Pages

Wednesday, 18 May 2011

ಮುಕ್ತಿ ಕಾಣದೇ ದಲಿತರಿಂದ ದಲಿತರ ಶೋಷಣೆ ?

ಸವರ್ಣಿಯರು ಎಂದು ಕರೆಸಿಕೊಳ್ಳುವ ಮೇಲ್ವರ್ಗದವರು ಸಮಾಜದ ಕೆಳವರ್ಗದ ದಲಿತರನ್ನು ಶೋಷಿಸುವುದು, ಕಿರುಕುಳ ನೀಡುವುದು ಅಲ್ಲದೇ ಅವರ ಮೇಲೆ ದೌರ್ಜನ್ಯ ನಡೆಸುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದು ನಿರಂತರವಾಗಿ ನಡೆಯುತ್ತಿದೆ ಎಂದು ನಾನಾ ದಲಿತ ಸಂಘಟನೆಗಳು ಪದೇ ಪದೇ ಬೀದಿಗಿಳಿದು ಹೋರಾಟ ಮಾಡುವುದು, ಧರಣಿ ಸತ್ಯಾಗ್ರಹ ನಡೆಸುವುದನ್ನು ನಾವು ಮಾಧ್ಯಮ ಮೂಲಕ ನೋಡುತ್ತಿದ್ದೇವೆ.

ಹೌದು, ಅಸಹಾಯಕರಿಗೆ, ಅಮಾಯಕರಿಗೆ ಇಂತಹ ಶೋಷಣೆಯಾದಾಗ, ಅನ್ಯಾಯ, ಆಕ್ರಮಣ, ಅತ್ಯಾಚಾರ, ದೌರ್ಜನ್ಯಂತಹ ಅಮಾನವೀಯ ಘಟನೆಗಳು ನಡೆದಾಗ ನ್ಯಾಯ ಮತ್ತು ರಕ್ಷಣೆ ಕೇಳುವುದು ಸರಿ. ನ್ಯಾಯ ಸಿಗದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಸಹ ಸಂವಿಧಾನ ಬದ್ಧವಾದ ಹಕ್ಕು ಕೂಡ. ಆರ್ಥಿಕವಾಗಿ ಹಿಂದುಳಿದ ದಲಿತ ವರ್ಗ ಅಥವಾ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರು, ನಿರ್ಗತಿಕರು, ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ಸಮಾಜವಾಗಲಿ ಇಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ಸ್ಪಂದಿಸಿ ಸಹಾಯಹಸ್ತ ನೀಡುವುದು ಸಹ ಮನುಷ್ಯತ್ವ ಧರ್ಮ.

ಆದರೆ, ಸಾವಿರಾರು ವರ್ಷದಿಂದ ಈ ಸಮಾಜದಿಂದ ಶೋಷಣೆಗೆ ಒಳಗಾಗಿದ್ದೇವೆ. ಇಂದಿಗೂ ನಮ್ಮನ್ನು ಈ ಸಮಾಜ ನಿರಂತರವಾಗಿ ಶೋಷಿಸುತ್ತಿದೆ. ನಮ್ಮ ಮೇಲೆ ಆಕ್ರಮಣ ಮಾಡುತ್ತಿದೆ. ದೌರ್ಜನ್ಯ ನಡೆಸುತ್ತಿದೆ. ಸಂವಿಧಾನ ಬದ್ಧವಾಗಿ ನೀಡಿರುವ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಬೊಬ್ಬೆಹೊಡೆಯುತ್ತಾ ಮೇಲ್ವರ್ಗದವರ ಮೇಲೆ, ಅಧಿಕಾರಿಶಾಯಿಗಳ ಮೇಲೆ ಹಾಗೂ ಜವಬ್ಧಾರಿ ಸ್ಥಾನದಲ್ಲಿರುವ ಸರಕಾರದ ಮೇಲೆ ಆರೋಪ ಹೊರಿಸಿ ಹೋರಾಟ ಮಾಡುವ ದಲಿತ ಸಂಘಟನೆಗಳು ವಾಸ್ತವ, ಪ್ರಮಾಣಿಕವಾದ ಸತ್ಯಾಸತ್ಯತೆ ಬಗ್ಗೆ ಏಕೆ ತಿಳಿದುಕೊಳ್ಳುವುದಿಲ್ಲ?
ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ಧತೆ ಮತ್ತು ಸಹಬಾಳ್ವೆ ನಡೆಸಲು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಹಕ್ಕುಗಳನ್ನು ನೀಡಿದೆ. ದೌರ್ಜನ್ಯ, ಶೋಷಣೆಯ ನೆಪದಲ್ಲಿ ಸತ್ಯವಲ್ಲದ, ವಾಸ್ತವವಲ್ಲದ ವಿಷಯಗಳನ್ನು ವೈಭವೀಕರಿಸಿ ಸಮಾಜದ ಮುಂದೆ ದೊಡ್ಡ ಹೋರಾಟದ ರೂಪದಲ್ಲಿ ನ್ಯಾಯ ಮತ್ತು ಪರಿಹಾರ ಕೇಳುವುದು ಎಷ್ಟು ಸರಿ?
ದಲಿತರು ಅಂದರೆ ಯಾರು ? ದಲಿತ ವರ್ಗಕ್ಕೆ ಯಾವ ಯಾವ ವರ್ಗ ಸೇರುತ್ತದೆ ? ಅವರೆಲ್ಲರಿಗೂ ಅನ್ಯಾಯವಾದಾಗ ಬೀದಿಗಿಳಿದಿದ್ದೀರಾ ? ಹಾಗಾದರೆ ಎಲ್ಲಾ ವರ್ಗದ ದಲಿತರು ಇಂದು ನೆಮ್ಮದಿ, ಸಂತೋಷವಾಗಿದ್ದಾರ ? ಎಷ್ಟು ಪ್ರಕರಣಗಳು ದೌರ್ಜನ್ಯದ ಹೆಸರಿನಲ್ಲಿ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿವೆ, ಅವುಗಳಲ್ಲಿ ಎಷ್ಟು ದಲಿತರ ಪರವಾಗಿ ತೀರ್ಪು ಬಂದಿದೆ, ಎಷ್ಟಕ್ಕೆ ನ್ಯಾಯ ಮತ್ತು ಪರಿಹಾರ ಸಿಕ್ಕಿವೆ ? ಈ ಬಗ್ಗೆ ಯಾವುದಾದರೂ ದಲಿತ ಸಂಘಟನೆಗಳು ಪರಶೀಲಿಸಿ ಅದಕ್ಕೆ ಕಾರಣ ಹುಡುಕಿವೆಯೇ ? ಇದೆಲ್ಲಾ ಸರಿ,
ಮೊದಲಿಗೆ ದಲಿತರಿಂದಲೇ ದಲಿತರ ಶೋಷಣೆ ನಡೆಯುತ್ತಿದೆ ನ್ಯಾಯ ಕೊಡಿಸುವವರು ಯಾರು. ಪ್ರಸ್ತುತವಾಗಿ ಪಡೆದ ಅಂಕಿ ಅಂಶದ ಪ್ರಕಾರ ಸುಮಾರು ೧೬೦ಕ್ಕೂ ಹೆಚ್ಚು ಪರಿಶಿಷ್ಟ ಮತ್ತು ವರ್ಗದ ಜಾತಿಗಳು ದಲಿತ ವರ್ಗಕ್ಕೆ ಬರುತ್ತವೆ ಆದರೆ, ಕೆಲವೇ ಬೆರಳೆಣಿಕೆಯಷ್ಟು ಪರಿಶಿಷ್ಟ ಜಾತಿಗಳು ಮತ್ತು ವರ್ಗಗಳು ಮಾತ್ರ ಮುಖ್ಯವಾಹಿನಿಯಲ್ಲಿವೆ. ಉಳಿದ ಜನಾಂಗವದರು ಇಂದು ಅಮಾನವೀಯವಾದ, ಶೋಚನೀಯವಾದ, ನಿಕೃಷ್ಟವಾದ, ಕಡುಬಡತನದ ಹಾಗೂ ಶೋಷಣೆಯ ಬದುಕನ್ನೇ ನಡೆಸುತ್ತಿವೆ. ಅವರ ಹಸಿವು, ಆಕ್ರಂದನ ಕೇಳುವ ಕಿವಿ ಮತ್ತು ಮನಸ್ಸುಗಳನ್ನು ಯಾವ ದಲಿತ ಸಂಘಟನೆಗಳೂ ಮಾಡಿಲ್ಲ.

ನಾವು ದಲಿತರ ರಕ್ಷಣೆಗಾಗಿ, ಅವರ ಸಮಸ್ಯೆಗಳಿಗೆ ದ್ವನಿಯಾಗಿ, ಎಲ್ಲಾ ವರ್ಗದ ದಲಿತರ ಶೋಷಣೆಯ ವಿರುದ್ಧವಾಗಿ ಹೋರಾಡಲು ಸದಾ ಕಟ್ಟಿ ಬದ್ಧರಾಗಿದ್ದೇವೆ ಎಂದು ಬ್ಯಾನರು, ಲೆಟರ್‌ಹೆಡ್, ವಿಸಿಟಿಂಗ್ ಕಾರ್ಡ್ ಹಿಡಿದಿರುವ ನೂರಾರು ದಲಿತ ಸಂಘಟನೆಗಳು ರಾಜ್ಯಾದ್ಯಂತ ಇಂದು ಹುಟ್ಟಿಕೊಂಡಿವೆ. ಆದರೆ ಯಾವ ದಲಿತ ಸಂಘಟನೆಗಳೂ ನಿಜವಾದ ದಲಿತರ ಸಮಸ್ಯೆಗಳನ್ನು, ಅವರ ನೋವುಗಳನ್ನು, ಅವರ ಹಸಿವನ್ನು ನೂರಕ್ಕೆ ನೂರರಷ್ಟು ಬಗೆಹರಿಸಿಲ್ಲ.

ಆದರೆ ವಾಸ್ತವದಲ್ಲಿ ಇರುವ ಸತ್ಯವೇ ಬೇರೆ. ಬಲಿಷ್ಟರಾದ ದಲಿತರಲ್ಲೆ ಗುಂಪುಗಾರಿಕೆ ಮಾಡಿಕೊಂಡು ಹಣ, ಅಧಿಕಾರಕ್ಕಾಗಿ ಹಪಹಪಿಸುತ್ತಾ ಅಮಾಯಕ ದಲಿತರ ವಂಚನೆ ನಡೆಯುತ್ತಿದೆ. ಪ್ರತಿಷ್ಟೆ, ವೈಯಕ್ತಿಕ ದ್ವೇಷದಿಂದ ಜಾತಿಯೊಳಗೆ ಜಾತಿಯನ್ನು ಶೋಷಿಸುತ್ತಾ ಪಡಬಾರದ ಹಿಂಸೆಗಳನ್ನು ನೀಡಲಾಗುತ್ತಿದೆ. ಬಲಿಷ್ಟರು ಹಾಗೂ ಸಂಘಟಕರು ಸರಕಾರದ ಎಲ್ಲಾ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ನಿಜವಾದ ಅರ್ಹರಿಗೆ ನೇರವಾಗಿ ವಂಚಿಸುತ್ತಿದ್ದಾರೆ. ಅನ್ಯಾಯಕ್ಕೊಳಗಾದ ಅಸಹಾಯಕ ದಲಿತರು ನ್ಯಾಯ ಮತ್ತು ರಕ್ಷಣೆ ಕೋರಿ ಮುಖಂಡರ ಬಳಿ ಬಂದಾಗ ಅಲ್ಲಿ ನಡೆಯುವ ಶೋಷಣೆ, ಮೋಸ ಹೇಳ ಬಾರದು. ಇಂದು ಸಮಾಜದಲ್ಲಿ ದಲಿತರಿಂದಲೇ ದಲಿತರ ಶೋಷಣೆ ನಡೆಯುವ ಬಗ್ಗೆ ಒಂದು ಪ್ರಬಂಧ ಬರೆದರೆ ಖಂಡಿತ ಡಾಕ್ಟರೇಟ್ ಪಡೆಯಬಹುದು.
ಕ್ಷಮಿಸಿ, ದಲಿತರಿಂದ ದಲಿತರ ಶೋಷಣೆ ಎಂಬ ಒಂದು ಅಮಾನವೀಯವಾದ ಸತ್ಯಘಟನೆ ಬಗ್ಗೆ ಲೇಖನ ಬರೆಯುವಾಗ ಇಡೀ ದಲಿತ ಸಮೂದಾಯದ ಜೀವನ ಚಿತ್ರ ಕಣ್ಣ ಮುಂದೆ ಬಂದು ಒಂದಷ್ಟು ತೆರೆದಿಡಬೇಕಾಯಿತು. ಈಗ ವಿಷಯಕ್ಕೆ ಬರುತ್ತೇನೆ. ಮೇಲ್ವರ್ಗದವರು ದಲಿತರನ್ನು ಶೋಷಣೆ ಮಾಡುತ್ತಾರೆ, ಸಮಾಜದಿಂದ ಬಹಿಷ್ಕರಿಸಿ ಹೊರ ಹಾಕುತ್ತಾರೆ ಎಂದು ನೀವು ನಾವು ಕೇಳಿದ್ದೇವೆ. ಆದರೆ ದಲಿತರೇ ದಲಿತರನ್ನು ಶೋಷಿಸಿ ಸಮಾಜದಿಂದ ದೂರ ಇಟ್ಟರೆ, ಅವರಿಗೆ ಅನ್ನ ನೀರು ನೀಡದೇ ಬಹಿಷ್ಕರಿಸಿ

ಗ್ರಾಮದಿಂದ ಹೊರ ದಬ್ಬಿದರೆ ಇದು ಯಾವ ನ್ಯಾಯ?

ಅರಿವಿಲ್ಲದೇ ಕೆಳವರ್ಗದಲ್ಲಿ ಹುಟ್ಟಿದ ಕಾರಣಕ್ಕೆ ಸಮಾಜದಿಂದ ಶೂದ್ರ ಎನಿಸಿಕೊಂಡು ನಿಕೃಷ್ಟಕ್ಕೊಳಗಾಗಿ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಅನುಭವಿಸುತ್ತಾ ಬದುಕುವ ಅಮಾಯಕ ದಲಿತರಿಗೆ ಬಲಿಷ್ಟ ದಲಿತರೇ ಸಮೂದಾಯದ ಒಳಗೇ ಶೋಷಿಸಿ ಹಿಂಸೆ, ದೌರ್ಜನ್ಯ, ಕಿರುಕುಳ, ಬೆದರಿಕೆ ನೀಡಿದರೆ ಅವರು ಜೀವಂತವಾಗಿ ಬದುಕಿರಬೇಕಾ? ಅಸಹಾಯಕರಿಗೆ ನೊಂದವರಿಗೆ ರಕ್ಷಣೆ ನೀಡುವವರೇ ಕೊಲೆಗಡುಕರು ಆದರೆ ಬದುಕಿಸುವವರು ಯಾರು ? ಅನ್ಯಾಯವಾದಾಗ ಅಪ್ಪಿಕೊಂಡು ನಂಬಿಕೆ, ಆತ್ಮವಿಶ್ವಾಸ ಮೂಡಿಸ ಬೇಕಾದವರೇ ಕಾಲಿನಿಂದ ಒದ್ದು, ಬೈದು, ಬಡಿದು ಕಾಡಿಗೆ ತಳ್ಳಿದರೆ ಅವರ ನರಕಯಾತನೇ ಹೇಗಿರಬೇಡ.
ಇಂತಹ ಒಂದು ಘಟನೆ ಪ್ರಪ್ರಥಮ ಬಾರಿಗೆ ಬಯಲುಗೊಂಡಿದೆ. ಇದು ಒಂದು ಉದಾಹರಣೆ ಮಾತ್ರ. ಇಂತಹ ಸಾವಿರಾರು ಘಟನೆಗಳು ಸಮೂದಾಯದಲ್ಲಿ ನಾನಾ ರೂಪದಲ್ಲಿ ಇಂದಿಗೂ ಜೀವಂತಾಗಿವೆ. ಅಮಾಯಕ ದಲಿತರನ್ನು ನಿರಂತರವಾಗಿ ಶೋಷಿಸುತ್ತಲೇ ಇವೆ. ಅದಕ್ಕೆ ಯಾವ ಕಾನೂನು ಕಟ್ಟಳೆಗಳೂ ಇಲ್ಲ. ಇದ್ದರೂ ಸಂಘಟನೆಗಳ ಭಯದಲ್ಲಿ ತನ್ನ ಸತ್ವ ಮುರಿದುಕೊಂಡು ಮೂಲೆಗೆ ಬಿದ್ದಿವೆ. ಕಟ್ಟಿ ಹಾಕುವ ಧೈರ್ಯವನ್ನೂ ಯಾರೂ ಮಾಡಿಯೂ ಇಲ್ಲ.
ಅನ್ಯ ಜಾತಿಯವನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ದಲಿತ ಕಾಲೋನಿಯ ಮುಖಂಡರು ಮತ್ತು ಗ್ರಾಮಸ್ಥರು ಸೇರಿ ಆಕೆಯ ಇಡೀ ಕುಟುಂಬವನ್ನೇ ಸಮಾಜದಿಂದ ದೂರ ಇಟ್ಟು ನೀರು ಕೊಡದಂತೆ ಬಹಿಷ್ಕರಿಸಿರುವ ಧಾರಣ ಸತ್ಯಘಟನೆ ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲೇನಹಳ್ಳಿಯ ಭೋವಿಕಾಲೋನಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಬಹಿಷ್ಕರಿಸಿರುವವರು ಮತ್ತು ಬಹಿಷ್ಕಾರಕ್ಕೊಳಗಾದವರೂ ದಲಿತರೇ ಅಚ್ಚರಿ ಸಂಗತಿ.

ಕುಟುಂಬದ ಬಡತನ ಬೇಗೆಯಲ್ಲಿ ಬೆಂದು ಕಷ್ಟಕರ ಜೀವನ ಸಾಗಿಸುತ್ತಾ ಮದುವೆ ವಯಸ್ಸಿಗೆ ಬಂದರೂ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಹುಡುಗಿ ತನ್ನ ಬದುಕಿಗೆ ಒಂದು ಆಸರೆ ಕಂಡು ಕೊಳ್ಳಲು ಮನಸ್ಸು ಮಾಡಿ ತಾನೇ ವರನನ್ನು ಹುಡುಕಲು ಪ್ರಯತ್ನ ನಡೆಸಿದ್ದ ಕಾರಣಕ್ಕೆ ಅಪವಾದ ಹೊತ್ತುಕೊಂಡು ಕುಟುಂಬದಿಂದ ದೂರವಾಗಿ ಅಪ್ಪನನ್ನು ಕಳೆದುಕೊಂಡು ಸತತ ಐದು ವರ್ಷ ನರಕಯಾತನೆ ಅನುಭವಿಸಿ ಧಾರುಣ ಘಟನೆ ಇದಾಗಿದೆ.
ಹಾಲೇನಹಳ್ಳಿ ಗ್ರಾಮದ ಬೋವಿಕಾಲೋನಿಯ ಗಿರಿಯಭೋವಿ ಹಾಗೂ ತಿಮ್ಮಮ್ಮ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯವಳಾದ ಮಲ್ಲಮ್ಮನಿಗೆ ಮದುವೆಯಾಗಿ ಪತಿಯಿಂದ ಕಳೆದ ಹತ್ತು ವರ್ಷಗಳಿಂದ ದೂರವಾಗಿದ್ದು ಕೂಲಿ ಮಾಡಿಕೊಂಡು ಅಪ್ಪ ಅಮ್ಮನನ್ನು ಸಾಕುತ್ತಾ ತನ್ನ ಮಕ್ಕಳೊಂದಿಗೆ ತವರಿನಲ್ಲಿದ್ದಳು. ಕಿರಿಯ ಪುತ್ರಿ ಸುಶೀಲ ಬಡತನ ಕಾರಣದಿಂದ ಇನ್ನೂ ಮದುವೆಯಾಗದೇ ತಿಪಟೂರು ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಳು. ಇರುವ ಎರಡು ಎಕರೆ ಜಮೀನಿನಲ್ಲಿ ಅಷ್ಟೋ ಇಷ್ಟೋ ಬೇಸಾಯ ಮಾಡಿ ಒಂದೊತ್ತು ಊಟ ಮಾಡುತ್ತಾ ಕಷ್ಟವಾಗಿದ್ದರೂ ನೆಮ್ಮದಿಯಿಂದ ಇದ್ದರು.
ತಿಪಟೂರು ನಗರದಲ್ಲಿ ಗಾರೆ(ಕಟ್ಟಡ)ಕೆಲಸ ಮಾಡುವ ಸುಶೀಲ ಕಳೆದ ಆರು ವರ್ಷಗಳ ಹಿಂದೆ ತನ್ನ ಜೊತೆ ಕೆಲಸ ಮಾಡುವ ಶಾಂತಕುಮಾರ್‌ನನ್ನು ಇಷ್ಟ ಪಟ್ಟು ಮದುವೆಯಾಗಲು ನಿರ್ಧರಿಸಿದಳು. ಈ ವಿಷಯವನ್ನು ಮನೆಗೂ ತಿಳಿಸಿದಳು. ಸಮ್ಮತಿ ಮೇರೆಗೆ ಅವರದ್ದು ಮದುವೆಯೂ ಆಯಿತು. ತಿಪಟೂರಿನ ಗಾಂಧಿನಗರದಲ್ಲಿ ಮನೆ ಮಾಡಿಕೊಂಡು ಇನ್ನೇನು ಸುಖದ ಸಂಸಾರ ನಡೆಸುವ ಹೊಸ್ತಿಲಲ್ಲಿ ನಿಂತಿದ್ದ ಸುಶೀಲಳಿಗೆ ಹುಟ್ಟೂರಿನಲ್ಲಿ ತನ್ನ ಕುಟುಂಬ ಬಿರುಗಾಳಿಗೆ ಸಿಲುಕಿದೆ ಎಂಬುದು ಗೊತ್ತಾಗಲೇ ಇಲ್ಲ. ಅನ್ಯ ಜಾತಿಯವನನ್ನು ಮದುವೆಯಾದ ಕಾರಣ ಬೇರೆಯದೇ ರೂಪ ಪಡೆದಿತ್ತು. ಜಾತಿ ಎಂಬ ವಿಷ ಬೀಜ ಮೊಳಕೆ ಹೊಡೆದು ಹೆಮ್ಮರವಾಗಿ ಆ ಗ್ರಾಮದ ಗುಡಿಗೌಡನ ರೂಪದಲ್ಲಿ ಅಮಾಯಕರಾದ ಅವರ ಕುಟುಂಬದ ಮೇಲೆ ಎರಗಿತ್ತು. ಬೋವಿ ಜನಾಂಗದ ಸುಶೀಲ ತಮಿಳು ಗೌಂಡರ್ ಜಾತಿಗೆ ಸೇರಿದ ಶಾಂತಕುಮಾರ್ ಎಂಬಾತನನ್ನು ಪ್ರೀತಿಸಿ ಮದುವೆ ಮಾಡಿಕೊಂಡ ಕಾರಣಕ್ಕೆ ತಂದೆಯನ್ನು ಬಲಿ ನೀಡಿದ್ದಲ್ಲದೇ ಇಡೀ ಕುಟುಂಬ ಇಂದು ಜೀವಂತ ಶವವಾಗಿರುವ ಆರೋಪಕ್ಕೆ ತುತ್ತಾದಳು.
ನಗರದಲ್ಲೆಲ್ಲೋ ಸುಶೀಲ ಮದುವೆ ಮಾಡಿಕೊಂಡಳು, ಆದರೆ ಇದನ್ನು ಸಹಿಸದ ಗ್ರಾಮದ ಒಂದು ಗುಂಪು ಗುಡಿಗೌಡ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗ್ರಾಮದ ಜನರನ್ನು ಸೇರಿಸಿ ಚಿಕ್ಕಮ್ಮನ ದೇವಾಲಯದ ಬಳಿ ಪಂಚಾಯಿತಿ ಮಾಡಿದರು. ಅನ್ಯ ಜಾತಿಯವನ್ನು ಮದುವೆ ಮಾಡಿಕೊಂಡು ಜಾತಿ ಕೆಟ್ಟ ಕುಟುಂಬವನ್ನು ಸಮಾಜದಿಂದ ಬಹಿಷ್ಕರಿಸಲು ನಿರ್ಧರಿಸಿದರು. ಇಡೀ ಕುಟುಂಬ ಊರು ಬಿಟ್ಟು ಹೋಗಬೇಕೆಂದು ಒತ್ತಾಯ ಹೇರಿದರು. ಇದಕ್ಕೆ ಸಮ್ಮತಿಸದೇ ಅಂಗಲಾಚಿದ ಕುಟುಂಬಕ್ಕೆ ಛೀಮಾರಿ ಹಾಕಿದರು. ಹೀನಾಮಾನವಾಗಿ ಬೈದು ತಳಿಸಿದರು. ಅವರ ಅಹಾಯಕ್ಕೆ ಬಂದ ಅವರ ಸಹೋದರ ಸಂಬಂಧಿಗಳನ್ನೂ ಸೇರಿಸಿ ನಾಯಿಗೆ ಬಡಿದಂತೆ ಬಡಿದರು. ಗ್ರಾಮದಲ್ಲಿ ರಕ್ತದೋಕುಳಿ ನಡೆದು ನಾಯಿಗಳು ನೆಕ್ಕಿದವು. ನೊಂದವರು ದೌರ್ಜನ್ಯದ ವಿರುದ್ಧ ಹೊನ್ನವಳ್ಳಿ ಪೋಲೀಸ್ ಠಾಣೆಗೆ ದೂರು ನೀಡುವ ಮುನ್ನವೇ ಬಡಿದವರೇ ಹೋಗಿ ದೂರು ದಾಖಲಿಸಿದರು. ಎರಡೂ ಕಡೆಯ ದೂರು ದಾಖಲಾಗಿ ಜಗಳ ನ್ಯಾಯಲಯದ ಮೆಟ್ಟಿಲು ಹತ್ತಿತು. ದೌರ್ಜನ್ಯ ಎಸಗಿದ ಗುಡಿಗೌಡನ ಕಡೆಯವರಿಗೆ ಅಪರಾಧ ಸಾಬೀತಾಗಿ ಶಿಕ್ಷೆ ಆಗುತ್ತದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಶೋಷಿತ ಕುಟುಂಬದವರ ಜೊತೆ ನಿಮ್ಮ ತಂಟೆಗೆ ಬರುವುದಿಲ್ಲ, ನೆಮ್ಮದಿಯಾಗಿರಿ ಎಂದು ಮನವೊಲಿಸಿ ರಾಜಿಮಾಡಿಕೊಂಡು ಪ್ರಕರಣ ಮುಕ್ತಾಯ ಗೊಳಿಸಿಕೊಂಡು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರು. ಆದರೆ, ಠಾಣೆಗೆ ದೂರು ನೀಡಿ ನ್ಯಾಯಾಲಯಕ್ಕೆ ಎಳೆದರು ಎಂದು ಮತ್ತಷ್ಟು ಕೆರಳಿದ ಗುಡಿಗೌಡ ಮತ್ತು ಆತನ ಗುಂಪು ಅಮಾಯಕ ಕುಟುಂಬ ಬಲಿ ಹಾಕುವ ತಂತ್ರ ಎಣೆದರು. ಮೊದಲಿಗೆ ಆಮಿಷ ಮತ್ತು ಬೆದರಿಕೆಯ ಮೂಲಕ ಅವರ ಸಹೋದರ ಸಂಬಂಧಿಗಳನ್ನು ಹೊಲೈಸಿಕೊಂಡು ತಮ್ಮ ಕಡೆಗೆ ಸೆಳೆದು ಪುನಃ ಅಮಾಯಕ ಕುಟುಂಬದ ಮೇಲೆ ಬಹಿಷ್ಕಾರ ಮುಂದುವರೆಸಿ, ನರಕ ಹಿಂಸೆ ನೀಡಿದರು. ಬರಬರುತ್ತಾ ಅವರ ಬದುಕು ಜರ್ಜರಿತಗೊಂಡಿತು.

ಗುಡಿಗೌಡನ ಕಟ್ಟಾಜ್ಞೆ : ಗ್ರಾಮದ ನೀರು ಮುಟ್ಟುವಂತಿಲ್ಲ 
ಗುಡಿಗೌಡನ ಆಘೋಷಿತ ಬಹಿಷ್ಕಾರಕ್ಕೊಳಗಾದ ಗಿರಿಯಭೋವಿ ಕುಟುಂಬ ಗ್ರಾಮದಲ್ಲಿ ಯಾವುದೇ ಶುಭ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ಗ್ರಾಮದ ಕೊಳವೆ ಬಾವಿಯಲ್ಲಿ ನೀರು ಹಿಡಿಯುವಂತಿಲ್ಲ. ಗ್ರಾಮ ದೇವತೆ ಚಿಕ್ಕಮ್ಮ ದೇವಾಲಯದ ಬಳಿ ಸುಳಿಯುವಂತಿಲ್ಲ. ಬೇರೆ ಯಾವುದೇ ಮನೆಗೆ ಹೋಗುವಂತಿಲ್ಲ. ಬೇರೆಯವರೂ ಸಹ ಇವರ ಮನೆಗೆ ಬರುವಂತಿಲ್ಲ. ಈ ಕುಟುಂಬದ ಯಾವುದೇ ಕಷ್ಟ ಸುಖಕ್ಕೆ ಯಾರೂ ಸಹಾಯ ಮಾಡುವಂತಿಲ್ಲ. ಗ್ರಾಮದಲ್ಲಿ ಕೂಲಿ ಇಲ್ಲ, ಊಟ ಇಲ್ಲ. ನಾವು ಎನ್ನುವವರೂ ಯಾರೂ ಇಲ್ಲದ ಅತ್ಯಂತ ಶೋಚನೀಯ ಸ್ಥಿತಿ. ಈ ಅನ್ಯಾಯದ ವಿರುದ್ಧ ಯಾರಿಗೂ ದೂರು ನೀಡುವಂತಿಲ್ಲ. ಗೌಡನ ಆಜ್ಞೆ ವಿರುಧ್ಧ ಮುಂದುವರೆದರೆ ಅವರು ಪ್ರಾಣ ಸಹಿತ ಉಳಿಯುವಂತಿಲ್ಲ. ಹಾಗಾಗಿ ತನ್ನದಲ್ಲದ ತಪ್ಪಿಗೆ ಒಂದೇ ಕುಟುಂಬ ಸತತ ಐದು ವರ್ಷಗಳ ಕಾಲ ಗ್ರಾಮದಲ್ಲಿ ಮಾನಸಿಕ ನರಕಯಾತನೆ ಅನುಭವಿಸಿದೆ.

ಚಾಪೆಯಲ್ಲಿ ತಂದೆ ಶವ:
ಮಗಳ ಇಚ್ಚೆಗೆ ಬೆಲೆ ಕೊಟ್ಟು ಸಂತೋಷವಾಗಿರು ಎಂದು ಹರಸಿದ್ದಕ್ಕೆ ಗ್ರಾಮಸ್ಥರು ನೀಡಿದ ದೌರ್ಜನ್ಯ ಮತ್ತು ಕಿರುಕುಳದಿಂದ ಚಿಂತೆಗೆ ಬಿದ್ದು ಹಾಸಿಗೆ ಹಿಡಿದ ಗಿರಿಯ ಭೋವಿ ಕಳೆದ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಶವ ಸಂಸ್ಕಾರಕ್ಕೆ ಯಾರೂ ಬರದೇ ಸಹಾಯ ಕೇಳುತ್ತಾರೆಂದು ಎಲ್ಲರೂ ತಮ್ಮ ಮನೆಯ ಬಾಗಿಲು ಮುಚ್ಚಿದ್ದರು. ಸ್ವಂತ ಬಂಧುಗಳೂ ಸಹ ಗೌಡನಿಗೆ ಹೆದರಿ, ಮುಂದೆ ಬರಲಿಲ್ಲ. ಗ್ರಾಮದಿಂದ ಬಹಿಷ್ಕರಿಸಲ್ಪಟ್ಟಿದ್ದ ಸುಶೀಲ ತಂದೆ ಸಾವನ್ನು ನೋಡಲು ಗ್ರಾಮಕ್ಕೆ ಬಂದಿದ್ದಳು. ರಾತ್ರಿಯಾದರೂ ಯಾವೊಬ್ಬ ಗಂಡಸೂ ಬರದಿದ್ದರಿಂದ ಗಿರಿಯಭೋವಿಯ ಇಬ್ಬರು ಪುತ್ರಿಯರಾದ ಮಲ್ಲಮ್ಮ ಮತ್ತು ಸುಶೀಲ ತಂದೆಯ ಶವವನ್ನು ಚಾಪೆಯಲ್ಲಿ ಸುತ್ತಿ, ಇಬ್ಬರೇ ಹೆಗಲ ಮೇಲೆ ಹೊತ್ತುಕೊಂಡು ಹೊಲಕ್ಕೆ ನಡೆದಿದ್ದಾರೆ. ಅಲ್ಲಿ ಮಧ್ಯರಾತ್ರಿಯವರೆಗೂ ಗುಂಡಿ ತೆಗೆದು ತಂದೆಯ ಶವವನ್ನು ಹೂಳಿದ ಅವರು ನಿನ್ನ ಸಮಾಜ ನಿನಗೆ ಕೊಟ್ಟ ಬಳುವಳಿ ಇದು ಎಂದು ಕಣ್ಣೀರಧಾರೆ ಹರಿಸಿದ್ದಾರೆ.


ಮಕ್ಕಳ ಮದುವೆ ಮಾಡುವಂತಿಲ್ಲ: 
ಸ್ವಂತ ಕುಲದವರೇ ಸಮಾಜದಿಂದ ಬಹಿಷ್ಕರಿಸಿ, ನೀಡ ಬಾರದ ಹಿಂಸೆ ನೀಡಿದರೆ ನಾವು ಯಾರ ಮೊರೆ ಹೋಗಬೇಕು? ನನ್ನ ಬದುಕನ್ನು ನಾನು ಹುಡುಕಿಕೊಂಡು ಯಾರಿಗೂ ಹೊರೆಯಾಗದಂತೆ, ಕುಟುಂಬಕ್ಕೂ ಸಹ ಸ್ವತಂತ್ರವಾಗಿ ಬದುಕುತ್ತಿದ್ದರೂ ಬಿಡದ ನಮ್ಮ ಜನ ಜಾತಿ, ಧರ್ಮ ಹಾಗೂ ಸಂಪ್ರದಾಯ ನೆಪದಲ್ಲಿ ಬೆನ್ನು ಬಿಡದ ಬೇತಾಳದಂತೆ ಏನೂ ತಪ್ಪು ಮಾಡದ ನಮ್ಮ ಕುಟುಂಬವನ್ನು ಜೀವಂತವಾಗಿ ಸುಡಲು ಹೊರಟಿರುವುದು ಯಾವ ನ್ಯಾಯ. ನಮಗೆ ಬದುಕಲು ಹಕ್ಕಿಲ್ಲವೇ? ಇಷ್ಟು ಮಾಡಿದ ಮೇಲೆ ಇನ್ನೂ ಬದುಕಿ ಉಳಿದು ಏನು ಸಾರ್ಥಕ ಎಂದು ಅಸಾಯಕ ಮಹಿಳೆ ಸುಶೀಲಳ ಆಕ್ರಂದನವಾದರೆ ಇತ್ತಾ ಗ್ರಾಮದಲ್ಲಿ ಈ ನಿರ್ಭಂದದ ನಡುವೆ ಬೆಳೆದು ನಿಂತಿರುವ ಇಬ್ಬರು ಮಕ್ಕಳ ಮದುವೆ ಮಾಡುವುದು ಹೇಗೆಂದು ಮಲ್ಲಮ್ಮ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ.
ಘಟನೆ ಕಾರಣದಿಂದ ಚಿಂತೆಗೀಡಾಗಿ ನರಳಿ ಸತ್ತ ನಂತರ ತಾಯಿ ತಿಮ್ಮಮ್ಮನೊಂದಿಗೆ ಜೀವಿಸುತ್ತಿರುವ ಮಲ್ಲಮ್ಮನಿಗೆ ಒಂದು ಹೆಣ್ಣು ಒಂದು ಗಂಡು. ಮಗ ಮಂಜುನಾಥ ೧೮ ವರ್ಷ ಹಾಗೂ ಮಗಳು ಶಂಕರಮ್ಮ ೨೦ ವರ್ಷ. ಮಗಳು ಬೆಳೆದು ನಿಂತಿದ್ದರೂ ಮದುವೆ ಮಾಡಲು ಸಾಧ್ಯವಾಗಿಲ್ಲ.. ಗ್ರಾಮದ ಮುಖಂಡ ಗುಡಿಗೌಡ ಎನಿಸಿಕೊಂಡವ ಪರೋಕ್ಷವಾಗಿ ಇಡೀ ಭೋವಿ ಜನಾಂಗಕ್ಕೆ ಮಾಹಿತಿ ನೀಡಿರುವುದರಿಂದ ಈತನ ಅನುಮತಿ ಪಡೆಯದ ಹೊರತು ಯಾವುದೇ ಊರಿನವರೂ ಈ ಕುಟುಂಬದ ಸಂಬಂಧ ಬೆಳೆಸುವುದೂ ಇರಲಿ, ಹತ್ತಿರ ಸೇರಿಸುವುದೂ ಇಲ್ಲ.
ನೀವು ಹೇಳಿದಂತೆ ನಾವು ಪಾಲಿಸಿದ್ದೇವೆ. ಇದರಿಂದ ಮನೆಗೆ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡಿದ್ದೇವೆ. ಅಮಾಯಕರಾದ ಅನಕ್ಷರಸ್ಥರಾದ ನಾವು ಸತತ ಆರು ವರ್ಷದಿಂದ ಸಾಕಷ್ಟು ಮಾನಸಿಕ ಹಿಂಸೆಯನ್ನು ದೈಹಿಕ ಹಿಂಸೆಯನ್ನು ಪಟ್ಟಿದ್ದೇವೆ. ಸಾಕು, ಕ್ಷಮಿಸಿ. ಇನ್ನಾದರೂ ನಮ್ಮ ಮೇಲೆ ಕರುಣೆ ತೋರಿ ಎಲ್ಲರಂತೆ ಬದುಕಲು ನೀಡಿ ಎಂದು ನೊಂದ ಕುಟುಂಬ ಪರಿಪರಿಯಾಗಿ ಕಲ್ಲುಕರಗುವಂತೆ ಗೋಳಿಟ್ಟರೂ ಕರಗುವ ಮನಷ್ಯತ್ವ ಮನಸ್ಸುಗಳು ಅಲ್ಲಿರಲಿಲ್ಲ. ಕಂಡ ಕಂಡವರ ಬಳಿ ಅಂಗಲಾಚಿ ಗ್ರಾಮಸ್ಥರನ್ನು ಸೇರಿಸಿ ನ್ಯಾಯ ಮಾಡಿಸಿ, ಮಕ್ಕಳ ಮದುವೆಗೆ ಸಹಕರಿಸಿ ಎಂದು ಕೇಳಲು ಹೋದರೆ ತಪ್ಪಿಗೆ ಐವತ್ತು ಸಾವಿರ ದಂಡ ನೀಡಬೇಕು ಎನ್ನುವ ಮಾನದಂಡ ಮುಂದಿಟ್ಟಿದ್ದಾರೆ. ಕೆಟ್ಟ ಹಸಿವನ್ನು ಹಿಂಗಿಸಿಕೊಂಡು ಬದುಕುವುದೇ ಕಷ್ಟ ಎನ್ನುವಾಗ ಮಕ್ಕಳನ್ನು ಓದಿಸದೇ ಚಿಕ್ಕ ವಯಸ್ಸಿಗೇ ಕೆಲಸಕ್ಕೆ ಅಟ್ಟಿದ್ದು, ಗೊತ್ತಾಗದಂತೆ ಬೆಳೆದು ನಿಂತ ಮಕ್ಕಳ ಮದುವೆ ಒಂದು ದೊಡ್ಡ ಸಮಸ್ಯೆಯಾಗಿದೆ ನಿಂತಿರುವಾಗ ದಿಕ್ಕಿಲ್ಲದ ನಾವು ದಂಡ ಕಟ್ಟಲು ಸಾಧ್ಯವೇ ಎಂದು ಗೋಳಿಡುವ ಕುಟುಂಬದ ಕಥೆ ನಮ್ಮ ಕಣ್ಣುಗಳಲ್ಲಿ ನೀರು ಭರಿಸುತ್ತವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಈ ಕುಟಂಬವನ್ನು ರಕ್ಷಿಸುವವರು ಯಾರು ಎಂಬ ಪ್ರಶ್ನೆ ನಮ್ಮ ಮುಂದಿದೆ.

ಮತ್ತೊಂದು ಕುಟುಂಬ ಬೀದಿಗೆ:
ಅನ್ಯ ಜಾತಿಯವನೊಂದಿಗೆ ಪ್ರೇಮ ವಿವಾಹಕ್ಕೆ ಸಹಕಾರ ನೀಡದ ಕಾರಣಕ್ಕೆ ಒಂದು ಕುಟುಂಬವನ್ನ ಸಮೂದಾಯದಿಂದ ಬಹಿಷ್ಕಾರ ಮಾಡಿರುವ ಸುದ್ದಿ ಪ್ರಕಟವಾದ ಬೆನ್ನಲ್ಲೆ ಅದೇ ಗ್ರಾಮದಲ್ಲಿ ಮತ್ತೊಂದು ಇದೇ ತೆರನಾದ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಹಾಲೇನಹಳ್ಳಿಯ ಭೋವಿಕಾಲೋನಿಯ ಭೋವಿ ಜನಾಂಗದ ಗಿರಿಯಭೋವಿ ಹಾಗೂ ತಿಮ್ಮಮ್ಮ ಕುಟುಂಬಕ್ಕೆ ಅಲ್ಲಿನ ಜನಾಂಗದ ಪ್ರಮುಖ ಮಾಡುತ್ತಿರುವ ಶೋಷಣೆಯಂತೆ ಮತ್ತೊಂದು ಕುಟುಂಬಕ್ಕೂ ಇದೇ ರೀತಿಯ ಅಘೋಷಿತ ಬಹಿಷ್ಕಾರ ಹಾಕಿ ಸಮಾಜದಿಂದ ದೂರ ಇಟ್ಟಿರುವ ಬಗ್ಗೆ ನೊಂದ ಗೌರಮ್ಮ ಮಾಧ್ಯಮದವರ ಮುಂದೆ ಅಳಲೊತ್ತುಕೊಂಡಿದ್ದಾಳೆ.
ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಗೌರಮ್ಮ ತಿಪಟೂರು ನಗರಕ್ಕೆ ಬಂದು ಕಟ್ಟಡ ಕಾಮಗಾರಿ ಕೆಲಸದಲ್ಲಿ ಹಗಲಿಡಿ ದಿನಗೂಲಿಯಾಗಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇದು ಬಿಟ್ಟರೆ ಅವರಿಗೆ ಬದುಕಲು ಬೇರೆ ಯಾವುದೇ ಮಾರ್ಗವಿಲ್ಲ. ಆಕೆ ಪರಿಶಿಷ್ಟ ಜಾತಿಯವರ ಬಳಿ ಕೆಲಸಕ್ಕೆ ಹೋಗುತ್ತಾಳೆಂದು, ಹಣ ವ್ಯವಹಾರ ಮಾಡುತ್ತಾ ಅವರನ್ನು ಮನೆಯ ಒಳಗೆ ಬಿಟ್ಟುಕೊಂಡು ಸಂಬಂಧ ಇಟ್ಟುಕೊಂಡಿದ್ದಾಳೆಂದು ಆರೋಪಿಸಿರುವ ಗ್ರಾಮದ ಪ್ರಮುಖ ಸಿದ್ದರಾಮಭೋವಿ(ಗುಡಿಗೌಡ) ಅವರನ್ನೂ ಸಹ ಸಮಾಜದಿಂದ ಬಹಿಷ್ಕರಿಸಿದ್ದಾರೆ.
ಅವರೂ ಸಹ ಎಲ್ಲರಂತೆ ಗ್ರಾಮದ ಸಮೂದಾಯದ ಜನರ ಜೊತೆ ಬೆರೆಯುವಂತಿಲ್ಲ. ಕೊಳವೆ ಬಾವಿಯಲ್ಲಿ ನೀರು ಹಿಡಿದು ಕುಡಿಯುವಂತಿಲ್ಲ, ಯಾವುದೇ ಶುಭ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ, ಬೇರೆಯವರ ಮನೆಗೆ ಹೋಗಿ ಬರುವಂತಿಲ್ಲ, ಕೂಲಿ ಕೆಲಸ ನೀಡುವಂತಿಲ್ಲ ಅಲ್ಲದೇ ದೇವಾಲಯದ ಬಳಿ ಎಡತಾಕುವಂತಿಲ್ಲ. ಹಾಗೇನಾದರೂ ಮಾಡಿದರೆ ಎಡ ಮಟ್ಟೆ ಏಟು ಕೋಡುತ್ತಾರೆ ಎಂದು ಆಕೆ ತನ್ನ ಕುಟುಂಬಕ್ಕಾಗಿರುವ ಅನ್ಯಾಯದಿಂದ ಬೇಸತ್ತು ಬಿಕ್ಕಿ ಬಿಕ್ಕಿ ಅಳುತ್ತಾರೆ.
ತವರಿನಲ್ಲಿ ಮಗಳ ಮದುವೆ:
ಗುಡಿಗೌಡ ಮತ್ತು ಆತನ ಕೆಲವರು ಬೆಂಬಲಿಗರು ಇಡೀ ಗ್ರಾಮವನ್ನೇ ತಮ್ಮ ಹಿಡಿತಕ್ಕೆ ತಂದು ಕೊಂಡು ಸರ್ವಾಧಿಕಾರಿಯಾಗಿದ್ದಾನೆ. ಜನರ ಸಹಕಾರದಿಂದ ಗ್ರಾಮದಲ್ಲಿ ದೇವಾಲಯ ಒಂದನ್ನು ಕಟ್ಟಿಸಿರುವ ಆತ ಅದರ ನೆಪದಲ್ಲಿ ಕಟುಸಂಪ್ರದಾಯ ಆಚರಣೆ ಜಾರಿಗೆ ತಂದಿದ್ದಾನೆ. ಅಜ್ಞಾನ ಮತ್ತು ಮೂಡ ನಂಬಿಕೆಯ ಮೊಟ್ಟೆಯಾಗಿರುವ ಆತ ಆತನ ಎಲ್ಲಾ ಅಭಿಪ್ರಾಯಗಳನ್ನು ಆದೇಶಗಳ ಮೂಲಕ ಅಮಾಯಕ ಜನರ ಮೇಲೆ ಹೇರುತ್ತಾನೆ. ಗುಂಪು ಕಟ್ಟಿ ದ್ವನಿ ಎತ್ತುವರ ಮೇಲೆ ಬೀಳುವುದರಿಂದ ಅತಿಯಾಗಿ ಹೆದರಿರುವ ಜನರಿಗೆ ಈತನ ಮಾತೇ ವೇದವಾಕ್ಯ. 
ಇಂತಹ ವ್ಯಕ್ತಿ ಮತ್ತು ಜನರ ಮಧ್ಯೆ ತನ್ನ ಮಗಳ ಮದುವೆ ಮಾಡಲು ಸಾಧ್ಯವಾಗದ ಗೌರಮ್ಮ ತನ್ನ ತವರಿನಲ್ಲಿ ಮಗಳ ಮದುವೆ ಮಾಡಿ ಋಣ ತೀರಿಸಿಕೊಂಡಿದ್ದಾಳೆ. ಗಂಡನ ಸ್ಥಿತಿ ಸರಿಯಿಲ್ಲದೇ ಅಳಿಯ ಮತ್ತು ಮಗಳ ಜೊತೆ ಜೀವಿಸುತ್ತಿರುವ ಗೌರಮ್ಮ ಗ್ರಾಮದಲ್ಲಿ ಇದು ಸತ್ತಂತಿದ್ದಳು. ಗಿರಿಯಪ್ಪ ಭೋವಿ ಪ್ರಕರಣ ಮಾಧ್ಯಮದಲ್ಲಿ ಪ್ರಕಟವಾಗಿ, ಅಧಿಕಾರಿಗಳು, ಇತರೆ ಪತ್ರಕರ್ತ ಮಿತ್ರರು ಸ್ಥಳಕ್ಕೆ ಬೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನದ ಜೊತೆಗೆ ನ್ಯಾಯ ಮತ್ತು ರಕ್ಷಣೆಯ ಭರವಸೆ ನೀಡಿದ್ದರಿಂದ ದೌರ್ಜನ್ಯ ಮತ್ತು ದಬ್ಬಾಳಿಕೆಯಲ್ಲಿ ಅಷ್ಟು ದಿನ ಜರ್ಜರಿತಳಾಗಿದ್ದ ಗೌರಮ್ಮ ಒಮ್ಮೆಲೆ ಸಿಡಿದೆದ್ದು ಎಲ್ಲವನ್ನೂ ತೆರದಿಟ್ಟಳು. ತನ್ನ ಕುಟುಂಬದ ಮೇಲೆ ಆಗಿರುವ ಘೋರ ಅನ್ಯಾಯಕ್ಕೆ ನ್ಯಾಯ ಕೋರಿದಳು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬೇಟಿ:
ಮಾದ್ಯಮದಲ್ಲಿ ಸುದ್ದಿ ಬಂದ ವಿಚಾರ ತಿಳಿದ ತಕ್ಷಣ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್.ಜೆ.ಆದಿಲಕ್ಷ್ಮಿ ಗ್ರಾಮಕ್ಕೆ ಬೇಟಿ ಪರಿಸ್ಥಿತಿಯ ಬಗ್ಗೆ ವಿವರ ಪಡೆದರು. ಪತ್ರಕರ್ತರೊಂದಿಗೆ ಗ್ರಾಮದ ಮುಖಂಡ ಸಿದ್ದರಾಮಭೋವಿಯನ್ನು ಮತ್ತಿತರನ್ನು ಬೇಟಿ ಮಾಡಿ ಅಮಾಯಕರ ಶೋಷಣೆಯ ಆರೋಪದ ಬಗ್ಗೆ ಪ್ರಶ್ನಿಸಿದರು. ಗ್ರಾಮದಲ್ಲಿ ನಡೆದಿರುವ ಘಟನೆಗಳ ವಿವರ ಪಡೆದ ಅವರು ಸಂಪೂರ್ಣ ವರದಿಯನ್ನು ಸಿದ್ಧ ಪಡಿಸಿ, ಸರಕಾರಕ್ಕೆ ಸಲ್ಲಿಸುವ ಭರವಸೆ ನೀಡಿದರು.
ಎಲ್ಲರಿಗೂ ಬದುಕುವ ಹಕ್ಕಿದೆ. ಸಮಾಜದಿಂದ ಅಥವಾ ಗ್ರಾಮದಿಂದ ಬಹಿಷ್ಕರಿಸುವ ಯಾವ ಅಧಿಕಾರ ಮತ್ತು ಹಕ್ಕು ನಿಮಗೆ ಇಲ್ಲ. ಇದು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಅಪರಾಧ ಸಾಬೀತಾದರೆ ಕಾನೂನಿನ ಪ್ರಕಾರ ಘೋರ ಶಿಕ್ಷೆಯಾಗುತ್ತದೆ ಎಂದು ಸಿದ್ದರಾಮಭೋವಿಗೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಪ್ರತರ್ಕರು ಆತನಿಗೆ ಸಾಕಷ್ಟು ಬುದ್ದಿ ಹೇಳಿ, ಮಾನವಿಯತೆಯಿಂದ ವರ್ತಿಸಬೇಕು. ಮಹಿಳೆಯರ ಮೇಲೆ ದೌರ್ಜನ್ಯ ಮಾಡಬಾರದು. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ತಿಳಿ ಹೇಳಿದರು.


ಮಲೀನದಿಂದ ಗ್ರಾಮ ದೇವತೆಗೆ ಮುನಿಸು:
ಮಲ್ಲಮ್ಮ ಮತ್ತು ಗೌರಮ್ಮ ಇಬ್ಬರ ಕುಟುಂಬ ನಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿ ಮತ್ತು ಜಾತಿಗೆ ಕುಂದು ತರುವ ಕೆಲಸ ಮಾಡಿದ್ದಾರೆ. ಅನ್ಯ ಜಾತಿಯವರ ಜೊತೆ ಸಂಪರ್ಕ ಮಾಡಿ ಮಲೀನ ಮಾಡಿದ್ದಾರೆ. ಗ್ರಾಮ ದೇವತೆ ಚಿಕ್ಕಮ್ಮ ಅಪವಿತ್ರಗೊಂಡು ಮುನಿಸಿಕೊಂಡಿದ್ದಾಳೆ. ಇದರಿಂದ ಗ್ರಾಮದಲ್ಲಿ ನಾನಾ ತೊಂದರೆಗಳು ನಡೆದಿವೆ. ಆದ್ದರಿಂದ ಗ್ರಾಮದ ಕುಲಭಾಂಧವರು ಅವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ನೆಪ ಮಾತ್ರ ಎಂದು ಹೇಳುವ ಗುಡಿಗೌಡ ಸಿದ್ದರಾಮಭೋವಿ ಕಾನೂನಿಗೆ ಹೆದರಿ ಇಲ್ಲಿ ಯಾವುದೇ ಬಹಿಷ್ಕಾರ ಹಾಕಿಲ್ಲ. ಅವರ ತಪ್ಪಿಗೆ ನಾವು ಏನು ಮಾಡುವುದು ಎಂದು ಮಾರ್ಮಿಕವಾಗಿ ಉತ್ತರಿಸುತ್ತಾನೆ.
ಮಾಡಿದ ತಪ್ಪಿಗೆ ತಪ್ಪುಕಾಣಿಕೆ ನೀಡಿ, ಪುಣ್ಯ ಮಾಡಿಸಿಕೊಂಡಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. 

ಗ್ರಾಮದ ಜನರೆಲ್ಲಾ ಒಂದಾಗಿ ಹಣ ಮತ್ತು ಶ್ರಮದ ಮೂಲಕ
ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ್ದರೆ, ಈ ಎರಡು ಕುಟುಂಬ ಯಾವುದೇ ಬಿಡಿಗಾಸು ನೀಡದೇ ಹತ್ತಿರ ಬಂದಿಲ್ಲ(ಹೊರಗಿಟ್ಟರೆ ಹತ್ತಿರ ಬರುವುದು ಹೇಗೆ). ಆ ಕಾರಣದಿಂದ ಗ್ರಾಮದ ಜನರ ಇವರ ತಂಟೆಗೆ ಹೋಗುವುದಿಲ್ಲ. ಗ್ರಾಮದ ಜನರು ತಲೆ ಎತ್ತಿಕೊಂಡು ತಿರುಗುವಂತಿಲ್ಲ. ಬೇರೆ ಕಡೆ ಸಂಬಂಧ ಬೆಸೆಯುವಂತಿಲ್ಲ ಎಂದು ತನ್ನದೇ ಆದ ರೀತಿಯಲ್ಲಿ ಕಥೆ ಎಣೆಯುತ್ತಾರೆ.
ಮೇಲ್ಜಾತಿಯವರು ದಲಿತರನ್ನು ಶೋಷಿಸುತ್ತಾರೆ, ಅವರ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದು ಒಂದು ಕಡೆ ದಲಿತ ಸಂಘಟನೆಗಳು ಬೊಬ್ಭೆ ಹೊಡೆಯುತ್ತಾ ಬೀದಿಗಿಳಿದು ಅರೆ ಬೆತ್ತಲೆ ಮೆರವಣಿಗೆ ಮಾಡಿ ನ್ಯಾಯ ಮತ್ತು ರಕ್ಷಣೆ ಕೋರುತ್ತಿದ್ದರೆ, ಮತ್ತೊಂದು ಕಡೆ ದಲಿತರೇ ದಲಿತರನ್ನು ಅಮಾನವೀಯವಾಗಿ ಶೋಷಿಸುತ್ತಾರೆ ಎಂಬ ಸತ್ಯ ಪ್ರಥಮ ಬಾರಿಗೆ ಬಹಿರಂಗಗೊಂಡಿದೆ. ದಲಿತ ಸಮೂದಾಯಗಳು ಸಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕಿಳಿಯುತ್ತಿರುವ ಸಂದರ್ಭದಲ್ಲೆ ಕನ್ನಡಿಯೊಳಗಿನ ಗಂಟು ಅವರಿಗೇ ಕಾಣದಾಗಿದೆ. ಅನ್ಯ ಜಾತಿಯವರ ದಬ್ಬಾಳಿಕೆಗಿಂಥ ಜಾತಿ ಜಾತಿಯೊಳಗಿನ ಸಂಘರ್ಷ ಬಾರೀ ಅಪಾಯವಾಗಿದ್ದು, ಸಂಘಟನೆಗಳು ಮೊದಲು ಅವುಗಳ ನಿಯಂತ್ರಣ ಮಾಡಬೇಕಿದೆ.

Courtesy : Tiptur Krishna

No comments:

Post a Comment

html