Pages

Wednesday, 30 July 2014


    ದಲಿತರ ಸಹಜವಾದ ಬುದ್ಧ ಪ್ರೀತಿ

                                -ರಘೋತ್ತಮ ಹೊ.ಬ


   
 ಹಿಂದೆ, 20ವರ್ಷಗಳ ಹಿಂದೆ ನನ್ನ ಅಣ್ಣ ನಾಗಸಿದ್ಧಾರ್ಥ ಹೊಲೆಯಾರ್ ಬೌದ್ಧಭಿಕ್ಕುವಿನ ವೇಷಧಾರಿಯಾಗಿ, ವಿಧಾನಸೌಧದ ಮುಂದೆ ಹೆಜ್ಜೆ ಹಾಕಿದ ಚಿತ್ರ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾದಾಗ ನನ್ನೂರ ಜನರೆಲ್ಲ ಚಕಿತವಾಗಿ ನೋಡಿದವರೆ! ಬೆರೆಗುಗಣ್ಣು ಬಿಟ್ಟವರೆ! ಬೆಂಗಳೂರಿನ “ಇಂಟರ್ ನ್ಯಾಷನಲ್ ಫ್ರೆಂಡ್ಸ್ ಆಫ್ ಬುದ್ಧಿಸ್ಟ್ಸ್” ಸಂಘಟನೆ ಏರ್ಪಡಿಸಿದ್ಧ ಆ ಬೌದ್ಧ ಯಾತ್ರೆಯಲ್ಲಿ ಇಂದಿನ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಕೂಡ ಶ್ವೇತ ವರ್ಷಧಾರಿಯಾಗಿ ‘ಭೀಮಜ್ಯೋತಿ’ ಹಿಡಿದು ಹೆಜ್ಜೆ ಹಾಕಿದ್ದರು. ನಾಡಿನಾದ್ಯಂತ ಅಂಬೇಡ್ಕರ್ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಏರ್ಪಡಿಸಿದ್ಧ ಆ ಬೌದ್ಧಯಾತ್ರೆ ಹೆಸರು ಪಡೆಯಿತು. ಹಾಗೆಯೇ ಸುದ್ದಿ ಕೂಡ ಮಾಡಿತ್ತು. ಮಾರನೆ ದಿನ ನನ್ನಣ್ಣ ಊರಿಗೆ ಬಂದಾಗ ಸಂಭ್ರಮವೋ  ಸಂಭ್ರಮ. ಏನನ್ನೋ ಸಾಧಿಸಿದ ಭವ್ಯತೆಯ ಸಂಗಮ. ಒಟ್ಟಾರೆ ಅಲ್ಲಿ ಸಾಧ್ಯವಾದದ್ದು “ಭೀಮಶಕ್ತಿ’ ಹಾಗೆಯೇ ದಲಿತರೊಳಗಿದ್ದ ಬುದ್ಧ ಭಕುತಿ.
      ಹೌದು, ಬುದ್ಧ ಭಕುತಿ ಅಥವಾ ಪ್ರೀತಿ ದಲಿತರಲ್ಲಿ ಅವಿನಾಭಾವವಾಗಿ ಮೂಡುವ ಒಂದು ದಿವ್ಯ ಭಾವನೆ. ಅದು ಬುದ್ಧನೆಡೆಗಿನ ಪ್ರೀತಿಯ ಧ್ಯೋತಕವೋ ಅಥವಾ ಅಂಬೇಡ್ಕರರ ಬೌದ್ಧ ಸ್ವೀಕಾರದ ಸಾರ್ಥಕವೋ  ಒಟ್ಟಿನಲಿ ದಲಿತರಿಗೆ ಬುದ್ಧನತ್ತ ಅವಿಚ್ಛಿನ್ನ ನಂಟಿರುವುದಂತು ಸುಳ್ಳಲ್ಲ. ದಲಿತರ ಈ ಬುದ್ಧ ಭಕುತಿಗೆ ನೇರ ಕಾರಣ ಬಾಬಾಸಾಹೇಬ್ ಅಂಬೇಡ್ಕರ್. ಹಿಂದೆ 1956ರಲ್ಲಿ  ಅವರು ತಮ್ಮ 10ಲಕ್ಷ  ಬಂಧುಗಳೊಡನೆ ಬೌದ್ಧಧರ್ಮ ಸ್ವೀಕರಿಸಿದಾಗ ಇಡೀ ಜಗತ್ತು ದಲಿತರು  ಇನ್ನು ಬೌದ್ಧ ಧಮ್ಮದ ಕಡೆಗೆ ನೋಡುವುದು ಎಂದು ಊಹಿಸಿತ್ತು. ಖಂಡಿತ ಅಂತಹ ನೋಡುವಿಕೆಯ ಭಾಗವಾಗಿ ಮೂಡಿಬರುವುದೇ ಬುದ್ಧ ಭಕುತಿ ಅಥವಾ ಭಕ್ತಿ.
   
  ಇಂತಹ ಬುದ್ಧಭಕ್ತಿ ಅಥವಾ ಬುದ್ಧನೆಡೆಗೆ ದಲಿತರ ಪ್ರೀತಿ ಇಂದು ಸರ್ವೇಸಾಮಾನ್ಯ. ಅದರಲ್ಲೂ ಶಿಕ್ಷಣ ಪಡೆದ ದಲಿತರಲ್ಲಂತೂ ಅಂತಹ ಪ್ರೀತಿ ಅಂಬೇಡ್ಕರರದಕ್ಕಿಂತ ಒಂದು ತೂಕ ಹೆಚ್ಚೆ  ಇರುತ್ತದೆ. ಏನು ಗೊತ್ತಿಲ್ಲ ಎಂದರೂ ದಲಿತರ ಮನಸ್ಸು “ಬುದ್ಧಂ ಶರಣಂ ಗಚ್ಛಾಮಿ” ಎಂದು ಗುನುಗು ಹಾಕುತ್ತಿರುತ್ತದೆ. ಬುದ್ಧನ ಚಿತ್ರ ಕಂಡರೆ ಅಥವಾ ಅವನ ಮಂತ್ರದ ಗಾನ ಕೇಳಿದರೆ ಎಂತಹ  ದಲಿತನೂ ತಲೆದೂಗದೆ ಇರಲಾರ.
     
   ಈ ಸಂದರ್ಭದಲ್ಲಿ ಒಂದಷ್ಟು ಪ್ರಶ್ನೆ ಕೇಳಿಬರುತ್ತವೆ. ಹಾಗಿದ್ದರೆ ದಲಿತರೆಲ್ಲ ಬೌದ್ಧರೆ? ಅಥವಾ ದಲಿತರ ಧರ್ಮ ಬೌದ್ಧ ಧರ್ಮವೇ? ಯಾಕೆ ದಲಿತರು ಇನ್ನೂ ಆ ಧರ್ಮವನ್ನು ಅಧಿಕೃತವಾಗಿ ಸ್ವೀಕರಿಸಿಲ್ಲ? ಇತ್ಯಾದಿ.  ಖಂಡಿತ, ಇದಕ್ಕೆಲ್ಲ ಉತ್ತರ ಸುಲಭದಲ್ಲಿ ಸಿಗುವುದಿಲ್ಲ. ಆದರೆ ದಲಿತರ ಬುದ್ಧ ಭಕುತಿ ಮತ್ತು ಪ್ರೀತಿ ಮಾತ್ರ ಹೆಚ್ಚುವುದು ನಿಂತಿಲ್ಲ! ಉದಾಹರಣೆಗೆ ನಮ್ಮ ಸ್ವಂತ ಊರಿನಲ್ಲಿ 20 ವರ್ಷಗಳ ಹಿಂದೆಯೇ ದಲಿತರೆಲ್ಲ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. “ಮಂಗಲಹೊಸೂರಿನಲ್ಲಿ 500 ದಲಿತರಿಂದ ಬೌದ್ಧಧರ್ಮ ಸ್ವೀಕಾರ” ಎಂಬ ಹೆಡ್‍ಲೈನ್ಸ್ ಪತ್ರಿಕೆಗಳಲ್ಲಿ ಆ ಕಾಲದಲ್ಲೇ  ಪ್ರಕಟವಾಗಿದೆ. ಆದರೆ ನನ್ನೂರ ದಲಿತರ್ಯಾರು “ನಾವು ಬೌದ್ಧರು. ನಮ್ಮ ಧರ್ಮ ಬೌದ್ಧಧರ್ಮ” ಎಂದು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಾಗಿದ್ದರೂ ಬುದ್ಧನೆಡೆಗಿನ ಅವರ ಭಕುತಿ ಮತ್ತು ಪ್ರೀತಿ ಮಾತ್ರ ಹಾಗೆಯೇ ಮುಂದುವರಿದಿದೆ.
     
    ಈ ನಿಟ್ಟಿನಲಿ ಇಂತಹ ಘಟನೆಗಳು ನಮ್ಮೂರಷ್ಟೆ ಅಲ್ಲ ದಲಿತ ಕೇರಿಗಳಲ್ಲಿ ಇದು ಸರ್ವೇಸಾಮಾನ್ಯ. ಇದು ಯಾವ ತರಹ ಎಂದರೆ ಇಂದು ಬಹುತೇಕ ದಲಿತರಿರುವ  ಕಡೆ ನಾವು ಒಂದಾದರೂ ಬೌದ್ಧ ವಿಹಾರ ನಿರ್ಮಾಣಗೊಂಡಿರುವುದನ್ನು ಗಮನಿಸಬಹುದು. ಖಾವಿ ತೊಟ್ಟು ಬೌದ್ಧಭಿಕ್ಕುಗಳಾಗಿ “ಭಂತೇ” ಎಂದು ಅಭಿಮಾನಪೂರ್ವಕವಾಗಿ ಕರೆಸಿಕೊಳ್ಳುತ್ತಿರುವ ಅನೇಕ  ದಲಿತ ಬೌದ್ಧ ಭಿಕ್ಕುಗಳನ್ನು ನಾವಿಂದು ಕಾಣಬಹುದು. ದಲಿತ  ಕೇರಿಗಳಲ್ಲಿ ಇಂದು ಅಲ್ಲಿ ನಡೆಯುವ ಮದುವೆ, ಹುಟ್ಟುಹಬ್ಬ ಇತ್ಯಾದಿ  ಸಡಗರಗಳಲ್ಲಿ ಬೌದ್ಧ ಭಿಕ್ಕುಗಳ ಹಾಜರಿ ಸಾಮಾನ್ಯ. ಒಟ್ಟಾರೆ  ಹೇಳುವುದಾದರೆ ಬುದ್ಧನೆಡೆಗೆ ದಲಿತರು ಸದ್ದಿಲ್ಲದೆ ಸಾಗುತ್ತಿದ್ದಾರೆ!
   
    ಹಾಗೆ ಹೇಳುವುದಾದರೆ ಇಂದಿಗೂ ಬಹುತೇಕ ದಲಿತರಲ್ಲಿ ತಮ್ಮ ಧರ್ಮ  ಯಾವುದು ಎಂಬ ಗೊಂದಲ ಇದ್ದೇ ಇದೆ.  ಮೀಸಲಾತಿಯ ವಿಷಯಕ್ಕೆ ಬಂದಾಗ ಅವರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದೇ ಬರೆಸಿಕೊಳ್ಳುತ್ತಾರೆ ಆದರೆ ಹೇಳಿಕೊಳ್ಳಲಲ್ಲ. ಆಚರಣೆಯಲ್ಲಿ ಮತ್ತು ಪ್ರೀತಿಯಲ್ಲಿ ಅವರ ಮೊದಲ ಪ್ರಾಶಸ್ತ್ಯ ಬುದ್ಧನಿಗಷ್ಟೆ ಮೀಸಲು. ಅಂದಹಾಗೆ ಈಚೀಚೆಗೆ ಅಶೋಕ, ಕನಿಷ್ಕಾನ ಕಾಲದಲ್ಲಿ ನಿರ್ಮಾಣಗೊಂಡಿದ್ದ ಮಾದರಿಯ ದೊಡ್ಡ ದೊಡ್ಡ ಬೌದ್ಧ ವಿಹಾರಗಳನ್ನು ನಾವು ದಲಿತರ ಪ್ರಯತ್ನದಿಂದಾಗಿ ಅಲ್ಲಲ್ಲಿ ಕಾಣಬಹುದು. ಉದಾಹರಣೆಗೆ ಮಹಾರಾಷ್ಟ್ರದ ನಾಗಪುರದಲ್ಲಿ ಅಂಬೇಡ್ಕರರು ಬೌದ್ಧಧರ್ಮ ಸ್ವೀಕರಿಸಿದ “ದೀಕ್ಷಾ ಭೂಮಿ”ಯಲ್ಲಿ ಇಂದು ಬೃಹತ್ ಬೌದ್ಧವಿಹಾರ ನಿರ್ಮಾಣಗೊಂಡಿದೆ. ಅಂಬೇಡ್ಕರ್  ಬೌದ್ಧಧರ್ಮ  ಸ್ವೀಕರಿಸಿದ್ದರ (1956 ಅಕ್ಟೋಬರ್ 14)  ನೆನಪಿಗಾಗಿ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ದಲಿತರು, ಕ್ಷಮಿಸಿ ಬೌದ್ಧರು ಅಕ್ಟೋಬರ್‍ನಲ್ಲಿ  ನಾಗಪುರಕ್ಕೆ ಭೇಟಿಕೊಡುತ್ತಾರೆ. ಹಬ್ಬದ ಮಾದರಿಯಲ್ಲಿ  ಸಂಭ್ರಮಿಸುತ್ತಾರೆ. ಅಂದಹಾಗೆ ಇದು ಮಹಾರಾಷ್ಟ್ರದಲ್ಲಷ್ಟೆ ಅಲ್ಲ ಉತ್ತರ ಪ್ರದೇಶದಲ್ಲಿ ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಮಾಯಾವತಿ ತಮ್ಮ ಆಡಳಿತಾವಧಿಗಳಲ್ಲಿ ರಾಜ್ಯದಾದ್ಯಂತ ಸಾವಿರಾರು ಬೌದ್ಧವಿಹಾರಗಳನ್ನು ನಿರ್ಮಿಸಿದ್ದಾರೆ. ಸ್ವತಃ ಮಾಯಾವತಿ ಮತ್ತು ಅವರ ಗುರು ದಿ.ಕಾನ್ಷೀರಾಮ್‍ರವರು ತಾವು ಬೌದ್ಧಧರ್ಮ ಸ್ವೀಕರಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ನಿಟ್ಟಿನಲಿ ಕಾನ್ಷೀರಾಮ್‍ರವರು ನಿಧನರಾದಾಗ(2006 ಅಕ್ಟೋಬರ್ 6) ಅವರ ಅಂತ್ಯಕ್ರಿಯೆಯನ್ನು ಅಂಬೇಡ್ಕರರ ಹಾಗೇ ಬೌದ್ಧ ವಿಧಿವಿಧಾನದಲ್ಲೇ ನೆರವೇರಿಸಿದ್ದನ್ನು ನಾವು ಗಮನಿಸಬಹುದು. ಒಟ್ಟಾರೆ ಇಂದು ಭಾರತ ದೇಶ ಮತ್ತು ಇಲ್ಲಿನ ದಲಿತ ಸಮುದಾಯ ಸಂಪೂರ್ಣ ಬುದ್ಧ ಪ್ರೀತಿಯಲ್ಲಿ ಮೀಯುತ್ತಿದೆ.
 
     ಈ ದಿಸೆಯಲ್ಲಿ ನಮ್ಮ ಕರ್ನಾಟಕವೂ ಕೂಡ ಹಿಂದೆ ಬಿದ್ದಿಲ್ಲ! ಯಕೆಂದರೆ ಹಾಲಿ ಕೇಂದ್ರ  ರೈಲ್ವೆ ಸಚಿವ  ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ ವತಿಯಿಂದ ನಾಗಪುರ ಮಾದರಿಯಲ್ಲೇ ಬಿಸಿಲ ನಾಡು ಗುಲ್ಬರ್ಗದಲ್ಲಿ ಬೃಹತ್ ಬುದ್ಧ ಮಂದಿರವನ್ನು ಕಟ್ಟಿಸಿದ್ದಾರೆ. ಆ ನಿಟ್ಟಿನಲಿ ಖರ್ಗೆಯವರು ಮಾಯಾವತಿಯವರ ಸಾಲಿನಲ್ಲಿ ನಿಲ್ಲುತ್ತಾರೆ.
   
  ದಲಿತ ಕೇರಿಗಳಲ್ಲಿ ಮತ್ತವರ ನಿತ್ಯ ಜೀವನದಲ್ಲಿ ಇಂದು ನಾವು ಬುದ್ಧನನ್ನು ಸಹಜವಾಗಿ ಕಾಣಬಹದು. ಬುದ್ಧನ ಭಾವಚಿತ್ರ, ಬುದ್ಧ ವಿಹಾರ,  ಬುದ್ಧನ ವೃಕ್ಷ ಅರ್ಥಾತ್ ಬೋಧಿ ವೃಕ್ಷ( ಅರಳೀ ಮರ) ಇವೆಲ್ಲ ದಲಿತ ಕೇರಿಗಳಲ್ಲಿ ಸರ್ವೇಸಾಮಾನ್ಯ. ಅಂದಹಾಗೆ  ವಯಕ್ತಿಕವಾಗಿ ನಾನು ಮತ್ತು ನನ್ನ ಕುಟುಂಬ ಕೆಲದಿನಗಳ ಹಿಂದೆ ನನ್ನೂರಿನ (ಚಾಮರಾಜನಗರ) ಬೌದ್ಧ ವಿಹಾರ (ಸಾರನಾಥ ವಿಹಾರ) ವೊಂದಕ್ಕೆ ಭೇಟಿಕೊಟ್ಟಿದ್ದೆವು. ನನ್ನ 5 ವರ್ಷದ ಪುಟ್ಟ ಮಗಳು ಸಾಂಚಿಮೌರ್ಯ ವಿಹಾರದ ಸುತ್ತ ಮುತ್ತ ಬೆಳೆದಿದ್ದ ಚಿಕ್ಕ ಚಿಕ್ಕ ಗಿಡಗಂಟಿಗಳನ್ನು ಕೀಳುತ್ತಾ ಅದರ ಆವರಣವನ್ನು ಶುಭ್ರಗೊಳಿಸುವ ಕ್ರಿಯೆಯಲ್ಲಿ ನಿರತಳಾಗಿದ್ದಳು. ಮನಸ್ಸು ಹೇಳಿತು “ನಿಜಕ್ಕೂ ಇಂದು ಆಗಬೇಕಾದ್ದೆಂದರೆ ದಲಿತರ ಎದೆಯಲ್ಲಿ ಇರುವ ಇಂತಹ  ಹಿಂದೂ ಧರ್ಮದ ಚಿಕ್ಕ ಚಿಕ್ಕ ಕಳೆಗಳನ್ನು ಕೀಳುವ ಕೆಲಸ. ಖಂಡಿತ, ನನ್ನ ಮಗಳಂತಹ ಮುಂದಿನ  ಜನರೇಷನ್ ಆ ಕ್ರಿಯೆಯಲ್ಲಿ ತೊಡಗುತ್ತದೆ” ಎಂದು.
 
   ದಲಿತರ ಬುದ್ಧನೆಡೆಗಿನ ಪ್ರೀತಿ ಮತ್ತು ಭಕುತಿ ಸವಿಜೇನ ರೀತಿ. ಅದು ನಿಷ್ಕಲ್ಮಶವಾದುದು. ಹಾಗೆಯೇ ಅವರಿಗೆ ಅತ್ಯಗತ್ಯವಾದುದು.                                                      
                                                       

html