Pages

Wednesday, 14 December 2011

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಇಳಿಕೆ: ರಾಜ್ಯಸಭೆಯಲ್ಲಿ ಚಿದಂಬರಂ




ಗುರುವಾರ - ಡಿಸೆಂಬರ್-15-2011


ಹೊಸದಿಲ್ಲಿ, ಡಿ. 14: ಕರ್ನಾಟಕ, ಮಧ್ಯಪ್ರದೇಶ, ಒಡಿಶಾ ಮತ್ತು ಗುಜರಾತ್ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಈ ವರ್ಷದ ಅಕ್ಟೋಬರ್ ತಿಂಗಳವರೆಗೆ 170ಕ್ಕೆ ಕಡಿಮೆಯಾಗಿದೆ ಎಂದು ಗೃಹ ಸಚಿವ ಪಿ. ಚಿದಂಬರಂ ಇಂದು ರಾಜ್ಯ ಸಭೆಗೆ ತಿಳಿಸಿದರು.


‘‘ಅಲ್ಪಸಂಖ್ಯಾತರ ಅದರಲ್ಲೂ ಮುಖ್ಯವಾಗಿ ಕ್ರೈಸ್ತರ ಮೇಲಿನ ದೌರ್ಜನ್ಯ ಪ್ರಕರಣಗಳು ದೇಶದಲ್ಲಿ, ಮುಖ್ಯವಾಗಿ ಕರ್ನಾಟಕ, ಒಡಿಶಾ, ಮಧ್ಯಪ್ರದೇಶ ಮತ್ತು ಗುಜರಾತ್‌ಗಳಲ್ಲಿ ಹೆಚ್ಚುತ್ತಿದೆ ಎನ್ನುವುದು ಸರಿಯಲ್ಲ’’ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಅವರು ಹೇಳಿದರು.



ಈ ನಾಲ್ಕು ರಾಜ್ಯಗಳಲ್ಲಿ ಈ ವರ್ಷದ ಅಕ್ಟೋಬರ್ ತಿಂಗಳವರೆಗೆ ಕೋಮು ಹಿಂಸೆ ಪ್ರಕರಣಗಳು 170ಕ್ಕೆ ಇಳಿದಿವೆ ಎಂದು ಹೇಳಿದ ಅವರು, ಕಳೆದ ವರ್ಷದ ಇದೇ ಅವಧಿಯಲ್ಲಿ 204 ಪ್ರಕರಣಗಳು ದಾಖಲಾಗಿದ್ದವು ಎಂದರು.



ದೇಶದಲ್ಲಿ ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ರಾಜ್ಯ ಸರಕಾರಗಳ ನಿರ್ದಿಷ್ಟ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಹಾಗೂ ಪೊಲೀಸ್ ಪಡೆಗಳನ್ನು ಆಧುನೀಕರಣ ಗೊಳಿಸುವ ಮೂಲಕ ಕೇಂದ್ರ ಸರಕಾರ ನೆರವು ನೀಡುತ್ತಿದೆ ಎಂದು ಸಚಿವರು ತಿಳಿಸಿದರು.



ರಾಷ್ಟ್ರ ರಾಜಧಾನಿಯಲ್ಲಿ ಈಶಾನ್ಯ ಭಾಗದ ಜನರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ದಿಲ್ಲಿಯಲ್ಲಿ ವಾಸಿಸುವ ಈಶಾನ್ಯ ಭಾಗದ ಜನರಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಚಿದಂಬರಂ ನುಡಿದರು.
ಹಣಕಾಸು ಸಚಿವರಾಗಿದ್ದಾಗ ಚಿದಂಬರಂ ಕೂಡ 2ಜಿ ಹಗರಣದಲ್ಲಿ ಭಾಗಿಯಾಗಿ ರುವುದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗುವುದರ ನಡುವೆಯೇ ಎಲ್ಲ ಪೂರಕ ಪ್ರಶ್ನೆಗಳಿಗೆ ಚಿದಂಬರಂ ಉತ್ತರಿಸಿದರು.



ಎಪ್ರಿಲ್‌ನಿಂದ ಮಾರ್ಚ್‌ವರೆಗಿನ ಕಳೆದ ಹಣಕಾಸು ವರ್ಷದಲ್ಲಿ 1,574 ಕಸ್ಟಡಿ ಸಾವುಗಳು ಸಂಭವಿಸಿದ್ದವು. ಇವುಗಳ ಪೈಕಿ 1,426 ಸಾವುಗಳು ನ್ಯಾಯಾಂಗ ಕಸ್ಟಡಿಯಲ್ಲಿ ಸಂಭವಿಸಿದರೆ, 146 ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದವು.



ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳುವುದು ರಾಜ್ಯಗಳ ಕೆಲಸ ಎಂದರು. ಹಾಗಾಗಿ, ಕಸ್ಟಡಿ ಸಾವುಗಳ ವಿಷಯದಲ್ಲಿ ಕೇಂದ್ರ ಸರಕಾರ ನೇರವಾಗಿ ಮಧ್ಯಪ್ರವೇಶಿಸುವುದಿಲ್ಲ, ಬದಲಿಗೆ ಕಾಲ ಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತದೆ ಎಂದು ಚಿದಂಬರಂ ತಿಳಿಸಿದರು.

No comments:

Post a Comment

html