Pages

Tuesday, 19 April 2011

"ದಿಗ್ವಿಜಯ್ ಸಿಂಗ್ ವಿರುದ್ಧ ಹಝಾರೆ ಕೆಂಡ" ಸೋನಿಯಾಗೆ ಪತ್ರ

ಮಂಗಳವಾರ - ಏಪ್ರಿಲ್ -19-2011
ಹೊಸದಿಲ್ಲಿ, ಎ.18: ಲೋಕಪಾಲ ಮಸೂದೆಯ ಕರಡು ರಚನೆ ಸಮಿತಿಯ ನಾಗರಿಕ ಪ್ರತಿನಿಧಿಗಳ ವಿರುದ್ಧ ನಡೆಸಲಾಗುತ್ತಿರುವ ‘ಮಾನ ಹಾನಿಕರ’ ಅಭಿಯಾನದ ಕುರಿತಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ವೊಂದನ್ನು ಬರೆದಿದ್ದು, ಕಾಯ್ದೆ ರಚನೆ ಪ್ರಕ್ರಿಯೆಯನ್ನು ಹಳಿ ತಪ್ಪಿಸದಂತೆ ಅವರ ‘ಸಹೋದ್ಯೋಗಿಗಳಿಗೆ’ ಬುದ್ಧಿ ಹೇಳುವಂತೆ ಕೋರಿದ್ದಾರೆ. ಸೋನಿಯಾರಿಗೆ ಬರೆದಿರುವ ಎರಡು ಪುಟಗಳ ಪತ್ರದಲ್ಲಿ ಅವರು, ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೊಬ್ಬರು - ಬಹುಶಃ ದಿಗ್ವಿಜಯ ಸಿಂಗ್ - ತನ್ನ ಅಭಿಯಾನದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಅವಾಸ್ತವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋನಿಯಾ ಅದನ್ನು ಒಪ್ಪುವರೇ? ಎಂದು ಪ್ರಶ್ನಿಸಿದ್ದಾರೆ.

ಹತ್ತು ಸದಸ್ಯರ ಕರಡು ರಚನೆ ಸಮಿತಿಯ ಸದಸ್ಯರಾಗಿರುವ ಸಚಿವರೊಬ್ಬರು, ನಾಗರಿಕ ಸಮಾಜದ ಸದಸ್ಯರು ಸರಕಾರದ ಒತ್ತಡಕ್ಕೊಳಗಾಗಿದ್ದಾರೆ ಹಾಗೂ ಕಾಯ್ದೆಯನ್ನು ದುರ್ಬಲಗೊಳಿಸುತ್ತಿದ್ದಾ ರೆಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆಂದು ಹಝಾರೆ ಆರೋಪಿಸಿ ದ್ದಾರೆ. ಖ್ಯಾತ ವಕೀಲ ಹಾಗೂ ಸಮಿತಿಯ ಸಹಾಧ್ಯಕ್ಷ ಶಾಂತಿಭೂಷಣ್‌ರನ್ನೊಳಗೊಂಡಿದೆಯೆನ್ನಲಾದ ನಕಲಿ ಸಿಡಿಯ ಕುರಿತಾಗಿ ವಾದ-ವಿವಾದ ತೀವ್ರಗೊಂಡಿರುವಂತೆಯೇ, ಕಳೆದ ಕೆಲವು ದಿನಗಳ ಬೆಳವಣಿಗೆಗಳು ಕಳವಳಕಾರಿಯಾಗಿವೆಯೆಂದು ಅವರು ಹೇಳಿದ್ದಾರೆ. ಜಂಟಿ ಸಮಿತಿಯ ಮೂಲಕ ಪರಿಣಾಮಕಾರಿಯಾದ ಭ್ರಷ್ಟಾಚಾರ ವಿರೋಧಿ ಕಾಯ್ದೆಯೊಂದನ್ನು ರಚಿಸುವ ಪ್ರಕ್ರಿಯೆಯನ್ನು ಹಳಿ ತಪ್ಪಿಸಲು ದೇಶದ ಭ್ರಷ್ಟ ಶಕ್ತಿಗಳೆಲ್ಲ ಒಂದಾಗಿರುವಂತೆ ತೋರುತ್ತಿದೆಯೆಂದು ಹಝಾರೆ ದೂರಿದ್ದಾರೆ. ಸಮಿತಿಯಲ್ಲಿರುವ ನಾಗರಿಕ ಸಮಾಜದ ಪ್ರತಿನಿಧಿಗಳ ಚಾರಿತ್ರಕ್ಕೆ ಮಸಿ ಬಳಿಯುವುದು ಅವರ ಕಾರ್ಯತಂತ್ರಗಳಲ್ಲಿ ಒಂದಾಗಿದೆಯೆಂದು ಅವರು ಆರೋಪಿಸಿದ್ದಾರೆ.

ಸಾರ್ವಜನಿಕರಿಗಾಗಿ ಕೆಲಸ ಮಾಡುವ ವ್ಯಕ್ತಿಗಳು ಸಾರ್ವಜನಿಕರ ಪರಿಶೀಲನೆಗೆ ಒಳಗಾಗಲೇ ಬೇಕೆನ್ನುವುದು ತನ್ನ ನಂಬಿಕೆಯಾಗಿದೆ. ಆದಾಗ್ಯೂ, ಅತ್ಯಂತ ಸುಳ್ಳು ಆರೋಪಗಳನ್ನು ಹೊರಿಸಿದಾಗ, ನಕಲಿ ಸಿಡಿಗಳನ್ನು ತಯಾರಿಸಿದಾಗ ಅದರ ಉದ್ದೇಶ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸುವುದಲ್ಲ, ಬದಲಾಗಿ ಅವರ ವರ್ಚಸ್ಸನ್ನು ಕೆಡಿಸುವುದಾಗಿದೆಯೆಂದು ಅಭಿಪ್ರಾಯಿಸಲೇ ಬೇಕಾಗುತ್ತದೆಂದು ಗಾಂಧಿವಾದಿ ಹೇಳಿದ್ದಾರೆ. ಅವರು ತನ್ನನ್ನೂ ಬಿಟ್ಟಿಲ್ಲ. ತಾನು ಸತ್ಯದ ದಾರಿಯಲ್ಲಿ ಸರಳವಾಗಿ ಬದುಕುತ್ತಿದ್ದೇನೆ. ಆದಾಗ್ಯೂ, ಸ್ಥಾಪಿತ ಹಿತಾಸಕ್ತಿಗಳು ಎಷ್ಟೇ ಪ್ರಯತ್ನಿಸಿದರೂ ಅವರಿಂದ ಏನೂ ಸಾಧ್ಯವಾಗಿಲ್ಲವೆಂಬ ಕುರಿತು ತನಗೆ ಸಂತಸವಿದೆ. ಇದರಿಂದ ಸಾರ್ವಜನಿಕರ ದೃಷ್ಟಿಯಲ್ಲಿ ನಾಗರಿಕ ಸದಸ್ಯರ ವರ್ಚಸ್ಸು ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಸ್ಥಾಪಿತ ಹಿತಾಸಕ್ತಿಗಳ ಈ ಕೀಳು ಅಭಿಯಾನವು ಅವರಿಗೇ ಮುಳುವಾಗುತ್ತಿದೆ. ಜನರು ಏನು ನಡೆಯುತ್ತಿದೆಯೆಂದು ತಿಳಿದುಕೊಳ್ಳಲು ಶಕ್ತರಾಗಿದ್ದಾರೆಂದು ಹಝಾರೆ ಹೇಳಿದ್ದಾರೆ. ದೇಶವು ಭ್ರಷ್ಟಾಚಾರದ ವಿರುದ್ಧ ಪ್ರಬಲ ಕಾಯ್ದೆಯೊಂದಕ್ಕೆ ಇನ್ನಷ್ಟು ಕಾಯಲು ಸಿದ್ಧವಿಲ್ಲವೆಂದು ಎಚ್ಚರಿಸಿರುವ ಅವರು, ಅದರ ಪ್ರಕ್ರಿಯೆ ಹಳಿತಪ್ಪಿದಲ್ಲಿ ಉದ್ರಿಕ್ತ ಜನರಿಂದ ಉಂಟಾಗಬಹುದಾದ ಪರಿಣಾಮದ ಕುರಿತು ಭೀತಿ ವ್ಯಕ್ತಪಡಿಸಿದ್ದಾರೆ.
ಸಮಿತಿಯಲ್ಲಿರುವ ಸರಕಾರದ ಪ್ರತಿನಿಧಿಗಳ ಬಗ್ಗೆ ಈ ರೀತಿ ಪರಿಶೀಲನೆ ಅಥವಾ ಮಾನಹಾನಿಕರ ಅಭಿಯಾನ ನಡೆದಲ್ಲಿ ಅದರ ಪರಿಣಾಮವೇನಾದೀತೆಂದು ಸಮಾಜ ಕಾರ್ಯಕರ್ತ ಪ್ರಶ್ನಿಸಿದ್ದಾರೆ. ಅಧಿಕಾರದಲ್ಲಿರುವವರು ಹೆಚ್ಚಿನ ವಿವರಣೆ ನೀಡಬೇಕಾಗುತ್ತದೆ. ಆದರೆ, ತಾವು ಲೋಕಪಾಲ ಮಸೂದೆಯಿಂದ ಜನರ ಗಮನವನ್ನು ವೈಯಕ್ತಿಕ ಕೆಸರೆರಚಾಟದ ಕಡೆಗೆ ತಿರುಗಿಸಲು ಬಯಸುವುದಿಲ್ಲ. ಜನರ ಗಮನ ಬೇರೆಡೆಗೆ ಸೆಳೆಯುವುದು ಮಿಥ್ಯಾಭಿಯಾನಿಗಳ ಉದ್ದೇಶವಾಗಿದೆ ಎಂದವರು ಸೋನಿಯಾರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ. ಶಾಂತಿಭೂಷಣ್‌ರ ಕುರಿತಾದ ನಕಲಿ ಸಿಡಿ ವಿವಾದ ಹಾಗೂ ದಿಗ್ವಿಜಯ್ ಸಿಂಗ್ ಕಳೆದೊಂದು ವಾರದಿಂದ ಮಾಧ್ಯಮಗಳಲ್ಲಿ ನೀಡುತ್ತಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ ಹಝಾರೆ ಸೋನಿಯಾರಿಗೆ ಈ ಪತ್ರ ಬರೆದಿದ್ದಾರೆ

No comments:

Post a Comment

html