- ‘ಒಂದು ಮಗುವನ್ನು ಕೊಂಡು ಹೋಗಿ ಸಾಕಲಿ
- ಮನುವಾದಿಗಳ ದೀಕ್ಷೆ ಬೇಕಾಗಿಲ್ಲ’
ಮಂಗಳೂರು, ಎ.11: ಹಳೆಯಂಗಡಿಯ ಎಬಿನೈಝರ್, ಬಿಜೈ ಆನೆಗುಂಡಿಯ ಆಶ್ರಯ, ಉಳ್ಳಾಲ ಸೋಮೇಶ್ವರದ ಸ್ಟೆಲ್ಲಾ ಮೇರಿಸ್ ಆಶ್ರಮಗಳ ಮೇಲೆ ಇತ್ತೀಚೆಗೆ ಸಂಘ ಪರಿವಾರದ ಅಧೀನ ಸಂಸ್ಥೆಯಾದ ಬಜರಂಗ ದಳದ ಕಾರ್ಯಕರ್ತರು ನಡೆಸಿದ ದಾಳಿಯನ್ನು ಖಂಡಿಸಿ ಜಾತ್ಯತೀತ ನಿಲುವಿನ 37 ಸಂಘಟನೆಗಳು ಸೋಮವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಇದಕ್ಕೆ ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಎಸ್‌ಡಿಪಿಐ ಪಕ್ಷಗಳು ಕೂಡ ಸಾಥ್ ನೀಡಿದ್ದವು. ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಕ್ರೈಸ್ತ ಸಮಾಜದ ಬಾಂಧವರು ಹಾಗೂ ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ‘ಸಿಡಬ್ಲುಸಿಗೆ ಧಿಕ್ಕಾರ, ಸಮಿತಿಯಿಂದಲೇ ಮಕ್ಕಳ ಕಾಯ್ದೆಯ ಉಲ್ಲಂಘನೆ, ಧರ್ಮದ ಹೆಸರಿನಲ್ಲಿ ನಡೆಯುವ ಗೂಂಡಾಗಿರಿಗೆ ಧಿಕ್ಕಾರ, ಕಾನೂನು ಕೈಗೆತ್ತಿಕೊಂಡು ರಾಜಕೀಯ ಮಾಡುವ ದುಷ್ಟರಿಗೆ ಧಿಕ್ಕಾರ,ಅನಾಥ ಮಕ್ಕಳ ಅನ್ನ ಕೀಳುವ ಧೂರ್ತರಿಗೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಮೊಳಗಿಸಿದರು. ಪ್ರತಿಭಟನೆ ಯುದ್ದಕ್ಕೂ ಪೊಲೀಸ್ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕ್ರೈಸ್ತ ಆಶ್ರಮಗಳ ಮೇಲೆ ದಾಳಿ ನಡೆಸುವ ಬಜರಂಗದಳದಂತಹ ಮತೀಯ ಸಂಘಟನೆ ಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು, ಇವರಿಗೆ ಕುಮ್ಮಕ್ಕು ನೀಡುವ ಸಿಡಬ್ಲುಸಿ ಅಧ್ಯಕ್ಷೆ ಆಶಾ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶಕುಂತಳಾ, ಶ್ಯಾಮಲಾರ ಮೇಲೆಯೂ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನ ಕಾರರು ದ.ಕ.ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಒಂದು ಮಗುವನ್ನು ಕೊಂಡು ಹೋಗಿ ಸಾಕಲಿ: ಸಮಾಜದ ದೀನ, ದುರ್ಬಲ ಮಕ್ಕಳ ಪೋಷಣೆಯಲ್ಲಿ ತೊಡಗಿಸಿಕೊಂಡಿರುವ ಕ್ರೈಸ್ತ ಆಶ್ರಮಗಳಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ದಾಳಿ ನಡೆಸುವ ಮತೀಯ ಸಂಘಟನೆಗಳು ನಾಗರಿಕ ಸಮಾಜದಲ್ಲಿ ಕ್ರೈಸ್ತ ಸಮುದಾಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ನಡೆಸುತ್ತಿದ್ದಾರೆ. ಇವರ ಒತ್ತಡಕ್ಕೆ ಮಣಿದು ‘ಆಶ್ರಯ’ ಹೆಸರಿನ ಆಶ್ರಮ ನಡೆಸುವ ಸಾಮಾಜಿಕ ಕಾರ್ಯಕರ್ತ ಲ್ಯಾನ್ಸಿ ಲಾಟ್ ಪಿಂಟೋರ ಮೇಲೆ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ. ಸ್ಟೆಲ್ಲಾ ಮೇರಿಸ್ ಸಂಸ್ಥೆಯ 41 ಬಡ ಹೆಣ್ಮಕ್ಕಳನ್ನು ಈ ಮತಾಂಧರು ಬೆದರಿಸಿ ಮಾನಸಿಕ ಹಿಂಸೆ ನೀಡಿದ್ದಾರೆ. ಸಮಾಜ ಸೇವೆ ಮಾಡದ ಮತ್ತು ಮಾಡಲು ಬಿಡದ ಬಜರಂಗಿಗಳು ತಾಕತ್ತಿದ್ದರೆ, ಇಂಥ ಒಂದು ಅನಾಥ, ಬಡ ಮಗುವನ್ನು ಕೊಂಡು ಹೋಗಿ ಸಾಕಲಿ’ ಎಂದು ವಿನ್ಸೆಂಟ್ ಆಳ್ವ ಸವಾಲು ಹಾಕಿದರು. 1938ರಲ್ಲಿ ಸ್ಥಾಪನೆಗೊಂಡಿರುವ ಸ್ಟೆಲ್ಲಾ ಮೇರಿಸ್ ಸಂಸ್ಥೆ ಮತಾಂತರ ಮಾಡುತ್ತಿದ್ದರೆ, ಇಂದು ಮಂಗಳೂರು ಸಂಪೂರ್ಣ ಕ್ರೈಸ್ತಮಯವಾಗುತ್ತಿತ್ತು. ಮಂಗಳೂರಿನಲ್ಲಿ ಅನೇಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿವೆ. ಅಲ್ಲಿ ಕಲಿತ ಮಕ್ಕಳು ಮತಾಂತರ ನಡೆದಿದೆ ಅಥವಾ ನಡೆಯುತ್ತಿದೆ ಎಂದು ಬಹಿರಂಗಪಡಿಸಿದರೆ ನಾವು ಇಂದಿ ನಿಂದಲೇ ಪ್ರತಿಭಟನೆ, ಹೋರಾಟವನ್ನು ಕೈ ಬಿಡುತ್ತೇವೆ ಎಂದು ಹೇಳಿದ ಆಳ್ವ, ಬಜರಂಗ ದಳದವರು ಮತಾಂತರ, ಮತಾಂತರ ಎಂದು ಬೊಬ್ಬಿರಿಯುವುದು ಎಷ್ಟು ಸರಿ? ಇವರಿಗೆ ಕಾನೂನನ್ನು ಕೈಗೆತ್ತಿಕೊಳ್ಳಲು ಅಧಿಕಾರ ಕೊಟ್ಟವ ರಾರು? ಎಂದು ಪ್ರಶ್ನಿಸಿದರು. ದೀಕ್ಷೆ ಬೇಕಿಲ್ಲ: ದಲಿತ ಮಕ್ಕಳಿಗೆ ಶಿಕ್ಷಣ, ಆಹಾರ ನೀಡುವಲ್ಲಿ ಕ್ರೈಸ್ತ ಸಂಸ್ಥೆಗಳ ಪಾತ್ರ ಅಪಾರ. ಅದನ್ನು ಕಂಡು ತನ್ನ ತಪ್ಪನ್ನು ತಿದ್ದಿಕೊಳ್ಳದ ಇಲ್ಲಿನ ಮನುವಾದಿಗಳು ನಮಗೆ ದೀಕ್ಷೆ ನೀಡಲು ಮುಂದಾಗಿದ್ದಾರೆ. ನಮಗೆ ನಿಮ್ಮ ದೀಕ್ಷೆ ಬೇಕಾಗಿಲ್ಲ. ವಿದ್ಯೆ ಕೊಡಿ ಎಂದು ದಲಿತ ಸಂಘಟನೆಯ ಮುಖಂಡ ಕೃಷ್ಣಾನಂದ ಡಿ. ಆಗ್ರಹಿಸಿದರು.ಜಾತ್ಯತೀತ ಸಮಾಜ ಹೆದರದು: ಕ್ರೈಸ್ತ ಸಮಾಜದ ಮೇಲಾಗುವ ದಬ್ಬಾಳಿಕೆಯನ್ನು ಕಂಡೂ ಕಾಣದಂತೆ ಇಲ್ಲಿನ ಪೊಲೀಸರು ವರ್ತಿಸುತ್ತಿದ್ದಾರೆ. ಪೊಲೀಸರು ವೌನ ವಹಿಸಿರು ವುದರಿಂದ ಬಜರಂಗ ದಳ ಮತ್ತಿತರ ಮತೀಯ ಸಂಘಟನೆಗಳು ಇಂದು ಸಾಕಷ್ಟು ಬೆಳೆದಿದೆ. ಆದರೆ, ಇದಕ್ಕೆ ಜಾತ್ಯತೀತ ಸಮಾಜ ಯಾವತ್ತೂ ಹೆದರದು ಎಂದು ಮುಸ್ಲಿಂ ವರ್ತಕರ ಸಂಘದ ಮುಖಂಡ ಅಲಿ ಹಸನ್ ಹೇಳಿದರು. ಶಾಸಕರಾದ ರಮಾನಾಥ ರೈ, ಅಭಯಚಂದ್ರ ಜೈನ್, ಯು.ಟಿ. ಖಾದರ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಾಜಿ ಶಾಸಕಿ ಅಕ್ಟೋವಿಯಾ ಆಲ್ಬುಕರ್ಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಬಿ. ಸದಾಶಿವ, ಕ್ರೈಸ್ತ ಧರ್ಮಗುರುಗಳಾದ ಫಾ.ಮಿಲಿಯಂ ಮಿನೆಜಸ್, ಡೆನ್ನಿಸ್ ಮೊರಾಸ್ ಪ್ರಭು, ವಿವಿಧ ಸಂಘಟನೆ ಮತ್ತು ಪಕ್ಷಗಳ ಮುಖಂಡರಾದ ಯಾದವ ಶೆಟ್ಟಿ, ಮೊದಿನ್ ಬಾವಾ, ಅರುಣ್ ಕುವೆಲ್ಲೋ, ಬಾಝಿಲ್ ಡಿಸೋಜ, ಪಿ.ಬಿ.ಡೇಸಾ, ಸುರೇಶ್ ಭಟ್ ಬಾಕ್ರಬೈಲ್, ನವೀನ್ ಡಿಸೋಜ, ಸುರೇಶ್ ಶೆಟ್ಟಿ, ದಿನೇಶ್ ಹೆಗ್ಡೆ ಉಳೆಪಾಡಿ, ವಾಲ್ಟರ್ ಮಾಬೆನ್, ಜೆ.ಎಸ್.ನೊರೊನ್ಹ, ಮೆಲ್ವಿಲ್ ಪಿಂಟೋ, ಐಡಿಯಲ್ ಅಶ್ರಫ್, ದಯಾನಂದ ಶೆಟ್ಟಿ, ವಾಲ್ಟರ್ ಸಿರಿಲ್ ಪಿಂಟೋ, ಅಗಾತ ಮೇರಿ, ಸಂತೋಷ್ ಡಿಕಸ್ತ, ಜಾನ್ ಡಿಸೋಜ, ಅಬ್ದುಲ್ ನಾಸಿರ್ ಸಜಿಪ ಮತ್ತಿತರರಿದ್ದರು. ಕ್ರೈಸ್ತ ಮುಖಂಡ ಡೆನ್ನಿಸ್ ಡಿಸಿಲ್ವ ಸ್ವಾಗತಿಸಿ ದರು. ಪಿಎಫ್‌ಐ ಮುಖಂಡ ಮುಹಮ್ಮದ್ ಶರೀಫ್ ಬಜ್ಪೆ ವಂದಿಸಿದರು. ವಿಕ್ಟರ್ ಮಥಾಯಿಸ್ ಕಾರ್ಯಕ್ರಮ ನಿರೂಪಿಸಿದರು
Varthabharathi...