Pages

Wednesday, 18 May 2011

‘ಹೊಲಸು’: ಆಹಾರ ಪ್ರಮಾಣ


‘ಹೊಲಸು’: ಆಹಾರ ಪ್ರಮಾಣ ;ಭಾಗ-1- ಡಾ. ರಹಮತ್ ತರೀಕೆರೆ

ಯಾವ ಸಾಮಾಜಿಕ ಆವರಣದೊಳಗೆ ನಾವು ಬದುಕುತ್ತಿದ್ದೇವೆಯೋ ಅದರ ತಳಬುಡವನ್ನು ಅರಿತುಕೊಳ್ಳುವುದು ಸಂಸ್ಕೃತಿ ಚರ್ಚೆಯಲ್ಲಿ ಅಗತ್ಯ ವಾಗಿದೆ. ಯಾವ ನೆಲದಲ್ಲಿ ಜಲವುಣಿಸುವ ಧಾರೆ ಗಳಿಗಾಗಿ ನೆರಳನೀವ ತರುಗಳಿಗಾಗಿ ಅಮರ್ದಿನ ಬಳ್ಳಿಗಾಗಿ ತಡಕಾಡುತ್ತಿದ್ದೇವೆಯೋ, ಆ ನೆಲದ ಮೇಲೆ ಬೆಳೆದ ಕಳೆಕಸಗಳ ಪರಿವೆ ಇರಬೇಕಷ್ಟೇ. ‘ಪ್ರಮಾಣ’ವೆಂದರೆ, ನಮ್ಮ ಸಮಾಜದ ವಿವಿಧ ಸ್ತರಗಳಲ್ಲಿ ಆಳುವ ಸಂಸ್ಕೃತಿಯ ಆಲೋಚನಾ ಕ್ರಮಕ್ಕೆ ತಕ್ಕನಾಗಿ ರೂಪುಗೊಂಡು ನೆಲೆಸಿರುವ ನಂಬಿಕೆ ಆಚರಣೆಗಳು; ಮನುಷ್ಯರಿಂದ ಹಿಡಿದು ಪಶುಪಕ್ಷಿ ಗಿಡಮರ ದಿಕ್ಕುಗಳು ಬಣ್ಣಗಳು ಉಣ್ಣು ವುದು ಉಡುವುದು ಆಡುವ ಮಾತು ಮಾಡುವ ಕಸುಬುಗಳಾದಿಯಾಗಿ, ಜೀವನವನ್ನೆಲ್ಲಾ ವ್ಯಾಪಿಸಿ ಕೊಂಡಿರುವ ಶ್ರೇಣೀಕರಣಗಳು; ಈ ಪ್ರಮಾಣೀ ಕರಣಗಳು ನಮ್ಮ ದೈನಿಕ ಬದುಕಿನಲ್ಲಿ ಸಹಜವಾಗಿ ಸೇರಿಹೋಗಿವೆ.

ಎಷ್ಟೆಂದರೆ, ಎದುರಲ್ಲಿ ಗೋಚರಿ ಸುತ್ತಿದ್ದರೂ, ನಮ್ಮ ಭಾಷೆ ಸಾಹಿತ್ಯಕೃತಿ ದೈನಿಕ ವರ್ತನೆಗಳು ಅವನ್ನು ಮತ್ತೆಮತ್ತೆ ಪ್ರಕಟಿಸುತ್ತಿ ದ್ದರೂ, ತಟ್ಟನೆ ಅವು ಅರಿವಿಗೆ ಬರುವುದೇ ಇಲ್ಲ. ಬಂದರೂ ತಲೆ ಕೆಡಿಸುವುದಿಲ್ಲ. ಈ ಪ್ರಮಾಣೀ ಕರಣದ ಜಗತ್ತನ್ನು ಅರಿಯುವುದೆಂದರೆ, ಇಂಡಿ ಯಾದ ಬೇರೆಬೇರೆ ಸಮುದಾಯ ಗಳು ಅದನ್ನು ಎಲ್ಲಿ ಉಲ್ಲಂಘಿಸಿವೆ, ದಾಟ ಲಾಗದೆ ಬಳಲಿವೆ ಅಥವಾ ಜಗಳಕ್ಕೆ ಹೋಗದೆ ಬದಲಿ ನಿರ್ಮಿಸಿಕೊಂಡಿವೆ ಎಂಬುದರ ಶೋಧ ಕೂಡಾ. ಪ್ರತಿಸಂಸ್ಕೃತಿ ನಿರ್ಮಾಣದ ಚರ್ಚೆಗೆ ಹಿನ್ನೆಲೆ ಒದಗಿಸಿ ಕೊಳ್ಳುವುದಕ್ಕಾಗಿ, ಪ್ರಮಾಣಗಳ ‘ಚರಿತ್ರೆ’ ಯನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಈ ಪ್ರಮಾಣಗಳಲ್ಲಿ ಆಹಾರ ಪ್ರಮಾಣವು ಮುಖ್ಯವಾದುದು.

ಬಹುಸಂಸ್ಕೃತಿಗಳ ಈ ದೇಶದೊಳಗೆ ನಡೆದ, ಈಗಲೂ ನಡೆಯುತ್ತಿರುವ ದೊಡ್ಡ ದೌರ್ಜನ್ಯವೆಂದರೆ, ಸಂಸ್ಕೃತಿನಿಷ್ಠವೂ ಖಾಸ ಗಿಯೂ ಆದ ಉಣ್ಣುವ ವಸ್ತುಗಳನ್ನು, ಕನಿಷ್ಠ ವೆಂದು ಶ್ರೇಷ್ಠವೆಂದು ವಿಂಗಡಿಸಿ ಪ್ರಮಾಣೀ ಕರಿಸಿರುವುದು. ಈ ಬಗೆಯ ಪ್ರಮಾಣೀಕರ ಣಗಳು ಹೆಚ್ಚಾಗಿ ರಾಜಕೀಯ ಅಧಿಕಾರ ಪಡೆದ ಸಂಸ್ಕೃತಿಯ ಕೇಂದ್ರದಿಂದ ಸೃಷ್ಟಿಯಾ ಗಿರುತ್ತವೆ. ಸಾಮಾಜಿಕವಾಗಿ ಪ್ರತಿಷ್ಠೆ ಪಡೆಯ ಬಯಸುವ ಉಳಿದ ಸಮುದಾಯಗಳು ‘ಉಚ್ಚಸಂಸ್ಕೃತಿ’ಯ ಈ ಮಾದರಿಗಳನ್ನು ಆದರ್ಶ ವೆಂದು ಒಪ್ಪಿಕೊಳ್ಳುತ್ತವೆ. ಎಷ್ಟೋ ಸಮುದಾಯ ಗಳು ಚರಿತ್ರೆಯಲ್ಲಿ ಮಾಂಸಾಹಾರವನ್ನು ಬಿಟ್ಟು ಶ್ರೇಷ್ಠಗೊಳಿಸಲು ಯತ್ನಿಸಿದ್ದು ಹೀಗೆ. ಚಮ್ಮಾರರಾದ ಛತ್ತೀಸಗಢದ ಸತ್ನಾಮಿಗಳು, ಗುರುಘಾಸೀದಾಸನ ಪ್ರಭಾವದಿಂದ ಭಕ್ತರಾಗಿ ಜನಿವಾರ ಧರಿಸಿದರು. ಮಾಂಸಾಹಾರ ತ್ಯಜಿಸಿದರು.

ಮಾತ್ರವಲ್ಲ, ಕೆಂಪು ತರಕಾರಿ ಕೂಡ ತಿನ್ನುವುದನ್ನು ನಿಲ್ಲಿಸಿಬಿಟ್ಟರು. ಒಂದನ್ನು ಪಡೆಯಲು ಮತ್ತೊಂದರ ತ್ಯಾಗ. ಸಾಮಾಜಿಕ ಸ್ಥಾನಮಾನಕ್ಕಾಗಿ ಸಂಸ್ಕೃತೀಕರಣಗೊಳ್ಳಬೇಕೆಂಬ ಆಸೆ ಹಾಗೂ ತಮ್ಮ ಪ್ರೀತಿಯ ಆಹಾರಕ್ರಮಗಳನ್ನು ಕೈಬಿಡಲಾಗದ ಅಸಹಾಯಕತೆ. ಈ ತೊಳಲಾಟದಲ್ಲಿ ಅತ್ತಲೂ ಇತ್ತಲೂ ಇರಬಯಸುವ ಆದರೆ ವಾಸ್ತವದಲ್ಲಿ ಇರಲಾಗದ ದ್ವಂದ್ವಗಳಲ್ಲಿ ಉಳಿದುಬಿಡುವ ಸಮು ದಾಯಗಳೇ ಹೆಚ್ಚು. ಸದ್ಯಕ್ಕೆ ಇವು ಕೆಲವು ‘ಶುಭ’ ಕಾರ್ಯಗಳಲ್ಲಿ ಮಾತ್ರ ‘ಉಚ್ಚ’ ಸಂಸ್ಕೃತಿಯನ್ನು ಅನುಸರಿಸುವ ಮಟ್ಟಕ್ಕೆ ರಾಜಿಯಾಗಿವೆ. ಮುಖ್ಯವಾಗಿ ಇದು ಇಂಡಿಯಾದ ನಡುಹಂತದ ಶೂದ್ರ ಜಾತಿ ಸಮುದಾಯಗಳ ಪಾಡು.

ಆದರೆ ಸಂಸ್ಕೃತೀಕರಣದ ಯಾವ ಆಮಿಷಕ್ಕೂ ಮನಗೊಡದೆ ತಂತಮ್ಮ ಆಹಾರ ಕ್ರಮಗಳನ್ನು ಆತ್ಮವಿಶ್ವಾಸದಿಂದ ದಿಟ್ಟವಾಗಿ ಮುಂದುವರಿಸಿಕೊಂಡು ಬಂದವೆಂದರೆ, ತೀರ ಕೆಳಸ್ತರದ ಸಮುದಾಯಗಳು. ಅವಕ್ಕೆ ಮೇಲ್ಚ ಲನೆಯ ಸಾಧ್ಯತೆಗಳು ಕಡಿಮೆಯಿದ್ದುದರಿಂದಲೂ ಹೀಗಾಗಿರಬಹುದು. ಆದರೂ ತಮ್ಮ ಪಾರಂಪರಿಕ ಆಹಾರ ಪದ್ಧತಿಯನ್ನು ಬಿಟ್ಟುಕೊಡದ ಹಠವನ್ನು ಪ್ರತಿಸಂಸ್ಕೃತಿಯ ಜಿಗುಟುತನ ಎಂದು ಕರೆಯ ಬಹುದು.ಈ ಬಗೆಯ ಮೇಲ್ಚನೆಗಳಲ್ಲಿರುವ ವ್ಯಂಗ್ಯ ವೆಂದರೆ, ಯಾವ ಸಂಸ್ಕೃತಿಯು ಉಳಿದವಕ್ಕೆ ಮಾದ ರಿಯಾಗಿದೆಯೋ ಅದು, ಚರಿತ್ರೆಯ ಒಂದು ಘಟ್ಟದಲ್ಲಿ ಸ್ವತಃ ಇನ್ನೊಂದನ್ನು ಅನುಕರಿಸಿ ರುವುದು. ಅಂದರೆ ಪ್ರಮಾಣೀಕರಣಗಳನ್ನು ನಿರ್ಧ ರಿಸುವ ಅಧಿಕಾರ ಸ್ಥಾನದಲ್ಲಿರುವ ಬ್ರಾಹ್ಮಣರು, ಒಂದು ಕಾಲಕ್ಕೆ ಮಾಂಸಾಹಾರಿಗಳಾಗಿದ್ದವರು; ತಮ್ಮ ಯಜ್ಞ ಮತ್ತು ಶ್ರಾದ್ಧಗಳಲ್ಲಿ ಪ್ರಾಣಿಬಲಿ ಮಾಂಸದಡಿಗೆಗಳನ್ನು ಪವಿತ್ರ ಆಚರಣೆಗಳಾಗಿ ಹೊಂದಿದ್ದವರು.

ಈ ಸಂಗತಿಯನ್ನು ವೇದಗಳ ಬಗ್ಗೆ ಅಧ್ಯಯನ ಮಾಡಿರುವ ಅನೇಕ ವಿದ್ವಾಂಸರು ವಿಶ್ಲೇಷಿಸಿದ್ದಾರೆ. ಎಂತಲೆ ಚಾರ್ವಾಕರು ವಚನಕಾರರು ಬ್ರಹ್ಮಶಿವ ಮೊದಲಾದವರು ಬ್ರಾಹ್ಮಣರ ಟೀಕೆ ಮಾಡುವಾಗ, ಮೇಲಿನ ಚಾರಿತ್ರಿಕ ತಥ್ಯವನ್ನು ಒಂದು ಪ್ರಬಲ ಅಸ್ತ್ರ ಮಾಡಿಕೊಳ್ಳುತ್ತಾರೆ.ಮಾಂಸಾಹಾರದ ನಿರಾಕರಣೆ ಮತ್ತು ಒಪ್ಪು ವಿಕೆಯು ಭಾರತದ ಸಂಸ್ಕೃತಿಗಳಲ್ಲಿ ನಿರ್ಮಿಸಿರುವ ಆಕರ್ಷಣೆ ವಿಕರ್ಷಣೆಯ ದ್ವಂದ್ವಗಳು ವಿಚಿತ್ರ ವಾಗಿವೆ. ಸಮುದಾಯಗಳ ನಂಬಿಕೆ ಆಚರಣೆ ಮಿತ್‌ಗಳಲ್ಲಿ ಈ ದ್ವಂದ್ವವನ್ನು ಗುರುತಿಸಬಹುದು. ಇವನ್ನು ಮೂರು ನೆಲೆಗಳಲ್ಲಿ ವಿವರಿಸಬಹುದು.

ಅ. ‘ಗೋಮಾಂಸ’ ಸ್ವೀಕರಿಸುವ ಜನರ ಸಂಸ್ಕೃತಿಗಳು

ಆ. ದನವಲ್ಲದೆ ಇತರ ಪ್ರಾಣಿಗಳ ಮಾಂಸ ತಿನ್ನುವ ಜನರ ಸಂಸ್ಕೃತಿಗಳು ಇ. ಇಲಿ, ಉಡ, ಹಾವು, ಇರುವೆ ಇತ್ಯಾದಿಗಳನ್ನು ತಿನ್ನುವ ಜನರ ಸಂಸ್ಕೃತಿಗಳು.

ಇ. ‘ಗೋಮಾಂಸ’ದ ರಾಜಕಾರಣ: ವಲಸೆ ಗಾರರಾಗಿ ಬಂದ ಆರ್ಯರಿಗೆ ಹಸು ಸಂಪತ್ತೂ ಹೌದು, ಆಹಾರವೂ ಹೌದು. ಗೋವು ಪವಿತ್ರವಾಗಿತ್ತು ಎಂಬ ಕಾರಣಕ್ಕಾಗಿಯೇ ಅದರ ಮಾಂಸಸೇವನೆ ಪವಿತ್ರೀಕರಿಸುವ ಆಚರಣೆಗಳಲ್ಲಿ ಒಂದಾಗಿತ್ತು ಎಂದು ವೈದಿಕ ಧರ್ಮಶಾಸ್ತ್ರದ ದೊಡ್ಡವಿದ್ವಾಂಸ ಪಿ.ವಿ.ಕಾಣೆ ಹೇಳುತ್ತಾರೆ.

ವೇದಗಳಲ್ಲಿ ಬರುವ ‘ಗೋಘ್ನ’ (ಹಸು ತಿನ್ನುವವನು) ಎಂಬ ಶಬ್ದವು ಅತಿಥಿಗೆ ಪರ್ಯಾಯ ಹೆಸರು. ಯಾಕೆಂದರೆ ಆರ್ಯರು ಗೌರವಾನ್ವಿತ ಅತಿಥಿಗೆ ಕೊಡುತ್ತಿದ್ದ ‘ಮಧುಪರ್ಕ’ ದಲ್ಲಿ ದನದಮಾಂಸ ಇರಲೇಬೇಕಿತ್ತು. ಅಜಯಾಗ ದಲ್ಲಿ ಆಡಿನ, ಅಶ್ವಮೇಧಯಾಗದಲ್ಲಿ ಕುದುರೆಯ ವಿಭಿನ್ನ ಅಂಗಗಳನ್ನು ಹಂಚುವ ಮತ್ತು ಅಡುವ ವಿವರಣೆ ವೇದಗಳಲ್ಲಿದೆ. ಯಾವ ದೇವತೆಗಳಿಗೆ ಯಾವ ಬಣ್ಣದ ಹಸುವನ್ನು ಬಲಿಕೊಡಬೇಕೆಂಬ ವಿವರಣೆಗಳಿವೆ; ಮಹಾಭಾರತದಲ್ಲಿ (ಅರಣ್ಯ ಪರ್ವ: 207 - 209) ವದಂತಿರಾಜನ ಅಡುಗೆ ಮನೆಯಲ್ಲಿ ಪ್ರತಿದಿನ ಎರಡುಸಾವಿರ ದನಗಳ ಮಾಂಸವನ್ನು ಅಡುತ್ತಿದ್ದ ಬಗ್ಗೆ ಉಲ್ಲೇಖವಿದೆ. ಅಂಬೇಡ್ಕರ್ ತಮ್ಮ ‘ಅಸ್ಪಶ್ಯರು’ ಕೃತಿಯಲ್ಲಿ ಇಂತಹ ಅನೇಕ ಉಲ್ಲೇಖಗಳನ್ನು ವೈದಿಕ ವಾಙ್ಮಯದಿಂದ ಆಯ್ದು ಕೊಡುತ್ತಾರೆ.

ವೈದಿಕರು ತಮ್ಮ ಧಾರ್ಮಿಕ ಆಚರಣೆಗಳಲ್ಲಿ ನಡೆಸುತ್ತಿದ್ದ ಈ ಅವ್ಯಾಹತ ಪಶುವಧೆಗೆ ಪ್ರತಿ ರೋಧ ಒಡ್ಡಿದವನು ಬುದ್ಧ. ರೈತಾಪಿ ಸಮಾಜ ದಲ್ಲಿ ಈ ರೀತಿಯ ಪಶುವಧೆ ದುಷ್ಪರಿಣಾಮ ಬೀರುತ್ತದೆಂದು ಅವನು ಮಂಡಿಸಿದ ‘ಅಹಿಂಸೆ’ ಯ ತತ್ವವು, ಕೃಷಿಕ ಪಶುಪಾಲಕ ಜನಕ್ಕೆ ಪ್ರಿಯ ವಾಯಿತು. ಅವರು ಬೌದ್ಧಧರ್ಮ ಸೇರಿ ಅದನ್ನು ಜನಪ್ರಿಯಗೊಳಿಸಿದರು. ಎಂತಲೇ ಬೌದ್ಧ ಸಾಹಿ ತ್ಯಗಳಲ್ಲಿ ವೈದಿಕರ ‘ಹಿಂಸೆ’ಯ ಬಗ್ಗೆ ಬಲವಾದ ಟೀಕೆಗಳಿವೆ. ಯಾವಾಗ ಸಮುದಾಯಗಳನ್ನು ತನ್ನತ್ತ ಹೀಗೆ ಸೆಳೆದುಕೊಂಡು ಬೌದ್ಧಧರ್ಮವು ಒಂದು ಪ್ರತಿಶಕ್ತಿಯಾಗಿ ಬೆಳೆಯತೊಡಗಿತೋ, ಆಗ ವೈಗದಿಕರು ತಮ್ಮ ಜೀವನಕ್ರಮದ ಸ್ವವಿಮ ರ್ಶೆಗೂ ಸೂಕ್ತ ಮಾರ್ಪಾಟಿಗೂ ತೊಡಗಲೇ ಬೇಕಾಯಿತು.

ಅಂಬೇಡ್ಕರ್ ಪ್ರಕಾರ, ಬ್ರಾಹ್ಮಣರು ತಮ್ಮ ಜೀವನಕ್ರಮದಲ್ಲಿ ಎರಡು ಕ್ರಾಂತಿಕಾರಕ ಮಾರ್ಪಾಟನ್ನು ತಂದುಕೊಂಡರು. ಒಂದು: ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಿದ್ದು. ಎರಡು: ಇನ್ನೂ ಕೊಂಚ ಮುಂದುವರಿದು ಎಲ್ಲ ಬಗೆಯ ಮಾಂಸಾಹಾರವನ್ನು ಕೈ ಬಿಟ್ಟಿದ್ದು. ‘ನನ್ನ ದೃಷ್ಟಿಯಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಣೆ ತ್ಯಜಿಸಿ ಗೋವನ್ನು ಪೂಜಿಸಲು ಆರಂಭಿಸಿದ್ದು ದೊಡ್ಡ ರಾಜ ತಂತ್ರ’ ಎನ್ನುವ ಅಂಬೇಡ್ಕರ್, ಬೌದ್ಧರ ಮತ್ತು ತಮ್ಮ ಧರ್ಮಗಳೊಳಗಣ ಸ್ಪರ್ಧೆ ಯಲ್ಲಿ ಬ್ರಾಹ್ಮಣರು, ತಾವು ಬೌದ್ಧರಿಗಿಂತ ಶ್ರೇಷ್ಠವೆಂದು ರುಜುವಾತು ಪಡಿಸುವ ಹಠದಲ್ಲಿ ಈ ಬದಲಾವಣೆಯನ್ನು ಪಡೆದರೆಂದು ವಿವರಿಸುತ್ತಾರೆ.

ವಿಸ್ಮಯವೆಂದರೆ, ಚರಿತ್ರೆಯಲ್ಲಾದ ಈ ಪಲ್ಲಟವನ್ನು ಈಗ ಗೋಪೂಜೆ ಹಾಗೂ ಸಸ್ಯಾಹಾರಗಳ ವಕ್ತಾರನಂತಿರುವ ಬ್ರಾಹ್ಮಣ ಸಂಸ್ಕೃತಿಯು ಮರೆತುಬಿಟ್ಟಿರುವುದು: ಬದ ಲಿಗೆ ಇಂಡಿಯಾದ ಅನೇಕ ಮಾಂಸಾ ಹಾರಿ ಸಂಸ್ಕೃತಿಗಳನ್ನು ಹೀನಾಯವಾಗಿ ನೋಡುವಂತಹ ದೃಷ್ಟಿಕೋನ ಬೆಳೆಯಲು ಕಾರಣವಾಗಿರುವುದು. ಗಳಗನಾಥರ ‘ಮಾಧವ ಕರುಣಾವಿಲಾಸ’ ಕಾದಂಬರಿ ಯಲ್ಲಿ ವಿದ್ಯಾರಣ್ಯನು ಅಸ್ಪಶ್ಯತೆಯನ್ನು ಕುರಿತು ಹೇಳುವುದನ್ನು ಗಮನಿಸಬೇಕು: ‘‘ಗೋಮಾಂಸಾದಿ ನಿಷಿದ್ಧ ಪದಾರ್ಥಗಳ ಭಕ್ಷಣ ಮಾಡುವವರೂ ಆದ ಪಂಚಮರು, ವೈದಿಕರಿಗೆ, ಪ್ರಾಚೀನ ಋಷಿ ಸಮ್ಮತವಾಗಿ ಧಾರ್ಮಿಕ ವ್ಯವಹಾರದಲ್ಲಿ ಸ್ಪರ್ಶರು ಹ್ಯಾಗಾದರು?’’
‘ಚಾರಿತ್ರಿಕ’ ಕಾದಂಬರಿಯೊಂದು ಒಪ್ಪಿಸು ತ್ತಿರುವ ಅಚಾರಿತ್ರಿಕ ನಂಬಿಕೆಯಿದು: ಅಂಬೇ ಡ್ಕರ್ ಪ್ರಕಾರ ಅಸ್ಪಶ್ಯರು ಸೃಷ್ಟಿಯಾಗಿದ್ದು, ಬ್ರಾಹ್ಮಣ ಸಂಸ್ಕೃತಿ ನಿಷೇಧಿಸಿದ ಆಹಾರವನ್ನು ಬಿಡದೆ ಮುಂದುವರಿಸಿದ್ದಕ್ಕೆ. ಅದರಲ್ಲೂ ಸತ್ತ ದನಗಳನ್ನು ಹೊರುವುದು, ಅದರ ಚರ್ಮ ಬಳಸಿ ವೃತ್ತಿ ಮಾಡುವುದು ಯಾರ ಸಾಮಾಜಿಕ ಕರ್ತವ್ಯ ವಾಗಿತ್ತೊ ಅಂತಹವರು ಸತ್ತ ದನದಮಾಂಸ ತಿನ್ನುವುದು ಸಹಜವಾಗಿತ್ತು. ಆ ಜನ ಅಸ್ಪಶ್ಯ ರೆನಿಸಿದರು.ಸ್ವಂತ ಅಭಿರುಚಿಗೆ ಸಂಬಂಧಿಸಿದ ವಿಷಯಕ್ಕೆ ಧಾರ್ಮಿಕ ಲೇಪ ಬಂದೊಡನೆ ‘ಗೋವು’ ಎಂಬ ಪ್ರಾಣಿಯು ಬ್ರಾಹ್ಮಣರೊಡನೆ (ಗೋಬ್ರಾಹ್ಮಣ) ಸಮೀಕರಣಗೊಂಡು ದೈವವಾಗಿ, ಕೋಟ್ಯಂತರ ದೇವತೆಗಳ ವಾಸಸ್ಥಾನವಾಗಿ, ಅದರ ಮಾಂಸ ಸೇವನೆಯು ಘೋರ ಪಾಪವಾಗಿಬಿಟ್ಟಿತು.

ಸನಾತನವಾದಿಗಳಾದ ಗುಪ್ತರ ಕಾಲದಲ್ಲಿ ಈ ನಂಬಿಕೆ ಧರ್ಮಶಾಶ್ತ್ರವಾಯಿತು. ಇಂತಹ ಸನಾತ ಸಂಸ್ಕೃತಿಯ ಅಲೆ ದಕ್ಷಿಣಕ್ಕೆ ಬಂದಾಗ, ತಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಮದ್ಯ ಮಾಂಸಗಳನ್ನು ಪವಿತ್ರವೆಂದು ಎಣಿಸಿದ್ದ ‘ದ್ರಾವಿಡ’ ಸಂಸ್ಕೃತಿಗಳೂ ಪ್ರಭಾವಗೊಂಡವು.


ಡಾ. ರಹಮತ್ ತರೀಕೆರೆ

http://beta.varthabharathi.net/print/52748/

No comments:

Post a Comment

html