Pages

Wednesday, 18 May 2011

ಬೌದ್ಧ ದೀಕ್ಷೆ

 ದಲಿತ ರಾಜಕಾರಣದಿಂದ ಮೇಲೆ ಬಂದ ಮಾಯಾವತಿಯಂಥ ಮುಖ್ಯಮಂತ್ರಿ 'ಬ್ರಾಹ್ಮಣ ಜೋಡೋ ಆಂದೋಲನ' ನಡೆಸಿದ್ದು ಕಣ್ಣೆದುರಿಗಿದೆ. ಆದರೆ ಬೌದ್ಧದೀಕ್ಷೆ ಮಾತ್ರ ಇನ್ನೂ ಹಿಂದು ಧರ್ಮದ ವಿರುದ್ಧ ಪ್ರತಿಭಟನೆ ನಡೆಸುವ ಪ್ರತೀಕವಾಗಿ ಮಾತ್ರ ಉಳಿದುಕೊಂಡಿದೆ. ಬೌದ್ಧದೀಕ್ಷೆ ಪಡೆಯಲಾಯಿತು ಎಂಬುದಷ್ಟೇ ಸುದ್ದಿ. ದ್ಧ ಪೂರ್ಣಿಮೆ ಮುಗಿದಿದೆ. ಬುದ್ಧನ ಮಾರ್ಗದ ಬಗ್ಗೆ ಯಾವುದೇ ಚರ್ಚೆ ಇಲ್ಲದೆ. ಒಂದೊಮ್ಮೆ ಭಾರತದಲ್ಲಿ ಉಚ್ಚ್ರಾಯ ಸ್ಥಿತಿಗೆ ತಲುಪುವತ್ತ ಸಾಗಿದ್ದ ಧರ್ಮ ಕಾಲಕ್ರಮೇಣ ಅಂಥ ಸಾಧ್ಯತೆಯಿಂದ ದೂರ ಉಳಿಯಿತು. ಹಾಗೆ ನೋಡಿದರೆ ಪ್ರತಿಯೊಬ್ಬರೂ ಬೌದ್ಧರಾಗಬೇಕು. 

ಈ ವಿಷಯದಲ್ಲಿರುವ ಒಂದು ಸೌಂದರ್ಯವೆಂದರೆ ವ್ಯಕ್ತಿಯೊಬ್ಬ ಯಾವ ಧರ್ಮದಲ್ಲಿದ್ದುಕೊಂಡು ಬೇಕಾದರೂ ಬೌದ್ಧನಾಗಬಹುದು. 'ನೀನೂ ಬದುಕು, ಬೇರೆಯವರನ್ನೂ ಬದುಕಲು ಬಿಡು' ಎಂಬ ಆಶಯದ ಬುದ್ಧನ ಅಹಿಂಸಾ ಮಾರ್ಗವನ್ನು ತುಳಿಯುವುದಕ್ಕೆ ಯಾತರ ದರ್ದು, ಯಾವುದರ ನಿಬಂಧನೆ? ಇದೇ ಪತ್ರಿಕೆಯಲ್ಲಿ ಇತ್ತೀಚೆಗೆ ಲಿಂಗಾಯತ ಸಮುದಾಯದ ಪ್ರಸ್ತುತ ಸ್ವರೂಪವನ್ನಿಟ್ಟುಕೊಂಡು ಸಂವಾದ ನಡೆಸಲಾಯಿತು. ಲಿಂಗಾಯತ ಎನ್ನುವುದು ಬಸವ ತತìಗಳ ಆಚೆ ಬಂದು ಕೇವಲ ರಾಜಕೀಯ ಶಕ್ತಿ ಪ್ರದರ್ಶನದ ಪ್ರತೀಕವಾಗುವುದಾದರೆ ಅದಕ್ಕೆ ಪ್ರತ್ಯೇಕ ಧರ್ಮದ ಮೊಹರೇನೂ ಬೇಕಾಗಿಲ್ಲ ಎಂದು ಚರ್ಚೆಯಲ್ಲಿ ಭಾಗವಹಿಸಿದ್ದ ಬಹುತೇಕರು ಅಭಿಪ್ರಾಯ ಪಟ್ಟಿದ್ದರು. ಇದೇ ವ್ಯಾಪ್ತಿಯಲ್ಲಿ ಇಂದು ಬೌದ್ಧ ಧರ್ಮದ ಬಗೆಗೂ ಚರ್ಚೆಯ ಅವಶ್ಯಕತೆ ಇದೆ. ಈಗ ಬೌದ್ಧ ಧರ್ಮವನ್ನು ಅಪ್ಪಿಕೊಳ್ಳಲು ಬಯಸುತ್ತಿರುವವರ ಮನೋಭೂಮಿಕೆಯಲ್ಲಿ ಮಿಳಿತವಾಗಿರುವ ವಿಚಾರಗಳು ಯಾವುವು? ಆ ಯೋಚನೆಗಳಿಂದಾಗಿ ಅವರು ಬೌದ್ಧ ಧರ್ಮವನ್ನು ಒಪ್ಪಿಕೊಂಡ ಮೇಲೂ ಪ್ರತ್ಯೇಕವಾಗಿಯೇ ಉಳಿಯುವ ಚಹರೆಗಳು ಕಾಣುತ್ತಿವೆಯಲ್ಲ? ಇದರಿಂದ ಧರ್ಮಕ್ಕಾಗಲೀ, ಅದರೊಂದಿಗೆ ಗುರುತಿಸಿಕೊಂಡವರಿಗಾಗಲೀ ಆಗುತ್ತಿರುವ ಉದ್ದೇಶ ಸಾಧನೆಯಾದರೂ ಏನು? ಈ ಎಲ್ಲ ಪ್ರಶ್ನೆಗಳನ್ನು ಹರವಿಕೊಂಡು ಒಂದಿಷ್ಟು ಮಂಥನ ನಡೆಯಬೇಕಿದೆ. ಪರ್ಯಾಯವೊಂದನ್ನು ಹುಟ್ಟುಹಾಕಬೇಕಿದ್ದ 'ಬೌದ್ಧ ದೀಕ್ಷೆ' ಕೇವಲ ಸಂಕೇತಕ್ಕಷ್ಟೆ ಸೀಮಿತಗೊಂಡ ಆಚರಣೆಯಾಗಿಬಿಟ್ಟಿದೆಯೇ ಎಂಬುದು ಈ ಕ್ಷಣದ ಕೊರಗು. 

12ನೇ ಶತಮಾನದ ಹೊತ್ತಿಗೆಲ್ಲ ಮುಸುಕಾಗಿಬಿಟ್ಟಿದ್ದ ಬೌದ್ಧ ಧರ್ಮ ಮತ್ತೆ ತನ್ನ ಅಸ್ತಿತ್ವವನ್ನು ಪ್ರಚುರಪಡಿಸಿಕೊಳ್ಳಲು ದಲಿತ ಚಳವಳಿಯ ಪ್ರಭಾವ ಕಾರಣ. ಇವತ್ತಿಗೂ ಬುದ್ಧ ಪೂರ್ಣಿಮೆ ಹಾಗೂ ಅದರ ಆಚೀಚಿನ ದಿನಗಳಲ್ಲಿ ದಲಿತರು ಗುಂಪಾಗಿ ಬೌದ್ಧ ಧರ್ಮಕ್ಕೆ ಮತಾಂತರವಾಗಿ, ಬೌದ್ಧ ದೀಕ್ಷೆ ಪಡೆದುಕೊಳ್ಳುವುದನ್ನು ನೋಡುತ್ತೇವೆ, ಓದುತ್ತೇವೆ. ಆ ಕಾಲಘಟ್ಟದಲ್ಲಿ ಸಮಾಜದ ಆತ್ಮಸಾಕ್ಷಿಯನ್ನು ಕಲಕಲೇಬೇಕಾದ ತುರ್ತು ಅಗತ್ಯವೊಂದಿತ್ತು. ಕಂದಾಚಾರದ ಮನಸ್ಥಿತಿಯಿಂದ ಹೊರಬಾರದೇ ಉಳಿದವರಿಗೆ ಬಿಸಿ ತಾಗಬೇಕಾದರೆ, ದಮನಿತರಿಗೆ ತಮಗಾದ ಅನ್ಯಾಯದ ವಿರುದ್ಧ ಆಕ್ರೋಶ ತೋಡಿಕೊಳ್ಳಲು ಇದ್ದ ಮಾರ್ಗ ಅದೊಂದೆ. ಹಿಂದೂ ಧರ್ಮದ ಮೇಲ್ವರ್ಗ ಉಳಿದವರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಂಡು ಅಸ್ಪ>ೃಶ್ಯತೆ ಜೀವಂತವಾಗಿಟ್ಟಾಗ ತಾನು ಆ ಧರ್ಮಕ್ಕೆ ಸೇರಿದವನು ಎಂದು ದಮನಿತನಾದವನು ಯಾಕಾದರೂ ಹೇಳಿಕೊಳ್ಳುತ್ತಾನೆ?ಹಾಗೆಂದೇ ದಲಿತರು ಬೌದ್ಧ ದೀಕ್ಷೆ ಪಡೆದು, ಹಿಂದೂ ಧರ್ಮದಿಂದ ಬೇರೆಯಾಗಿಯೇ ಗುರುತಿಸಿಕೊಳ್ಳುವ ಅಭಿಯಾನವೊಂದು ಪ್ರತಿಭಟನೆಯ ಸ್ವರೂಪದಲ್ಲಿ ಬೆಳೆದು ಬಂತು.

 1890ರ ವೇಳೆಗೇ ಪಂಡಿತ್‌ ಸಿ. ಅಯೋಧ್ಯ ದಾಸ್‌ ಎಂಬುವವರು ಸಖ್ಯ ಬುದ್ಧಿಷ್ಟ್‌ ಸೊಸೈಟಿ ಸ್ಥಾಪಿಸಿ ದಲಿತರು ಬೌದ್ಧ ಧರ್ಮಕ್ಕೆ ಪರಿವರ್ತಿತರಾಗಬೇಕಾದ ಅವಶ್ಯಕತೆಯನ್ನು ಪ್ರಚುರ ಪಡಿಸಿದರು. ತಮಿಳು ದಲಿತ ಚಳವಳಿಯ ಪ್ರವರ್ತಕರೆಂದೇ ಗುರುತಿಸಲ್ಪಡುವ ಇವರ ಪ್ರಭಾವ ತಮಿಳುನಾಡು ಹಾಗೂ ಕರ್ನಾಟಕಗಳಲ್ಲಿ ಕೆಲಸ ಮಾಡಿತು. ಆದಾಗ್ಯೂ ಈ ಅಭಿಯಾನಕ್ಕೆ ಗಟ್ಟಿ ದನಿ ಬಂದಿದ್ದು, ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ನಿರ್ಧಾರವನ್ನು ಡಾ. ಬಿ. ಆರ್‌. ಅಂಬೇಡ್ಕರ್‌ ಅವರು ಕೈಗೊಂಡಾಗ. ಹಿಂದೂ ಧರ್ಮದಲ್ಲಿ ಜಾತಿ ಆಧಾರಿತ ತಾರತಮ್ಯದಿಂದ ಬೇಸತ್ತಿದ್ದ ಅಂಬೇಡ್ಕರ್‌, 1935ರಲ್ಲಿ ಸಮಾವೇಶವೊಂದರಲ್ಲೇ ಘೋಷಿಸಿದರು- 'ನಾನು ಹಿಂದು ಆಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ'. ಚರಿತ್ರೆಯಲ್ಲಿ ಅದೊಂದು ಮಹತ್ವದ ಕ್ಷಣ. ಧರ್ಮದ ವಿಷಯದಲ್ಲಿ ಅಂದು ಅಂಬೇಡ್ಕರ್‌ ತೆಗೆದುಕೊಳ್ಳಲಿದ್ದ ನಿರ್ಧಾರದಲ್ಲಿ ಭಾರತದ ಭವಿಷ್ಯವೇ ಅಡಗಿತ್ತು ಎಂಬುದು ಖಂಡಿತ ಅತಿಶಯೋಕ್ತಿ ಅಲ್ಲ. ಅವತ್ತು ಅಂಬೇಡ್ಕರ್‌ ಅವರು ತೆಗೆದುಕೊಂಡ ನಿರ್ಧಾರದ ಹಾದಿಯನ್ನು ಅವಲೋಕಿಸಿದರೆ ತಿಳಿಯುತ್ತದೆ- ಅವರಿಗಿದ್ದಿದ್ದು ಕೇವಲ ಹಿಂದು ಧರ್ಮಕ್ಕೆ ಪ್ರತಿಭಟನೆ ವ್ಯಕ್ತಪಡಿಸುವ ಹಪಾಹಪಿ ಮಾತ್ರವೇ ಆಗಿರಲಿಲ್ಲ ಎಂದು. ಏಕೆಂದರೆ ಹಿಂದು ಧರ್ಮದಿಂದ ಸಿಡಿಯುವುದಷ್ಟೇ ಅವರ ಉದ್ದೇಶವಾಗಿದ್ದರೆ ಆ ಕ್ಷಣದಲ್ಲಿ ಯಾವ ಧರ್ಮವನ್ನಾದರೂ ಅವರು ಅಪ್ಪಿಕೊಂಡುಬಿಡಬಹುದಿತ್ತು. ಅಂಬೇಡ್ಕರ್‌ ಅವರ ಮನದಿಂಗಿತ ಹೊರಬೀಳುತ್ತಲೇ ಇಸ್ಲಾಂ ಹಾಗೂ ಕ್ರೈಸ್ತ ಧರ್ಮದ ಪ್ರತಿನಿಧಿಗಳೆಲ್ಲ ಅವರಿಗೆ ಒಂದು ಬಗೆಯ ಆಮಿಷವನ್ನೇ ಒಡ್ಡಿದ್ದರು. 

ಆಗ ಅಂಬೇಡ್ಕರ್‌ ಬರೀ ಆಕ್ರೋಶದ ಹೆಜ್ಜೆ ಇಡಲಿಲ್ಲ. ಧರ್ಮವೊಂದನ್ನು ಸ್ವೀಕರಿಸುವ ತಮ್ಮ ವೈಯಕ್ತಿಕ ನಡೆ ಸಮಾಜದ ಮೇಲೆ ಹಾಗೂ ತಮ್ಮನ್ನು ಅನುಸರಿಸುತ್ತಿರುವ ದಲಿತ ಸಮುದಾಯದ ಮೇಲೆ ಬೀರಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಯೋಚಿಸಿದರು. ದೇಶಕಾಳಜಿಯ ಅಂಬೇಡ್ಕರ್‌ ಅವರ ಚಿಂತನಾ ಕ್ರಮವೇ ಅವರು ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳಿಗೆ ಬೆನ್ನು ತಿರುಗಿಸುವಂತೆ ಮಾಡಿದ್ದು. 

ಇಂದು ನಾಗಾಲ್ಯಾಂಡ್‌ನಂಥ ರಾಜ್ಯದಲ್ಲಿ ಕ್ರಿಸ್ತನ ಹೆಸರಿನಲ್ಲಿ ಪ್ರತ್ಯೇಕ ರಾಜ್ಯ ಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಇಸ್ಲಾಂ ಬೆಳೆದಿದ್ದೇ ಆಕ್ರಮಣಶೀಲತೆಯಿಂದ. ಅಂಬೇಡ್ಕರ್‌ ಅವರಂಥ ಪ್ರಗತಿಪರ ಮನಸ್ಸು ಕಟ್ಟಳೆಗಳಿಂದಲೇ ಕೂಡಿದ ಆ ಧರ್ಮವನ್ನು ಒಪ್ಪಿಕೊಳ್ಳುವುದು ಹೇಗೆ? ಕೊನೆಗೂ ಅಂಬೇಡ್ಕರ್‌ ಆಯ್ಕೆ ಮಾಡಿಕೊಂಡಿದ್ದು, ಈ ನೆಲದ ಗಂಧದಲ್ಲೇ ಅರಳಿದ ಬೌದ್ಧ ಧರ್ಮವನ್ನು. ಹೀಗೆ ಅಳೆದು ತೂಗಿ 1956ರಲ್ಲಿ ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ ನಾಗ್ಪುರದಲ್ಲಿ ಬೌದ್ಧ ದೀಕ್ಷೆ ಸ್ವೀಕರಿಸಿದರು ಅಂಬೇಡ್ಕರ್‌. ನಾನು ಹಿಂದು ದೇವತೆಗಳನ್ನು ಪೂಜಿಸುವುದಿಲ್ಲ, ಬುದ್ಧವು ವಿಷ್ಣುವಿನ ಅವತಾರ ಎಂಬ ಕಲ್ಪನೆಯನ್ನು ಒಪ್ಪುವುದಿಲ್ಲ ಎಂಬ ಹಲ ಅಂಶಗಳ ಜೊತೆಗೆ ಮಾದಕ ವ್ಯಸನ, ಹೆಂಡದಂಥ ಚಟಗಳಿಗೆ ಬೀಳುವುದಿಲ್ಲ ಎಂಬುದೂ ಸೇರಿದಂತೆ 22 ಪ್ರತಿಜ್ಞೆಗಳೊಂದಿಗೆ ಬೌದ್ಧ ದೀಕ್ಷೆ ಸ್ವೀಕಾರವಾಯಿತು. ಅಂದಿನಿಂದ ಇಂದಿನವರೆಗೆ ಮಹಾರಾಷ್ಟ್ರ, ಹೈದರಾಬಾದ್‌, ಕರ್ನಾಟಕದ ಗುಲ್ಬರ್ಗ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಬೌದ್ಧ ದೀಕ್ಷೆಯ ಕ್ರಮ ನಡೆದುಕೊಂಡು ಬಂದಿದೆ. ಆದರೆ... ಅವತ್ತಿನಿಂದ ಇವತ್ತಿಗೆ ಮಹಾನದಿಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. 

ದಲಿತ ಉದ್ಯಮಶೀಲತೆ ಎಂಬ ಪದ ಕಿವಿಗೆ ಬಡಿದಿದೆ, ದಲಿತ ರಾಜಕಾರಣದಿಂದ ಮೇಲೆ ಬಂದ ಮಾಯಾವತಿಯಂಥ ಮುಖ್ಯಮಂತ್ರಿ 'ಬ್ರಾಹ್ಮಣ ಜೋಡೋ ಆಂದೋಲನ' ನಡೆಸಿದ್ದು ಕಣ್ಣೆದುರಿಗಿದೆ. ಆದರೆ ಬೌದ್ಧದೀಕ್ಷೆ ಮಾತ್ರ ಇನ್ನೂ ಹಿಂದು ಧರ್ಮದ ವಿರುದ್ಧ ಪ್ರತಿಭಟನೆ ನಡೆಸುವ ಪ್ರತೀಕವಾಗಿ ಮಾತ್ರ ಉಳಿದುಕೊಂಡಿದೆ. ಬೌದ್ಧದೀಕ್ಷೆ ಪಡೆಯಲಾಯಿತು ಎಂಬುದಷ್ಟೇ ಸುದ್ದಿ. ನಂತರ ಬೌದ್ಧಧರ್ಮ ನೆನಪಾಗಲು ಮುಂದಿನ ವರ್ಷವೇ ಬರಬೇಕು. ಮತ್ತೊಂದು ಬುದ್ಧ ಪೂರ್ಣಿಮೆ ಬಂದಾಗಲೇ ಮಾಮೂಲಿನಂತೆ ಪುರೋಹಿತಶಾಹಿಯ ವಿರುದ್ಧ ಬುದ್ಧಿಜೀವಿ ಭಾಷಣ, ದೀಕ್ಷೆ ಪ್ರಚಾರ. ಹಾಗಾದರೆ, ಇವತ್ತಿನ ಆಧುನಿಕ ಬೌದ್ಧತ್ವ, ಬೌದ್ಧ ಧರ್ಮಕ್ಕಿಂತ ಬೇರೆಯೇ? ಅದು ಬೌದ್ಧರ ಸಮುದಾಯ ಪ್ರಜ್ಞೆಯ ಒಂದು ಭಾಗವಾಗಿದೆಯೇ? ಹಾಗಾಗಿದ್ದರೆ ಜಮ್ಮು- ಕಾಶ್ಮೀರದ ಲಡಾಕ್‌ನಲ್ಲಿ ಬೌದ್ಧರ ಮೇಲಾಗುತ್ತಿರುವ ದೌರ್ಜನ್ಯಗಳು ಇಲ್ಲಿನವರ ಸಂವೇದನೆಗೆ ತಾಗುವುದಿಲ್ಲವೇಕೆ? ಕೊನೆಪಕ್ಷ, ಲಡಾಕ್‌ನ ಬೌದ್ಧರು, ತಮ್ಮ ಹುಡುಗಿಯರನ್ನು ಮುಸ್ಲಿಮರು ಬಲವಂತದಿಂದ ಹಾರಿಸಿಕೊಂಡು ಹೋಗುತ್ತಿದ್ದಾರೆ ಎಂದು ಕೇಂದ್ರಕ್ಕೆ ಅಳಲು ತೋಡಿಕೊಂಡಿರುವ ವಿಷಯವಾದರೂ ಗೊತ್ತೇ? ಕಾರ್ಗಿಲ್‌ನಲ್ಲಿ ಬೌದ್ಧ ಮತಸ್ಥರು ಸತ್ತರೆ ಅಲ್ಲಿ ಅವರನ್ನು ಹೂಳುವುದಕ್ಕೂ ಅವಕಾಶ ನೀಡದ ಹತಾಶ ಸ್ಥಿತಿ ಇರುವುದು ಲೆಕ್ಕಕ್ಕಿಲ್ಲವೇ? ಅಂಬೇಡ್ಕರ್‌ ಇದ್ದಿದ್ದರೆ ಇವನ್ನೆಲ್ಲ ಗ್ರಹಿಸುತ್ತಿದ್ದ ಪರಿ ಯಾವುದು ಎಂಬ ಕುತೂಹಲ ಕಾಡುತ್ತದೆ. ಹೋಗಲಿ, ಆಧುನಿಕ ಬೌದ್ಧ ಧರ್ಮ ದಲಿತರನ್ನು ಉತ್ತೇಜಿಸುವ ವ್ಯವಸ್ಥೆಯನ್ನಾದರೂ ಹುಟ್ಟುಹಾಕಿದೆಯೇ? ಅವರನ್ನು ಸಾಕ್ಷರರನ್ನಾಗಿಸುವ, ವ್ಯಸನ ಅಂಟಿಸಿಕೊಂಡವರನ್ನು ಮುಕ್ತಗೊಳಿಸುವ, ಉದ್ಯಮಶೀಲತೆ ಬೆಳೆಸುವ, ಯಾವ ಧರ್ಮದಿಂದ ಹೊರಬಂದರೋ ಅದಕ್ಕೆ ಪರ್ಯಾಯವಾಗಿ ಚಲನಶೀಲ ವ್ಯವಸ್ಥೆಯೊಂದನ್ನು ರೂಪಿಸುವ ಪ್ರಯತ್ನಗಳು ಕಾಣುತ್ತಲೇ ಇಲ್ಲ. ಒಂದು ಪಕ್ಷದಲ್ಲಿ ಟಿಕೆಟ್‌ ಸಿಗಲಿಲ್ಲ ಎಂದು ಮತ್ತೊಂದು ಪಕ್ಷ ಸೇರಿದೆ ಎಂಬ ರಾಜಕಾರಣದ ಧಾಟಿಯಲ್ಲೇ ಧರ್ಮವೂ ಬೆಳೆಯಬೇಕೆ? ಇವತ್ತು ಮತಾಂತರ ಹೊಂದುವವರೆಲ್ಲ ಮುಂದೊಡ್ಡುವುದು ಸಮಾನತೆಯ ಕಾರಣವನ್ನು. ಹಿಂದು ಧರ್ಮದಲ್ಲಿ ಜಾತಿ ಪದ್ಧತಿ ಇದೆ ಎಂದು ಕ್ರೈಸ್ತ ಧರ್ಮಕ್ಕೆ ಮತಾಂತರವಾದವರಿಗೆ ದಲಿತಕ್ರೈಸ್ತರೆಂಬ ಹಣೆಪಟ್ಟಿ! ಅಂತೆಯೇ ದಲಿತ ಮುಸ್ಲಿಂ, ದಲಿತ ಸಿಖ್‌... ಹೀಗೆ ಉಳಿದೇ ಹೋಗಿವೆ ವಿಂಗಡನೆಗಳು. ಪ್ರತಿಭಟನೆಯೊಂದನ್ನು ವೈಚಾರಿಕತೆಯ ನಿರಂತರತೆ ತುಂಡರಿಸಿ ಕೊಂಡೊಯ್ದರೆ ಒದಗುವ ಸ್ಥಿತಿ ಇದೇ. ವಿಚಾರವಾದಿಗಳು ಚಿಂತಿಸಬೇಕಿದೆ. - ರಮೇಶ್‌ಚಂದ್ರ, ಮೈಸೂರು

No comments:

Post a Comment

html