ದಲಿತರ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ
ಮಂಗಳೂರು, ಡಿ.14: ಸುಬ್ರಹ್ಮಣ್ಯ ಕ್ಷೇತ್ರ ಸೇರಿ ದಂತೆ ಜಿಲ್ಲೆಯ ದೇವಸ್ಥಾನಗಳಲ್ಲಿ ನಡೆಯುವ ಪಂಕ್ತಿ ಬೇಧದ ಭೋಜನ ಹಾಗೂ ಮಡೆಸ್ನಾನ ವನ್ನು ನಿಷೇಧಿಸುವಂತೆ ವಿವಿಧ ಸಂಘಟನೆಗಳ ದಲಿತ ನಾಯಕರು ಒಕ್ಕೊರಳಿನಿಂದ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ ಘಟನೆ ಇಂದು ನಡೆಯಿತು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ 1 ವರ್ಷದ ಬಳಿಕ ಇಂದು ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಾಯಕರ ಸಭೆಯಲ್ಲಿ ವಿಶೇಷವಾಗಿ ಮಡೆಸ್ನಾನ, ಧರ್ಮಸ್ಥಳದಲ್ಲಿ ಡಿಸಿ ಮನ್ನಾ ಭೂಮಿಯನ್ನು ಖಾಸಗಿಯವರಿಗೆ ಮಂಜೂರು ಮಾಡಿರುವ ಬಗ್ಗೆ ದಲಿತರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಮಡೆಸ್ನಾನ ವಿರೋಧಿಸಿ ಮಾತು ಆರಂಭಿಸಿದ ದಲಿತ ಹಕ್ಕುಗಳ ಹೋರಾಟ ಸಮಿತಿಯ ನಾಯಕ ಶೇಖರ್ ಬೆಳ್ತಂಗಡಿ, ಬುದ್ಧಿವಂತರ ಜಿಲ್ಲೆಯಲ್ಲೂ ಇಂತಹ ಅನಿಷ್ಟ ಪದ್ಧತಿ ನಡೆಯುತ್ತಿರುವುದು ನಾಚಿಕೆಗೇಡಿನ ವಿಷಯ. ಮಡೆಸ್ನಾನಕ್ಕೆ ಹೇರಲಾಗಿದ್ದ ನಿಷೇಧವನ್ನು ಹಿಂದೆಗೆದುಕೊಳ್ಳುವ ಮೂಲಕ ದಲಿತ ನಾಯಕರ ಮೇಲಿನ ಹಲ್ಲೆ ಘಟನೆಗೆ ನೇರವಾಗಿ ಜಿಲ್ಲಾಧಿಕಾರಿಯೇ ಹೊಣೆ ಎಂದು ದೂರಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಭಕ್ತರ ಭಾವನೆಗಳಿಗೆ ಬೆಲೆ ಕೊಟ್ಟು ನಿಷೇಧವನ್ನು ತೆರವುಗೊಳಿಸಬೇಕಾಯಿತು ಎಂದು ಹೇಳಿದಾಗ ಸಭೆಯಲ್ಲಿ ಉಪಸ್ಥಿತರಿದ್ದ ದಲಿತರು ಒಕ್ಕೊರಳಿ ನಿಂದ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.
ಚಂದ್ರಗುತ್ತಿಯಲ್ಲಿ ಬೆತ್ತಲೆ ಸೇವೆ, ಸತಿಸಹಗ ಮನ ಪದ್ಧತಿ ನಿಷೇಧದ ವೇಳೆಯೂ ಈ ರೀತಿಯ ವಿರೋಧಗಳು ವ್ಯಕ್ತವಾಗಿದ್ದವು. ಹಾಗಿದ್ದರೂ ಅವುಗಳನ್ನು ನಿಷೇಧಿಸಲಾಗಿದೆ. ಮಡೆಸ್ನಾನ ಕೂಡಾ ನಿಷೇಧವಾಗಬೇಕು. ಇಲ್ಲವಾದರೆ ಬಿಡುವುದಿಲ್ಲ ಎಂಬ ಮಾತುಗಳು ದಲಿತ ನಾಯಕರಿಂದ ವ್ಯಕ್ತವಾಯಿತು.
ದೇವಸ್ಥಾನಗಳಲ್ಲಿ ದಲಿತರಿಗೆ ಅನ್ನ ಬಡಿಸಲು ಅವಕಾಶವಿಲ್ಲವೇಕೆ?
ಕಟೀಲು, ಸುಬ್ರಹ್ಮಣ್ಯ ಮೊದಲಾದ ಸರಕಾರಿ ಸ್ವಾಮ್ಯದ ದೇವಾಲಯಗಳಲ್ಲಿ ಎಲೆ ತೆಗೆಯುವ ಕೆಲಸ ಮಾಡುವ ದಲಿತರಿಗೆ ಅನ್ನ ಬಡಿಸುವ ಅವಕಾಶ ಏಕಿಲ್ಲ ಎಂದು ಪ್ರಶ್ನಿಸಿದ ದಲಿತ ನಾಯಕ ಭಾನುಚಂದ್ರ, ದೇವಸ್ಥಾನಗಳಲ್ಲಿ ಮೊಕ್ತೇಸರರಾಗಿ ಪರಿಶಿಷ್ಟ ಜಾತಿ, ಪಂಗಡದ ಒಬ್ಬ ಸದಸ್ಯರ ನೇಮಕ ಮಾಡಬೇಕು. ಆದರೆ ಆ ಅವಕಾಶವನ್ನು ಮರಾಠಿ ನಾಯ್ಕ ಸಮುದಾಯಕ್ಕೆ ಮಾತ್ರವೇ ನೀಡಲಾಗುತ್ತದೆ ಹೊರತು ಕೊರಗ ಜನಾಂಗ ಸೇರಿದಂತೆ ಇತರ ದಲಿತ ಸಮುದಾಯದವ ರನ್ನು ಸೇರಿಸಲಾಗುತ್ತಿಲ್ಲ ಎಂದು ದೂರಿದರು.
ಈ ನಡುವೆ ಮಾತನಾಡಿದ ದಲಿತ ನಾಯಕರೊಬ್ಬರು, ದೇವಸ್ಥಾನಗಳ ಮೂಲಕವೇ ದಲಿತರ ಶೋಷಣೆ ನಡೆಯುತ್ತಾ ಬಂದಿದೆ ಎಂದು ಅಸಹನೆ ವ್ಯಕ್ತಪಡಿಸಿದರು. ಸರಕಾರಿ ಕಾರ್ಯಕ್ರಮಗಳಾದ ವಾಲ್ಮೀಕಿ ಜಯಂತಿ, ಅಂಬೇಡ್ಕರ್ ಜಯಂತಿ ಹೊರತು ಪಡಿಸಿ ಉಳಿದ ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಮೊದಲಾದ ರಾಷ್ಟ್ರೀಯ ಹಬ್ಬಗಳ ಪೂರ್ವಭಾವಿ ಸಭೆಯಲ್ಲಿ ದಲಿತ ನಾಯಕರಿಗೆ ಅವಕಾಶ ನೀಡದೆ ತಾರತಮ್ಯ ಎಸಗಲಾಗುತ್ತಿದೆ ಎಂದು ಸಭೆಯಲ್ಲಿ ಭಾನುಚಂದ್ರ ಆರೋಪಿಸಿದರು.
ಡಿಸಿ ಮನ್ನಾ ಭೂಮಿ ಖಾಸಗಿಯವರಿಗೆ ಮಂಜೂರು!
ಇದೇ ವೇಳೆ ಕಳೆದ ವರ್ಷ ನಡೆದ ದಲಿತ ನಾಯಕರ ಸಭೆಯಲ್ಲಿ ನಾಗರಿಕ ಸೇವಾ ಟ್ರಸ್ಟ್‌ನ ಪ್ರತಿನಿಧಿಗಳ ಬೇಡಿಕೆಯಂತೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಧರ್ಮಸ್ಥಳದಲ್ಲಿ ವಿದ್ಯಾಸಂಸ್ಥೆಗೆ ಡಿಸಿ ಮನ್ನಾ ಜಮೀನು ಸ.ನಂಬ್ರ 507, 508/1, 509, 521/1 ಹೀಗೆ ಒಟ್ಟು 12 ಸರ್ವೆ ನಂಬ್ರದ ಭೂಮಿಯನ್ನು ಮಂಜೂರು ಮಾಡಿರುವುದರ ವಿರುದ್ಧ ದಲಿತರು ಒಕ್ಕೊರಳಿ ನಿಂದ ಸಭೆಯಲ್ಲಿ ವಿರೋಧಿಸಿದರು. ಸರಕಾರಿ ಆದೇಶದ ಪ್ರಕಾರ 43.90 ಎಕರೆ ಜಮೀನು ಖಾಸಗಿಯವರಿಗೆ ಮಂಜೂರು ಆಗಿದೆ ಎಂದು ಜಿಲ್ಲಾಧಿಕಾರಿ ಹೇಳಿದಾಗ ಸಭೆಯಲ್ಲಿ ದಲಿತರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಇಂದಿನ ಸಭೆಯಲ್ಲಿ ದಲಿತರ ಸಾಕಷ್ಟು ಸಮಸ್ಯೆಗಳು ಡಿಸಿ ಮನ್ನಾ ಭೂಮಿಯ ಅತಿಕ್ರಮಣದ ತೆರವಿನ ಕುರಿತಂತೆಯೇ ಆಗಿದೆ. ದಲಿತರು ಒಂದು ಸೆಂಟ್ಸ್ ಭೂಮಿಗಾಗಿ ಪರದಾಡುತ್ತಿರುವಾಗ ಡಿಸಿ ಮನ್ನಾ ಭೂಮಿ ಯನ್ನು ಖಾಸಗಿಯವರಿಗೆ ಬಿಟ್ಟು ಕೊಟ್ಟಿರುವುದು ಖಂಡನೀಯ. ದಲಿತರು ಆರ್‌ಟಿಸಿಗಾಗಿ ಹತ್ತಾರು ವರ್ಷ ಕಚೇರಿಗಳಿಗೆ ಅಲೆಯಬೇಕಾದರೆ ಡಿಸಿ ಮನ್ನಾ ಭೂಮಿಯನ್ನು ಖಾಸಗಿಯವರಿಗೆ ತೀರಾ ಸಲೀಸಾಗಿ ಮಂಜೂರು ಮಾಡಲಾಗಿದೆ ಎಂದು ದಲಿತ ನಾಯಕರಾದ ಕೃಷ್ಣಾನಂದ, ಸೇಸಪ್ಪ ಸೇರಿದಂತೆ ದಲಿತ ನಾಯಕರು ಆಕ್ಷೇಪಿಸಿದರು. ಈ ಬಗ್ಗೆ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಂಡು ಸರಕಾರದ ಮಂಜೂರಾತಿ ಯನ್ನು ರದ್ದುಪಡಿಸುವಂತೆ ಆಗ್ರಹಿಸಲಾಯಿತು.
ಸಭೆಯಲ್ಲಿ ಜಿಪಂ ಸದಸ್ಯೆ ಚಂದ್ರಕಲಾ ಮೇಲಿನ ದೌರ್ಜನ್ಯ ಪ್ರಕರಣ ಸೇರಿದಂತೆ, ದಲಿತರ ಮಕ್ಕಳಿಗೆ ಐಎಎಸ್, ಐಪಿಎಸ್ ಶಿಕ್ಷಣಕ್ಕೆ ಪೂರಕ ವ್ಯವಸ್ಥೆ, ಅಂಬೇಡ್ಕರ್ ಭವನ ನಿರ್ಮಾಣ, ಶ್ಮ್ಮಶಾನದ ಕೊರತೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಕೊರತೆ, ಎಪ್ರಿಲ್ 14ರಂದು ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಅವಕಾಶ ಸೇರಿದಂತೆ ಹಲವಾರು ಸಮಸ್ಯೆಗಳನ್ನು ದಲಿತ ನಾಯಕರು ಜಿಲ್ಲಾಧಿಕಾರಿ ಎದುರು ಪ್ರಸ್ತಾಪಿಸಿದರು.
ದಲಿತರಿಗೆ ನಿವೇಶನ ನೀಡುವ ಕುರಿತಂತೆ ಈಗಾಗಲೆ ಜಿಲ್ಲೆಯಲ್ಲಿ ಒಟ್ಟು 92 ಎಕರೆ ಖಾಲಿ ಇರುವ ಜಾಗವನ್ನು ಗುರುತಿಸಲಾಗಿದ್ದು, ಅದನ್ನು ಅರ್ಹರಿಗೆ ಹಂಚಲು ಆದ್ಯತೆ ನೀಡಲಾಗುವುದು. ಗುರುತಿಸಲಾಗಿರುವ ಭೂಮಿಯ ಬಗ್ಗೆ ದಲಿತ ಪ್ರತಿನಿಧಿಗಳು ಪರಿಶೀಲನೆ ನಡೆಸಿ ನಿವೇಶನ ರಹಿತರ ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಸಭೆಯಲ್ಲಿ ಸೂಚಿಸಿದರು.
ಮೂರು ತಿಂಗಳಿಗೊಮ್ಮೆ ಸಭೆಯ ಭರವಸೆ
ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಪ್ರತಿ ಎರಡು ತಿಂಗಳಿಗೊಮ್ಮೆ, ಜಿಲ್ಲಾಧಿಕಾರಿ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ದಲಿತ ನಾಯಕರ ಸಭೆ ನಡೆಸುವುದಾಗಿ ಭರವಸೆ ನೀಡಿದ ಜಿಲ್ಲಾಧಿಕಾರಿ, ದಲಿತರು ತಮ್ಮ ಸಮಸ್ಯೆಗಳನ್ನು ಸಭೆಗಳಿಗಾಗಿಯೇ ಕಾಯದೆ ನೇರವಾಗಿ ಬಂದು ಚರ್ಚಿಸಿದಲ್ಲಿಯೂ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ನಾಗರಿಕ ಹಕ್ಕು ನಿರ್ದೇಶನಾಲ ಯದ ಎಸ್ಪಿ ಸರ್ವೋತ್ತಮ ಪೈ, ಪುತ್ತೂರು ಸಹಾಯಕ ಆಯುಕ್ತ ಸುಂದರ ಭಟ್, ಮಂಗಳೂರು ಸಹಾಯಕ ಆಯುಕ್ತ ವೆಂಕಟೇಶ್, ಮಂಗಳೂರು ಮನಪಾ ಆಯುಕ್ತ ಡಾ. ಹರೀಶ್ ಕುಮಾರ್, ಪುತ್ತೂರು ಎಎಸ್ಪಿ ಪ್ರಭಾಕರ್, ಮಂಗಳೂರು ಎಸಿಪಿ ಸುಬ್ರಹ್ಮಣ್ಯ ಮೊದಲಾದ ವರು ಉಪಸ್ಥಿತರಿದ್ದರು.
ಹರಕೆಯ ಬಯಲಾಟ! ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 3 ತಿಂಗಳಿಗೊಮ್ಮೆ ನಡೆಯಬೇಕಿರುವ ಜಿಲ್ಲಾ ಮಟ್ಟದ ದಲಿತರ ಕುಂದು ಕೊರತೆಗಳ ಸಭೆಯು ಒಂದು ವರ್ಷದ ಬಳಿಕ ಇಂದು ನಡೆದ ಹಿನ್ನೆಲೆ ಯಲ್ಲಿ ಸುಳ್ಯ, ಪುತ್ತೂರು, ಬಂಟ್ವಾಳ ಸೇರಿದಂತೆ ಎಲ್ಲ ತಾಲೂಕುಗಳ ದಲಿತ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ನೂರಾರು ಸಮಸ್ಯೆಗಳೊಂದಿಗೆ ಸಭೆಗೆ ಹಾಜರಾ ಗಿದ್ದರು. ಜಿಲ್ಲಾಧಿಕಾರಿಯ ಮಿನಿ ಕೋರ್ಟ್ ಹಾಲ್‌ನಲ್ಲಿ ಆಸನಗಳ ಕೊರತೆ, ಇಕ್ಕಟ್ಟಿನಿಂದಾಗಿ ದಲಿತರ ನೇಕರು ನಿಂತುಕೊಂಡೇ ಸಭೆಯಲ್ಲಿ ಭಾಗವಹಿಸಬೇಕಾಯಿತು. ಈ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾ ಯಿತು. ಇದೇ ವೇಳೆ, ‘ಇದು ಕಾಟಾಚಾರದ ಸಭೆ. ಹರಕೆಯ ಬಯಲಾಟ. ನಮಗೆ ಕುಳಿತು ಕೊಳ್ಳಲೇ ಅವಕಾಶವಿಲ್ಲ. ಇನ್ನು ನಮ್ಮ ಸಮಸ್ಯೆ ಪರಿಹಾರವಾಗುವುದೆಂತು’ ಎಂಬ ಅಸಹನೆಯ ಮಾತು ಕೂಡಾ ಸಭೆಯಲ್ಲಿ ನಿಂತುಕೊಂಡಿದ್ದ ದಲಿತರಿಂದ ಕೇಳಿಬಂತು. |
No comments:
Post a Comment