Pages

Showing posts with label Jati Guru. Show all posts
Showing posts with label Jati Guru. Show all posts

Monday, 25 April 2011

ಮಠಾಧೀಶರ ಮಾತು ಅತಿಯಾಯಿತು!!

ಮಂಗಳವಾರ - ಏಪ್ರಿಲ್ -26-2011

ಇತ್ತೀಚೆಗೆ ಸುತ್ತೂರಿನಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧಿವೇಶನದಲ್ಲಿ ಕೆಲವು ಮಠಾಧಿಪತಿಗಳು ರಾಜ್ಯ ಸರಕಾರದ ಪರವಾಗಿ ವಕ್ತಾರರಂತೆ ನಿಂತು ಮುಖ್ಯಮಂತ್ರಿಯವರ ಪರವಾಗಿ ವೀರಾವೇಶದ ಮಾತುಗಳನ್ನಾಡಿದ್ದು, ಬಸವಣ್ಣನವರ ತತ್ವವನ್ನು ಒಪ್ಪುವಂತಹ ಯಾವುದೇ ಒಬ್ಬ ನಾಗರಿಕನಿಗೂ ಇದು ಸರಿ ಎನಿಸುವುದಿಲ್ಲ. ಬಸವಣ್ಣನವರ ವಿಚಾರ ಧಾರೆಯಲ್ಲಿ ನಂಬಿಕೆ ಇಟ್ಟು ವೀರಶೈವ ಧರ್ಮವು ನಡೆಯುತ್ತಿದೆ ಎಂದು ಭಾವಿಸಿರುವ ಅನೇಕರಿಗೆ ಇಲ್ಲಿನ ನಡವಳಿಕೆಗಳು ನಿರಾಶೆಯನ್ನುಂಟು ಮಾಡಿದೆ.

ಬಸವಣ್ಣನವರು ಒಬ್ಬ ಮಂತ್ರಿಯಾಗಿ ಹಣಕಾಸಿನ ನಿರ್ವಹಣೆಯನ್ನು ಅತ್ಯಂತ ಶಿಸ್ತಿನಿಂದ ನಿರ್ವಹಿಸಿ, ಪ್ರಾಮಾಣಿಕ ರಾಗಿ ತಮ್ಮ ತಮ್ಮ ನಿಲುವು ಮತ್ತು ವಿಚಾರ ಧಾರೆಗಳಿಗಾಗಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸುವ ಪ್ರಸಂಗಗಳು ಬಂದರೂ ಎಂದೂ ರಾಜಿಯಾಗದೇ, ರಾಷ್ಟ್ರದ ಜನತೆಯ ದೃಷ್ಟಿಯಲ್ಲಿ ನಿಜವಾದ ವಿಶ್ವಮಾನವರಾದರು. ಆದರೆ ಸುತ್ತೂರಿನಲ್ಲಿ ಮಾನ್ಯ ಮುಖ್ಯಮಂತ್ರಿಯವರಿಗೆ ಬಹಿರಂಗವಾಗಿ ಬೆಂಬಲವನ್ನು ನೀಡಿ ಇವರ ತಂಟೆಗೆ ಬಂದರೆ ನಾವು ಬಿಡುವುದಿಲ್ಲ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ. ಇದೇ ರೀತಿ ಅನ್ಯ ಜಾತಿಯ ಜನರೂ ಸಹ ತಮ್ಮ ಜನಾಂಗದ ನಾಯಕರುಗಳ ತಪ್ಪುಗಳನ್ನು ಒಪ್ಪಿಕೊಂಡು ಬೆಂಬಲಕ್ಕೆ ನಿಲ್ಲುವಂತಹ ಸ್ಥಿತಿ ನಿರ್ಮಾಣವಾದರೆ, ಸಮಾಜವನ್ನು ದೇವರೇ ಕಾಪಾಡಬೇಕು.

2ಜಿ ಸ್ಟೆಕ್ಟ್ರಂ ಹಗರಣದಲ್ಲಿ ಭಾಗಿಯಾಗಿರುವ ರಾಜನ ಪರವಾಗಿ ಈ ರಾಷ್ಟ್ರದ ದಲಿತ ಸ್ವಾಮಿಗಳು ಬೆಂಬಲಕ್ಕೆ ನಿಂತರೆ ಅಚ್ಚರಿ ಪಡಬೇಕಿಲ್ಲ. ಅದೇ ರೀತಿಯಲ್ಲಿ ಲಾಲೂ ಪ್ರಸಾದ್ ಯಾದವರ ಪರವಾಗಿ ಹಿಂದುಳಿದ ವರ್ಗದವರ ಮಠಾಧಿಪತಿಗಳು ನಿಂತರೆ ಅಚ್ಚರಿಯಿಲ್ಲ. ಇನ್ನು ಕಾಮನ್‌ವೆಲ್ತ್ ಹಗರಣದ ರೂವಾರಿ ಕಲ್ಮಾಡಿಯ ಪರವಾಗಿ ಒಂದಷ್ಟು ಬ್ರಾಹ್ಮಣ ಮಠಗಳು ಬೆಂಬಲಕ್ಕೆ ನಿಂತರೆ ಅದೂ ಅಚ್ಚರಿಯ ಸಂಗತಿಯಲ್ಲ. ಹೀಗೆ ಆಯಾ ಜಾತಿಯ ಮಠಾಧಿಪತಿಗಳು ಅವರ ಜನಾಂಗದ ರಾಜಕಾರಣಿಗಳ ಪರವಾಗಿ ರಸ್ತೆಗೆ ಇಳಿದರೆ ಸಮಾಜದ ಸ್ಥಿತಿ ಅಯೋಮಯವಾಗುತ್ತದೆ.

ಈ ಹಿಂದೆ ಮಾನ್ಯ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಿದರು. ಆಗ ಯಾವ ಮಠಾಧೀಶರೂ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಅದೇ ರೀತಿಯಲ್ಲಿ ಎಸ್.ಆರ್.ಕಂಠಿಯವರು ಕೆಲವೇ ತಿಂಗಳುಗಳಲ್ಲಿ ಅಧಿಕಾರ ಕಳೆದುಕೊಂಡರು. ಆಗಲೂ ಯಾರೂ ಧ್ವನಿ ತೆಗೆಯಲಿಲ್ಲ. ಎಸ್.ಆರ್.ಬೊಮ್ಮಾಯಿಯವರ ಸರಕಾರ ಕೆಲವೇ ಕೆಲವು ತಿಂಗಳುಗಳಲ್ಲಿ ಪತನವಾ ಯಿತು. ಆದರೂ ಯಾರೂ ಮಾತನಾಡಲಿಲ್ಲ. ಜೆ.ಎಚ್.ಪಟೇಲರಿಗೆ ಅನೇಕ ರಾಜಕೀಯವಾದ ಸಮಸ್ಯೆಗಳು ಎದುರಾದವು. ಆಗಲೂ ಯಾರೂ ಮಾತನಾಡಲಿಲ್ಲ. ಇವೆಲ್ಲವೂ ಹೋಗಲಿ. ಪ್ರಾಮಾಣಿಕತೆಯಿಂದ ಹೋರಾಟ ಮಾಡುತ್ತಿರುವ ಗುಲಬರ್ಗಾದ ಕಾಂತಾರ ಪರವಾಗಿ ಯಾವ ಮಠಾಧಿಪತಿಗಳೂ ನಿಲ್ಲುವುದಿಲ್ಲ. ಇನ್ನು ಏಕಾಂತಯ್ಯನವರ ಹೋರಾಟ ಏಕಾಂಗಿಯಾಗಿದೆ. ಅನೇಕ ಪ್ರಾಮಾಣಿಕರು ವೀರಶೈವ ಜನಾಂಗದಲ್ಲಿದ್ದಾರೆ. ಅವರ ಪರವಾಗಿ ಯಾರೂ ಧ್ವನಿ ತೆಗೆಯುವುದಿಲ್ಲ.

ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದ ಸಂದರ್ಭದಲ್ಲಿ ಈ ರಾಜ್ಯದ ಮುತ್ಸದ್ದಿ ರಾಜಕಾರಣಿ ಎಂ.ಪಿ. ಪ್ರಕಾಶ್‌ರ ಬಗ್ಗೆ ರಾಜ್ಯದ ಸಚಿವ ಸಂಪುಟದ ಸದಸ್ಯರುಗಳು ಅತ್ಯಂತ ಲಘುವಾಗಿ ಮಾತನಾಡಿದರು. ಆಗ ಯಾವ ವೀರಶೈವ ಮಠದವರೂ ಇದನ್ನು ಖಂಡಿಸಲಿಲ್ಲ. ಎಂ.ಪಿ.ಪ್ರಕಾಶ್‌ರಿಗೆ ಸಾಂತ್ವನ ಹೇಳಲಿಲ್ಲ. ಆದರೆ, ಯಡಿಯೂರಪ್ಪನ ವಿಚಾರದಲ್ಲಿ ಮಾತ್ರ ಅದೇನು ಒಗ್ಗಟ್ಟು. ಅದೇನು ಬೆಂಬಲ. ಬಹುಷಃ ಯಡಿಯೂರಪ್ಪನವರು ಮಠ ಮಾನ್ಯಗಳ ಬಗ್ಗೆ ಮತ್ತು ಮಠಾಧೀಶರುಗಳ ಬಗ್ಗೆ ಆರ್ಥಿಕವಾಗಿ ತೋರುತ್ತಿರುವ ವಿಶಾಲ ಮನೋಭಾವ ಇವರನ್ನು ಅವರ ಪರವಾಗಿ ನಿಲ್ಲುವಂತೆ ಮಾಡಿರಬಹುದು. ಇದೇ ಸಮಾವೇಶದಲ್ಲಿ ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋರಾಡಬೇಕೆಂದು ಹೇಳಿಕೆ ನೀಡಿರುವುದು ಬಹಳ ಸಂತೋಷದ ಸಂಗತಿಯಾಗಿದೆ.

ಯಾರ ಭ್ರಷ್ಟಾಚಾರದ ವಿರುದ್ಧ ಎಂದು ಹೇಳದೇ ಕೇವಲ ಭ್ರಷ್ಟಾಚಾರದ ವಿರುದ್ಧ ಎಂದು ಹೇಳಿರುವುದು ಮತ್ತಷ್ಟು ಗೊಂದಲವಾಗಿರುತ್ತದೆ. ಯಾವುದೇ ಜಾತಿ ಮತ್ತು ಧರ್ಮದ ಸಂಸ್ಥೆಗಳು ಇರುವುದು ಪ್ರಾಮಾಣಿಕರನ್ನು ಬೆಂಬಲಿಸಲು ಅಪ್ರಮಾಣಿಕರನ್ನು ಶಿಕ್ಷಿಸಲು ಮಾತ್ರ. ಕೇವಲ ಅಧಿಕಾರದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಒಂದು ವ್ಯಕ್ತಿಯ ಪರವಾಗಿ ಇಡೀ ಜನಾಂಗವೇ ಕೇಂದ್ರೀಕೃತವಾಗುವುದಾದರೆ ಅನ್ಯ ಜನಾಂಗದ ಜನರಿಗೆ ಬೇರೆಯ ಭಾವನೆಗಳು ಮೂಡಿ ಸಮಾಜದ ಸಾಮರಸ್ಯ ಖಂಡಿತವಾಗಿಯೂ ಹಾಳಾಗುತ್ತದೆ.

ಕೆ.ಎಸ್.ನಾಗರಾಜ್, ಬೆಂಗಳೂರು

ಸಂವಿಧಾನದ ಮೇಲೆ ಸ್ವಾಮಿಗಳ ಸವಾರಿ

ಸೋಮವಾರ - ಏಪ್ರಿಲ್ -25-2011

‘ಸಮಾಜದ ಮುಖಂಡರು, ಮಠಾಧೀಶರು, ಸ್ವಾಮಿಗಳ ಮಾರ್ಗದರ್ಶನದಲ್ಲಿ ಆಡಳಿತ ನಡೆಸುತ್ತೇನೆ’ ಹಾಗಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇತ್ತೀಚೆಗೆ ಹೇಳಿದರು. ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ವೀರಶೈವ ಮಹಾಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. ಮಾತನಾಡುವ ಮುನ್ನ ಸಾಲಾಗಿ ಆಸೀನರಾಗಿದ್ದ ಮಠಾಧಿಪತಿಗಳ ಪಾದಕ್ಕೆರಗಿದರು. ತನ್ನ ಜಾತಿ ಪೀಠಗಳ ‘ಜಗದ್ಗುರು’ಗಳ ಮುಂದೆ ತನ್ನ ಸಿಂಹಾಸನಕ್ಕೆ ಎದುರಾಗಿರುವ ಕೆಲಸಗಳನ್ನು ಬದಿಗೊತ್ತಿ ಈ ಜಾತಿ ಸಮಾವೇಶದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳೆರಡರಲ್ಲೂ ಅವರು ಪಾಲ್ಗೊಂಡು ಪುನೀತರಾದರು.

ತಮ್ಮ ಪಾದಕ್ಕೆರಗಿ ಕಣ್ಣೀರು ಹಾಕಿದ ತಮ್ಮ ಜಾತಿಯ ಮುಖ್ಯಮಂತ್ರಿಯ ದಯನೀಯ ಸ್ಥಿತಿ ಕಂಡು ಕರಗಿದ ವೀರಶೈವ ಮಠಾಧಿಪತಿಗಳು ಭಕ್ತನ ತಲೆ ಸವರಿ ‘ಹೆದರಬೇಡಿ ಯಡಿ ಯೂರಪ್ಪನವರೇ ನಿಮ್ಮ ಜೊತೆಗೆ ನಾವಿದ್ದೇವೆ. ಎಷ್ಟೇ ಆರೋಪ ಬಂದರೂ ಯಾರಿಗೂ ಹೆದರದೆ ಆಡಳಿತ ನಡೆಸಿ’ ಎಂದು ಧೈರ್ಯ ತುಂಬಿದರು. ಜಗದ್ಗುರುಗಳ ಆಭಯ ಹಸ್ತದಿಂದ ರೋಮಾಂಚಿತರಾದ ಮುಖ್ಯಮಂತ್ರಿ ಮತ್ತು ಮಂತ್ರಿ ಸೋಮಣ್ಣ ಸ್ವಾಮಿಗಳ ಆಶೀರ್ವಾದ ಇರುವವರೆಗೆ ನಮಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಭಕ್ತಿಪೂರ್ವಕ ವಾಗಿ ಹೂಂಕರಿಸಿದರು.

ವೀರಶೈವ ವೇದಿಕೆಯಲ್ಲಿ ನಡೆದ ಈ ಅವಿವೇಕತನವನ್ನು ಯಾರೂ- ಬಸವನ ಗೌಡ ಪಾಟೀಲ ಯತ್ನಾಳ ರನ್ನು ಹೊರತುಪಡಿಸಿ-ಯಾರೂ ಪ್ರತಿಭಟಿಸಲಿಲ್ಲ. ಯತ್ನಾಳ ಗೌಡರು ಮಾತ್ರ ‘‘ವೀರಶೈವ ಮಹಾಸಭೆ ಬಿಜೆಪಿಯ ವೇದಿಕೆಯಾಗಬಾರದು. ಮುಖ್ಯಮಂತ್ರಿಯ ಭ್ರಷ್ಟಾಚಾರವನ್ನು ನೀವು ಸಮರ್ಥಿಸಿಕೊಂಡರೆ ಈ ಸಂಘಟನೆಗೆ ಪರ್ಯಾಯವಾಗಿ ಇನ್ನೊಂದು ಸಂಘಟನೆ ಕಟ್ಟಬೇಕಾದಿತೆಂದು ಎಚ್ಚರಿಕೆ ನೀಡಿದರು. ಆದರೆ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಯತ್ನಾಳರ ಮಾತನ್ನು ಕೇಳಿದರೆ ಪ್ರಯೋಜನವೇನು? ಕೈಯೆತ್ತಿ ಆಶೀರ್ವಾದ ಮಾಡಿದರೆ ತಮ್ಮ ಕೈಯನ್ನೇ ಕಲ್ಪವೃಕ್ಷವನ್ನಾಗಿ ಮಾಡುವ ನಾಡಿನ ದೊರೆಯೆ ಪಾದುಕೆಗಳ ಅಡಿಯಲ್ಲಿ ಕುಳಿತಿರುವಾಗ ಯಾರು ತಾನೆ ಇಲ್ಲದ ರಿಸ್ಕು ತೆಗೆದುಕೊಳ್ಳುತ್ತಾರೆ.

ತಾನು ಕರ್ನಾಟಕದ 6 ಕೋಟಿ ಜನರನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಎಂಬಂತೆ ಯಡಿಯೂರಪ್ಪನವರು ಎಂದೂ ನಡೆದು ಕೊಂಡಿಲ್ಲ. ಜನತೆಯಿಂದ ಚುನಾಯಿತರಾಗಿರುವ ತಾನು ಜನತೆಗೆ ರಾಷ್ಟ್ರದ ಸಂವಿಧಾನಕ್ಕೆ ನಿಷ್ಠರಾಗಿರಬೇಕೆಂದು ಅವರಿಗೆಂದೂ ಅನಿಸಿಲ್ಲ. ರಾಜ್ಯಾಂಗಕ್ಕೆ ನಿಷ್ಠೆಯಿಂದಿರುವುದಾಗಿ ಪ್ರಮಾಣ ವಚನ ಸ್ವೀಕರಿಸಿ ನಿತ್ಯವೂ ಅದನ್ನು ಉಲ್ಲಂಘಿಸುತ್ತಿರುವುದು ಪ್ರಮಾದ ಎಂದು ಅವರೆಂದೂ ಭಾವಿಸುವುದಿಲ್ಲ.

ಮುಖ್ಯಮಂತ್ರಿಗೆ ವಿವೇಕವಿಲ್ಲವೆಂದಾದರೆ ಮಠಾಧೀಶರಿಗಾದರೂ ಅದು ಇರಬೇಡವೇ? ಸಮಾಜ ತಪ್ಪು ಮಾಡಿದಾಗ ಸರಿಯಾದ ದಾರಿ ತೋರಿಸಲೆಂದೇ ಸ್ವಾಮಿಗಳಿರುತ್ತಾರೆಂಬುದು ಪ್ರತೀತಿ. ‘ಪಾಪಿಯ ಹಣವನ್ನು ಮುಟ್ಟಬಾರದು’ ಎಂದು ಈ ಕಾವಿಧಾರಿಗಳು ಆಗಾಗ ಉಪದೇಶ ಮಾಡುತ್ತಿರುತ್ತಾರೆ. ‘ಕಳಬೇಡ, ಕೊಲಬೇಡ ಹೊಲಸು ನುಡಿಯಲು ಬೇಡ ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎಂದು ಬಸವಣ್ಣನವರ ವಚನವನ್ನು ಇವರು ಉಲ್ಲೇಖಿಸುತ್ತಿರುತ್ತಾರೆ. ಆದರೆ ಯಡಿಯೂರಪ್ಪ ತಮಗೆ ಧಾರಾಳವಾಗಿ ನೀಡುತ್ತಿರುವ ಹಣ ಎಲ್ಲಿಯದು? ನಾಡಿನ 6 ಕೋಟಿ ಜನರ ಬೆವರು ಶ್ರಮದಿಂದ ಬೊಕ್ಕಸಕ್ಕೆ ಬಂದ ಹಣವನ್ನು ಈ ರೀತಿ ತಾವು ತೆಗೆದು ಕೊಳ್ಳುವುದು ತಪ್ಪಲ್ಲವೇ? ತಮ್ಮ ಮುಂದೆ ಮಂಡಿಯೂರಿ ಕುಳಿತುಕೊಳ್ಳುವ ಮುಖ್ಯಮಂತ್ರಿಯ ಮೇಲೆ ಎಷ್ಟೆಲ್ಲ ಭ್ರಷ್ಟಾಚಾರದ ಆರೋಪಗಳು ಬಂದಿವೆ.

ಅನೇಕ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಲೋಕಾಯುಕ್ತರೇ ಬಾಯಿಬಿಟ್ಟು ಹೇಳಿದ್ದಾರೆ. ಆದರೂ ಮಠಾಧೀಶರು ಇದ್ಯಾವುದಕ್ಕೂ ಕಿವಿಗೊಟ್ಟಿಲ್ಲ. ಗಂಟೆ, ಜಾಗಟೆಗಳ ನಿನಾದಗಳಲ್ಲಿ, ಕಾಂಚಾಣದ ಝಣಝಣದಲ್ಲಿ ಬಹುಶಃ ಅವರ ಕಿವಿಕಿವುಡಾಗಿರಬಹುದು. ಇದು ಬಸವಣ್ಣ ಮರುಜೀವ ನೀಡಿದ ಲಿಂಗಾಯತ ಧರ್ಮದ ಇಂದಿನ ದುಸ್ಥಿತಿಯ ಸಂಕೇತವಾಗಿದೆ.
ತಾವು ಮಾಡುತ್ತಿರುವುದು ತಪ್ಪೆಂದು ಮುಖ್ಯಮಂತ್ರಿಗೂ ಗೊತ್ತಿದೆ. ಮಠಾಧೀಶರಿಗೂ ಗೊತ್ತಿದೆ. ಕರ್ನಾಟಕವನ್ನಾಳಿದ ಮುಖ್ಯಮಂತ್ರಿ ಗಳಲ್ಲಿ ಹಲವು ಲಿಂಗಾಯತರು ಆಗಿ ಹೋಗಿದ್ದಾರೆ.

ನಿಜಲಿಂಗಪ್ಪ, ಕತ್ತಿ, ವೀರೇಂದ್ರ ಪಾಟೀಲ, ಬೊಮ್ಮಾಯಿ, ಜೆ.ಎಚ್.ಪಟೇಲ್, ಕಂಠಿ ಇವರ್ಯಾರೂ ಯಡಿಯೂರಪ್ಪನವರಂತೆ ಸಂವಿಧಾನವನ್ನು ಧಿಕ್ಕರಿಸಿ ನಡೆಯಲಿಲ್ಲ. ಯಾವುದೇ ಮಠಾಧೀಶರ ಮುಂದೆ ಮಂಡಿಯೂರಿ ಕುಳಿತುಕೊಳ್ಳಲಿಲ್ಲ. ಇವರು ಮಠಗಳಿಗೆ ಹೋಗುತ್ತಿರಲಿಲ್ಲವೆಂದಲ್ಲ. ಹೋಗು ತ್ತಿದ್ದರು. ಹೋಗಿದ್ದರೂ ಸ್ವಜಾತಿ ಮಠಾಧೀಶರ ದುಂಬಾಲು ಬಿದ್ದು ಕರೆದುಕೊಂಡು ಹೋಗುತ್ತಿದ್ದರು. ಆದರೆ ಹಾಗೆ ಹೋದ ಕಡೆಗೆಲ್ಲ ಸರಕಾರದ ಬೊಕ್ಕಸದ ಹಣವನ್ನು ಮಠಗಳಿಗೆ ಧಾರಾಳವಾಗಿ ನೀಡುತ್ತಿರಲಿಲ್ಲ.

ಇದಕ್ಕೆ ಕಾರಣ ಯಾವುದೇ ಜಾತಿ, ಧರ್ಮ, ಮಠ, ಮಠಾಧೀಶರಿಗಿಂತ ಸಂವಿಧಾನವೇ ಶ್ರೇಷ್ಠ. ತಮ್ಮ ನಿಷ್ಠೆ ಅದಕ್ಕಿರಬೇಕು ಎಂಬ ಅರಿವನ್ನು ಹಿಂದಿನ ಮುಖ್ಯಮಂತ್ರಿಗಳು ಕಳೆದುಕೊಂಡಿ ರಲಿಲ್ಲ. ಅಂದಿನ ಮಠಾಧೀಶರು ಇಂದಿನವರಂತೆ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳನ್ನು ಮಾಡಿ ಕ್ಯಾಪಿಟೇಶನ್ ವಸೂಲಿಗೆ ನಿಂತಿರಲಿಲ್ಲ.ಜನತೆಯ ಬೊಕ್ಕಸದ ಹಣವನ್ನು ಈ ರೀತಿ ನಮಗೆ ಕೊಡಬೇಡಿ, ಅದು ಒಂದು ಜಾತಿ- ಧರ್ಮದವರಿಂದ ಬಂದ ಹಣವಲ್ಲ.

ಎಲ್ಲ ಸಮುದಾಯಗಳಿಗೆ ಸೇರಿರುವ ದುಡ್ಡು ಎಂದು ಯಾವ ಮಠಾಧೀಶರೂ-ಪಂಚಮಸಾಲಿ ಸ್ವಾಮಿಗಳನ್ನು ಹೊರತುಪಡಿಸಿ ಹೇಳಲಿಲ್ಲ. ಹಾಗಂತ ಈ ಮಠಗಳಿಗೆ ದುಡ್ಡಿನ ಕೊರತೆ ಇಲ್ಲ. ಸ್ವಂತ ತಾಂತ್ರಿಕ, ವೈದ್ಯಕೀಯ ಕಾಲೇಜುಗಳನ್ನು ಇವರು ನಡೆಸುತ್ತಾರೆ. ಕೋಟಿ ಕೋಟಿ ಹಣ ಬರುತ್ತದೆ. ಭಕ್ತರಿಂದಲೂ ಅನೇಕ ಸ್ವಾಮಿಗಳು ಬಡ್ಡಿ, ಲೇವಾದೇವಿ ದಂಧೆ ಮಾಡುತ್ತಾರೆ. ಅನೇಕ ಸ್ವಾಮಿಗಳು ಸ್ವಂತ ಹೆಲಿಕಾಪ್ಟರ್‌ಗಳನ್ನು, ವಿದೇಶಿ ಕಾರುಗಳನ್ನು ಇಟ್ಟುಕೊಂಡಿದ್ದಾರೆ. ಹೇಗೆ ಸಜೀವ-ನಿರ್ಜಿವ ವಸ್ತುಗಳನ್ನೆಲ್ಲ ಇಟ್ಟುಕೊಂಡಿ ದ್ದಾರೆ. ಹಾಗಿದ್ದರೂ ಈ ಪರಿ ದುರಾಸೆ ಏಕೆ?

ಯಡಿಯೂರಪ್ಪನವರು ತಿನ್ನಬಾರದ್ದನ್ನು ತಿಂದು ಅಜೀರ್ಣ ಮಾಡಿಕೊಂಡಿದ್ದಾರೆ. ಅವರ ಪಕ್ಷದಲ್ಲೇ ಅವರಿಗೆ ಔಷಧಿ ಕೊಡುವುದಕ್ಕೆ ಒಂದು ಗುಂಪು ಸಿದ್ಧವಾಗಿದೆ. ಈ ಹಂತದಲ್ಲಿ ತನ್ನ ಕುರ್ಚಿ ಉಳಿಸಿಕೊಳ್ಳಲು ಜಾತಿ ಬೆಂಬಲ ಅವರಿಗೆ ಬೇಕಾಗಿದೆ. ಮಠಗಳಿಗೆ ಬೊಕ್ಕಸದ ಹಣ ನೀಡಿ ಆ ಬೆಂಬಲವನ್ನು ಖರೀದಿಸಲು ಅವರು ಮುಂದಾಗಿದ್ದಾರೆ.ಹಾಗೆಂದು ಲಿಂಗಾಯತರ ಮೇಲೆ ಇವರಿಗೆ ನಿಜವಾದ ಕಾಳಜಿ ಇದೆಯೆಂದಲ್ಲ. ಇಲ್ಲಿಯೂ ಜಾತಿಯೊಂದಿಗೆ ವರ್ಗ ಥಳಕು ಹಾಕಿಕೊಂಡಿದೆ. ಮಠಾಧೀಶರು, ಸಿರಿವಂತ ಲಿಂಗಾಯತರನ್ನು ಮಾತ್ರ ಯಡಿಯೂರಪ್ಪ ಓಲೈಸುತ್ತಾರೆ. ಆದರೆ ಬಡ ಲಿಂಗಾಯತರ ಸ್ಥಿತಿ ಏನಾಗಿದೆ? ಹಾವೇರಿ ಗೋಲಿಬಾರ್‌ನಲ್ಲಿ ಸತ್ತ ರೈತರು ಲಿಂಗಾಯತರಲ್ಲವೇ?

ಕೊಪ್ಪಳದಲ್ಲಿ ಪೊಲೀಸರ ಲಾಠಿ ಏಟು ತಿಂದ ರೈತರು ವೀರಶೈವರಲ್ಲವೇ? ಬೆಳೆ ವಿಫಲವಾಗಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿ ಕೊಂಡ ರೈತರಲ್ಲಿ ಹೆಚ್ಚಿನವರು ಲಿಂಗಾಯತ ರಲ್ಲವೇ? ಇವರ ಬಗ್ಗೆ ಮುಖ್ಯಮಂತ್ರಿ ಗಾಗಲಿ, ಮಠಾಧೀಶರಿಗಾಗಲಿ ಯಾಕೆ ಕಾಳಜಿ ಇಲ್ಲ. ಇವರ ಕಣ್ಣಿಗೆ ಬರೀ ಖೇಣಿ ಮತ್ತು ಪ್ರಭಾಕರ ಕೋರೆ ಮಾತ್ರ ಲಿಂಗಾಯತರಾಗಿ ಏಕೆ ಕಾಣುತ್ತಾರೆ?

ಈ ಪ್ರಶ್ನೆಗಳಲ್ಲಿ ಉತ್ತರ ಕಂಡುಕೊಳ್ಳ ಬೇಕಾದವರು ಮುಖ್ಯಮಂತ್ರಿಯಾಗಲಿ, ಮಠಾಧೀಶರಾಗಲಿ ಅಲ್ಲ. ಜನತೆ ಉತ್ತರ ಕಂಡುಕೊಂಡು ಇವರಿಗೆ ಯಾವ ಪಾಠ ಕಲಿಸಬೇಕೆಂಬ ಬಗ್ಗೆ ಯೋಚಿಸಬೇಕಾಗಿದೆ.ಪ್ರಜಾಪ್ರಭುತ್ವದಲ್ಲಿ ಯಾವುದೇ ಜಾತಿ, ಮತ, ಮಠಾಧೀಶರಿಗಿಂತ ಸಂವಿಧಾನವೇ ಶ್ರೇಷ್ಠವಾದುದು. ಪ್ರಧಾನ ಮಂತ್ರಿಯಾಗಿ ರಲಿ, ಮುಖ್ಯಮಂತ್ರಿಯಾಗಿರಲಿ ಸಂವಿಧಾನದ ಮಾರ್ಗದರ್ಶನದಲ್ಲಿ ಅದರ ಬೆಳಕಿನಲ್ಲಿ ಕಾರ್ಯನಿರ್ವಹಿಸಬೇಕು. ಸಂವಿಧಾನಾತ್ಮಕ ಅಧಿಕಾರ ಸ್ಥಾನದಲ್ಲಿರುವ ವ್ಯಕ್ತಿ ತಾನು ತನ್ನ ಜಾತಿಯ ಮಠಾಧೀಶರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುವುದಾಗಿ ಹೇಳಿದರೆ ಆತ ಆ ಸ್ಥಾನದಲ್ಲಿರಲು ನಾಲಾಯಕ್, ಇಂಥ ನಾಲಾಯಕ್ ವ್ಯಕ್ತಿ ಅಧಿಕಾರದಲ್ಲಿ ಮುಂದುವರಿದರೆ ಅವರಿಂದ ಸಂವಿಧಾನಕ್ಕೆ ಚ್ಯುತಿ ತಂದಂತಾಗುತ್ತದೆ.


ಮುಖ್ಯಮಂತ್ರಿಯಾದವನು ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಬೇಕೇ ಹೊರತು ಯಾವುದೇ ಮಠದ ಸ್ವಾಮಿಯ ಪಾದ ಬುಡದಲ್ಲಿ ಕುಳಿತು ಅಲ್ಲ. ಇದು ಸಂವಿಧಾನಕ್ಕೆ ಎಸಗುವ ಘೋರ ಅಪರಾಧವಾಗಿದೆ.ಯಡಿಯೂರಪ್ಪನವರಿಗೆ ಮಠಪೀಠಗಳ ಮೇಲೆ ಅಷ್ಟೊಂದು ಭಕ್ತಿ ಇದ್ದರೆ ತನ್ನ ಸ್ವಂತದ ದುಡ್ಡಿನಿಂದ ಧಾರಾಳವಾಗಿ ಹಣ ನೀಡಲಿ. ಶಿವಮೊಗ್ಗ, ಬೆಂಗಳೂರು, ಕಲಬುರ್ಗಿ, ದಿಲ್ಲಿ, ಚೆನ್ನೈಗಳಲ್ಲಿ ಕಬಳಿಸಿದ ಆಸ್ತಿ ಮಾರಿ ದೇಣಿಗೆ ನೀಡಲಿ. ಅದಕ್ಕೆ ಯಾರ ಅಭ್ಯಂತರವೂ ಇಲ್ಲ.ಜನ ಕಲ್ಯಾಣ ಯೋಜನೆಗಳ ಜಾರಿಗಾಗಿ ಸರಕಾರದ ಬಳಿ ಹಣವಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ ವರ್ಗದ ಹಾಸ್ಟೆಲ್‌ಗಳು ಮುಚ್ಚಿಹೋಗು ತ್ತಿವೆ. ರೈತನನ್ನು ಸಾಲದ ಸುಳಿಯಿಂದ ಪಾರು ಮಾಡಲು ಹಣವಿಲ್ಲ.

ಆದರೆ ಹೋದಲ್ಲಿ ಬಂದಲ್ಲಿ ಕೋಟಿ ಕೋಟಿ ಅನುದಾನ ಘೋಷಿಸಲು ಹಣವಿದೆ. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ರಾಘವೇಂದ್ರನನ್ನು ಮಠಾಧೀಶರು ವೇದಿಕೆ ಮೇಲೆ ಕೂರಿಸಿ ‘ನೀವೆ ಇಂದ್ರ-ಚಂದ್ರ’ ಎಂದು ಹೊಗಳುತ್ತಾರೆ. ಇದಕ್ಕಿಂತ ನಿರ್ಲಜ್ಜತನ ಇನ್ನೊಂದಿಲ್ಲ.

- ಸನತ್‌ ಕುಮಾರ್‌ ಬೆಳಗಲಿ

Varthabharthi

html