ಅಧ್ಯಕ್ಷರಾಗಿದ್ದದ್ದು ಡಾ.ಸಚ್ಚಿದಾನಂದ ಸಿನ್ಹಾ ಎಂಬ ಬ್ರಿಟಿಷ್ ಸೇವಾಸಕ್ತರು. ನಂತರದಲ್ಲಿ ಸಂವಿಧಾನ ಸಭೆಯ ಶಾಶ್ವತ ಅಧ್ಯಕ್ಷರಾಗಿ ನಂತರ ಭಾರತದ ಪ್ರಥಮ ರಾಷ್ಟ್ರಪತಿಯಾದ ವರು ಬಾಬು ರಾಜೇಂದ್ರ ಪ್ರಸಾದರು. ಈ ಮಹಾಶಯರು ತಾವು ರಾಷ್ಟ್ರಪತಿಯಾದ ನಂತರ ನೂರು ಜನರ ಬ್ರಾಹ್ಮಣರ ಪಾದವನ್ನು ತೊಳೆದು ತಮ್ಮ ನಿಷ್ಠೆ ಎಲ್ಲಿದೆ ಎಂದು ತೋರಿದವರು.
ಇವರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದ ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾರವರು ‘‘ಯಾರ ಕೈಗಳು ಬ್ರಾಹ್ಮಣರ ಪಾದವನ್ನು ತೊಳೆಯು ತ್ತದೋ ಅದು ಶೂದ್ರರನ್ನು ಒದೆಯುವ ಕಾಲು ಗಳನ್ನೂ ಹೊಂದಿರುತ್ತದೆ’’ ಎಂದು ಆಗಲೇ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಈ ಸಂವಿಧಾನ ರಚನಾ ಸಭೆ ನಿಯಮ, ನಡಾವಳಿ, ಹಣಕಾಸು, ರಾಜ್ಯದ ಹಕ್ಕು, ಕೇಂದ್ರದ ಅಧಿಕಾರ, ಅಲ್ಪ ಸಂಖ್ಯಾತರ ಹಕ್ಕು, ಹಣಕಾಸು ಇನ್ನಿತರ ವಿಷ ಯಗಳ ಬಗ್ಗೆ ಹಲವಾರು ಉಪಸಮಿತಿಯನ್ನು ರಚಿಸಿತು.
ಅದರಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ನಡೆಯುವ ಚರ್ಚೆಯನ್ನು ಸಂಗ್ರಹಿಸಿ ಸಂವಿಧಾನದ ಕರಡನ್ನು ರಚಿಸುವ ಮತ್ತೊಂದು ಪ್ರಧಾನ ಜವಾಬ್ದಾರಿಯುತ ಸಮಿತಿಯಾದ ಕರಡು ರಚನಾ ಸಮಿತಿಗೆ ಅಂಬೇಡ್ಕರ್ ಅವ ರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಹೀಗೆ ಅಂಬೇಡ್ಕರ್ ಒಬ್ಬ ಸದಸ್ಯರಾಗಿ ಉದ್ದಕ್ಕೂ ಶೋಷಿತ-ದಲಿತರ ಆಸಕ್ತಿಗಳನ್ನು ಪ್ರತಿನಿ ಧಿಸುತ್ತಾ ಅವರ ಪರವಾಗಿ ಹೋರಾಡುತ್ತಾ ಬಂದರಾದರೂ ಅವರ ಧ್ವನಿ ಸಂವಿಧಾನ ರಚನಾ ಸಭೆಯಲ್ಲಿ ಹಲವಾರು ಬಾರಿ ಬಹುಮತವನ್ನು ಪಡೆದುಕೊಳ್ಳಲಾಗಲಿಲ್ಲ.
ಇಷ್ಟರ ನಡುವೆಯೂ ಅಂಬೇಡ್ಕರ್ ಕೆಲವು ಶೋಷಿತ ಜನರ ಪರವಾದ ಹಕ್ಕುಗಳನ್ನು ಅಂಗೀಕಾರ ಮಾಡುವಂತೆ ಯಶಸ್ವಿ ಯಾದರು. ಆದರೂ ಅಂಬೇಡ್ಕರ್‌ರೇ ಸಂವಿಧಾನ ಸಭೆಯ ಅಂತಿಮ ಭಾಷಣದಲ್ಲಿ ಮತ್ತು 1956ರಲ್ಲಿ ನಿಧನರಾಗುವ ತನಕ ಮಾಡಿದ ಹೋರಾಟಗಳಲ್ಲಿ, ಈ ಸಂವಿಧಾನ ಸಂಪೂರ್ಣ ವಾಗಿ ಶೋಷಿತರ ವಿಮೋಚನೆಗೆ ಪೂರಕವಾಗು ವುದಿಲ್ಲ ಎಂಬ ಮೂಲಭೂತ ಅನುಮಾನವನ್ನು ಮತ್ತು ಆಕ್ರೋಶವನ್ನು ಸ್ಪಷ್ಟವಾಗಿಯೇ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಅಂತಿಮವಾಗಿ ಹೊರಬಂದ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ ಸಂವಿಧಾನ ಎಂದು ಕರೆಯುವ ಮೂಲಕ ಅಂಬೇ ಡ್ಕರ್‌ರ ಹೋರಾಟದ ಬಗ್ಗೆ ತಪ್ಪುಚಿತ್ರಣವನ್ನೇ ಕೊಟ್ಟಂತಾಗುತ್ತದೆ. ಏಕೆಂದರೆ ಇಂದು 63 ವರ್ಷಗಳ ಸಂವಿಧಾನಬದ್ಧ ಆಡಳಿತದ ನಂತರವೂ ಈ ದೇಶದ ಶೋಷಿತರ ಬದುಕು ಇನ್ನಷ್ಟು ಅಧಃಪತನವಾಗಲು ಕಾರಣವಿರು ವುದು ಸಂವಿಧಾನದ ಅನುಷ್ಠಾನದ ವೈಫಲ್ಯ ದಲ್ಲಲ್ಲ. ಬದಲಿಗೆ ಸಂವಿಧಾನದಲ್ಲೇ ಆ ಮೂಲಭೂತ ಲೋಪವಿದೆ.
ಅಂಬೇಡ್ಕರ್ ಅವರು ಕನಸಿದ ನಿಜವಾದ ಸಂವಿಧಾನದ ರೂಪುರೇಷೆಗಳೇನೆಂಬುದನ್ನು ಅರ್ಥಮಾಡಿಕೊಂಡರೆ 1950ರ ಜವರಿ 28ರಂದು ಈ ದೇಶಕ್ಕೆ ನೀಡಲಾದ ಸಂವಿಧಾ ನದ ಮೂಲಕ ಈ ದೇಶದ ಪಟ್ಟಭದ್ರ ಹಿತಾಸಕ್ತಿಗಳು-ಬಂಡವಾಳಶಾಹಿಗಳು, ಭೂಮಾಲಕರು ಮತ್ತು ಬ್ರಾಹ್ಮಣವಾದಿಗಳು- ಮೂಲಭೂತವಾಗಿಯೇ ಹೇಗೆ ಈ ದೇಶದ ಜನರಿಗೆ ದ್ರೋಹ ಮಾಡಿದರೆಂಬುದು ಅರ್ಥವಾಗುತ್ತದೆ.

ಅಂಬೆಡ್ಕರ್ ರಚಿಸಿದ ಸಂವಿಧಾನ ಇದು!

 

1947ರಲ್ಲಿ ದೇಶ ವಿಭಜನೆಯಾಗಿ ಅಂಬೇ ಡ್ಕರ್ ಆಯ್ಕೆಯಾಗಿದ್ದ ಬಂಗಾಳ ಪ್ರಾಂತ್ಯ ದಿಂದ ಸಂವಿಧಾನ ರಚನಾ ಸಭೆಗೆ ಆಯ್ಕೆ ಯಾಗಿದ್ದ ಅಂಬೇಡ್ಕರ್‌ರ ಸದಸ್ಯತ್ವ ರದ್ದು ಗೊಂಡಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ರವರು ಈ ದೇಶದ ಭವಿಷ್ಯದ ಸಂವಿಧಾನ ಹೇಗಿರಬೇಕೆಂಬ ಬಗ್ಗೆ 1947ರ ಮಾರ್ಚ್‌ನಲ್ಲಿ ಸಂವಿಧಾನ ರಚನಾ ಸಭೆಯನ್ನು ಉದ್ದೇಶಿಸಿ- ‘States and Minorities: What are Their Rights and How to Secure them in the Constitution of Free India’ – ರಾಜ್ಯಗಳು ಮತ್ತು ಅಲ್ಪಸಂಖ್ಯಾತರು: ‘‘ಅವರ ಹಕ್ಕುಗಳೇನು ಮತ್ತು ಅದನ್ನು ಸ್ವತಂತ್ರ ಭಾರತದ ಸಂವಿಧಾನದ ಮೂಲಕ ಪಡೆದು ಕೊಳ್ಳುವ ಬಗೆ ಹೇಗೆ’’ ಎಂಬ ಮನವಿಯೊಂದ ನ್ನು ಸಿದ್ಧಪಡಿಸಿದರು. (ಇಲ್ಲಿ ಅಲ್ಪಸಂಖ್ಯಾತರು ಎಂದು ಕರೆದಿರುವುದು ಕೇವಲ ಧಾರ್ಮಿಕ ಅಲ್ಪಸಂಖ್ಯಾತರನ್ನು ಉದ್ದೇಶಿಸಿ ಮಾತ್ರವಲ್ಲ.) ಇದನ್ನು ಅಂಬೇಡ್ಕರ್ ಕನಸಿದ ‘Constitution of the United States of India’ ಎಂದೂ ಬಣ್ಣಿಸಲಾಗುತ್ತದೆ.
ಹೀಗಾಗಿ ಇಲ್ಲಿ ಪ್ರಸ್ತಾಪಿತವಾಗಿರುವ ಸ್ವತಂತ್ರ ಭಾರತದ ರೂಪುರೇಷೆ ಮತ್ತು ಅದನ್ನು ಆಗು ಮಾಡುವ ಶಾಸನಬದ್ಧ ಪರಿಗಳನ್ನು 1950ರ ಜನವರಿ 26ರಂದು ದೇಶಕ್ಕೆ ಕೊಡಮಾಡಲಾದ ಸಂವಿಧಾನವನ್ನೂ ಹೋಲಿಸಿ ನೋಡಿದಲ್ಲಿ ಅಂಬೇಡ್ಕರ್ ಅವರ ಸಂವಿಧಾನಕ್ಕೂ ಈ ದೇಶದ ಸಂವಿಧಾನಕ್ಕೂ ಇರುವ ಮೂಲಭೂತ ವ್ಯತ್ಯಾಸಗಳೂ ಗೊತ್ತಾಗುತ್ತದೆ.
‘‘ಸ್ಟೇಟ್ಸ್ ಆ್ಯಂಡ್ ಮೈನಾರಿಟೀಸ್’’ನಲ್ಲಿ ಅಂಬೇಡ್ಕರ್‌ರು ಇಂದು ಐರೋಪ್ಯ ಮಾದರಿಯ ಪಾರ್ಲಿಮೆಂಟರಿ ಪ್ರಜಾತಂತ್ರ ಯೂರೋಪಿನಲ್ಲೂ ಅಲ್ಲಿನ ಜನರನ್ನು ಬಿಡುಗಡೆ ಮಾಡಿಲ್ಲ.
ಭಾರತದಂತ ದೇಶದಲ್ಲಂತೂ ಕೇವಲ ಪಾರ್ಲಿಮೆಂಟರಿ ಪ್ರಜಾತಂತ್ರ ದಿಂದ ಈ ದೇಶದ ಜನರ ವಿಮೋಚನೆ ಸಾಧ್ಯವೇ ಇಲ್ಲ’’ವೆಂದು ಅಭಿಪ್ರಾಯಪಡುತ್ತಾರೆ. ಒಂದು ಪಾಲಿಮೆಂಟರಿ ಪ್ರಜಾತಂತ್ರಕ್ಕೆ ಸ್ವಾತಂತ್ರ್ಯ- ಲಿಬರ್ಟಿ ಮಾತ್ರ ಹೆಚ್ಚು ಪ್ರಿಯ ಮತ್ತು ಆದ್ಯತೆಯದ್ದು. ಆ ನಂತರವೇ ಸಮಾನತೆ ಅಥವಾ ಭ್ರಾತತ್ವ. ಆದರೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪರಂಪರಾನುಗತ ಅಸಮಾನತೆಯುಳ್ಳ ದೇಶವೊಂದರಲ್ಲಿ ಕೇವಲ ಸ್ವಾತಂತ್ರ್ಯ ಅಥವಾ ಕೇವಲ ಶಾಸನಬದ್ಧ ರಾಜಕೀಯ ಸಮಾನತೆ ಶೋಷಕ ವರ್ಗಗಳಿಗೆ ಮಾತ್ರ ಇನ್ನೂ ಹೆಚ್ಚು ಸ್ವಾತಂತ್ರ್ಯವನ್ನು ಕೊಡುತ್ತದೆ.
ಅದು ಹೇಗೆಂದೂ ಕೂಡಾ ಅಂಬೇಡ್ಕರ್ ಸ್ಪಷ್ಟವಾಗಿ ವಿವರಿಸುತ್ತಾರೆ. ಅಂಬೇಡ್ಕರ್ ಹೇಳುವಂತೆ ಇಲ್ಲಿ ಸ್ವಾತಂತ್ರ್ಯವೆಂದರೆ ಆರ್ಥಿಕ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸರಕಾರದ ಮಧ್ಯಪ್ರವೇಶದಿಂದ ಸ್ವಾತಂತ್ರ್ಯ ಎಂದರ್ಥ. ಅಂದರೆ ಒಬ್ಬ ಭೂಮಾಲಕ ಗೇಣಿದಾರನಿಗೆ ಹೆಚ್ಚು ತೆರಿಗೆ ಅಥವಾ ಪಾಲು ಕೊಡಬೇಕೆಂದು ಜುಲುಮೆ ಮಾಡುವ ಸ್ವಾತಂತ್ರ್ಯ. ಅಥವಾ ಒಬ್ಬ ಬಂಡವಾಳಿಗನಿಗೆ ಕೆಲಸದ ಅವಧಿಯನ್ನು ಹೆಚ್ಚಿಸಲು ಮತ್ತು ಕಡಿಮೆ ಕೂಲಿಯನ್ನು ಕೊಡಲು ಸ್ವಾತಂತ್ರ್ಯ.
ಇದೇ ಈ ಸ್ವಾತಂತ್ರ್ಯಕ್ಕೆ ಅರ್ಥ. ಏಕೆಂದರೆ ಸ್ವಾತಂತ್ರ್ಯ-ಲಿಬರ್ಟಿಯ ಅರ್ಥವೇ ಸರಕಾರದ ಮಧ್ಯಪ್ರವೇಶ ಕಡಿಮೆಯಾದಾಗ ಏನು ಉಳಿಯುತ್ತದೋ ಅದು ಎಂದು. ಆದರೆ ಒಂದು ಸಮಾಜ ಅಥವಾ ಕಾರ್ಖಾನೆ ನಡೆಯಲು ಯಾವುದಾದರೂ ಒಂದು ನಿಯಮ ಇರಲೇ ಬೇಕಾಗುತ್ತದೆ, ಸರಕಾರ ಆ ನಿಯಮ ಮಾಡದಿದ್ದರೆ ಬಂಡವಾಳಿಗರು ಅಥವಾ ಭೂಮಾಲಕರೇ ಆ ಕಾನೂನು ಮಾಡುತ್ತಾರೆ.
ಹೀಗಾಗಿ ಒಂದು ಅಸಮಾನ ಸಮಾಜದಲ್ಲಿ ಕೇವಲ ‘ಲಿಬರ್ಟಿ’ಯೆಂಬುದು ಶೋಷಕ ವರ್ಗಗಳ ಸರ್ವಾಧಿಕಾರವೆಂದೇ ಅರ್ಥ ಎನ್ನುತ್ತಾರೆ ಅಂಬೇಡ್ಕರ್. ಇಂಥಾ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಗಳಿಸಿಕೊಳ್ಳುವ ಸಮಾನತೆ ಸಾರಾಂಶದಲ್ಲಿ ಜನರ ಬದುಕಿನಲ್ಲಿ ಯಾವ ಅರ್ಥವನ್ನೂ ನೀಡುವುದಿಲ್ಲ. ಹೀಗಾಗಿ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲೂ ಸಮಾನತೆಯನ್ನು ಸಾಧಿಸಿಕೊಡುವಂಥಹ ಸಂವಿಧಾನ ಅತ್ಯಗತ್ಯ.
ಆದರೆ ಪ್ರಪಂಚದೆಲ್ಲೆಡೆ ಪಾರ್ಲಿಮೆಂಟರಿ ಪ್ರಜಾಪ್ರಭುತ್ವಗಳು ರಾಜಕೀಯ ಸಮಾನತೆಯನ್ನು ಮಾತ್ರ ಸಂವಿಧಾನಾತ್ಮಕ ಶಾಸನಗೊಳಿಸಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಶಾಸನ ಸಭೆಗಳ ಮರ್ಜಿಗೆ ಬಿಟ್ಟಿವೆ. ಆದರೆ ಚುನಾವಣಾ ಪದ್ಧತಿಯಲ್ಲಿ ಪ್ರಬಲರೇ ಆರಿಸಿ ಬರುತ್ತಿರುವುದು ಎಲ್ಲಾ ಪಾರ್ಲಿಮೆಂಟರಿ ಪ್ರಜಾಪ್ರಭುತ್ವಗಳ ಕಥೆಯೇ ಆಗಿರುವುದರಿಂದ ಯಾವ ಪಾರ್ಲಿಮೆಂಟರಿ ಪ್ರಜಾಪ್ರಭುತ್ವಗಳಲ್ಲೂ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಜಾರಿಗೆ ಬಂದಿಲ್ಲ ಎಂದು ಅಂಬೇಡ್ಕರ್ ಎಚ್ಚರಿಸುತ್ತಾರೆ.
ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯಿಲ್ಲದ ದೇಶಗಳಲ್ಲಿ ‘‘ಒಬ್ಬ ಮನುಷ್ಯನಿಗೆ ಒಂದು ಓಟು’’ ಎಂಬ ಪಾರ್ಲಿಮೆಂಟರಿ ಪ್ರಜಾ ಪ್ರಭುತ್ವದ ಮೂಲಭೂತ ರಾಜಕೀಯ ಆಶಯ ಒಂದು ಓಟು ಒಂದು ಮೌಲ್ಯವಾಗಿ ಪರಿವರ್ತನೆಯಾಗುವುದೇ ಇಲ್ಲ ಎಂದು‘‘ ಸ್ಟೆಟ್ಸ್ ಆ್ಯಂಡ್ ಮೈನಾರಿಟೀಸ್’’ನ ನಾಲ್ಕನೆ ಅಂಶಕ್ಕೆ ನೀಡಿರುವ ವಿವರಣಾ ಟಿಪ್ಪಣಿಯಲ್ಲಿ ಸ್ಪಪ್ಟಪಡಿಸುತ್ತಾರೆ. ಮತ್ತು ಅದಕ್ಕೆ ಕಾರಣ ಐರೋಪ್ಯ ದೇಶಗಳ ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ಒಬ್ಬರಿಗೆ ಒಂದು ಓಟು ಮತ್ತು ಸಾರ್ವತ್ರಿಕ ಮತದಾನವೆಂಬ ರಾಜಕೀಯ ಮೌಲ್ಯಗಳನ್ನು ದಾಟಿ ಮುಂದಕ್ಕೆ ಹೋಗದೇ ಇರುವುದೇ ಕಾರಣವೆಂದೂ ವಿವರಿಸುತ್ತಾರೆ.
ಹಾಗಾದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ರಾಜಕೀಯ ಸಮಾನತೆಯ ಜೊತೆಗೆ ಈಡೇರಿಸಿಕೊಳ್ಳುವ ಬಗೆ ಹೇಗೆ ಎಂಬ ಪ್ರಶ್ನೆಗೆ ಅಂಬೇಡ್ಕರ್ ಅದಕ್ಕೆ ಇರುವ ಒಂದೇ ಉತ್ತರ ಡಿಕ್ಟೇಟರ್‌ಶಿಪ್-ನಿರಂಕುಶತ್ವ ಅಥವಾ ಪ್ರಭುತ್ವ ಸಮಾಜವಾದ-ಸ್ಟೇಟ್ ಸೋಷಿಯಲಿಸಂ-ಮೂಲಕ ಮಾತ್ರ ರಾಜಕೀಯ ಸಮಾನತೆಯನ್ನು ತರಲು ಸಾಧ್ಯ ಎಂದು ಉತ್ತರಿಸುತ್ತಾರೆ. ಆದರೆ ಯಾವ ಸ್ವಾತಂತ್ರ್ಯ ಪ್ರೇಮಿಯೂ ನಿರಂಕುಶತ್ವವನ್ನೂ ಒಪ್ಪಲಾರ.
ಅದೇ ರೀತಿ ಸಮಾಜವಾದದ ಬಗೆಗೆ ಒಲವಿರುವ ಯಾವ ಪಾರ್ಲಿಮೆಂಟರಿ ಪ್ರಜಾತಂತ್ರವಾದಿಯೂ ನಿರಂಕುಶತ್ವಕ್ಕೆ ಒಪ್ಪಲಾರ ಎಂದು ಕೂಡಲೇ ವಿವರಿಸುವ ಅಂಬೇಡ್ಕರ್ ಹಾಗಿದ್ದಲ್ಲಿ ಏಕಕಾಲದಲ್ಲಿ ಪಾರ್ಲಿಮೆಂಟರಿ ಪ್ರಜಾಪ್ರಭುತ್ವವೂ, ಸ್ವಾತಂತ್ರ್ಯವೂ ಉಳಿದುಕೊಂಡು ಪ್ರಭುತ್ವ ಸಮಾಜವಾದ ಜಾರಿಗೆ ಬರಬೇಕೆಂದರೆ ಮೂಲಭೂತ ಹಕ್ಕುಗಳ ಭಾಗವಾಗಿಯೇ ಸಂವಿಧಾನಾತ್ಮಕ ಶಾಸನವಾಗಿ ಸಾಮಾಜಿಕ-ಆರ್ಥಿಕ ಸಮಾನತೆಯೂ ಜಾರಿಗೆ ಬರುವಂತೆ ಸಂವಿಧಾನ ರಚನೆಯಾಗಬೇಕೆಂದೂ ಆಗ್ರಹಿಸುತ್ತಾರೆ.
ಅಂದರೆ ಓಟು ಹಾಕುವ ಹಕ್ಕಿನಂತೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಹಕ್ಕೂ ಸಹ ಮೂಲಭೂತ ಹಕ್ಕಾಗುವುದು ಇದರ ಹಿಂದಿನ ಆಶಯ. ಇದು ಮೂಲಭೂತ ಹಕ್ಕಾಗಿಸದೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸುವ ಗುರಿಯನ್ನು ಸಂಸತ್ತಿನ ಶಾಸನಾತ್ಮಕ ಅಧಿಕಾರಕ್ಕೆ ಬಿಟ್ಟುಬಿಟ್ಟರೆ ಸಮಾನತೆ ಸಾದ್ಯವೇ ಇಲ್ಲವೆಂದು ಅಂಬೇಡ್ಕರ್ ಖಚಿತವಾಗಿ ಹೇಳುತ್ತಾರೆ. ಏಕೆಂದರೆ ಅಸಮಾನತೆಯೇ ಉಸಿರಾಗಿರುವ ದೇಶದಲ್ಲಿ ಮೊದಲನೆಯದಾಗಿ ಸಮಾನತೆಯ ಆಶಯವುಳ್ಳ ಜನರಿಗೆ ಅಧಿಕಾರ ಸಿಗುವುದು ಕಷ್ಟ.
ಹಾಗೊಮ್ಮೆ ಸಿಕ್ಕರೂ ಅವರೇ ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆ ಎಂಬುದಕ್ಕೆ ಪ್ರಪಂಚದ ಯಾವುದೇ ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲ್ಲಿ ಪುರಾವೆಯಿಲ್ಲ. ಹೀಗಾಗಿ ಒಮ್ಮೆ ಪ್ರಭುತ್ವ ಸಮಾಜವಾದದ ಪರವಾಗಿ ಅಧಿಕಾರಕ್ಕೆ ಬರುವ ಪಕ್ಷ ಮಾಡುವ ಶಾಸನವನ್ನು ಅದಕ್ಕೆ ತದ್ವಿರುದ್ಧವಾದ ಅಶಯಗಳನ್ನು ಇಟ್ಟುಕೊಂಡ ಪಕ್ಷ ಅಧಿಕಾರಕ್ಕೆ ಬಂದಾಗ ರದ್ದುಗೊಳಿಸಬಹುದು. ಆದರೆ ಅದು ಸಂವಿಧಾನಾತ್ಮಕ ಶಾಸನವಾದರೆ, ಯಾವ ಸರಕಾರಗಳೂ ಕಿತ್ತುಕೊಳ್ಳದ ಮೂಲಭೂತ ಹಕ್ಕಾದರೆ ಮಾತ್ರ ಅಂಥಾ ಪ್ರಜಾಪ್ರಭುತ್ವ ಜನರಲ್ಲಿ ಸಮಾನತೆಯನ್ನು ತರಲು ಸಾಧ್ಯವಾಗಬಹುದು.
ಆದುದರಿಂದಲೇ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಹಕ್ಕೂ ಸಹ ಮೂಲಭೂತ ಹಕ್ಕಾಗಬೇಕೆಂದೂ ಸಂವಿಧಾನಾತ್ಮಕ ಕಾನೂನಾಗ ಬೇಕೆಂದೂ ಆಗ್ರಹಿಸುತ್ತಾರೆ. ಹಾಗೂ ಇಂದು ಭಾರತದಲ್ಲಿ ಸಂವಿಧಾನ ಸಭೆಯಲ್ಲಿ ರಚಿತವಾಗುತ್ತಿರುವ ಸಂವಿಧಾನದಿಂದ ಈ ಗುರಿಗಳು ಈಡೇರಲು ಖಂಡಿತಾ ಸಾಧ್ಯವಿಲ್ಲವೆಂದು ಸಾಕಷ್ಟು ಸ್ಪಷ್ಟವಾಗಿಯೇ ಹೇಳುತ್ತಾರೆ. ಆದುದರಿಂದ ತಮ್ಮ ‘‘ಸ್ಟೇಟ್ಸ್ ಆ್ಯಂಡ್ ಮೈನಾರಿಟೀಸ್’’ ಕ್ಲಾಸ್ 4ರಲ್ಲಿ ರಾಜಕೀಯ ಸಮಾನತೆಯ ಜೊತೆಜೊತೆಗೆ ಹೇಗೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ತರಬೇಕೆಂಬುದರ ಬಗ್ಗೆ ಸಾಂವಿಧಾನಿಕ ಕಲಮುಗಳನ್ನು ರೂಪಿಸುತ್ತಾರೆ.
‘‘ಸ್ಟೇಟ್ ಅಂಡ್ ಮೈನಾರಿಟೀಸ್’’ನ ಕಲಂ 4ರ ಕೆಲವು ಮುಖ್ಯಾಂಶಗಳು ಹೀಗಿವೆ:

1. ಎಲ್ಲಾ ಕೀಲಕ ಕೈಗಾರಿಕೆಗಳ ಮತ್ತು ವಿಮೆ ಉದ್ಯಮಗಳ ಸಂಪೂರ್ಣ ಒಡೆತನ ಪ್ರಭುತ್ವದ್ದೇ ಆಗಿರಬೇಕು ಹಾಗೂ ಎಲ್ಲಾ ಶ್ರಮಜೀವಿಗಳಿಗೂ ಕಡ್ಡಾಯವಾಗಿ ಸರಕಾರ ವಿಮೆ ಮಾಡಿಸಬೇಕು. 
2. ಕಷಿಯ ರಾಷ್ಟ್ರೀಕರಣವಾಗಿ ಅದನ್ನು ಸರಕಾರವೇ ಸಂಪೂರ್ಣವಾಗಿ ವಹಿಸಿಕೊಳ್ಳಬೇಕು.
3. ಖಾಸಗಿ ವ್ಯಕ್ತಿಗಳ ಬಳಿ ಇರುವ ಎಲ್ಲಾ ಜಮೀನನ್ನೂ ಸರಕಾರ ಮುಟ್ಟುಗೋಲು ಹಾಕಿಕೊಳ್ಳ ಬೇಕು. ಅದಕ್ಕೆ ಅವರಿಗೆ ಕೊಡುವ ಪರಿಹಾರವನ್ನು ಸರಕಾರದ ಹಣದ ರೂಪದಲ್ಲಲ್ಲದೇ ಡಿಬೆಂಚರ್ ರೂಪದಲ್ಲಿ ಕೊಡಬೇಕು. ಆ ಡಿಬೆಂಚರ್ (ಅಂದರೆ ಮುಂದೆ ಒಂದು ನಿಗದಿತ ಮೊತ್ತದ ಹಣ ಪಾವತಿ ಮಾಡುವುದಾಗಿ ನೀಡುವ ಪ್ರಮಾಣ ಪತ್ರ) ಅನ್ನು ಯಾವಾಗ ನಗದಾಗಿ ಕೊಡಬೇಕೆಂಬ ತೀರ್ಮಾನ ಸರಕಾರವೇ ಮಾಡಬೇಕು. 
4. ಎಲ್ಲಾ ಕಷಿ ಜಮೀನನ್ನು ಸರಕಾರವೆ ವಶಪಡಿಸಿಕೊಂಡು ಅದನ್ನು ಉಳುಮೆ ಮಾಡಲು ಹಳ್ಳಿಯ ರೈತರಿಗೆ ಉಳುಮೆ ಮಾಡಲು ಗೇಣಿಗೆ ಬಿಟ್ಟುಕೊಡುತ್ತದೆ. 
5. ಕಷಿ ಭೂಮಿ ಹಂಚಿಕೆ ಮಾಡುವಾಗ ಜಾತಿ-ಮತಗಳ ಬೇದವಿಲ್ಲದೆ ಮತ್ತು ಭೂಮಾಲಕ, ಭೂಹೀನ ಕಾರ್ಮಿಕವೆನ್ನುವ ವರ್ಗಗಳು ಹುಟ್ಟದ ರೀತಿ ಹಂಚಿಕೆಯಾಗಬೇಕು
6. ಕಷಿಗೆ ಬೇಕಾದ ಸಲಕರಣೆಗಳು ಇತ್ಯಾದಿ ಸಹಾಯವನ್ನು ಸರಕಾರವೇ ಮಾಡಬೇಕು.
7. ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಈ ಎಲ್ಲಾ ಯೋಜನೆಗಳನ್ನು ಸಂವಿಧಾನ ಜಾರಿಗೆ ಬಂದ ನಂತರ ತ್ವರಿತವಾಗಿ ಮತ್ತು ಹೆಚ್ಚೆಂದರೆ ಹತ್ತು ವರ್ಷದೊಳಗೆ ಜಾರಿಗೆ ತರಲೇಬೇಕು.
ಇದು ಅಂಬೇಡ್ಕರ್ ಕಂಡಿದ್ದ ಕನಸಿನ ಸಂವಿಧಾನ..ಇದೇ ನಿಜಕ್ಕೂ ಸಾಕಾರಗೊಂಡಿದ್ದರೆ...!!!???

No comments:

Post a Comment

html