Pages

Saturday, 30 April 2011

ಚಪ್ಪಲಿ ಸೇವೆ: ನೊಂದ ಮಹಿಳೆಯರು ಮಾನ ರಕ್ಷಣೆಗಾಗಿ ಕೈಗೊಂಡ ಕ್ರಮ

ಸ್ಪಷ್ಟೀಕರಣ
ಮಾನ್ಯರೆ,

ದಕ್ಷಿಣ ಕನ್ನಡ ಕಾವೂರಿನ ಗಾಂಧಿನಗರದಲ್ಲಿ ಇತ್ತೀಚೆಗೆ (ದಿನಾಂಕ 27-1-2011) ವಿವಾಹಿತ ದಲಿತ ಮಹಿಳೆಯೊಬ್ಬರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕಾದರೆ ದೈಹಿಕ ಸುಖದ ಬೇಡಿಕೆಯನ್ನು ಮಂಡಿಸಿ ಅಶ್ಲೀಲ ಎಸ್ಸೆಮ್ಮೆಸ್ ಕಳುಹಿಸಿದ ಗ್ರಾಮಕರಣಿಕನೊಬ್ಬನನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯುವಲ್ಲಿ ದಲಿತ ಸಂಘರ್ಷ ಸಮಿತಿಯ ಕಾರ್ಯತಂತ್ರ ನಿಜಕ್ಕೂ ಶ್ಲಾಘನೀಯ.ಆದರೆ ಗ್ರಾಮಕರಣಿಕನಿಗೆ ‘ಚಪ್ಪಲಿ ಸೇವೆ’ ಮಾಡಿರುವುದು ಸರಿಯೇ? ಎಂದು ಜಯನ್ ಮಲ್ಪೆ ಪ್ರಶ್ನಿಸಿದ್ದಾರೆ. ಹಾಗಾದರೆ ನಿರಂತರವಾಗಿ ಬಡ ಮಹಿಳೆಗೆ ದೈಹಿಕ ಸುಖಕ್ಕಾಗಿ ಒತ್ತಾಯಿಸುವ ಗ್ರಾಮಕರಣಿಕನನ್ನು ಹೂವಿನ ಹಾರ ಹಾಕಿ ಸ್ವಾಗತಿಸಬೇಕೆ?

ನಿಮ್ಮ ಮನೆಯವರಿಗೆ ಈ ರೀತಿ ಮಾಡಿದ್ದರೆ ನೀವೇನು ಮಾಡುತ್ತಿದ್ದೀರಿ ಎಂದು ದಸಂಸ ನಾಯಕರು ಪ್ರಶ್ನಿಸಬಹುದು? ಎಂದು ಹೇಳಿದ್ದೀರಿ. ಆದರೆ ನಾವು ಪ್ರಶ್ನೆ ಮಾಡುತ್ತೇವೆ. ಆದರೆ ತಕ್ಷಣದ ಪ್ರತಿಕ್ರಿಯೆ ಬೇರೆ! ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರವರ ವಿಚಾರಧಾರೆಯಿಂದ ಅವರ ಸಿದ್ಧಾಂತದಲ್ಲಿ ನಂಬಿಕೆಯಿಟ್ಟು ಹೋರಾಟ ನಡೆಸುತ್ತಿರುವ ದಲಿತ ಸಂಘರ್ಷ ಸಮಿತಿಗೆ ಕಾನೂನನ್ನು ಕೈಗೆತ್ತಿ, ಹಲ್ಲೆ ನಡೆಸಿ, ಚಪ್ಪಲಿ ಸೇವೆಗೆ ಅವಕಾಶ ನೀಡಲಿಲ್ಲ, ನೊಂದ ಮಹಿಳೆಯರು ಚಪ್ಪಲಿ ಸೇವೆ ಮಾಡಿರುತ್ತಾರೆ.

ಹಿಂಸೆ, ಕ್ರೌರ್ಯ, ಉನ್ಮಾದ ದಬ್ಬಾಳಿಕೆಯ ಪ್ರತೀಕ ಎಂಬುದಾಗಲಿ, ಅಥವಾ ಕಾನೂನನ್ನು ನೇರವಾಗಿ ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದು ನಮ್ಮ ದಸಂಸ ನಾಯಕರಿಗೆ ಅನ್ನಿಸಲಿಲ್ಲವೇ? ಎಂದು ಪ್ರಶ್ನೆ ಮಾಡುತ್ತೀರಿ. ಒಬ್ಬ ವ್ಯಕ್ತಿ ಕೊಲೆ ಮಾಡಲು ಬಂದಾಗ ರಕ್ಷಣೆ ಮಾಡಬಹುದು ಮತ್ತು ಮಹಿಳೆಗೆ ಮಾನ ಭಂಗಕ್ಕೆ ಯತ್ನಿಸಲು ಬಂದಾಗ ರಕ್ಷಣೆಗಾಗಿ ಚಪ್ಪಲಿ ಸೇವೆ ಮಾಡಿದ್ದು ತಪ್ಪಾ? ಮಹಿಳೆಯರು ಚಪ್ಪಲಿ ಸೇವೆ ಮಾಡಿದ ಬಗ್ಗೆ ದಿನನಿತ್ಯ ಸಾರ್ವಜನಿಕರಿಂದ ಹಾಗೂ ಸರಕಾರಿ ಅಧಿಕಾರಿಗಳಿಂದ ಅಭಿನಂದನೆ ಬರುತ್ತಿದೆ. ‘‘ಈ ವ್ಯವಸ್ಥೆಯಿಂದ ಬೇಸತ್ತಿರುವ ನನ್ನ ದಲಿತ ಬಂಧುಗಳು ಕಾನೂನಿನ ನಂಬಿಕೆಯನ್ನು ಕಳೆದು ಕೊಂಡಿದ್ದಾರೆಯೇ? ಬದುಕಿನುದ್ದಕ್ಕೂ ವೌಲ್ಯಗಳ ವಿರುದ್ಧ ಹೋರಾಟ ಅಲ್ಲ, ಶೋಷಣೆ ಮತ್ತು ದಬ್ಬಾಳಿಕೆಗಳ ವಿರುದ್ಧ ನಿರಂತರ ಹೋರಾಟ ಮಾಡಿದ ಅಂಬೇಡ್ಕರ್‌ರವರು ಬದುಕಿದ್ದರೆ ಇಂಥ ದುರ್ವರ್ತನೆಯಿಂದ ಖಂಡಿತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು’’ ಎಂದು ಹೇಳಿದ್ದೀರಿ. ಅದು ಮೂರ್ಖತನದ ವಿಚಾರ.

ರಾಜ್ಯದಲ್ಲಿ ಚಳವಳಿ ಕಟ್ಟಿಕೊಂಡು ಬಂದಿರುವ ದಲಿತ ಸಂಘರ್ಷ ಸಮಿತಿ ಅಂದಿನಿಂದ ಇಂದಿನವರೆಗೂ ಕಾನೂನು ಚೌಕಟ್ಟನ್ನು ಮೀರಿಲ್ಲ. ಕೆಲವು ನಾಯಕರು ತನ್ನ ಸ್ವಾರ್ಥಕ್ಕಾಗಿ ಕಾನೂನು ಚೌಕಟ್ಟನ್ನು ಮುರಿಯುತ್ತಾರೆ. ಬೆಂಡಿಗೇರಿಯಲ್ಲಿ ದಲಿತರಿಗೆ ಮಲ ತಿನ್ನಿಸಿದಾಗ, ಇಲ್ಲಿ ಕಂಬಾಲಪಳ್ಳಿಯಲ್ಲಿ 11 ಮಂದಿ ದಲಿತರನ್ನು ಸಜೀವವಾಗಿ ಸುಟ್ಟು ಹಾಕಿದಾಗ ಅಥವಾ ದಿನನಿತ್ಯ ನಮ್ಮ ಅಕ್ಕ ತಂಗಿಯವರಿಗೆ, ಅಣ್ಣ ತಮ್ಮಂದಿರ ಮೇಲೆ ನಡೆಯುವ ದಬ್ಬಾಳಿಕೆ, ದೌರ್ಜನ್ಯ, ಕೊಲೆಸುಲಿಗೆಗಾಗಿ ಕಾವೂರಿನ ಮಾದರಿಯಲ್ಲಿ ಪ್ರತಿಕ್ರಿಯಿಸಿದ್ದರೆ! ಅಥವಾ ಸೇಡಿಗೆ ಸೇಡು ಎಂಬ ಹಾದಿಯನ್ನು ಹಿಡಿದಿದ್ದರೆ! ಈ ಹಿಂದೆ ಶೋಷಣೆಗೆ ಒಳಗಾದ ದಲಿತರು ಇಂತಹ ಚಪ್ಪಲಿ ಸೇವೆ ಮಾಡುತ್ತಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ.

ಪತ್ರಕರ್ತರನ್ನು, ದೃಶ್ಯ ಮಾಧ್ಯಮದವರನ್ನು ಕರೆದುಕೊಂಡು ಹೋಗಿರುವ ದ.ಸಂ.ಸ ನಾಯಕರು ಪೊಲೀಸರನ್ನೂ ಕರೆದುಕೊಂಡು ಹೋಗಿ ಹಲ್ಲೆ ನಡೆಸದೆ, ಚಪ್ಪಲಿಸೇವೆ ಮಾಡದೆ ಗ್ರಾಮಕರಣಿಕನನ್ನು ಪೊಲೀಸರ ಕೈಗೊಪ್ಪಿಸಬಹುದಿತ್ತು.ಪುಕ್ಸಟ್ಟೆ ಪ್ರಚಾರಕ್ಕಾಗಿ ಅಂಬೇಡ್ಕರ್ ಸಿದ್ಧಾಂತಕ್ಕೆ ಮಸಿ ಬಳಸುವುದು ನ್ಯಾಯವೇ? ಗೆಳೆಯರಾದ ಜಯನ್ ಮಲ್ಪೆಯವರೆ ದಲಿತ ನಾಯಕರು ಚಪ್ಪಲಿ ಸೇವೆ ಮಾಡಲಿಲ್ಲ, ನೊಂದ ಮಹಿಳೆಯರು ತನ್ನ ಮಾನ ಮರ್ಯಾದೆ, ಕಾಪಾಡುವುದಕ್ಕಾಗಿ ಅನಿವಾರ್ಯವಾಗಿ ಅಗತ್ಯವಾಗಿ ತೆಗೆದುಕೊಂಡ ಕ್ರಮ ಸರಿ.ಈ ಘಟನೆ ನಡೆದಾಗ ದೃಶ್ಯ ಮಾಧ್ಯಮದವರು ಸಾಕ್ಷಿ. ಇನ್ನು ಮುಂದಕ್ಕೆ ಪತ್ರಿಕೆಗೆ ಹೇಳಿಕೆ ಕೊಡುವಾಗ ವಾಸ್ತವದ ಸತ್ಯಾಂಶವನ್ನು ಅರಿಯದೇ ಪತ್ರಿಕೆಯಲ್ಲಿ ತಪ್ಪು ಹೇಳಿಕೆ ಕೊಟ್ಟು ಪ್ರಚಾರ ನೀಡುವುದು ಸರಿಯಲ್ಲ. ಇದರ ಬಗ್ಗೆ ಯೋಚಿಸಿ.
-ಎಸ್.ಪಿ.ಆನಂದ,
ಜಿಲ್ಲಾ ಪ್ರಧಾನ ಸಂಚಾಲಕರು, ಮಂಗಳೂರು

ಶನಿವಾರ - ಏಪ್ರಿಲ್ -30-2011
VB News Online

No comments:

Post a Comment

html