Pages

Showing posts with label ಜಾತಿ. Show all posts
Showing posts with label ಜಾತಿ. Show all posts

Wednesday, 4 May 2011

‘ಮಾನವೀಯತೆಯಿಂದ ಅಸ್ಪೃಶ್ಯತೆ ನಿರ್ಮೂಲನೆ ಸಾಧ್ಯ’

ಮೈಸೂರು: ‘ಭಾರತದಲ್ಲಿ ಅಮಾನುಷವಾಗಿ ಬೆಳೆದಿರುವ ಅಸ್ಪೃಶ್ಯತೆಯನ್ನು ಮಾನವೀಯ ಚಿಂತನೆ ಮತ್ತು ನಡವಳಿಕೆಯಿಂದ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯ’ ಎಂದು ಶಾಸಕ ವಿ.ಶ್ರೀನಿವಾಸ ಪ್ರಸಾದ್ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ನಗರ ಘಟಕ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ವಿ.ಮುನಿವೆಂಕ ಟಪ್ಪ ಸಂಪಾದಿಸಿರುವ ‘ದಲಿತ ಚಳವಳಿ ಚರಿತ್ರೆ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ಕಮ್ಯೂನಿಸ್ಟ್ ಪ್ರೇರಣೆಯಿಂದ ಕೇರಳದಂತಹ ರಾಜ್ಯದಲ್ಲಿ ವರ್ಗ ಸಂಘರ್ಷ ನಡೆದಿದೆ. ಆದರೆ ಅದೇ ನಾಡಿನಲ್ಲಿ ಜಾತಿಯ ಹೆಸರಲ್ಲಿ ಪ್ರತಿಮೆ ಗಳನ್ನು, ಕುರ್ಚಿಗಳನ್ನು ಗಂಜಲದಿಂದ ತೊಳೆಯುವ ಅವಿವೇಕ, ಅಮಾನುಷ ಘಟನೆಗಳು ನಡೆಯುತ್ತಿರುವುದು ದೊಡ್ಡ ದುರಂತ’ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿ.ವಿ. ಅಂತಾರಾಷ್ಟ್ರೀಯ ಕೆಂದ್ರದ ನಿರ್ದೇಶಕಿ ಪ್ರೊ.ಆರ್.ಇಂದಿರಾ ಮಾತನಾಡಿ ‘ಚಳವಳಿಗಳ ಉದ್ದೇಶ ಸಾಮಾಜಿಕ ನ್ಯಾಯವೇ ಆಗಿರುವುದರಿಂದ ಅಂತರ್ ಸಂಬಂಧ ಅಗತ್ಯ’ ಎಂದರು.

‘ದಲಿತ ಚಳವಳಿ ಚರಿತ್ರೆ’ ಕೃತಿ ಕುರಿತು ಪತ್ರಕರ್ತ ರವೀಂದ್ರ ಭಟ್ ಐನಕೈ ಮಾತನಾಡಿದರು. ಸಂಪಾದಕ ಡಾ.ವಿ.ಮುನಿವೆಂಕಟಪ್ಪ ಅನುಭವವನ್ನು ಹಂಚಿಕೊಂಡರು. ಪ್ರಕಾಶಕ ಮಾನಸ ಇದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಂ.ಚಂದ್ರಶೇಖರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ವಿ.ವಿದ್ಯಾಸಾಗರ ಕದಂಬ ನಿರೂಪಿಸಿ, ವಂದಿಸಿದರು

Monday, 25 April 2011

ಮಠಾಧೀಶರ ಮಾತು ಅತಿಯಾಯಿತು!!

ಮಂಗಳವಾರ - ಏಪ್ರಿಲ್ -26-2011

ಇತ್ತೀಚೆಗೆ ಸುತ್ತೂರಿನಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧಿವೇಶನದಲ್ಲಿ ಕೆಲವು ಮಠಾಧಿಪತಿಗಳು ರಾಜ್ಯ ಸರಕಾರದ ಪರವಾಗಿ ವಕ್ತಾರರಂತೆ ನಿಂತು ಮುಖ್ಯಮಂತ್ರಿಯವರ ಪರವಾಗಿ ವೀರಾವೇಶದ ಮಾತುಗಳನ್ನಾಡಿದ್ದು, ಬಸವಣ್ಣನವರ ತತ್ವವನ್ನು ಒಪ್ಪುವಂತಹ ಯಾವುದೇ ಒಬ್ಬ ನಾಗರಿಕನಿಗೂ ಇದು ಸರಿ ಎನಿಸುವುದಿಲ್ಲ. ಬಸವಣ್ಣನವರ ವಿಚಾರ ಧಾರೆಯಲ್ಲಿ ನಂಬಿಕೆ ಇಟ್ಟು ವೀರಶೈವ ಧರ್ಮವು ನಡೆಯುತ್ತಿದೆ ಎಂದು ಭಾವಿಸಿರುವ ಅನೇಕರಿಗೆ ಇಲ್ಲಿನ ನಡವಳಿಕೆಗಳು ನಿರಾಶೆಯನ್ನುಂಟು ಮಾಡಿದೆ.

ಬಸವಣ್ಣನವರು ಒಬ್ಬ ಮಂತ್ರಿಯಾಗಿ ಹಣಕಾಸಿನ ನಿರ್ವಹಣೆಯನ್ನು ಅತ್ಯಂತ ಶಿಸ್ತಿನಿಂದ ನಿರ್ವಹಿಸಿ, ಪ್ರಾಮಾಣಿಕ ರಾಗಿ ತಮ್ಮ ತಮ್ಮ ನಿಲುವು ಮತ್ತು ವಿಚಾರ ಧಾರೆಗಳಿಗಾಗಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸುವ ಪ್ರಸಂಗಗಳು ಬಂದರೂ ಎಂದೂ ರಾಜಿಯಾಗದೇ, ರಾಷ್ಟ್ರದ ಜನತೆಯ ದೃಷ್ಟಿಯಲ್ಲಿ ನಿಜವಾದ ವಿಶ್ವಮಾನವರಾದರು. ಆದರೆ ಸುತ್ತೂರಿನಲ್ಲಿ ಮಾನ್ಯ ಮುಖ್ಯಮಂತ್ರಿಯವರಿಗೆ ಬಹಿರಂಗವಾಗಿ ಬೆಂಬಲವನ್ನು ನೀಡಿ ಇವರ ತಂಟೆಗೆ ಬಂದರೆ ನಾವು ಬಿಡುವುದಿಲ್ಲ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ. ಇದೇ ರೀತಿ ಅನ್ಯ ಜಾತಿಯ ಜನರೂ ಸಹ ತಮ್ಮ ಜನಾಂಗದ ನಾಯಕರುಗಳ ತಪ್ಪುಗಳನ್ನು ಒಪ್ಪಿಕೊಂಡು ಬೆಂಬಲಕ್ಕೆ ನಿಲ್ಲುವಂತಹ ಸ್ಥಿತಿ ನಿರ್ಮಾಣವಾದರೆ, ಸಮಾಜವನ್ನು ದೇವರೇ ಕಾಪಾಡಬೇಕು.

2ಜಿ ಸ್ಟೆಕ್ಟ್ರಂ ಹಗರಣದಲ್ಲಿ ಭಾಗಿಯಾಗಿರುವ ರಾಜನ ಪರವಾಗಿ ಈ ರಾಷ್ಟ್ರದ ದಲಿತ ಸ್ವಾಮಿಗಳು ಬೆಂಬಲಕ್ಕೆ ನಿಂತರೆ ಅಚ್ಚರಿ ಪಡಬೇಕಿಲ್ಲ. ಅದೇ ರೀತಿಯಲ್ಲಿ ಲಾಲೂ ಪ್ರಸಾದ್ ಯಾದವರ ಪರವಾಗಿ ಹಿಂದುಳಿದ ವರ್ಗದವರ ಮಠಾಧಿಪತಿಗಳು ನಿಂತರೆ ಅಚ್ಚರಿಯಿಲ್ಲ. ಇನ್ನು ಕಾಮನ್‌ವೆಲ್ತ್ ಹಗರಣದ ರೂವಾರಿ ಕಲ್ಮಾಡಿಯ ಪರವಾಗಿ ಒಂದಷ್ಟು ಬ್ರಾಹ್ಮಣ ಮಠಗಳು ಬೆಂಬಲಕ್ಕೆ ನಿಂತರೆ ಅದೂ ಅಚ್ಚರಿಯ ಸಂಗತಿಯಲ್ಲ. ಹೀಗೆ ಆಯಾ ಜಾತಿಯ ಮಠಾಧಿಪತಿಗಳು ಅವರ ಜನಾಂಗದ ರಾಜಕಾರಣಿಗಳ ಪರವಾಗಿ ರಸ್ತೆಗೆ ಇಳಿದರೆ ಸಮಾಜದ ಸ್ಥಿತಿ ಅಯೋಮಯವಾಗುತ್ತದೆ.

ಈ ಹಿಂದೆ ಮಾನ್ಯ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಿದರು. ಆಗ ಯಾವ ಮಠಾಧೀಶರೂ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಅದೇ ರೀತಿಯಲ್ಲಿ ಎಸ್.ಆರ್.ಕಂಠಿಯವರು ಕೆಲವೇ ತಿಂಗಳುಗಳಲ್ಲಿ ಅಧಿಕಾರ ಕಳೆದುಕೊಂಡರು. ಆಗಲೂ ಯಾರೂ ಧ್ವನಿ ತೆಗೆಯಲಿಲ್ಲ. ಎಸ್.ಆರ್.ಬೊಮ್ಮಾಯಿಯವರ ಸರಕಾರ ಕೆಲವೇ ಕೆಲವು ತಿಂಗಳುಗಳಲ್ಲಿ ಪತನವಾ ಯಿತು. ಆದರೂ ಯಾರೂ ಮಾತನಾಡಲಿಲ್ಲ. ಜೆ.ಎಚ್.ಪಟೇಲರಿಗೆ ಅನೇಕ ರಾಜಕೀಯವಾದ ಸಮಸ್ಯೆಗಳು ಎದುರಾದವು. ಆಗಲೂ ಯಾರೂ ಮಾತನಾಡಲಿಲ್ಲ. ಇವೆಲ್ಲವೂ ಹೋಗಲಿ. ಪ್ರಾಮಾಣಿಕತೆಯಿಂದ ಹೋರಾಟ ಮಾಡುತ್ತಿರುವ ಗುಲಬರ್ಗಾದ ಕಾಂತಾರ ಪರವಾಗಿ ಯಾವ ಮಠಾಧಿಪತಿಗಳೂ ನಿಲ್ಲುವುದಿಲ್ಲ. ಇನ್ನು ಏಕಾಂತಯ್ಯನವರ ಹೋರಾಟ ಏಕಾಂಗಿಯಾಗಿದೆ. ಅನೇಕ ಪ್ರಾಮಾಣಿಕರು ವೀರಶೈವ ಜನಾಂಗದಲ್ಲಿದ್ದಾರೆ. ಅವರ ಪರವಾಗಿ ಯಾರೂ ಧ್ವನಿ ತೆಗೆಯುವುದಿಲ್ಲ.

ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದ ಸಂದರ್ಭದಲ್ಲಿ ಈ ರಾಜ್ಯದ ಮುತ್ಸದ್ದಿ ರಾಜಕಾರಣಿ ಎಂ.ಪಿ. ಪ್ರಕಾಶ್‌ರ ಬಗ್ಗೆ ರಾಜ್ಯದ ಸಚಿವ ಸಂಪುಟದ ಸದಸ್ಯರುಗಳು ಅತ್ಯಂತ ಲಘುವಾಗಿ ಮಾತನಾಡಿದರು. ಆಗ ಯಾವ ವೀರಶೈವ ಮಠದವರೂ ಇದನ್ನು ಖಂಡಿಸಲಿಲ್ಲ. ಎಂ.ಪಿ.ಪ್ರಕಾಶ್‌ರಿಗೆ ಸಾಂತ್ವನ ಹೇಳಲಿಲ್ಲ. ಆದರೆ, ಯಡಿಯೂರಪ್ಪನ ವಿಚಾರದಲ್ಲಿ ಮಾತ್ರ ಅದೇನು ಒಗ್ಗಟ್ಟು. ಅದೇನು ಬೆಂಬಲ. ಬಹುಷಃ ಯಡಿಯೂರಪ್ಪನವರು ಮಠ ಮಾನ್ಯಗಳ ಬಗ್ಗೆ ಮತ್ತು ಮಠಾಧೀಶರುಗಳ ಬಗ್ಗೆ ಆರ್ಥಿಕವಾಗಿ ತೋರುತ್ತಿರುವ ವಿಶಾಲ ಮನೋಭಾವ ಇವರನ್ನು ಅವರ ಪರವಾಗಿ ನಿಲ್ಲುವಂತೆ ಮಾಡಿರಬಹುದು. ಇದೇ ಸಮಾವೇಶದಲ್ಲಿ ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋರಾಡಬೇಕೆಂದು ಹೇಳಿಕೆ ನೀಡಿರುವುದು ಬಹಳ ಸಂತೋಷದ ಸಂಗತಿಯಾಗಿದೆ.

ಯಾರ ಭ್ರಷ್ಟಾಚಾರದ ವಿರುದ್ಧ ಎಂದು ಹೇಳದೇ ಕೇವಲ ಭ್ರಷ್ಟಾಚಾರದ ವಿರುದ್ಧ ಎಂದು ಹೇಳಿರುವುದು ಮತ್ತಷ್ಟು ಗೊಂದಲವಾಗಿರುತ್ತದೆ. ಯಾವುದೇ ಜಾತಿ ಮತ್ತು ಧರ್ಮದ ಸಂಸ್ಥೆಗಳು ಇರುವುದು ಪ್ರಾಮಾಣಿಕರನ್ನು ಬೆಂಬಲಿಸಲು ಅಪ್ರಮಾಣಿಕರನ್ನು ಶಿಕ್ಷಿಸಲು ಮಾತ್ರ. ಕೇವಲ ಅಧಿಕಾರದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಒಂದು ವ್ಯಕ್ತಿಯ ಪರವಾಗಿ ಇಡೀ ಜನಾಂಗವೇ ಕೇಂದ್ರೀಕೃತವಾಗುವುದಾದರೆ ಅನ್ಯ ಜನಾಂಗದ ಜನರಿಗೆ ಬೇರೆಯ ಭಾವನೆಗಳು ಮೂಡಿ ಸಮಾಜದ ಸಾಮರಸ್ಯ ಖಂಡಿತವಾಗಿಯೂ ಹಾಳಾಗುತ್ತದೆ.

ಕೆ.ಎಸ್.ನಾಗರಾಜ್, ಬೆಂಗಳೂರು

ಸಂವಿಧಾನದ ಮೇಲೆ ಸ್ವಾಮಿಗಳ ಸವಾರಿ

ಸೋಮವಾರ - ಏಪ್ರಿಲ್ -25-2011

‘ಸಮಾಜದ ಮುಖಂಡರು, ಮಠಾಧೀಶರು, ಸ್ವಾಮಿಗಳ ಮಾರ್ಗದರ್ಶನದಲ್ಲಿ ಆಡಳಿತ ನಡೆಸುತ್ತೇನೆ’ ಹಾಗಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇತ್ತೀಚೆಗೆ ಹೇಳಿದರು. ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ವೀರಶೈವ ಮಹಾಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. ಮಾತನಾಡುವ ಮುನ್ನ ಸಾಲಾಗಿ ಆಸೀನರಾಗಿದ್ದ ಮಠಾಧಿಪತಿಗಳ ಪಾದಕ್ಕೆರಗಿದರು. ತನ್ನ ಜಾತಿ ಪೀಠಗಳ ‘ಜಗದ್ಗುರು’ಗಳ ಮುಂದೆ ತನ್ನ ಸಿಂಹಾಸನಕ್ಕೆ ಎದುರಾಗಿರುವ ಕೆಲಸಗಳನ್ನು ಬದಿಗೊತ್ತಿ ಈ ಜಾತಿ ಸಮಾವೇಶದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳೆರಡರಲ್ಲೂ ಅವರು ಪಾಲ್ಗೊಂಡು ಪುನೀತರಾದರು.

ತಮ್ಮ ಪಾದಕ್ಕೆರಗಿ ಕಣ್ಣೀರು ಹಾಕಿದ ತಮ್ಮ ಜಾತಿಯ ಮುಖ್ಯಮಂತ್ರಿಯ ದಯನೀಯ ಸ್ಥಿತಿ ಕಂಡು ಕರಗಿದ ವೀರಶೈವ ಮಠಾಧಿಪತಿಗಳು ಭಕ್ತನ ತಲೆ ಸವರಿ ‘ಹೆದರಬೇಡಿ ಯಡಿ ಯೂರಪ್ಪನವರೇ ನಿಮ್ಮ ಜೊತೆಗೆ ನಾವಿದ್ದೇವೆ. ಎಷ್ಟೇ ಆರೋಪ ಬಂದರೂ ಯಾರಿಗೂ ಹೆದರದೆ ಆಡಳಿತ ನಡೆಸಿ’ ಎಂದು ಧೈರ್ಯ ತುಂಬಿದರು. ಜಗದ್ಗುರುಗಳ ಆಭಯ ಹಸ್ತದಿಂದ ರೋಮಾಂಚಿತರಾದ ಮುಖ್ಯಮಂತ್ರಿ ಮತ್ತು ಮಂತ್ರಿ ಸೋಮಣ್ಣ ಸ್ವಾಮಿಗಳ ಆಶೀರ್ವಾದ ಇರುವವರೆಗೆ ನಮಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಭಕ್ತಿಪೂರ್ವಕ ವಾಗಿ ಹೂಂಕರಿಸಿದರು.

ವೀರಶೈವ ವೇದಿಕೆಯಲ್ಲಿ ನಡೆದ ಈ ಅವಿವೇಕತನವನ್ನು ಯಾರೂ- ಬಸವನ ಗೌಡ ಪಾಟೀಲ ಯತ್ನಾಳ ರನ್ನು ಹೊರತುಪಡಿಸಿ-ಯಾರೂ ಪ್ರತಿಭಟಿಸಲಿಲ್ಲ. ಯತ್ನಾಳ ಗೌಡರು ಮಾತ್ರ ‘‘ವೀರಶೈವ ಮಹಾಸಭೆ ಬಿಜೆಪಿಯ ವೇದಿಕೆಯಾಗಬಾರದು. ಮುಖ್ಯಮಂತ್ರಿಯ ಭ್ರಷ್ಟಾಚಾರವನ್ನು ನೀವು ಸಮರ್ಥಿಸಿಕೊಂಡರೆ ಈ ಸಂಘಟನೆಗೆ ಪರ್ಯಾಯವಾಗಿ ಇನ್ನೊಂದು ಸಂಘಟನೆ ಕಟ್ಟಬೇಕಾದಿತೆಂದು ಎಚ್ಚರಿಕೆ ನೀಡಿದರು. ಆದರೆ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಯತ್ನಾಳರ ಮಾತನ್ನು ಕೇಳಿದರೆ ಪ್ರಯೋಜನವೇನು? ಕೈಯೆತ್ತಿ ಆಶೀರ್ವಾದ ಮಾಡಿದರೆ ತಮ್ಮ ಕೈಯನ್ನೇ ಕಲ್ಪವೃಕ್ಷವನ್ನಾಗಿ ಮಾಡುವ ನಾಡಿನ ದೊರೆಯೆ ಪಾದುಕೆಗಳ ಅಡಿಯಲ್ಲಿ ಕುಳಿತಿರುವಾಗ ಯಾರು ತಾನೆ ಇಲ್ಲದ ರಿಸ್ಕು ತೆಗೆದುಕೊಳ್ಳುತ್ತಾರೆ.

ತಾನು ಕರ್ನಾಟಕದ 6 ಕೋಟಿ ಜನರನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಎಂಬಂತೆ ಯಡಿಯೂರಪ್ಪನವರು ಎಂದೂ ನಡೆದು ಕೊಂಡಿಲ್ಲ. ಜನತೆಯಿಂದ ಚುನಾಯಿತರಾಗಿರುವ ತಾನು ಜನತೆಗೆ ರಾಷ್ಟ್ರದ ಸಂವಿಧಾನಕ್ಕೆ ನಿಷ್ಠರಾಗಿರಬೇಕೆಂದು ಅವರಿಗೆಂದೂ ಅನಿಸಿಲ್ಲ. ರಾಜ್ಯಾಂಗಕ್ಕೆ ನಿಷ್ಠೆಯಿಂದಿರುವುದಾಗಿ ಪ್ರಮಾಣ ವಚನ ಸ್ವೀಕರಿಸಿ ನಿತ್ಯವೂ ಅದನ್ನು ಉಲ್ಲಂಘಿಸುತ್ತಿರುವುದು ಪ್ರಮಾದ ಎಂದು ಅವರೆಂದೂ ಭಾವಿಸುವುದಿಲ್ಲ.

ಮುಖ್ಯಮಂತ್ರಿಗೆ ವಿವೇಕವಿಲ್ಲವೆಂದಾದರೆ ಮಠಾಧೀಶರಿಗಾದರೂ ಅದು ಇರಬೇಡವೇ? ಸಮಾಜ ತಪ್ಪು ಮಾಡಿದಾಗ ಸರಿಯಾದ ದಾರಿ ತೋರಿಸಲೆಂದೇ ಸ್ವಾಮಿಗಳಿರುತ್ತಾರೆಂಬುದು ಪ್ರತೀತಿ. ‘ಪಾಪಿಯ ಹಣವನ್ನು ಮುಟ್ಟಬಾರದು’ ಎಂದು ಈ ಕಾವಿಧಾರಿಗಳು ಆಗಾಗ ಉಪದೇಶ ಮಾಡುತ್ತಿರುತ್ತಾರೆ. ‘ಕಳಬೇಡ, ಕೊಲಬೇಡ ಹೊಲಸು ನುಡಿಯಲು ಬೇಡ ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎಂದು ಬಸವಣ್ಣನವರ ವಚನವನ್ನು ಇವರು ಉಲ್ಲೇಖಿಸುತ್ತಿರುತ್ತಾರೆ. ಆದರೆ ಯಡಿಯೂರಪ್ಪ ತಮಗೆ ಧಾರಾಳವಾಗಿ ನೀಡುತ್ತಿರುವ ಹಣ ಎಲ್ಲಿಯದು? ನಾಡಿನ 6 ಕೋಟಿ ಜನರ ಬೆವರು ಶ್ರಮದಿಂದ ಬೊಕ್ಕಸಕ್ಕೆ ಬಂದ ಹಣವನ್ನು ಈ ರೀತಿ ತಾವು ತೆಗೆದು ಕೊಳ್ಳುವುದು ತಪ್ಪಲ್ಲವೇ? ತಮ್ಮ ಮುಂದೆ ಮಂಡಿಯೂರಿ ಕುಳಿತುಕೊಳ್ಳುವ ಮುಖ್ಯಮಂತ್ರಿಯ ಮೇಲೆ ಎಷ್ಟೆಲ್ಲ ಭ್ರಷ್ಟಾಚಾರದ ಆರೋಪಗಳು ಬಂದಿವೆ.

ಅನೇಕ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಲೋಕಾಯುಕ್ತರೇ ಬಾಯಿಬಿಟ್ಟು ಹೇಳಿದ್ದಾರೆ. ಆದರೂ ಮಠಾಧೀಶರು ಇದ್ಯಾವುದಕ್ಕೂ ಕಿವಿಗೊಟ್ಟಿಲ್ಲ. ಗಂಟೆ, ಜಾಗಟೆಗಳ ನಿನಾದಗಳಲ್ಲಿ, ಕಾಂಚಾಣದ ಝಣಝಣದಲ್ಲಿ ಬಹುಶಃ ಅವರ ಕಿವಿಕಿವುಡಾಗಿರಬಹುದು. ಇದು ಬಸವಣ್ಣ ಮರುಜೀವ ನೀಡಿದ ಲಿಂಗಾಯತ ಧರ್ಮದ ಇಂದಿನ ದುಸ್ಥಿತಿಯ ಸಂಕೇತವಾಗಿದೆ.
ತಾವು ಮಾಡುತ್ತಿರುವುದು ತಪ್ಪೆಂದು ಮುಖ್ಯಮಂತ್ರಿಗೂ ಗೊತ್ತಿದೆ. ಮಠಾಧೀಶರಿಗೂ ಗೊತ್ತಿದೆ. ಕರ್ನಾಟಕವನ್ನಾಳಿದ ಮುಖ್ಯಮಂತ್ರಿ ಗಳಲ್ಲಿ ಹಲವು ಲಿಂಗಾಯತರು ಆಗಿ ಹೋಗಿದ್ದಾರೆ.

ನಿಜಲಿಂಗಪ್ಪ, ಕತ್ತಿ, ವೀರೇಂದ್ರ ಪಾಟೀಲ, ಬೊಮ್ಮಾಯಿ, ಜೆ.ಎಚ್.ಪಟೇಲ್, ಕಂಠಿ ಇವರ್ಯಾರೂ ಯಡಿಯೂರಪ್ಪನವರಂತೆ ಸಂವಿಧಾನವನ್ನು ಧಿಕ್ಕರಿಸಿ ನಡೆಯಲಿಲ್ಲ. ಯಾವುದೇ ಮಠಾಧೀಶರ ಮುಂದೆ ಮಂಡಿಯೂರಿ ಕುಳಿತುಕೊಳ್ಳಲಿಲ್ಲ. ಇವರು ಮಠಗಳಿಗೆ ಹೋಗುತ್ತಿರಲಿಲ್ಲವೆಂದಲ್ಲ. ಹೋಗು ತ್ತಿದ್ದರು. ಹೋಗಿದ್ದರೂ ಸ್ವಜಾತಿ ಮಠಾಧೀಶರ ದುಂಬಾಲು ಬಿದ್ದು ಕರೆದುಕೊಂಡು ಹೋಗುತ್ತಿದ್ದರು. ಆದರೆ ಹಾಗೆ ಹೋದ ಕಡೆಗೆಲ್ಲ ಸರಕಾರದ ಬೊಕ್ಕಸದ ಹಣವನ್ನು ಮಠಗಳಿಗೆ ಧಾರಾಳವಾಗಿ ನೀಡುತ್ತಿರಲಿಲ್ಲ.

ಇದಕ್ಕೆ ಕಾರಣ ಯಾವುದೇ ಜಾತಿ, ಧರ್ಮ, ಮಠ, ಮಠಾಧೀಶರಿಗಿಂತ ಸಂವಿಧಾನವೇ ಶ್ರೇಷ್ಠ. ತಮ್ಮ ನಿಷ್ಠೆ ಅದಕ್ಕಿರಬೇಕು ಎಂಬ ಅರಿವನ್ನು ಹಿಂದಿನ ಮುಖ್ಯಮಂತ್ರಿಗಳು ಕಳೆದುಕೊಂಡಿ ರಲಿಲ್ಲ. ಅಂದಿನ ಮಠಾಧೀಶರು ಇಂದಿನವರಂತೆ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳನ್ನು ಮಾಡಿ ಕ್ಯಾಪಿಟೇಶನ್ ವಸೂಲಿಗೆ ನಿಂತಿರಲಿಲ್ಲ.ಜನತೆಯ ಬೊಕ್ಕಸದ ಹಣವನ್ನು ಈ ರೀತಿ ನಮಗೆ ಕೊಡಬೇಡಿ, ಅದು ಒಂದು ಜಾತಿ- ಧರ್ಮದವರಿಂದ ಬಂದ ಹಣವಲ್ಲ.

ಎಲ್ಲ ಸಮುದಾಯಗಳಿಗೆ ಸೇರಿರುವ ದುಡ್ಡು ಎಂದು ಯಾವ ಮಠಾಧೀಶರೂ-ಪಂಚಮಸಾಲಿ ಸ್ವಾಮಿಗಳನ್ನು ಹೊರತುಪಡಿಸಿ ಹೇಳಲಿಲ್ಲ. ಹಾಗಂತ ಈ ಮಠಗಳಿಗೆ ದುಡ್ಡಿನ ಕೊರತೆ ಇಲ್ಲ. ಸ್ವಂತ ತಾಂತ್ರಿಕ, ವೈದ್ಯಕೀಯ ಕಾಲೇಜುಗಳನ್ನು ಇವರು ನಡೆಸುತ್ತಾರೆ. ಕೋಟಿ ಕೋಟಿ ಹಣ ಬರುತ್ತದೆ. ಭಕ್ತರಿಂದಲೂ ಅನೇಕ ಸ್ವಾಮಿಗಳು ಬಡ್ಡಿ, ಲೇವಾದೇವಿ ದಂಧೆ ಮಾಡುತ್ತಾರೆ. ಅನೇಕ ಸ್ವಾಮಿಗಳು ಸ್ವಂತ ಹೆಲಿಕಾಪ್ಟರ್‌ಗಳನ್ನು, ವಿದೇಶಿ ಕಾರುಗಳನ್ನು ಇಟ್ಟುಕೊಂಡಿದ್ದಾರೆ. ಹೇಗೆ ಸಜೀವ-ನಿರ್ಜಿವ ವಸ್ತುಗಳನ್ನೆಲ್ಲ ಇಟ್ಟುಕೊಂಡಿ ದ್ದಾರೆ. ಹಾಗಿದ್ದರೂ ಈ ಪರಿ ದುರಾಸೆ ಏಕೆ?

ಯಡಿಯೂರಪ್ಪನವರು ತಿನ್ನಬಾರದ್ದನ್ನು ತಿಂದು ಅಜೀರ್ಣ ಮಾಡಿಕೊಂಡಿದ್ದಾರೆ. ಅವರ ಪಕ್ಷದಲ್ಲೇ ಅವರಿಗೆ ಔಷಧಿ ಕೊಡುವುದಕ್ಕೆ ಒಂದು ಗುಂಪು ಸಿದ್ಧವಾಗಿದೆ. ಈ ಹಂತದಲ್ಲಿ ತನ್ನ ಕುರ್ಚಿ ಉಳಿಸಿಕೊಳ್ಳಲು ಜಾತಿ ಬೆಂಬಲ ಅವರಿಗೆ ಬೇಕಾಗಿದೆ. ಮಠಗಳಿಗೆ ಬೊಕ್ಕಸದ ಹಣ ನೀಡಿ ಆ ಬೆಂಬಲವನ್ನು ಖರೀದಿಸಲು ಅವರು ಮುಂದಾಗಿದ್ದಾರೆ.ಹಾಗೆಂದು ಲಿಂಗಾಯತರ ಮೇಲೆ ಇವರಿಗೆ ನಿಜವಾದ ಕಾಳಜಿ ಇದೆಯೆಂದಲ್ಲ. ಇಲ್ಲಿಯೂ ಜಾತಿಯೊಂದಿಗೆ ವರ್ಗ ಥಳಕು ಹಾಕಿಕೊಂಡಿದೆ. ಮಠಾಧೀಶರು, ಸಿರಿವಂತ ಲಿಂಗಾಯತರನ್ನು ಮಾತ್ರ ಯಡಿಯೂರಪ್ಪ ಓಲೈಸುತ್ತಾರೆ. ಆದರೆ ಬಡ ಲಿಂಗಾಯತರ ಸ್ಥಿತಿ ಏನಾಗಿದೆ? ಹಾವೇರಿ ಗೋಲಿಬಾರ್‌ನಲ್ಲಿ ಸತ್ತ ರೈತರು ಲಿಂಗಾಯತರಲ್ಲವೇ?

ಕೊಪ್ಪಳದಲ್ಲಿ ಪೊಲೀಸರ ಲಾಠಿ ಏಟು ತಿಂದ ರೈತರು ವೀರಶೈವರಲ್ಲವೇ? ಬೆಳೆ ವಿಫಲವಾಗಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿ ಕೊಂಡ ರೈತರಲ್ಲಿ ಹೆಚ್ಚಿನವರು ಲಿಂಗಾಯತ ರಲ್ಲವೇ? ಇವರ ಬಗ್ಗೆ ಮುಖ್ಯಮಂತ್ರಿ ಗಾಗಲಿ, ಮಠಾಧೀಶರಿಗಾಗಲಿ ಯಾಕೆ ಕಾಳಜಿ ಇಲ್ಲ. ಇವರ ಕಣ್ಣಿಗೆ ಬರೀ ಖೇಣಿ ಮತ್ತು ಪ್ರಭಾಕರ ಕೋರೆ ಮಾತ್ರ ಲಿಂಗಾಯತರಾಗಿ ಏಕೆ ಕಾಣುತ್ತಾರೆ?

ಈ ಪ್ರಶ್ನೆಗಳಲ್ಲಿ ಉತ್ತರ ಕಂಡುಕೊಳ್ಳ ಬೇಕಾದವರು ಮುಖ್ಯಮಂತ್ರಿಯಾಗಲಿ, ಮಠಾಧೀಶರಾಗಲಿ ಅಲ್ಲ. ಜನತೆ ಉತ್ತರ ಕಂಡುಕೊಂಡು ಇವರಿಗೆ ಯಾವ ಪಾಠ ಕಲಿಸಬೇಕೆಂಬ ಬಗ್ಗೆ ಯೋಚಿಸಬೇಕಾಗಿದೆ.ಪ್ರಜಾಪ್ರಭುತ್ವದಲ್ಲಿ ಯಾವುದೇ ಜಾತಿ, ಮತ, ಮಠಾಧೀಶರಿಗಿಂತ ಸಂವಿಧಾನವೇ ಶ್ರೇಷ್ಠವಾದುದು. ಪ್ರಧಾನ ಮಂತ್ರಿಯಾಗಿ ರಲಿ, ಮುಖ್ಯಮಂತ್ರಿಯಾಗಿರಲಿ ಸಂವಿಧಾನದ ಮಾರ್ಗದರ್ಶನದಲ್ಲಿ ಅದರ ಬೆಳಕಿನಲ್ಲಿ ಕಾರ್ಯನಿರ್ವಹಿಸಬೇಕು. ಸಂವಿಧಾನಾತ್ಮಕ ಅಧಿಕಾರ ಸ್ಥಾನದಲ್ಲಿರುವ ವ್ಯಕ್ತಿ ತಾನು ತನ್ನ ಜಾತಿಯ ಮಠಾಧೀಶರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುವುದಾಗಿ ಹೇಳಿದರೆ ಆತ ಆ ಸ್ಥಾನದಲ್ಲಿರಲು ನಾಲಾಯಕ್, ಇಂಥ ನಾಲಾಯಕ್ ವ್ಯಕ್ತಿ ಅಧಿಕಾರದಲ್ಲಿ ಮುಂದುವರಿದರೆ ಅವರಿಂದ ಸಂವಿಧಾನಕ್ಕೆ ಚ್ಯುತಿ ತಂದಂತಾಗುತ್ತದೆ.


ಮುಖ್ಯಮಂತ್ರಿಯಾದವನು ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಬೇಕೇ ಹೊರತು ಯಾವುದೇ ಮಠದ ಸ್ವಾಮಿಯ ಪಾದ ಬುಡದಲ್ಲಿ ಕುಳಿತು ಅಲ್ಲ. ಇದು ಸಂವಿಧಾನಕ್ಕೆ ಎಸಗುವ ಘೋರ ಅಪರಾಧವಾಗಿದೆ.ಯಡಿಯೂರಪ್ಪನವರಿಗೆ ಮಠಪೀಠಗಳ ಮೇಲೆ ಅಷ್ಟೊಂದು ಭಕ್ತಿ ಇದ್ದರೆ ತನ್ನ ಸ್ವಂತದ ದುಡ್ಡಿನಿಂದ ಧಾರಾಳವಾಗಿ ಹಣ ನೀಡಲಿ. ಶಿವಮೊಗ್ಗ, ಬೆಂಗಳೂರು, ಕಲಬುರ್ಗಿ, ದಿಲ್ಲಿ, ಚೆನ್ನೈಗಳಲ್ಲಿ ಕಬಳಿಸಿದ ಆಸ್ತಿ ಮಾರಿ ದೇಣಿಗೆ ನೀಡಲಿ. ಅದಕ್ಕೆ ಯಾರ ಅಭ್ಯಂತರವೂ ಇಲ್ಲ.ಜನ ಕಲ್ಯಾಣ ಯೋಜನೆಗಳ ಜಾರಿಗಾಗಿ ಸರಕಾರದ ಬಳಿ ಹಣವಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ ವರ್ಗದ ಹಾಸ್ಟೆಲ್‌ಗಳು ಮುಚ್ಚಿಹೋಗು ತ್ತಿವೆ. ರೈತನನ್ನು ಸಾಲದ ಸುಳಿಯಿಂದ ಪಾರು ಮಾಡಲು ಹಣವಿಲ್ಲ.

ಆದರೆ ಹೋದಲ್ಲಿ ಬಂದಲ್ಲಿ ಕೋಟಿ ಕೋಟಿ ಅನುದಾನ ಘೋಷಿಸಲು ಹಣವಿದೆ. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ರಾಘವೇಂದ್ರನನ್ನು ಮಠಾಧೀಶರು ವೇದಿಕೆ ಮೇಲೆ ಕೂರಿಸಿ ‘ನೀವೆ ಇಂದ್ರ-ಚಂದ್ರ’ ಎಂದು ಹೊಗಳುತ್ತಾರೆ. ಇದಕ್ಕಿಂತ ನಿರ್ಲಜ್ಜತನ ಇನ್ನೊಂದಿಲ್ಲ.

- ಸನತ್‌ ಕುಮಾರ್‌ ಬೆಳಗಲಿ

Varthabharthi

Sunday, 10 April 2011

ಗಾಂಧಿ, ಅಸ್ಪಶತೆ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಸಂಕಟಗಳು (ಭಾಗ-1)


ಗುರುವಾರ - ಜನವರಿ -20-2011

"I am condemned because I criticized Gandhi and Jinnah for the mess they have made of Indian politics, and in doing so I am alleged to have shown towards them hatred and disrespect. In reply to this charge what I have to say is that I have been a critic and I must continue to be such ….. I dislike them I do not hate them – it is because I love India more." 

ಈ ಹೇಳಿಕೆಯನ್ನು ಅಂಬೇಡ್ಕರ್ ಬಿಡು ಗಡೆ ಮಾಡಿರುವುದು 1942ರಲ್ಲಿ. ರಾಷ್ಟ್ರ ರಾಜ ಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಗಾಂಧೀಜಿ ಮತ್ತು ಅವರು ಈ ದೇಶದ ಅಸ್ಪಶ್ಯ ಮತ್ತು ದುರ್ಬಲ ವರ್ಗದವರನ್ನು ಉದ್ದೇಶಿಸಿ ನಡೆಸುತ್ತಿರುವ ಹೋರಾಟವನ್ನು ಸೂಕ್ಷ್ಮವಾಗಿ ಗಮನಿಸಿದ ಅಂಬೇಡ್ಕರ್, ಆ ಕುರಿತು ತನ್ನ ನಿಲುವೇನು ಎಂಬುದನ್ನು ಮೇಲಿನ ಹೇಳಿಕೆಯಲ್ಲಿ ಬಹಿರಂಗಪಡಿಸುತ್ತಾರೆ. ಇದು ಈ ದೇಶದ ಮಿಲಿ ಯಗಟ್ಟಳೆ ಅಸ್ಪಶ್ಯರು ಹಾಗೂ ಜಾತಿ ವಿರೋಧಿ ಹೋರಾಟವನ್ನು ಬೆಂಬಲಿಸುವವರ ನಿಲುವು ಎಂದು ದೃಢೀಕರಿಸುತ್ತಾರೆ. ಜೊತೆಗೆ ಅವರ ಹೇಳಿಕೆಯಲ್ಲಿ ಗಾಂಧಿ ಮತ್ತು ಅಸ್ಪಶತೆ ನಡು ವಿನ ಸಂಬಂಧವು ಕೂಡ ವ್ಯಕ್ತವಾಗುತ್ತದೆ.
ಈ ಹಿನ್ನೆಲೆಯಲ್ಲಿ ಗ್ರಹಿಸುವುದಾದರೆ ಗಾಂಧೀ ರಾಜಕೀಯದ ವಿಚಾರವಾಗಿ ಪ್ರಕಟವಾಗುವ ದ್ವಂದ್ವಗಳ ಕುರಿತು ಅಂಬೇಡ್ಕರ್‌ರವರಿಗೆ ವೈ ಮನಸ್ಸು ಇದ್ದಿರುವುದು ಸ್ಪಷ್ಟವಾಗುತ್ತದೆ. ಗಾಂಧೀಜಿ ತಳೆದಿರುವ ನಿಲುವಿನಲ್ಲೆ ಈ ದ್ವಂದ್ವ ಬಹಿರಂಗಗೊಳ್ಳುತ್ತದೆ -ಒಂದು ಕಡೆ ಅವರು ಅಸ್ಪಶತೆ ಆಚರಣೆಯ ಕುರಿತು ತೀವ್ರವಾದ ಟೀಕೆಗಳನ್ನು ಮಾಡುತ್ತಾರೆ. ಇನ್ನೊಂದು ಕಡೆ ಯಲ್ಲಿ ಜಾತಿ ಮತ್ತು ವರ್ಣಾಶ್ರಮ ಧರ್ಮವನ್ನು ಪ್ರತಿಪಾದಿಸುತ್ತಾರೆ. ಇಲ್ಲಿ ಎರಡು ಪ್ರಮುಖ ವಿಷಯಗಳು ಪರಸ್ಪರ ಸಂಬಂಧ ಬೆಳೆಸಿಕೊಳ್ಳುತ್ತವೆ.
ಒಂದನೆಯದು ಜಾತಿ ಎಂಬ ಸಂಸ್ಥೆ ಅಥವಾ ವರ್ಣಾಶ್ರಮ ಧರ್ಮದ ಕುರಿತು ಗಾಂಧೀಜಿಗಿರುವ ಕಾಳಜಿ. ಎರಡನೆಯದು ಕಾಂಗ್ರೆಸ್‌ನೊಳಗೆ ಗುರುತಿಸಿಕೊಂಡ ಒಂದು ಬಲಿಷ್ಠ ಗುಂಪು ತನ್ನ ಇರುವಿಕೆಯನ್ನು ಪ್ರಕಟಿ ಸುತ್ತಾ ವಸಾಹತುಶಾಹಿ ವಿರೋಧಿ ಚಳವಳಿ ಯನ್ನು ಮುನ್ನಡೆಸುವ ನೆಪದಲ್ಲಿ ಜಾತಿ ವ್ಯವಸ್ಥೆ ಯನ್ನು ಪ್ರತಿಪಾದಿಸುತ್ತದೆ. ಈ ಗುಂಪನ್ನು ಬಾಲಗಂಗಾಧರ್ ತಿಲಕ್‌ರವರು ಪ್ರತಿನಿಧಿಸು ತ್ತಿದ್ದು, ಅವರಿಗೆ ಜಾತಿ ವ್ಯವಸ್ಥೆ ಎಂಬುದು ಧರ್ಮದೊಳಗಿನ ಒಂದು ಒಕ್ಕೂಟವಾಗಿ ಕಾಣು ತ್ತದೆ.
ತಿಲಕ್ ಆಲೋಚನೆ ಹೇಗಿತ್ತು ಅಂದರೆ, ಅವರ ಪ್ರಕಾರ ಒಬ್ಬ ವ್ಯಕ್ತಿ ಜಾತಿ ವ್ಯವಸ್ಥೆಯ ಹರಿಕಾರನಾದರೆ ಮಾತ್ರ ಅವನು ರಾಷ್ಟ್ರೀಯ ವಾದಿ ಆಗಲು ಅರ್ಹತೆ ಪಡೆಯುತ್ತಾನೆ ಎಂದು ಅಭಿಪ್ರಾಯಪಡುತ್ತಾರೆ. ಈ ಆಲೋಚನೆ ಯಿಂದಲೆ ತಿಲಕರು ಶಿಕ್ಷಣ ಸಂಸ್ಥೆಗಳಲ್ಲಿ ಬ್ರಾಹ್ಮ ಣೇತರ ಮತ್ತು ಅಸ್ಪಶ್ಯರ ಮಕ್ಕಳು ಸೇರ್ಪಡೆ ಗೊಳ್ಳಬಾರದೆಂದು ಹೇಳುತ್ತಾರೆ. ಗೋಖಲೆ ಯಂತ ಕಾಂಗ್ರೆಸಿಗರು ಬಾಂಬೆ ಪ್ರಸಿಡೆನ್ಸಿಯಲ್ಲಿ ಎಲ್ಲರಿಗೂ ಕಡ್ಡಾಯ ಶಿಕ್ಷಣ ಎಂಬ ನಿರ್ಣಯ ವನ್ನು ಹೊರಡಿಸ ಹೊರಟಾಗ ರಾಷ್ಟ್ರೀಯವಾದಿ ಗಳು ಮುಸ್ಲಿಂ ಲೀಗ್ ಜೊತೆ ಸೇರಿ ಆ ನಿರ್ಣ ಯಕ್ಕೆ ಒಪ್ಪಿಗೆ ಸೂಚಿಸದಂತೆ ರಾಜಕೀಯ ಮಾಡುತ್ತಾರೆ. ವಲ್ಲಭಬಾಯಿ ಪಟೇಲರು ಅಂತ ರ್‌ಜಾತಿ ವಿವಾಹ ಬಿಲ್‌ನ್ನು ಮಂಡಿಸಿದಾಗ, ತಿಲಕ್‌ರು ವಿರೋಧಿಸಿ ಒಂದು ವೇಳೆ ಈ ಬಿಲ್‌ನ್ನು ಒಪ್ಪಿಕೊಂಡರೆ, ಭಾರತೀಯ ಅಸ್ಮಿತೆಗೆ ಅವಮಾನವಾಗುತ್ತದೆ ಎಂದು ಹೇಳಿಕೆ ನೀಡಿದರು.
ಹಾಗೇನೆ, ಸುಧಾರಣಾವಾದಿಗಳಾದ ಮಹಾದೇವ್ ಗೋವಿಂದ ರಾನಡೆಯಂತವರು ಉದಾರತೆ, ಸಮಾನತೆಯನ್ನು ಪ್ರತಿಬಿಂಬಿಸುವ ಸಮಾಜ ನಿರ್ಮಾಣಕ್ಕೆ ಕರೆಕೊಟ್ಟು ಜಾತಿ, ಧರ್ಮದಂತಹ ಪೂರ್ವಗ್ರಹಗಳನ್ನು ತೊಡೆದು ಹಾಕಿ ಏಕತಾ ಭಾವನೆಯನ್ನು ಪ್ರತಿಪಾದಿಸಿದರೆ, ತಿಲಕರು ತೀವ್ರವಾಗಿ ವಿರೋಧಿಸಿದರು, ಈ ಬಗೆಯ ವಿರೋಧದ ಕುರಿತು ಅಂಬೇಡ್ಕರ್ ಹೀಗೆ ಪ್ರತಿಕ್ರಿಯಿಸುತ್ತಾರೆ.It is not possible for decency to enter into the abuses that were hurled, the calumnies that were uttered, and the strategies that were employed against the social reformers. ಹಾಗೇನೆ ಸಾಮಾಜಿಕ ಮೌಲ್ಯ ಮತ್ತು ನ್ಯಾಯದ ಕುರಿತು ದ್ವನಿ ಎತ್ತಿದ ರಾನಡೆ ಯವರ ಧೈರ್ಯವನ್ನು ಅಂಬೇಡ್ಕರ್ ಪ್ರಶಂಸಿಸುತ್ತಾರೆ.
ಅಂದರೆ 1920ರ ಹೊತ್ತಿಗೆ ಗಾಂಧೀಜಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಮಾಡುವ ಹೊತ್ತಿಗೆ ಕಾಂಗ್ರೆಸ್‌ನೊಳಗೆ ಜಾತಿಪರ ವಾದಿಸುವ ಒಂದು ಬಲಿಷ್ಠ ಗುಂಪು ದೊಡ್ಡ ಮಟ್ಟದಲ್ಲಿಯೇ ಸಂಘ ಟನೆಗೊಂಡಿತ್ತು. ಇದಕ್ಕೆ ಪೂರಕವಾಗಿ ಗಾಂಧೀಜಿ ಕೂಡ ಜಾತಿ ಎಂಬ ಸಂಸ್ಥೆಯ ಪರವಾಗಿದ್ದರು. 1917ರಲ್ಲಿ ಕಾಂಗ್ರೆಸ್ ಅಸ್ಪಶತೆಯನ್ನು ನಿರ್ಮೂ ಲನ ಮಾಡುವ ಒಂದು ಠರಾವನ್ನು ಹೊರಡಿ ಸಿತು. ಗಾಂಧೀ ಈ ಸಂದರ್ಭದಲ್ಲಿ ಒಂದು ಹೇಳಿಕೆ ನೀಡಿ ಅಸ್ಪಶತೆಯ ನಿರ್ಮೂಲನ ಎಂಬುದು ಸ್ವರಾಜ್ಯ ಪಡೆಯುವ ಪ್ರಕ್ರಿಯೆಗೆ ಪೂರಕವಾದುದು ಎಂದು ಆ ಹೇಳಿಕೆಯಲ್ಲಿ ಪರಿಭಾವಿಸುತ್ತಾರೆ.
ಆದರೆ, ವರ್ಣಾಶ್ರಮ ಧರ್ಮವನ್ನು ರಕ್ಷಣೆ ಮಾಡಬೇಕೆಂದು ಹೇಳುತ್ತಾರೆ. ಹಾಗೇನೆ, ಶ್ರೇಷ್ಠ ವರ್ಣವನ್ನು ಯಾವನೊಬ್ಬನೂ ಸ್ವೀಕರಿಸುವುದನ್ನು ವಿರೋಧಿಸುತ್ತಾರೆ. ಮದ್ರಾಸ್ ಲೆಜಿಸ್ಲೇಟಿವ್ ಅಸೆಂಬ್ಲಿ ಯಲ್ಲಿ ಟೆಂಪಲ್ ಎಂಟ್ರಿ ಬಿಲ್‌ನ್ನು ಮಂಡಿಸಿದಾಗ ಗಾಂಧೀಜಿ ಬೆಂಬಲಿಸುತ್ತಾರೆ. ಆದರೆ, ಕೇರಳದ ಗುರುವಾಯೂರಿನ ದೇವಾಲಯಕ್ಕೆ ಅಸ್ಪಶರ ಪ್ರವೇಶವನ್ನು ನಿರಾಕರಿಸಿದರೆ ತಾನು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇನೆ ಎಂದು ಕೊಟ್ಟಿರುವ ಹೇಳಿಕೆಯನ್ನು ಗಾಂಧೀಜಿ ಮರೆಯುತ್ತಾರೆ. ಎಲ್ಲಿಯವರೆಗೆ ಅಂದರೆ 1933-34ರಲ್ಲಿ ರಂಗಾ ಅಯ್ಯರ್‌ರವರು ಅಸ್ಪಶತೆ ನಿರ್ಮೂಲನ ಬಿಲ್‌ನ್ನು ಸೆಂಟ್ರಲ್ ಲೆಜಿಸ್ಲೇಟಿವ್‌ನಲ್ಲಿ ಮಂಡಿಸಿದಾಗ ಗಾಂಧೀಜಿ ಕಟುವಾಗಿ ಖಂಡಿಸುತ್ತಾರೆ ಮತ್ತು ವಿರೋಧಿಸುತ್ತಾರೆ. ಅಂಬೇಡ್ಕರ್‌ಗೆ ಇದು ನಿರಾಶೆ ಯನ್ನುಂಟು ಮಾಡುತ್ತದೆ. ಅಂಬೇಡ್ಕರ್ ಪ್ರಕಟಿಸುವ ಈ ನಿಲುವಿಗೆ ಬಲವಾದ ಕಾರಣವೂ ಇದೆ. ಈ ಸಂಬಂಧ ಅವರು ಮೂರು ಬೇಡಿಕೆಗಳನ್ನು ಮಂಡಿಸುತ್ತಾರೆ.
ಒಂದನೆಯದಾಗಿ, ಅಂಬೇಡ್ಕರ್‌ರಿಗೆ ದೇವಾಲಯ ಪ್ರವೇಶ ವಿಚಾರ ಅಷ್ಟೊಂದು ಪ್ರಮುಖವಾದುದಾಗಿರಲಿಲ್ಲ. ಬದಲಾಗಿ, ಅಸ್ಪಶರು ಶಿಕ್ಷಣ ಸಂಸ್ಥೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಪ್ರವೇಶ ಮಾಡುವುದು ಪ್ರಮುಖವಾದು ದಾಗುತ್ತದೆ. ಒಟ್ಟಾರೆಯಾಗಿ ಅಂಬೇಡ್ಕರ್‌ರ ಬೇಡಿಕೆಗಳು ಇಂತಿವೆ-ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ, ಮುಖ್ಯವಾಗಿ ಗ್ರಾಮಗಳಲ್ಲಿ, ಅಸ್ಪಶರಿಗೆ ನಾಗರಿಕ ಹಕ್ಕುಗಳು ದೊರೆಯಬೇಕು ಎಂದು ಪ್ರತಿಪಾದಿಸುತ್ತಾರೆ.- ಗ್ರಾಮಗಳಲ್ಲಿರುವ ಬಾವಿ ಮತ್ತು ಕೆರೆಯ ನೀರನ್ನು ತೆಗೆಯುವ ಸ್ವಾತಂತ್ರ, ಗ್ರಾಮಗಳಲ್ಲಿರುವ ಶಾಲೆಗಳಿಗೆ ಪ್ರವೇಶ, ಸಾರ್ವಜನಿಕ ಸವಲತ್ತುಗಳು ದೊರೆಯುವಂತಾಗಬೇಕು.
ಇವೆಲ್ಲ ಈಡೇರಿದರೆ, ಹಿಂದೂ ಸಮಾಜದೊಳ ಗೊಂದು ಕ್ರಾಂತಿಯಾಗುತ್ತದೆ. ಅದರಿಂದ ಅಸ್ಪಶರಿಗೆ ಸಾರ್ವಜನಿಕವಾಗಿ ಸಾಮಾಜಿಕ ಸಮಾನತೆ ದೊರೆತಂತಾ ಗುತ್ತದೆ ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ. ಆದರೆ, ಅಂಬೇಡ್ಕರ್‌ಗೆ ಇವೆಲ್ಲವನ್ನು ದಕ್ಕಿಸಿಕೊಳ್ಳುವುದು ಸುಲಭದ ಕೆಲಸವಲ್ಲವೆಂದು ಗೊತ್ತಿತ್ತು. ಇದರಿಂದ ಹಿಂಸೆಗಳು ಉದ್ಭವ ಆಗಬಹುದು ಎಂಬ ಆತಂಕ ಅವರಲಿತ್ತು. ಏಕೆಂದರೆ, ಪೋಲೀಸ್ ಮತ್ತು ನ್ಯಾಯಾಂಗ ದಲಿತರಿಗೆ ವಿರುದ್ಧವಾಗಿರುವುದರಿಂದ, ಅಸ್ಪಶ ಗುಂಪುಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ವಿಚಾರವು ಅವರಿಗೆ ತಿಳಿದಿತ್ತು.
ಎರಡನೆಯದಾಗಿ, ಅಂಬೇಡ್ಕರ್‌ರವರು ಅಸ್ಪಶರಿಗೆ ಸಮಾನ ಅವಕಾಶಗಳು ಸಿಗಬೇಕೆಂದು ಭಾವಿಸುತ್ತಾರೆ. ಗ್ರಾಮಮಟ್ಟದಲ್ಲಿ ಸಮಾನ ಅವಕಾಶಗಳು ಈ ಸಮುದಾಯಕ್ಕೆ ಇಲ್ಲದಿರುವುದರಿಂದ ಇವರಲ್ಲಿ ಬಡತನ ಮತ್ತು ಮೇಲ್ಜಾತಿಗಳು ಎಸಗುವ ದೌರ್ಜನ್ಯಗಳು ನಿರಂತರವಾಗಿ ಕಾಡುತ್ತಿರುವ ಸಮಸ್ಯೆಗಳಾಗಿವೆ. ಅಂಬೇಡ್ಕರ್ ರವರು ಗ್ರಾಮಗಳಲ್ಲಿ ಮತ್ತು ಪಟ್ಟಣಗಳಲ್ಲಿ ತಾವು ಉತ್ಪಾದನೆ ಮಾಡುವ ತರಕಾರಿ, ಹಾಲು, ಬೆಣ್ಣೆ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡುವ ಅವಕಾಶವೇ ಇಲ್ಲದಿರುವುದರಿಂದ, ಆರ್ಥಿಕವಾಗಿ ಅವರ ಜೀವನ ಕ್ರಮ ಅತ್ಯಂತ ಕೆಳಮಟ್ಟಕ್ಕೆ ತಲುಪಿತ್ತು ಎಂದು ಹೇಳುತ್ತಾರೆ.
ಇದರ ಜೊತೆಗೆ ದಲಿತ ಸಮುದಾಯ ಭೂಒಡೆತನ ಹಕ್ಕಿನಿಂದ ವಂಚಿತವಾಗಿತ್ತು. ಹಳ್ಳಿಯ ಸಂಪತ್ತನ್ನು ಅನುಭವಿಸುವ ಸ್ವಾತಂತ್ರ್ಯ ಇಲ್ಲದಿರುವುದು ಈ ಸಮುದಾಯವನ್ನು ಬಡತನದ ಕೂಪಕ್ಕೆ ತಳ್ಳಿಬಿಟ್ಟಿದೆ ಮತ್ತು ಅವರು ತಮ್ಮ ಬದುಕನ್ನು ಹಸನು ಗೊಳಿಸುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಭಾವಿಸುತ್ತಾರೆ.
ಮೂರನೆಯದಾಗಿ, ಅಸ್ಪಶರು ಮತ್ತು ಜಾತಿ ಹಿಂದುಗಳು ಪರಸ್ಪರ ಮಿಲನಗೊಳ್ಳುವ ಒಕ್ಕೂಟ ಸಾಮಾಜಿಕ ಸಂಬಂಧದ ಮೂಲಕ ನಡೆದರೆ, ಇಡೀ ಸಮಾಜದ ದಿಕ್ಕು ಬದಲಾವಣೆ ಯಾಗಲು ಸಾಧ್ಯವೆಂದು ಅಂಬೇಡ್ಕರ್ ಗ್ರಹಿಸುತ್ತಾರೆ. Only a common cycle of participation can help people to overcome the strangeness of feeling which one has, when brought into contact with the others. Nothing can do this more effectively in my opinion than the admission, of the Depressed Classes to the houses of the caste Hindus.
ಮೇಲಿನ ಮೂರು ಬೇಡಿಕೆಗಳು ಸಮರ್ಪಕವಾಗಿ ಅನುಷ್ಠಾನ ಆಗಬೇಕಾದರೆ ಯಾವುದನ್ನು ನಿರೀಕ್ಷೆ ಮಾಡದ, ಸಮಾಜದ ಅಭಿವೃದ್ಧಿಯನ್ನೇ ಮುಖ್ಯ ಗುರಿಯಾಗಿ ಇಟ್ಟುಕೊಂಡ ಏಜೆನ್ಸಿ ಮತ್ತು ನಿಸ್ವಾರ್ಥ ಸೇವೆ ಮಾಡುವ ಮನಸ್ಸುಗಳು ನಿರಂತರವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ.
ಈ ಬಗೆಯ ಕಳಕಳಿಯನ್ನು ಅವರು ಪದೇ ಪದೇ ಹೇಳಿ ಕಾಂಗ್ರೆಸ್ ಮತ್ತು ಗಾಂಧೀಜಿ ಮೇಲೆ ಒತ್ತಡ ತಂದರೂ, ಗಾಂಧೀಜಿ ಮಾತ್ರ ಅಂಬೇಡ್ಕರ್ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಬದಲಾಗಿ ತಾನು ಪ್ರತಿಪಾದಿಸುವ ಟೆಂಪಲ್ ಎಂಟ್ರಿ ಮತ್ತು ಹರಿಜನ ಸೇವಕ ಸಂಘ ರೂಪಿಸುವ ಕಾರ್ಯ ಚಟುವಟಿಕೆ ಗಳನ್ನು ಕಾರ್ಯರೂಪಕ್ಕೆ ತರಲು ಹೆಚ್ಚು ಒತ್ತು ನೀಡುತ್ತಾರೆ.
ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಗಾಂಧೀಜಿ ಸಂಘಟಿಸಿದ ವಸಾಹತು ವಿರೋಧಿ ಚಳವಳಿಯಲ್ಲಿ ಜಾತ್ಯತೀತತೆ, ಅಹಿಂಸೆ ಮತ್ತು ಖಾದಿ ಕುರಿತು ಸಾರ್ವತ್ರಿಕವಾಗಿ ಜನರನ್ನು ಎಚ್ಚರಿಸಲು ಯಶಸ್ವಿಯಾದರು. ಆದರೆ, ಅದೇ ರೀತಿ, ಅಸ್ಪಶರು ಮತ್ತು ದುರ್ಬಲ ವರ್ಗದವರ ಮೇಲೆ ಜಾತಿ ಹಿಂದುಗಳು ನಿರಂತರವಾಗಿ ಎಸಗುತ್ತಿರುವ ದೌರ್ಜನ್ಯ ತಡಗಟ್ಟುವಲ್ಲಿ ಯಾವುದೇ ಶ್ರಮ ವಹಿಸಲಿಲ್ಲ. ಇದೇ ಅಲ್ಲವೆ ವಿಪರ್ಯಾಸ?
ಅಸ್ಪೃಶರನ್ನು ಉದ್ದೇಶಿಸಿ ರೂಪಿಸಿದ ಗಾಂಧೀ ಹೋರಾಟಕ್ಕೆ ಇದು ದೊಡ್ಡ ಹಿನ್ನಡೆಯಂತೆಲೇ ಹೇಳಬಹುದು. ಈ ಹಿನ್ನಡೆಯ ಪರಿಣಾಮಗಳು ಸ್ವತಂತ್ರ ಭಾರತದಲ್ಲೂ ಪ್ರತಿದ್ವನಿಸುತ್ತಲೇ ಇದ್ದಿರುವುದು ದಲಿತ, ದುರ್ಬಲ ವರ್ಗಗಳ ದುರದೃಷ್ಟ. ಈ ಕಾರಣಕ್ಕಾಗಿ ಆಧುನಿಕ ಭಾರತದ ಸರಕಾರವು ಒಂದು ಏಜನ್ಸಿಯಾಗಿ ದಲಿತರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಯಿತು.
ಸಂವಿಧಾನವು ಕೂಡ ಸ್ಟೇಟ್‌ಗೆ ವಿಶೇಷವಾದ ಜವಾಬ್ದಾರಿಯ ಅವಕಾಶವನ್ನು ಕಲ್ಪಿಸಿ, ದಲಿತರ ಅಭಿವೃದ್ಧಿ, ರಕ್ಷಣೆ ಮತ್ತು ಅವರ ಬದುಕಲ್ಲಿ ಪರಿವರ್ತನೆ ತರುವ ವಿಶೇಷ ಯೋಜನೆ ರೂಪಿಸುವ ಮಹತ್ಕಾರ್ಯವನ್ನು ಸೂಚಿಸಿತು. ಅಸ್ಪಶತೆಯ ನಿರ್ಮೂಲನ, ಜೀತಪದ್ಧತಿಯಂತಹ ಕೆಟ್ಟ ಸಂಪ್ರದಾಯವನ್ನು ತೊಡೆದು ಹಾಕಿ ದಲಿತರ ರಕ್ಷಣೆ ಮಾಡುವುದು ಒಂದನೆಯ ಜವಾಬ್ದಾರಿ. ಶೈಕ್ಷಣಿಕ ಯೋಜನೆಗಳಲ್ಲಿ ಮುಖ್ಯವಾಗಿ ಸ್ಕಾಲರ್‌ಶಿಪ್, ವಸತಿ ನಿಲಯಗಳ ಸವಲತ್ತುಗಳು, ದಲಿತ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಎರಡನೆಯ ಜವಾಬ್ದಾರಿ. ಮತ್ತು ಶಾಸಕಾಂಗ, ಶೈಕ್ಷಣಿಕ ಮತ್ತು ಉದ್ಯೋಗ ರಂಗದಲ್ಲಿ ಮೀಸಲಾತಿ ಮೂರನೆಯ ಜವಾಬ್ದಾರಿ.
ಈ ಬಗೆಯ ಸಂವಿಧಾನಾತ್ಮಕ ಸುಧಾರಣೆಗಳು ದಲಿತರ ಏಳಿಗೆಗೆ ಅತೀ ಜರೂರಾಗಿ ಅನುಷ್ಠಾನ ಮಾಡಬೇಕಾದುದು ಸರಕಾರದ ಕರ್ತವ್ಯ ವಾಗಿದ್ದು, ಇದನ್ನು ಈಡೇರಿಸಲು ಎದುರಾಗುವ ಎಡರುತೊಡರುಗಳು ಈ ಸಮುದಾಯದ ಮತ್ತು ಒಟ್ಟಾರೆ ನಾಗರಿಕ ಸಮಾಜದ ಬೆಳವಣಿಗೆಗೆ ಶೋಭೆ ತರುವಂತಹದ್ದಾಗದು. ಆದರೆ, ಕಳೆದ ಆರು ದಶಕಗಳಲ್ಲಿ ಈ ಸಮುದಾಯದ ಬೆಳವಣಿಗೆಗೆ ಮತ್ತು ಅವರ ಆಸ್ತಿ ರಕ್ಷಣೆ ವಿಚಾರವಾಗಿ ಸರಕಾರ ಹಮ್ಮಿಕೊಂಡ ಕಾರ್ಯಕ್ರಮಗಳು ಮತ್ತು ಅದರ ಫಲಿತಾಂಶಗಳು ನಿರಾಶೆಯನ್ನುಂಟು ಮಾಡುತ್ತದೆ. ಈ ಜನತೆಯ ಜೀವನ ಕ್ರಮದಲ್ಲಿ ಆದ ಬದಲಾವಣೆಯನ್ನು ಗಮನಿಸಿದರೆ ಭಾರತದ ನಾಗರಿಕ ಸಮಾಜ ಶ್ರೇಷ್ಠವಾದುದೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
Source: Varthabharathi Kannada daily 

ಜಾತಿ ನಿರ್ಮೂಲನೆಯ ಹಾದಿಯಲಿ ಮಾಯಾವತಿ


ಸೋಮವಾರ - ಏಪ್ರಿಲ್ -04-2011

ಹಾಗಿದ್ದರೆ ತಮ್ಮ ಪ್ರಥಮ ಅವಧಿಯಲ್ಲಿ ಮಾಯವತಿಯವರು ಏನು ಮಾಡಿದರು? ಒಂದಷ್ಟನ್ನು ಉಲ್ಲೇಖಿಸುವುದಾದರೆ, ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದ 1,45,000 ರೌಡಿಗಳನ್ನು ಬಂಧಿಸಿದರು. ಮುಸಲ್ಮಾನರಿಗೆ ಉದ್ಯೋಗದಲ್ಲಿ ಶೇ.8.44ರಷ್ಟು ಮೀಸಲಾತಿ ನೀಡಿ ಅವರನ್ನು ಓಬಿಸಿ ಪಟ್ಟಿಗೆ ಸೇರಿಸಿದರು. ಮಥುರಾದ ಶ್ರೀಕೃಷ್ಣನ ದೇವಸ್ಥಾನದ ಪಕ್ಕದಲ್ಲಿದ್ದ ಮಸೀದಿಯನ್ನು ಒಡೆಯುವ ವಿಶ್ವಹಿಂದೂಪರಿಷತ್ತಿನ ಪ್ರಯತ್ನವನ್ನು ನಿರ್ದಾಕ್ಷಿಣ್ಯ ವಾಗಿ ವಿಫಲಗೊಳಿಸಿದ ಅವರು ಹಿಂದೂ ಧರ್ಮದ ವಿರುದ್ಧ ತಮ್ಮ ಜೀವನದುದ್ದಕ್ಕೂ ಕತ್ತಿ ಝಳಪಿಸಿದ ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ನಾಯಕರ್‌ರ ನೆನಪಿನಲ್ಲಿ ಒಂದು ವಾರಗಳ ಕಾಲ ರಾಜ್ಯಾದ್ಯಂತ ಪೆರಿಯಾರ್ ಮೇಳ ನಡೆಸಿದರು.
ಪರಿಣಾಮವಾಗಿ ತಮ್ಮ ಸರಕಾರವನ್ನೇ ಕಳೆದುಕೊಂಡರು. ಆಶ್ಚರ್ಯ ಬೇಡ, ಮರು ವರ್ಷ ನಡೆದ ಚುನಾವಣೆಯಲ್ಲಿ 67 ಸ್ಥಾನ ಪಡೆದ ಮಾಯವತಿಯವರು ಮತ್ತೆ ಬಿಜೆಪಿಯ ಬೆಂಬಲದಿಂದ ಮುಖ್ಯಮಂತ್ರಿ ಯಾದರು. ಅದು 6 ತಿಂಗಳ ಮಟ್ಟಿಗೆ. ಈ ಸಂದರ್ಭದಲ್ಲಿನ ಅವರ ಸಾಧನೆ ಒಂದೇ ಪದದಲ್ಲಿ ಹೇಳುವುದಾದರೆ ಅಪೂರ್ವವಾದುದು. ಆರು ವರ್ಷಗಳ ಸಾಧನೆ ಯನ್ನು ಕೇವಲ ಆರೇ ತಿಂಗಳಲ್ಲಿ ಮಾಡಿದರು ಎಂದರೂ ಅತಿಶಯೋಕ್ತಿಯೇನಲ್ಲ. ಏಕೆಂದರೆ ಆರು ತಿಂಗಳ ಆ ಅವಧಿಯಲ್ಲಿ ಭೂ ಹೀನ ಕೂಲಿ ಕಾರ್ಮಿಕರಿಗೆ ವಿಶೇಷವಾಗಿ ದಲಿತರಿಗೆ 7.5ಲಕ್ಷ ಎಕರೆ ಭೂಮಿ ವಿತರಿಸಿದರು. ದಲಿತರ 60,000 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿಮಾಡಿದರು. ಆರೇ ತಿಂಗಳಲ್ಲಿ ರಾಜ್ಯಾದ್ಯಂತ 15,000 ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಿ ಉತ್ತರಪ್ರದೇಶ ವನ್ನು ಅಂಬೇಡ್ಕರ್ ರಾಜ್ಯ ಮಾಡುವ ತಮ್ಮ ಕನಸಿಗೆ ಅಡಿಗಲ್ಲು ಇಟ್ಟರು.
ತಮ್ಮ ಆರು ತಿಂಗಳ 2ನೇ ಅವಧಿಯ ಆಡಳಿತದ ನಂತರ ಮಾಯಾವತಿಯವರು ಮತ್ತೊಮ್ಮೆ ಮುಖ್ಯಮಂತ್ರಿಯಾದುದ್ದು 2002 ಮಾರ್ಚ್ ತಿಂಗಳಿನಲ್ಲಿ; ಮತ್ತೆ ಅದೇ ಬಿಜೆಪಿಯ ಬೆಂಬಲ ದೊಂದಿಗೆ. ಈ ಬಾರಿಯ ಅವರ ಭವ್ಯ ಸಾಧನೆ ಎಂದರೆ ಪ್ರತಾಪಗಢದ ಸ್ವಘೋಷಿತ ರಾಜ, ರಾಜಾಬೈಯ ಅಲಿಯಾಸ್ ರಘುರಾಜ್ ಪ್ರತಾಪ್‌ಸಿಂಗ್‌ನನ್ನು ಮಟ್ಟಹಾಕಿದ್ದು. ಥೇಟ್ ಹಿಂದೀ ಸಿನಿಮಾಗಳ ಶೈಲಿಯಲ್ಲಿ ಕೊಲೆ, ಸುಲಿಗೆ, ದರೋಡೆಯನ್ನೇ  ಮಾಡಿಕೊಂಡಿದ್ದ, ಇಡೀ ಪ್ರತಾಪಗಡ ಜಿಲ್ಲ್ಲೆಯನ್ನೇ ಭಯದ ಕೂಪಕ್ಕೆ ತಳ್ಳಿದ್ದ ರಾಜಾಬೈಯನನ್ನು ಕೆಣಕುವ ಸಹಾಸಕ್ಕೆ ಹಿಂದಿನ ಯಾವ ಮುಖ್ಯಮಂತ್ರಿಗಳು ಕೈ ಹಾಕಿರಲಿಲ್ಲ. ಅದರೆ ಅವನನ್ನು ಪೋಟಾ ಕಾಯ್ದೆಯಡಿಯಲ್ಲಿ ಬಂಧಿಸಿದ ಮಾಯಾವತಿಯವರು ಅವನ 11,000 ಎಕರೆ ಭೂಮಿಯನ್ನು ವಶಕ್ಕೆ ತೆಗೆದುಕೊಂಡರು. ಅಲ್ಲದೆ ಆತ ಸ್ವತಃ ನಿರ್ಮಿಸಿಕೊಂಡಿದ್ದ ಬೃಹತ್ ಸರೋವರ ಮಾದರಿಯ ಉದ್ಯಾನವನವನ್ನು ವಶಪಡಿಸಿಕೊಂಡು ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಪಕ್ಷಿಧಾಮ ಎಂದು ಹೆಸರಿಟ್ಟರು! ಈ ಘಟನೆಯ ಮೂಲಕ ಉಕ್ಕಿನ ಮಹಿಳೆ ಇಡೀ ಜಗತ್ತಿಗೆ ತನ್ನ ನೈಜ ಉಗ್ರ ರೂಪ ತೋರಿದ್ದರು.
ದೌರ್ಜನ್ಯಕೋರರಿಗೆ ತನ್ನ ರಾಜ್ಯದಲ್ಲಿ ಯಾವ ರೀತಿ ಮರ್ಯಾದೆ ಸಿಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಇಡೀ ದೇಶಕ್ಕೆ ಸಾರಿದ್ದರು. ಅಂದಹಾಗೆ ಒಬ್ಬ ರಾಜಬೈಯನನ್ನು ಹೀಗೆ ಮಟ್ಟ ಹಾಕಿದ ಮೇಲೆ ಅದೆಷ್ಟು ಶೋಷಕ ಪುಡಿ ರಾಜಬೈಯಗಳ ತೊಡೆ ನಡುಗಿರಬೇಡ? ಮಾಯಾವತಿಯವರನ್ನು ಎನ್ನುವುದು ಈ ಕಾರಣಕ್ಕೇ!
 
formulasocial engineering   formula ನಡುವೆ ತಾಜ್ ಕಾರಿಡಾರ್ ಹಗರಣದ ಕಾರಣದಿಂದಾಗಿ ಅಧಿಕಾರ ಕಳೆದುಕೊಂಡರೂ ಮಾಯಾವತಿ ಒದಗಿ ಬಂದ ಕಷ್ಟಗಳಿಗೆ ಎದೆಗುಂದಲಿಲ್ಲ. ಇಂತಹ ಕಷ್ಟಕಾಲದಲ್ಲಿಯೇ ತಮ್ಮ ಪ್ರೀತಿಯ ಗುರು ಮಾರ್ಗದಾತ, ಬಾಬಾಸಾಹೇಬ್ ಅಂಬೇಡ್ಕರ್ ರವರ ನಂತರ ಶೋಷಿತರ ಅಶಾಕಿರಣವಾಗಿ ಮೂಡಿಬಂದಿದ್ದ ದಾದಾಸಾಹೇಬ್ ಕಾನ್ಷಿರಾಂರ ಕಳೆದುಕೊಂಡ ಮಾಯವತಿ ಒಂದರ್ಥದಲ್ಲಿ ಅನಾಥರಾದರು. ಆದರೆ ಮಾಯಾವತಿ ಆ ಅನಾಥ ಮನಸ್ಥಿತಿಯಲ್ಲಿ ಹೆಚ್ಚು ದಿನ ಇರುವ ಹಾಗಿರಲಿಲ್ಲ. ಏಕೆಂದರೆ ಕಾನ್ಷಿರಾಂ ಅವರ ಮೇಲೆ ಹೊರಿಸಿದ್ದ ಜವಾಬ್ದಾರಿ ಅಂತಹದ್ದಾಗಿತ್ತು. ಪದೇ ಪದೇ ಅಲ್ಪಮತ ಪಡೆದು ಬಿಜೆಪಿ ಬೆಂಬಲದಿಂದ ಅಧಿಕಾರ ನಡೆಸುತ್ತಿದ್ದರ ಬಗ್ಗೆ ರೋಸಿ ಹೋಗಿದ್ದ ಅವರು ಪೂರ್ಣ ಬಹುಮತ ಪಡೆಯುವುದು ಹೇಗೆ ಎನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಅದಕ್ಕಾಗಿ ತಮ್ಮ ಬಹುಕಾಲದ ಬಹುಜನ ಸಮಾಜ ಸಿದ್ಧಾಂತವನ್ನು ಬದಲಿಸಿ ಸರ್ವಜನ ಸಮಾಜ ಸಿದ್ದಾಂತವನ್ನು ಚಾಲನೆಗೆ ತಂದರು.
ಈ ಸಂದರ್ಭದಲ್ಲಿ ಅವರ ಜೊತೆಯಾದರವರೆಂದರೆ ನಿವೃತ್ತ ನ್ಯಾಯಾಧೀಶರೋರ್ವರ ಮಗನಾದ ಬ್ರಾಹ್ಮಣ ಸಮಾಜಕ್ಕೆ ಸೇರಿದ ಸತೀಶ್ ಚಂದ್ರ ಮಿಶ್ರ. ಯಾವ ಎರಡು ಧ್ರುವಗಳು ಸಮಾಜದಲ್ಲಿ ಪರಸ್ಪರ ವಿರುದ್ದ ದಿಕ್ಕಿನಲ್ಲಿವೆಯೋ ಅಂತಹ ಎರಡು ಧ್ರುವಗಳನ್ನು ಅಂದರೆ ದಲಿತರು ಮತ್ತು ಬ್ರಾಹ್ಮಣರನ್ನು ರಾಜಕೀಯವಾಗಿ ಒಂದು ಗೂಡಿಸುವ, ಆ ಮೂಲಕ ಬಹುಮತ ಪಡೆಯುವ ವಿಚಿತ್ರ ವನ್ನು ಪ್ರಯೋಗಿಸಿತು ಮಾಯಾ-ಮಿಶ್ರ ಜೋಡಿ. ಇದಕ್ಕೆ ಅವರು ಕರೆದಿದ್ದು ಎಂದು! ಆಶ್ಚರ್ಯ! ಮಾಯಾವತಿ ಮತ್ತು ಸತೀಶ್ ಚಂದ್ರ ಮಿಶ್ರರ ಈ ಫಲನೀಡಿತ್ತು.
social engineering ದಲಿತ, ಬ್ರಾಹ್ಮಣರ ಜೊತೆ ನಸೀಮುದ್ದೀನ್ ಸಿದ್ದೀಕಿಯವರ ನೇತೃತ್ವದಲ್ಲಿ ಮುಸ್ಲಿಂ ಜನರ ಬೆಂಬಲ ಪಡೆದ ಮಾಯಾವತಿಯವರು 2007ರ ಮೇ ತಿಂಗಳಿನಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಪಡೆದು ಪೂರ್ಣ ಬಹುಮತ ಪಡೆದರು! ಕಾನ್ಷೀರಾಂ ಎಂಬ ಸಾಮಾಜಿಕ ವಿಜ್ಞಾನಿಯ ಶಿಷ್ಯೆ ನಡೆಸಿದ ಈ ನ ಪ್ರಯೋಗ ಅದ್ಭುತ ಫಲನೀಡಿತ್ತು. 206 ಸದಸ್ಯರ ಸರಳ ಬಹುಮತದೊಂದಿಗೆ ಮಾಯಾವತಿ ಯವರು ನಾಲ್ಕನೇ ಬಾರಿಗೆ ಉತತಿರ ಪ್ರದೇಶದ ಮುಖ್ಯಮಂತ್ರಿಯಾದರು. ಒಂದಂತೂ ನಿಜ. ಯಾವ ರಾಜಕೀಯ ಅಧಿಕಾರಕ್ಕಾಗಿ ಶೋಷಿತರು ಅನ್ಯ ಪಕ್ಷಗಳ ಬಾಗಿಲಲ್ಲಿ ನಿಂತು ಗುಲಾಮಗಿರಿ ಮಾಡು ತ್ತಾರೋ, ಹಲ್ಲುಗಿಂಜಿ ನೆಲಕೆರೆಯುತ್ತಾರೋ ಅಂತಹ ಸ್ವಾಭೀಮಾನ ರಹಿತ ದಲಿತ ರಾಜಕಾರಣಿಗಳಿಗೆ ಮಾಯಾವತಿಯವರು ಅಂಬೇಡ್ಕರ್‌ರವರ ಮಾರ್ಗದಲ್ಲಿ ಸ್ವಾಭಿಮಾನ ಪೂರ್ವಕವಾಗಿ ಅಧಿಕಾರ ಪಡೆಯುವುದು ಹೇಗೆಂದು ತೋರಿಸಿಕೊಟ್ಟರು. ಶೋಷಕ ಸಮುದಾಯಗಳನ್ನು ಮಟ್ಟಹಾಕುವುದು ಹೇಗೆ ಅಥವಾ ಆ ಶೋಷಕ ಸಮುದಾಯಗಳನ್ನು ನಮ್ಮ ದಾರಿಗೆ ತರುವುದು ಹೇಗೆ ಎಂಬುದರ ಬಗ್ಗೆ ಇಡೀ ದಲಿತ ಸಮುದಾಯಕ್ಕೆ ಪಾಠ ಹೇಳಿಕೊಟ್ಟರು.

 intermediate ಇಂದು ಉತ್ತರ ಪ್ರದೇಶದಲ್ಲಿ ಶೇ.10ರಷ್ಟಿರುವ ಬ್ರಾಹ್ಮಣರು ಮಾಯಾವತಿಯವರಲ್ಲಿ ರಕ್ಷಣೆ ಪಡೆದಿದ್ದಾರೆ. ಅವರ ಬೆಂಬಲಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಅಂತಹದ್ದೇ ಘಟನೆ ದೇಶಾದ್ಯಂತ ನಡೆದರೆ? ಬ್ರಾಹ್ಮಣರೇ ದಲಿತರ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಸಂದೇಶ ಇಡೀ ದೇಶಕ್ಕೆ ಸಾರಲ್ಪಟ್ಟರೆ? ಖಂಡಿತ ಅಲ್ಲಿ ಸಡಿಲವಾಗುವುದು ಜಾತಿ ವ್ಯವಸ್ಥೆ. ಜಾತಿ ವ್ಯವಸ್ಥೆಯ ಸೃಷ್ಟಿಕರ್ತರು ಮತ್ತು ಜಾತಿ ವ್ಯವಸ್ಥೆಯ ಬಲಿ ಪಶುಗಳು ಒಂದಾಗಿದ್ದಾರೆ ಇನ್ನು ನಮಗೇನು ಕೆಲಸ ಎಂದು ಬ್ರಾಹ್ಮಣ ಮತ್ತು ದಲಿತರ ಮಧ್ಯೆ ಬರುವ ಇತರ ಜಾತಿಗಳಿಗೆ ಖಂಡಿತ ಅನಿಸೇ ಅನಿಸುತ್ತದೆಯಲ್ಲವೆ? ಹಾಗಾದಾಗ ಇಡೀ ದೇಶದಲ್ಲಿ ಜಾತೀಯತೆ ಮುಕ್ತ ಸಮಸಮಾಜ ನಿರ್ಮಾಣ ಖಂಡಿತ ಆಗುತ್ತದೆ.
ಕಡೆಯದಾಗಿ ಹೇಳುವುದಾದರೆ ಅಂಬೇಡ್ಕರರು ಜಾತಿ ನಿರ್ಮೂಲನೆ ಎಂಬ ಕೃತಿ ಬರೆದು ಅದನ್ನು ನಿರ್ಮೂಲನೆ ಮಾಡುವುದು ಹೇಗೆಂದು ಕನಸು ಕಂಡರು. ಕಾನ್ಷೀರಾಂರವರು ಅಂಬೇಡ್ಕರ್ ರವರ ಅ ಕೃತಿಯನ್ನು ಓದಿ ಬಹುಜನ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಚಿಂತಿಸಿದರು. ಅಂಬೇಡ್ಕರ್ ಮತ್ತು ಕಾನ್ಷೀರಾಂರವರ ಚೇತನವನ್ನು ತಮ್ಮ ಹೃದಯದಲ್ಲಿ ಮನಸ್ಸಿನಲ್ಲಿ ತುಂಬಿಕೊಂಡಿರುವ ಮಾಯವತಿಯವರು ಜಾತಿ ನಿರ್ಮೂಲನೆಯ ಈ ನಿಟ್ಟಿನಲ್ಲಿ ಸರ್ವಜನ ಸಮಾಜ, ಆ ಮೂಲಕ ಸಮಸಮಾಜ ನಿರ್ಮಾಣದತ್ತ ಹೊರಟಿದ್ದಾರೆ. ಅಕಸ್ಮಾತ್ ಮಾಯಾವತಿಯವರು ತಮ್ಮ ಈ ಪ್ರಯತ್ನದಲ್ಲಿ ಯಶಸ್ವಿಯಾದರೆ? ಖಂಡಿತ ಈ ದೇಶದಲ್ಲಿ ಅತ್ಯಂತ ಅದ್ಭುತವಾದ ವ್ಯವಸ್ಥೆಯೊಂದು ನಿರ್ಮಾಣವಾಗುತ್ತದೆ. ಅಂತಹ ಅದ್ಭುತ ವ್ಯವಸ್ಥೆಯಲ್ಲಿ ಸಮಬಾಳು, ಸಮಪಾಲು ಎಂಬ ಸಿದ್ದಾಂತ ರಾರಾಜಿಸುತ್ತಿರುತ್ತದೆ. ಅಂಬೇಡ್ಕರರ ಜಾತಿ ನಿರ್ಮೂಲನೆಯ ಕನಸು ನನಸಾಗಿರುತ್ತದೆ.
 ಜಾತಿ ನಿರ್ಮೂಲನೆಯ, ಸಮಸಮಾಜ ನಿರ್ಮಾಣದ ಈ ದಿಶೆಯಲ್ಲಿ ಮಾಯಾವತಿಯವರ ಈ ನಡೆ ನಿಜಕ್ಕೂ ಅಪ್ಯಾಯಮಾನವಾದುದಲ್ಲವೆ? ಬನ್ನಿ ಈ ನಿಟ್ಟಿನಲ್ಲಿ ಮಾಯಾವತಿಯವರನ್ನು ಬೆಂಬಲಿಸೋಣ. ಅವರ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ. ಅವರಿಗೆ ಶುಭಾಶಯ ತಿಳಿಸೋಣ.
Wish you happy birthday ಬೆಹನ್ ಜೀ ....
By: H B Raghothma, Chamarajanagar

html