ಮಂಗಳವಾರ - ಏಪ್ರಿಲ್ -26-2011
ಹಿಂದೊಮ್ಮೆ ಲೋಕಾಯುಕ್ತಕ್ಕೆ ರಾಜೀನಾಮೆ ನೀಡುವ ಬೆದರಿಕೆಯೊಡ್ಡಿದ್ದ ಸಂತೋಷ್ ಹೆಗ್ಡೆ, ತಮ್ಮ ‘ತಂದೆಯ ಸಮಾನ’ರಾದ ಎಲ್.ಕೆ.ಅಡ್ವಾಣಿಯವರ ಮಾತನ್ನು ಗೌರವಿಸಿ ರಾಜೀನಾಮೆಯಿಂದ ಹಿಂದೆ ಸರಿದಿದ್ದರು. ಇದೀಗ, ಲೋಕಪಾಲ ಕರಡು ಸಮಿತಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆಯ ಬೆದರಿಕೆಯೊಡ್ಡಿ ಮತ್ತೆ ರಾಜಕಾರಣಿಗಳನ್ನು ನಡುಗಿಸಿ, ಬಳಿಕ ‘ತಂದೆಯ ಸಮಾನ’ರಾದ ಅಣ್ಣಾ ಹಝಾರೆಯವರ ಮಾತಿಗೆ ಮಣಿದು ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ. ಒಟ್ಟಿನಲ್ಲಿ ಎಲ್ಲವೂ ‘ಸಂತೋಷ’ದಿಂದಲೇ ಮುಕ್ತಾಯವಾಗಿದೆ. ರಾಜಕಾರಣಿಗಳೂ ನಿಟ್ಟುಸಿರಿಟ್ಟಿದ್ದಾರೆ.
ಆದರೆ ಈ ಬಾರಿಯ ಸಂತೋಷ್ ಹೆಗ್ಡೆ ರಾಜೀನಾಮೆ ಪ್ರಹಸನ ಒಂದು ರೀತಿಯ ನಾಟಕೀಯತೆಯಿಂದ ಕೂಡಿದ್ದು, ಅಷ್ಟೇ ನಾಟಕೀಯವಾಗಿ ಅದು ಮುಕ್ತಾಯಗೊಂಡಿತು. ಸಂತೋಷ್ ಹೆಗ್ಡೆಯವರ ಕುರಿತಂತೆ ದಿಗ್ವಿಜಯ್ ಸಿಂಗ್ ನೀಡಿದ ಹೇಳಿಕೆಗೆ ಸಿಟ್ಟಾಗಿ ಅವರು ರಾಜೀನಾಮೆಗೆ ಮುಂದಾಗಿದ್ದರು. ಒಂದು ಸರಕಾರವನ್ನೇ ಪ್ರಶ್ನಿಸುವ ಅಧಿಕಾರವುಳ್ಳ ಸಂಸ್ಥೆಯೊಂದನ್ನು ರೂಪಿಸಲು ಈ ಲೋಕಪಾಲ ಕರಡು ಸಮಿತಿ ಹೊರಟಿದೆ. ಇಂತಹ ಸಂದರ್ಭದಲ್ಲಿ ಲೋಕಪಾಲದ ಕುರಿತಂತೆ ಈ ದೇಶದ ಎಲ್ಲ ಕ್ಷೇತ್ರಗಳ ಜನರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸಂಪೂರ್ಣ ಅವಕಾಶವನ್ನು ಹೊಂದಿರಬೇಕು.
ಸಮಿತಿಯ ಸದಸ್ಯರ ಕುರಿತಂತೆ ಈ ದೇಶದ ಯಾರೂ ತುಟಿ ಪಿಟಿಕ್ ಎನ್ನಬಾರದು ಎಂಬ ಧೋರಣೆ ಸರ್ವಾಧಿಕಾರವಾಗುತ್ತದೆ. ಪ್ರಜಾಸತ್ತಾತ್ಮಕ ದೇಶದಲ್ಲಿ ಅದಕ್ಕೆ ಅವಕಾಶವಿಲ್ಲ. ದಿಗ್ವಿಜಯ್ ಸಿಂಗ್ ಭ್ರಷ್ಟ ರಾಜಕಾರಣಿಯಂತೂ ಅಲ್ಲವೇ ಅಲ್ಲ. ಸದಾ ನಿಷ್ಠುರ ಹೇಳಿಕೆಗೆ ಹೆಸರು ಮಾಡಿದವರು. ದೊಡ್ಡ ಧ್ವನಿಯಲ್ಲಿ ಮಾತನಾಡುವ ಮೂಲಕ ಕಾಂಗ್ರೆಸನ್ನು ಒಂದಿಷ್ಟು ಜೀವಂತವಾಗಿ ಇಟ್ಟವರು. ಇಂತಹ ನಾಯಕ ಲೋಕಪಾಲ ಸಮಿತಿಯ ಬಗ್ಗೆ, ಕಾಯಿದೆಯ ಬಗ್ಗೆ ಮಾತನಾಡಿದರೆ ಅಥವಾ ಹೇಳಿಕೆ ನೀಡಿದರೆ ಅದನ್ನು ಅಪರಾಧವೆಂಬ ರೀತಿಯಲ್ಲಿ ಸ್ವೀಕರಿಸುವುದು ಸಂತೋಷ್ ಹೆಗ್ಡೆಯವರಂತಹ ವ್ಯಕ್ತಿತ್ವಕ್ಕೆ ಒಪ್ಪುವುದಿಲ್ಲ. ಲೋಕಪಾಲ ಕರಡು ಸಮಿತಿಯಲ್ಲಿರುವುದೆಂದರೆ, ಎಲ್ಲ ಟೀಕೆಗಳನ್ನು ಆಹ್ವಾನಿಸಿಕೊಂಡಂತೆ.
ಪ್ರಜಾಸತ್ತಾತ್ಮಕ ದೇಶದಲ್ಲಿ ಟೀಕೆ, ಆರೋಪ ಇತ್ಯಾದಿಗಳಿಗೂ ಅದರದೇ ಆದ ಮಹತ್ತ್ವವಿದೆ. ಇದೇ ಸಂತೋಷ್ ಹೆಗ್ಡೆ ರಾಜಕಾರಣಿಗಳ ಕುರಿತಂತೆ ಎಷ್ಟೋ ಬಾರಿ ಹಗುರವಾಗಿ ಮಾತನಾಡಿದ್ದಾರೆ ಮತ್ತು ಬಹಿರಂಗ ವಾಗಿ ಟೀಕಿಸಿದ್ದಾರೆ. ಆದರೆ ಅವರಾರೂ ಸಂತೋಷ್ ಹೆಗ್ಡೆಯವರಂತೆ ಬಹಿರಂಗವಾಗಿ ಸಿಟ್ಟಾಗಿರಲಿಲ್ಲ. ಇದೀಗ ತನ್ನ ವಿರುದ್ಧ ಸಣ್ಣದೊಂದು ಹೇಳಿಕೆ ನೀಡಿದಾಕ್ಷಣ ಸಂತೋಷ್ ಹೆಗ್ಡೆ ಸಿಟ್ಟಾಗಿ ರಾಜೀನಾಮೆ ನೀಡಲು ಮುಂದಾಗುವುದು ಅವರು ನಿರ್ವಹಿಸು ತ್ತಿರುವ ಹುದ್ದೆಗೆ ಶೋಭಿಸುವುದಿಲ್ಲ. ಲೋಕಪಾಲ ಮಸೂದೆ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡಿರುವು ದರಿಂದ ಟೀಕೆ, ಆರೋಪಗಳು ಸಹಜ. ಅದನ್ನು ಸಂತೋಷ್ ಹೆಗ್ಡೆ ನಿರೀಕ್ಷಿಸುತ್ತಿರಬೇಕು.
ಮುಂದಿನ ದಿನಗಳಲ್ಲಿ ಅವರು ಮತ್ತು ಅವರ ಸಂಗಡಿಗರ ಮೇಲೆ ಇನ್ನಷ್ಟು ಟೀಕೆಗಳು, ಆರೋಪಗಳು ಬರಬಹುದು. ಅದಕ್ಕೆ ಸಮರ್ಥ ಉತ್ತರ ನೀಡುವ ಮೂಲಕ ಎದುರಿಸಬೇಕು. ಬದಲಿಗೆ ತಮ್ಮ ವಿರುದ್ಧ ಯಾರೂ ಟೀಕೆಯನ್ನೇ ಮಾಡಬಾರದು ಎಂದರೆ ಅದು ಪ್ರಜಾಪ್ರಭುತ್ವ ವಿರೋಧಿಯಾಗುತ್ತದೆ.ಸಮಿತಿಯಲ್ಲಿ ದಲಿತ ಸದಸ್ಯನಿರಬೇಕು ಎನ್ನುವ ಒತ್ತಾಯವನ್ನೂ ಸಂತೋಷ್ ಹೆಗ್ಡೆ ಹಗುರವಾಗಿ ತೆಗೆದುಕೊಂಡಿದ್ದಾರೆ. ಭಾರತ ದೇಶದ ಸಂರಚನೆಯ ಕುರಿತಂತೆ ಆಳ ತಿಳುವಳಿಕೆಯಿ ರುವ ಯಾರೂ ಈ ಒತ್ತಾಯವನ್ನು ಹಗುರವಾಗಿ ತೆಗೆದುಕೊಳ್ಳಲಾರರು. ದಲಿತರು ಶತಶತಮಾನ ಗಳಿಂದ ಈ ದೇಶದಲ್ಲಿ ವಂಚನೆಗೊಳಗಾಗುತ್ತಾ ಬಂದವರು.
ಈ ದೇಶದ ಧಾರ್ಮಿಕ ಕಾನೂನನ್ನು ಮುಂದಿಟ್ಟು ಅವರನ್ನು ಬರ್ಬರವಾಗಿ ಶೋಷಣೆಗೊಳಪಡಿಸಲಾಯಿತು. ದೇಶ ಸ್ವತಂತ್ರಗೊಂಡ ಬಳಿಕ, ಈ ದೇಶದ ಸಂವಿಧಾನ ರಚನೆಯಾಯಿತು. ಒಂದು ವೇಳೆ, ಸಂವಿಧಾನ ರಚನೆಯ ಸಮಿತಿಯಲ್ಲಿ ದಲಿತ ನಾಯಕ ಅಂಬೇಡ್ಕರ್ ಇಲ್ಲದೇ ಇದ್ದಿದ್ದರೆ, ಸ್ವಾತಂತ್ರಪೂರ್ವದ ದಬ್ಬಾಳಿಕೆ ಮುಂದೆಯೂ ನಡೆಯುತ್ತಿತ್ತು. ದಲಿತ ಅಂಬೇಡ್ಕರ್ ಇದ್ದ ಕಾರಣಕ್ಕಾಗಿ ನಮ್ಮ ಸಂವಿಧಾನದ ಆಶಯ ಹೆಚ್ಚು ಮಾನವೀಯವಾಗಿದೆ ಮತ್ತು ಶೋಷಿತರಿಗೆ ಅನ್ಯಾಯವಾಗಬಾರದು ಎನ್ನುವ ಕಾಳಜಿಯನ್ನು ಹೊಂದಿದೆ. ಆದರೂ ಈ ದೇಶದಲ್ಲಿ ಕಾನೂನು, ಸಿಬಿಐಯಂತಹ ಸಂಸ್ಥೆಯನ್ನೇ ಬಳಸಿಕೊಂಡು ದಲಿತರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಲು ಕೆಲವು ಬಾರಿ ಪ್ರಯತ್ನಿಸಿದೆ. ತನಿಖೆಯ ಹೆಸರಿನಲ್ಲಿ ಈ ಸಂಸ್ಥೆಗಳು ಗುಜರಾತ್‌ನಲ್ಲಿ ಮಾಡಿರುವ ಅನಾಹುತಗಳನ್ನೂ ನಾವು ನೋಡುತ್ತಿದ್ದೇವೆ.
ಪದೇ ಪದೇ ತಮಗಾಗಿರುವ ವಂಚನೆ, ಅನ್ಯಾಯದ ಹಿನ್ನೆಲೆಯಲ್ಲಿ ದಲಿತರು, ಲೋಕಪಾಲ ಮಸೂದೆಯ ಕರಡು ರಚನೆ ಸಮಿತಿಯಲ್ಲಿ ತಮ್ಮ ಸದಸ್ಯರೂ ಇರಬೇಕು ಎಂದು ಬಯಸುತ್ತಿದ್ದಾರೆ. ನಾಳೆ, ಈ ಲೋಕಪಾಲ ಮಸೂದೆ ಉಳ್ಳವರ, ಮೇಲ್ವರ್ಗದವರ ಮೂಗಿನ ನೇರಕ್ಕೆ ಇರಬಾರದು ಎನ್ನುವ ಕಾಳಜಿ ಇದರ ಹಿಂದಿದೆ. ಆದುದರಿಂದ ಅತ್ಯಗತ್ಯವಾಗಿ, ನೊಂದವರ ಪ್ರತಿನಿಧಿಗಳು ಈ ಸಮಿತಿಯಲ್ಲಿ ಇರಲೇ ಬೇಕಾಗಿದೆ. ಸಂತೋಷ್ ಹೆಗ್ಡೆಯವರ ಕೆಲಸ, ಪ್ರಾಮಾಣಿಕತೆಯ ಕುರಿತಂತೆ ಎಳ್ಳಷ್ಟೂ ಅನುಮಾನವಿಲ್ಲ. ಆದರೆ ಇಡೀ ಸಮಿತಿಯಲ್ಲಿ ಯಾರಿರಬೇಕು, ಯಾರಿರಬಾರದು ಎನ್ನುವುದನ್ನು ನಿಯಂತ್ರಿಸುವ, ನಿರ್ದೇಶಿಸುವ ಕೆಲಸಕ್ಕೆ ಹೆಗ್ಡೆಯವರಾಗಲಿ, ಹಝಾರೆ ಯವರಾಗಲಿ ಇಳಿಯಬಾರದು. ಹಾಗೆ ಇಳಿದುದೇ ಆದರೆ, ಇನ್ನಷ್ಟು ಅಸಮಾಧಾನಗಳನ್ನು ಹುಟ್ಟು ಹಾಕಲಿದೆ ಮಾತ್ರವಲ್ಲ ಅದರ ಅಂತಿಮ ಪರಿಣಾಮ ಲೋಕಪಾಲ ಮಸೂದೆಯ ಮೇಲೆಯೇ ಬೀಳಬಹುದು.
ಇಲ್ಲಿಯವರೆಗೆ ಲೋಕಪಾಲ ಮಸೂದೆ ಅನುಷ್ಠಾನಕ್ಕೆ ಬರದೆ ಇರುವುದಕ್ಕೆ ಭ್ರಷ್ಟ ರಾಜಕಾರಣಿಗಳು ಕಾರಣರಾಗಿದ್ದಾರೆ. ಇದೀಗ ಪ್ರಾಮಾಣಿಕರೆಂದು ಕರೆಸಿಕೊಂಡ ಸಮಾಜ ಸೇವಕರ ಸರ್ವಾಧಿಕಾರ, ಈಗೋಗಳು ಲೋಕಪಾಲ ಮಸೂದೆಯ ಮೇಲೆ ಪರಿಣಾಮವನ್ನು ಬೀರದೆ ಇರಲಿ. ಒಂದು ವೇಳೆ ಹಾಗಾದುದೇ ಆದಲ್ಲಿ, ಅದರ ಲಾಭವನ್ನು ಸಂಪೂರ್ಣ ತಮ್ಮದಾಗಿಸಿಕೊಳ್ಳುವವರು ಭ್ರಷ್ಟ ರಾಜಕಾರಣಿಗಳು ಎಂಬ ಎಚ್ಚರಿಕೆ ಈ ‘ಹೋರಾಟಗಾರ’ರಲ್ಲಿ ಇರಬೇಕು.
ಸಂಪಾದಕೀಯ
Varthabharathi
http://vbnewsonline.com/Editorial/52023/
http://vbnewsonline.com/Editorial/52023/
No comments:
Post a Comment