ಮಧುರೆ, ಎ.27: ತಮಿಳುನಾಡಿನ ವೇಲಾಯುಧಂಪುತೂರಿನಲ್ಲಿ ದಲಿತರಿಗೆ ಪ್ರತ್ಯೇಕ ಲೋಟಗಳ ವ್ಯವಸ್ಥೆ ಸಹಿತ ಜಾತಿ ತಾರತಮ್ಯ ವ್ಯಾಪಕವಾಗಿದೆಯೆಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯೊಂದರ ಸಂಬಂಧ ಇಂದು ಮದ್ರಾಸ್ ಹೈಕೋರ್ಟ್‌ನ ಮಧುರೆ ಪೀಠವು ಗೃಹ ಕಾರ್ಯದರ್ಶಿ, ಆದಿದ್ರಾವಿಡ ಕಲ್ಯಾಣ ಕಾರ್ಯದರ್ಶಿ, ಡಿಂಡಿಗಲ್ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಿಗೆ ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಿದೆ. ತೆರುಕುತ್ತೇರು, ವೇಲಾಯುಧಂಪುತೂರು ಇತ್ಯಾದಿ ಸ್ಥಳಗಳಲ್ಲಿ ವಾಸಿಸುವ ದಲಿತರ ಸಾಮಾಜಿಕ ಬಹಿಷ್ಕಾರ ಮುಂದುವರಿದಿದೆ.
ಗ್ರಾಮದ ಚಹಾದಂಗಡಿ ಗಳ ಮಾಲಕರಾದ ಎಸ್. ಚೆಲ್ಲದುರೈ ಹಾಗೂ ಎನ್.ಕಾಮರಾಜ್ ಎಂಬವರು ಕೆಲವು ದಲಿತರಿಗೆ ಬಳಸಿ ಎಸೆಯಬಹುದಾದ ಲೋಟಗಳಲ್ಲಿ ಚಹಾ ನೀಡುತ್ತಿದ್ದರೆ, ದಲಿತರಲ್ಲದವರಿಗೆ ಗಾಜಿನ ಲೋಟಗಳಲ್ಲಿ ನೀಡುತ್ತಿದ್ದಾರೆ ಎಂದು ವೇಲಾಯುಧಂಪುತೂರ್‌ನ ಕೆ. ಕಾಳಿಯಪ್ಪನ್ ಎಂಬವರು ಸಲ್ಲಿಸಿರುವ ಅರ್ಜಿಯಲ್ಲಿ ದೂರಿದ್ದಾರೆ. ಗ್ರಾಮದಲ್ಲಿನ 1400 ಕುಟುಂಬಗಳಲ್ಲಿ 300 ಪರಿಶಿಷ್ಟ ಸಮುದಾಯದವರದಾಗಿವೆ. ಅವರನ್ನು ದಲಿತರಲ್ಲದವರ ಜತೆ ಒಂದೇ ಆಸನದಲ್ಲಿ ಕುಳಿತುಕೊಳ್ಳಲೂ ಬಿಡುತ್ತಿಲ್ಲ ಎಂದವರು ಆರೋಪಿಸಿದ್ದಾರೆ. ಗ್ರಾಮದ ಮೂರು ದೇವಳಗಳಲ್ಲಿ ದಲಿತರಿಗೆ ಪೂಜೆಗೆ ಅವಕಾಶವಿಲ್ಲ. ಕಳೆದ ವರ್ಷ ನ.15ರಂದು ದಲಿತರು ದಲಿತ ಕಲೆ ಹಾಗೂ ಸಾಹಿತ್ಯ ಸಂಘವೆಂಬ ಹೆಸರಿನ ಸಂಘಟನೆಯೊಂದರ ಉದ್ಘಾಟನೆಗೆ ನಿರ್ಧರಿಸಿದ್ದರು. ಆದರೆ ಪಳನಿಯ ಪೊಲೀಸ್ ಅಧಿಕಾರಿ ಅವರಿಗೆ ಅನುಮತಿ ನೀಡಲಿಲ್ಲ. ನ.14ರಂದು ನಾಲ್ವರು ದಲಿತ ನಾಯಕರನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿತ್ತೆಂದು ಅರ್ಜಿದಾರರು ದೂರಿದ್ದಾರೆ.
ನ್ಯಾಯಮೂರ್ತಿಗಳಾದ ಕೆ.ಸುಗುಣಾ ಹಾಗೂ ಎ. ಆರ್ಮುಗಸ್ವಾಮಿ, ಗ್ರಾಮದ ಅಂಗಡಿದಾರರು ಸಹಿತ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿದರು.
No comments:
Post a Comment