Pages

Saturday, 30 August 2014

ಅಪಾರ್ಥೈಡ್ ಎಂಬ ‘ಕಪ್ಪು ಅಸ್ಪøಶ್ಯತಾಚರಣೆ’ ಮತ್ತು ಮಂಡೇಲಾ

                                   -ರಘೋತ್ತಮ ಹೊ.ಬ

     
  ಅಪಾರ್ಥೈಡ್ ಅಥವಾ ಇಂಗ್ಲೀಷಿನಲ್ಲಿ ಬರೆಯುವುದಾದರೆ apartheid ಹಾಗೆಂದರೆ “the state of being apart” ಎಂದರ್ಥ. ಅಂದರೆ ಕನ್ನಡದಲ್ಲಿ ಸರಳವಾಗಿ ಹೇಳುವುದಾದರೆ “ಇತರರಿಂದ ಬೇರೆಯಾಗಿ ದೂರ ಇರುವುದು ಅಥವಾ ದೂರ ಇರಿಸುವುದು” ಎಂದರ್ಥ. ಅರ್ಥವಾಯಿತಲ್ಲವೆ? ದೂರ ಇರಿಸುವುದು ಅಥವಾ ಇರುವುದು ಎಂದರೆ, ಭಾರತದಲ್ಲಿ ಅಸ್ಪøಶ್ಯರನ್ನು ಊರ ಹೊರಗೆ ಇಟ್ಟ ಹಾಗೆ, ದೇವಸ್ಥಾನಗಳಿಂದ ದೂರ ಇಟ್ಟ ಹಾಗೆ, ರಸ್ತೆಯಲ್ಲಿ ಸಂಚರಿಸಲು ನಿರ್ಬಂಧಿಸಿದ ಹಾಗೆ, ಮೇಲ್ಜಾತಿ ಜನರ ಗುಲಾಮರಾಗಿ ದುಡಿಸಿಕೊಳ್ಳುತ್ತಿದ್ದ ಹಾಗೆ ದಕ್ಷಿಣಾ ಆಫ್ರಿಕಾದಲ್ಲಿ ಕಪ್ಪು ಜನರನ್ನು ಬಿಳಿಯರು ದೂರ ಇಟ್ಟಿದ್ದರು. ಬಿಳಿಯರಿಗೆ ಪ್ರತ್ಯೇಕ ಹೋಟೆಲ್‍ಗಳು, ಬೀಚ್‍ಗಳು, ಶಾಪಿಂಗ್ ಮಾಲ್‍ಗಳು, ವಾಸಸ್ಥಳದ ಬಡಾವಣೆಗಳು, ಕಪ್ಪು ಜನರನ್ನು ಅಲ್ಲಿ ಪ್ರವೇಶಿಸಲು ನಿರ್ಬಂಧಿಸಿದ್ದು, ಅವರ ನಾಗರೀಕತೆಯನ್ನು ಕಿತ್ತುಕೊಂಡು ದೂರದ ಗುಡ್ಡಗಾಡು ರಾಜ್ಯಗಳನ್ನು ಅವರಿಗೆ ನೀಡಿದ್ದು, ಅವರ ಗುಲಾಮಗಿರಿಯ ಬಿಟ್ಟಿ ದುಡಿತದಲ್ಲಿ ದಕ್ಷಿಣ ಆಫ್ರಿಕಾವನ್ನು ಅರವತ್ತರ ದಶಕದಲ್ಲಿ ಜಗತ್ತಿನ ಅತಿ ಶ್ರೀಮಂತ ರಾಷ್ಟ್ರವಾಗಿಸಿದ್ದು (ಜಪಾನಿನ ನಂತರ ದಕ್ಷಿಣಾ ಆಫ್ರಿಕಾ ಶೇ.67 ಜಿಡಿಪಿಯೊಂದಿಗೆ ಎರಡನೇ ಸ್ಥಾನದಲ್ಲಿತ್ತು!) ಅಪಾರ್ಥೈಡ್ ಎಂಬ so called ದಕ್ಷಿಣಾ ಆಫ್ರಕಾದ ಅಸ್ಪøಶ್ಯತೆಗೆ ಭವ್ಯ ಸಾಕ್ಷಿಗಳಾಗಿ ನಿಲ್ಲುತ್ತವೆ. ದುರಂತವೆಂದರೆ ಇಂತಹದ್ದೊಂದು ಶಾಸನಬದ್ಧ ಅಸ್ಪøಶ್ಯತೆಯ  ಕಾನೂನನ್ನು 1948 ಸಾರ್ವತ್ರಿಕ ಚುನಾವಣೆಯ ನಂತರ ಅಲ್ಲಿಯ ಅಲ್ಪಸಂಖ್ಯಾತ ಬಿಳಿಯರ ಸರ್ಕಾರ ಅಧಿಕೃತವಾಗಿ ಜಾರಿಗೊಳಿಸಿತು. ಆ ಮೂಲಕ ಅದು ಸಮಾಜವನ್ನು ಬಿಳಿಯರು, ಬಣ್ಣದವರು, ಭಾರತೀಯರು ಮತ್ತು ಕಪ್ಪುಜನರು ಹೀಗೆ 4ಗುಂಪುಗಳಾಗಿ ವಿಭಜಿಸಿತು. (ಭಾರತದಲ್ಲಿ ಮನು ಧರ್ಮಶಾಸ್ತ್ರ ಸಮಾಜವನ್ನು ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ಹೀಗೆ 4ವರ್ಣಗಳಾಗಿ ವಿಭಜಿಸಿದ ಹಾಗೆ!) ಅಂದಹಾಗೆ ನಮ್ಮ ಗಾಂಧೀಜಿಯವರು ಕೂಡ ದಕ್ಷಿಣ ಆಫ್ರಿಕಾದಲ್ಲಿ ಕೆಲ ಕಾಲ ಇದ್ದರು. ಆದರೆ ಅಲ್ಲಿ ಅವರು  ಹೋರಾಡಿದ್ದು ಅಲ್ಲಿಯ ಕಪ್ಪುಜನರ ಪರ ಅಲ್ಲ! ಬದಲಿಗೆ ಅಲ್ಲಿ ಅಲ್ಪ ಸಂಖ್ಯೆಯಲ್ಲಿದ್ದ ಭಾರತೀಯರ ಪರವಷ್ಟೆ!!
   
   ಹಾಗಿದ್ದರೆ ದಕ್ಷಿಣ ಆಫ್ರಿಕಾದ ಇಂತಹ ಅಪಾರ್ಥೈಡ್ ಎಂಬ ಅಸ್ಪøಶ್ಯತಾಚರಣೆಯ ವಿರುದ್ಧ ಹೋರಾಡಿದ್ದು? ನಿಸ್ಸಂಶಯವಾಗಿ ಅದು ರೋಲಿಹ್ಲಾಹ್ಲ ಮಂಡೇಲಾ. ಜನಪ್ರಿಯ ಧಾಟಿಯಲ್ಲಿ ಹೇಳುವುದಾದರೆ ಡಾ.ನೆಲ್ಸನ್ ಮಂಡೇಲಾ. ಅವರ ಆತ್ಮಕತೆ “Long Walk To Freedom” ನಲ್ಲಿ ಅವರೇ ಹೇಳಿಕೊಂಡಿರುವುದನ್ನು ಉಲ್ಲೇಖಿಸುವುದಾದÀರೆ “ನನ್ನ ಜೀವನದಲ್ಲಿ ಸಂಭ್ರಮದ, ಸಾಕ್ಷಾತ್ಕಾರದ, ಸತ್ಯದ ಒಂದು ಕ್ಷಣವೂ ಇಲ್ಲ. ತುಂಬಿದ್ದೆಲ್ಲ ಒತ್ತಟ್ಟಿಗೆ ಬರುತ್ತಿದ್ದ ಸಹಸ್ರ, ಸಹಸ್ರ ಮರೆಯಲಾಗದ, ನೋವಿನ, ಅಪಮಾನದ ಕ್ಷಣಗಳೇ.  ನಿಜ ಹೇಳಬೇಕೆಂದರೆ ಇಂತಹ ನೋವು, ಅಪಮಾನ ನನ್ನಲ್ಲಿ ರೋಷವನ್ನು, ಬಂಡಾಯಗಾರನನ್ನು, ನನ್ನ ಜನರನ್ನು ಅನ್ಯಾಯವಾಗಿ ಜೈಲಿಗೆ ತಳ್ಳಿದ ವ್ಯವಸ್ಥೆಯ ವಿರುದ್ಧ ಹೋರಾಡುವ ಛಲವನ್ನು ತುಂಬಿತು”.
  
  ಖಂಡಿತ, ಮಡಿಬಾ ಪಂಥದಲ್ಲಿ 1918 ಜುಲೈ 18ರಂದು ಜನಿಸಿದ ಮಂಡೇಲಾರ ಬದುಕಿನಲ್ಲಿ ತುಂಬಿದ್ದು ಬರೀ ನೋವು, ಅಪಮಾನ, ದೌರ್ಜನ್ಯದ ದಿನಗಳಷ್ಟೆ. ಯಾಕೆಂದರೆ ಅಂದಿನ ದಕ್ಷಿಣ ಆಫ್ರಿಕಾದ ಸರ್ಕಾರ ಶಿಕ್ಷಣ, ಆಸ್ಪತ್ರೆ, ಪ್ರವಾಸಿ ತಾಣ, ಸಮುದ್ರ ತೀರಗಳು ಹೀಗೆ ಪ್ರತಿಯೊಂದನ್ನೂ ಅಂದಿನ ಕಪ್ಪು ಜನರಿಗೆ ಪ್ರತ್ಯೇಕವಾಗಿ ಬಿಳಿಯರಿಗಿಂತ ಕೀಳಾಗಿ ನೀಡಿತ್ತು. ಇಂತಹ ಅಸಮಾನತೆಯ ಸಮಯದಲ್ಲಿ ಪದವಿ ಮುಗಿಸಿದ ಮಂಡೇಲ 1942ರ ಹೊತ್ತಿಗೆ ಕಪ್ಪುಜನರ ಪ್ರಾಬಲ್ಯದ ‘ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್’ ಸೇರಿದರು. 1944 ರಲ್ಲಿ ಅದರ ಯುವ ಸಮಿತಿಯ ಹುಟ್ಟಿಗೂ ಕಾರಣರಾದರು. ಆ ಮೂಲಕ ಮಂಡೇಲ ಯಾವ ಒಂದು ಸರ್ಕಾರಿ ಕೃಪಾಪೋಷಿತ  ಅಸ್ಪøಶ್ಯತಾಚರಣೆ ಅಥವಾ ಅಪಾರ್ಥೈಡ್ ಅಥವಾ ‘ಬಣ್ಣ ಬೇಧ ನೀತಿ’ ಯ ವಿರುದ್ಧ ಹೋರಾಟಕ್ಕಿಳಿದಿದ್ದರು. ಯಾವ ಮಟ್ಟಕ್ಕೆಂದರೆ 1952ರಲ್ಲಿ ಪ್ರಾರಂಭವಾದ ‘ಕಾನೂನು ಭಂಗ ಅಭಿಯಾನ’’ದಲ್ಲಿ ನೆಲ್ಸನ್ ಮಂಡೇಲ ಅದರ ’ರಾಷ್ಟ್ರೀಯ ಸ್ವಯಂ ಸೇವಕ ಪಡೆ’ಯ ಮುಖ್ಯಸ್ಥರಾಗುವ ಮಟ್ಟಿಗೆ.
  
  ತದನಂತರ ಬಿಳಿಯರು ಜಾರಿಗೊಳಿಸಿದ್ದ ಆರು ಕಠಿಣ ಕಾನೂನುಗಳ ವಿರುದ್ಧ ಅಸಹಕಾರ ಚಳುವಳಿಯನ್ನು ಮಂಡೇಲ ಪ್ರಾರಂಭಸಿದರು. ಪರಿಣಾಮವಾಗಿ ಅವರು ಮತ್ತು ಇತರ 9 ಜನರನ್ನು ಬಿಳಿಯರ ‘ನ್ಯಾಷನಲ್ ಪಾರ್ಟಿ’ ನೇತೃತ್ವದ ಸರ್ಕಾರ ’ಕೋಮುದಂಗೆ ನಿಯಂತ್ರಣ ಕಾಯ್ದೆ’’ಯಡಿ ಬಂಧಿಸಿ ಒಂಬತ್ತು ತಿಂಗಳ ಕಠಿಣ ದುಡಿಮೆ ಶಿಕ್ಷೆಗೆ ಒಳಪಡಿಸಿತು. ಪ್ರಶ್ನೆ ಏನೆಂದರೆ ಓರ್ವ ಜನಪ್ರಿಯ ನಾಶಯಕನನ್ನೆ ಹೀಗೆ ಅಲ್ಲಿನ ಸರ್ಕಾರ ಕಠಿಣ ದುಡಿಮೆಗೆ ಒಳಪಡಿಸಿತ್ತೆಂದರೆ ಇನ್ನು ಅಲ್ಲಿ ಸಾಮಾನ್ಯ ಕಪ್ಪುಜನರ ಸ್ಥಿತಿ ಹೇಗಿರಬೇಡ? ಒಂದರ್ಥದಲಿ ಅಲ್ಲಿ ಜಾರಿ ಇದ್ದದ್ದು ‘ಕಪ್ಪು ಅಸ್ಪøಶ್ಯತಾಚರಣೆ’ ಯಷ್ಟೆ ಅಲ್ಲ, ಜೊತೆಗೆ ಸಾಮಾಜಿಕ ಸರ್ಕಾರಿ ಜೀತಗಾರಿಕೆ! ಒಟ್ಟಾರೆ ಇಂತಹ ಕಠಿಣ ದುಡಿಮೆಯ ಮೂಲಕ ಮಂಡೇಲರ ಜೈಲುವಾಸ ಪ್ರಾರಂಭವಾಯಿತು. ಇದರ ಹಿಂದೆಯೇ ಅವರ ವಿರುದ್ಧ ನಿಷೇಧ ಕೂಡ ಹೇರಲಾಯಿತು. ಅದು ಎಂತಹ ನಿಷೇಧವೆಂದರೆ 1955 ಜೂನ್ 26ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಕ್ಲಿಪ್‍ಟೌನ್ ಎಂಬಲ್ಲಿ ‘ಸ್ವಾತಂತ್ರ್ಯ ಸನ್ನದ’’ನ್ನು ಘೋಷಿಸಿದಾಗ ಮಂಡೇಲ ಗುಪ್ತವಾಗಿ, ಮೂಕಪ್ರೇಕ್ಷಕನಾಗಿ ಅದನ್ನು ನೋಡಬೇಕಾಯಿತಷ್ಟೆ! ಈ ನಡುವೆ 1955ರ ಡಿಸೆಂಬರ್ ಅಂತ್ಯದಲ್ಲಿ ದೇಶಾದ್ಯಂತ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಮಂಡೇಲರನ್ನು ಮತ್ತೊಮ್ಮೆ ಬಂಧಿಸಲಾಯಿತು. ಬಂಧಿಸಿ 1956ರಲ್ಲಿ ಅವರ ವಿರುದ್ಧ ಸುಪ್ರಸಿದ್ಧ ‘ದೇಶ ದ್ರೋಹದ ಅಪಾದನೆ’ಯನ್ನು  ಹೊರಿಸಲಾಯಿತು. ಅಂದಹಾಗೆ ಇಂತಹ ಅಪಾದನೆ ಬರೀ ಮಂಡೇಲಾರ ವಿರುದ್ಧ ಮಾತ್ರವಷ್ಟೆ ಅಲ್ಲ, ಸುಮಾರು 156ಜನರನ್ನು ಈ ದೇಶದ್ರೋಹದ ಆರೋಪದಡಿ ಬಂಧಿಸಲಾಯಿತು. ಬಂಧನದ ನಂತರ ಸುಪ್ರಸಿದ್ಧ ಈ ವಿಚಾರಣೆ 1961ರವರೆಗೂ ಮುಂದುವರಿದು ಮಾರ್ಚ್29, 1961ರಲ್ಲಿ ಮಂಡೇಲಾರನ್ನು ನಿರಪರಾಧಿ ಎಂದು ಘೋಷಿಸಲಾಯಿತು. ಈ ವಿಚಾರಣೆಯ ಸಂದರ್ಭದಲ್ಲಿ ಮಂಡೇಲ ಪೀಟರ್‍ಮಾರಿಟ್ಜ್‍ಬರ್ಗ್‍ನಲ್ಲಿ ‘ಅಖಿಲ ಆಫ್ರಿಕಾ ಸಮ್ಮೇಳನ’ದಲ್ಲಿ ಮಾತನಾಡಿ ಅಂದಿನ ದಕ್ಷಿಣ ಆಫ್ರಿಕಾದ ಪ್ರಧಾನಿ ವೆರ್‍ಫೋರ್ಡ್‍ರಿಗೆ ಜನಾಂಗ ಭೇಧವಿಲ್ಲದೆ ರಾಷ್ಟ್ರೀಯ ಸಮ್ಮೇಳನವೊಂದನ್ನು ಕರೆಯಬೇಕೆಂದು ಆಗ್ರಹಿಸುತ್ತಾರೆ. ತಪ್ಪಿದರೆ ದಕ್ಷಿಣ ಆಫ್ರಿಕಾವನ್ನು ಸ್ವಾತಂತ್ರ್ಯಗೊಳಿಸಲು ರಾಷ್ಟ್ರೀಯ ಚಳುವಳಿಯೊಂದನ್ನು ಆರಂಭಿಸುವುದಾಗಿ ಅವರು ಗುಡುಗುತ್ತಾರೆ. ಪರಿಣಾಮ ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರ ಮಂಡೇಲರ ವಿರುದ್ಧ ಮತ್ತೊಮ್ಮೆ ಕಾರ್ಯಾಚರಣೆಗಿಳಿಯಿತು. ಈ ಸಂದರ್ಭದಲ್ಲಿ ಮಂಡೇಲ ಬೇರೆ ದಾರಿ ಇಲ್ಲದೆ ಭೂಗತರಾದರು. ಭೂಗತರಾದದ್ದಷ್ಟೆ ಅಲ್ಲ ಸರ್ಕಾರದ ವಿರುದ್ಧ ಮಂಡೇಲ ಶಸ್ತ್ರಾಸ್ತ್ರ ಹೋರಾಟ ಸಹ ಕೈಗೊಂಡರು. ಹಾಗೆಯೇ ಅಂತಹ ಹೋರಾಟದಲ್ಲಿ ‘ಉಮಕೊಂಟೊ ವಿಸಿಜ್ಟೆ (ದೇಶದ ಈಟಿ)’ ಎಂಬ ಕಪ್ಪುಜನರ ಶಸ್ತ್ರಾಸ್ತ್ರ ಪಡೆ ಕೂಡ ರೂಪುಗೊಂಡಿತು.

   ಒಟ್ಟಾರೆ ಹೇಳುವುದಾದರೆ ಈ ಸಂದರ್ಭ ಮಂಡೇಲರ ಹೋರಾಟದ ನಿರ್ಣಾಯಕ ನಿರ್ಣಾಯಕ ಕ್ಷಣವಾಗಿತ್ತು. ಯಾಕೆಂದರೆ ಅತ್ತ ಶಸ್ತ್ರಾಸ್ತ್ರ ಹೋರಾಟ ಆರಂಭವಾಗುತ್ತಲೇ ಡೇವಿಡ್ ಮೊಟ್ಸಾಮಯಿ ಎಂದು ಹೆಸರು ಬದಲಿಸಿಕೊಂಡ ಮಂಡೇಲ ದಕ್ಷಿಣ ಆಫ್ರಿಕಾ ಬಿಟ್ಟು ಇಂಗ್ಲೆಂಡಿಗೆ ತೆರಳಿ ಶಸ್ತ್ರಾಸ್ತ್ರ ಹೋರಾಟಕ್ಕೆ ಅದರ ಬೆಂಬಲ ಕೋರಿದರು (ಯಾಕೆಂದರೆ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರು ಡಚ್ಚರಾಗಿದ್ದರು). ಅಲ್ಲದೆ ಈ ಕಾರಣಕ್ಕಾಗಿ ಮೊರಾಕ್ಕೊ, ಇಥಿಯೋಫಿಯಾದಲ್ಲಿ ಸೇನಾ ತರಬೇತಿ ಕೂಡ ಪಡೆದ ಮಂಡೇಲ 1962ಜುಲೈ ನಲ್ಲಿ ದೇಶಕ್ಕೆ ವಾಪಸ್ ಮರಳುತ್ತಿದ್ದಂತೆ ಮತ್ತೊಮ್ಮೆ ಬಂಧನಕ್ಕೊಳಗಾಗಬೇಕಾಯಿತು. ಅವರ ಮೇಲೆ ಕಾನೂನಿಗೆ ವಿರುದ್ಧವಾಗಿ ದೇಶ ಬಿಟ್ಟು ತೆರಳಿದ ಆರೋಪ ಹೊರಿಸಿದ ಬಿಳಿಯರ ಸರ್ಕಾರ ಮತ್ತೊಮ್ಮೆ ಅವರಿಗೆ 5 ವರ್ಷಗಳ ಜೈಲುಶಿಕ್ಷೆ ವಿಧಿಸಿತು. ಇದಷ್ಟೆ ಅಲ್ಲದೆ 1963ರಲ್ಲಿ ಮತ್ತೊಮ್ಮೆ ದೇಶದ್ರೋಹದ ಆರೋಪ ಹೊರಿಸಿ ಮಂಡೇಲಾರಿಗೆ ಮರಣದಂಡನೆ ವಿಧಿಸುವಂತೆ ನ್ಯಾಯಾಲಯದ ಮುಂದೆ ಬಿಳಿಯರ ಸರ್ಕಾರ ಕೋರಿದಾಗ ವಾದ ಮಂಡಿಸುತ್ತಾ ಸ್ವತಃ ವಕೀಲರಾದ ಮಂಡೇಲ ಹೀಗೆ ಹೇಳುತ್ತಾರೆ, “ನಾನು ಬಿಳಿಯರ ದಬ್ಬಾಳಿಕೆ ವಿರುದ್ಧ ಹೋರಾಡಿದ್ದೇನೆ, ಹಾಗೆಯೇ ಕಪ್ಪುಜನರ ದಬ್ಬಾಳಿಕೆಯ ವಿರುದ್ಧವೂ ಹೋರಾಡಿದ್ದೇನೆ. ಒಟ್ಟಾರೆ ನಾನು ಸರ್ವರೂ ಸಾಮರಸ್ಯ ಮತ್ತು ಸಮಾನ ಅವಕಾಶಗಳಡಿ ಬದುಕುವ ಪ್ರಜಾಪ್ರಭುತ್ವದ, ಸ್ವತಂತ್ರ ಸಮಾಜದ ಆದರ್ಶಗಳನ್ನು ಪೋಷಿಸುತ್ತೇನೆ. ಅದೊಂದು ಆದರ್ಶ. ಯಾಕೆಂದರೆ ನಾನು ಅಂತಹ ಆದರ್ಶವನ್ನು ಸಾಧಿಸುವ ಮತ್ತು ಅದರಡಿಯಲ್ಲಿ ಬದುಕುವ ಆಶಯ ಹೊಂದಿದ್ದೇನೆ. ಅಗತ್ಯವಾದರೆ ಅಂತಹ ಆದರ್ಶದ ಸಾಧನೆಗಾಗಿ ಸಾಯಲೂ ಕೂಡ ಸಿದ್ಧ”!
 
 ವಾವ್! ಎಂತಹ ಗ್ರೇಟ್ ಮಾತುಗಳು. ಅಂದಹಾಗೆ ಇಂತಹ ಗ್ರೇಟ್ ಮಾತುಗಳನ್ನಾಡಿದ ಮಂಡೇಲ ಮತ್ತವರ ಸಂಗಾತಿ ಸ್ನೇಹಿತ ವಾಲ್ಟರ್ ಸಿಸುಲುರವರನ್ನು 1964 ಜುಲೈ 11ರಂದು ದಕ್ಷಿಣಾ ಆಫ್ರಿಕಾದ ಬಿಳಿಯರ ಸರ್ಕಾರ ಜೀವಾವಧಿ ಶಿಕ್ಷಗೆ ಗುರಿಪಡಿಸಿ ರಾಬ್ಬನ್ ದ್ವೀಪಕ್ಕೆ ಕಳುಹಿಸುತ್ತದೆ, ಆ ಮೂಲಕ ಸ್ವಾತಂತ್ರ್ಯದ ಪರ, ಬಂಧನದ ದೌರ್ಜನ್ಯದ ವಿರುದ್ಧ ಹೋರಾಡಿದ ಧೀರಶಕ್ತಿಯೊಂದು ಸತತ 26ವರ್ಷಗಳವರೆಗೆ ಸುಧೀರ್ಘ ಜೈಲುವಾಸಕ್ಕೆ ತೆರಳುತ್ತದೆ. ಬಹುಶಃ ಇದು ವ್ಯವಸ್ಥೆ ಶ್ರೇಷ್ಠವ್ಯಕ್ತಿಯೊಬ್ಬನ ಪರಿಪೂರ್ಣ 26ವರ್ಷಗಳನ್ನು ಕಿತ್ತುಕೊಂಡದ್ದೆಂದರೆ ತಪ್ಪಾಗದು.
 
 ಸಮಾಧಾನದ ವಿಷಯವೆಂದರೆ 1990 ಭಾನುವಾರ ಫೆಬ್ರವರಿ11 ಮಂಡೇಲ ಜೈಲಿನಿಂದ ಹೊರಬರುತ್ತಾರೆ. ಹೊರಬಂದದ್ದೆ ಅಪಾರ್ಥೈಡ್ ಎಂಬ ಆ ಬಿಳಿಯರ ಅಸ್ಪøಶ್ಯತಾಚರಣೆಯನ್ನು ಕೊನೆಗಾಣಿಸುವ ನಿಟ್ಟಿನಲಿ ಅವರ ಜೊತೆ ಮಾತುಕತೆಗಿಳಿದು 1994 ಏಪ್ರಿಲ್ 27 ರಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗುತ್ತಾರೆ. ಪರಿಣಾಮವಾಗಿ ಅಂದರೆ ಶಾಂತಿಮಾರ್ಗ ಹಿಡಿದುದ್ದಕ್ಕಾಗಿ 1993ರಲ್ಲಿ ಅವರು ಅಂದಿನ ಬಿಳಿಯರ ಸರ್ಕಾರದ ಅಧ್ಯಕ್ಷ ಎಫ್.ಡಬ್ಲ್ಯೂ.ಡಿ ಕ್ಲರ್ಕ್‍ರೊಡನೆ ನೊಬೆಲ್ ಪ್ರಶಸ್ತಿಗೂ ಕೂಡ ಪಾತ್ರರಾಗುತ್ತಾರೆ. ಹಾಗೆಯೇ ಜೈಲಿನಿಂದ ಬಿಡುಗಡೆಯಾದ ವರ್ಷ(1990)ಭಾರತ ಸರ್ಕಾರ ನೀಡುವ ‘ಭಾರತ ರತ್ನ’ ಪ್ರಶಸ್ತಿಗೂ ಕೂಡ ಮಂಡೇಲ, ಮರಣೋತ್ತರವಾಗಿ ಆ ಪ್ರಶಸ್ತಿ ಪಡೆದ ಬಾಬಾಸಾಹೇಬ್ ಅಂಬೇಡ್ಕರರ ಜೊತೆ ಪಾಲುದಾರರಾಗುತ್ತಾರೆ! ತನ್ಮೂಲಕ ಮಹಾನ್ ತ್ಯಾಗದ ಎರಡು ರತ್ನಗಳು ಶ್ರೇಷ್ಠ ಹೋರಾಟವೊಂದರ ನೆನಪಿಗೆ ಪಾಲುದಾರರಾಗುತ್ತವೆ. ಕಾಕತಾಳೀಯವೆಂದರೆ ಒಂದೇ ವರ್ಷದಲ್ಲಿ ಭಾರತರತ್ನಕ್ಕೆ ಪಾಲುದಾರರಾದ ಆ “ರತ್ನಗಳು” ಸಾವಿನಲ್ಲೂ ಪಾಲುದಾರರಾದದ್ದು! ಅಂದರೆ ಬಾಬಾಸಾಹೇಬ್ ಅಂಬೇಡ್ಕರ್ ಯಾವ ದಿನ ನಿಧನರಾದರೊ (ಡಿಸೆಂಬರ್ 6) ಅದೇ ದಿನ ಅಂದರೆ 2013 ಡಿಸೆಂಬರ್ 6ರಂದೇ ಮಂಡೇಲಾ ಕೂಡ ನಿಧನರಾದದ್ದು!
 
  ಖಂಡಿತ, ಇದು ಕಾಕತಾಳೀಯವೆನಿಸಿದ್ದರೂ ಘಟಿಸಿದ್ದಂತೂ ಸತ್ಯ. ಯಾಕೆಂದರೆ ಅಸ್ಪøಶ್ಯತಾಚರಣೆ ಅದು ದಲಿತರ ವಿರುದ್ಧ ನಡೆದಿದ್ದಾರೇನು? ಆಫ್ರಿಕಾದ ಕಪ್ಪುಜನರ ವಿರುದ್ಧ ನಡೆದಿದ್ದಾರೇನು? ಎರಡೂ ಕೂಡ ಮಾನವ ಹಕ್ಕುಗಳ ಘೋರ ಉಲ್ಲಂಘನೆಯೇ. ಈ ನಿಟ್ಟಿನಲಿ ಮಂಡೇಲ ನಿಧನದ ಸಂದರ್ಭದಲ್ಲಿ ರಾಷ್ಟ್ರದ ಸಧ್ಯದ ದಲಿತರ ದನಿಯಾಗಿರುವ ಮಾಯಾವತಿಯವರ ಹೇಳಿಕೆಯನ್ನು ಉಲ್ಲೇಖಿಸುವುದಾದರೆ “Like Nelson Mandela fought against racism, Babasaheb Ambedkar fought casteism. So my respects to  both”. ಖಂಡಿತ, ಗೌರವ ಇಬ್ಬರಿಗೂ ಸಲ್ಲಬೇಕು. ಬಾಬಾಸಾಹೇಬ್ ಅಂಬೇಡ್ಕರರಿಗೂ ಹಾಗೆಯೇ ಅವರ ಹಾಗೆ ದಕ್ಷಿಣ ಆಫ್ರಿಕಾದ ಕಪ್ಪುಜನರ ಹಕ್ಕುಗಳ ಪರ ಹೋರಾಡಿದ ನೆಲ್ಸನ್ ಮಂಡೇಲಾರಿಗೂ.   

html