ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ತರುಣಿಯ ಕೊಲೆ?;ಮಂಡ್ಯದಲ್ಲೊಂದು ಮರ್ಯಾದಾ ಹತ್ಯೆ ಪ್ರಕರಣ ಶುಕ್ರವಾರ - ಜನವರಿ -06-2012
ಮಂಡ್ಯ, ಜ.5: ಪರಿಶಿಷ್ಟ ಜಾತಿಗೆ ಸೇರಿದ ಯುವಕನೋರ್ವನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ಯುವತಿಯೊಬ್ಬಳನ್ನು ಆಕೆಯ ಸಂಬಂಧಿಕರು ಥಳಿಸಿ ಕೊಂದಿದ್ದು, ಬಳಿಕ ನೇಣು ಹಾಕಿದ್ದಾರೆ ಎಂದು ಮಂಡ್ಯದ ಕೊಪ್ಪ ಪೊಲೀಸ್ ಠಾಣೆ ಯಲ್ಲಿ ಯುವಕನ ಕುಟುಂಬ ದೂರು ನೀಡಿದೆ.ಯುವತಿಯನ್ನು ಯುವಕನ ಮನೆಯಲ್ಲೇ ಥಳಿಸಿ ಕೊಂದು ಬಳಿಕ ನೇಣು ಹಾಕಲಾಗಿದೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ, ಅವರು ದೂರು ದಾಖಲಿಸದೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ದಲಿತ ಯುವಕ ಗೋವಿಂದ ರಾಜು ಎಂಬವನ ಸಹೋದರ ತಿಮ್ಮಪ್ಪ ಕೆ. ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಕೊಪ್ಪ ಹೋಬಳಿಯ ಮದ್ದೂರು ತಾಲೂಕಿನ ಅಂಬಲವಾಡಿ ಗ್ರಾಮದ ಪರಿಶಿಷ್ಟ ಜಾತಿಯ ಮಾದಿಗ ಸಮಾಜಕ್ಕೆ ಸೇರಿದ ದೊಡ್ಡ ವೆಂಕಟಾಚಲ ಎಂಬವರ ಪುತ್ರ ಗೋವಿಂದರಾಜು ಯಾನೆ ಗುಂಡ ಎಂಬಾತ ಒಕ್ಕಲಿಗ ಸಮುದಾಯದ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೊಪ್ಪ ಜೆಡಿಎಸ್ ಮುಖಂಡ ದವಲನ ರಾಮಕೃಷ್ಣ ಎಂಬವರ ಪುತ್ರಿ ಸುವರ್ಣಾ ಎಂಬಾಕೆಯನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದಕ್ಕೆ ಯುವತಿಯ ಕಡೆಯವರಿಂದ ವಿರೋಧವಿತ್ತೆಂದು ಹೇಳಲಾಗಿದೆ.
ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಇವರಿಬ್ಬರು ಪ್ರೀತಿಸುತ್ತಿರುವ ವಿಷಯ ತನ್ನ ಗಮನಕ್ಕೆ ಬಂದಾಗ ತಾನು ಗೋವಿಂದ ರಾಜುಗೆ ಬುದ್ಧಿವಾದ ಹೇಳಿ ಊರು ಬಿಟ್ಟು ಕಳುಹಿಸಿಕೊಟ್ಟಿದ್ದೆ ಎಂದು ಸಹೋದರ ತಿಮ್ಮಪ್ಪ ತಿಳಿಸಿದ್ದಾರೆ. ಆದರೆ ಈ ನಡುವೆ ನವೆಂಬರ್ 6ರಂದು ಸುವರ್ಣಾ ತನ್ನ ತಮ್ಮ ಗೋವಿಂದ ರಾಜುವನ್ನು ಅರಸೀಕೆರೆಗೆ ಕರೆಸಿ ಭೇಟಿಯಾಗಿದ್ದಾರೆಂದು ಹೇಳಲಾಗಿದ್ದು,ಇದನ್ನರಿತ ಸವರ್ಣೀಯರು ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದು, ದೇವರಾಜು ಎಂಬಾತ ಗೋವಿಂದರಾಜುವನ್ನು ನನ್ನ ಬಳಿ ಬಿಟ್ಟು ನಿನ್ನ ತಮ್ಮನನ್ನು ಮನೆಗೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.
ನಾನು ತಮ್ಮನನ್ನು ಮನೆಗೆ ಕರೆತಂದ ಕೆಲವೇ ಹೊತ್ತಿನಲ್ಲಿ ನಮ್ಮ ಮನೆಗೆ ನುಗ್ಗಿದ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ಮಲ್ಲೇಶ ಬಿನ್ ಮುಸುರಿ ತಿಮ್ಮಣ್ಣ, ತಿಮ್ಮೇಶನ ಅಕ್ಕನ ಮಗ ಮುರುಗೇಶ, ದವಲನ ಜಯಣ್ಣನ ಮಗ ಹಾಗೂ ಲಕ್ಷ್ಮಿ ಎಂಬಾಕೆಯ ಗಂಡ ಯಾಮ, ಚಿಕ್ಕತಾಯಿ ಎಂಬವರ ಗಂಡ ರವಿ ಮುಂತಾದವರು ನನ್ನ ತಮ್ಮನನ್ನುದ್ದೇಶಿಸಿ ‘‘ಮಾದಿಗ... ಸೂಳೆ ಮಗ... ನಿನಗೆ ಒಕ್ಕಲಿಗ ಹುಡುಗಿಯೇ ಬೇಕಾ ಎಂಬಿತ್ಯಾದಿ ಪದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ತಮ್ಮನನ್ನು ಮನೆಯಿಂದ ಎಳೆದುಕೊಂಡು ಹೋಗಿ ಸುವರ್ಣಾ ಇದ್ದ ಕೊಠಡಿಗೆ ಕೂಡಿ ಹಾಕಿ ಇಬ್ಬರ ಮೇಲೂ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಮ್ಮಪ್ಪ ಕೆ. ಕೊಪ್ಪ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ದವಲನ ರಾಮಕೃಷ್ಣ ಇವರಿಬ್ಬರನ್ನೂ ನೇಣಿಗೆ ಹಾಕಿ ಎಂದು ಹೇಳಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ದವಲನ ರಾಮಕೃಷ್ಣ ಇತರ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ರಾಜು ಬಿನ್ ಲಲ್ಲೇಗೌಡ, ಮಲ್ಲೇಶ ಬಿನ್ ಮುಸುರಿ, ತಿಮ್ಮಣ್ಣ ದವಲನ ಜಯಣ್ಣನ ಮಗ ತಿಮ್ಮೇಶ, ಆತನ ಅಕ್ಕನ ಮಗ ಮುರುಗೇಶ, ಲಕ್ಷ್ಮಿಯ ಗಂಡ ಯಾಮ, ಚಿಕ್ಕತಾಯಿ ಗಂಡ ರವಿ ಎಂಬವರೊಂದಿಗೆ ಸೇರಿ ಸುವರ್ಣಾಳನ್ನು ನನ್ನ ಮನೆಗೆ ಕರೆ ತಂದು ನಮ್ಮ ಮನೆಯಲ್ಲೇ ನೇಣು ಹಾಕಿ ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟಿಸಿದ ನನ್ನ ಹೆಂಡತಿ ತಾಯಮ್ಮ ಮತ್ತು ನನ್ನ ನಾದಿನಿ ಮಂಗಳಮ್ಮ ಎಂಬವರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ನಡುವೆ ಮಾರಣಾಂತಿಕ ಹಲ್ಲೆಯಿಂದ ತಪ್ಪಿಸಿಕೊಂಡ ಗೋವಿಂದ ರಾಜು ಹೊರಟು ಹೋಗಿದ್ದಾನೆ. ಭಯಭೀತನಾದ ನಾನು ಕೊಪ್ಪ ಪೊಲೀಸ್ ಠಾಣೆಗೆ ತೆರಳಿ ಘಟನೆಯನ್ನು ಪೊಲೀಸರಿಗೆ ವೌಖಿಕವಾಗಿ ವಿವರಿಸಿದ್ದೆ. ತಕ್ಷಣ ಕ್ರಮ ಕೈಗೊಳ್ಳಬೇಕಾದ ಪೊಲೀಸರು ‘‘ಈ ವಿಚಾರ ನೀನು ಯಾರಲ್ಲೂ ಹೇಳಬೇಡ. ಈಗ ನೀನು ತಲೆಮರೆಸಿ ಎಲ್ಲಾದರೂ ಇರು. ನಿನ್ನ ಅಗತ್ಯ ಬಿದ್ದಾಗ ನಾನೇ ನಿನಗೆ ಫೋನ್ ಮಾಡಿ ತಿಳಿಸುತ್ತೇವೆ ಎಂದು ನನ್ನ ಫೋನ್ ನಂಬರ್ ಪಡೆದು ನಿನಗೇನಾದರೂ ತೊಂದರೆಯಾದರೆ ಈ ನಂಬರ್‌ಗೆ ಫೋನ್ ಮಾಡು ಎಂದು 9480804870 ಈ ಮೊಬೈಲ್ ಸಂಖ್ಯೆ ನೀಡಿ ಕಳುಹಿಸಿಕೊಟ್ಟಿದ್ದಾರೆ’’ ಎಂದು ತಿಮ್ಮಪ್ಪ ದೂರಿಕೊಂಡಿದ್ದಾರೆ.
ಈ ಘಟನೆಯಿಂದ ನನ್ನ ಇನ್ನೋರ್ವ ತಮ್ಮ ತಿಮ್ಮೇಶ ಮತ್ತು ತಂದೆ ಜೊತೆ ಊರು ಬಿಟ್ಟು ತಲೆಮರೆಸಿಕೊಂಡಿದ್ದೆವು. ನನ್ನ ತಾಯಿ ಮತ್ತು ನನ್ನ ಪತ್ನಿ ಪೊಲೀಸ್ ರಕ್ಷಣೆಯಲ್ಲೇ ಊರಿನಲ್ಲಿದ್ದರು. ಈ ಮಧ್ಯೆ ನವೆಂಬರ್ 28ರಂದು ಸುವರ್ಣಾಳ ತಂದೆ ದವಲನ ರಾಮಕೃಷ್ಣ ನನ್ನ ತಾಯಿಯ ಮೇಲೆ ಹಲ್ಲೆ ಮಾಡಿ ‘‘ನಿನ್ನ ಸೊಸೆಯನ್ನು ಅತ್ಯಾಚಾರ ಮಾಡುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾರೆ ಅಂದಿನಿಂದ ನನ್ನ ತಾಯಿ ಮತ್ತು ನನ್ನ ಪತ್ನಿ ಸಹ ಇವರ ಬೆದರಿಕೆಗೆ ಊರು ಬಿಟ್ಟು ತೆರಳಿದ್ದಾರೆ. ಮಾತ್ರವಲ್ಲದೆ, ಘಟನೆಯ ಬಗ್ಗೆ ಯಾರಾದರೂ ಸಾಕ್ಷಿ ಹೇಳಿದರೆ ಅಂತವರ ಮನೆಗೆ ಪೆಟ್ರೋಲ್ ಹಾಕಿ ಬೆಂಕಿಯಿಟ್ಟು ಕೊಂದು ಹಾಕುವುದಾಗಿಯೂ ದವಲನ ರಾಮಕೃಷ್ಣ ಬೆದರಿಕೆ ಹಾಕಿದ್ದು, ಇದರಿಂದಾಗಿ ಯಾರೂ ಸಾಕ್ಷಿ ಹೇಳಲು ಮುಂದೆ ಬರುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯನಾಗಿರುವ ನಾನು ಪಂಚಾಯತ್ ಸಭೆಗೆ ಹಾಜರಾದರೆ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ್ದು, ಇದರಿಂದಾಗಿ ನಾನು ಪಂಚಾಯತ್ ಸಭೆಗೂ ಹಾಜರಾಗಿಲ್ಲ. ಘಟನೆಯ ಬಳಿಕ ಸುಮಾರು 60 ಸಾವಿರ ರೂ. ವೌಲ್ಯ ಎತ್ತು ಮತ್ತು ಗಾಡಿಗಳನ್ನು ಬಡೇರ ಕೃಷ್ಣ ಎಂಬವರು ಕಳವು ಮಾಡಿರುವುದಾಗಿಯೂ ಇವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಘಟನೆಯಿಂದ ಜೀವಭಯಕ್ಕೊಳಗಾಗಿರುವ ನಾನು ಊರು ಬಿಟ್ಟು ಅಲೆಯುತ್ತಿದ್ದು, ನಾನು ಬೆಳೆದಿರುವ ಭತ್ತ, ಕಬ್ಬು ಕಟಾವು ಮಾಡಲು ಊರಿಗೆ ತೆರಳಬೇಕಾಗಿದ್ದು, ನನಗೆ ಜೀವ ಭಯ ಇದೆ.
ನನ್ನ ಹೆಂಡತಿ, ತಾಯಿ, ತಮ್ಮನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಬೆದರಿಕೆಯೊಡ್ಡಿದ ಹಾಗೂ ಸುವರ್ಣಾಳನ್ನು ನೇಣು ಹಾಕಿ ಕೊಲೆ ಮಾಡಿರುವ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮತ್ತು ಭದ್ರತೆ ನೀಡುವಂತೆ ಅವರು ಪೊಲೀಸ್ ಇಲಾಖೆಯನ್ನು ಮನವಿ ಮಾಡಿದ್ದಾರೆ.
http://www.youtube.com/watch?v=lK9rXbLwfkM
ಮಾದಿಗ ಯುವಕನ ಪ್ರೇಮಿಸಿದ ಒಕ್ಕಲಿಗ ಹುಡುಗಿ ಕೊಲೆ ಕನ್ನಡಪ್ರಭ ವಾರ್ತೆ ಮಂಡ್ಯ ಜ.೫ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆಯುತ್ತಿದ್ದ ಮರ್ಯಾದಾ ಹತ್ಯೆ ಇದೀಗ ರಾಜ್ಯದಲ್ಲೂ ನಡೆದ ಘಟನೆ ಬೆಳಕಿಗೆ ಬಂದಿದೆ. ಮಂಡ್ಯ ...
ಮದ್ದೂರು: ಆಬಲವಾಡಿಯಲ್ಲಿ ನಡೆದಿ ರುವುದು ಮಾರ್ಯದಾ ಹತ್ಯೆಯಲ್ಲ. ಅದು ಯುವತಿಯ ಆತ್ಮಹತ್ಯೆ ಎಂದು ಹೇಳಿಕೆ ನೀಡುವ ಮೂಲಕ ಗೃಹ ಸಚಿವ ಆರ್. ಅಶೋಕ್ ಅವರು ಇಡೀ ಘಟನೆಯನ್ನು ಮರೆಮಾಚಲು ಹೊರಟಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಗೌರಮ್ಮ ಗುರುವಾರ ದೂರಿದರು.
ತಾಲ್ಲೂಕಿನ ಆಬಲವಾಡಿಗೆ ಭೇಟಿ ನೀಡಿದ ಅವರು, ಮಾರ್ಯಾದೆ ಹತ್ಯೆಗೆ ಸಂಬಂಧಿಸಿದಂತೆ ಗ್ರಾಮದ ಜನರನ್ನು ಭೇಟಿ ಮಾಡಿ ವಿಚಾರಣೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಘಟನೆಯ ಸತ್ಯಾಸತ್ಯತೆ ಪರಿಶೀಲಿಸ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ, ಈ ಮೂಲಕ ಇಡೀ ಘಟನೆ ಯನ್ನು ದಿಕ್ಕು ತಪ್ಪಿಸಲು ಹೊರಟಿರು ವುದು ಸರಿಯಲ್ಲ. ಅವರಿಗೆ ನೈತಿಕತೆ ಇದ್ದರೆ ಕೂಡಲೇ ಘಟನೆಯ ಬಗೆಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಗುಜರಾತ್, ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿದ್ದ ಮಾರ್ಯದೆ ಹತ್ಯೆ ಈಗ ರಾಜ್ಯಕ್ಕೂ ಕಾಲಿಟ್ಟಿರುವುದು ದುರಂತದ ಸಂಗತಿ. ಮಡೆಸ್ನಾನದ ಬಗೆಗೆ ರಾಜ್ಯದ ಉನ್ನತ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ವಿ.ಎಸ್. ಆಚಾರ್ಯ ಬೆಂಬಲಿಸಿ ಮಾತನಾಡುವುದನ್ನು ನೋಡಿದರೆ, ಮಾರ್ಯಾದೆ ಹತ್ಯೆಯು ಈ ಸರ್ಕಾರದ ಮೇಲೆ ಯಾವ ಪರಿಣಾಮ ಬೀರದು ಎಂದು ಅವರು ವ್ಯಂಗ್ಯವಾಡಿದರು.
ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಭರತ್‌ಕುಮಾರ್ ಮಾತನಾಡಿ, ಆಬಲವಾಡಿಯಲ್ಲಿ ನಡೆದ ಈ ಹೀನ ಕೃತ್ಯಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಪೊಲೀಸರ ನಿರ್ಲಕ್ಷ್ಯ ಕಾರಣ. ದಲಿತ ಕುಟುಂಬಕ್ಕೆ ಹಾಕಲಾಗಿರುವ ಬಹಿ ಷ್ಕಾರ, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದರು.
ಸಂಘಟನೆಯ ದೇವಿ, ಶೋಭ, ಸುನೀತ, ಡಿವೈಎಫ್‌ಐ ಸಂಘಟನೆಯ ಕೃಷ್ಣ, ಲಿಂಗರಾಜು, ಸಿಐಟಿಯುನ ರಮೇಶ್, ಪುಟ್ಟಸ್ವಾಮಿ ಇದ್ದರು.
ಮಂಡ್ಯ: ಜಿಲ್ಲೆಯ ಆಬಲವಾಡಿಯಲ್ಲಿ ಮರ್ಯಾದೆ ಹತ್ಯೆ ಘಟನೆಯಲ್ಲಿ ಮೃತಪಟ್ಟ ಸುವರ್ಣಾ ಅವರ ಪ್ರಿಯಕರ ಎನ್ನಲಾದ ಗೋವಿಂದರಾಜು ಅವರ ಪೋಷಕರು ಮತ್ತು ಸಹೋದರರು ಮಂಗಳವಾರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಎದುರು ಹಾಜರಾಗಿ ರಕ್ಷಣೆ ನೀಡುವಂತೆ ಮನವಿ ಮಾಡಿದರು.
`ಘಟನೆಯ ನಂತರ ನಮಗೆ ಪ್ರಾಣಭೀತಿ ಎದುರಾಗಿದೆ. ಘಟನೆ ಕಂಡು ನಾವು ಆತಂಕಗೊಂಡಿದ್ದೇವೆ. ಹುಡುಗಿಯ ಮನೆಯವರಿಂದ ಬೆದರಿಕೆ ಇರುವುದರಿಂದ ರಕ್ಷಣೆ ನೀಡಬೇಕು` ಎಂದು ಕೋರಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಣ್ಣ ಅವರು ಹೇಳಿಕೆ ಪಡೆದರು. ಮಧ್ಯಾಹ್ನ 12 ಗಂಟೆ ವೇಳೆಗೆ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಹಾಜರಾಗಿ ಮನವಿ ಸಲ್ಲಿಸಿದರು.
ಮೃತ ಯುವತಿಯ ಪ್ರಿಯಕರ ಗೋವಿಂದರಾಜು ಮಾತ್ರ ಹಾಜರಾಗಿರಲಿಲ್ಲ. ಆತನ ಸಹೋದರರಾದ ತಿಮ್ಮೇಶ್, ತಿಮ್ಮಪ್ಪ, ತಾಯಿ ತುಳಸಮ್ಮ, ಅತ್ತಿಗೆಯರಾದ ಚಿಕ್ಕತಾಯಮ್ಮ, ಮಂಗಳಮ್ಮ ಮಾತ್ರ ಹಾಜರಿದ್ದರು.
ಸುವರ್ಣಾ ಮೇಲೆ ಅವರ ಪೋಷಕರೇ ಹಲ್ಲೆ ನಡೆಸಿದ್ದಾರೆ. ಆ ಬಳಿಕದ ಬೆಳವಣಿಗೆಯಿಂದ ನಮಗೆ ಹೆದರಿಕೆಯಾಗಿದೆ. ಊರಿನಲ್ಲಿ ನೆಮ್ಮದಿಯಾಗಿ ಇರುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡಬೇಕು ಎಂದು ಎಲ್ಲರೂ ಕೋರಿದರು.
Udayavani | Jan 10, 2012 ಮಂಡ್ಯ: ಮದ್ದೂರು ತಾಲೂಕು ಆಬಲವಾಡಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದರಾಜು ಕುಟುಂಬ ರಕ್ಷಣೆಗಾಗಿ ಪೊಲೀಸರಲ್ಲಿ ಮೊರೆ ಇಟ್ಟಿದೆ.
ನವೆಂಬರ್ 6ರಂದು ಸುವರ್ಣಾಳನ್ನು ಆಕೆಯ ತಂದೆಯೇ ಹತ್ಯೆಗೈದ ನಂತರ ಆಕೆಯನ್ನು ಪ್ರೀತಿಸುತ್ತಿದ್ದ ಗೋವಿಂದರಾಜು ನಾಪತ್ತೆಯಾಗಿದ್ದಾನೆ. ಸುವರ್ಣಾಳ ತಂದೆ ದವಲನ ರಾಮಕೃಷ್ಣ ಜೀವಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಗೋವಿಂದರಾಜು ಕುಟುಂಬ ಊರನ್ನು ಖಾಲಿ ಮಾಡಿದ್ದರು. ಸುಮಾರು ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಕುಟುಂಬ ಮಂಗಳವಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಣ್ಣ ಅವರನ್ನು ಭೇಟಿ ಮಾಡಿ ದವಲನ ರಾಮಕೃಷ್ಣರಿಂದ ನಮಗೆ ಜೀವ ಬೆದರಿಕೆಯಿದ್ದು ನಮಗೆ ರಕ್ಷಣೆ ನೀಡುವಂತೆ ಕೋರಿ ಮನವಿ ಸಲ್ಲಿಸಿದರು. ಗೋವಿಂದರಾಜು ತಾಯಿ ತುಳಸಮ್ಮ, ಆತನ ಅಣ್ಣಂದಿರಾದ ತಿಮ್ಮೇಶ, ತಿಮ್ಮಪ್ಪ, ಅತ್ತಿಗೆಯರಾದ ಮಂಗಳಮ್ಮ, ಚಿಕ್ಕತಾಯಮ್ಮ ಎಎಸ್ಪಿ$ ರಾಜಣ ಅವರನ್ನು ಭೇಟಿಯಾಗಿ ಅಂದು ನಡೆದ ಘಟನೆಯನ್ನೆಲ್ಲಾ ಸವಿವರವಾಗಿ ವಿವರಿಸಿದ್ದಾರೆ.
ಸುವರ್ಣಾ ದಲಿತ ಹುಡುಗ ಗೋವಿಂದರಾಜುನನ್ನು ಪ್ರೀತಿಸಿದಳೆಂಬ ಒಂದೇ ಕಾರಣಕ್ಕೆ ಆಕೆಯ ತಂದೆ ಗೋವಿಂದರಾಜು ಮತ್ತು ಸಹೋದರರು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಂತರ ಆಕೆಯನ್ನು ನಮ್ಮ ಮನೆಗೆ ಕರೆತಂದು ಮರದ ತೊಲೆಗೆ ನೇಣುಹಾಕಿ ಕೊಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ನಂತರ ನಮಗೂ ಜೀವಬೆದರಿಕೆ ಹಾಕಿದ್ದಾರೆ. ನಿಮ್ಮ ಹುಡುಗನನ್ನು ನಮಗೆ ತಂದೊಪ್ಪಿಸುವಂತೆ ಪೀಡಿಸುತ್ತಿದ್ದಾರಲ್ಲದೆ, ಅವನನ್ನೂ ಜೀವಸಹಿತ ಬಿಡುವುದಿಲ್ಲವೆಂದು ಬೆದರಿಸಿದ್ದಾರೆ. ಈ ಕಾರಣದಿಂದಲೇ ನಾವು ಊರನ್ನು ತೊರೆದಿದ್ದು, ನಿತ್ಯ ಭಯದ ನಡುವೆಯೇ ಬದುಕು ಸಾಗಿಸುತ್ತಿದ್ದೇವೆಂದು ತಿಳಿಸಿದ್ದಾರೆ.
ಭಯದಿಂದಲೇ ಗೋವಿಂದರಾಜು ಕೂಡ ಊರು ತೊರೆದಿದ್ದಾನೆ. ಆತ ಎಲ್ಲಿದ್ದಾನೆಂಬುದು ನಮಗೆ ತಿಳಿಯದಾಗಿದೆ. ಊರಿಗೆ ಹೋಗಲು ನಮಗೆ ಭಯವಾಗುತ್ತಿದೆ. ಆದ ಕಾರಣ ಪೊಲೀಸರು ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.
ಸುವರ್ಣಾ ಹತ್ಯೆಯಾದ ದಿನ ನಾಪತ್ತೆಯಾಗಿದ್ದ ಕುಟುಂಬ ಸದಸ್ಯರು ಜೀವಭಯದಿಂದ ಪೊಲೀಸರೆದುರು ಆಗಮಿಸಿ ಇದೇ ಮೊದಲ ಬಾರಿಗೆ ರಕ್ಷಣೆ ಕೋರಿದ್ದಾರೆ. ಕುಟುಂಬದವರಿಗೆ ರಕ್ಷಣೆ ನೀಡುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಣ್ಣ ಭರವಸೆ ನೀಡಿದ್ದಾರೆಂದು ಅವರು ತಿಳಿಸಿದ್ದಾರೆ.