Pages

Tuesday, 23 September 2014

ಕಂಬಾಲಪಲ್ಲಿ: ಕಥೆ... ವ್ಯಥೆ...
-ರಘೋತ್ತಮ ಹೊ.ಬ
ಕಂಬಾಲಪಲ್ಲಿ; 14 ವರ್ಷಗಳ ಹಿಂದೆ 7 ಜನ ದಲಿತರನ್ನು ಜೀವಂತವಾಗಿ ಸುಟ್ಟುಹಾಕಲಾಯಿತು... ಆರೋಪಿಗಳನ್ನು ಡಿಸೆಂಬರ್ 4, 2006ರಂದು ವಿಚಾರಣಾ ನ್ಯಾಯಾಲಯವೊಂದು ದೋಷಮುಕ್ತಗೊಳಿಸಿತು... ತದನಂತರ ಈಗ (2014) ಆಗಸ್ಟ್ 20 ಹೈಕೋರ್ಟ್ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಕಂಬಾಲಪಲ್ಲಿಯ ಹತ್ಯಾಕಾಂಡದ ಆರೋಪಿಗಳನ್ನು ದೋಷಮುಕ್ತಗೊಳಿಸಿತು! ಹಾಗಿದ್ದರೆ ಕಂಬಾಲಪಲ್ಲಿಯಲ್ಲಿ ಅಂದು (ಮಾರ್ಚ್, 11, 2000) 7ಜನ ದಲಿತರು ಸುಟ್ಟು ಬೂದಿಯಾದದ್ದು ಹೇಗೆ? ಘಟನೆಯನ್ನು ಹೇಗೆ ಹೇಳಬಹುದೆಂದರೆ, ಆ 7 ಜನ ದಲಿತರು ತಮ್ಮ ಮನೆಗಳೊಳಕ್ಕೆ ತಾವೇ ಹೋಗಿ ‘ಅದು ಹೇಗೋ’ ಹೊರಗಿನಿಂದ ಚಿಲಕ ಹಾಕಿಕೊಂಡು, ‘ಅದು ಹೇಗೋ’ ತಮ್ಮ ಮನೆಗಳಿಗೆ ಹೊರಗಿನಿಂದ ಹುಲ್ಲು ಕಸ ತುಂಬಿಕೊಂಡು, ‘ಅದು ಹೇಗೋ’ ಹೊರಗಿನಿಂದ ತಮ್ಮ ಮನೆಗಳಿಗೆ ಸೀಮೆ ಎಣ್ಣೆ ಪೆಟ್ರೋಲ್ ಸುರಿದುಕೊಂಡು, ‘ಅದು ಹೇಗೋ’ ಮನೆಯ ಒಳಗೇ ಇದ್ದ ಅಷ್ಟೂ ದಲಿತರು ಹೊರಗಡೆ ಬೆಂಕಿ ಕಡ್ಡಿ ಕೀರಿ ಬೆಂಕಿ ಹಚ್ಚಿಕೊಂಡು, ಕಿರುಚಾಡಿ ಅಮ್ಮಾ, ಅಯ್ಯೋ, ಕಾಪಾಡಿ ಎಂದು ಅತ್ತೂ ಕರೆದು ಅಸಹಾಯಕರಾಗಿ ಕೂಗಾಡಿ ವಿಧಿಯಿಲ್ಲದೆ ಬೆಂಕಿಗೆ ದೇಹವನ್ನೊಡ್ಡಿ ಸುಟ್ಟು ಕರಕಲಾದರು! ಇಲ್ಲಿ ‘ಅದು ಹೇಗೋ’ ಎಂಬ ಪ್ರಶ್ನೆ ಬರುತ್ತದಲ್ಲ, ಅದಕ್ಕೆ ಉತ್ತರ?
ಕ್ಷಮಿಸಿ, ಕಂಬಾಲಪಲ್ಲಿಯ ಘಟನೆ ವಿವರಿಸೋಣವೆಂದರೆ ಲೇಖನಿಯಿಂದ ನೀಲಿ ಇಂಕು ಬರುತ್ತಿಲ್ಲ. ರಕ್ತ ತಾನಾಗೇ ಕುದಿದು ಬರುತ್ತಿದೆ. ಹಾಗೇ ನ್ಯಾಯ ದೊರಕದೆ ತಣ್ಣಗಾಗುತ್ತದೆ. ಆದರೂ ತಣ್ಣಗಾಗುವ ಮೊದಲು ದುರಂತವನ್ನು ದಾಖಲಿಸುತ್ತೇನೆ.
1997ರ ಆಗಸ್ಟ್ ತಿಂಗಳ ಒಂದು ದಿನ ಕೋಲಾರದ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ಎಂಬ ಗ್ರಾಮದಲ್ಲಿ, ಆ ಗ್ರಾಮದಲ್ಲಿ ವಾಸವಿದ್ದ ರೆಡ್ಡಿ ಒಕ್ಕಲಿಗರು ಮತ್ತು ದಲಿತರು ಇಬ್ಬರಿಗೂ ಸೇರಿದ ಕೆಲವು ಕುರಿಗಳು ಕಳುವಾದವು. ಅಂದಹಾಗೆ ಈ ಸಂಬಂಧ ಪಂಚಾಯತಿ ನಡೆದು ವೆಂಕಟರಮಣಪ್ಪ, ಅಂಜನಪ್ಪ ಮತ್ತು ರಾವಣಪ್ಪ ಎಂಬ ಮೂವರು ದಲಿತರು ಕುರಿ ಕದ್ದಿದ್ದಾರೆ ಎಂದು ಏಕಪಕ್ಷೀಯವಾಗಿ ತೀರ್ಮಾನಿಸಲಾಯಿತು. ಹಾಗೆ ಈ ಸಂಬಂಧ ಪೋಲೀಸರಿಗೆ ದೂರು ನೀಡಲು ಸಹ ಪಂಚಾಯತಿ ನಿರ್ಧರಿಸಿತು. ಇದರಿಂದ ಬೆದರಿದ ದಲಿತರು ತಮ್ಮ ಕುಟುಂಬಗಳ ಸಮೇತ ಊರು ಬಿಟ್ಟು ಹೋದರು. ಆದರೂ ಕುರಿ ಕಳÀವಿನ ಈ ಸಂಬಂಧ ಕೇಸು ದಾಖಲಾಗಿ ತನಿಖೆ ನಡೆದು ಕುರಿ ಕದ್ದವರು ಅದೇ ಗ್ರಾಮದ ರೆಡ್ಡಿ ಸಮುದಾಯದ ಕೆ.ಎಂ.ಮದ್ದಿರೆಡ್ಡಿ, ಆಂಜನೇಯ ರೆಡ್ಡಿ, ರೆಡ್ದಪ್ಪ, ನಾರಾಯಣಸ್ವಾಮಿ, ಕಿಟ್ಟಣ್ಣ ಅಲಿಯಾಸ್ ಕೃಷ್ಣರೆಡ್ಡಿ ಎಂದು ಗುರುತಿಸಲಾಯಿತು. ಅಂತೆಯೇ ಇವರು ಕುರಿ ಕದ್ದು ಪಕ್ಕದ ಆಂಧ್ರಪ್ರದೇಶಕ್ಕೆ ಮಾರಿದ್ದನ್ನು ಪೊಲೀಸರು ವಾಪಸ್ ತರಿಸಿ ದಲಿತರಿಗೆ ನೀಡಿದರು. ಅಂದಹಾಗೆ ಪೊಲೀಸರಿಗೆ ಇದನ್ನು ಪತ್ತೆ ಹಚ್ಚುವಲ್ಲಿ ನೆರವು ನೀಡಿದವರು ಅದೇ ಕುರಿ ಕಳುವಿನ ಆರೋಪ ಹೊತ್ತು ಊರು ಬಿಟ್ಟಿದ್ದ ವೆಂಕಟರಮಣಪ್ಪ ಮತ್ತು ಆತನ ಇಬ್ಬರು ಸಹೋದರರು. ಒಂದರ್ಥದಲ್ಲಿ ಈ ಪ್ರಕರಣ ಕಂಬಾಲಪಲ್ಲಿ ಗ್ರಾಮದ ರೆಡ್ಡಿ ಜನಾಂಗದವರಿಗೆ ತೀವ್ರ ಮುಜುಗರ ಉಂಟುಮಾಡಿತ್ತು ಮತ್ತು ಈ ನಿಟ್ಟಿನಲ್ಲಿ ಹಾಗೆ ಕುರಿಕದ್ದು ಸಿಕ್ಕಿಬಿದ್ದ ಕೆ.ಎಂ.ಮದ್ದಿರೆಡ್ಡಿ ಮತ್ತು ಇತರರು ಪೊಲೀಸರಿಗೆ ಸಹಾಯ ಮಾಡಿದ ದಲಿತ ವೆಂಕಟರಮಣಪ್ಪನಿಗೊಂದು ಗತಿಕಾಣಿಸಲು ಹೊಂಚು ಹಾಕಿದರು ಮತ್ತು ಅಂತಹದ್ದೊಂದು ದಿನ ಬಂದಿಯೂ ಬಿಟ್ಟಿತು ಕೂಡ. ಯಾಕೆಂದರೆ ಗರ್ಭಿಣಿಯಾಗಿದ್ದ ತನ್ನ ಪತ್ನಿ ಮಗುವಿಗೆ ಜನ್ಮ ನೀಡಿದ ಸುದ್ದಿ ಕೇಳಿ 05-06-1998ರ ಬೆಳಿಗ್ಗೆ 10.30 ಕ್ಕೆ ದಲಿತ ವೆಂಕಟರಮಣಪ್ಪ ಊರಿಗೆ ಬಂದು ಇಳಿಯುತ್ತಲೇ ಮದ್ದಿರೆಡ್ಡಿ, ಆಂಜನೇಯ ರೆಡ್ಡಿ, ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಮತ್ತಿತರ 39 ಜನರು ವೆಂಕಟರಮಣಪ್ಪನ ಮನೆಯತ್ತ ಧಾವಿಸಿ ಅವನನ್ನು ಅಟ್ಟಾಡಿಸಿಕೊಂಡು ಹೋಗಿ ಅವನ ಹೆಂಡತಿ ಮತ್ತು ಕುಟುಂಬಸ್ಥರ ಎದುರೇ ಆತನನ್ನು ಕಲ್ಲು ಹೊಡೆದು ಸಾಯಿಸಿದರು. ಅಂತೆಯೇ ಹಾಗೆ ಸಾಯಿಸಲ್ಪಟ್ಟ ವೆಂಕಟರಮಣಪ್ಪನನ್ನು ಸುಮಾರು 50 ಸೈಜುಗಲ್ಲಿನಡಿ ಸಮಾಧಿ ಮಾಡಲಾಯಿತೆಂದರೆ ಘಟನೆಯ ಭೀಭತ್ಸತೆಯನ್ನು ಎಂಥವರಾದರೂ ಊಹಿಸಬಹುದು. ದುರಂತವೆಂದರೆ ಈ ಸಂಬಂಧ 41 ಜನರ ಬಂಧನವಾಗಿ ಎಲ್ಲರೂ ಜಾಮೀನಿನ ಮೂಲಕ ಹೊರಬಂದರು!
ಅಂದಹಾಗೆ ಇದು ಇಲ್ಲಿಗೆ ನಿಂತಿದ್ದರೆ ಸರಿ ಹೋಗುತ್ತಿತ್ತು. ಆದರೆ ಘಟನೆ ನಡೆದ ಒಂದೂವರೆ ವರ್ಷದ ನಂತರ (ಡಿಸೆಂಬರ್, 99) ಚಿಕ್ಕಬಳ್ಳಾಪುರದ ಎ.ಸಿ.ಕಛೇರಿಯಲ್ಲಿ ದಲಿತರ ಕುಂದು-ಕೊರತೆಗಳ ಸಭೆಯೊಂದು ನಡೆದು ಆ ಸಭೆಯಲ್ಲಿ ಕಂಬಾಲಪಲ್ಲಿಯಲ್ಲಿ ಸವರ್ಣೀಯರಿಂದ ಹತ್ಯೆಗೀಡಾಗಿದ್ದ ವೆಂಕಟರಮಣಪ್ಪನ ಕಿರಿಯ ಸಹೋದರ ಶ್ರೀರಾಮಪ್ಪ ತನ್ನ ಸಹೋದರನ ಹತ್ಯೆಯ ನಂತರ ತಾನು ಊರು ಬಿಡುವಂತಾಗಿದ್ದು ತÀನಗೆ ಗ್ರಾಮಕ್ಕೆ ವಾಪಸ್ಸು ಹೋಗಲು ಎಲ್ಲಾ ರೀತಿಯ ಸಹಾಯಬೇಕೆಂದು ಸಭೆಗೆ ತಿಳಿಸಿದ. ಅಂತೆಯೇ ಈ ಸಂಬಂಧ ಸಭೆಯೊಂದು ನಡೆದು 08-01-2000 ರಂದು ಶ್ರೀರಾಮಪ್ಪ ಮತ್ತವನ ಸಹೋದರ ಅಂಜನಪ್ಪ, ತಂದೆ ವೆಂಕಟರಾಯಪ್ಪ ಮತ್ತು ತಾಯಿ ರಾಮಕ್ಕನವರನ್ನು ವಾಪಸ್ಸು ಊರಿಗೆ (ಕಂಬಾಲಪಲ್ಲಿಗೆ) ಕರೆತರಲಾಯಿತು. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಶಾಂತಿ ಸಂಧಾನ ಸಭೆಯೊಂದನ್ನು ಸಹ ನಡೆಸಲು ಕೂಡ ತಾಲ್ಲೂಕು ಆಡಳಿತ ತೀರ್ಮಾನಿಸಿತು. ಆದರೆ ಸಭೆಯನ್ನು ಗ್ರಾಮದಲ್ಲಿ ಎಲ್ಲಿ ನಡೆಸಬೇಕು ಅಂದರೆ ರೆಡ್ಡಿ ಒಕ್ಕಲಿಗರ ಬೀದಿಯಲ್ಲಿದ್ದ ದೇವಸ್ಥಾನದಲ್ಲೋ ಅಥವಾ ದಲಿತರ ಕೇರಿಯಲ್ಲಿದ್ದ ಅರಳೀಕಟ್ಟೆಯಲ್ಲೋ ಎಂಬ ಪ್ರಶ್ನೆ ಉದ್ಭವಿಸಿ ಸಭೆ ನಡೆಯಲಿಲ್ಲ. ಒಟ್ಟಾರೆ ಕಂಬಾಲಪಲ್ಲಿ ಉಧ್ವಿಗ್ನವಾಗೇ ಇತ್ತು.
ಇಂತಹ ಉಧ್ವಿಗ್ನ ಸ್ಥಿತಿಯಲ್ಲಿ 10-03-2000 ಸಂಜೆ 6.00 ಗಂಟೆಗೆ ದಲಿತರಾದ ಶಂಕರಪ್ಪ ಮತ್ತು ಅವನ ಸ್ನೇಹಿತ ನರಸಿಂಹಪ್ಪ, ಅಸ್ವಸ್ಥರಾಗಿದ್ದ ತಮ್ಮ ತಂದೆಯವರಿಗಾಗಿ ಎಳನೀರು ತೆಗೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಹಾಗೆ ಬರುತ್ತಿರುವಾಗ ಎದುರುಗಡೆ ಟಿವಿಎಸ್ ಮೊಪೆಡ್‍ನಲ್ಲಿ ಬರುತ್ತಿದ್ದ ಕೆ.ಎಂ.ವೆಂಕಟರೆಡ್ಡಿ ಬಿನ್ ಮದ್ದೀರೆಡ್ಡಿ, ರವಿ ಬಿನ್ ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಎಂಬಿಬ್ಬರು ರೆಡ್ಡಿ ಒಕ್ಕಲಿಗ ಹುಡುಗರು ಶಂಕರಪ್ಪ ಮತ್ತು ನರಸಿಂಹಪ್ಪನವರಿಗೆ ನೇರ ಗುದ್ದಿಸುವ ರೀತಿಯಲ್ಲಿ ಬಂದರು. ಈ ಸಮಯದಲ್ಲಿ ದಲಿತರು ಮತ್ತು ಆ ರೆಡ್ಡಿ ಒಕ್ಕಲಿಗ ಹುಡುಗರ ನಡುವೆ ತಗಾದೆ ಉಂಟಾಗಿ ಕ್ಷುಲ್ಲಕ ಜಗಳವೂ ಕೂಡ ಆಯಿತು ಮತ್ತು ಅದು ಅಲ್ಲಿಗೆ ಮುಗಿದುಹೋಗಿದ್ದರೆ ಎಲ್ಲವೂ ಸರಿಯಿರುತ್ತಿತ್ತು. ಆದರೆ ಶಂಕರಪ್ಪ ಮತ್ತು ನರಸಿಂಹಪ್ಪ ಊರಿಗೆ ಬರುತ್ತಲೇ ಅವರನ್ನು ಸುತ್ತುವರೆದ ಕೆ.ಎಂ.ಮದ್ದಿರೆಡ್ಡಿ, ರವಿ, ಕಿಟ್ಟಣ್ಣ ಆಲಿಯಾಸ್ ಕೃಷ್ಣರೆಡ್ಡಿ ಮತ್ತಿತರ 11 ಜನರ ಗುಂಪು ಹರಿತವಾದ ಆಯುಧಗಳಿಂದ ಅವರ ಮೇಲೆ ಹಲ್ಲೆ ನಡೆಸಿತು. ಅದಲ್ಲದೆ ಆ ವಿಚ್ಛಿದ್ರಕಾರಿ ಸವರ್ಣಿಯರ ಗುಂಪು ಪರಿಶಿಷ್ಟರ ಕಾಲೋನಿಯ ಮೇಲೆ ತೀವ್ರತರವಾಗಿ ಧಾಳಿ ನಡೆಸಿ ದಲಿತ ಕುಟುಂಬಸ್ಥರ ಮೇಲೆ ಭೀಕರವಾಗಿ ಹಲ್ಲೆ ನಡೆಸಿತು. ಈ ಸಮಯದಲ್ಲಿ ತಕ್ಷಣ ದಲಿತರಾದ ಶಂಕರಪ್ಪ ಮತ್ತು ನರಸಿಂಹಪ್ಪ ಸಮೀಪದ ಯನಮಲಪಾಡಿ ಗ್ರಾಮಕ್ಕೆ ತೆರಳಿ ಫೋನ್ ಮೂಲಕ ಸಮೀಪದ ಕೆಂಚನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರಾದರೂ ಆ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ವೆಂಕಟರಮಣಪ್ಪ ಭೇಟಿಕೊಟ್ಟದ್ದು ನೇರ ರೆಡ್ಡಿ ಒಕ್ಕಲಿಗರ ಮನೆಗಳಿಗೆ. ಮನೆ ಕಳೆದುಕೊಂಡಿದ್ದ, ಹಲ್ಲೆಗೊಳಗಾಗಿದ್ದ ದಲಿತರ ಕೇರಿಯತ್ತ ಆತ ಕಣ್ಣೆತ್ತಿಯೂ ನೋಡಲಿಲ್ಲ!
ಇದಿಷ್ಟು ಕಂಬಾಲಪಲ್ಲಿಯ ಏಳು ದಲಿತ ಜೀವಗಳು ಬೆಂಕಿಗೆ ಆಹುತಿಯಾಗುವ ಮುನ್ನ ದುರಂತದ ಹಿಂದಿನ ಕಥೆ. ಬಹುಶಃ ಈ ಕಥೆಯೇ ಹೇಳುತ್ತದೆ ಕಂಬಾಲಪಲ್ಲಿ ಉಧ್ವಿಗ್ನವಾಗಿತ್ತು ಇಂತಹ ದಹನಕ್ಕೆ ಪೂರ್ವ ತಯಾರಿಯಾಗಿತ್ತು ಎಂಬುದನ್ನು. ದುರಂತವೆಂದರೆ ಅಂದಿನ ಪೊಲೀಸ್ ವ್ಯವಸ್ಥೆ ಕಂಬಾಲಪಲ್ಲಿಯ ದಲಿತರ ಇಂತಹ ದುಃಖಕ್ಕೆ, ಆಪತ್ತಿನ ಪರಿಸ್ಥಿತಿಗೆ ಸಕಾಲಕ್ಕೆ ಸ್ಪಂಧಿಸಲೇ ಇಲ್ಲ. ಕಡೆ ಪಕ್ಷ ದಲಿತರ ಮೇಲೆ ಹಲ್ಲೆ ನಡೆದ ಆ ದಿನ (10-03-2000) ಸಂಜೆ ಮತ್ತು ಆ ರಾತ್ರಿ ಪೂರ ಪೊಲೀಸ್ ವ್ಯಾನ್ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೀಡುಬಿಟ್ಟಿದ್ದರೆ ಸಾಮೂಹಿಕ ದಲಿತ ದಹನವನ್ನು ಖಂಡಿತ ತಡೆಯಬಹುದಿತ್ತು.
ಸ್ವಾಭಾವಿಕವಾಗಿ ಮಾರನೇ ದಿನ ಅಂದರೆ 11-03-2000 ರ ಬೆಳಿಗ್ಗೆ ನೊಂದ ಕಂಬಾಲಪಲ್ಲಿ ದಲಿತರು ಹಿಂದಿನ ದಿನ ತಮ್ಮ ಮೇಲೆ ಆದ ದಾಳಿಯ ಬಗ್ಗೆ ಚಿಂತಾಮಣಿಯ ಡಿ.ಎಸ್.ಎಸ್. ನಾಯಕ ಎನ್.ಶಿವಣ್ಣನವರಿಗೆ ಮಾಹಿತಿ ನೀಡಿದರು. ತಕ್ಷಣ ಎನ್.ಶಿವಣ್ಣನವರು ಕೋಲಾರ ಜಿಲ್ಲಾ ಎಸ್.ಪಿ.ಯವರನ್ನು ಸಂಪರ್ಕಿಸಿದರಾದರೂ ಅವರು ರಜೆಯಲ್ಲಿದ್ದ ಕಾರಣ ಎ.ಎಸ್.ಪಿ.ಯವರು ಎನ್.ಶಿವಣ್ಣನವರಿಗೆ ತಾವು ಸರ್ಕಲ್ ಇನ್ಸ್‍ಪೆಕ್ಟರ್‍ರವರನ್ನು ಭೇಟಿಯಾಗುವಂತೆ ತಿಳಿಸಿದರು. ಈ ನಡುವೆ ಕಂಬಾಲಪಲ್ಲಿಯ ದಲಿತ ಆ ಸಂತ್ರಸ್ತರು ಸರ್ಕಲ್ ಇನ್ಸ್‍ಪೆಕ್ಟರ್‍ರವರು ಬರುವವರೆಗೂ ಕಾಯದೆ ತಮ್ಮ ಊರಿನ ವ್ಯಾಪ್ತಿಯ ಕೆಂಚನಹಳ್ಳಿ ಠಾಣೆಗೆ ತೆರಳಿ ದೂರು ನೀಡಲು ಮುಂದಾದರಾದರೂ ಮತ್ತದೇ ಅಲ್ಲಿನ ಸಬ್‍ಇನ್ಸ್‍ಪೆಕ್ಟರ್ ವೆಂಕಟರಮಣಪ್ಪ ದೂರು ಸ್ವೀಕರಿಸಲು ನಿರಾಕರಿಸಿದ! ಹಾಗೆಯೇ ತೀವ್ರವಾಗಿ ಗಾಯಗೊಂಡಿದ್ದ ಆ ದಲಿತ ಸಂತ್ರಸ್ತರನ್ನು ಆತ ಗೆಟೌಟ್ ಎಂದು ಹೋಗುವಂತೆ ಆದೇಶಿಸಿದ. ವಿಧಿಯಿಲ್ಲದೆ ಆ ಸಂತ್ರಸ್ತರು ಚಿಂತಾಮಣಿಯ ಸರ್ಕಲ್ ಇನ್ಸ್‍ಪೆಕ್ಟರ್‍ರವರನ್ನು ಭೇಟಿಯಾದರು. ಅಂತೆಯೇ ದೂರವಾಣಿ ಮೂಲಕ ತಮ್ಮ ಕಛೇರಿಗೆ ಆ ಸಬ್‍ಇನ್ಸ್‍ಪೆಕ್ಟರ್‍ರನ್ನು ಕರೆಸಿಕೊಂಡ ಸರ್ಕಲ್ ಇನ್ಸ್‍ಪೆಕ್ಟರ್ ಕಂಬಾಲಪಲ್ಲಿಯ ದಲಿತ ಸಂತ್ರಸ್ತರು ನೀಡಿದ್ದ ದೂರನ್ನು ಸಬ್‍ಇನ್ಸ್‍ಪೆಕ್ಟರ್‍ಗೆ ನೀಡಿ ದೂರನ್ನು ರಿಜಿಸ್ಟರ್ ಮಾಡಿಕೊಳ್ಳುವಂತೆ ಸೂಚಿಸಿದರು. ಅಂದಹಾಗೆ 11-03-2000 ರ ಆ ದಿನ ಇಷ್ಟೆಲ್ಲಾ ಆಗುವ ಹೊತ್ತಿಗೆ ಸಂಜೆಯಾಗಿತ್ತು. ಹಾಗೆಯೇ ಸಂಜೆ ಬಿ.ಕೆ.ಆರ್ ಎಂಬ ಖಾಸಗಿ ಬಸ್ ಹಿಡಿದು ಸಂತ್ರಸ್ತ ಆ ದಲಿತರು ಗ್ರಾಮದತ್ತ ನಡೆದರು....
ನಡೆದ ದಹನ: ಈ ನಡುವೆ ಕಂಬಾಲಪಲ್ಲಿಯಲ್ಲಿ ರೆಡ್ಡಿಗಳಲ್ಲೂ ಎರಡು ಗುಂಪಾಗಿತ್ತು. ಒಂದು ಗುಂಪು ಆಂಜನೇಯರೆಡ್ಡಿ ಎಂಬುವವನದ್ದಾಗಿದ್ದರೆ, ಮತ್ತೊಂದು ಗುಂಪು ಬುಚನಾಗಾರಿ ಭೈರೆಡ್ಡಿ ಎಂಬುವವನದಾಗಿತ್ತು. ಆಂಜನೆಯರೆಡ್ಡಿ ದಲಿತರ ಪರವಿದ್ದು ಆತ ಅಂದಿನ ಚಿಂತಾಮಣಿ ಶಾಸಕ ಚೌಡರೆಡ್ಡಿಯವರ ಬೆಂಬಲಿಗನಾಗಿದ್ದ. ಹಾಗೆಯೇ ಬುಚನಾಗಾರಿ ಭೈರೆಡ್ಡಿ ಚಿಂತಾಮಣಿಯ ಮಾಜಿ ಶಾಸಕ, ದಲಿತರ ಬಗ್ಗೆ ಉಗ್ರ ವಿರೊಧಹೊಂದಿದ್ದ ಮಾಜಿ ಸಮಾಜ ಕಲ್ಯಾಣ ಸಚಿವ ಕೆ.ಎಂ.ಕೃಷ್ಣರೆಡ್ಡಿಯವರ ಬೆಂಬಲಿಗನಾಗಿದ್ದ. ಒಟ್ಟಾರೆ ಆಂಜನೇಯರೆಡ್ಡಿ ಮತ್ತು ಬುಚನಾಗಾರಿ ಭೈರೆಡ್ಡಿಯವರ ನಡುವೆ ವೈರತ್ವ ಕೂಡ ಹಾಗೆಯೇ ಇತ್ತು. ಇನ್ನು ಸದರಿ ಆಂಜನೇಯರೆಡ್ಡಿಗೆ ತಮ್ಮ ಮೇಲೆ ದಾಳಿ ನಡೆದ ಬಗ್ಗೆ ದಲಿತರು ಮಾಹಿತಿ ಕೂಡ ನೀಡಿದ್ದರು. ಹಾಗೆಯೇ ತನ್ನ ಬೆಂಬಲಿಗರಾದ ದಲಿತರ ಮೇಲೆ ದಾಳಿ ನಡೆಸಿದ್ದರ ಬಗ್ಗೆ ಆಂಜನೇಯ ರೆಡ್ಡಿ, ಭೈರೆಡ್ಡಿ ಮತ್ತು ಆತನ ಬೆಂಬಲಿಗರನ್ನು ಅದಾಗಲೇ ಪ್ರಶ್ನಿಸಿದ್ದ ಕೂಡ. ಅಂದಹಾಗೆ ಈ ಸಮಯದಲ್ಲಿ ಅಂದರೆ ಆ ದಿನ ಆ ಸಂಜೆ ಬಿ.ಕೆ.ಆರ್ ಬಸ್ ಇಳಿದವರಲ್ಲಿ ದಲಿತರಾದ ಶ್ರೀರಾಮಪ್ಪ (ಮೊದಲೇ ಹತ್ಯೆಗೀಡಾಗಿದ್ದ ವೆಂಕಟರಮಣಪ್ಪನವರ ಸಹೋದರ), ಅಂಜನಪ್ಪ, ಶಂಕರಪ್ಪ, ಬಿ.ಕೆ.ಅಂಜನಪ್ಪ, ರಾವಣ ಮತ್ತು ಆಂಜನೇಯರೆಡ್ಡಿ ಇವರೆಲ್ಲರೂ ಇದ್ದರು. ಇವರೆಲ್ಲರೂ ಬಸ್ ಇಳಿಯುತ್ತಿದ್ದಂತೆ ಇವರಿಗಾಗಿ ಕಂಬಾಲಪಲ್ಲಿಯ ಆ ಗ್ರಾಮದಲ್ಲಿ ಅದಾಗಲೇ ಗುಂಪು ಸೇರಿದ್ದ ಭೈರೆಡ್ಡಿ ಮತ್ತವರ ಬೆಂಬಲಿಗರು ದಾಳಿ ನಡೆಸಿದರು. ದಲಿತರು ಹೆದರಿ ಓಡಿ ಹೋಗಿ ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡು ಚಿಲಕ ಹಾಕಿಕೊಂಡರು. ಆದರೆ ಆಂಜನೇಯ ರೆಡ್ಡಿ ಹಾಗೆ ಮಾಡಲಿಲ್ಲ. ಬದಲಿಗೆ ಆತ ತನ್ನ ಪರ ಬೆಂಬಲಿಗ ಒಕ್ಕಲಿಗರ ಗುಂಪು ಕಟ್ಟಿಕೊಂಡು ಭೈರೆಡ್ಡಿಯ ವಿರುದ್ಧ ಗಲಾಟೆಗೆ ನಿಂತ ಮತ್ತು ಈ ಗಲಾಟೆ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿ ಭೈರೆಡ್ಡಿಯ ಬೆಂಬಲಿಗ ಕಿಟ್ಟಣ್ಣ ಅಲಿಯಾಸ್ ಕೃಷ್ಣರೆಡ್ಡಿ ಜಗಳದಲ್ಲಿ ಕೊಲೆಯಾಗಿ ಹೋದ! ಈ ಕೊಲೆಯಾದದ್ದೇ ತಡ ಆಂಜನೇಯರೆಡ್ಡಿ ಮತ್ತು ಆತನ ಬೆಂಬಲಿಗರು ತಪ್ಪಿಸಿಕೊಂಡು ಓಡಿಹೋದರು. ಆದರೆ? ಅದಾಗಲೇ ದಲಿತರು ಹೆದರಿಕೆಯಿಂದ ಮನೆ ಸೇರಿಕೊಂಡು ಚಿಲಕ ಹಾಕಿಕೊಂಡಿದ್ದರಲ್ಲ? ಅಂತೆಯೇ ತಮ್ಮವನ ಸಾವಿಗೆ ಮೂಲ ಕಾರಣ ದಲಿತರೇ ಎಂದ ರೆಡ್ಡಿ ಒಕ್ಕಲಿಗರ ಆ ಉದ್ರಿಕ್ತ ಗುಂಪು ಮದ್ದಿರೆಡ್ಡಿ ಎಂಬುವವನ ನೇತೃತ್ವದಲ್ಲಿ ದಲಿತರ ಕೇರಿಯತ್ತ ನುಗ್ಗಿತು.
ಅಂದಹಾಗೆ ಇದೇ ಮದ್ದಿರೆಡ್ಡಿ ಕುರಿ ಕಳುವಿನ ಪ್ರಕರಣದ ಪ್ರಮುಖ ಆರೋಪಿ. ಇದೇ ಮದ್ದಿರೆಡ್ಡಿ ದಲಿತ ವೆಂಕಟರಮಣಪ್ಪನ ಹತ್ಯೆ ಆರೋಪಿ. ಇದೇ ಮದ್ದಿರೆಡ್ಡಿಯ ಮಗ ವೆಂಕಟರೆಡ್ಡಿ ಹಿಂದಿನ ದಿನ ದಲಿತ ಶಂಕರಪ್ಪನ ಮೇಲೆ ಹಲ್ಲೆ ನಡೆಸಿದ ಆರೋಪಿ. ಇಂತಹ ಆರೋಪಿಗಳ ಗುಂಪು ದಲಿತ ಶಿಕ್ಷಕ ಅಂಜನಪ್ಪ ಮತ್ತು ದಿವಂಗತ ವೆಂಕಟರಮಣಪ್ಪನ ಸಹೋದರ ಶ್ರೀರಾಮಪ್ಪನ ಮನೆಯತ್ತ ಧಾವಿಸಿತು. ಯಾವ ಪರಿಯೆಂದರೆ ಮೂರು ಪ್ರಮುಖ ದಲಿತರ ಆ ಮನೆಗಳಿಗೆ ಹೊರಗಿನಿಂದ ಬೀಗ ಜಡಿಯಲಾಯಿತು ಮತ್ತು ಆ ಮೂವರು ದಲಿತರ ಮನೆಗಳಿಗೆ ಹುಲ್ಲನ್ನು ಹೊದೆಸಲಾಯಿತು. ಹಾಗೆಯೇ ಸವರ್ಣೀಯರ ಆ ಗುಂಪು ಸೀಮೆಎಣ್ಣೆ ಮತ್ತು ಪೆಟ್ರೋಲ್‍ನ್ನು ಆ ಮೂವರು ದಲಿತರ ಮನೆಗಳಿಗೆ ಸುರಿಯಿತು. ಒಂದು ಸಣ್ಣ ಬೆಂಕಿಕಡ್ಡಿಯನ್ನು ಗೀರಿ ಅತ್ತ ಎಸೆಯಿತು, ಗಹಗಹಿಸಿ ನಕ್ಕಿತ್ತು! ಆ ವಿಕೃತ ನಗುವಿಗೆ ಕ್ಷಣಮಾತ್ರದಲ್ಲಿ ಆ ಮೂರು ದಲಿತರ ಮನೆಗಳು ಭಸ್ಮ! ಹಾಗೆಯೇ ಆ ಮೂರು ಮನೆಗಳಿಂದ ಹೊರ ತಂದ ಏಳು ದಲಿತರ ಹೆಣಗಳು 1)ಶ್ರೀರಾಮಪ್ಪ(25), 2)ಅಂಜನಪ್ಪ(27), 3)ರಾಮಕ್ಕ(70), 4)ಸುಬ್ಬಕ್ಕ(45) 5)ಪಾಪಮ್ಮ(46), 6)ನರಸಿಂಹಯ್ಯ(25), 7)ಚಿಕ್ಕಪಾಪಣ್ಣ(40).
ನ್ಯಾಯ-ಅನ್ಯಾಯದ ಕಥೆ:-ನಿಜ ಸತ್ತವರನ್ನು ವಾಪಸ್ಸು ತರಲು ಸಾಧ್ಯವಿಲ್ಲ. ಅವರ ಬದುಕನ್ನು ಮತ್ತೆಕಟ್ಟಲು ಸಾಧ್ಯವಿಲ್ಲ. ಆದರೆ ಬದುಕಿರುವ ಅವರ ಸಂಬಂಧಿಕರು ಕುಟುಂಬಸ್ಥರ ಅವರ ನೊಂದ ಶೋಷಿತ ಬಂಧುಗಳು? ಅವರನ್ನು ಬದುಕಿಸುವುದು ಬೇಡವೇ? ಖಂಡಿತ, ಅಂತಹ ಬದುಕು ದೊರೆಯುವುದು ಪಾಪಿಗಳಿಗೆ ಶಿಕ್ಷೆಯಾದಾಗ. ಹೊರಗಿನಿಂದ ಹುಲ್ಲು ತುರುಕಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದವರ ಕುತ್ತಿಗೆಗೆ ನೇಣು ಹಗ್ಗ ಬಿದ್ದಾಗ. ದುರಂತವೆಂದರೆ ಇದುವರೆಗೆ ಘಟನೆಯ ಹಳೆಯ ಕಥೆಯಾದರೆ ಇನ್ನು ಮುಂದೆ ಅದು ಬೇರೆಯದೇ ಕಥೆ! ನ್ಯಾಯ-ಅನ್ಯಾಯದ ವ್ಯಥೆ....
ದಲಿತರ ಆ ಏಳು ಜನರ ದಹನವಾದಾಗ ಅಂದು ರಾಜ್ಯದಲ್ಲಿದ್ದುದು ಎಸ್.ಎಂ.ಕೃಷ್ಣರ ಸರ್ಕಾರ. ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣರು ಅಂದು ಅಧಿಕಾರದಲ್ಲಿದ್ದಕ್ಕೆ ಕಂಬಾಲಪಲ್ಲಿಯ ಒಕ್ಕಲಿಗ ರೆಡ್ಡಿ ಸಮುದಾಯದವರು ಅಷ್ಟೊಂದು ತೀವ್ರತೆಯ ಮಟ್ಟಕ್ಕೆ ತಲುಪಿದ್ದು ಎಂಬ ಆರೋಪವಿದೆ. ಆದರೆ ಇತಿಹಾಸ ಬಲ್ಲವರಿಗೆ ಅದರ ಅರಿವಿರುವವರಿಗೆ ಅದು ಬರಿಯ ಆರೋಪವಲ್ಲ, ಸತ್ಯವೆಂಬುದು ತಿಳಿದಿದೆ. ಯಾಕೆಂದರೆ ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್‍ರವರು ಹೇಳುವುದೇ “ಅಸ್ಪøಶ್ಯತೆ ಹಾಗೆಂದರೆ ಅದು ಅಧಿಕಾರಹೀನತೆ” ಎಂದು. ಅಂದರೆ ದಲಿತರಿಗೆ ಅಧಿಕಾರ ಇಲ್ಲದ್ದರಿಂದ ಅವರು ಅಸ್ಪøಶ್ಯರಾದರು ಎಂದು. ಹಾಗೆಯೇ ಅದೇ ರಾಜಕೀಯ ಅಧಿಕಾರ ಅಂದು ತನ್ನ ಕೈಯಲ್ಲಿ ಇದ್ದಿದ್ದರಿಂದಲೇ ಕಂಬಾಲಪಲ್ಲಿಯ ರೆಡ್ಡಿ ಒಕ್ಕಲಿಗರು ಆ ಪರಿ ವ್ಯಗ್ರÀಗೊಂಡಿದ್ದು. ಈ ನಿಟ್ಟಿನಲ್ಲಿ ದಲಿತರ ದಹನವಾದಾಗ ಸಹಜವಾಗಿ ಘಟಾನುಘಟಿಗಳು ಅಲ್ಲಿ ಭೇಟಿ ನೀಡಿದ್ದರು .ಪರಿಹಾರವನ್ನೂ ಘೋಷಿಸಲಾಯಿತು. ಹಾಗೆ ಸರ್ಕಾರ ತಕ್ಷಣ ನ್ಯಾಯಾಂಗ ತನಿಖೆ ಕೂಡ ಘೋಷಿಸಿತು. ಆದರೆ ಘಟನೆಗೆ ಪರೋಕ್ಷ ಕಾರಣರಾದ ಕೆಂಚನಹಳ್ಳಿಯ ಎಸ್.ಐ. ವೆಂಕಟರಮಣಪ್ಪನ ಮೇಲೆ ಯಾವುದೇ ತನಿಖೆಯಾಗಲಿಲ್ಲ. ಒಕ್ಕಲಿಗ ರಾಜಕಾರಣಿಗಳ ಕೃಪೆ ಪಡೆದಿದ್ದರಿಂದ ಪ್ರಕರಣದ ಪ್ರಮುಖ ಆರೋಪಿಗಳ ಬಂಧನಕ್ಕೆ ಶೋಧವೇ ನಡೆಯಲಿಲ್ಲ. ದುರಂತವೆಂದರೆ ಡಿ.ಎಸ್.ಎಸ್.ನ ಅಂದಿನ ಪದಾಧಿಕಾರಿಗಳು, ಘಟನಾ ಸ್ಥಳಕ್ಕೆ ಅಂದು ಭೇಟಿ ನೀಡಿದ್ದ ಕಾಂಗ್ರೆಸ್ ಹೈಕಮಾಂಡ್ ಶ್ರೀಮತಿ ಸೋನಿಯಾಗಾಂಧಿಯವರಿಗೆ ಮನವಿ ಸಲ್ಲಿಸಿ ಘಟನೆಯ ನೈತಿಕ ಹೊಣೆಯ ಆಧಾರದ ಮೇಲೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರನ್ನು ಕಿತ್ತೊಗೆಯಬೇಕೆಂದು ಕೋರಿಕೊಂಡರಾದರೂ ಸೋನಿಯಾ ಅದಕ್ಕೆ ಕ್ಯಾರೆ ಎನ್ನಲಿಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ರೆಡ್ಡಿ ಒಕ್ಕಲಿಗ ಸಮುದಾಯದವರು 22-03-2000ರಂದು ಚಿಂತಾಮಣಿ ಬಂದ್ ನಡೆಸಿ ಅಂಬೇಡ್ಕರ್ ವಿರುದ್ಧ ಮತ್ತು ಅಂದಿನ ಡಿ.ಎಸ್.ಎಸ್.ನವರ ವಿರುದ್ಧ ಘೋಷಣೆ ಮೊಳಗಿಸಿದರು!
ಇಂತಹದ್ದೆಲ್ಲಾ ದುರಂತಗಳ ಮದ್ಯೆ ಘಟನೆಯ ಬಗ್ಗೆ ಸಿ.ಬಿ.ಐ. ತನಿಖೆ ನಡೆಸಲು ಆದೇಶಿಸಲಾಯಿತು. ಆಶ್ಚರ್ಯಕರವೆಂದರೆ ಸಿ.ಬಿ.ಐ. ತನಿಖೆ ಪ್ರಾರಂಭವಾದ ತಕ್ಷಣ ನ್ಯಾಯಾಂಗ ತನಿಖೆ ಹಿಂತೆಗೆದುಕೊಳ್ಳಲಾಯಿತು. ಯಾಕೆ ಎಂದು ಯಾರು ಕೇಳಲೇ ಇಲ್ಲ! ನಿಜ ಹೇಳಬೇಕೆಂದರೆ ರಾಜೀವ್‍ಗಾಂಧಿ ಹತ್ಯೆ ಪ್ರಕರಣ, ಕರ್ನಾಟಕದಲ್ಲಿ ಬಿ.ಜೆ.ಪಿ ಎಂ.ಎಲ್.ಎ ಚಿತ್ತರಂಜನ್ ಹತ್ಯೆ ಪ್ರಕರಣ ಹೀಗೆ ಇನ್ನಿತರ ಪ್ರಕರಣಗಳಲ್ಲಿ ನ್ಯಾಯಾಂಗ ಮತ್ತು ಸಿ.ಬಿ.ಐ ಎರಡೂ ರೀತಿಯ ತನಿಖೆ ನಡೆದು ತಪ್ಪಿಸ್ಥರು ಶಿಕ್ಷೆಗೀಡಾದರು. ಆದರೆ ಕಂಬಾಲಪಲ್ಲಿಯಲ್ಲಿ ಮಾತ್ರ ನ್ಯಾಯಾಂಗ ತನಿಖೆ ಹಿಂಪಡೆಯಲಾಯಿತು! ಪರಿಣಾಮ 2006 ಡಿಸೆಂಬರ್ 4ರಂದು ತೀರ್ಪು ನೀಡಿದ ಕೋಲಾರ ಜಿಲ್ಲಾ ನ್ಯಾಯಾಲಯ ಪ್ರತಿಕೂಲ ಸಾಕ್ಷಿಯ ನೆಪವೊಡ್ಡಿ ಕಂಬಾಲಪಲ್ಲಿಯ ಎಲ್ಲಾ 32 ಆರೋಪಿಗಳನ್ನು ಕುಲಾಸೆಗೊಳಿಸಿತು. ಪ್ರತಿಕೂಲ ಸಾಕ್ಷಿ ಎಂದರೆ ಪೊಲೀಸರ ಎದುರು ‘ಇಂತಹವರೆ ಬೆಂಕಿ ಹಚ್ಚಿದವರು’ ಎಂದು ಹೇಳಿದ್ದ ದಲಿತ ಸಾಕ್ಷಿಗಳು ನ್ಯಾಯಾಲಯದ ಎದುರು ಉಲ್ಟಾ ಹೊಡೆದರು! ಸಕಾಳ ಗಂಗಾಳಪ್ಪ ಎಂಬ ಸಾಕ್ಷಿಯ ಹೇಳಿಕೆಯನ್ನೇ ದಾಖಲಿಸುವುದಾದರೆ “ಜೀವ ಬೆದರಿಕೆಯಿಂದಾಗಿ ನಾವು ಸತ್ಯ ಹೇಳಲಿಲ್ಲ”! ಹಾಗೆಯೇ ಘಟನೆಯಲ್ಲಿ ತನ್ನ ಹೆಂಡತಿ ರಾಮಕ್ಕ, ಮಕ್ಕಳಾದ ಶ್ರೀರಾಮಪ್ಪ, ಆಂಜನೇಯ, ಮಗಳಾದ ಪಾಪಮ್ಮನವರನ್ನು ಕಳೆದುಕೊಂಡ ಎಂ.ವೆಂಕಟರಾಯಪ್ಪ ಹೇಳುವುದು “ನಾನೊಬ್ಬನೇ ತಾನೇ ಏನು ಮಾಡಲು ಸಾಧ್ಯ? ಎಲ್ಲಾ ಸಾಕ್ಷಿಗಳಿಗೂ ಅವರು ಹಣ ಕೊಟ್ಟಿದ್ದಾರೆ”. ಪರಿಣಾಮ ವೆಂಕಟರಾಯಪ್ಪ ನ್ಯಾಯಾಲಯದ ಎದುರು ಉಲ್ಟಾ ಸಾಕ್ಷಿ ಹೇಳಿದ್ದಾನೆ ಅಂತೆಯೇ ಆ 32 ಹಂತಕರ ಖುಲಾಸೆಯಾಗಿದೆ! ಹಾಗೆಯೇ ಖುಲಾಸೆಯಾದ ಆ ದಿನ (ಡಿಸೆಂಬರ್ 4, 2006) ಕಂಬಾಲಪಲ್ಲಿಯ ರೆಡ್ಡಿ ಜನರ ಮನೆಯಲ್ಲಿ ವಿಜಯೋತ್ಸವ ನಡೆದಿದೆ. ಅಲ್ಲದೆ ಬಿಡುಗಡೆಗೊಂಡ ಆ ಆರೋಪಿಗಳಿಗೆ ಅಭಿನಂದನೆಯ ಸುರಿಮಳೆ!
ದುರಂತವೆಂದರೆ ಈ ಸಂಬಂಧ ಸರ್ಕಾರ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದಾಗ ಅದರ ತೀರ್ಪು ಕೂಡ ಮೊನ್ನೆ ಆಗಸ್ಟ್ 20 ರಂದು ಹೊರಬಿದ್ದಿದೆ. ಜಸ್ಟೀಸ್ ಕೆ.ಎನ್.ಫಣೀಂದ್ರ ಮತ್ತು ಮೊಹನ ಶಾಂತನಗೌಡರ್‍ರವರಿದ್ದ ಪೀಠ ಕೋಲಾರ ಜಿಲ್ಲೆಯ ಕೆಳಹಂತದ ನ್ಯಾಯಾಲಯ ಡಿಸೆಂಬರ್ 4, 2006 ರಂದು ಸಾಕ್ಷಿಯ ಕೊರತೆಯ ಆಧಾರದ ಮೇಲೆ ನೀಡಿದ್ದ ಕಂಬಾಲಪಲ್ಲಿ ತೀರ್ಪನ್ನು ಎತ್ತಿ ಹಿಡಿದಿದೆ. ಅಂದಹಾಗೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಹೆಚ್.ಎಸ್. ಚಂದ್ರಮೌಳಿಯ ಪ್ರಕಾರ ಹೇಳುವುದಾದರೆ “ಇಲ್ಲಿ 91 ಸಾಕ್ಷಿಗಳಲ್ಲಿ 56 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ತನಿಖಾಧಿಕಾರಿ ಮತ್ತು ಸಂಬಂಧಪಟ್ಟ ವೈದ್ಯರ ವಿಚಾರಣೆ ನಡೆದಿಲ್ಲ. ಹಾಗೆಯೇ ಗಾಯ ಪ್ರಮಾಣಪತ್ರದ ದಾಖಲೆಗಳನ್ನು ಪರಿಗಣಿಸಿಲ್ಲ. ಅದಲ್ಲದೆ ಪೊಲೀಸರ ಮುಂದೆ ಸತ್ಯ ಸಾಕ್ಷಿ ನುಡಿದಿದ್ದ ದಲಿತ ಸಾಕ್ಷಿಗಳು ನ್ಯಾಯಾಲಯದ ಮುಂದೆ ತಮ್ಮ ಸಾಕ್ಷಿಗಳನ್ನು ವಿರುದ್ಧವಾಗಿ ಹೇಳಿದ್ದಾರೆ! ಅರ್ಥಾತ್ ಹಣ ಪಡೆದು ಬೆದರಿಕೆಗಳಿಗೊಳಗಾಗಿ ಸುಳ್ಳು ಹೇಳಿದ್ದಾರೆ ಮತ್ತು ಈ ಸಂದರ್ಭದಲ್ಲಿ ತನಿಖಾಧಿಕಾರಿಯಾಗಲಿ ಅಥವಾ ನ್ಯಾಯಾಲಯವಾಗಲಿ ಘಟನೆ (7 ದಲಿತರ ಜೀವಂತ ದಹನ) ನಡೆಯಲು ನಿಜಕ್ಕೂ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿಲ್ಲ. ಆ ಕಾರಣದಿಂದ ಘಟನೆಯನ್ನು ಸಂಪೂರ್ಣವಾಗಿ ರಕ್ಷಿಸಲು ನ್ಯಾಯಾಲಯ ಈ ದಲಿತರ ದಹನದ ಈ ಘಟನೆಯನ್ನು ಮರುವಿಚಾರಣೆಗೆ ಒಳಪಡಿಸಬೇಕು” ಎಂದು ಕೇಳಿಕೊಂಡರು. ಆದರೆ ಎಸ್.ಪಿ.ಪಿ. ಯವರ ಈ ಮನವಿಗೆ ಹೈಕೋರ್ಟ್ ಪೀಠ ಸ್ಪಂಧಿಸಲಿಲ್ಲ. ಬದಲಿಗೆ “ಕೆಳಹಂತದ ನ್ಯಾಯಾಲಯ ಎಲ್ಲಾ ಸಾಕ್ಷಿಗಳನ್ನು ಪರಿಶೀಲಿಸಿದೆ. ಘಟನೆಯ ಪಂಚನಾಮೆ, ಮಹಜರನ್ನು ಗಣನೆಗೆ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಎಸ್.ಪಿ.ಪಿ.ಯವರ ಮನಸೋ ಇಚ್ಛೆಗೆ ತಕ್ಕಂತೆ ಹೆಚ್ಚಿನ ಸಾಕ್ಷಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ” ಎಂದು ಎಸ್.ಪಿ.ಪಿ.ಯವರ ಮನವಿಯನ್ನು ತಳ್ಳಿ ಹಾಕಿ ಕೋಲಾರದ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2006 ಡಿಸೆಂಬರ್ 4 ರಂದು ಕಂಬಾಲಪಲ್ಲಿಯ 32 ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ಈಗಿನ ತೀರ್ಪಿನಲ್ಲಿ ಹೈಕೋರ್ಟ್ ಎತ್ತಿಹಿಡಿದಿದೆ.
ಈ ನಿಟ್ಟಿನಲ್ಲಿ ಇದು ನ್ಯಾಯವೇ? ಅಥವಾ ಘಟನೆ ನಮ್ಮ ಕಣ್ಣೆದುರೆ ನಡೆದರೂ ನಾವು ನೋಡುತ್ತಾ ಕೂರುವುದು ಇದು ಅನ್ಯಾಯವೇ? ಏನೂ ತಿಳಿಯುತ್ತಿಲ್ಲ. ಆದರೆ ದಲಿತರ ಜೀವ ಮತ್ತು ಜೀವನ ಇಂತಹ ನಿರಂತರ, ಅಂದರೆ ಮಹಾರಾಷ್ಟ್ರದ ಖೈರ್ಲಾಂಜಿ ಹತ್ಯಾಕಾಂಡ ತೀರ್ಪು, ಬಿಹಾರದ ಲಕ್ಷ್ಮಣ್‍ಪುರ್‍ಬಾಥೆ ಹತ್ಯಾಕಾಂಡ ತೀರ್ಪು ಮತ್ತು ಸದ್ಯದ ಕಂಬಾಲಪಲ್ಲಿ ತೀರ್ಪುಗಳ ಮೂಲಕ ಕಾಲಕಸವಾಗುತ್ತಿರುವುದು ನಿಶ್ಚಿತ. ಹಾಗೆಯೇ “ಇಂತಹ ತೀರ್ಪುಗಳ ವ್ಯವಸ್ಥೆಯ ಇಂತಹ ರಕ್ಷಣೆ” ದಲಿತರಿಗೆ ಯಾವ ಭರವಸೆಯನ್ನಾದರೂ ನೀಡುತ್ತದೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಖಂಡಿತ, ಒಂದು ಆಶಾಕಿರಣ ಕಾಣುತ್ತದೆ. ಅದೆಂದರೆ ಕಂಬಾಲಪಲ್ಲಿ ಘಟನೆ ನಡೆದಾಗ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಒಕ್ಕಲಿಗರು. ಅವರ ಬಳಿ ರಾಜಕೀಯ ಅಧಿಕಾರ ಇದ್ದಿದ್ದರಿಂದಲೇ ಕಂಬಾಲಪಲ್ಲಿಯ ರೆಡ್ಡಿ ಒಕ್ಕಲಿಗರು ಹಾಗೆ ‘ಬೆಂಕಿ ಹಚ್ಚಲು’ ಕಾರಣವಾಯಿತು. ಹಾಗೆಯೇ ಅಂತಹ ಅಧಿಕಾರ ಅವರ ಬಳಿ ನಿರಂತರ ಇದ್ದಿದ್ದರಿಂದಲೇ ಕಂಬಾಲಪಲ್ಲಿ ವಿಚಾರಣೆ ನಡೆಸುತ್ತಿದ್ದ ಕೋಲಾರದ ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶರೊರ್ವರನ್ನು ಎತ್ತಂಗಡಿ ಮಾಡಿಸಿ ಬೇರೆಯವರನ್ನು ಅಲ್ಲಿ ಹಾಕಿಸಿದ್ದು, ಹಾಗೆಯೇ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ನೇಮಕಗೊಂಡಿದ್ದ ಎಸ್.ಪಿ.ಪಿ.ಯವರನ್ನು ಹಿಂತೆಗೆದುಕೊಂಡಿದ್ದು.
ಒಟ್ಟಾರೆ ದೌರ್ಜನ್ಯ, ರಾಜಕೀಯ ಅಧಿಕಾರ ಇಲ್ಲದವರಿಗೆ ನಡೆಯುತ್ತದೆ ಮತ್ತು ಅಂತಹ ಅಧಿಕಾರ ದೊರೆಯದಿದ್ದರೆ ದೌರ್ಜನ್ಯ ಒಂದಿಲ್ಲೊಂದು ರೂಪಗಳಲ್ಲಿ ತನ್ನ ರೌದ್ರಾವತಾರವನ್ನು ತೋರುತ್ತಲೇ ಇರುತ್ತದೆ. ಅದಕ್ಕೆ ಅಂಬೇಡ್ಕರ್ ಹೇಳಿದ್ದು “ರಾಜಕೀಯ ಅಧಿಕಾರ ಪ್ರಗತಿಯ ಹೆಬ್ಬಾಗಿಲು ತೆಗೆಯುವ ಬೀಗದ ಕೈ” ಎಂದು. ಅಂದಹಾಗೆ ಅಂತಹ ರಾಜ್ಯಾಧಿಕಾರದ ಬೀಗದ ಕೈ ರಕ್ಷಣೆಯ ಅಸ್ತ್ರ ಕೂಡ ಆಗುತ್ತದೆ. ಆಗಬಲ್ಲದು. ಈ ನಿಟ್ಟಿನಲ್ಲಿ ದಲಿತರು ಇನ್ನು ಮುಂದಾದರೂ ಅದನ್ನು ಪಡೆಯುವ ದಿಕ್ಕಿನಲ್ಲಿ ಚಿಂತಿಸಬೇಕಷ್ಟೆ.

Saturday, 30 August 2014

ಅಪಾರ್ಥೈಡ್ ಎಂಬ ‘ಕಪ್ಪು ಅಸ್ಪøಶ್ಯತಾಚರಣೆ’ ಮತ್ತು ಮಂಡೇಲಾ

                                   -ರಘೋತ್ತಮ ಹೊ.ಬ

     
  ಅಪಾರ್ಥೈಡ್ ಅಥವಾ ಇಂಗ್ಲೀಷಿನಲ್ಲಿ ಬರೆಯುವುದಾದರೆ apartheid ಹಾಗೆಂದರೆ “the state of being apart” ಎಂದರ್ಥ. ಅಂದರೆ ಕನ್ನಡದಲ್ಲಿ ಸರಳವಾಗಿ ಹೇಳುವುದಾದರೆ “ಇತರರಿಂದ ಬೇರೆಯಾಗಿ ದೂರ ಇರುವುದು ಅಥವಾ ದೂರ ಇರಿಸುವುದು” ಎಂದರ್ಥ. ಅರ್ಥವಾಯಿತಲ್ಲವೆ? ದೂರ ಇರಿಸುವುದು ಅಥವಾ ಇರುವುದು ಎಂದರೆ, ಭಾರತದಲ್ಲಿ ಅಸ್ಪøಶ್ಯರನ್ನು ಊರ ಹೊರಗೆ ಇಟ್ಟ ಹಾಗೆ, ದೇವಸ್ಥಾನಗಳಿಂದ ದೂರ ಇಟ್ಟ ಹಾಗೆ, ರಸ್ತೆಯಲ್ಲಿ ಸಂಚರಿಸಲು ನಿರ್ಬಂಧಿಸಿದ ಹಾಗೆ, ಮೇಲ್ಜಾತಿ ಜನರ ಗುಲಾಮರಾಗಿ ದುಡಿಸಿಕೊಳ್ಳುತ್ತಿದ್ದ ಹಾಗೆ ದಕ್ಷಿಣಾ ಆಫ್ರಿಕಾದಲ್ಲಿ ಕಪ್ಪು ಜನರನ್ನು ಬಿಳಿಯರು ದೂರ ಇಟ್ಟಿದ್ದರು. ಬಿಳಿಯರಿಗೆ ಪ್ರತ್ಯೇಕ ಹೋಟೆಲ್‍ಗಳು, ಬೀಚ್‍ಗಳು, ಶಾಪಿಂಗ್ ಮಾಲ್‍ಗಳು, ವಾಸಸ್ಥಳದ ಬಡಾವಣೆಗಳು, ಕಪ್ಪು ಜನರನ್ನು ಅಲ್ಲಿ ಪ್ರವೇಶಿಸಲು ನಿರ್ಬಂಧಿಸಿದ್ದು, ಅವರ ನಾಗರೀಕತೆಯನ್ನು ಕಿತ್ತುಕೊಂಡು ದೂರದ ಗುಡ್ಡಗಾಡು ರಾಜ್ಯಗಳನ್ನು ಅವರಿಗೆ ನೀಡಿದ್ದು, ಅವರ ಗುಲಾಮಗಿರಿಯ ಬಿಟ್ಟಿ ದುಡಿತದಲ್ಲಿ ದಕ್ಷಿಣ ಆಫ್ರಿಕಾವನ್ನು ಅರವತ್ತರ ದಶಕದಲ್ಲಿ ಜಗತ್ತಿನ ಅತಿ ಶ್ರೀಮಂತ ರಾಷ್ಟ್ರವಾಗಿಸಿದ್ದು (ಜಪಾನಿನ ನಂತರ ದಕ್ಷಿಣಾ ಆಫ್ರಿಕಾ ಶೇ.67 ಜಿಡಿಪಿಯೊಂದಿಗೆ ಎರಡನೇ ಸ್ಥಾನದಲ್ಲಿತ್ತು!) ಅಪಾರ್ಥೈಡ್ ಎಂಬ so called ದಕ್ಷಿಣಾ ಆಫ್ರಕಾದ ಅಸ್ಪøಶ್ಯತೆಗೆ ಭವ್ಯ ಸಾಕ್ಷಿಗಳಾಗಿ ನಿಲ್ಲುತ್ತವೆ. ದುರಂತವೆಂದರೆ ಇಂತಹದ್ದೊಂದು ಶಾಸನಬದ್ಧ ಅಸ್ಪøಶ್ಯತೆಯ  ಕಾನೂನನ್ನು 1948 ಸಾರ್ವತ್ರಿಕ ಚುನಾವಣೆಯ ನಂತರ ಅಲ್ಲಿಯ ಅಲ್ಪಸಂಖ್ಯಾತ ಬಿಳಿಯರ ಸರ್ಕಾರ ಅಧಿಕೃತವಾಗಿ ಜಾರಿಗೊಳಿಸಿತು. ಆ ಮೂಲಕ ಅದು ಸಮಾಜವನ್ನು ಬಿಳಿಯರು, ಬಣ್ಣದವರು, ಭಾರತೀಯರು ಮತ್ತು ಕಪ್ಪುಜನರು ಹೀಗೆ 4ಗುಂಪುಗಳಾಗಿ ವಿಭಜಿಸಿತು. (ಭಾರತದಲ್ಲಿ ಮನು ಧರ್ಮಶಾಸ್ತ್ರ ಸಮಾಜವನ್ನು ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು ಹೀಗೆ 4ವರ್ಣಗಳಾಗಿ ವಿಭಜಿಸಿದ ಹಾಗೆ!) ಅಂದಹಾಗೆ ನಮ್ಮ ಗಾಂಧೀಜಿಯವರು ಕೂಡ ದಕ್ಷಿಣ ಆಫ್ರಿಕಾದಲ್ಲಿ ಕೆಲ ಕಾಲ ಇದ್ದರು. ಆದರೆ ಅಲ್ಲಿ ಅವರು  ಹೋರಾಡಿದ್ದು ಅಲ್ಲಿಯ ಕಪ್ಪುಜನರ ಪರ ಅಲ್ಲ! ಬದಲಿಗೆ ಅಲ್ಲಿ ಅಲ್ಪ ಸಂಖ್ಯೆಯಲ್ಲಿದ್ದ ಭಾರತೀಯರ ಪರವಷ್ಟೆ!!
   
   ಹಾಗಿದ್ದರೆ ದಕ್ಷಿಣ ಆಫ್ರಿಕಾದ ಇಂತಹ ಅಪಾರ್ಥೈಡ್ ಎಂಬ ಅಸ್ಪøಶ್ಯತಾಚರಣೆಯ ವಿರುದ್ಧ ಹೋರಾಡಿದ್ದು? ನಿಸ್ಸಂಶಯವಾಗಿ ಅದು ರೋಲಿಹ್ಲಾಹ್ಲ ಮಂಡೇಲಾ. ಜನಪ್ರಿಯ ಧಾಟಿಯಲ್ಲಿ ಹೇಳುವುದಾದರೆ ಡಾ.ನೆಲ್ಸನ್ ಮಂಡೇಲಾ. ಅವರ ಆತ್ಮಕತೆ “Long Walk To Freedom” ನಲ್ಲಿ ಅವರೇ ಹೇಳಿಕೊಂಡಿರುವುದನ್ನು ಉಲ್ಲೇಖಿಸುವುದಾದÀರೆ “ನನ್ನ ಜೀವನದಲ್ಲಿ ಸಂಭ್ರಮದ, ಸಾಕ್ಷಾತ್ಕಾರದ, ಸತ್ಯದ ಒಂದು ಕ್ಷಣವೂ ಇಲ್ಲ. ತುಂಬಿದ್ದೆಲ್ಲ ಒತ್ತಟ್ಟಿಗೆ ಬರುತ್ತಿದ್ದ ಸಹಸ್ರ, ಸಹಸ್ರ ಮರೆಯಲಾಗದ, ನೋವಿನ, ಅಪಮಾನದ ಕ್ಷಣಗಳೇ.  ನಿಜ ಹೇಳಬೇಕೆಂದರೆ ಇಂತಹ ನೋವು, ಅಪಮಾನ ನನ್ನಲ್ಲಿ ರೋಷವನ್ನು, ಬಂಡಾಯಗಾರನನ್ನು, ನನ್ನ ಜನರನ್ನು ಅನ್ಯಾಯವಾಗಿ ಜೈಲಿಗೆ ತಳ್ಳಿದ ವ್ಯವಸ್ಥೆಯ ವಿರುದ್ಧ ಹೋರಾಡುವ ಛಲವನ್ನು ತುಂಬಿತು”.
  
  ಖಂಡಿತ, ಮಡಿಬಾ ಪಂಥದಲ್ಲಿ 1918 ಜುಲೈ 18ರಂದು ಜನಿಸಿದ ಮಂಡೇಲಾರ ಬದುಕಿನಲ್ಲಿ ತುಂಬಿದ್ದು ಬರೀ ನೋವು, ಅಪಮಾನ, ದೌರ್ಜನ್ಯದ ದಿನಗಳಷ್ಟೆ. ಯಾಕೆಂದರೆ ಅಂದಿನ ದಕ್ಷಿಣ ಆಫ್ರಿಕಾದ ಸರ್ಕಾರ ಶಿಕ್ಷಣ, ಆಸ್ಪತ್ರೆ, ಪ್ರವಾಸಿ ತಾಣ, ಸಮುದ್ರ ತೀರಗಳು ಹೀಗೆ ಪ್ರತಿಯೊಂದನ್ನೂ ಅಂದಿನ ಕಪ್ಪು ಜನರಿಗೆ ಪ್ರತ್ಯೇಕವಾಗಿ ಬಿಳಿಯರಿಗಿಂತ ಕೀಳಾಗಿ ನೀಡಿತ್ತು. ಇಂತಹ ಅಸಮಾನತೆಯ ಸಮಯದಲ್ಲಿ ಪದವಿ ಮುಗಿಸಿದ ಮಂಡೇಲ 1942ರ ಹೊತ್ತಿಗೆ ಕಪ್ಪುಜನರ ಪ್ರಾಬಲ್ಯದ ‘ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್’ ಸೇರಿದರು. 1944 ರಲ್ಲಿ ಅದರ ಯುವ ಸಮಿತಿಯ ಹುಟ್ಟಿಗೂ ಕಾರಣರಾದರು. ಆ ಮೂಲಕ ಮಂಡೇಲ ಯಾವ ಒಂದು ಸರ್ಕಾರಿ ಕೃಪಾಪೋಷಿತ  ಅಸ್ಪøಶ್ಯತಾಚರಣೆ ಅಥವಾ ಅಪಾರ್ಥೈಡ್ ಅಥವಾ ‘ಬಣ್ಣ ಬೇಧ ನೀತಿ’ ಯ ವಿರುದ್ಧ ಹೋರಾಟಕ್ಕಿಳಿದಿದ್ದರು. ಯಾವ ಮಟ್ಟಕ್ಕೆಂದರೆ 1952ರಲ್ಲಿ ಪ್ರಾರಂಭವಾದ ‘ಕಾನೂನು ಭಂಗ ಅಭಿಯಾನ’’ದಲ್ಲಿ ನೆಲ್ಸನ್ ಮಂಡೇಲ ಅದರ ’ರಾಷ್ಟ್ರೀಯ ಸ್ವಯಂ ಸೇವಕ ಪಡೆ’ಯ ಮುಖ್ಯಸ್ಥರಾಗುವ ಮಟ್ಟಿಗೆ.
  
  ತದನಂತರ ಬಿಳಿಯರು ಜಾರಿಗೊಳಿಸಿದ್ದ ಆರು ಕಠಿಣ ಕಾನೂನುಗಳ ವಿರುದ್ಧ ಅಸಹಕಾರ ಚಳುವಳಿಯನ್ನು ಮಂಡೇಲ ಪ್ರಾರಂಭಸಿದರು. ಪರಿಣಾಮವಾಗಿ ಅವರು ಮತ್ತು ಇತರ 9 ಜನರನ್ನು ಬಿಳಿಯರ ‘ನ್ಯಾಷನಲ್ ಪಾರ್ಟಿ’ ನೇತೃತ್ವದ ಸರ್ಕಾರ ’ಕೋಮುದಂಗೆ ನಿಯಂತ್ರಣ ಕಾಯ್ದೆ’’ಯಡಿ ಬಂಧಿಸಿ ಒಂಬತ್ತು ತಿಂಗಳ ಕಠಿಣ ದುಡಿಮೆ ಶಿಕ್ಷೆಗೆ ಒಳಪಡಿಸಿತು. ಪ್ರಶ್ನೆ ಏನೆಂದರೆ ಓರ್ವ ಜನಪ್ರಿಯ ನಾಶಯಕನನ್ನೆ ಹೀಗೆ ಅಲ್ಲಿನ ಸರ್ಕಾರ ಕಠಿಣ ದುಡಿಮೆಗೆ ಒಳಪಡಿಸಿತ್ತೆಂದರೆ ಇನ್ನು ಅಲ್ಲಿ ಸಾಮಾನ್ಯ ಕಪ್ಪುಜನರ ಸ್ಥಿತಿ ಹೇಗಿರಬೇಡ? ಒಂದರ್ಥದಲಿ ಅಲ್ಲಿ ಜಾರಿ ಇದ್ದದ್ದು ‘ಕಪ್ಪು ಅಸ್ಪøಶ್ಯತಾಚರಣೆ’ ಯಷ್ಟೆ ಅಲ್ಲ, ಜೊತೆಗೆ ಸಾಮಾಜಿಕ ಸರ್ಕಾರಿ ಜೀತಗಾರಿಕೆ! ಒಟ್ಟಾರೆ ಇಂತಹ ಕಠಿಣ ದುಡಿಮೆಯ ಮೂಲಕ ಮಂಡೇಲರ ಜೈಲುವಾಸ ಪ್ರಾರಂಭವಾಯಿತು. ಇದರ ಹಿಂದೆಯೇ ಅವರ ವಿರುದ್ಧ ನಿಷೇಧ ಕೂಡ ಹೇರಲಾಯಿತು. ಅದು ಎಂತಹ ನಿಷೇಧವೆಂದರೆ 1955 ಜೂನ್ 26ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಕ್ಲಿಪ್‍ಟೌನ್ ಎಂಬಲ್ಲಿ ‘ಸ್ವಾತಂತ್ರ್ಯ ಸನ್ನದ’’ನ್ನು ಘೋಷಿಸಿದಾಗ ಮಂಡೇಲ ಗುಪ್ತವಾಗಿ, ಮೂಕಪ್ರೇಕ್ಷಕನಾಗಿ ಅದನ್ನು ನೋಡಬೇಕಾಯಿತಷ್ಟೆ! ಈ ನಡುವೆ 1955ರ ಡಿಸೆಂಬರ್ ಅಂತ್ಯದಲ್ಲಿ ದೇಶಾದ್ಯಂತ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಮಂಡೇಲರನ್ನು ಮತ್ತೊಮ್ಮೆ ಬಂಧಿಸಲಾಯಿತು. ಬಂಧಿಸಿ 1956ರಲ್ಲಿ ಅವರ ವಿರುದ್ಧ ಸುಪ್ರಸಿದ್ಧ ‘ದೇಶ ದ್ರೋಹದ ಅಪಾದನೆ’ಯನ್ನು  ಹೊರಿಸಲಾಯಿತು. ಅಂದಹಾಗೆ ಇಂತಹ ಅಪಾದನೆ ಬರೀ ಮಂಡೇಲಾರ ವಿರುದ್ಧ ಮಾತ್ರವಷ್ಟೆ ಅಲ್ಲ, ಸುಮಾರು 156ಜನರನ್ನು ಈ ದೇಶದ್ರೋಹದ ಆರೋಪದಡಿ ಬಂಧಿಸಲಾಯಿತು. ಬಂಧನದ ನಂತರ ಸುಪ್ರಸಿದ್ಧ ಈ ವಿಚಾರಣೆ 1961ರವರೆಗೂ ಮುಂದುವರಿದು ಮಾರ್ಚ್29, 1961ರಲ್ಲಿ ಮಂಡೇಲಾರನ್ನು ನಿರಪರಾಧಿ ಎಂದು ಘೋಷಿಸಲಾಯಿತು. ಈ ವಿಚಾರಣೆಯ ಸಂದರ್ಭದಲ್ಲಿ ಮಂಡೇಲ ಪೀಟರ್‍ಮಾರಿಟ್ಜ್‍ಬರ್ಗ್‍ನಲ್ಲಿ ‘ಅಖಿಲ ಆಫ್ರಿಕಾ ಸಮ್ಮೇಳನ’ದಲ್ಲಿ ಮಾತನಾಡಿ ಅಂದಿನ ದಕ್ಷಿಣ ಆಫ್ರಿಕಾದ ಪ್ರಧಾನಿ ವೆರ್‍ಫೋರ್ಡ್‍ರಿಗೆ ಜನಾಂಗ ಭೇಧವಿಲ್ಲದೆ ರಾಷ್ಟ್ರೀಯ ಸಮ್ಮೇಳನವೊಂದನ್ನು ಕರೆಯಬೇಕೆಂದು ಆಗ್ರಹಿಸುತ್ತಾರೆ. ತಪ್ಪಿದರೆ ದಕ್ಷಿಣ ಆಫ್ರಿಕಾವನ್ನು ಸ್ವಾತಂತ್ರ್ಯಗೊಳಿಸಲು ರಾಷ್ಟ್ರೀಯ ಚಳುವಳಿಯೊಂದನ್ನು ಆರಂಭಿಸುವುದಾಗಿ ಅವರು ಗುಡುಗುತ್ತಾರೆ. ಪರಿಣಾಮ ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರ ಮಂಡೇಲರ ವಿರುದ್ಧ ಮತ್ತೊಮ್ಮೆ ಕಾರ್ಯಾಚರಣೆಗಿಳಿಯಿತು. ಈ ಸಂದರ್ಭದಲ್ಲಿ ಮಂಡೇಲ ಬೇರೆ ದಾರಿ ಇಲ್ಲದೆ ಭೂಗತರಾದರು. ಭೂಗತರಾದದ್ದಷ್ಟೆ ಅಲ್ಲ ಸರ್ಕಾರದ ವಿರುದ್ಧ ಮಂಡೇಲ ಶಸ್ತ್ರಾಸ್ತ್ರ ಹೋರಾಟ ಸಹ ಕೈಗೊಂಡರು. ಹಾಗೆಯೇ ಅಂತಹ ಹೋರಾಟದಲ್ಲಿ ‘ಉಮಕೊಂಟೊ ವಿಸಿಜ್ಟೆ (ದೇಶದ ಈಟಿ)’ ಎಂಬ ಕಪ್ಪುಜನರ ಶಸ್ತ್ರಾಸ್ತ್ರ ಪಡೆ ಕೂಡ ರೂಪುಗೊಂಡಿತು.

   ಒಟ್ಟಾರೆ ಹೇಳುವುದಾದರೆ ಈ ಸಂದರ್ಭ ಮಂಡೇಲರ ಹೋರಾಟದ ನಿರ್ಣಾಯಕ ನಿರ್ಣಾಯಕ ಕ್ಷಣವಾಗಿತ್ತು. ಯಾಕೆಂದರೆ ಅತ್ತ ಶಸ್ತ್ರಾಸ್ತ್ರ ಹೋರಾಟ ಆರಂಭವಾಗುತ್ತಲೇ ಡೇವಿಡ್ ಮೊಟ್ಸಾಮಯಿ ಎಂದು ಹೆಸರು ಬದಲಿಸಿಕೊಂಡ ಮಂಡೇಲ ದಕ್ಷಿಣ ಆಫ್ರಿಕಾ ಬಿಟ್ಟು ಇಂಗ್ಲೆಂಡಿಗೆ ತೆರಳಿ ಶಸ್ತ್ರಾಸ್ತ್ರ ಹೋರಾಟಕ್ಕೆ ಅದರ ಬೆಂಬಲ ಕೋರಿದರು (ಯಾಕೆಂದರೆ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರು ಡಚ್ಚರಾಗಿದ್ದರು). ಅಲ್ಲದೆ ಈ ಕಾರಣಕ್ಕಾಗಿ ಮೊರಾಕ್ಕೊ, ಇಥಿಯೋಫಿಯಾದಲ್ಲಿ ಸೇನಾ ತರಬೇತಿ ಕೂಡ ಪಡೆದ ಮಂಡೇಲ 1962ಜುಲೈ ನಲ್ಲಿ ದೇಶಕ್ಕೆ ವಾಪಸ್ ಮರಳುತ್ತಿದ್ದಂತೆ ಮತ್ತೊಮ್ಮೆ ಬಂಧನಕ್ಕೊಳಗಾಗಬೇಕಾಯಿತು. ಅವರ ಮೇಲೆ ಕಾನೂನಿಗೆ ವಿರುದ್ಧವಾಗಿ ದೇಶ ಬಿಟ್ಟು ತೆರಳಿದ ಆರೋಪ ಹೊರಿಸಿದ ಬಿಳಿಯರ ಸರ್ಕಾರ ಮತ್ತೊಮ್ಮೆ ಅವರಿಗೆ 5 ವರ್ಷಗಳ ಜೈಲುಶಿಕ್ಷೆ ವಿಧಿಸಿತು. ಇದಷ್ಟೆ ಅಲ್ಲದೆ 1963ರಲ್ಲಿ ಮತ್ತೊಮ್ಮೆ ದೇಶದ್ರೋಹದ ಆರೋಪ ಹೊರಿಸಿ ಮಂಡೇಲಾರಿಗೆ ಮರಣದಂಡನೆ ವಿಧಿಸುವಂತೆ ನ್ಯಾಯಾಲಯದ ಮುಂದೆ ಬಿಳಿಯರ ಸರ್ಕಾರ ಕೋರಿದಾಗ ವಾದ ಮಂಡಿಸುತ್ತಾ ಸ್ವತಃ ವಕೀಲರಾದ ಮಂಡೇಲ ಹೀಗೆ ಹೇಳುತ್ತಾರೆ, “ನಾನು ಬಿಳಿಯರ ದಬ್ಬಾಳಿಕೆ ವಿರುದ್ಧ ಹೋರಾಡಿದ್ದೇನೆ, ಹಾಗೆಯೇ ಕಪ್ಪುಜನರ ದಬ್ಬಾಳಿಕೆಯ ವಿರುದ್ಧವೂ ಹೋರಾಡಿದ್ದೇನೆ. ಒಟ್ಟಾರೆ ನಾನು ಸರ್ವರೂ ಸಾಮರಸ್ಯ ಮತ್ತು ಸಮಾನ ಅವಕಾಶಗಳಡಿ ಬದುಕುವ ಪ್ರಜಾಪ್ರಭುತ್ವದ, ಸ್ವತಂತ್ರ ಸಮಾಜದ ಆದರ್ಶಗಳನ್ನು ಪೋಷಿಸುತ್ತೇನೆ. ಅದೊಂದು ಆದರ್ಶ. ಯಾಕೆಂದರೆ ನಾನು ಅಂತಹ ಆದರ್ಶವನ್ನು ಸಾಧಿಸುವ ಮತ್ತು ಅದರಡಿಯಲ್ಲಿ ಬದುಕುವ ಆಶಯ ಹೊಂದಿದ್ದೇನೆ. ಅಗತ್ಯವಾದರೆ ಅಂತಹ ಆದರ್ಶದ ಸಾಧನೆಗಾಗಿ ಸಾಯಲೂ ಕೂಡ ಸಿದ್ಧ”!
 
 ವಾವ್! ಎಂತಹ ಗ್ರೇಟ್ ಮಾತುಗಳು. ಅಂದಹಾಗೆ ಇಂತಹ ಗ್ರೇಟ್ ಮಾತುಗಳನ್ನಾಡಿದ ಮಂಡೇಲ ಮತ್ತವರ ಸಂಗಾತಿ ಸ್ನೇಹಿತ ವಾಲ್ಟರ್ ಸಿಸುಲುರವರನ್ನು 1964 ಜುಲೈ 11ರಂದು ದಕ್ಷಿಣಾ ಆಫ್ರಿಕಾದ ಬಿಳಿಯರ ಸರ್ಕಾರ ಜೀವಾವಧಿ ಶಿಕ್ಷಗೆ ಗುರಿಪಡಿಸಿ ರಾಬ್ಬನ್ ದ್ವೀಪಕ್ಕೆ ಕಳುಹಿಸುತ್ತದೆ, ಆ ಮೂಲಕ ಸ್ವಾತಂತ್ರ್ಯದ ಪರ, ಬಂಧನದ ದೌರ್ಜನ್ಯದ ವಿರುದ್ಧ ಹೋರಾಡಿದ ಧೀರಶಕ್ತಿಯೊಂದು ಸತತ 26ವರ್ಷಗಳವರೆಗೆ ಸುಧೀರ್ಘ ಜೈಲುವಾಸಕ್ಕೆ ತೆರಳುತ್ತದೆ. ಬಹುಶಃ ಇದು ವ್ಯವಸ್ಥೆ ಶ್ರೇಷ್ಠವ್ಯಕ್ತಿಯೊಬ್ಬನ ಪರಿಪೂರ್ಣ 26ವರ್ಷಗಳನ್ನು ಕಿತ್ತುಕೊಂಡದ್ದೆಂದರೆ ತಪ್ಪಾಗದು.
 
 ಸಮಾಧಾನದ ವಿಷಯವೆಂದರೆ 1990 ಭಾನುವಾರ ಫೆಬ್ರವರಿ11 ಮಂಡೇಲ ಜೈಲಿನಿಂದ ಹೊರಬರುತ್ತಾರೆ. ಹೊರಬಂದದ್ದೆ ಅಪಾರ್ಥೈಡ್ ಎಂಬ ಆ ಬಿಳಿಯರ ಅಸ್ಪøಶ್ಯತಾಚರಣೆಯನ್ನು ಕೊನೆಗಾಣಿಸುವ ನಿಟ್ಟಿನಲಿ ಅವರ ಜೊತೆ ಮಾತುಕತೆಗಿಳಿದು 1994 ಏಪ್ರಿಲ್ 27 ರಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗುತ್ತಾರೆ. ಪರಿಣಾಮವಾಗಿ ಅಂದರೆ ಶಾಂತಿಮಾರ್ಗ ಹಿಡಿದುದ್ದಕ್ಕಾಗಿ 1993ರಲ್ಲಿ ಅವರು ಅಂದಿನ ಬಿಳಿಯರ ಸರ್ಕಾರದ ಅಧ್ಯಕ್ಷ ಎಫ್.ಡಬ್ಲ್ಯೂ.ಡಿ ಕ್ಲರ್ಕ್‍ರೊಡನೆ ನೊಬೆಲ್ ಪ್ರಶಸ್ತಿಗೂ ಕೂಡ ಪಾತ್ರರಾಗುತ್ತಾರೆ. ಹಾಗೆಯೇ ಜೈಲಿನಿಂದ ಬಿಡುಗಡೆಯಾದ ವರ್ಷ(1990)ಭಾರತ ಸರ್ಕಾರ ನೀಡುವ ‘ಭಾರತ ರತ್ನ’ ಪ್ರಶಸ್ತಿಗೂ ಕೂಡ ಮಂಡೇಲ, ಮರಣೋತ್ತರವಾಗಿ ಆ ಪ್ರಶಸ್ತಿ ಪಡೆದ ಬಾಬಾಸಾಹೇಬ್ ಅಂಬೇಡ್ಕರರ ಜೊತೆ ಪಾಲುದಾರರಾಗುತ್ತಾರೆ! ತನ್ಮೂಲಕ ಮಹಾನ್ ತ್ಯಾಗದ ಎರಡು ರತ್ನಗಳು ಶ್ರೇಷ್ಠ ಹೋರಾಟವೊಂದರ ನೆನಪಿಗೆ ಪಾಲುದಾರರಾಗುತ್ತವೆ. ಕಾಕತಾಳೀಯವೆಂದರೆ ಒಂದೇ ವರ್ಷದಲ್ಲಿ ಭಾರತರತ್ನಕ್ಕೆ ಪಾಲುದಾರರಾದ ಆ “ರತ್ನಗಳು” ಸಾವಿನಲ್ಲೂ ಪಾಲುದಾರರಾದದ್ದು! ಅಂದರೆ ಬಾಬಾಸಾಹೇಬ್ ಅಂಬೇಡ್ಕರ್ ಯಾವ ದಿನ ನಿಧನರಾದರೊ (ಡಿಸೆಂಬರ್ 6) ಅದೇ ದಿನ ಅಂದರೆ 2013 ಡಿಸೆಂಬರ್ 6ರಂದೇ ಮಂಡೇಲಾ ಕೂಡ ನಿಧನರಾದದ್ದು!
 
  ಖಂಡಿತ, ಇದು ಕಾಕತಾಳೀಯವೆನಿಸಿದ್ದರೂ ಘಟಿಸಿದ್ದಂತೂ ಸತ್ಯ. ಯಾಕೆಂದರೆ ಅಸ್ಪøಶ್ಯತಾಚರಣೆ ಅದು ದಲಿತರ ವಿರುದ್ಧ ನಡೆದಿದ್ದಾರೇನು? ಆಫ್ರಿಕಾದ ಕಪ್ಪುಜನರ ವಿರುದ್ಧ ನಡೆದಿದ್ದಾರೇನು? ಎರಡೂ ಕೂಡ ಮಾನವ ಹಕ್ಕುಗಳ ಘೋರ ಉಲ್ಲಂಘನೆಯೇ. ಈ ನಿಟ್ಟಿನಲಿ ಮಂಡೇಲ ನಿಧನದ ಸಂದರ್ಭದಲ್ಲಿ ರಾಷ್ಟ್ರದ ಸಧ್ಯದ ದಲಿತರ ದನಿಯಾಗಿರುವ ಮಾಯಾವತಿಯವರ ಹೇಳಿಕೆಯನ್ನು ಉಲ್ಲೇಖಿಸುವುದಾದರೆ “Like Nelson Mandela fought against racism, Babasaheb Ambedkar fought casteism. So my respects to  both”. ಖಂಡಿತ, ಗೌರವ ಇಬ್ಬರಿಗೂ ಸಲ್ಲಬೇಕು. ಬಾಬಾಸಾಹೇಬ್ ಅಂಬೇಡ್ಕರರಿಗೂ ಹಾಗೆಯೇ ಅವರ ಹಾಗೆ ದಕ್ಷಿಣ ಆಫ್ರಿಕಾದ ಕಪ್ಪುಜನರ ಹಕ್ಕುಗಳ ಪರ ಹೋರಾಡಿದ ನೆಲ್ಸನ್ ಮಂಡೇಲಾರಿಗೂ.   

Wednesday, 30 July 2014


    ದಲಿತರ ಸಹಜವಾದ ಬುದ್ಧ ಪ್ರೀತಿ

                                -ರಘೋತ್ತಮ ಹೊ.ಬ


   
 ಹಿಂದೆ, 20ವರ್ಷಗಳ ಹಿಂದೆ ನನ್ನ ಅಣ್ಣ ನಾಗಸಿದ್ಧಾರ್ಥ ಹೊಲೆಯಾರ್ ಬೌದ್ಧಭಿಕ್ಕುವಿನ ವೇಷಧಾರಿಯಾಗಿ, ವಿಧಾನಸೌಧದ ಮುಂದೆ ಹೆಜ್ಜೆ ಹಾಕಿದ ಚಿತ್ರ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾದಾಗ ನನ್ನೂರ ಜನರೆಲ್ಲ ಚಕಿತವಾಗಿ ನೋಡಿದವರೆ! ಬೆರೆಗುಗಣ್ಣು ಬಿಟ್ಟವರೆ! ಬೆಂಗಳೂರಿನ “ಇಂಟರ್ ನ್ಯಾಷನಲ್ ಫ್ರೆಂಡ್ಸ್ ಆಫ್ ಬುದ್ಧಿಸ್ಟ್ಸ್” ಸಂಘಟನೆ ಏರ್ಪಡಿಸಿದ್ಧ ಆ ಬೌದ್ಧ ಯಾತ್ರೆಯಲ್ಲಿ ಇಂದಿನ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಕೂಡ ಶ್ವೇತ ವರ್ಷಧಾರಿಯಾಗಿ ‘ಭೀಮಜ್ಯೋತಿ’ ಹಿಡಿದು ಹೆಜ್ಜೆ ಹಾಕಿದ್ದರು. ನಾಡಿನಾದ್ಯಂತ ಅಂಬೇಡ್ಕರ್ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಏರ್ಪಡಿಸಿದ್ಧ ಆ ಬೌದ್ಧಯಾತ್ರೆ ಹೆಸರು ಪಡೆಯಿತು. ಹಾಗೆಯೇ ಸುದ್ದಿ ಕೂಡ ಮಾಡಿತ್ತು. ಮಾರನೆ ದಿನ ನನ್ನಣ್ಣ ಊರಿಗೆ ಬಂದಾಗ ಸಂಭ್ರಮವೋ  ಸಂಭ್ರಮ. ಏನನ್ನೋ ಸಾಧಿಸಿದ ಭವ್ಯತೆಯ ಸಂಗಮ. ಒಟ್ಟಾರೆ ಅಲ್ಲಿ ಸಾಧ್ಯವಾದದ್ದು “ಭೀಮಶಕ್ತಿ’ ಹಾಗೆಯೇ ದಲಿತರೊಳಗಿದ್ದ ಬುದ್ಧ ಭಕುತಿ.
      ಹೌದು, ಬುದ್ಧ ಭಕುತಿ ಅಥವಾ ಪ್ರೀತಿ ದಲಿತರಲ್ಲಿ ಅವಿನಾಭಾವವಾಗಿ ಮೂಡುವ ಒಂದು ದಿವ್ಯ ಭಾವನೆ. ಅದು ಬುದ್ಧನೆಡೆಗಿನ ಪ್ರೀತಿಯ ಧ್ಯೋತಕವೋ ಅಥವಾ ಅಂಬೇಡ್ಕರರ ಬೌದ್ಧ ಸ್ವೀಕಾರದ ಸಾರ್ಥಕವೋ  ಒಟ್ಟಿನಲಿ ದಲಿತರಿಗೆ ಬುದ್ಧನತ್ತ ಅವಿಚ್ಛಿನ್ನ ನಂಟಿರುವುದಂತು ಸುಳ್ಳಲ್ಲ. ದಲಿತರ ಈ ಬುದ್ಧ ಭಕುತಿಗೆ ನೇರ ಕಾರಣ ಬಾಬಾಸಾಹೇಬ್ ಅಂಬೇಡ್ಕರ್. ಹಿಂದೆ 1956ರಲ್ಲಿ  ಅವರು ತಮ್ಮ 10ಲಕ್ಷ  ಬಂಧುಗಳೊಡನೆ ಬೌದ್ಧಧರ್ಮ ಸ್ವೀಕರಿಸಿದಾಗ ಇಡೀ ಜಗತ್ತು ದಲಿತರು  ಇನ್ನು ಬೌದ್ಧ ಧಮ್ಮದ ಕಡೆಗೆ ನೋಡುವುದು ಎಂದು ಊಹಿಸಿತ್ತು. ಖಂಡಿತ ಅಂತಹ ನೋಡುವಿಕೆಯ ಭಾಗವಾಗಿ ಮೂಡಿಬರುವುದೇ ಬುದ್ಧ ಭಕುತಿ ಅಥವಾ ಭಕ್ತಿ.
   
  ಇಂತಹ ಬುದ್ಧಭಕ್ತಿ ಅಥವಾ ಬುದ್ಧನೆಡೆಗೆ ದಲಿತರ ಪ್ರೀತಿ ಇಂದು ಸರ್ವೇಸಾಮಾನ್ಯ. ಅದರಲ್ಲೂ ಶಿಕ್ಷಣ ಪಡೆದ ದಲಿತರಲ್ಲಂತೂ ಅಂತಹ ಪ್ರೀತಿ ಅಂಬೇಡ್ಕರರದಕ್ಕಿಂತ ಒಂದು ತೂಕ ಹೆಚ್ಚೆ  ಇರುತ್ತದೆ. ಏನು ಗೊತ್ತಿಲ್ಲ ಎಂದರೂ ದಲಿತರ ಮನಸ್ಸು “ಬುದ್ಧಂ ಶರಣಂ ಗಚ್ಛಾಮಿ” ಎಂದು ಗುನುಗು ಹಾಕುತ್ತಿರುತ್ತದೆ. ಬುದ್ಧನ ಚಿತ್ರ ಕಂಡರೆ ಅಥವಾ ಅವನ ಮಂತ್ರದ ಗಾನ ಕೇಳಿದರೆ ಎಂತಹ  ದಲಿತನೂ ತಲೆದೂಗದೆ ಇರಲಾರ.
     
   ಈ ಸಂದರ್ಭದಲ್ಲಿ ಒಂದಷ್ಟು ಪ್ರಶ್ನೆ ಕೇಳಿಬರುತ್ತವೆ. ಹಾಗಿದ್ದರೆ ದಲಿತರೆಲ್ಲ ಬೌದ್ಧರೆ? ಅಥವಾ ದಲಿತರ ಧರ್ಮ ಬೌದ್ಧ ಧರ್ಮವೇ? ಯಾಕೆ ದಲಿತರು ಇನ್ನೂ ಆ ಧರ್ಮವನ್ನು ಅಧಿಕೃತವಾಗಿ ಸ್ವೀಕರಿಸಿಲ್ಲ? ಇತ್ಯಾದಿ.  ಖಂಡಿತ, ಇದಕ್ಕೆಲ್ಲ ಉತ್ತರ ಸುಲಭದಲ್ಲಿ ಸಿಗುವುದಿಲ್ಲ. ಆದರೆ ದಲಿತರ ಬುದ್ಧ ಭಕುತಿ ಮತ್ತು ಪ್ರೀತಿ ಮಾತ್ರ ಹೆಚ್ಚುವುದು ನಿಂತಿಲ್ಲ! ಉದಾಹರಣೆಗೆ ನಮ್ಮ ಸ್ವಂತ ಊರಿನಲ್ಲಿ 20 ವರ್ಷಗಳ ಹಿಂದೆಯೇ ದಲಿತರೆಲ್ಲ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. “ಮಂಗಲಹೊಸೂರಿನಲ್ಲಿ 500 ದಲಿತರಿಂದ ಬೌದ್ಧಧರ್ಮ ಸ್ವೀಕಾರ” ಎಂಬ ಹೆಡ್‍ಲೈನ್ಸ್ ಪತ್ರಿಕೆಗಳಲ್ಲಿ ಆ ಕಾಲದಲ್ಲೇ  ಪ್ರಕಟವಾಗಿದೆ. ಆದರೆ ನನ್ನೂರ ದಲಿತರ್ಯಾರು “ನಾವು ಬೌದ್ಧರು. ನಮ್ಮ ಧರ್ಮ ಬೌದ್ಧಧರ್ಮ” ಎಂದು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಾಗಿದ್ದರೂ ಬುದ್ಧನೆಡೆಗಿನ ಅವರ ಭಕುತಿ ಮತ್ತು ಪ್ರೀತಿ ಮಾತ್ರ ಹಾಗೆಯೇ ಮುಂದುವರಿದಿದೆ.
     
    ಈ ನಿಟ್ಟಿನಲಿ ಇಂತಹ ಘಟನೆಗಳು ನಮ್ಮೂರಷ್ಟೆ ಅಲ್ಲ ದಲಿತ ಕೇರಿಗಳಲ್ಲಿ ಇದು ಸರ್ವೇಸಾಮಾನ್ಯ. ಇದು ಯಾವ ತರಹ ಎಂದರೆ ಇಂದು ಬಹುತೇಕ ದಲಿತರಿರುವ  ಕಡೆ ನಾವು ಒಂದಾದರೂ ಬೌದ್ಧ ವಿಹಾರ ನಿರ್ಮಾಣಗೊಂಡಿರುವುದನ್ನು ಗಮನಿಸಬಹುದು. ಖಾವಿ ತೊಟ್ಟು ಬೌದ್ಧಭಿಕ್ಕುಗಳಾಗಿ “ಭಂತೇ” ಎಂದು ಅಭಿಮಾನಪೂರ್ವಕವಾಗಿ ಕರೆಸಿಕೊಳ್ಳುತ್ತಿರುವ ಅನೇಕ  ದಲಿತ ಬೌದ್ಧ ಭಿಕ್ಕುಗಳನ್ನು ನಾವಿಂದು ಕಾಣಬಹುದು. ದಲಿತ  ಕೇರಿಗಳಲ್ಲಿ ಇಂದು ಅಲ್ಲಿ ನಡೆಯುವ ಮದುವೆ, ಹುಟ್ಟುಹಬ್ಬ ಇತ್ಯಾದಿ  ಸಡಗರಗಳಲ್ಲಿ ಬೌದ್ಧ ಭಿಕ್ಕುಗಳ ಹಾಜರಿ ಸಾಮಾನ್ಯ. ಒಟ್ಟಾರೆ  ಹೇಳುವುದಾದರೆ ಬುದ್ಧನೆಡೆಗೆ ದಲಿತರು ಸದ್ದಿಲ್ಲದೆ ಸಾಗುತ್ತಿದ್ದಾರೆ!
   
    ಹಾಗೆ ಹೇಳುವುದಾದರೆ ಇಂದಿಗೂ ಬಹುತೇಕ ದಲಿತರಲ್ಲಿ ತಮ್ಮ ಧರ್ಮ  ಯಾವುದು ಎಂಬ ಗೊಂದಲ ಇದ್ದೇ ಇದೆ.  ಮೀಸಲಾತಿಯ ವಿಷಯಕ್ಕೆ ಬಂದಾಗ ಅವರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದೇ ಬರೆಸಿಕೊಳ್ಳುತ್ತಾರೆ ಆದರೆ ಹೇಳಿಕೊಳ್ಳಲಲ್ಲ. ಆಚರಣೆಯಲ್ಲಿ ಮತ್ತು ಪ್ರೀತಿಯಲ್ಲಿ ಅವರ ಮೊದಲ ಪ್ರಾಶಸ್ತ್ಯ ಬುದ್ಧನಿಗಷ್ಟೆ ಮೀಸಲು. ಅಂದಹಾಗೆ ಈಚೀಚೆಗೆ ಅಶೋಕ, ಕನಿಷ್ಕಾನ ಕಾಲದಲ್ಲಿ ನಿರ್ಮಾಣಗೊಂಡಿದ್ದ ಮಾದರಿಯ ದೊಡ್ಡ ದೊಡ್ಡ ಬೌದ್ಧ ವಿಹಾರಗಳನ್ನು ನಾವು ದಲಿತರ ಪ್ರಯತ್ನದಿಂದಾಗಿ ಅಲ್ಲಲ್ಲಿ ಕಾಣಬಹುದು. ಉದಾಹರಣೆಗೆ ಮಹಾರಾಷ್ಟ್ರದ ನಾಗಪುರದಲ್ಲಿ ಅಂಬೇಡ್ಕರರು ಬೌದ್ಧಧರ್ಮ ಸ್ವೀಕರಿಸಿದ “ದೀಕ್ಷಾ ಭೂಮಿ”ಯಲ್ಲಿ ಇಂದು ಬೃಹತ್ ಬೌದ್ಧವಿಹಾರ ನಿರ್ಮಾಣಗೊಂಡಿದೆ. ಅಂಬೇಡ್ಕರ್  ಬೌದ್ಧಧರ್ಮ  ಸ್ವೀಕರಿಸಿದ್ದರ (1956 ಅಕ್ಟೋಬರ್ 14)  ನೆನಪಿಗಾಗಿ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ದಲಿತರು, ಕ್ಷಮಿಸಿ ಬೌದ್ಧರು ಅಕ್ಟೋಬರ್‍ನಲ್ಲಿ  ನಾಗಪುರಕ್ಕೆ ಭೇಟಿಕೊಡುತ್ತಾರೆ. ಹಬ್ಬದ ಮಾದರಿಯಲ್ಲಿ  ಸಂಭ್ರಮಿಸುತ್ತಾರೆ. ಅಂದಹಾಗೆ ಇದು ಮಹಾರಾಷ್ಟ್ರದಲ್ಲಷ್ಟೆ ಅಲ್ಲ ಉತ್ತರ ಪ್ರದೇಶದಲ್ಲಿ ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಮಾಯಾವತಿ ತಮ್ಮ ಆಡಳಿತಾವಧಿಗಳಲ್ಲಿ ರಾಜ್ಯದಾದ್ಯಂತ ಸಾವಿರಾರು ಬೌದ್ಧವಿಹಾರಗಳನ್ನು ನಿರ್ಮಿಸಿದ್ದಾರೆ. ಸ್ವತಃ ಮಾಯಾವತಿ ಮತ್ತು ಅವರ ಗುರು ದಿ.ಕಾನ್ಷೀರಾಮ್‍ರವರು ತಾವು ಬೌದ್ಧಧರ್ಮ ಸ್ವೀಕರಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ನಿಟ್ಟಿನಲಿ ಕಾನ್ಷೀರಾಮ್‍ರವರು ನಿಧನರಾದಾಗ(2006 ಅಕ್ಟೋಬರ್ 6) ಅವರ ಅಂತ್ಯಕ್ರಿಯೆಯನ್ನು ಅಂಬೇಡ್ಕರರ ಹಾಗೇ ಬೌದ್ಧ ವಿಧಿವಿಧಾನದಲ್ಲೇ ನೆರವೇರಿಸಿದ್ದನ್ನು ನಾವು ಗಮನಿಸಬಹುದು. ಒಟ್ಟಾರೆ ಇಂದು ಭಾರತ ದೇಶ ಮತ್ತು ಇಲ್ಲಿನ ದಲಿತ ಸಮುದಾಯ ಸಂಪೂರ್ಣ ಬುದ್ಧ ಪ್ರೀತಿಯಲ್ಲಿ ಮೀಯುತ್ತಿದೆ.
 
     ಈ ದಿಸೆಯಲ್ಲಿ ನಮ್ಮ ಕರ್ನಾಟಕವೂ ಕೂಡ ಹಿಂದೆ ಬಿದ್ದಿಲ್ಲ! ಯಕೆಂದರೆ ಹಾಲಿ ಕೇಂದ್ರ  ರೈಲ್ವೆ ಸಚಿವ  ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ ವತಿಯಿಂದ ನಾಗಪುರ ಮಾದರಿಯಲ್ಲೇ ಬಿಸಿಲ ನಾಡು ಗುಲ್ಬರ್ಗದಲ್ಲಿ ಬೃಹತ್ ಬುದ್ಧ ಮಂದಿರವನ್ನು ಕಟ್ಟಿಸಿದ್ದಾರೆ. ಆ ನಿಟ್ಟಿನಲಿ ಖರ್ಗೆಯವರು ಮಾಯಾವತಿಯವರ ಸಾಲಿನಲ್ಲಿ ನಿಲ್ಲುತ್ತಾರೆ.
   
  ದಲಿತ ಕೇರಿಗಳಲ್ಲಿ ಮತ್ತವರ ನಿತ್ಯ ಜೀವನದಲ್ಲಿ ಇಂದು ನಾವು ಬುದ್ಧನನ್ನು ಸಹಜವಾಗಿ ಕಾಣಬಹದು. ಬುದ್ಧನ ಭಾವಚಿತ್ರ, ಬುದ್ಧ ವಿಹಾರ,  ಬುದ್ಧನ ವೃಕ್ಷ ಅರ್ಥಾತ್ ಬೋಧಿ ವೃಕ್ಷ( ಅರಳೀ ಮರ) ಇವೆಲ್ಲ ದಲಿತ ಕೇರಿಗಳಲ್ಲಿ ಸರ್ವೇಸಾಮಾನ್ಯ. ಅಂದಹಾಗೆ  ವಯಕ್ತಿಕವಾಗಿ ನಾನು ಮತ್ತು ನನ್ನ ಕುಟುಂಬ ಕೆಲದಿನಗಳ ಹಿಂದೆ ನನ್ನೂರಿನ (ಚಾಮರಾಜನಗರ) ಬೌದ್ಧ ವಿಹಾರ (ಸಾರನಾಥ ವಿಹಾರ) ವೊಂದಕ್ಕೆ ಭೇಟಿಕೊಟ್ಟಿದ್ದೆವು. ನನ್ನ 5 ವರ್ಷದ ಪುಟ್ಟ ಮಗಳು ಸಾಂಚಿಮೌರ್ಯ ವಿಹಾರದ ಸುತ್ತ ಮುತ್ತ ಬೆಳೆದಿದ್ದ ಚಿಕ್ಕ ಚಿಕ್ಕ ಗಿಡಗಂಟಿಗಳನ್ನು ಕೀಳುತ್ತಾ ಅದರ ಆವರಣವನ್ನು ಶುಭ್ರಗೊಳಿಸುವ ಕ್ರಿಯೆಯಲ್ಲಿ ನಿರತಳಾಗಿದ್ದಳು. ಮನಸ್ಸು ಹೇಳಿತು “ನಿಜಕ್ಕೂ ಇಂದು ಆಗಬೇಕಾದ್ದೆಂದರೆ ದಲಿತರ ಎದೆಯಲ್ಲಿ ಇರುವ ಇಂತಹ  ಹಿಂದೂ ಧರ್ಮದ ಚಿಕ್ಕ ಚಿಕ್ಕ ಕಳೆಗಳನ್ನು ಕೀಳುವ ಕೆಲಸ. ಖಂಡಿತ, ನನ್ನ ಮಗಳಂತಹ ಮುಂದಿನ  ಜನರೇಷನ್ ಆ ಕ್ರಿಯೆಯಲ್ಲಿ ತೊಡಗುತ್ತದೆ” ಎಂದು.
 
   ದಲಿತರ ಬುದ್ಧನೆಡೆಗಿನ ಪ್ರೀತಿ ಮತ್ತು ಭಕುತಿ ಸವಿಜೇನ ರೀತಿ. ಅದು ನಿಷ್ಕಲ್ಮಶವಾದುದು. ಹಾಗೆಯೇ ಅವರಿಗೆ ಅತ್ಯಗತ್ಯವಾದುದು.                                                      
                                                       

Saturday, 26 July 2014


ಛತ್ರಪತಿ ಶಾಹುಮಹಾರಾಜ್: ಸಾಮಾಜಿಕ ಪರಿವರ್ತನೆಯ ಮೇರುಸ್ತಂಭ

                              -ರಘೋತ್ತಮ ಹೊ.ಬ. 9481189116




  1902 ಜುಲೈ 26ರಂದು ಈ ದೇಶದ ಸಂಸ್ಥಾನವೊಂದರ ಅರಸರೋರ್ವರು ಹೊರಡಿಸಿದ್ದ ಆದೇಶ ಈ ರೀತಿ ಇತ್ತು “ಈ ಆದೇಶ ಹೊರಡಿಸಿದಂದಿನಿಂದ ಇನ್ನುಮುಂದೆ ಖಾಲಿಯಾಗುವ ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗದ ಅಭ್ಯರ್ಥಿಗಳಿಂದ ಭರ್ತಿಮಾಡಲಾಗುವುದು... ಹಾಗೆಯೇ ಈ ಆದೇಶದ ಉದ್ದೇಶಕ್ಕಾಗಿ ಬ್ರಾಹ್ಮಣ, ಪ್ರಭು, ಶೇಣಾವಿ, ಪಾರ್ಸಿ ಮತ್ತು ಇತರ ಮುಂದುವರಿದ ವರ್ಗಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಜಾತಿಗಳನ್ನು ‘ಹಿಂದುಳಿದ ವರ್ಗಗಳು’ ಎಂದು ಅರ್ಥೈಸಲಾಗುವುದು”. ಹೌದು, ಹಿಂದುಳಿದ ವರ್ಗಗಳಿಗೆ(ಓ.ಬಿ.ಸಿ) ಈ ದೇಶದಲ್ಲಿ ಪ್ರಪ್ರಥಮವಾಗಿ ಶೇ.50ರಷ್ಟು ಮೀಸÀಲಾತಿ ನೀಡಿ ಆಜ್ಞೆ ಹೊರಡಿಸಿ ‘ಮೀಸಲಾತಿಯ ಜನಕ (Father of Reservation)’ ಎಂದು ಖ್ಯಾತಿಗೊಂಡ ಅರಸ ಬೇರಾರು ಅಲ್ಲ, ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರು. ಸಹಜವಾಗಿ ಹೇಳುವುದಾದರೆ “ಭಾರತದ ಸಾಮಾಜಿಕ ಪ್ರಜಾಪ್ರಭುತ್ವದ ಮೇರುಸ್ತಂಭ” (ಆಧಾರ: Chathrapati Shahu The Pillar Of Social Democracy : Published by Education department, Government of Maharashtra , p.146).
 
  ಶಾಹು ಮಹಾರಾಜರು ಹುಟ್ಟಿದ್ದು 1874 ಜುಲೈ 26 ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‍ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು.
 
   ಪ್ರಶ್ನೆ ಏನೆಂದರೆ ಮಹಾರಾಜ ಶಾಹುರವರು ತಮ್ಮ ಅರಸೊತ್ತಿಗೆಯನ್ನು ಅಂದಿನ ಇತರೆ ಅರಸರುಗಳಂತೆ ಬರೀ ಮೋಜು, ಮಸ್ತಿಗೆ ಬಳಸಿದರೆ? ಖಂಡಿತ ಹಾಗೆ ಪ್ರಶ್ನೆ ಕೇಳುವುದೇ ಮಹಾಪರಾಧವಾಗುತ್ತದೆ. ದಿಟ ಹೇಳಬೇಕೆಂದರೆ ಶಾಹುರವರು ಪ್ರಜಾನುರಾಗಿಯಾದರು. ಯಾವ ತಳವರ್ಗಗಳು, ಬ್ರಾಹ್ಮಣೇತರ ಸಮುದಾಯಗಳು ಶತಶತಮಾನಗಳಿಂದ ವಿದ್ಯೆ, ಆಸ್ತಿ, ಅಧಿಕಾರಗಳಿಂದ ವಂಚಿತಗೊಂಡಿದ್ದವೋ ಅಂತಹದ್ದನ್ನು ವಾಪಸ್ ಕೊಡಿಸಲು ಸ್ವತಃ ಆ ಸಮುದಾಯಗಳ ಪ್ರತಿನಿಧಿಯಾಗಿ ನೋವನ್ನು ಅನುಭವಿಸಿ ಶ್ರಮಿಸಿದರು.

    ಅಂತಹ ನೋವಿನ ಪ್ರಕರಣವೊಂದನ್ನು ಇಲ್ಲಿ ದಾಖಲಿಸುವುದಾದರೆ “1900 ರ ವರ್ಷದ ಒಂದು ದಿನ ಬೆಳಿಗ್ಗೆ ಯುವರಾಜ ಶಾಹು ತಮ್ಮ ತಂದೆ ಅಪ್ಪಾಸಾಹೇಬ್ ಘಾಟ್ಗೆ ಮತ್ತು ಇತರರೊಡನೆ ಪಂಚಗಂಗಾ ನದಿಗೆ ಸ್ನಾನ ಮಾಡಲು ಹೋದರು. ಆಗ ಸಂಪ್ರದಾಯದಂತೆ ಮಹಾರಾಜರು ನದಿಯಲ್ಲಿ ಸ್ನಾನಮಾಡುತ್ತಿದ್ದರೆ ಬ್ರಾಹ್ಮಣ ಪೂಜಾರಿಗಳು ಮಂತ್ರ ಹೇಳಬೇಕಾಗಿತ್ತು. ಅಂತೆಯೇ ಯುವರಾಜ ಶಾಹು ಸ್ನಾನ ಮಾಡುತ್ತಿದ್ದಾಗ ಮಂತ್ರ ಹೇಳಲಾಯಿತು. ಆದರೆ ಆ ಮಂತ್ರ ‘ವೇದ ಪಠಣವಾಗಿರಲಿಲ’್ಲ! ಬದಲಿಗೆ ಪುರಾಣದ ಯಾವುದೋ ಒಂದೆರಡು ಶ್ಲೋಕಗಳಾಗಿದ್ದವು. ಅಂದಹಾಗೆ ಇದನ್ನು ಸಹಪಾಠಿಯೋರ್ವರಿಂದ ತಿಳಿದ ಯುವರಾಜ ಶಾಹು ಮಂತ್ರ ಹೇಳಿದ ಪೂಜಾರಿಯನ್ನು ಈ ಬಗ್ಗೆ ಕೇಳಲಾಗಿ ಪೂಜಾರಿ ಹೇಳಿದ್ದೇನೆಂದರೆ ‘ಮಹಾರಾಜರು ಶೂದ್ರ ವರ್ಗಕ್ಕೆ ಸೇರಿದ್ದರಿಂದ ಅವರಿಗೆ ವೇದಗಳ ಮಂತ್ರಗಳನ್ನು ಹೇಳುವ ಹಾಗಿಲ್ಲ’ ಎಂದು! (ಅದೇ ಕೃತಿ, ಪು.114). ಖಂಡಿತ, ಈ ಘಟನೆ ಶಾಹು ಮಹಾರಾಜರಲ್ಲಿ ಆಕ್ರೋಶದ ಅಲೆಯನ್ನೇ ಎಬ್ಬಿಸಿತು. ಯಾಕೆಂದರೆ ಮಹಾರಾಜರಿಂದ ವೇತನ ಪಡೆಯುವ ಪೂಜಾರಿಯೊಬ್ಬ ಅದೇ ಮಹಾರಾಜರಿಗೆ ‘ಅವರು ಶೂದ್ರರು’ ಎಂಬ ಕಾರಣಕ್ಕಾಗಿ ಅವರಿಗೆ ವೇದಗಳನ್ನು ಉಚ್ಛರಿಸುವುದಿಲ್ಲ ಎಂದರೆ?
 
   ವೇದೋಕ್ತ ಪ್ರಕರಣ: ಅಂತೆಯೇ ಇದರಿಂದ ಕೆರಳಿದ ಶಾಹು ಮಹಾರಾಜರು 1901 ಅಕ್ಟೋಬರ್ ತಿಂಗಳಲ್ಲಿ ತಮ್ಮ ಆಸ್ಥಾನದ ಮುಖ್ಯ ಪೂಜಾರಿ ರಾಜೋಪಾಧ್ಯೆಯವರಿಗೆ ತಮ್ಮ ಅರಮನೆಯಲ್ಲಿ ಇನ್ನುಮುಂದೆ ವೇದೋಕ್ತಿಗಳನ್ನೇ ಉಚ್ಛರಿಸಬೇಕೆಂದು ರಾಜಾಜ್ಞೆ ವಿಧಿಸಿದರು. ಆದರೆ ಮಹಾರಾಜರ ಇಂತಹ ಆಜ್ಞೆ ಮತ್ತು ಈ ಸಂಬಂಧ ಅವರು ನೀಡಿದ ನೋಟೀಸುಗಳಿಗೆ ಮುಖ್ಯಪೂಜಾರಿ ರಾಜೋಪಾಧ್ಯೆಯವರು ತಲೆಕೆಡಿಸಿಕೊಳ್ಳಲೇ ಇಲ್ಲ! ಕಡೆಗೆ ತಮ್ಮ ಅಧಿಕಾರ ದಂಡ ಪ್ರಯೋಗಿಸಿದ ಶಾಹು ಮಹಾರಾಜರು ಆ ರಾಜೋಪಾಧ್ಯೆಯನ್ನು ಪೂಜಾರಿಗಿರಿಯಿಂದ ಕಿತ್ತೆಸೆದರು! ಅವರಿಗೆ ಬಳುವಳಿಯಾಗಿ ನೀಡಿದ್ದ ಇನಾಮು ಗ್ರಾಮ ಮತ್ತು ಭೂಮಿಯನ್ನು ವಾಪಸ್ ಪಡೆದರು. ಅಲ್ಲದೇ ಸದರಿ ರಾಜೋಪಾಧ್ಯೆಯವರಿಗೆ ನೀಡಿದ್ದ ಕೆಲವು ರೆವಿನ್ಯೂ, ಸಿವಿಲ್ ಮತ್ತು ಕ್ರಿಮಿನಲ್ ಅಧಿಕಾರಗಳನ್ನು ಕಿತ್ತುಕೊಂಡು ಮಹಾರಾಜ ಶಾಹು ಅವರನ್ನು ಅರಮನೆÀಯಿಂದ ಹೊರಹಾಕಿದರು. ಅಂದಹಾಗೆ ಶಾಹು ಮಹಾರಾಜರ ಇಂತಹ ಕ್ರಮಗಳ ವಿರುದ್ಧ ರಾಜೋಪಾಧ್ಯೆ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದನಾದರೂ ಎಲ್ಲಾ ನ್ಯಾಯಾಲಯಗಳೂ ಸಂಸ್ಥಾನವೊಂದರ ರಾಜನಾಗಿ ಶಾಹು ಮಹಾರಾಜರ ಈ ಆಜ್ಞೆ ನ್ಯಾಯಸಮ್ಮತ ಎಂದು ಮಹಾರಾಜರ ಕ್ರಮಗಳನ್ನು ಎತ್ತಿಹಿಡಿದವು. ಹಾಗೆಯೇ ಸಂಧಾನಗಳ ಮೂಲಕ ಶಾಹುಮಹಾರಾಜರನ್ನು ಕ್ಷತ್ರಿಯ ಎಂದು ಒಪ್ಪಿಕೊಳ್ಳಲಾಯಿತು. ಅಂತೆಯೇ ಅವರ ಅರಮನೆಯಲ್ಲಿ ವೇದಮಂತ್ರಗಳನ್ನು ಉಚ್ಛರಿಸÀುವ ಪರಿಪಾಠ ಕೂಡ ಆರಂಭವಾಯಿತು! (ಅದೇ ಕೃತಿ, ಪು.136).  ಈ ನಿಟ್ಟಿನಲಿ ಈ ಪ್ರಕರಣ ಭಾರತದ ಇತಿಹಾಸದಲ್ಲಿ ‘ವೇದೋಕ್ತ ಪ್ರಕರಣ’ ಎಂದು ಹೆಸರು ಪಡೆಯಿತಲ್ಲದೆ, ಬ್ರಾಹ್ಮಣ್ಯದ ಕಾನೂನಿನ ಪಾರುಪತ್ಯಕ್ಕೆ ಪ್ರಪ್ರಥಮವಾಗಿ ತಡೆಯೊಡ್ಡಿತ್ತು!
 
   ಅಸ್ಪøಶ್ಯತೆಯ ವಿರುದ್ಧ ಸಮರ: ಶಾಹು ಮಹಾರಾಜರು ಹಿಂದುಳಿದ ವರ್ಗ(ಓ.ಬಿ.ಸಿ)ಗಳಿಗೆ ತಮ್ಮ ಸಂಸ್ಥಾನದಲ್ಲಿ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿದ್ದನ್ನು ತಿಳಿದಿರಿ. ಆದರೆ ಆಗ ಅವರು ಎದುರಿಸಿದ ಟೀಕೆ? ಇಂತಹ ಮೀಸಲಾತಿ ಟೀಕೆಗೆ ಶಾಹುರವರು ಉತ್ತರಿಸಿರುವ ಪರಿ ನೋಡಿ “ಹಿಂದುಳಿದ ವರ್ಗಗಳ ಏಳ್ಗೆಗಾಗಿ ನನ್ನ ರಾಜ್ಯದಲ್ಲಿ ವಿಶೇಷ ಪ್ರಯತ್ನ ನಡೆಯುತ್ತಿರುವುದನ್ನು ಕೆಲವು ಸುಶಿಕ್ಷಿತ ಮೇಲ್ವರ್ಗದ ಜನ ಅಪಮಾನಕಾರಿ ನಡೆ ಎಂದು ಭಾವಿಸುತ್ತಿದ್ದಾರೆ. ಆದರೆ ಖಾಯಿಲೆಪೀಡಿತ ದುರ್ಬಲ ಮಗುವೊಂದನ್ನು ವೈದ್ಯರು ವಿಶೇಷವಾಗಿ ಮಹಿಳಾ ವೈದ್ಯರು ಹೇಗೆ ನೋಡಿಕೊಳ್ಳುತ್ತಾರೆ? ಈ ನಿಟ್ಟಿನಲಿ ಆ ಕ್ರಮವನ್ನೇ ಉಲ್ಲೇಖಿಸುವುದಾದರೆ ವೈದ್ಯರು ಅಂತಹ ದುರ್ಬಲ ಮಗು ಇತರರಂತೆ ದಷ್ಟಪುಷ್ಟವಾಗಲು ವಿಶೇಷ ಆಹಾರಗಳನ್ನು ನೀಡುತ್ತಾರೆ ಮತ್ತು ಇದನ್ನು ಎಲ್ಲರೂ ಒಪ್ಪುತ್ತಾರೆ. ದುರಂತವೆಂದರೆ ನಾನು ಇದೇ ಸಿದ್ಧಾಂತವನ್ನು(ದುರ್ಬಲ ಮಗುವಿನ) ಅಸ್ಪøಶ್ಯರಿಗೆ ಅಪ್ಲೈ ಮಾಡಿದರೆ ನನ್ನನ್ನು ಯಾಕೆ ಟೀಕಿಸುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ!” (ಅದೇ ಕೃತಿ, ಪು.35).  ‘ಮೀಸಲಾತಿಯ ಜನಕ’ ಮೀಸಲಾತಿಯನ್ನು ಅದ್ಭುತವಾಗಿ ಸಮರ್ಥಿಸಿದ ಪರಿ ಇದು! ಕಾಕತಾಳೀಯವೆಂದರೆ ಇದೇ ಮೀಸಲಾತಿಯ ಜನಕ ಅರ್ಥಾತ್ ಶಾಹು ಮಹಾರಾಜರು ಅದೇ ಮೀಸಲಾತಿಯ ಆಧುನಿಕ ಪ್ರವರ್ತಕ ಬಾಬಾಸಾಹೇಬ್ ಅಂಬೇಡ್ಕರರನ್ನು ಈ ದೇಶಕ್ಕೆ ವಿಶೇಷವಾಗಿ ಅಸ್ಪøಶ್ಯರ ಮುಂದೆ 1922 ಫೆಬ್ರವರಿ 22 ರಂದು ದೆಹಲಿಯಲ್ಲಿ ನಡೆದ ‘ಅಖಿಲ ಭಾರತ ಶೋಷಿತ ವರ್ಗಗಳ ಸಮ್ಮೇಳನ’ದಲ್ಲಿ ಪರಿಚಯಿಸುತ್ತಾ ‘You should all keep before you Mr.Bhimrao Ambedkar, Your great leader as your ideal and try to follow him, to be like him’ ಎಂದರು! ಅಂದರೆ ‘ನಿಮ್ಮ ಶ್ರೇಷ್ಠ ನಾಯಕ ಶ್ರೀ ಭೀಮರಾವ್ ಅಂಬೇಡ್ಕರರಂತೆ ನೀವಾಗಬೇಕು, ಅವರನ್ನು ನೀವು(ಶೋಷಿತ ವರ್ಗಗಳು) ನಿಮ್ಮ ಆದರ್ಶವಾಗಿ ಸ್ವೀಕರಿಸಬೇಕು, ಮುಂದಿಟ್ಟುಕೊಳ್ಳಬೇಕು’ ಎಂದರ್ಥ! (ಅದೇ ಕೃತಿ, ಪು.38). ಖಂಡಿತ, ಶಾಹುರವರು ಅಂಬೇಡ್ಕರರನ್ನು ಅಸ್ಪøಶ್ಯರಿಗೆ ಬರೀ ಪರಿಚಯಿಸಿದ್ದಷ್ಟೇ ಅಲ್ಲ ಅವರ ಹೋರಾಟಕ್ಕೆ, ಅವರ ಬದುಕಿಗೆ ತಮ್ಮ ಬೆಂಬಲದ ನೆರವನ್ನೂ ನೀಡಿದ್ದಾರೆ. ಯಾವ ಪರಿ ಎಂದರೆ ಅಂಬೇಡ್ಕರರು 1921ರಲ್ಲಿ ಇಂಗ್ಲೆಂಡಿಗೆ ಎಂಎಸ್ಸಿ, ಡಿಎಸ್ಸಿ ಪದವಿ ಪಡೆಯಲು ತೆರಳಿ ತಮ್ಮ ಶಿಕ್ಷಣಕ್ಕೆ ‘200 ಪೌಂಡ್ ನೆರವು ಬೇಕೆಂದು’ ಶಾಹು ಮಹಾರಾಜರಿಗೆ ಪತ್ರ ಬರೆದಾಗ ಮಹಾರಾಜರು ತಡ ಮಾಡದೆ ಅಂಬೇಡ್ಕರರಿಗೆ ಲಂಡನ್ನಿನ ಅವರ ವಿಳಾಸಕ್ಕೆ ಅಂದಿನ ಭಾರತೀಯ ಕರೆನ್ಸಿಯಲ್ಲಿ 1500ರೂಗಳನ್ನು ಕಳುಹಿಸುತ್ತಾರೆ. ಅಲ್ಲದೆ ಅಂಬೇಡ್ಕರರು ವಿದೇಶದಲ್ಲಿದ್ದುದರಿಂದ ಅವರ ಶ್ರೀಮತಿ ಮಾತೆ ರಮಾಬಾಯಿಯವರಿಗೆ ನೆರವಾಗಲೆಂದು ಅವರಿಗೂ ಕೂಡ ಶಾಹು ಮಹಾರಾಜರು 750 ರೂಗಳ ಸಹಾಯಧನ ಮಂಜೂರು ಮಾಡುತ್ತಾರೆ. ಹಾಗೆಯೇ ಇದೇ ಸಂದರ್ಭದಲ್ಲಿ ಅಂಬೇಡ್ಕರರು ಈ ದೇಶದ ಶೋಷಿತರ ಪ್ರಥಮ ಪತ್ರಿಕೆ ‘ಮೂಕ ನಾಯಕ’ವನ್ನು ಆರಂಭಿಸಿದಾಗ ಶಾಹುಮಹಾರಾಜರು ಅದಕ್ಕೂ ಕೂಡ 2500ರೂಗಳ ಅನುದಾನ ನೀಡುತ್ತಾರೆ. ಹಾಗೆ ಅಂಬೇಡ್ಕರರ ಹೋರಾಟಕ್ಕೆ ಹೀಗೆ ಅನುದಾನ ನೀಡಿದ್ದಷ್ಟೇ ಅಲ್ಲ, ಶಾಹು ಮಹಾರಾಜರು 1920ರಲ್ಲಿ ಅಂಬೇಡ್ಕರರ ಶಿಫಾರಸ್ಸಿನ ಮೇರೆಗೆ ಆರ್.ಕೆ.ಕದಂ ಎಂಬ ಅಸ್ಪøಶ್ಯರನ್ನು ನಾಮನಿರ್ದೇಶನದ ಮೂಲಕ ತಮ್ಮ ಸಂಸ್ಥಾನದ ಆಡಳಿತ ಪರಿಷತ್ತಿಗೂ ಕೂಡ ಸದಸ್ಯರನ್ನಾಗಿ ನೇಮಿಸಿಕೊಳ್ಳುತ್ತಾರೆ. ಅಲ್ಲದೆ ಅಸ್ಪøಶ್ಯತೆ ವಿರುದ್ಧ ರಾಜಾಜ್ಞೆ ವಿಧಿಸುವ ಅವರು “ಯಾವುದೇ ಮನುಷ್ಯರಿಗೆ ಸಾರ್ವಜನಿಕ ಸ್ಥಳ, ಧರ್ಮಛತ್ರ, ಸÀರ್ಕಾರಿ ಕಚೇರಿ,  ಸಾರ್ವಜನಿಕ ಹೋಟೆಲ್ಲು, ಕೆರೆ, ಬಾವಿ ಇತ್ಯಾದಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನಿರಾಕರಿಸುವಂತಿಲ್ಲ”(ಅದೇ ಕೃತಿ, ಪು.199) ಎನ್ನುತ್ತಾರೆ. ಆ ಮೂಲಕ ಅಸ್ಪøಶ್ಯತೆ ವಿರುದ್ಧ ಶಾಹು ಮಹಾರಾಜರು ಸಮರ ಸಾರುತ್ತಾರೆ.

    ಶಾಹು ಸತ್ಯಶೋಧಕ ಸಮಾಜ: ಒಂದು ವಿಷಯವನ್ನಿಲ್ಲಿ ಪ್ರಸ್ತಾಪಿಸಲೇಬೇಕಿದೆ. ಅದು ಮಹಾತ್ಮ ಜ್ಯೋತಿಬಾಫುಲೆಯವರಿಗೆ ಸಂಬಂಧಪಟ್ಟಿದ್ದು. ಹಿಂದುಳಿದ ಫೂಲ್ ಮಾಲಿ(ಹೂವಾಡಿಗ) ಜಾತಿಗೆ ಸೇರಿದ ಜ್ಯೋತಿಬಾಫುಲೆಯವರು ತಮ್ಮ ಧರ್ಮಪತ್ನಿ ಮಾತೆ ಸಾವಿತ್ರಿಬಾಫುಲೆಯವರೊಡಗೂಡಿ ಮಹಾರಾಷ್ಟ್ರದಲ್ಲಿ ತಮ್ಮ ಸತ್ಯಶೋಧಕ ಸಮಾಜ ಚಳುವಳಿಯ ಮೂಲಕ(1873) ಸಾಮಾಜಿಕ ಕ್ರಾಂತಿಯ ಕಿಡಿ ಹಚ್ಚಿದ್ದು ಎಲ್ಲರಿಗೂ ತಿಳಿದಿದೆ. ಅಂದಹಾಗೆ ಫುಲೆಯವರ ಈ ಚಳುವಳಿಯನ್ನು ‘ಶಾಹು ಸತ್ಯಶೋಧಕ ಸಮಾಜ’ ಹೆಸರಿನಲ್ಲಿ ಸಮರ್ಥವಾಗಿ ಮುಂದುವರಿಸಿದ ಶಾಹು ಮಹಾರಾಜರು ಸಾಮಾಜಿಕ ಪರಿವರ್ತನೆಯ ನೂತನ ಶಕೆಯ ಈ ನಿಟ್ಟಿನಲ್ಲಿ ಭಾರತದಲ್ಲಿ ಫುಲೆಯವರ ಸಶಕ್ತ ಉತ್ತರಾಧಿಕಾರಿಯಾಗುತ್ತಾರೆ. ಈ ದಿಸೆಯಲ್ಲಿ ಶಾಹುರÀವರ ಈ ಎಲ್ಲಾ ಸಾಮಾಜಿಕ ಪರಿವರ್ತನೆಯ ಕೈಂಕರ್ಯಗಳಲ್ಲಿ ಫುಲೆಯವರ ನೆರಳನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು.
 
   ಕಡೆಯದಾಗಿ ಶಾಹು ಮಹಾರಾಜರ ಪ್ರಾಯೋಗಿಕ ಸಾಮಾಜಿಕತೆಯನ್ನಿಲ್ಲಿ ಒಂದು ಉದಾಹರಣೆಯನ್ನಾಗಿ ನೋಡೋಣ. ಅದೆಂದರೆ ‘ತಮ್ಮ ರಾಜ್ಯದ ರಾಜಧಾನಿ ಕೊಲ್ಲಾಪುರ ನಗರದ ಮುಖ್ಯರಸ್ತೆಯೊಂದರಲ್ಲಿ ಮಹಾರಾಜ ಶಾಹುರವರು ಉದ್ದೇಶಪೂರ್ವಕವಾಗಿಯೇ ಗಂಗಾರಾಂ ಕಾಂಬ್ಳೆ ಎಂಬ ಅಸ್ಪøಶ್ಯನಿಗೆ ಹಣಕಾಸು ನೆರವು ನೀಡಿ ಹೊಟೆಲ್ಲೊಂದÀನ್ನು ತೆರೆಸಿದ್ದರು. ಹಾಗೆಯೇ ಆ ಹೊಟೆಲ್ಲಿಗೆ ‘ಶಾಹು ಟೀ ಷಾಪ್’ ಎಂದು ಹೆಸರಿಡಿಸಿದ್ದ ಮಹಾರಾಜರು ಪ್ರತಿದಿನ ತಮ್ಮ ಆಸ್ಥಾನದ ಇತರರೊಡನೆ ಆ ಹೊಟೆಲ್ಲಿಗೆ ಹೋಗಿ ಟೀ ಕುಡಿಯುತ್ತಿದ್ದರು. ಆ ಮೂಲಕ ಜಾತಿ ಆಧಾರದ ಉದ್ಯೋಗ ತೊಲಗಿಸುವುದರ ಜೊತೆಗೆ, ಅಸ್ಪøಶ್ಯತೆ ಆಚರಣೆ ತಮ್ಮ ರಾಜ್ಯದಲ್ಲಿ ಸಲ್ಲದ್ದೆಂದು ಬಹಿರಂಗವಾಗಿ ಶಾಹು ಮಹಾರಾಜರು ಇಡೀ ಜಗತ್ತಿಗೆ ಪ್ರತಿನಿತ್ಯ ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿದ್ದರು. ದುರಂತವೆಂದರೆ ಇಂತಹ ಸಾಮಾಜಿಕ ಪ್ರಯೋಗದ ಶ್ರೇಷ್ಠ ಅರಸು ಡಯಾಬಿಟಿಸ್‍ಗೆ ತುತ್ತಾಗಿ 48ರ ಸಣ್ಣ ಹರೆಯದಲ್ಲೇ ಅಂದರೆ 1922 ಮೇ 6 ರಂದು ನಿಧನರಾದರು.
 
   ಒಂದು ವಾಸ್ತಾವಾಂಶವನ್ನಿಲ್ಲಿ ಪ್ರಸ್ತಾಪಿಸಬೇಕು ಅದೆಂದರೆ ಲೋಕಮಾನ್ಯ ಎಂಬ ಹೆಸರಿನ ಸೋಕಾಲ್ಡ್ ಬಾಲಗಂಗಾಧರ ತಿಲಕರು ಶಾಹು ಮಹಾರಾಜರ ಉಗ್ರ ಟೀಕಾಕಾರರಾಗಿದ್ದರು. ಹಾಗೆಯೇ ತಿಲಕರ ಸಂಪಾದಕತ್ವದ ‘ಕೇಸರಿ’ ಪತ್ರಿಕೆ ಶಾಹು ಮಹಾರಾಜರ ಇಂತಹ ಸಾಮಾಜಿಕ ಕಲ್ಯಾಣ ಕಾರ್ಯ ಕಂಡು ಅವರನ್ನು ಸ್ವರಾಜ್ಯ ದ್ರೋಹಿ ಎಂದಿತ್ತು! ಆದರೆ ಶಾಹು ಮಹಾರಾಜರು ಮನುವಾದಿಗಳ ಇಂತಹ ಟೀಕೆಗಳಿಗೆಲ್ಲ ಖಂಡಿತ ಜಗ್ಗಲಿಲ್ಲ. ಬದಲಿಗೆ “ನನ್ನನ್ನು ಕೊಲ್ಲಾಪುರದ ಈ ಸಿಂಹಾಸನದಿಂದ ಕಿತ್ತೊಗೆದರೂ ಸರೀ ನಾನು ಈ ದೇಶದ ಶೋಷಿತ ವರ್ಗಗಳು ಮತ್ತು ಹಿಂದುಳಿದ ವರ್ಗಗಳ ಸೇವೆಯನ್ನು ನಿರಂತರ ಮುಂದುವರಿಸುವುದಾಗಿ” ಗುಡುಗಿದರು.

    ಒಂದಂತು ನಿಜ, ಭಾರತದ ಸಾಮಾಜಿಕ ಪರಿವರ್ತನೆಯ ಚಳುವಳಿಯ ಇತಿಹಾಸದಲ್ಲಿ ಛತ್ರಪತಿ ಶಾಹು ಮಹಾರಾಜರ ಹೆಸರು ಅಚ್ಚಳಿಯದೇ ಶ್ರೇಷ್ಠತಮವಾಗಿ ದಾಖಲಾಗಿದೆ. ಮಹಾತ್ಮ ಜ್ಯೋತಿಬಾಫುಲೆ, ಶ್ರೀ ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಬಾಬಾಸಾಹೇಬ್ ಅಂಬೇಡ್ಕರ್ ಹೀಗೆ ಧೀಮಂತ ಸಾಮಾಜಿಕ ಪರಿವರ್ತನ ಚಿಂತಕರ ಜೊತೆ ಶಾಹು ಮಹಾರಾಜರ ಹೆಸರು ‘ಸಾಮಾಜಿಕ ಪ್ರಜಾಪ್ರಭುತ್ವದ ಮೇರುಸ್ತಂಭ’ವೆಂದು ಅನ್ವರ್ಥವಾಗಿದೆ. ಈ ನಿಟ್ಟಿನಲ್ಲಿ ಅಂತಹ ಸಾಮಾಜಿಕ ಕೈಂಕರ್ಯದ ಅರಸನ ಕ್ರಾಂತಿಯ ಪಥದಲ್ಲಿ ಈ ದೇಶ, ಈ ಸಮಾಜ ನಿರಂತರ ಸಾಗಬೇಕಷ್ಟೆ.  

html