ಸೋಮವಾರ - ಮೇ -09-2011
ಹಾಸನ, ಮೇ 8: ಅಂಬೇಡ್ಕರ್ ಒಬ್ಬ ಆಧ್ಯಾತ್ಮ ನಾಯಕನೇ ಹೊರತು ರಾಜಕೀಯ ನಾಯಕನಲ್ಲ. ರಾಜಕೀಯ ಸಾಧನೆಗೆ ಅಂಬೇಡ್ಕರ್ ಹೆಸರು ಬಳಕೆ ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮನವಿ ಮಾಡಿದ್ದಾರೆ.
ಹಾಸನದಲ್ಲಿ ದಲಿತ ಸಂಘಟನೆಗಳ, ನೌಕರರ ಮತ್ತು ವಿದ್ಯಾರ್ಥಿಗಳ ಒಕ್ಕೂಟ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಅಂಬೇಡ್ಕರ್‌ರ 120ನೆ ಜನ್ಮದಿನ ಮತ್ತು ದಲಿತರ ಐಕ್ಯತಾ ದಿನ ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಶ್ರೀನಿವಾಸ್ ಪ್ರಸಾದ್, ಅಂಬೇಡ್ಕರ್ ಪ್ರತಿಯೊ ಬ್ಬರಿಗೂ ಆತ್ಮಗೌರವ ತಂದುಕೊಂಡ ಮಹಾನ್ ಮಾನವತಾವಾದಿ ಎಂದು ಪ್ರತಿಪಾದಿಸಿದರು.
ಆದರೆ ಅಂಬೇಡ್ಕರ್ ಅವರ ಹೆಸರು ಬಳಕೆ ಮಾಡಿಕೊಂಡು ರಾಜಕಾರಣ ಮಾಡಲು ಯಾರೊಬ್ಬರೂ ಮುಂದಾಗಬಾರದು. ಅವರನ್ನು ಆಧ್ಯಾತ್ಮಿಕ ಗುರುವನ್ನಾಗಿ ಸ್ವೀಕರಿಸಿ, ತತ್ವಾದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
ಅಸ್ಪಶ್ಯತೆಯ ನೋವನ್ನು ಅನುಭವಿಸಿ ಛಲ ಬಿಡದೆ ಶಿಕ್ಷಣ ಪಡೆದು ದಲಿತರ ಏಳಿಗೆಗೆ ಶ್ರಮಿಸಿ ದ್ದಲ್ಲದೇ ಪ್ರಪಂಚಕ್ಕೆ ಮಾದರಿಯಾದ ಸಂವಿಧಾನವನ್ನು ನೀಡಿದ್ದಾರೆ. ಅವರನ್ನು ದಲಿತರು ಮಾತ್ರವಲ್ಲ ಪ್ರತಿಯೊಬ್ಬ ಭಾರತೀಯನೂ ಸ್ಮರಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಸ್ಫೂರ್ತಿಧಾಮದ ಮಹಾವನ ಬೌದ್ಧವಿಹಾರದ ಬಂತೆ ಬೋಧಿದತ್ತ, ದಲಿತರು ಸಾಂಸ್ಕೃತಿಕವಾಗಿ ಬದಲಾವಣೆ ಆಗಬೇಕಿದೆ ಎಂದು ಪ್ರತಿಪಾದಿಸಿದರು.
ಬಡತನದಲ್ಲಿ ಸಿಲುಕಿರುವ ದಲಿತರು ಹಬ್ಬ -ಹರಿದಿನಗಳ ಹೆಸರಿನಲ್ಲಿ ಸಾವಿರಾರು ರೂ. ವೆಚ್ಚ ಮಾಡಿ ಸಾಲಗಾರರಾಗುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಿ ಬೌದ್ಧ ಧರ್ಮದ ತತ್ವಗಳನ್ನು ಪಾಲಿಸುವ ಮೂಲಕ ನೆಮ್ಮದಿಯ ಬದುಕು ಸಾಗಿರುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಎಂಜಿನಿಯರ್ ಎನ್.ಎಚ್.ಕಾಂತರಾಜು ವಹಿಸಿ ದ್ದರು. ಶಾಸಕ ಎಚ್.ಕೆ.ಕುಮಾರಸ್ವಾಮಿ, ದಲಿತ ಚಿಂತಕ ಪ್ರೊ.ಎಚ್.ಎಂ.ರುದ್ರಸ್ವಾಮಿ, ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜಿ.ಸೋಮಶೇಖರ್, ದಲಿತ ಮುಖಂಡರಾದ ಡಿ.ಸಿ.ಸಣ್ಣಸ್ವಾಮಿ, ಕೃಷ್ಣದಾಸ್, ಕೆ.ಈರಪ್ಪ, ಜಯರಾಂ, ಎಚ್.ಕೆ.ಸಂದೇಶ್, ಮಾದಿಗ ದಂಡೋರ ಸಮಿ ತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ್, ವಕೀಲ ಕೆ.ಟಿ.ಮಂಜಯ್ಯ, ಅರೇಹಳ್ಳಿರಾಜು, ನಿರ್ವಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಅಂಬೇಡ್ಕರ್ ಭಾವಚಿತ್ರದೊಂದಿಗೆ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಮೆರವಣಿಗೆ ನಡೆಸಿದರು. ಕಲಾ ತಂಡಗ ಳೊಂದಿಗೆ ಮೆರವಣಿಗೆ ನಡೆಸಿದ ನಂತರ ಜಿಲ್ಲಾಧಿ ಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಮಾಲಾರ್ಪಣೆ ಮಾಡಿದರು.
No comments:
Post a Comment