ಶಿವಮೊಗ್ಗದಲ್ಲಿ ಸೋಮವಾರ ಬಜೆಟ್‌ನಲ್ಲಿ ದಲಿತರ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಶಿವಮೊಗ್ಗ: ರಾಜ್ಯ ಸರ್ಕಾರ ಫೆ. 25ರಂದು ಮಂಡಿಸಲಿರುವ 2011-2012ನೇ ಸಾಲಿನ ಬಜೆಟ್‌ನಲ್ಲಿ ದಲಿತರ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ರಾಷ್ಟ್ರೀಯ ಯೋಜನಾ ಆಯೋಗದ ನಿರ್ದೇಶನದಂತೆ ಜನಸಂಖ್ಯಾವಾರು ಬಜೆಟ್‌ನಲ್ಲಿ ಪ್ರಾತಿನಿಧ್ಯ ನೀಡಬೇಕು.ಅದರಂತೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಶೇ. 23ರಷ್ಟು ಹಣ ಏಕಗವಾಕ್ಷಿ ಮೂಲಕ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರ ಆದಾಯ ಮಿತಿಯನ್ನು 1ಲಕ್ಷದಿಂದ 5ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ಸರ್ಕಾರಿ ಭೂಮಿಯಲ್ಲಿ ಶೇ. 50ರಷ್ಟು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಭೂಹೀನರಿಗೆ ಹಂಚುವ ಮೂಲಕ ಭೂ ಮಂಜೂರಾತಿ ಕಾಯ್ದೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
1ರಿಂದ 10ನೇ ತರಗತಿವರೆಗಿನ ಶಾಲಾಮಕ್ಕಳಿಗೆ ನೀಡುತ್ತಿರುವ 100ರೂ. ಶಿಷ್ಯವೇತನವನ್ನು 1,000 ರೂ.ಗೆ ಹೆಚ್ಚಿಸಬೇಕು. ಮೆಟ್ರಿಕ್‌ಪೂರ್ವ ಮತ್ತು ಮೆಟ್ರಿಕ್ ನಂತರದ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಭೋಜನ ವೆಚ್ಚ 1,200 ರೂ.ಗಳಿಂದ 1,500ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಖಾಸಗಿ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಸರ್ಕಾರ ಕಡ್ಡಾಯವಾಗಿ ಮೀಸಲಾತಿ ಜಾರಿಗೊಳಿಸಬೇಕು. ತಪ್ಪು ಮಾಹಿತಿ ನೀಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯ ಕಬಳಿಸುತ್ತಿರುವವರ ಮೇಲೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯ ನೇತೃತ್ವವನ್ನು ಡಿಎಸ್‌ಎಸ್‌ನ ಜಿಲ್ಲಾ ಸಂಚಾಲಕರಾದ ಚಿನ್ನಯ್ಯ, ಕೆ.ಎ. ರಾಜ್‌ಕುಮಾರ್, ಮುಖಂಡ ಆರ್. ಕೈಲಾಸ್ ಕುಮಾರ್ ಮತ್ತಿತರರು ವಹಿಸಿದ್ದರು.
No comments:
Post a Comment