ಬುಧವಾರ - ಏಪ್ರಿಲ್ -20-2011
ಹಾಸನ, ಎ.19: ಒಳ ಮೀಸಲಾತಿ ಕುರಿತಂತೆ ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರಕಾರ ಪಡೆದು ಅನುಮೋದನೆಗೆ ಈ ತಿಂಗಳಲ್ಲಿಯೇ ಕೇಂದ್ರ ಸರಕಾರಕ್ಕೆ ಕಳುಹಿಸಬೇಕೆಂದು ಒತ್ತಾಯಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಕರ್ತರು ಸೋಮವಾರ ಹಾಸನದಲ್ಲಿ ಪ್ರತಿಭಟನೆ ನಡೆಸಿದರು.ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಕರ್ತರು ಸರಕಾರಕ್ಕೆ ವರದಿ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ಆಯೋಗದ ವಿರುದ್ಧ ಘೋಷಣೆ ಕೂಗಿದರು.
ಒಳ ಮೀಸಲಾತಿಗಾಗಿ ಮಾದಿಗ ದಂಡೋರ ಚಳವಳಿ ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎ.ಜೆ.ಸದಾಶಿವ ಆಯೋಗವನ್ನು ನೇಮಕ ಮಾಡಲಾಗಿತ್ತು. ಆದರೆ ಜಾತಿ ಗಣತಿಯನ್ನು ವಿಳಂಬವಾಗಿ ಮಾಡುವ ಮೂಲಕ ರಾಜ್ಯ ಸರಕಾರಕ್ಕೆ ವರದಿಯನ್ನು ಇನ್ನೂ ಸಲ್ಲಿಸಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.ಈ ಹಿನ್ನೆಲೆಯಲ್ಲಿ ಸರಕಾರ ಕೂಡಲೇ ಆಯೋಗದ ವರದಿಯನ್ನು ಪಡೆದು ಅನುಮೋದನೆಗಾಗಿ ಈ ತಿಂಗಳಲ್ಲೇ ಕೇಂದ್ರ ಸರಕಾರಕ್ಕೆ ಕಳುಹಿಸಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.
ಹಾಸನದ ಸರಕಾರಿ ಶಾಲೆಯ ಬಳಿ ಇರುವ ನಿವೇಶನದಲ್ಲಿ ಡಾ.ಬಾಬು ಜಗಜ್ಜೀವನ್‌ರಾಮ್ ಭವನ ನಿರ್ಮಾಣ ಮಾಡುವುದರ ಜೊತೆಗೆ, ನಗರದಲ್ಲಿ ಅವರ ಪುತ್ಥಳಿಯನ್ನು ಸ್ಥಾಪಿಸಬೇಕು. ಅರಕಲಗೂಡು ತಾಲೂಕಿನ ಕೆರಗೋಡು ಗ್ರಾಮದಲ್ಲಿರುವ ಮಾದಿಗ ಸಮುದಾಯದ ಕುಟುಂಬಗಳಿಗೆ 2 ಎಕರೆ ಭೂಮಿ, ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಮತ್ತು ಮೂಲ ಸೌಕರ್ಯ ಒದಗಿಸಬೇಕು. ಅಲ್ಲದೇ ಮಾದಿಗ ಸಮುದಾಯದ ಶ್ರೀ ಆದಿ ಜಂಭಾವ ಮಹಾ ಸಂಸ್ಥಾನ ಮಠದ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಭಾಗವಹಿಸಿದ್ದರು.
No comments:
Post a Comment