ತುಮಕೂರು, ಜೂ.30: ಚಿಕ್ಕನಾಯಕನ ಹಳ್ಳಿ ತಾಲೂಕು ಗೋಪಾಲಪುರದಲ್ಲಿ ದಲಿತ ಮಹಿಳೆಯನ್ನು ಗ್ರಾಮಸ್ಥರು ಸೇರಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಮಾದಿಗ ದಂಡೋರದ ನೇತೃತ್ವದಲ್ಲಿ ಹತ್ತಾರು ದಲಿತ ಸಂಘಟನೆಗಳು ಇಂದು ನಗರದ ಟೌನ್‌ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.
ಅಂತರಜಾತಿಯ ವಿವಾಹವಾಗಿದ್ದ ದಲಿತ ಮಹಿಳೆ ಹೊನ್ನಮ್ಮಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟಾಚಾರಕ್ಕೆ ಕೂಲಿಗಾಗಿ ಬಂದಿದ್ದ ಚೆನ್ನರಾಯಪಟ್ಟಣದ ವ್ಯಕ್ತಿಗಳನ್ನು ಬಂಧಿಸಿರುವುದು ಸರಿಯಾದ ಕ್ರಮವಲ್ಲ. ಇದೊಂದು ಕಣ್ಣೊರೆಸುವ ತಂತ್ರವಾಗಿದೆ. ಕೂಡಲೇ ನಿಜವಾದ ಆರೋಪಿಗಳನ್ನು ಬಂಧಿಸಬೇಕು ಹಾಗೂ ಮೃತ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಬೇಕು. ತನಗೆ ಜೀವ ಭಯವಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ಮಹಿಳೆಯ ಕೊಲೆಗೆ ಪರೋಕ್ಷವಾಗಿ ಕಾರಣರಾದ ಪೊಲೀಸರ ವಿರುದ್ಧವೂ ಎಫ್‌ಐಆರ್ ದಾಖಲಿಸಬೇಕೆಂದು ಪ್ರತಿಭಟನೆಯಲ್ಲಿ ದಲಿತ ಮುಖಂಡರು ಒತ್ತಾಯಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯ, ದಲಿತ ಮಹಿಳೆಯರ ಮೇಲೆ ಅತ್ಯಾ ಚಾರ ಪ್ರಕರಣಗಳು ನಡೆಯುತ್ತಿವೆ. ಚಿತ್ರದುರ್ಗದಲ್ಲಿ ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ, ಕೊಪ್ಪಳದಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಸೇರಿದಂತೆ ಪ್ರತಿನಿತ್ಯ ದಲಿತರು ಮತ್ತು ದಲಿತ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದ್ದು, ಪ್ರತಿ ಘಟನೆ ಯಲ್ಲಿಯೂ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದ್ದು, ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೆಲ ಕಾಲ ಟೌನ್‌ಹಾಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಘಟನೆಯನ್ನು ಖಂಡಿಸಲಾಯಿತು. ಪ್ರತಿಭಟನೆಯಲ್ಲಿ ಮಾದಿಗ ದಂಡೋರದ ಪಾವಗಡ ಶ್ರೀರಾವ್, ಬರಹಗಾರ ಚೇಳೂರು ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಸೆಲ್ ಅಧ್ಯಕ್ಷ ರಾಮಕೃಷ್ಣ, ಮಾದಿಗ ದಂಡೋರ ಮಹಿಳಾ ಅಧ್ಯಕ್ಷೆ ಲಕ್ಷೀದೇವಮ್ಮ, ಜಯಮ್ಮ, ರಾಘವೇಂದ್ರಸ್ವಾಮಿ, ಚಂದ್ರಣ್ಣ, ಕುಮಾರ್ ಮಾದರ್, ಬಾನುಪ್ರಕಾಶ್, ಕೆಂಪರಾಜು, ಹೆಬ್ಬಾಕ ರಮೇಶ್ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
No comments:
Post a Comment