Pages

Sunday, 10 April 2011

ಅಂಬೇಡ್ಕರ್

ನಾಡನಡುವಿನಿಂದ ಸಿಡಿದ
ನೋವಿನ ಕೂಗೆ
ಆಕಾಶದ ಅಗಲಕ್ಕೂ
ನಿಂತ ಆಲವೆ

ಕೋಟಿ ಕೋಟಿ ಕಪ್ಪು ಜನರ
ಮೊಟ್ಟ ಮೊದಲ ಮಾತೆ
ನೀರಿನಾಚೆ ಮೋಡದಾಚೆ
ಮೊಳಗಿದಂಥ ಘೋಷವೆ

ಬಾಳಿನಲ್ಲೆ ಕಂಡುಕೊಂಡೆ
ಹೋರಾಟದ ದಾರಿಯ
ಕರೆದು ಕರೆದು ತೋರಿಸಿದೆ
ಮಹಾಮನೆಯ ಬಿರುಕನು

ಜಾತಿಯನ್ನು ಹೂತುಬಿಡಲು
ಲಕ್ಷ ಲಕ್ಷ ಜನರನು
ಕಟ್ಟಿ ಕ್ರಿಯಾರಂಗಕಿಳಿದ
ಸ್ವಾಭಿಮಾನ ಸಮುದ್ರ

ಮಹರಾಷ್ಟ್ರದ ಮಣ್ಣಿನಲ್ಲಿ
ಮೂಡಿಬಂದ ಗುಡುಗುಸಿಡಿಲೆ
ಮಳೆಯನೇಕೆ ತಾರಲಿಲ್ಲ
ಮಿಂಚು ಮಾಯೆ ಅಷ್ಟೆಯ?

-
ಕವಿ - ಡಾ. ಸಿದ್ಧಲಿಂಗಯ್ಯ

No comments:

Post a Comment

html