Pages

Sunday, 10 April 2011

ಅಂಬೇಡ್ಕರ್ ಸಂವಿಧಾನ / ಭಾರತದ ಸಂವಿಧಾನ! (ಭಾಗ-3)


ಶುಕ್ರವಾರ - ಫೆಬ್ರವರಿ -11-2011

ಭಾರತದ ಬಹುಧರ್ಮೀಯ ಮತ್ತು ಬಹು ಸಮುದಾಯವುಳ್ಳ ಸಮಾಜದಲ್ಲಿ ಒಂದು ಕ್ಷೇತ್ರದಲ್ಲಿ ಇತರರಿಗಿಂತ ಹೆಚ್ಚು ಓಟು ಪಡೆಯು ವವರು ಮಾತ್ರ ಗೆಲ್ಲುವ ಚುನಾವಣೆ ವ್ಯವಸ್ಥೆ ಅಲ್ಪಸಂಖ್ಯಾತರಿಗೆ ಅನ್ಯಾಯವನ್ನೇ ಮಾಡುತ್ತದೆ ಮತ್ತು ಬಹುಸಂಖ್ಯಾತರ ಮತ್ತು ಪ್ರಬಲರ ರಾಜ್ಯಭಾರವನ್ನೇ ಮುಂದುವರಿಸುತ್ತಿದೆ ಎಂಬುದು ಅಂಬೇಡ್ಕರ್‌ರ ಸ್ಪಷ್ಟ ಅಭಿ ಪ್ರಾಯವಾಗಿತ್ತು. ಹೀಗಾಗಿ ಬಹುಸಂಖ್ಯಾತರ ಸೀಟುಗಳು ಶೇ.40ರಷ್ಟನ್ನು ದಾಟದಂತೆ ಶಾಸನ ವಾಗಬೇಕೆಂಬುದೂ ಅವರ ಆಗ್ರಹವಾಗಿತ್ತು. ಅಲ್ಪಸಂಖ್ಯಾತರಿಗೆ ಅದರಲ್ಲೂ ಅತಿ ಅಲ್ಪ ಸಂಖ್ಯಾತರಿಗೆ ಅವರ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಿನ ಸೀಟುಗಳು ದೊರಕುವುದನ್ನು ಶಾಸನಬದ್ಧಗೊಳಿಸದಿದ್ದರೆ ಈ ದೇಶದಲ್ಲಿ ಅಲ್ಪ ಸಂಖ್ಯಾತರ ಮೇಲೆ ಬಹುಸಂಖ್ಯಾತರ ಶೋಷಣೆ ಅವ್ಯಾಹತವಾಗಿ ಮುಂದುವರಿಯುತ್ತದೆ ಎಂಬುದೂ ಅವರ ನಿಲುವಾಗಿತ್ತು.
ಅದೇ ರೀತಿ ಚುನಾವಣಾ ಪದ್ಧತಿಯಲ್ಲಿ ಈಗಿನ ಒಂದು ಕ್ಷೇತ್ರದಲ್ಲಿ ಇತರರಿಗಿಂತ ಹೆಚ್ಚು ಮತ ಪಡೆಯುವವರು ಗೆಲ್ಲುವ First-Past-The-Post (FPTP) ಪದ್ಧತಿಗೆ ಬದಲಾಗಿ ಒಟ್ಟು ಪಡೆದ ಓಟುಗಳಾಧಾರದ ಸೀಟು ಪದ್ಧತಿ (proportionate election system) ಹೆಚ್ಚು ಸೂಕ್ತವೆಂಬುದೂ ಅಂಬೇಡ್ಕರ್‌ರ ನಿಲುವಾಗಿತ್ತು. ಹಾಗೆಯೇ Single Transferable Vote (STV) ಪದ್ಧತಿಯ ಪ್ರಕಾರ ಮತದಾರರು ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಆದ್ಯತೆಯ ಪ್ರಕಾರ ರ್ಯಾಂಕ್ ನೀಡುವ ಮತ್ತು ನಿರ್ದಿಷ್ಟ ಮೊತ್ತದಷ್ಟು ರ್ಯಾಂಕಿಂಗನ್ನು ಪಡೆದವರು ಮಾತ್ರ ಗೆದ್ದವರೆಂದು ಘೋಷಿಸುವ ಪದ್ಧತಿ ಯನ್ನೂ ಹಾಗೆಯೇ ದಲಿತರಿಗೆ ತಮ್ಮಾಳಗೆ ದಲಿತರೊಬ್ಬರನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿ ಕೊಳ್ಳುವ ಮತ್ತು ಸವರ್ಣೀಯರಲ್ಲೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳ್ಳುವ ದ್ವಿ ಮತದಾನದ ಹಕ್ಕೂ ದೊರಕಬೇಕೆಂಬ ಈ ದೇಶದ ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ವನ್ನು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ವಾಗಿಸುವ ಪ್ರಸ್ತಾಪಗಳು ಅಂಬೇಡ್ಕರ್ ಕಂಡ ಕನಸಿನ ಸಂವಿಧಾನದಲ್ಲಿತ್ತು. ಆದರೆ 1950ರ ಜನವರಿ 26ರಂದು ಈ ದೇಶಕ್ಕೆ ನೀಡಲಾದ ಸಂವಿಧಾನ ಈ ಆಶಯ ಗಳಿಗೆ ಮೂಲಭೂತವಾಗಿಯೇ ದ್ರೋಹ ಬಗೆದಿರಲಿಲ್ಲವೇ? 1950ರ ಸಂವಿಧಾನದಲ್ಲಿ ಅಂಬೇಡ್ಕರ್ ಎಲ್ಲಿದ್ದಾರೆ?
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಗಳು ಎಲ್ಲಾ ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ದಲ್ಲಿದ್ದಂತೆ ನಮ್ಮ ದೇಶದಲ್ಲಿ ಸಂವಿಧಾನದಲ್ಲೂ ಘೋಷಿತವಾಗಿದೆ.
ಆದರೆ ರಾಜಕೀಯ ಸಮಾನತೆ ಅರ್ಥಾತ್ ಒಬ್ಬರಿಗೆ ಒಂದು ಓಟು ಎಂಬ ರಾಜಕೀಯ ಹಕ್ಕು ಮೂಲ ಭೂತ ಹಕ್ಕಾಯಿತೇ ವಿನಃ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಹಕ್ಕುಗಳು ಮೂಲ ಭೂತ ಹಕ್ಕುಗಳ ಪರಿಧಿಯನ್ನು ಸೇರಲೇ ಇಲ್ಲ. ನಮ್ಮ ಸಂವಿಧಾನದ ಅನುಚ್ಛೇದ 39 (ಬಿ) ‘‘ಈ ದೇಶದ ಭೌತಿಕ ಸಂಪನ್ಮೂಲಗಳು ಎಲ್ಲಾ ಸಾರ್ವಜನಿಕರ ಹಿತವನ್ನು ಕಾಯುವಂತೆ ಹಂಚಿಕೆಯಾಗಬೇಕು’’ಎಂದೂ ಅನುಚ್ಛೇದ 39 (ಸಿ) ‘‘ಪ್ರಭುತ್ವದ ಆರ್ಥಿಕ ನೀತಿಗಳು, ಸಂಪ ನ್ಮೂಲಗಳು ಒಂದು ಕಡೆ ಕೇಂದ್ರೀಕೃತವಾಗದಂತೆ ನೋಡಿಕೊಳ್ಳಬೇಕು’’ ಎಂದೂ ಅನುಚ್ಛೇದ41 ‘‘ಪ್ರಭುತ್ವವು ಎಲ್ಲರಿಗೂ ದುಡಿ ಯುವ ಮತ್ತು ಶಿಕ್ಷಣದ ಹಕ್ಕನ್ನು ಮತ್ತು ದುರ್ಬಲರಿಗೆ, ವೃದ್ಧರಿಗೆ ಸರಕಾರದಿಂದ ಸಹಾಯ ದೊರೆಯುವಂತೆ ಯೂ’’ ನೋಡಿ ಕೊಳ್ಳಬೇಕೆಂದೂ, (ಆದರೆ ಸರಕಾರದ ಆರ್ಥಿಕ ಸಾಮರ್ಥ್ಯಕ್ಕೆ ಒಳಪಟ್ಟು ಎಂಬ ಶರತ್ತೂ ಸೇರಿಸಲ್ಪಟ್ಟಿದೆ!), ಅನುಚ್ಛೇದ 43 ‘‘ಎಲ್ಲ ದುಡಿಯುವ ವರ್ಗಗಳಿಗೂ ಜೀವಿ ಸಲು ಸಾಧ್ಯವಾಗುವಷ್ಟು ವೇತನವನ್ನು ಒದಗಿಸು ವಂತೆ ನೋಡಿಕೊಳ್ಳುವ’’, ‘‘ಗಂಡಸು ಮತ್ತು ಹೆಂಗಸರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಒದಗಿಸುವ’’, ಅನುಚ್ಛೇದ 46 ‘‘ದಲಿತ ವರ್ಗ ಗಳ ಶೈಕ್ಷಣಿಕ ಮತ್ತು ಆರ್ಥಿಕ ಪುರೋಭಿವೃದ್ಧಿ ಯನ್ನು ಖಾತರಿಪಡಿಸುವ’’ ನೀತಿಗಳನ್ನು ಮಾಡ ಬೇಕೆಂದೂ ಪ್ರಭುತ್ವಕ್ಕೆ ಸಂವಿಧಾನ ಮಾರ್ಗ ದರ್ಶನ ಮಾಡುತ್ತದೆ.
ಆದರೆ ಈ ಎಲ್ಲಾ ಮಾರ್ಗದರ್ಶನಗಳು ಕೇವಲ ಮಾರ್ಗದರ್ಶನಗಳಷ್ಟೆ.. ಏಕೆಂದರೆ ಈ ಎಲ್ಲಾ ಪುರೋಗಾಮೀ ನೀತಿಗಳು ಸರಕಾರಕ್ಕೆ ತನ್ನ ನೀತಿಗಳನ್ನು ರೂಪಿಸುವಾಗ ಗಮನಿಸ ಬೇಕಾದ ಅಂಶಗಳೇ ವಿನಃ ಅದಕ್ಕೆ ಶಾಸನಾತ್ಮಕ ನಿರ್ದೇಶನವಿಲ್ಲವೆಂದೂ ಅದನ್ನು ಯಾವುದೇ ನ್ಯಾಯಾಲಯಗಳು ಊರ್ಜಿತಕ್ಕೆ ತರಬೇ ಕೆಂದೂ ನಿರ್ದೇಶನ ನೀಡುವ ಹಾಗಿಲ್ಲವೆಂದೂ ಈ ಎಲ್ಲಾ ಅನುಚ್ಛೇದಗಳನ್ನು ಪ್ರಸ್ತಾಪ ಮಾಡುವ ಮುಂಚೆಯೇ ಅನುಚ್ಛೇದ 37ರಲಿ" The provisions contained in this Part shall not be enforced by any court, but the principles therein laid down are nevertheless fundamental in the governance of the country and it shall be the duty of the State to apply these principles in making laws'' ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಂಬೇ ಡ್ಕರ್ ಸ್ಪಷ್ಟವಾಗಿ ವಿರೋಧಿಸಿದ್ದು ಈ ಸಾಧ್ಯತೆ ಯನ್ನೇ! ಎಲ್ಲಿಯತನಕ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳು ಮೂಲಭೂತ ಹಕ್ಕಾ ಗದೇ ಅಧಿಕಾರಸ್ಥರ ಮರ್ಜಿಗೆ ಬಿಡಲಾಗುತ್ತ ದೆಯೋ ಅಲ್ಲಿಯ ತನಕ ಈ ದೇಶದಲ್ಲಿ ಒಂದು ಓಟು ಒಂದು ಮೌಲ್ಯವಾಗಲು ಸಾಧ್ಯವೇ ಇಲ್ಲವೆಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು.
ಅದೇ ರೀತಿ ಕೃಷಿ ಭೂಮಿಯ ರಾಷ್ಟ್ರೀಕರಣ ಮತ್ತು ಜಮೀನಿನ ಮೇಲೆ ಜಾತಿ ಭೇದಗಳಿಲ್ಲದ ಸಾಮೂಹಿಕ ಒಡೆತನ ಹಾಗೂ ಸಾಮೂಹಿಕ ದುಡಿಮೆ ಭೂಮಾಲಕ-ಜೀತಗಾರ ಮತ್ತು ಅಸ್ಪೃಶತೆ ಹಾಗೂ ಜಾತೀಯತೆಗಳು ನಿವಾರಣೆ ಯಾಗಲು ಅತ್ಯಗತ್ಯ ಆರ್ಥಿಕ ಕಾರ್ಯಕ್ರಮ ಗಳೆಂಬುದು ಅಂಬೇಡ್ಕರ್‌ರವರ ದೂರಗಾಮೀ ಆಲೋಚನೆಯಾಗಿತ್ತು. ಆದರೆ ನಮ್ಮ ಸಂವಿ ಧಾನವಾಗಲೀ ಮತ್ತು ಸಂಸತ್ತಾಗಲೀ ಅದರ ಬಗ್ಗೆ ಚಕಾರವೆತ್ತಿಲ್ಲ. ಅದೇ ರೀತಿ ಚುನಾವಣಾ ಪದ್ಧತಿ ಗಳಲ್ಲಿ ತರಬೇಕಾದ ಮೂಲಭೂತ ಬದಲಾ ವಣೆಯೂ ಸಹ ಅಂಬೇಡ್ಕರ್ ಯೋಜನೆಯ ಪ್ರಮುಖ ಧಾತುವಾಗಿತ್ತು. ಆದರೆ ಅಂಬೇಡ್ಕರ್ ಹೋರಾಡಿದ ಈ ಯಾವುದೇ ಕ್ರಮಗಳು ಮತ್ತು ಯೋಜನೆಗಳು ಸಂವಿಧಾನದ ಭಾಗವಾಗಲೇ ಇಲ್ಲ.
ಬದಲಿಗೆ ಈ ದೇಶದ ಸಾಮಾಜಿಕ ಅಸಮಾ ನತೆಗೆ ರಾಜಕೀಯ ನೆಲೆಯನ್ನು ಒದಗಿಸಿ ಕೊಡುವ ರಾಜಕೀಯ, ಆರ್ಥಿಕ ಅಸಮಾ ನತೆಯನ್ನು ಶಾಶ್ವತಗೊಳಿಸುವಂತ ಆಸ್ತಿ ಹಕ್ಕು ಮಾಡುತ್ತಲೇ ಇರುವ ಹಕ್ಕುಗಳು, ಮತ್ತು ರಾಜಕೀಯವಾಗಿಯೂ ಬಡವರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರೂ ಎಂದೆಂದಿಗೂ ಬಹುಸಂಖ್ಯಾತರ ಭಯದಲ್ಲೇ ಬದುಕುವಂತೆ ಮಾಡುವ ರಾಜಕೀಯ ಸಂಸ್ಥೆಗಳನ್ನೇ ಈ ಸಂವಿಧಾನ ನೀಡಿದೆ. ‘‘ಅಂಬೆಡ್ಕರ್ ಬರೆದ ಸಂವಿಧಾನ’’ ಎಂದು ಜನರನ್ನು ನಂಬಿಸುವ ಸರಕಾರಗಳು ಅಂಬೇಡ್ಕರ್‌ಗಾಗಿರುವ ಈ ಮೂಲಭೂತ ದ್ರೋಹಗಳನ್ನು ಹೇಳುವುದೇ ಇಲ್ಲ. (ಬಹಳಷ್ಟು ದಲಿತ ನಾಯಕರೂ ಈ ದ್ರೋಹದ ಬಗ್ಗೆ ಚಕಾರವೆತ್ತುವುದೇ ಇಲ್ಲ.
ಬದಲಿಗೆ ಸಂವಿಧಾನದ ಬಗ್ಗೆ ವಿಮರ್ಶೆ ಮಾಡಿದರೆ ಅಂಬೇಡ್ಕರ್ ಬಗ್ಗೆ ಮಾಡಿದ ವಿಮರ್ಶೆಯೆಂಬಂತೆ ಮತ್ತು ಪ್ರಜಾತಂತ್ರದ ಬಗ್ಗೆ ಮಾಡಿದ ವಿಮರ್ಶೆಯೆಂಬಂತೆ ಭಾವಾ ವೇಶದಲ್ಲಿ ಮಾತಾಡುತ್ತಾರೆ. ವಾಸ್ತವ ನೆಲೆ ಗಟ್ಟಿನಲ್ಲಿ ಚಿಂತಿಸದೆ, ಅಂಬೇಡ್ಕರ್ ಚಿಂತನೆ ಯನ್ನೂ ಅರ್ಥಮಾಡಿಕೊಳ್ಳದೆ ಅಂಬೇಡ್ಕರ್ ರನ್ನು ಕೇವಲ ಪ್ರತಿಮೆಯನ್ನಾಗಿ ಮಾಡಿ ಕೊಂಡು ಭಾವಾವೇಶಕ್ಕೆ ಬಲಿಯಾಗಿರು ವುದೂ ಸಹ ಇಂದಿನ ಒಟ್ಟಾರೆ ದುರಂತಕ್ಕೆ ಒಂದು ಪ್ರಮುಖ ಕಾರಣ!)
ಇಂದು ಸಂಪನ್ಮೂಲಗಳ ಅಪಾರ ಪ್ರಮಾ ಣದ ಕೇಂದ್ರೀಕರಣ ನಡೆಯುತ್ತಿದೆ. ಅದರಲ್ಲೂ 1991ರ ನಂತರ ಜಾಗತೀಕರಣ, ಉದಾರೀ ಕರಣ ಮತ್ತು ಖಾಸಗೀಕರಣದ ನೀತಿಗಳು ಜಾರಿಯಾದ ಮೇಲೆ ಒಂದೆಡೆ ಲಕ್ಷ ಕೋಟಿ ಆಸ್ತಿಗೆ ಅಧಿಪತಿಗಳಾಗಿರುವ ಕೆಲವೇ ಬಿಲಿಯ ನಾಧೀಶ್ವರರೂ ಮತ್ತೊಂದೆಡೆ ದಿನಕ್ಕೆ 20ರೂ ಸಹ ಸಂಪಾದಿಸಲಾಗದ ಕೋಟ್ಯಾಂತರ ಜನರು ಸೃಷ್ಟಿಯಾಗುತ್ತಿದ್ದಾರೆ. ಜಾತಿ ರಾಜಕಾರಣವು ಮತ್ತು ಬ್ರಾಹ್ಮಣವಾದಿ ಶಕ್ತಿಗಳ ಸಾಮಾಜಿಕ ಅಧಿಕಾರ ಗಟ್ಟಿಯಾಗುತ್ತಾ ಈ ದೇಶದ ದಲಿತ ಮತ್ತು ಶೋಷಿತ ಜನತೆಯ ಮೇಲಿನ ಶೋಷಣೆ ಹೆಚ್ಚಾಗುತ್ತಿದೆ. ರೈತಾಪಿ ದೇಶದಲ್ಲಿ 2 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
20 ನಿಮಿಷಕ್ಕೊಮ್ಮೆ ದಲಿತರ ಮೇಲೆ ಅತ್ಯಾಚಾರ ಮತ್ತು ಹತ್ತು ನಿಮಿಷಕ್ಕೊಮ್ಮೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೂ ನಡೆಯುತ್ತಿದೆ. ಶೇ. 50ರಷ್ಟು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿದ್ದಾರೆ ಅಥವಾ ಸಾಯುತ್ತಿದ್ದಾರೆ. ಈ ದೇಶದ ಚುನಾವಣಾ ಪದ್ಧತಿಯ ಮೂಲಕವೇ ಅಧಿಕಾರ ಹಿಡಿದಿರುವ ಮಾರುಕಟ್ಟೆ ಶಕ್ತಿಗಳು ಮತ್ತು ಬ್ರಾಹ್ಮಣವಾದಿ ಹಿಂದೂತ್ವವಾದಿಗಳು ಆರ್ಥಿಕ ಅಸಮಾನತೆಯನ್ನು ಮತ್ತು ಸಾಮಾಜಿಕ ಅಸಮಾನತೆಯನ್ನು ಗಟ್ಟಿಗೊಳಿಸುತ್ತಿದ್ದಾರೆ. ಇದು ‘‘ಅತ್ಯುತ್ತಮ ಸಂವಿಧಾನ’’ದ ಅನುಷ್ಠಾನದಿಂದ ಉಂಟಾಗಿರುವ ಸಮಸ್ಯೆ ಇಲ್ಲ. ಸಂವಿಧಾನ ರಚನೆಯಲ್ಲಿ ಮೂಲಭೂತವಾಗಿ ಅಂಬೇಡ್ಕರ್ ಆಶಯಗಳನ್ನು ಹೊರಗಿಟ್ಟು ಉಳ್ಳವರ ಹಿತಾಸಕ್ತಿಗೆ ಅನುಗುಣವಾಗಿ ರಚಿಸಿದ ಸಂವಿಧಾನದಲ್ಲೇ ಇವತ್ತಿನ ಬವಣೆಯ ಮತ್ತು ಬಿಕ್ಕಟ್ಟಿನ ಬೀಜಗಳಿವೆ.
ಅಂಬೇಡ್ಕರ್ ಕನಸಿದ ಸಂವಿಧಾನಕ್ಕೆ ಮತ್ತೊಂದು ಸ್ವಾತಂತ್ರ್ಯ ಹೋರಾಟ!
ಇದನ್ನು ನಾವು ಈಗ ಕಾಣುತ್ತಿರಬಹುದು. ಆದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಂವಿಧಾನಾತ್ಮಕ ಕಾನೂನು ಮಾಡದ, ಮೂಲಭೂತ ಹಕ್ಕನ್ನಾಗಿ ಮಾಡದ ಈ ಸಂವಿಧಾನ ಖಂಡಿತವಾಗಿ ಇದೇ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಅಂಬೇಡ್ಕರ್ 1949ರಲ್ಲೇ ಎಚ್ಚರಿಸಿದ್ದರು. 1949ರ ನವಂಬರ್ 26ರಂದು ಸಂವಿಧಾನ ರಚನಾ ಸಭೆಯ ಅಂತಿಮ ಸಭೆಯಲ್ಲಿ ಭಾಷಣ ಮಾಡುತ್ತಾ ಈ ಅಂಶಗಳನ್ನು ಮತ್ತು ಎಚ್ಚರಿಕೆಯನ್ನು ಭಾರತದ ಜನತೆಗೆ ಮತ್ತು ಹೊಸದಾಗಿ ರೂಪಿತವಾದ ಭಾರತದ ಗಣತಂತ್ರಕ್ಕೆ ನೀಡಿದರು: ‘‘ಕೇವಲ ರಾಜಕೀಯ ಪ್ರಜಾತಂತ್ರದಿಂದ ನಾವು ಸಮಾಧಾನಗೊಳ್ಳಬಾರದು.
ನಾವು ನಮ್ಮ ರಾಜಕೀಯ ಪ್ರಜಾತಂತ್ರವನ್ನು ಸಾಮಾಜಿಕ ಪ್ರಜಾತಂತ್ರವನ್ನಾಗಿ ಮಾಡಬೇಕು. ಸಾಮಾಜಿಕ ಪ್ರಜಾತಂತ್ರವಿಲ್ಲದೆ ರಾಜಕೀಯ ಪ್ರಜಾತಂತ್ರ ಉಳಿಯಲಾರದು....ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳು ಒಟ್ಟು ಒಂದೇ ಮೌಲ್ಯವಾಗಿದ್ದು ಒಂದನ್ನು ಮತ್ತೊಂದರಿಂದ ಬೇರ್ಪಡಿಸುವುದು ಪ್ರಜಾಪ್ರಭುತ್ವದ ಆಶಯವನ್ನೇ ವಿಫಲಗೊಳಿಸುತ್ತದೆ. ಸಮಾನತೆ ಇಲ್ಲದ ಸ್ವಾತಂತ್ರ್ಯ ಹಲವರ ಮೇಲೆ ಕೆಲವರ ಅಧಿಪತ್ಯವನ್ನು ಖಾಯಂಗೊಳಿಸುತ್ತದೆ. ಸ್ವಾತಂತ್ರ್ಯವಿಲ್ಲದ ಸಮಾನತೆ ವ್ಯಕ್ತಿಗಳ ಕಾರ್ಯೋತ್ಸಾಹವನ್ನೇ ಕೊಲ್ಲುತ್ತದೆ.
ಭ್ರಾತೃತ್ವವಿಲ್ಲದೆ ಸಮಾನತೆ ಮತ್ತು ಸ್ವಾತಂತ್ರ್ಯಗಳು ಸಹಜ ವಿದ್ಯಮಾನವಾಗಲು ಸಾಧ್ಯವಿಲ್ಲ...ನಮ್ಮ ಸಮಾಜದಲ್ಲಿ ಎರಡು ಸಂಗತಿಗಳು ಗೈರುಹಾಜರಾಗಿರುವುದನ್ನು ನಾವು ಪರಿಗಣಿಸಬೇಕು. ಅದರಲ್ಲಿ ಮುಖ್ಯವಾದದ್ದು ಸಮಾನತೆಯೆಂಬ ಮೌಲ್ಯವೇ ಗೈರುಹಾಜರಾಗಿರುವುದು. ಸಾಮಾಜಿಕ ಸ್ಥರದಲ್ಲಿ ಕೆಲವರು ಮಾತ್ರ ಮೇಲ್‌ಸ್ಥರದಲ್ಲಿ, ಉಳಿದವರು ನೀಚಾತಿನೀಚಸ್ತರದಲ್ಲಿ ಉಳಿಸುವ ಸಾಮಾಜಿಕ ಅಸಮಾನತೆ. ಅದೇ ರೀತಿ ಆರ್ಥಿಕವಾಗಿ ನಮ್ಮಲ್ಲಿ ಕೆಲವರು ಅಪಾರ ಅಸ್ತಿಯನ್ನು ಸಂಗ್ರಹಿಸಿಕೊಂಡಿದ್ದರೆ ಉಳಿದವರು ಅಸಹನೀಯ ಬಡತನದಲ್ಲಿ ಬದುಕಿದ್ದಾರೆ.
1950ರ ಜನವರಿ 26ರಂದು ನಾವು ವೈರುಧ್ಯಗಳಿಂದ ಕೂಡಿದ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಪಡೆದಿರುತ್ತೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದುವರಿದಿರುತ್ತದೆ. ರಾಜಕೀಯದಲ್ಲಿ ನಾವು ಒಂದು ಒಬ್ಬರಿಗೆ ಒಂದು ಓಟು ಮತ್ತು ಒಂದು ಓಟಿಗೆ ಮೌಲ್ಯವನ್ನು ಪರಿಗಣಿಸಿರುತ್ತೇವೆ. ಆದರೆ ನಮ್ಮ ಸಾಮಾಜಿಕ ಮತು ಆರ್ಥಿಕ ವ್ಯವಸ್ಥೆಯ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಒಬ್ಬ ಮನುಷ್ಯನಿಗೆ ಒಂದು ಮೌಲ್ಯವೆಂಬ ತತ್ವವನ್ನು ನಿರಾಕರಿಸುತ್ತಿರುತ್ತೇವೆ.
ಈ ವೈರುಧ್ಯಗಳಿಂದ ಕೂಡಿದ ಸಾಮಾಜಿಕ ಬದುಕನ್ನು ಎಷ್ಟು ಕಾಲ ಮುಂದುವರಿಸಲು ಸಾಧ್ಯ? ಎಷ್ಟು ಕಾಲ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಮಾನತೆಯನ್ನು ನಿರಾಕರಿಸಲು ಸಾಧ್ಯ? ಇನ್ನೂ ಇದೇ ಬಗೆಯ ನಿರಾಕರಣೆಯನ್ನು ಮುಂದುವರಿಸುತ್ತಾ ಹೋದರೆ ನಮ್ಮ ರಾಜಕೀಯ ಪ್ರಜಾಸತ್ತೆಗೆ ಆಪತ್ತು ಬರುತ್ತದೆ. ನಾವು ಆದಷ್ಟು ಬೇಗ ಈ ವೈರುಧ್ಯಗಳನ್ನು ನಿರ್ಮೂಲನೆ ಮಾಡದಿದ್ದರೆ ಅಸಮಾನತೆಯಿಂದ ನೊಂದ ಜನ ನಾವು ಕಷ್ಯಪಟ್ಟು ಕಟ್ಟಿರುವ ರಾಜಕೀಯ ಪ್ರಜಾಸತ್ತೆಯ ರಚನೆಯನ್ನೇ ಸ್ಫೋಟ ಮಾಡುತ್ತಾರೆ’’
ಇದು ನಿಜವಾದ ಪ್ರಜಾತಂತ್ರವಾದಿಯ ನೋವಿನ ಮಾತೂ ಹೌದು. ದಾರ್ಶನಿಕ ಎಚ್ಚರಿಕೆಯೂ ಹೌದು. ಕಳೆದ 62 ವರ್ಷಗಳ ಸಾಂವಿಧಾನಿಕ ಬದುಕು ಅಂಬೇಡ್ಕರ್ ಹೇಳಿದಂತೆ ಸಾಮಾಜಿಕ ಅಸಮಾನತೆಯನ್ನು ಮತ್ತು ಆರ್ಥಿಕ ಅಸಮಾನತೆಯನ್ನು ಹೆಚ್ಚಿಸುತ್ತಾ ರಾಜಕೀಯ ಅಸಮಾನತೆಯನ್ನು ಮತ್ತು ನಮ್ಮ ರಾಜಕೀಯ ಪ್ರಜಾಸತ್ತೆಯನ್ನು ಅವಹೇಳನ ಮಾಡುತ್ತಿದೆ.
ಬಂಡವಾಳವಾದ ಮತ್ತು ಬ್ರಾಹ್ಮಣವಾದ ಈ ದೆಶದ ಜನರ ಶತ್ರುಗಳು ಎಂದು ಅಂಬೆಡ್ಕರ್ ಸ್ಪಷ್ಟವಾಗಿ ಹೇಳಿದ್ದರು. ಅವರು ಕನಸು ಕಂಡ ಸಂವಿಧಾನ ಈ ಎರಡು ಶತ್ರುಗಳನ್ನು ಸೋಲಿಸಲು ನೈಜ ಯೋಜನೆಗಳನ್ನು ಹೊಂದಿದ್ದವು. ಆದರೆ 1950ರಲ್ಲಿ ದತ್ತವಾದ ಸಂವಿಧಾನ ಪ್ರಧಾನವಾಗಿ ಇದೇ ಶಕ್ತಿಗಳಿಗೆ ಪೂರಕವಾಗಿತ್ತೆಂಬುದನ್ನು ಇಂದು ಸಂವಿಧಾನದ ಹೆಸರಲ್ಲಿ ನಮ್ಮನ್ನು ಆಳುತ್ತಿರುವ ಜಾಗತೀಕರಣ ಮತ್ತು ಹಿಂದೂತ್ವವೆಂಬ ಅವಳಿ ಶತ್ರುಗಳು ರುಜುವಾತು ಮಾಡಿವೆ. ಇಂದು 1950ಕ್ಕಿಂತಲೂ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಈಗ ಅಂಬೇಡ್ಕರ್ ಕನಸು ಕಂಡ ಸಮಾಜವಾದಿ ಸಂವಿಧಾನವನ್ನು ಸಾಕಾರ ಮಾಡಲು ಮತ್ತೊಂದು ನೈಜ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸದೇ ಬೇರೇ ದಾರಿಯೇನಿದೆ?

No comments:

Post a Comment

html