Pages

Tuesday 12 April 2011

ಮಂಗಳೂರು: ಕ್ರೈಸ್ತ ಆಶ್ರಮಗಳ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ


ಮಂಗಳೂರು: ಕ್ರೈಸ್ತ ಆಶ್ರಮಗಳ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ








  • ‘ಒಂದು ಮಗುವನ್ನು ಕೊಂಡು ಹೋಗಿ ಸಾಕಲಿ
  • ಮನುವಾದಿಗಳ ದೀಕ್ಷೆ ಬೇಕಾಗಿಲ್ಲ’ 
ಮಂಗಳೂರು, ಎ.11: ಹಳೆಯಂಗಡಿಯ ಎಬಿನೈಝರ್, ಬಿಜೈ ಆನೆಗುಂಡಿಯ ಆಶ್ರಯ, ಉಳ್ಳಾಲ ಸೋಮೇಶ್ವರದ ಸ್ಟೆಲ್ಲಾ ಮೇರಿಸ್ ಆಶ್ರಮಗಳ ಮೇಲೆ ಇತ್ತೀಚೆಗೆ ಸಂಘ ಪರಿವಾರದ ಅಧೀನ ಸಂಸ್ಥೆಯಾದ ಬಜರಂಗ ದಳದ ಕಾರ್ಯಕರ್ತರು ನಡೆಸಿದ ದಾಳಿಯನ್ನು ಖಂಡಿಸಿ ಜಾತ್ಯತೀತ ನಿಲುವಿನ 37 ಸಂಘಟನೆಗಳು ಸೋಮವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಇದಕ್ಕೆ ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಎಸ್‌ಡಿಪಿಐ ಪಕ್ಷಗಳು ಕೂಡ ಸಾಥ್ ನೀಡಿದ್ದವು.  ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಕ್ರೈಸ್ತ ಸಮಾಜದ ಬಾಂಧವರು ಹಾಗೂ ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ‘ಸಿಡಬ್ಲುಸಿಗೆ ಧಿಕ್ಕಾರ, ಸಮಿತಿಯಿಂದಲೇ ಮಕ್ಕಳ ಕಾಯ್ದೆಯ ಉಲ್ಲಂಘನೆ, ಧರ್ಮದ ಹೆಸರಿನಲ್ಲಿ ನಡೆಯುವ ಗೂಂಡಾಗಿರಿಗೆ ಧಿಕ್ಕಾರ, ಕಾನೂನು ಕೈಗೆತ್ತಿಕೊಂಡು ರಾಜಕೀಯ ಮಾಡುವ ದುಷ್ಟರಿಗೆ ಧಿಕ್ಕಾರ,ಅನಾಥ ಮಕ್ಕಳ ಅನ್ನ ಕೀಳುವ ಧೂರ್ತರಿಗೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಮೊಳಗಿಸಿದರು. ಪ್ರತಿಭಟನೆ ಯುದ್ದಕ್ಕೂ ಪೊಲೀಸ್ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು.  ಕ್ರೈಸ್ತ ಆಶ್ರಮಗಳ ಮೇಲೆ ದಾಳಿ ನಡೆಸುವ ಬಜರಂಗದಳದಂತಹ ಮತೀಯ ಸಂಘಟನೆ ಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು, ಇವರಿಗೆ ಕುಮ್ಮಕ್ಕು ನೀಡುವ ಸಿಡಬ್ಲುಸಿ ಅಧ್ಯಕ್ಷೆ ಆಶಾ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶಕುಂತಳಾ, ಶ್ಯಾಮಲಾರ ಮೇಲೆಯೂ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನ ಕಾರರು ದ.ಕ.ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಒಂದು ಮಗುವನ್ನು ಕೊಂಡು ಹೋಗಿ ಸಾಕಲಿ: ಸಮಾಜದ ದೀನ, ದುರ್ಬಲ ಮಕ್ಕಳ ಪೋಷಣೆಯಲ್ಲಿ ತೊಡಗಿಸಿಕೊಂಡಿರುವ ಕ್ರೈಸ್ತ ಆಶ್ರಮಗಳಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ದಾಳಿ ನಡೆಸುವ ಮತೀಯ ಸಂಘಟನೆಗಳು ನಾಗರಿಕ ಸಮಾಜದಲ್ಲಿ ಕ್ರೈಸ್ತ ಸಮುದಾಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ನಡೆಸುತ್ತಿದ್ದಾರೆ. ಇವರ ಒತ್ತಡಕ್ಕೆ ಮಣಿದು ‘ಆಶ್ರಯ’ ಹೆಸರಿನ ಆಶ್ರಮ ನಡೆಸುವ ಸಾಮಾಜಿಕ ಕಾರ್ಯಕರ್ತ ಲ್ಯಾನ್ಸಿ ಲಾಟ್ ಪಿಂಟೋರ ಮೇಲೆ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ. ಸ್ಟೆಲ್ಲಾ ಮೇರಿಸ್ ಸಂಸ್ಥೆಯ 41 ಬಡ ಹೆಣ್ಮಕ್ಕಳನ್ನು ಈ ಮತಾಂಧರು ಬೆದರಿಸಿ ಮಾನಸಿಕ ಹಿಂಸೆ ನೀಡಿದ್ದಾರೆ. ಸಮಾಜ ಸೇವೆ ಮಾಡದ ಮತ್ತು ಮಾಡಲು ಬಿಡದ ಬಜರಂಗಿಗಳು ತಾಕತ್ತಿದ್ದರೆ, ಇಂಥ ಒಂದು ಅನಾಥ, ಬಡ ಮಗುವನ್ನು ಕೊಂಡು ಹೋಗಿ ಸಾಕಲಿ’ ಎಂದು ವಿನ್ಸೆಂಟ್ ಆಳ್ವ ಸವಾಲು ಹಾಕಿದರು. 1938ರಲ್ಲಿ ಸ್ಥಾಪನೆಗೊಂಡಿರುವ ಸ್ಟೆಲ್ಲಾ ಮೇರಿಸ್ ಸಂಸ್ಥೆ ಮತಾಂತರ ಮಾಡುತ್ತಿದ್ದರೆ, ಇಂದು ಮಂಗಳೂರು ಸಂಪೂರ್ಣ ಕ್ರೈಸ್ತಮಯವಾಗುತ್ತಿತ್ತು. ಮಂಗಳೂರಿನಲ್ಲಿ ಅನೇಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿವೆ. ಅಲ್ಲಿ ಕಲಿತ ಮಕ್ಕಳು ಮತಾಂತರ ನಡೆದಿದೆ ಅಥವಾ ನಡೆಯುತ್ತಿದೆ ಎಂದು ಬಹಿರಂಗಪಡಿಸಿದರೆ ನಾವು ಇಂದಿ ನಿಂದಲೇ ಪ್ರತಿಭಟನೆ, ಹೋರಾಟವನ್ನು ಕೈ ಬಿಡುತ್ತೇವೆ ಎಂದು ಹೇಳಿದ ಆಳ್ವ, ಬಜರಂಗ ದಳದವರು ಮತಾಂತರ, ಮತಾಂತರ ಎಂದು ಬೊಬ್ಬಿರಿಯುವುದು ಎಷ್ಟು ಸರಿ? ಇವರಿಗೆ ಕಾನೂನನ್ನು ಕೈಗೆತ್ತಿಕೊಳ್ಳಲು ಅಧಿಕಾರ ಕೊಟ್ಟವ ರಾರು? ಎಂದು ಪ್ರಶ್ನಿಸಿದರು. 
ದೀಕ್ಷೆ ಬೇಕಿಲ್ಲ: ದಲಿತ ಮಕ್ಕಳಿಗೆ ಶಿಕ್ಷಣ, ಆಹಾರ ನೀಡುವಲ್ಲಿ ಕ್ರೈಸ್ತ ಸಂಸ್ಥೆಗಳ ಪಾತ್ರ ಅಪಾರ. ಅದನ್ನು ಕಂಡು ತನ್ನ ತಪ್ಪನ್ನು ತಿದ್ದಿಕೊಳ್ಳದ ಇಲ್ಲಿನ ಮನುವಾದಿಗಳು ನಮಗೆ ದೀಕ್ಷೆ ನೀಡಲು ಮುಂದಾಗಿದ್ದಾರೆ. ನಮಗೆ ನಿಮ್ಮ ದೀಕ್ಷೆ ಬೇಕಾಗಿಲ್ಲ. ವಿದ್ಯೆ ಕೊಡಿ ಎಂದು ದಲಿತ ಸಂಘಟನೆಯ ಮುಖಂಡ ಕೃಷ್ಣಾನಂದ ಡಿ. ಆಗ್ರಹಿಸಿದರು.
ಜಾತ್ಯತೀತ ಸಮಾಜ ಹೆದರದು: ಕ್ರೈಸ್ತ ಸಮಾಜದ ಮೇಲಾಗುವ ದಬ್ಬಾಳಿಕೆಯನ್ನು ಕಂಡೂ ಕಾಣದಂತೆ ಇಲ್ಲಿನ ಪೊಲೀಸರು ವರ್ತಿಸುತ್ತಿದ್ದಾರೆ. ಪೊಲೀಸರು ವೌನ ವಹಿಸಿರು ವುದರಿಂದ ಬಜರಂಗ ದಳ ಮತ್ತಿತರ ಮತೀಯ ಸಂಘಟನೆಗಳು ಇಂದು ಸಾಕಷ್ಟು ಬೆಳೆದಿದೆ. ಆದರೆ, ಇದಕ್ಕೆ ಜಾತ್ಯತೀತ ಸಮಾಜ ಯಾವತ್ತೂ ಹೆದರದು ಎಂದು ಮುಸ್ಲಿಂ ವರ್ತಕರ ಸಂಘದ ಮುಖಂಡ ಅಲಿ ಹಸನ್ ಹೇಳಿದರು. ಶಾಸಕರಾದ ರಮಾನಾಥ ರೈ, ಅಭಯಚಂದ್ರ ಜೈನ್, ಯು.ಟಿ. ಖಾದರ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಾಜಿ ಶಾಸಕಿ ಅಕ್ಟೋವಿಯಾ ಆಲ್ಬುಕರ್ಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಬಿ. ಸದಾಶಿವ, ಕ್ರೈಸ್ತ ಧರ್ಮಗುರುಗಳಾದ ಫಾ.ಮಿಲಿಯಂ ಮಿನೆಜಸ್, ಡೆನ್ನಿಸ್ ಮೊರಾಸ್ ಪ್ರಭು, ವಿವಿಧ ಸಂಘಟನೆ ಮತ್ತು ಪಕ್ಷಗಳ ಮುಖಂಡರಾದ ಯಾದವ ಶೆಟ್ಟಿ, ಮೊದಿನ್ ಬಾವಾ, ಅರುಣ್ ಕುವೆಲ್ಲೋ, ಬಾಝಿಲ್ ಡಿಸೋಜ, ಪಿ.ಬಿ.ಡೇಸಾ, ಸುರೇಶ್ ಭಟ್ ಬಾಕ್ರಬೈಲ್, ನವೀನ್ ಡಿಸೋಜ, ಸುರೇಶ್ ಶೆಟ್ಟಿ, ದಿನೇಶ್ ಹೆಗ್ಡೆ ಉಳೆಪಾಡಿ, ವಾಲ್ಟರ್ ಮಾಬೆನ್, ಜೆ.ಎಸ್.ನೊರೊನ್ಹ, ಮೆಲ್ವಿಲ್ ಪಿಂಟೋ, ಐಡಿಯಲ್ ಅಶ್ರಫ್, ದಯಾನಂದ ಶೆಟ್ಟಿ, ವಾಲ್ಟರ್ ಸಿರಿಲ್ ಪಿಂಟೋ, ಅಗಾತ ಮೇರಿ, ಸಂತೋಷ್ ಡಿಕಸ್ತ, ಜಾನ್ ಡಿಸೋಜ, ಅಬ್ದುಲ್ ನಾಸಿರ್ ಸಜಿಪ ಮತ್ತಿತರರಿದ್ದರು. 
ಕ್ರೈಸ್ತ ಮುಖಂಡ ಡೆನ್ನಿಸ್ ಡಿಸಿಲ್ವ ಸ್ವಾಗತಿಸಿ ದರು. ಪಿಎಫ್‌ಐ ಮುಖಂಡ ಮುಹಮ್ಮದ್ ಶರೀಫ್ ಬಜ್ಪೆ ವಂದಿಸಿದರು. ವಿಕ್ಟರ್ ಮಥಾಯಿಸ್ ಕಾರ್ಯಕ್ರಮ ನಿರೂಪಿಸಿದರು

Varthabharathi...

ಗಾಂಧಿವಾದದ ಪಾಯಸಕ್ಕೆ ಗೋಡ್ಸೇವಾದದ ಸಕ್ಕರೆ

ಮಂಗಳವಾರ - ಏಪ್ರಿಲ್ -12-2011

ಅಣ್ಣಾ ಹಝಾರೆಯವರನ್ನು ಮುಂದಿಟ್ಟು ಕಳೆದ ಕೆಲ ದಿನಗಳಿಂದ ನಡೆಯುತ್ತಿರುವುದು ಯಾವುದೋ ಟಿ.ವಿ. ಚಾನೆಲ್ ಒಂದರ ರಿಯಾಲಿಟಿ ಶೋ ಆಗಿರಬಹುದೇ? ಇತ್ತೀಚೆಗೆ ರಿಯಾಲಿಟಿ ಶೋ ಮತ್ತು ಜಾಹೀರಾತುಗಳಲ್ಲಿಯೇ ಹೆಚ್ಚು ಗುರುತಿಸಿಕೊಂಡಿರುವ ಕಿರಣ್ ಬೇಡಿ, ಯೋಗದ ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣೆರಚುತ್ತಾ ಸದಾ ವಿವಿಧ ಚಾನೆಲ್‌ಗಳಲ್ಲಿ ಕಂಗೊಳಿಸುವ ರಾಮ್‌ದೇವ್, ‘ರಂಗ್ ದೇ ಬಸಂತಿ’ ಚಿತ್ರದಿಂದ ಪ್ರಭಾವಿತರಾಗಿ ಕ್ಯಾಂಡಲ್ ಹಿಡಿದು ‘ಥ್ರಿಲ್’ ಆಗಿರುವ ಐಟಿ ಹುಡುಗರು... ಹರಿದಾಡುತ್ತಿರುವ ಎಸ್ಸೆಮ್ಮೆಸ್‌ಗಳು... ಕುಣಿದಾಡುತ್ತಿರುವ ಟಿ.ವಿ. ಯಾಂಕರ್‌ಗಳು...
ಈ ಶೋಗೆ ಪರೋಕ್ಷವಾಗಿ ‘ಇನ್‌ವೆಸ್ಟ್‌’ ಮಾಡುತ್ತಿರುವ ಉದ್ಯಮಪತಿಗಳು... ಹಝಾರೆಗೆ ಶರಬತ್ ಕುಡಿಸುತ್ತಿರುವ ಪುಟಾಣಿಯ ಮುಖದ ಗಾಬರಿ... ಇವೆಲ್ಲವನ್ನು ನೋಡುತ್ತಿರುವಾಗ ನನಗೆ ಒಂದು ಟಿ.ವಿ. ರಿಯಾಲಿಟಿ ಶೋವನ್ನು ನೋಡುತ್ತಿರುವ ಅನುಭವವಾಗುತ್ತಿದೆಯೇ ಹೊರತು, ಅದರಾಚೆಗೆ ಇನ್ನಾವ ಅನುಭವವೂ ನನಗಾಗಿಲ್ಲ.

ಆದರೆ ರವಿವಾರ ಅಣ್ಣಾ ಹಝಾರೆಯವರು ನೀಡಿರುವ ಒಂದು ಹೇಳಿಕೆ ಮಾತ್ರ ನನ್ನಲ್ಲಿ ಗಾಬರಿ ಹುಟ್ಟಿಸಿತು. ಗಾಂಧಿವಾದದ ಹೆಸರಿನಲ್ಲಿ ಹುಟ್ಟಿಕೊಂಡಿರುವ ಈ ಚಳವಳಿ, ಇಡೀ ಗಾಂಧಿವಾದವನ್ನೇ ದಾರಿತಪ್ಪಿಸುವುದಕ್ಕಾಗಿ ಹುಟ್ಟು ಹಾಕಿರುವ ಸಂಚೆ? ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಳ್ಳುವಂತೆ ಮಾಡಿದೆ. ಗಾಂಧಿವಾ ದದ ಕುರಿತಂತೆ ಅಪಕ್ವರಾಗಿರುವ ಕೆಲವು ಹಿತಾಸಕ್ತಿಗಳು ಕುಣಿಸಿದಂತೆ ಕುಣಿಯುತ್ತಿರುವ ಹಝಾರೆ, ದೇಶಕ್ಕೆ ಅದೇನೋ ಒಳಿತನ್ನು ಮಾಡಲು ಹೊರಟಂತೆ ಕಾಣುತ್ತಿದ್ದರೂ, ಅವರು ಈ ದೇಶದ ಅಳಿದುಳಿದ ಗಾಂಧಿವಾದದ ಅವ ಶೇಷಗಳು ಶಾಶ್ವತವಾಗಿ ಸಂಘಪರಿವಾರವೆನ್ನುವ ಹೆಬ್ಬುಲಿಯ ಬಾಯಿಗೆ ಹಾಕಿ ಬಿಡುವುದಕ್ಕೆ ಹೊರಟಿದ್ದಾರೆಯೇ ಎನ್ನುವುದು ನನ್ನ ದೊಡ್ಡ ಆತಂಕ. ಇದೇ ಸಂದರ್ಭದಲ್ಲಿ ಅವರ ಸುತ್ತಮುತ್ತಲಿರುವ ಕೆಲವು ‘ಗಿರಾಕಿ’ಗಳು ನನ್ನ ಅನುಮಾನಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತಿವೆ.

ಅಣ್ಣಾ ಹಝಾರೆ ತನ್ನ ಹದಿ ಹರೆಯದಲ್ಲೇ ಸೇನೆಯನ್ನು ಸೇರಿದವರು. ಗಾಂಧೀಜಿಯ ‘ಅಹಿಂಸೆ’ ‘ಸತ್ಯ’ ಇತ್ಯಾದಿಗಳ ಕುರಿತಂತೆ ಯಾವ ರೀತಿಯ ಪ್ರಭಾವವೂ ಇಲ್ಲದ ಹಝಾರೆ ಕೆಲವು ವರ್ಷಗಳಲ್ಲೇ ಸೇನೆಯ ಬರ್ಬರತೆಗೆ ಹಣ್ಣಾ ದವರು. ವಿಪರ್ಯಾಸವೆಂದರೆ ಸೇನೆಯನ್ನು ತ್ಯಜಿ ಸುವ ನಿರ್ಧಾರಕ್ಕೆ ಬಂದರೆ, ಅವರ ಮುಂದೆ ಕಾಳ ಭವಿಷ್ಯ ಧುತ್ತೆಂದು ನಿಂತಿತ್ತು. ಸೇನೆ ಪ್ರತಿಪಾದಿಸುವ ಹಿಂಸೆ, ಅದರ ಶಿಸ್ತು ಇತ್ಯಾದಿಗಳು ಅವರ ಖಿನ್ನತೆಯನ್ನು ಸೃಷ್ಟಿಸಿತು. ಮಾತ್ರವಲ್ಲ, ಅವರು ಆತ್ಮ ಹತ್ಯೆಯ ನಿರ್ಧಾರಕ್ಕೂ ಬಂದರಂತೆ. ಅಷ್ಟೇ ಅಲ್ಲ ‘ಎರಡು ಪುಟ’ಗಳ ಡೆತ್ ನೋಟನ್ನು ಅವರು ಬರೆದಿಟ್ಟಿದ್ದರು.

ಹೀಗೆ ಅವರು ಆತ್ಮಹತ್ಯೆಯ ದಾರಿ ಯಲ್ಲಿದ್ದಾಗ, ಬಸ್‌ಸ್ಟಾಂಡ್ ಒಂದರ ಬುಕ್‌ಸ್ಟಾಲಿ ನಲ್ಲಿ ‘ವಿವೇಕಾನಂದ’ರ ಪುಸ್ತಕವನ್ನು ನೋಡಿದ ರಂತೆ. ಅದರ ಪ್ರಭಾವಕ್ಕೆ ಸಿಲುಕಿದ ಹಝಾರೆ ತನ್ನ ಆತ್ಮಹತ್ಯೆಯ ಪ್ರಯತ್ನದಿಂದ ಹಿಂದೆ ಸರಿದರು. ಸೇನೆಯಿಂದ ನಿವೃತ್ತಿಯಾಗುವ ಆಸೆಯಿತ್ತಾದರೂ, ಅವರ ಅವಧಿ ಪೂರ್ತಿಯಾಗಿರಲಿಲ್ಲ. ಅರ್ಧದಲ್ಲೇ ಬಿಟ್ಟು ಬಂದರೆ ಪಿಂಚಣಿ ಸಿಗುವುದಿಲ್ಲ. ಈ ಕಾರ ಣಕ್ಕೆ ಅವರು ಸೇನೆಯಲ್ಲಿ ಮತ್ತೂ ಕೆಲವು ವರ್ಷ ಗಳ ಕಾಲ ಮುಂದುವರಿದರಂತೆ. ಇದು ಅಣ್ಣಾ ಹಝಾರೆಯವರ ವಿರೋಧಾಭಾಸಗಳಿಂದ ಹಾಗೂ ಹಲವು ನಾಟಕೀಯತೆಯನ್ನೊಳಗೊಂಡ ಹದಿಹರೆಯದ ಬದುಕು. ಅಲ್ಲಿಂದ ಅವರು ತನ್ನ ಗ್ರಾಮಕ್ಕೆ ತೆರಳಿ ಅಲ್ಲಿನ ಜನರೊಂದಿಗೆ ಸೇರಿ ಆ ಗ್ರಾಮದ ಉದ್ಧಾರವನ್ನು ಕೈಗೆತ್ತಿಕೊಂಡರು.

ಈ ಸಂದರ್ಭದಲ್ಲಿ ಅವರೊಂದಿಗೆ ಕೆಲವು ವಿದೇಶಿ ಎನ್‌ಜಿಓ ಸಂಸ್ಥೆಗಳೂ ಕೈ ಜೋಡಿಸಿವೆ ಎನ್ನುವುದನ್ನು ನಾವಿಲ್ಲಿ ಮರೆಯಬಾರದು. ಅಮೆರಿಕದ ‘ಕ್ಯಾರ್’ ಎಂಬ ಎನ್‌ಜಿಒ ಸಂಸ್ಥೆಯೊಂದಿಗೂ ಅವರಿಗೆ ಸಂಬಂಧವಿದೆ. ಅವರಿಗೆ ಈ ಸಂಸ್ಥೆ ಸನ್ಮಾನವನ್ನು ಮಾಡಿ, ಪ್ರಶಸ್ತಿ ನೀಡಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಆದರೆ ಇವೆಲ್ಲದರ ನಡುವೆಯೂ ಮಹಾರಾಷ್ಟ್ರದ ರಿಲೆಗಾನ್ ಸಿದ್ಧಿ ಗ್ರಾಮದಲ್ಲಿ ಅವರು ನಡೆಸಿದ ಸುಧಾರಣೆ ಮತ್ತು ಆಗಾಗ ಸರಕಾರದೊಂದಿಗೆ ನಡೆಸುತ್ತಿದ್ದ ತಿಕ್ಕಾಟ ಇವನ್ನು ನಾವು ಒಪ್ಪಲೇಬೇಕು. ಆದರೆ ಇಡೀ ದೇಶದ ಚಳವಳಿಯ ನಾಯಕತ್ವವನ್ನು ವಹಿಸುವ ಪಕ್ವತೆಯಾಗಲಿ, ಗಾಂಧೀಜಿಯ ಮುತ್ಸದ್ಧಿತನ ವಾಗಲಿ ಅವರಲ್ಲಿಲ್ಲ. ಆದುದರಿಂದಲೇ 97 ಗಂಟೆಗಳಲ್ಲೇ ಗಾಂಧಿವಾದಿ ಚಳವಳಿಯನ್ನು ಗೋಡ್ಸೇವಾದಿಗಳು ಅಪಹರಿಸಿದ್ದಾರೆ.
ಹಝಾರೆ ಪ್ರಾಮಾಣಿಕರೇ ಇರಬಹುದು. ಆದರೆ ಅವರು ಗಾಂಧಿವಾದಿಗಳಂತೂ ಅಲ್ಲ. ಅಥವಾ ಅವರೇನು ತಿಳಿದುಕೊಂಡಿದ್ದಾರೆಯೋ ಅದು ಗಾಂಧೀವಾದವಲ್ಲ. ಗಾಂಧೀಜಿ ಯಾವತ್ತೂ ಬಾಬಾ ರಾಮ್‌ದೇವ್‌ನಂತಹ ಢೋಂಗಿ ಸನ್ಯಾಸಿಗಳನ್ನು ತನ್ನ ಕಾಂಪೌಂಡ್‌ನ ಒಳಕ್ಕೂ ಸೇರಿಸಿರಲಿಲ್ಲ. ತಮಾಷೆ ನೋಡಿ. ಈ ರಾಮದೇವ್ ಒಬ್ಬ ನಕಲಿ ಆಯುರ್ವೇದ ಪಂಡಿತ. ಅದರಿಂದ ಕೋಟಿಗಟ್ಟಲೆ ಲಾಭವನ್ನು ಮಾಡುತ್ತಿದ್ದಾನೆ. ಜೊತೆಗೆ ಯೋಗವನ್ನು ಒಂದು ‘ಉದ್ಯಮ’ವಾಗಿ ಪರಿವರ್ತಿಸಿ ಅದನ್ನು ಮೇಲ್ಮಧ್ಯಮ ವರ್ಗಕ್ಕೆ ಮಾರುತ್ತಿರುವ ಒಬ್ಬ ವ್ಯಾಪಾರಿ. ಇಲ್ಲಿ ಇದಲ್ಲ ಮುಖ್ಯ. ಎಲ್ಲಕ್ಕಿಂತ ಅಪಾಯಕಾರಿಯೆಂದರೆ, ಈತನ ಬೆನ್ನಿಗೆ ಸಂಘಪರಿವಾರದ ಜನರಿದ್ದಾರೆ.

ಬಿಜೆಪಿಯ ಹಲವು ನಾಯಕರೊಂದಿಗೆ ಈತನಿಗೆ ನಿಕಟ ಸಂಪರ್ಕವಿದೆ. ಬಿಜೆಪಿಯ ‘ಚಿಂತಕ’ ಎಂದೇ ಖ್ಯಾತಿ ಪಡೆದ ಗೋವಿಂದಾಚಾರ್ಯ ಈತನ ಮೂಲಕ ಆರೆಸ್ಸೆಸ್‌ನ ‘ಗೋ ಗ್ರಾಮ ಯಾತ್ರೆ’ಯನ್ನು ಸಕ್ರಿಯವಾಗಿ ಸಂಘಟಿಸಿದ್ದರು. ಇವನ ಒಂದು ಹೆಗಲಲ್ಲಿ ಉದ್ಯಮಿಗಳಿದ್ದರೆ ಇನ್ನೊಂದು ಹೆಗಲಲ್ಲಿ ಆರೆಸ್ಸೆಸ್‌ನ ಚಿಂತನೆಗಳಿವೆ. ಜೊತೆಗೆ ಹೊಸತೊಂದು ಪಕ್ಷವನ್ನು ಕಟ್ಟುವ ಕುರಿತಂತೆಯೂ ಈಗಾಗಲೇ ಹೇಳಿಕೆಯನ್ನು ನೀಡಿದ್ದಾನೆ. ಹೀಗಿರುವಾಗ, ಹಝಾರೆಯವರ ಹೋರಾಟ ‘ಪಕ್ಷರಹಿತ’ ಹೇಗಾಗುತ್ತದೆ? ಇದು ಮೊದಲ ಪ್ರಶ್ನೆ. ಈ ಚಳವಳಿಯ ಆಳದಲ್ಲಿ ಟೊಳ್ಳುತನ ಮಾಧ್ಯಮಗಳ ಗದ್ದಲದಲ್ಲಿ ಮುಚ್ಚಿ ಹೋಗಿದೆ. ಹಝಾರೆಯ ಬೆನ್ನಿಗೆ ಕಾರ್ಪೊರೇಟ್ ವಲಯದ ಒಂದು ವಿಭಾಗ ನಿಂತಿದೆ.

ಆದರೆ ಇಂದು ರಾಜಕಾರಣಿಗಳನ್ನು ಭ್ರಷ್ಟರನ್ನಾಗಿ ಮಾಡುತ್ತಿರುವವರೇ ಈ ಉದ್ಯಮಪತಿಗಳು. ಈ ದೇಶದ ರೈತರ ಭೂಮಿಯನ್ನು ಅರ್ಧಕ್ಕರ್ಧ ನುಂಗಿ ಹಾಕಿದವರು ಇದೇ ಉದ್ಯಮಿಗಳು. ‘ಹಳ್ಳಿಗಳಿಂದ ಭಾರತ’ ಎಂದು ಹೇಳಿದವರು ಗಾಂಧೀಜಿ. ಆದರೆ ಹಳ್ಳಿಗಳು ಇದೇ ಉದ್ಯಮಪತಿಗಳಿಂದ ಸಾಯುತ್ತಿವೆ. ಇಂತಹ ಕಾರ್ಪೊರೇಟ್ ಜನರನ್ನು ಕಟ್ಟಿಕೊಂಡು ಹಝಾರೆ ಯಾವ ಚಳವಳಿಯನ್ನು ಕಟ್ಟಲು ಹೊರಟಿದ್ದಾರೆ? ಬಾಯಲ್ಲಿ ಟಸ್‌ಪುಸ್ ಎಂದು ಇಂಗ್ಲಿಷ್ ಮಾತನಾಡುತ್ತಾ, ಅಮೆರಿಕದ ಕನಸು ಕಾಣುತ್ತಿರುವ ಹುಡುಗರು ಒಂದು ದಿನ ಕ್ಯಾಂಡಲ್ ಹಚ್ಚಿ ಥ್ರಿಲ್ ಆದರೆ ಕ್ರಾಂತಿಯಾಗುವುದಕ್ಕೆ ಸಾಧ್ಯವೆ?
ಏನಾಗಬೇಕಿತ್ತೋ ಅದೇ ಆಗಿದೆ.

ತನ್ನ ಬೇಡಿಕೆಗಳನ್ನು ಕೇಂದ್ರ ಒಪ್ಪಿದ ಮರುದಿನವೇ ಈ ‘ಗಾಂಧಿವಾದಿ’ ಹಝಾರೆ ‘ಗೋಡ್ಸೇವಾದಿ’ ಮೋದಿಯನ್ನು ತಬ್ಬಿಕೊಂಡಿದ್ದಾರೆ. ಗುಜರಾತ್‌ನ ಅಭಿವೃದ್ಧಿಯನ್ನು ಕೊಂಡಾಡಿದ್ದಾರೆ. ವಿದೇಶಿ ಉದ್ಯಮಿಗಳಿಗೆ ಗುಜರಾತ್‌ನ ಬಾಗಿಲನ್ನು ತೆರೆದುಕೊಟ್ಟದ್ದು ಹಝಾರೆಗೆ ಅಭಿವೃದ್ಧಿಯಾಗಿ ಕಂಡಿದೆ. ಉದ್ಯಮದಿಂದ ಭೂಮಿ ಕಳೆದುಕೊಳ್ಳುತ್ತಿರುವ ಸಾವಿರಾರು ರೈತರು ಈ ಗಾಂಧಿ ವಾದಿಯ ಕಣ್ಣಿಗೆ ಬಿದ್ದಿಲ್ಲ. ‘ಅಭಿವೃದ್ಧಿ’ಯ ಕುರಿತಂತೆ ಮಹಾತ್ಮಗಾಂಧೀಜಿಯ ಕಲ್ಪನೆ ದೊಡ್ಡದಿತ್ತು. ಆ ಅಭಿವೃದ್ಧಿಯಲ್ಲಿ ರೈತರಿಗೆ, ದಲಿತರಿಗೆ, ಶೋಷಿ ತರಿಗೆ ಪಾಲಿತ್ತು. ಹಝಾರೆ ಮೋದಿಯನ್ನು ಶ್ಲಾಘಿಸುವ ಮೂಲಕ ‘ಗಾಂಧಿವಾದ’ವನ್ನು ತಮಾಷೆಯ ವಸ್ತುವಾಗಿಸಿದರು. ಎಲ್ಲಕ್ಕಿಂತ ವಿಷಾದನೀಯ ಸಂಗತಿಯೆಂದರೆ, ‘ಗುಜರಾತ್ ಹತ್ಯಾಕಾಂಡ’ದ ಮೂಲಕ ಗಾಂಧಿಯನ್ನು ಎರಡನೆ ಬಾರಿ ಕೊಂದು ಹಾಕಿದ ನರೇಂದ್ರ ಮೋದಿಗೆ ತನ್ನ ‘ಗಾಂಧಿವಾದ’ದ ಶಾಲನ್ನು ಹೊದಿಸಿದ್ದು. ನಿಜಕ್ಕೂ ಹಝಾರೆಯೆನ್ನುವ ಅಪಕ್ವ ಗಾಂಧಿವಾದಿ ಈ ದೇಶಕ್ಕೆ ಭಾರೀ ಅಪಾಯವನ್ನು ತಂದೊಡ್ಡಲಿದ್ದಾರೆ.

ಅಂತಲೇ ತಾವಿನ್ನು ಸುರಕ್ಷಿತ ಎಂದು ಕಾರ್ಪೊರೇಟ್ ಧಣಿಗಳು ಈ ಚಳವಳಿಗೆ ಬೆಂಬಲ ನೀಡಿದರು. ಹುತ್ತವ ಬಡಿದರೆ ಹಾವು ಸಾಯುವುದಿಲ್ಲ. ಜನಲೋಕಪಾಲ ಮಸೂದೆ ಅಂಗೀಕಾರವಾದರೂ ಈ ಭ್ರಷ್ಟಾಚಾರ ತೊಲಗುವುದಿಲ್ಲ. ಅದರ ಬೇರುಗಳು ನಮ್ಮ ಬಂಡವಾಳಶಾಹಿ ಸಮಾಜ ವ್ಯವಸ್ಥೆಯಲ್ಲಿವೆ. ನಮ್ಮ ದೇಶದಲ್ಲಿ ಸಾರ್ವಜನಿಕ ಸಂಪತ್ತಿನ ಲೂಟಿಗೆ ಅವಕಾಶ ನೀಡಿರುವ ಈ ವ್ಯವಸ್ಥೆ ಈಗ ತನ್ನೆಲ್ಲ ವಿಕಾರಗಳೊಂದಿಗೆ ವಿಜೃಂಭಿಸುತ್ತಿದೆ. ತೊಂಬತ್ತರ ದಶಕದ ಹಿಂದೆ ಸಮ್ಮಿಶ್ರ ಆರ್ಥಿಕತೆಯ ಹೆಸರಿನಲ್ಲಿ ಕೆಲ ಮೂಗುದಾರವಾದರೂ ಇತ್ತು. ಆದರೆ ಉದಾರೀಕರಣ, ಖಾಸಗೀಕರಣದ ಕರಾಳ ಶಕೆ ಆರಂಭವಾದ ನಂತರ ದುಡ್ಡಿದ್ದವನು ಲಂಗು ಲಗಾಮಿಲ್ಲದೆ ಲೂಟಿ ಮಾಡಲು ಮುಕ್ತ ಅವಕಾಶ ದೊರಕಿದೆ.

ಹತ್ತು ವರ್ಷಗಳ ಹಿಂದೆ ಲೂನಾದಲ್ಲಿ ಓಡಾಡುತ್ತಿದ್ದ ಜನಾರ್ದನ ರೆಡ್ಡಿ ಇಂದು ಸಾವಿರಾರು ಕೋಟಿ ರೂಪಾಯಿ ಸಂಪತ್ತಿನ ಒಡೆಯನಾಗಲು ಸಾಧ್ಯವಾಗಿದ್ದು ಈ ಉದಾರೀಕರಣ, ಜಾಗತೀಕರಣ ನೀತಿಯಿಂದ. ಈ ಭ್ರಷ್ಟಾಚಾರ ಎಂಬ ಕಾಯಿಲೆಯ ಮೂಲಕ್ಕೆ ಔಷಧಿ ನೀಡದೆ ಬರೀ ಲಕ್ಷದೊಂದಿಗೆ ಗುದ್ದಾಡಿದರೆ ಪ್ರಯೋಜನವಿಲ್ಲ. ಜನಲೋಕಪಾಲ ಮಸೂದೆ ಬಂದರೂ ಅದು ಬರೀ ಸಂಸದರಿಗೆ ಮಾತ್ರ ಸೀಮಿತವಾಗಿರುತ್ತದೆ. ರಾಜಕಾರಣಿಗಳೊಂದಿಗೆ ಶಾಮೀಲಾಗಿ ಅವರಿಗಿಂತ ಹೆಚ್ಚು ಕಬಳಿಸುವ ಅಧಿಕಾರಿಶಾಹಿಯನ್ನು ಅದರ ವ್ಯಾಪ್ತಿಗೆ ಒಳಪಡಿಸಿದರೆ ಮಾತ್ರ ಅದು ಸಾರ್ಥಕವಾಗುತ್ತದೆ.

ನಮ್ಮ ಬಂಡವಾಳಶಾಹಿ ರಾಜಕಾರಣಿಗಳು ಬರೀ ಸ್ವಿಸ್ ಬ್ಯಾಂಕ್‌ನಲ್ಲಿ ಮಾತ್ರ ಹಣವಿಟ್ಟಿಲ್ಲ. ನಮ್ಮ ದೇಶದ ಅನೇಕ ಮಠ, ಪೀಠಗಳು, ಅಕ್ರಮ ಕಪ್ಪು ಹಣದ ಕೇಂದ್ರಗಳಾಗಿವೆ. ಅವುಗಳನ್ನು ಬಯಲಿಗೆಳೆಯಲು ಬರೀ ಜನಲೋಕಪಾಲ, ಲೋಕಾಯುಕ್ತದಿಂದ ಸಾಧ್ಯವಿಲ್ಲ. ಉದಾರೀಕರಣ, ಖಾಸಗೀಕರಣ ಸೇರಿದಂತೆ ಮನುಷ್ಯನನ್ನು ಆಸೆ ಬುರುಕನನ್ನಾಗಿ, ಲಾಭಕೋರನನ್ನಾಗಿ ಮಾಡಿದ ಬಂಡವಾಳ ಶಾಹಿ ವ್ಯವಸ್ಥೆಯನ್ನು ನಿರ್ನಾಮ ಮಾಡಲು ಈಗ ದಣಿವಿಲ್ಲದ ಹೋರಾಟ 


ನಡೆಯಬೇಕಾಗಿದೆ.

- ಅಣ್ಣು ಕೆ.ಬೆಳ್ತಂಗಡಿ












Source: http://vbnewsonline.com/Writer/50617/

Sunday 10 April 2011

ಅಂಬೇಡ್ಕರ್

ನಾಡನಡುವಿನಿಂದ ಸಿಡಿದ
ನೋವಿನ ಕೂಗೆ
ಆಕಾಶದ ಅಗಲಕ್ಕೂ
ನಿಂತ ಆಲವೆ

ಕೋಟಿ ಕೋಟಿ ಕಪ್ಪು ಜನರ
ಮೊಟ್ಟ ಮೊದಲ ಮಾತೆ
ನೀರಿನಾಚೆ ಮೋಡದಾಚೆ
ಮೊಳಗಿದಂಥ ಘೋಷವೆ

ಬಾಳಿನಲ್ಲೆ ಕಂಡುಕೊಂಡೆ
ಹೋರಾಟದ ದಾರಿಯ
ಕರೆದು ಕರೆದು ತೋರಿಸಿದೆ
ಮಹಾಮನೆಯ ಬಿರುಕನು

ಜಾತಿಯನ್ನು ಹೂತುಬಿಡಲು
ಲಕ್ಷ ಲಕ್ಷ ಜನರನು
ಕಟ್ಟಿ ಕ್ರಿಯಾರಂಗಕಿಳಿದ
ಸ್ವಾಭಿಮಾನ ಸಮುದ್ರ

ಮಹರಾಷ್ಟ್ರದ ಮಣ್ಣಿನಲ್ಲಿ
ಮೂಡಿಬಂದ ಗುಡುಗುಸಿಡಿಲೆ
ಮಳೆಯನೇಕೆ ತಾರಲಿಲ್ಲ
ಮಿಂಚು ಮಾಯೆ ಅಷ್ಟೆಯ?

-
ಕವಿ - ಡಾ. ಸಿದ್ಧಲಿಂಗಯ್ಯ

'Cleansing ritual' after Dalit officer retires

Thiruvanthapuram: Kerala is a state that is known for its high literacy rate and social awareness and so when a senior Dalit government officer found cow-dung sprinkled over his furniture and even inside his car, reportedly as a part of 'cleansing ritual' on retirement, it was shocking for many.

55-year-old A V Ramakrishnan has petitioned the Kerala Human Rights Commission.

In his complaint, he said the 'cleansing' was done as he was a Dalit and demanded strict action against the perpetrators.

The officer said a section of the employees were behind the incident as they bore a grudge against him for his uncompromising stand.
"This is not only an offence against an individual like me but also the community which I belong, I will not leave things half way, I will pursue it to the end," Ramakrishnan said.

The human rights commission has now asked the Secretary of Taxes to submit a detailed report on the incident by May 7.

‘ಹೊಲೆಯ’ರು ಯಾರು?


ಮಂಗಳವಾರ - ಡಿಸೆಂಬರ್-14-2010

ಭಾರತದ ಇತಿಹಾಸದ ಪುಟಗಳನ್ನು ತೆರೆಯು ತ್ತಾ ಹೋದಂತೆ ಅಲ್ಲಿ ಪ್ರಧಾನವಾಗಿ ಕಾಣು ವುದು ಮೂರೇ ಮೂರು ಜನಾಂಗ. 1.ಬ್ರಾಹ್ಮಣರು 2.ಮುಸಲ್ಮಾನರು 3.ಬ್ರಿಟಿಷರು. ಮುಸಲ್ಮಾನರು ಮತ್ತು ಬ್ರಿಟಿಷರು ಕೇವಲ ಧಾಳಿಕೋರರಾಗಿ ಚಿತ್ರಿಸಲ್ಪಟ್ಟಿದ್ದರೆ ಬ್ರಾಹ್ಮಣರು ಎಲ್ಲ ರಾಜರ, ರಾಜವಂಶಗಳ ಮಾರ್ಗದರ್ಶಕರಾಗಿ, ಕೆಲವೊಮ್ಮೆ ಅವರೇ ರಾಜರುಗಳಾಗಿ ಒಟ್ಟಾರೆ ಇಡೀ ಭಾರತದ ವಾರಸುದಾರರಾಗಿ ಚಿತ್ರಿಸಲ್ಪಟ್ಟಿದ್ದಾರೆ.
ಹಾಗಿದ್ದರೆ ಇಷ್ಟೊಂದು ಬೃಹತ್ ಭಾರತ ಮತ್ತದರ ಸುಮಾರು ಐದು ಸಾವಿರ ವರ್ಷಗಳ ಇತಿಹಾಸ ಕೇವಲ 3% ಜನರಿಗೆ ಮಾತ್ರ ಸೀಮಿತವಾದುದೇ? ಮತ್ತು ಇನ್ನುಳಿದ 97% ಜನರಿಗೆ ಈ ಭಾರತ ಮತ್ತದರ ಇತಿಹಾಸ ದಲ್ಲಿ ಯಾವುದೇ ಸ್ಥಾನವಿರಲಿಲ್ಲವೇ? ಖಂಡಿತ ಸುಳ್ಳು. ಬರೆದವರು ‘‘ಅವರು’’ ಮಾತ್ರ ಆದ್ದರಿಂದ ಈ ದೇಶದ ಇತಿಹಾಸವನ್ನು ಅವರಿಗೆ ಒಪ್ಪಿಗೆ ಯಾಗುವ ಹಾಗೆ, ಅವರ ಮೂಗಿನ ನೇರಕ್ಕೆ, ಆ ಮೂಗಿನ ಮೇಲೆ ಇರುವ ನಾಮದ ನೇರಕ್ಕೆ ಬರೆದುಕೊಂಡಿದ್ದಾರೆ ಅಷ್ಟೆ.
ದುರಂತವೆಂದರೆ ಅಂತಹ ಏಕಪಕ್ಷೀಯ ವಿಶ್ಲೇಷಣೆಯ, ಧಗಾಕೋರ ಕಥೆ ಯನ್ನು ಶೂದ್ರ ಮತ್ತು ಅಸ್ಪಶ್ಯ ಸಮುದಾಯಗ ಳಾದ ನಾವು ನಮ್ಮ ಇತಿಹಾಸವೆಂದು ಓದುತ್ತಿ ದ್ದೇವೆ. ಹಾಗಿದ್ದರೆ ‘‘ನಮ್ಮದಲ್ಲದ’’ ಆ ನಮ್ಮ ಇತಿ ಹಾಸದಿಂದ ನಮಗೇನು ಧಕ್ಕುತ್ತದೆ? ಇನ್ನೇನು ಧಕ್ಕುತ್ತದೆ? ನಮ್ಮ ಆ ಅಸ್ಪಶ್ಯ ಸಮುದಾಯವನ್ನು ನಾವೆ ‘ಹೊಲಸು’ ‘ಕಸ’ ಎಂದು ಕೊಳ್ಳಬೇಕು. ಅಥವಾ ಹಾಗೆ ಹೇಳಿಕೊಳ್ಳಲಾಗದೆ ನಮ್ಮ ಜಾತಿಯನ್ನು ನಾವೇ ಮರೆಮಾಚುತ್ತಾ ಸದಾ ಕೀಳರಿಮೆಯಿಂದ ನರಳಬೇಕು.
ಒಟ್ಟಿನಲ್ಲಿ ನಮ್ಮ ಸ್ವಾಭಿಮಾನವನ್ನು ಬದಿಗೊತ್ತಿ ಸದಾ ಇನ್ನೊಬ್ಬರ ಜೀತ ಗಾರರಾಗಲು ನಾವು ಸಿದ್ಧರಿರಬೇಕು. ಇದೇ ಈ ದೇಶದ ಬ್ರಾಹ್ಮಣರಚಿತ ಇತಿಹಾಸ ಈ ದೇಶದ ಅಸ್ಪಶ್ಯರಿಗೆ ನೀಡಿರುವ ಮಹಾನ್ ಕೊಡುಗೆ! ಇರಲಿ, ಇದನ್ನೆಲ್ಲಾ ಯಾಕೆ ಹೇಳಬೇಕಾಯಿ ತೆಂದರೆ ಕಳೆದ ನವೆಂಬರ್ 4ರಂದು ಪತ್ರಿಕೆ ಯೊಂದರಲ್ಲಿ ಆ ಪತ್ರಿಕೆಯ ಸಂಪಾದಕರು ತಮ್ಮ ‘‘ನೂರೆಂಟು ಮಾತು’’ ಎಂಬ ಅಂಕಣ ಬರಹದಲ್ಲಿ ಪ್ರಸ್ತುತ ರಾಜಕೀಯ ಸ್ಥಿತಿಗತಿಯ ಬಗ್ಗೆ ಬರೆಯುತ್ತಾ ‘‘ಆದುನಿಕ ಭಾರತವನ್ನು ನಮ್ಮ ನಾಯಕರು ಹೊಲಗೇರಿ ಮಾಡಿದ್ದಾರೆ’’ ಎಂದು ಬರೆದಿದ್ದಾರೆ!
ಅರೆ, 6ಕೋಟಿ ಜನಸಂಖ್ಯೆ ಇರುವ ರಾಜ್ಯದ ಜನರಲ್ಲಿ ದಲಿತರೇ ಸುಮಾರು 1ಕೋಟಿಗೂ ಮಿಕ್ಕಿ ಇದ್ದಾರೆ. ಅದರಲ್ಲಿ ‘ಹೊಲೆಯ’ರೆಂಬ ಆ ಬೃಹತ್ ಜನ ಸಮುದಾ ಯ ಸುಮಾರು 60 ರಿಂದ 70ಲಕ್ಷದಷ್ಟಿದೆ. ಇಂತಹ ಬೃಹತ್ ಜನಸಮುದಾಯವನ್ನು ತಾನು ಅವಮಾನಿಸುತ್ತಿದ್ದೇನೆಂದು ಆ ಸಂಪಾದಕರಿಗೆ ಅನಿಸಲಿಲ್ಲವೇ? ಅದ್ಹೇಗೆ ಅನಿಸುತ್ತದೆ? ಅವರ ಪ್ರಕಾರ ‘ಹೊಲಗೇರಿ’ ಎಂದರೆ ಕಸ ಎಂದರ್ಥ! ಏಕೆಂದರೆ ಸಂಪಾದಕರ ಈ ಕೃತ್ಯದ ವಿರುದ್ಧ ಬಹುಜನ ಸಮಾಜ ಪಕ್ಷದ ಮುಖಂಡರು ಮೈಸೂರಿನ ಕೆ.ಆರ್.ಪೋಲಿಸ್ ಠಾಣೆಯಲ್ಲಿ ನವೆಂಬರ್ 11ರಂದು ಜಾತಿ ನಿಂದನೆ ದೂರು ದಾಖಲಿಸಿದಾಗ ಆ ಠಾಣೆಯ ಇನ್ಸ್ ಪೆಕ್ಟರ್ ಶ್ರೀನಿವಾಸ್ ಎಂಬವರು ದಿನಾಂಕ 29-11-2010 ರಂದು ನೀಡಿದ ಹಿಂಬರಹದ ವಿವರಣೆ ಏನು ಗೊತ್ತೆ? ಹೊಲಗೇರಿ ಎಂಬ ಪದವನ್ನು ಕಸಕ್ಕೆ ಸಮನಾಗಿ ಉಪಯೋಗಿಸಿ ಬರೆಯಲಾಗಿದೆ. ಅದರಲ್ಲಿ ತಪ್ಪೇನಿಲ್ಲ ಎಂದು!
ಹೇಗಿದೆ ನೋಡಿ ಇವರ ವರಸೆ! ಹೊಲಗೇರಿ ಎಂದರೆ ಕಸವಂತೆ! ಇನ್ನೊಂದಿಷ್ಟು ದಿನ ಹೀಗೆ ಮುಂದುವರಿದರೆ ಹೊಲಗೇರಿಯನ್ನು ಬರಿ ಕಸ ಎಂದಲ್ಲ ಕಾಲಕಸ ಎಂದು ಹಿಂಬರಹ ನೀಡ ಲೂ ಇವರು ಹಿಂಜರಿಯುವುದಿಲ್ಲ! ಹೊಲಗೇರಿ ಯೇನೊ ಕಸ ಸರಿ. ಹಾಗಿದ್ದರೆ ಬ್ರಾಹ್ಮಣಕೇರಿ, ಒಕ್ಕಲಗೇರಿ ಇತ್ಯಾದಿ ಕೇರಿಗಳೆಲ್ಲಾ ಏನು? ವೇಶ್ಯಾಗೃಹಗಳೇ? ಇದನ್ನು ಓದಿದರೆ ಕೆಲವರಿಗೆ ಆಘಾತವಾಗಬಹುದು. ಪ್ರಶ್ನೆಯೇನೆಂದರೆ ಅಂತಹದ್ದೆ ಆಘಾತ ‘ಹೊಲೆಯ’ ಸಮುದಾ ಯಕ್ಕೆ ಆಗುತ್ತದೆ ಎಂಬ ಸಣ್ಣ ಪರಿಜ್ಞಾನ ‘ಹೊಲಗೇರಿ’ ಎಂದು ಬರೆದ ಆ ಸಂಪಾದಕರಿಗೆ ಇರುವುದು ಬೇಡವೇ? ಅಥವಾ ಅವರ ಪ್ರಕಾರ ಶೋಷಿತರೇನು ಬಿಟ್ಟಿಗೆ ಬಿದ್ದಿದ್ದಾದರೆಯೇ? ಏನು ಹೇಳಿದರೂ ನಡೆಯುತ್ತದೆ ಎನ್ನಲಿಕ್ಕೆ?
ಅಂದಹಾಗೆ ಶೋಷಿತ ಸಮುದಾಯಗಳನ್ನು ಹೀಗೆ ಕೀಳಾಗಿ ಚಿತ್ರಿಸುವ ಇಂತಹ ಚಾಳಿ ಇದಿಷ್ಟಕ್ಕೆ ಸೀಮಿತವಾಗುವುದಿಲ್ಲ. ಸಿನಿಮಾ, ನಾಟಕ, ಸಾಹಿತ್ಯ ಇಲ್ಲೆಲ್ಲಾ ಆಗಾಗ ನಡೆಯುತ್ತಲೇ ಇರುತ್ತದೆ. ಉದಾಹರಣೆಗೆ ಕೆಲದಿನಗಳ ಹಿಂದೆ ‘ಈ ಟೀವಿ’ಯಲ್ಲಿ ಪ್ರಸಾರವಾಗುವ ‘‘ಮನೆ ಯೊಂದು ಮೂರು ಬಾಗಿಲು’’ ಎಂಬ ಧಾರಾವಾಹಿಯಲ್ಲಿ ಆ ಧಾರವಾಹಿಯ ಮುಖ್ಯ ಪಾತ್ರ ಧಾರಿಯೊಬ್ಬರು ಆ ಧಾರಾವಾಹಿಯಲ್ಲಿ ಬರುವ ಖಳ ಪಾತ್ರಧಾರಿಯೊಬ್ಬರ ಬಗ್ಗೆ ಮಾತನಾಡುತ್ತಾ ಕುಟುಂಬದಲ್ಲಿ ಹೀಗೆಯೇ ಒಂದಿಬ್ಬರು ಸೇರಿಕೊಂಡು ಇಡೀ ಕುಟುಂಬವನ್ನು ಹೊಲಗೇರಿ ಮಾಡುತ್ತಾರೆ ಎಂದರು!
ಮತ್ತೊಂದು ಉದಾಹರಣೆ ಹೇಳುವುದಾದರೆ ದಿವಂಗತ ರಾಷ್ಟ್ರ ಕವಿ ಗೋವಿಂದ ಪೈಯವರು ತಮ್ಮ ‘‘ಹೊಲೆಯರು ಯಾರು?’’ ಎಂಬ ಕವನ ದಲ್ಲಿ ‘‘ಇಬ್ಬರಾಡುವ ಮಾತು ಕದ್ದು ಕೇಳುವವ ಹೊಲೆಯ, ಹೊಲಸು ತಿಂಬವ ಹೊಲೆಯ....’’ ಹೀಗೆ ಹೊಲೆಯರು ಯಾರು ಎಂಬುದನ್ನು ವರ್ಣಿಸುತ್ತಾ, ಪರೋಕ್ಷವಾಗಿ ಹೊಲೆಯರೇ ಹೀಗೆ ಮಾಡುವವರು ಎಂದು ಬರೆದಿದ್ದರು! ದುರಂತವೆಂದರೆ ಈ ಪದ್ಯವನ್ನು ಪಠ್ಯ ಪುಸ್ತಕದಲ್ಲಿ ಪಠ್ಯವಾಗಿಯೂ ಕೂಡ ಅಳವಡಿಸಲಾಗಿತ್ತು!
ಸಾಹಿತ್ಯದಲ್ಲಿ ‘ಹೊಲೆಯ’ರನ್ನು ಕೀಳಾಗಿ ಕಾಣುವ ಪರಿಪಾಠ ಇಲ್ಲಿಗೇ ನಿಲ್ಲುವುದಿಲ್ಲ. ಈ ಕೆಳಗಿನ ಪುರಂದರದಾಸರ ಕೀರ್ತನೆ ನೋಡಿ. ದಾಸ ಸಾಹಿತ್ಯದಲ್ಲಿಯೂ ಕೂಡ ಅಂತಹ ಚಾಳಿ ಹೇಗೆ ಬೆಳೆದುಬಂದಿತ್ತೆಂಬುದಕ್ಕೆ.
ಹೊಲೆಯ ಬಂದಾನೆಂದು ಒಳಗೆ ದೇವರ ಮಾಡಿ ಘಣಘಣ ಘಂಟೆ ಬಾರಿಸುತ
ತನುವಿನ ಕೋಪ ಹೊಲೆಯಲ್ಲವೇನಯ್ಯ
ಮನಸಿನ ವಂಚನೆ ಹೊಲೆಯಲ್ಲವೇನಯ್ಯ
ಇಂಥಾ ಹೊರಗಿದ್ದ ಹೊಲೆಯನ್ನೆ ಒಳಗೆ ತುಂಬಿಟ್ಟುಕೊಂಡು
ಇದಕ್ಕೇನು ಮದ್ದು ಶ್ರೀ ಪುರಂದರವಿಠಲ
ಹೀಗೆ ಸಾಗುತ್ತದೆ ಕನ್ನಡ ಸಾಹಿತ್ಯದಲ್ಲಿ ‘ಹೊಲೆಯ’ ಎಂಬ ಪದವನ್ನು ಬೇಕಾಬಿಟ್ಟಿ ಯಾಗಿ ಬಳಸುವ ಚಾಳಿ.

ವಾಸ್ತವವಾಗಿ ಹೇಳುವುದಾದರೆ ‘ಹೊಲ ಗೇರಿ’ ಎಂದರೆ ‘ಹೊಲೆಯ’ರು ವಾಸಿಸುವ ಕೇರಿ ಅಥವಾ ಬೀದಿ ಎಂದರ್ಥ. ಹೀಗಿರುವಾಗ ಅದು ಕಸ ಹೇಗಾಗುತ್ತದೆ? ಅದನ್ನು ಕಸ ಎನ್ನುವುದಾದರೆ ಹೊಲಗೇರಿ ಎಂಬ ಆ ಇಡೀ ಬೀದಿ ಅಥವಾ ಕೇರಿಯೇ ಕಸಕ್ಕೆ ಸಮ ಎಂದು ಅರ್ಥ! ಒಂದು ಸಮುದಾಯವನ್ನು ಜೀತಗಾರಿಕೆಗೆ ತಳ್ಳಲು, ನಿರಂತರ ಮಾನಸಿಕ ಗುಲಾಮಗಿರಿಗೆ ನೂಕಲು ಇದಿಷ್ಟು ಮಾತ್ರ ಸಾಕು.
ಸಿಂಪಲ್, ಆ ಸಮುದಾಯದ ಹೆಸರಿನ ಅರ್ಥವನ್ನು ಕೀಳು ಎಂದು ಬಿಂಬಿಸುವುದು. ಹೊಲಸು ಎಂದು ತುಚ್ಛೀಕರಿಸುವುದು! ತನ್ಮೂ ಲಕ ಅವರಲ್ಲಿ ತಮ್ಮ ಸಮುದಾಯದ ಬಗ್ಗೆಯೇ ಕೀಳರಿಮೆ ಹುಟ್ಟುವಂತೆ ಮಾಡುವುದು! ಇನ್ನು ಆ ಸಮುದಾಯ ಇತಿಹಾಸದಲ್ಲಿ ತಲೆ ಎತ್ತಿ ಹೇಗೆ ಬಾಳಲು ಸಾಧ್ಯ? ಬ್ರಾಹ್ಮಣವಾದದ ಇಂತಹ ಕ್ರೂರ ಹುನ್ನಾರ ನಿಜಕ್ಕೂ ದಿಗ್ಭ್ರಮೆ ಗೊಳಿಸುವಂತಹದ್ದು!
ಹಾಗಿದ್ದರೆ ಬ್ರಾಹ್ಮಣರಿಂದ ಕಸ, ಹೊಲಸು ಎಂದು ಕರೆಸಿಕೊಳ್ಳುವ ಹೊಲಗೇರಿ ಮತ್ತು ಅಲ್ಲಿ ವಾಸಿಸುವ ‘ಹೊಲೆಯ’ ಸಮುದಾಯದ ಇತಿ ಹಾಸ ಅಷ್ಟೊಂದು ಹೀನವಾದುದೇ? ಖಂಡಿತ ಇಲ್ಲ. ಹೀನದ ಪ್ರಶ್ನೆ ಒತ್ತಟ್ಟಿಗಿರಲಿ, ವಾಸ್ತವ ವೆಂದರೆ ‘ಹೊಲೆಯ’ರು ಈ ದೇಶದ ಮೂಲ ನಿವಾಸಿಗಳಾಗಿದ್ದವರು.
‘ಹೊಲೆಯ’ ಎಂದರೆ ‘‘ಹೊಲದ ಒಡೆಯ’’ ಎಂದರ್ಥವೇ ಹೊರತು ಹೊಲಸು ತಿಂದವ ಎಂದಲ್ಲ! ಏಕೆಂದರೆ ‘ಹೊಲೆಯ’ ಎಂಬ ಪದದ ಮೂಲ ‘ಹೊಲ’ವೇ ಹೊರತು ಹೊಲಸು ಎಂದಲ್ಲ. ಇದಕ್ಕೆ ಸಾಕ್ಷಿ ಯಾಗಿ ಕರ್ನಾಟಕ ಗೆಜೆಟಿಯರ್  (vol 3, Castes and tribes in mysore) ನಲ್ಲಿ Holeya means owner of land ಎಂದಿದೆ. ಅಲ್ಲದೆ 1901 ರ ಜನಗಣತಿ ವರದಿ ಹೀಗೆ ಹೇಳುತ್ತದೆ, HOLA is the canarese name for a dry crop field and HOLEYA means man of such field! ಹೀಗಿರುವಾಗ ‘ಹೊಲೆಯ’ ಎಂದರೆ ಹೊಲಸು ಹೇಗಾಗುತ್ತದೆ?
ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್‌ರ ಪ್ರಕಾರ ಮಾದಿಗ, ಹೊಲೆಯ, ಸಮಗಾರ, ಚಮ್ಮಾರ, ಛಲವಾದಿ, ಮಹಾರ್, ಮಾಲ, ಪರಯ್ಯಾ ಇತ್ಯಾದಿ ಅಸ್ಪಶ್ಯ ಸಮುದಾಯಗಳು ಪುರಾತನ ನಾಗವಂಶಕ್ಕೆ ಸೇರಿದವರು. ಸುಪ್ರಸಿದ್ಧ ಸಿಂಧೂ ನದಿಯ ನಾಗರಿಕತೆಯನ್ನು ಕಟ್ಟಿದವರು ಇದೇ ನಾಗ ಜನರು. ನಾಗ ಜನರು ವಾಸಿಸುತ್ತಿದ್ದ ಸ್ಥಳಗಳನ್ನು ‘‘ನಗರ’’ಗಳೆಂದು ಕರೆಯಲಾಗುತ್ತಿತ್ತು.
‘‘ನಾಗಜನರ’’ ಸುಂದರ ಜೀವನ ಶೈಲಿಯೇ ‘‘ನಾಗರಿಕತೆ’’ ಎನಿಸಿಕೊಂಡಿತ್ತು ಮತ್ತು ನಗರ ವಾಸಿ ನಾಗ ಜನರನ್ನು ‘‘ನಾಗರಿಕ’’ ಎನ್ನಲಾಗುತ್ತಿತ್ತು. ವಸ್ತುಸ್ಥಿತಿ ಹೀಗಿರುವಾಗ, ಅಂದರೆ ನಾಗರಿಕತೆಯ ಮೂಲವಾರಸುದಾರ ರಾದ ನಾಗಜನರು ಆಧುನಿಕ ‘ಹೊಲೆಯ’ರಾಗಿ ರುವಾಗ ಅವರು ‘‘ಕಸ’’ ಅಥವಾ ‘‘ಹೊಲಸು’’ ಹೇಗಾಗುತ್ತಾರೆ?
ಹಾಗಿದ್ದರೆ ಬ್ರಾಹ್ಮಣರು ನಾಗವಂಶಸ್ಥರಾದ ‘ಹೊಲೆಯ’ರನ್ನು ಹಾಗೆ ಕೀಳಾಗಿ ಕಾಣಲು ಕಾರಣವಾದರೂ ಏನು?   ಖ್ಯಾತ ಅಂಬೇಡ್ಕರ್ ವಾದಿ ಎಂ. ಗೋಪಿನಾಥ್‌ರವರು ತಮ್ಮ ‘‘ನಾಗ ಲೋಕ’’ ಕೃತಿಯಲ್ಲಿ ಇದಕ್ಕೆ ಹೀಗೆ ವಿವರಣೆ ನೀಡುತ್ತಾರೆ. ಅದೇನೆಂದರೆ ಕ್ರಿ,ಪೂ.2000ನೆ ವರ್ಷದ ಸುಮಾರಿನಲ್ಲಿ ಬಿಳಿ ತೊನ್ನಿನಂತೆ ತೊಗಲು ಹೊಂದಿದ್ದ ಆರ್ಯರು ಎಂಬ ಅಲೆ ಮಾರಿ ತಂಡವೊಂದು ನಾಗಮಂಡಲ (ಭಾರತ) ಕ್ಕೆ ದನಕಾಯುತ್ತಾ ಅನ್ನ, ನೀರು ಹುಡುಕಿಕೊಂಡು ಬಂದಿತು.
ಆ ಆರ್ಯರೇ ಬ್ರಾಹ್ಮಣ, ಬನಿಯಾಗಳ ಪೂರ್ವಿಕರು. ನಾಗ ಜನಾಂಗದ ಅಸುರ, ರಾಕ್ಷಸ, ದಾನವ ರಾಜರುಗಳು ಮಹಾ ಕರುಣಾಮಯಿಗಳಾಗಿದ್ದರು. ಅವರು ಆ ಪರದೇಶಿ ಆರ್ಯರಿಗೆ ಅನ್ನ ನೀರು ನೀಡಿದ್ದಲ್ಲದೆ ತಮ್ಮ ರಾಜ್ಯಗಳಲ್ಲಿ ತಂಗುವುದಕ್ಕೂ ಅವಕಾಶ ಮಾಡಿಕೊಟ್ಟರು. ಭೂಮಿಯ ಒಡೆಯರಾದ ನಾಗ ಜನಾಂಗದವರು ಸ್ವತಂತ್ರವಾಗಿ ಬದುಕಲು ಆರ್ಯರಿಗೆ ಭೂಮಿ ನೀಡಿದ್ದಲ್ಲದೆ, ಹಿಂದು ಮುಂದು ಯೋಚಿಸದೆ ಅಪರಿಚಿತ ಆರ್ಯರಿಗೆ ದಯೆ ತೋರಿಸಿದರು!
ಹೀಗೆ ನಾಗ ಜನಾಂಗದವರಿಂದ ಭೂಮಿ ಮತ್ತು ಬದುಕುವ ಹಕ್ಕು ಪಡೆದ ಆರ್ಯರು ನಾಗ ಜನಾಂಗದ ರಾಜರುಗಳ ನಡುವೆ ಹುಳಿಹಿಂಡಿ, ಅವರು ಪರಸ್ಪರ ಕಚ್ಚಾಡುವಂತೆ ಮಾಡಿದ್ದು, ಅಂತಹ ಕಚ್ಚಾಡುವಿಕೆಯ ಲಾಭ ಪಡೆದು ಇಡಿ ನಾಗಮಂಡಲವನ್ನು ಆಕ್ರಮಿ ಸಿದ್ದು ಮತ್ತು ನಾಗಜನಾಂಗದ ಹಲವಾರು ಕುಲಗಳನ್ನು ಸಣ್ಣ ಪುಟ್ಟ ಜಾತಿಗಳಾಗಿ ವಿಂಗಡಿಸಿ ಜಾತಿ ಎಂಬ ವಿಷದ ಬೀಜವ ಬಿತ್ತಿದ್ದು ಈಗ ಇತಿಹಾಸ.
ಅಂದಹಾಗೆ ನಾಗವಂಶದ ರಾಜರುಗಳನ್ನು ಅಸುರ ಎಂದರೆ ಸುರೆಯನ್ನು ಕುಡಿಯದವ, ರಾಕ್ಷಸ ಎಂದರೆ ರಕ್ಷಿಸುವವ, ದಾನವ ಎಂದರೆ ದಾನ ನೀಡುವವ ಎನ್ನಲಾಗುತ್ತಿತ್ತು. ಆದರೆ ಆರ್ಯರು ಆ ಪದಗಳಿಗೆ ಕೆಟ್ಟ ಕಥೆಗಳನ್ನು ಕಟ್ಟಿ ಅವರನ್ನು ಕ್ರೂರಿಗಳು ಎಂದು ಪ್ರಚಾರ ಮಾಡಿ ದರು ಮತ್ತು ಅವರನ್ನು ಮೋಸದಿಂದ ಕೊಂದ ತಮ್ಮನ್ನು ದೇವತೆಗಳು ಎಂದು ಕರೆದುಕೊಂಡರು! ಶಾಂತಿ ಸೌಹಾರ್ದತೆಯ ನಾಡಾಗಿದ್ದ ನಾಗ ಮಂಡಲದಲ್ಲಿ ಪ್ರಾಣಿಬಲಿ ಯಜ್ಞ ಯಾಗಾದಿ ಗಳು ಪ್ರಾರಂಭವಾದವು. ದನ ಕಾಯುತ್ತಾ ಬಂದ ಆರ್ಯರು ದನದ ಮಾಂಸ ತಿನ್ನುತ್ತಿದ್ದದ್ದು ಈ ಸಂದರ್ಭದಲ್ಲೇ! ಅನೈತಿಕತೆ, ಅರಾಜಕತೆ ಈ ಸಂದರ್ಭದಲ್ಲಿ ತಾಂಡವವಾಡುತ್ತಿತ್ತು.
ಇಷ್ಟೆಲ್ಲಾ ಆದರೂ ನಾಗಜನಾಂಗದಲ್ಲಿ ಇನ್ನೂ ಆ ಸಾತ್ವಿ ಕತೆ, ಹೋರಾಟದ ಕೆಚ್ಚು ಮಾಯವಾಗಿರಲಿಲ್ಲ. ಈ ಸಂಧರ್ಭಲ್ಲಿಯೇ ಕ್ರಿ.ಪೂ. 584 ರಲ್ಲಿ ನಾಗಜನಾಂಗದ ಶಾಕ್ಯ ಕುಲದಲ್ಲಿ ಭಗವಾನ್ ಗೌತಮಬುದ್ಧ ಜನಿಸಿದ್ದು. ಬುದ್ಧನ ನಂತರ ಆರ್ಯರ ಪ್ರಭಾವ ತುಸು ಕಡಿಮೆಯಾಯಿತು. ನಾಗ ಜನಾಂಗದ ಪಾರುಪತ್ಯ ಮತ್ತೆ ಹೆಚ್ಚಿತು. ಮುಂದೆ ಸಿಸುನಾಗ ವಂಶಕ್ಕೆ ಸೇರಿದ ಚಂದ್ರ ಗುಪ್ತ ಮೌರ್ಯನು ಮೌರ್ಯ ಸಂತತಿ ಸ್ಥಾಪಿಸಿ ದ್ದು, ಆ ಸಂತತಿಯ ಶ್ರೇಷ್ಠ ಚಕ್ರವರ್ತಿ ಸಾಮ್ರಾ ಟ ಅಶೋಕನು ಬೌದ್ಧ ಧರ್ಮವನ್ನು ಜಗತ್ತಿನಾದ್ಯಂತ ಹರಡಿದ್ದು ನಾಗಜನರ ಪಾಬಲ್ಯಕ್ಕೆ ಪ್ರಬಲ ಉದಾಹರಣೆ.
ಆದರೆ ಕ್ರಿ.ಪೂ. 185ರಲ್ಲಿ ಮೌರ್ಯ ವಂಶದ ಕೊನೆಯ ದೊರೆ ಬೃಹದ್ರಥ ಮೌರ್ಯನನ್ನು ಶುಂಗ ಬ್ರಾಹ್ಮಣನಾದ ಪುಷ್ಯಮಿತ್ರ ಶುಂಗನು ಸಂಚು ಮಾಡಿ ಕೊಂದು ಆ ಮೂಲಕ ಬ್ರಾಹ್ಮಣರ ಆಳ್ವಿಕೆಗೆ ಅಡಿಗಲ್ಲಿಟ್ಟದ್ದು ಭಾರತದ ಇತಿಹಾಸದ ಬಹುದೊಡ್ಡ ದುರಂತ. ವಿಶೇಷವಾಗಿ ಅಸ್ಪಶರ ದೃಷ್ಟಿಯಲ್ಲಿ. ಏಕೆಂದರೆ ಸಾವಿರಾರು ಬೌದ್ಧ ಭಿಕ್ಷುಗಳ ತಲೆ ಕಡಿಸಿ, ಸುಮತಿ ಭಾರ್ಗವನೆಂಬ ಬ್ರಾಹ್ಮಣನಿಂದ ಕುಖ್ಯಾತ ‘‘ಮನುಸ್ಮತಿ’’ ಬರೆಸಿದ್ದು ಈ ಕಾಲದಲ್ಲೇ ಅದಕ್ಕೆ.
ಮುಂದೆ ಕ್ರಿ.ಶ.4ನೆ ಶತಮಾನದಲ್ಲಿ ಸಮುದ್ರಗುಪ್ತನ ಕಾಲದಲ್ಲಿ ಬೌದ್ಧ ಧರ್ಮ ಮತ್ತು ಬೌದ್ಧ ಭಿಕ್ಕುಗಳ ಮೇಲೆ ಇನ್ನಿಲ್ಲದ ದಬ್ಬಾಳಿಕೆ ನಡೆಸಿ, ಆ ಧರ್ಮದ ಅನುಯಾಯಿ ಗಳಾದ ನಾಗಜನಾಂಗದವರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿ ಅಸ್ಪಶರನ್ನಾಗಿ ಮಾಡಲಾಯಿತು. ತನ್ಮೂಲಕ ನಾಗ ಜನಾಂಗವೆಂಬ ಮೂಲ ಬೌದ್ಧರನ್ನು ಇತಿಹಾಸದ ಮೂಲೆಗೆ ತಳ್ಳಲಾಯಿತು.
ಒಂದಂತು ನಿಜ, ಒಂದು ಕಾಲದಲ್ಲಿ ರಾಜರಾಗಿ, ಬೌದ್ಧ ಧರ್ಮವೆಂಬ ಪ್ರಬಲ ಧರ್ಮದ ಸ್ಥಾಪನೆಗೆ ಕಾರಣರಾಗಿ ಹಾಲಿ ಅಸ್ಪಶರಾಗಿರುವ ಹೊಲೆಯರ ಇತಿಹಾಸ ಇಷ್ಟೊಂದು ಭವ್ಯವಾಗಿರಬೇಕಾದರೆ ಅವರು ‘‘ಕಸ’’ ಅಥವಾ ‘‘ಹೊಲಸು’’ ಹೇಗಾಗುತ್ತಾರೆ? ಅಂದಹಾಗೆ ಅಸ್ಪಶರ ಈ ಭವ್ಯ ಇತಿಹಾಸವನ್ನು ಹೆಕ್ಕಿ ತೆಗೆದದ್ದು ನಾಗ ಜನಾಂಗದ ಆಧುನಿಕ ಯುಗದ ಪ್ರತಿನಿಧಿಯಾದ ಬಾಬಾಸಾಹೇಬ್ ಅಂಬೇಡ್ಕರ್. ತಮ್ಮ ‘‘ಅಸ್ಪಶ್ಯರು ಯಾರು?’’ ಎಂಬ ಕೃತಿಯಲ್ಲಿ ಅಂಬೇಡ್ಕರ್ ‘‘ಅನಾರ್ಯರಾದ ನಾಗರಿಗೂ, ಅರ್ಯರಿಗೂ ಭೀಕರ ಶತ್ರುತ್ವವಿತ್ತು. ನಾವು(ಅಸ್ಪಶರು) ಅನಾರ್ಯರಾದ ನಾಗವಂಶದ ಪೀಳಿಗೆಯವರಾಗಿದ್ದೇವೆ. ಇದೇ ನಾಗ ಜನರೇ ಜಗತ್ತಿನಾದ್ಯಂತ ಬೌದ್ಧ ಧರ್ಮವನ್ನು ಹರಡಿದವರು’’ ಎನ್ನುತ್ತಾರೆ.
ಅಸ್ಪಶ ಜಾತಿಗಳನ್ನು ಭಾರತ ದಾದ್ಯಂತ ‘ಆದಿಕರ್ನಾಟಕ’, ‘ಆದಿಆಂಧ್ರ’, ‘ಆದಿಕೇರಳ’ ಎನ್ನುತ್ತಾರೆ. ಇದರ ಅರ್ಥವಾದರೂ ಏನು? ಆ ಜನರು ಅಲ್ಲಿಯ ಮೂಲನಿವಾಸಿಗಳೆಂದೇ ಹೊರತು ಬೇರೇನಲ್ಲ! ಕಡೆಯದಾಗಿ ಬಾಬಾಸಾಹೇಬ್ ಅಂಬೇಡ್ಕರ್ ಒಂದೆಡೆ ಹೀಗೆ ಹೇಳುತ್ತಾರೆ. "I am proud of my caste mahar, in which I was born'' . ಅಂದರೆ ‘‘ನಾನು ಜನಿಸಿದ ಮಹಾರ್ ಜಾತಿಯ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ’’ ಈ ನಿಟ್ಟಿನಲ್ಲಿ ಬಾಬಾಸಾಹೇಬರ ಅನು ಯಾಯಿಗಳಾದ ನಾವು (‘ಹೊಲೆಯ’ರು) ಕೂಡ ‘‘ನಾವು ಜನಿಸಿದ ‘ಹೊಲೆಯ’ ಜಾತಿಯ ಬಗ್ಗೆ, ನಾವು ಹೆಮ್ಮೆ ಪಡುತ್ತೇವೆ’’ ಎಂದು ಘಂಟಾಘೋಷವಾಗಿ ಹೇಳುತ್ತೇವೆ.
ಏಕೆಂದರೆ ಬಾಬಾಸಾಹೇಬರ ಅಂತಹ ಆತ್ಮವಿಶ್ವಾಸ ತುಂಬಿದ ಮಾತುಗಳ ಅನುಕರಣೆಯಷ್ಟೆ ಅಸ್ಪಶರಾದ ನಮಗೆ ನವ ಚೈತನ್ಯ ತುಂಬಲು ಸಾಧ್ಯ. ‘ಹೊಲಸು’ ‘ಕಸ’ ಎಂಬ ಗೊಡ್ಡು ಬ್ರಾಹ್ಮಣ್ಯವಲ್ಲ.  
ಬುಧವಾರ - ಡಿಸೆಂಬರ್-15-2010
By: H B Raghothama
Chamarajanagar
___
Courtesy  : Varthabharathi



ಗಾಂಧಿ, ಅಸ್ಪಶತೆ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಸಂಕಟಗಳು (ಭಾಗ-1)


ಗುರುವಾರ - ಜನವರಿ -20-2011

"I am condemned because I criticized Gandhi and Jinnah for the mess they have made of Indian politics, and in doing so I am alleged to have shown towards them hatred and disrespect. In reply to this charge what I have to say is that I have been a critic and I must continue to be such ….. I dislike them I do not hate them – it is because I love India more." 

ಈ ಹೇಳಿಕೆಯನ್ನು ಅಂಬೇಡ್ಕರ್ ಬಿಡು ಗಡೆ ಮಾಡಿರುವುದು 1942ರಲ್ಲಿ. ರಾಷ್ಟ್ರ ರಾಜ ಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಗಾಂಧೀಜಿ ಮತ್ತು ಅವರು ಈ ದೇಶದ ಅಸ್ಪಶ್ಯ ಮತ್ತು ದುರ್ಬಲ ವರ್ಗದವರನ್ನು ಉದ್ದೇಶಿಸಿ ನಡೆಸುತ್ತಿರುವ ಹೋರಾಟವನ್ನು ಸೂಕ್ಷ್ಮವಾಗಿ ಗಮನಿಸಿದ ಅಂಬೇಡ್ಕರ್, ಆ ಕುರಿತು ತನ್ನ ನಿಲುವೇನು ಎಂಬುದನ್ನು ಮೇಲಿನ ಹೇಳಿಕೆಯಲ್ಲಿ ಬಹಿರಂಗಪಡಿಸುತ್ತಾರೆ. ಇದು ಈ ದೇಶದ ಮಿಲಿ ಯಗಟ್ಟಳೆ ಅಸ್ಪಶ್ಯರು ಹಾಗೂ ಜಾತಿ ವಿರೋಧಿ ಹೋರಾಟವನ್ನು ಬೆಂಬಲಿಸುವವರ ನಿಲುವು ಎಂದು ದೃಢೀಕರಿಸುತ್ತಾರೆ. ಜೊತೆಗೆ ಅವರ ಹೇಳಿಕೆಯಲ್ಲಿ ಗಾಂಧಿ ಮತ್ತು ಅಸ್ಪಶತೆ ನಡು ವಿನ ಸಂಬಂಧವು ಕೂಡ ವ್ಯಕ್ತವಾಗುತ್ತದೆ.
ಈ ಹಿನ್ನೆಲೆಯಲ್ಲಿ ಗ್ರಹಿಸುವುದಾದರೆ ಗಾಂಧೀ ರಾಜಕೀಯದ ವಿಚಾರವಾಗಿ ಪ್ರಕಟವಾಗುವ ದ್ವಂದ್ವಗಳ ಕುರಿತು ಅಂಬೇಡ್ಕರ್‌ರವರಿಗೆ ವೈ ಮನಸ್ಸು ಇದ್ದಿರುವುದು ಸ್ಪಷ್ಟವಾಗುತ್ತದೆ. ಗಾಂಧೀಜಿ ತಳೆದಿರುವ ನಿಲುವಿನಲ್ಲೆ ಈ ದ್ವಂದ್ವ ಬಹಿರಂಗಗೊಳ್ಳುತ್ತದೆ -ಒಂದು ಕಡೆ ಅವರು ಅಸ್ಪಶತೆ ಆಚರಣೆಯ ಕುರಿತು ತೀವ್ರವಾದ ಟೀಕೆಗಳನ್ನು ಮಾಡುತ್ತಾರೆ. ಇನ್ನೊಂದು ಕಡೆ ಯಲ್ಲಿ ಜಾತಿ ಮತ್ತು ವರ್ಣಾಶ್ರಮ ಧರ್ಮವನ್ನು ಪ್ರತಿಪಾದಿಸುತ್ತಾರೆ. ಇಲ್ಲಿ ಎರಡು ಪ್ರಮುಖ ವಿಷಯಗಳು ಪರಸ್ಪರ ಸಂಬಂಧ ಬೆಳೆಸಿಕೊಳ್ಳುತ್ತವೆ.
ಒಂದನೆಯದು ಜಾತಿ ಎಂಬ ಸಂಸ್ಥೆ ಅಥವಾ ವರ್ಣಾಶ್ರಮ ಧರ್ಮದ ಕುರಿತು ಗಾಂಧೀಜಿಗಿರುವ ಕಾಳಜಿ. ಎರಡನೆಯದು ಕಾಂಗ್ರೆಸ್‌ನೊಳಗೆ ಗುರುತಿಸಿಕೊಂಡ ಒಂದು ಬಲಿಷ್ಠ ಗುಂಪು ತನ್ನ ಇರುವಿಕೆಯನ್ನು ಪ್ರಕಟಿ ಸುತ್ತಾ ವಸಾಹತುಶಾಹಿ ವಿರೋಧಿ ಚಳವಳಿ ಯನ್ನು ಮುನ್ನಡೆಸುವ ನೆಪದಲ್ಲಿ ಜಾತಿ ವ್ಯವಸ್ಥೆ ಯನ್ನು ಪ್ರತಿಪಾದಿಸುತ್ತದೆ. ಈ ಗುಂಪನ್ನು ಬಾಲಗಂಗಾಧರ್ ತಿಲಕ್‌ರವರು ಪ್ರತಿನಿಧಿಸು ತ್ತಿದ್ದು, ಅವರಿಗೆ ಜಾತಿ ವ್ಯವಸ್ಥೆ ಎಂಬುದು ಧರ್ಮದೊಳಗಿನ ಒಂದು ಒಕ್ಕೂಟವಾಗಿ ಕಾಣು ತ್ತದೆ.
ತಿಲಕ್ ಆಲೋಚನೆ ಹೇಗಿತ್ತು ಅಂದರೆ, ಅವರ ಪ್ರಕಾರ ಒಬ್ಬ ವ್ಯಕ್ತಿ ಜಾತಿ ವ್ಯವಸ್ಥೆಯ ಹರಿಕಾರನಾದರೆ ಮಾತ್ರ ಅವನು ರಾಷ್ಟ್ರೀಯ ವಾದಿ ಆಗಲು ಅರ್ಹತೆ ಪಡೆಯುತ್ತಾನೆ ಎಂದು ಅಭಿಪ್ರಾಯಪಡುತ್ತಾರೆ. ಈ ಆಲೋಚನೆ ಯಿಂದಲೆ ತಿಲಕರು ಶಿಕ್ಷಣ ಸಂಸ್ಥೆಗಳಲ್ಲಿ ಬ್ರಾಹ್ಮ ಣೇತರ ಮತ್ತು ಅಸ್ಪಶ್ಯರ ಮಕ್ಕಳು ಸೇರ್ಪಡೆ ಗೊಳ್ಳಬಾರದೆಂದು ಹೇಳುತ್ತಾರೆ. ಗೋಖಲೆ ಯಂತ ಕಾಂಗ್ರೆಸಿಗರು ಬಾಂಬೆ ಪ್ರಸಿಡೆನ್ಸಿಯಲ್ಲಿ ಎಲ್ಲರಿಗೂ ಕಡ್ಡಾಯ ಶಿಕ್ಷಣ ಎಂಬ ನಿರ್ಣಯ ವನ್ನು ಹೊರಡಿಸ ಹೊರಟಾಗ ರಾಷ್ಟ್ರೀಯವಾದಿ ಗಳು ಮುಸ್ಲಿಂ ಲೀಗ್ ಜೊತೆ ಸೇರಿ ಆ ನಿರ್ಣ ಯಕ್ಕೆ ಒಪ್ಪಿಗೆ ಸೂಚಿಸದಂತೆ ರಾಜಕೀಯ ಮಾಡುತ್ತಾರೆ. ವಲ್ಲಭಬಾಯಿ ಪಟೇಲರು ಅಂತ ರ್‌ಜಾತಿ ವಿವಾಹ ಬಿಲ್‌ನ್ನು ಮಂಡಿಸಿದಾಗ, ತಿಲಕ್‌ರು ವಿರೋಧಿಸಿ ಒಂದು ವೇಳೆ ಈ ಬಿಲ್‌ನ್ನು ಒಪ್ಪಿಕೊಂಡರೆ, ಭಾರತೀಯ ಅಸ್ಮಿತೆಗೆ ಅವಮಾನವಾಗುತ್ತದೆ ಎಂದು ಹೇಳಿಕೆ ನೀಡಿದರು.
ಹಾಗೇನೆ, ಸುಧಾರಣಾವಾದಿಗಳಾದ ಮಹಾದೇವ್ ಗೋವಿಂದ ರಾನಡೆಯಂತವರು ಉದಾರತೆ, ಸಮಾನತೆಯನ್ನು ಪ್ರತಿಬಿಂಬಿಸುವ ಸಮಾಜ ನಿರ್ಮಾಣಕ್ಕೆ ಕರೆಕೊಟ್ಟು ಜಾತಿ, ಧರ್ಮದಂತಹ ಪೂರ್ವಗ್ರಹಗಳನ್ನು ತೊಡೆದು ಹಾಕಿ ಏಕತಾ ಭಾವನೆಯನ್ನು ಪ್ರತಿಪಾದಿಸಿದರೆ, ತಿಲಕರು ತೀವ್ರವಾಗಿ ವಿರೋಧಿಸಿದರು, ಈ ಬಗೆಯ ವಿರೋಧದ ಕುರಿತು ಅಂಬೇಡ್ಕರ್ ಹೀಗೆ ಪ್ರತಿಕ್ರಿಯಿಸುತ್ತಾರೆ.It is not possible for decency to enter into the abuses that were hurled, the calumnies that were uttered, and the strategies that were employed against the social reformers. ಹಾಗೇನೆ ಸಾಮಾಜಿಕ ಮೌಲ್ಯ ಮತ್ತು ನ್ಯಾಯದ ಕುರಿತು ದ್ವನಿ ಎತ್ತಿದ ರಾನಡೆ ಯವರ ಧೈರ್ಯವನ್ನು ಅಂಬೇಡ್ಕರ್ ಪ್ರಶಂಸಿಸುತ್ತಾರೆ.
ಅಂದರೆ 1920ರ ಹೊತ್ತಿಗೆ ಗಾಂಧೀಜಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಮಾಡುವ ಹೊತ್ತಿಗೆ ಕಾಂಗ್ರೆಸ್‌ನೊಳಗೆ ಜಾತಿಪರ ವಾದಿಸುವ ಒಂದು ಬಲಿಷ್ಠ ಗುಂಪು ದೊಡ್ಡ ಮಟ್ಟದಲ್ಲಿಯೇ ಸಂಘ ಟನೆಗೊಂಡಿತ್ತು. ಇದಕ್ಕೆ ಪೂರಕವಾಗಿ ಗಾಂಧೀಜಿ ಕೂಡ ಜಾತಿ ಎಂಬ ಸಂಸ್ಥೆಯ ಪರವಾಗಿದ್ದರು. 1917ರಲ್ಲಿ ಕಾಂಗ್ರೆಸ್ ಅಸ್ಪಶತೆಯನ್ನು ನಿರ್ಮೂ ಲನ ಮಾಡುವ ಒಂದು ಠರಾವನ್ನು ಹೊರಡಿ ಸಿತು. ಗಾಂಧೀ ಈ ಸಂದರ್ಭದಲ್ಲಿ ಒಂದು ಹೇಳಿಕೆ ನೀಡಿ ಅಸ್ಪಶತೆಯ ನಿರ್ಮೂಲನ ಎಂಬುದು ಸ್ವರಾಜ್ಯ ಪಡೆಯುವ ಪ್ರಕ್ರಿಯೆಗೆ ಪೂರಕವಾದುದು ಎಂದು ಆ ಹೇಳಿಕೆಯಲ್ಲಿ ಪರಿಭಾವಿಸುತ್ತಾರೆ.
ಆದರೆ, ವರ್ಣಾಶ್ರಮ ಧರ್ಮವನ್ನು ರಕ್ಷಣೆ ಮಾಡಬೇಕೆಂದು ಹೇಳುತ್ತಾರೆ. ಹಾಗೇನೆ, ಶ್ರೇಷ್ಠ ವರ್ಣವನ್ನು ಯಾವನೊಬ್ಬನೂ ಸ್ವೀಕರಿಸುವುದನ್ನು ವಿರೋಧಿಸುತ್ತಾರೆ. ಮದ್ರಾಸ್ ಲೆಜಿಸ್ಲೇಟಿವ್ ಅಸೆಂಬ್ಲಿ ಯಲ್ಲಿ ಟೆಂಪಲ್ ಎಂಟ್ರಿ ಬಿಲ್‌ನ್ನು ಮಂಡಿಸಿದಾಗ ಗಾಂಧೀಜಿ ಬೆಂಬಲಿಸುತ್ತಾರೆ. ಆದರೆ, ಕೇರಳದ ಗುರುವಾಯೂರಿನ ದೇವಾಲಯಕ್ಕೆ ಅಸ್ಪಶರ ಪ್ರವೇಶವನ್ನು ನಿರಾಕರಿಸಿದರೆ ತಾನು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇನೆ ಎಂದು ಕೊಟ್ಟಿರುವ ಹೇಳಿಕೆಯನ್ನು ಗಾಂಧೀಜಿ ಮರೆಯುತ್ತಾರೆ. ಎಲ್ಲಿಯವರೆಗೆ ಅಂದರೆ 1933-34ರಲ್ಲಿ ರಂಗಾ ಅಯ್ಯರ್‌ರವರು ಅಸ್ಪಶತೆ ನಿರ್ಮೂಲನ ಬಿಲ್‌ನ್ನು ಸೆಂಟ್ರಲ್ ಲೆಜಿಸ್ಲೇಟಿವ್‌ನಲ್ಲಿ ಮಂಡಿಸಿದಾಗ ಗಾಂಧೀಜಿ ಕಟುವಾಗಿ ಖಂಡಿಸುತ್ತಾರೆ ಮತ್ತು ವಿರೋಧಿಸುತ್ತಾರೆ. ಅಂಬೇಡ್ಕರ್‌ಗೆ ಇದು ನಿರಾಶೆ ಯನ್ನುಂಟು ಮಾಡುತ್ತದೆ. ಅಂಬೇಡ್ಕರ್ ಪ್ರಕಟಿಸುವ ಈ ನಿಲುವಿಗೆ ಬಲವಾದ ಕಾರಣವೂ ಇದೆ. ಈ ಸಂಬಂಧ ಅವರು ಮೂರು ಬೇಡಿಕೆಗಳನ್ನು ಮಂಡಿಸುತ್ತಾರೆ.
ಒಂದನೆಯದಾಗಿ, ಅಂಬೇಡ್ಕರ್‌ರಿಗೆ ದೇವಾಲಯ ಪ್ರವೇಶ ವಿಚಾರ ಅಷ್ಟೊಂದು ಪ್ರಮುಖವಾದುದಾಗಿರಲಿಲ್ಲ. ಬದಲಾಗಿ, ಅಸ್ಪಶರು ಶಿಕ್ಷಣ ಸಂಸ್ಥೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಪ್ರವೇಶ ಮಾಡುವುದು ಪ್ರಮುಖವಾದು ದಾಗುತ್ತದೆ. ಒಟ್ಟಾರೆಯಾಗಿ ಅಂಬೇಡ್ಕರ್‌ರ ಬೇಡಿಕೆಗಳು ಇಂತಿವೆ-ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ, ಮುಖ್ಯವಾಗಿ ಗ್ರಾಮಗಳಲ್ಲಿ, ಅಸ್ಪಶರಿಗೆ ನಾಗರಿಕ ಹಕ್ಕುಗಳು ದೊರೆಯಬೇಕು ಎಂದು ಪ್ರತಿಪಾದಿಸುತ್ತಾರೆ.- ಗ್ರಾಮಗಳಲ್ಲಿರುವ ಬಾವಿ ಮತ್ತು ಕೆರೆಯ ನೀರನ್ನು ತೆಗೆಯುವ ಸ್ವಾತಂತ್ರ, ಗ್ರಾಮಗಳಲ್ಲಿರುವ ಶಾಲೆಗಳಿಗೆ ಪ್ರವೇಶ, ಸಾರ್ವಜನಿಕ ಸವಲತ್ತುಗಳು ದೊರೆಯುವಂತಾಗಬೇಕು.
ಇವೆಲ್ಲ ಈಡೇರಿದರೆ, ಹಿಂದೂ ಸಮಾಜದೊಳ ಗೊಂದು ಕ್ರಾಂತಿಯಾಗುತ್ತದೆ. ಅದರಿಂದ ಅಸ್ಪಶರಿಗೆ ಸಾರ್ವಜನಿಕವಾಗಿ ಸಾಮಾಜಿಕ ಸಮಾನತೆ ದೊರೆತಂತಾ ಗುತ್ತದೆ ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ. ಆದರೆ, ಅಂಬೇಡ್ಕರ್‌ಗೆ ಇವೆಲ್ಲವನ್ನು ದಕ್ಕಿಸಿಕೊಳ್ಳುವುದು ಸುಲಭದ ಕೆಲಸವಲ್ಲವೆಂದು ಗೊತ್ತಿತ್ತು. ಇದರಿಂದ ಹಿಂಸೆಗಳು ಉದ್ಭವ ಆಗಬಹುದು ಎಂಬ ಆತಂಕ ಅವರಲಿತ್ತು. ಏಕೆಂದರೆ, ಪೋಲೀಸ್ ಮತ್ತು ನ್ಯಾಯಾಂಗ ದಲಿತರಿಗೆ ವಿರುದ್ಧವಾಗಿರುವುದರಿಂದ, ಅಸ್ಪಶ ಗುಂಪುಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ವಿಚಾರವು ಅವರಿಗೆ ತಿಳಿದಿತ್ತು.
ಎರಡನೆಯದಾಗಿ, ಅಂಬೇಡ್ಕರ್‌ರವರು ಅಸ್ಪಶರಿಗೆ ಸಮಾನ ಅವಕಾಶಗಳು ಸಿಗಬೇಕೆಂದು ಭಾವಿಸುತ್ತಾರೆ. ಗ್ರಾಮಮಟ್ಟದಲ್ಲಿ ಸಮಾನ ಅವಕಾಶಗಳು ಈ ಸಮುದಾಯಕ್ಕೆ ಇಲ್ಲದಿರುವುದರಿಂದ ಇವರಲ್ಲಿ ಬಡತನ ಮತ್ತು ಮೇಲ್ಜಾತಿಗಳು ಎಸಗುವ ದೌರ್ಜನ್ಯಗಳು ನಿರಂತರವಾಗಿ ಕಾಡುತ್ತಿರುವ ಸಮಸ್ಯೆಗಳಾಗಿವೆ. ಅಂಬೇಡ್ಕರ್ ರವರು ಗ್ರಾಮಗಳಲ್ಲಿ ಮತ್ತು ಪಟ್ಟಣಗಳಲ್ಲಿ ತಾವು ಉತ್ಪಾದನೆ ಮಾಡುವ ತರಕಾರಿ, ಹಾಲು, ಬೆಣ್ಣೆ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡುವ ಅವಕಾಶವೇ ಇಲ್ಲದಿರುವುದರಿಂದ, ಆರ್ಥಿಕವಾಗಿ ಅವರ ಜೀವನ ಕ್ರಮ ಅತ್ಯಂತ ಕೆಳಮಟ್ಟಕ್ಕೆ ತಲುಪಿತ್ತು ಎಂದು ಹೇಳುತ್ತಾರೆ.
ಇದರ ಜೊತೆಗೆ ದಲಿತ ಸಮುದಾಯ ಭೂಒಡೆತನ ಹಕ್ಕಿನಿಂದ ವಂಚಿತವಾಗಿತ್ತು. ಹಳ್ಳಿಯ ಸಂಪತ್ತನ್ನು ಅನುಭವಿಸುವ ಸ್ವಾತಂತ್ರ್ಯ ಇಲ್ಲದಿರುವುದು ಈ ಸಮುದಾಯವನ್ನು ಬಡತನದ ಕೂಪಕ್ಕೆ ತಳ್ಳಿಬಿಟ್ಟಿದೆ ಮತ್ತು ಅವರು ತಮ್ಮ ಬದುಕನ್ನು ಹಸನು ಗೊಳಿಸುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಭಾವಿಸುತ್ತಾರೆ.
ಮೂರನೆಯದಾಗಿ, ಅಸ್ಪಶರು ಮತ್ತು ಜಾತಿ ಹಿಂದುಗಳು ಪರಸ್ಪರ ಮಿಲನಗೊಳ್ಳುವ ಒಕ್ಕೂಟ ಸಾಮಾಜಿಕ ಸಂಬಂಧದ ಮೂಲಕ ನಡೆದರೆ, ಇಡೀ ಸಮಾಜದ ದಿಕ್ಕು ಬದಲಾವಣೆ ಯಾಗಲು ಸಾಧ್ಯವೆಂದು ಅಂಬೇಡ್ಕರ್ ಗ್ರಹಿಸುತ್ತಾರೆ. Only a common cycle of participation can help people to overcome the strangeness of feeling which one has, when brought into contact with the others. Nothing can do this more effectively in my opinion than the admission, of the Depressed Classes to the houses of the caste Hindus.
ಮೇಲಿನ ಮೂರು ಬೇಡಿಕೆಗಳು ಸಮರ್ಪಕವಾಗಿ ಅನುಷ್ಠಾನ ಆಗಬೇಕಾದರೆ ಯಾವುದನ್ನು ನಿರೀಕ್ಷೆ ಮಾಡದ, ಸಮಾಜದ ಅಭಿವೃದ್ಧಿಯನ್ನೇ ಮುಖ್ಯ ಗುರಿಯಾಗಿ ಇಟ್ಟುಕೊಂಡ ಏಜೆನ್ಸಿ ಮತ್ತು ನಿಸ್ವಾರ್ಥ ಸೇವೆ ಮಾಡುವ ಮನಸ್ಸುಗಳು ನಿರಂತರವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ.
ಈ ಬಗೆಯ ಕಳಕಳಿಯನ್ನು ಅವರು ಪದೇ ಪದೇ ಹೇಳಿ ಕಾಂಗ್ರೆಸ್ ಮತ್ತು ಗಾಂಧೀಜಿ ಮೇಲೆ ಒತ್ತಡ ತಂದರೂ, ಗಾಂಧೀಜಿ ಮಾತ್ರ ಅಂಬೇಡ್ಕರ್ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಬದಲಾಗಿ ತಾನು ಪ್ರತಿಪಾದಿಸುವ ಟೆಂಪಲ್ ಎಂಟ್ರಿ ಮತ್ತು ಹರಿಜನ ಸೇವಕ ಸಂಘ ರೂಪಿಸುವ ಕಾರ್ಯ ಚಟುವಟಿಕೆ ಗಳನ್ನು ಕಾರ್ಯರೂಪಕ್ಕೆ ತರಲು ಹೆಚ್ಚು ಒತ್ತು ನೀಡುತ್ತಾರೆ.
ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಗಾಂಧೀಜಿ ಸಂಘಟಿಸಿದ ವಸಾಹತು ವಿರೋಧಿ ಚಳವಳಿಯಲ್ಲಿ ಜಾತ್ಯತೀತತೆ, ಅಹಿಂಸೆ ಮತ್ತು ಖಾದಿ ಕುರಿತು ಸಾರ್ವತ್ರಿಕವಾಗಿ ಜನರನ್ನು ಎಚ್ಚರಿಸಲು ಯಶಸ್ವಿಯಾದರು. ಆದರೆ, ಅದೇ ರೀತಿ, ಅಸ್ಪಶರು ಮತ್ತು ದುರ್ಬಲ ವರ್ಗದವರ ಮೇಲೆ ಜಾತಿ ಹಿಂದುಗಳು ನಿರಂತರವಾಗಿ ಎಸಗುತ್ತಿರುವ ದೌರ್ಜನ್ಯ ತಡಗಟ್ಟುವಲ್ಲಿ ಯಾವುದೇ ಶ್ರಮ ವಹಿಸಲಿಲ್ಲ. ಇದೇ ಅಲ್ಲವೆ ವಿಪರ್ಯಾಸ?
ಅಸ್ಪೃಶರನ್ನು ಉದ್ದೇಶಿಸಿ ರೂಪಿಸಿದ ಗಾಂಧೀ ಹೋರಾಟಕ್ಕೆ ಇದು ದೊಡ್ಡ ಹಿನ್ನಡೆಯಂತೆಲೇ ಹೇಳಬಹುದು. ಈ ಹಿನ್ನಡೆಯ ಪರಿಣಾಮಗಳು ಸ್ವತಂತ್ರ ಭಾರತದಲ್ಲೂ ಪ್ರತಿದ್ವನಿಸುತ್ತಲೇ ಇದ್ದಿರುವುದು ದಲಿತ, ದುರ್ಬಲ ವರ್ಗಗಳ ದುರದೃಷ್ಟ. ಈ ಕಾರಣಕ್ಕಾಗಿ ಆಧುನಿಕ ಭಾರತದ ಸರಕಾರವು ಒಂದು ಏಜನ್ಸಿಯಾಗಿ ದಲಿತರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಯಿತು.
ಸಂವಿಧಾನವು ಕೂಡ ಸ್ಟೇಟ್‌ಗೆ ವಿಶೇಷವಾದ ಜವಾಬ್ದಾರಿಯ ಅವಕಾಶವನ್ನು ಕಲ್ಪಿಸಿ, ದಲಿತರ ಅಭಿವೃದ್ಧಿ, ರಕ್ಷಣೆ ಮತ್ತು ಅವರ ಬದುಕಲ್ಲಿ ಪರಿವರ್ತನೆ ತರುವ ವಿಶೇಷ ಯೋಜನೆ ರೂಪಿಸುವ ಮಹತ್ಕಾರ್ಯವನ್ನು ಸೂಚಿಸಿತು. ಅಸ್ಪಶತೆಯ ನಿರ್ಮೂಲನ, ಜೀತಪದ್ಧತಿಯಂತಹ ಕೆಟ್ಟ ಸಂಪ್ರದಾಯವನ್ನು ತೊಡೆದು ಹಾಕಿ ದಲಿತರ ರಕ್ಷಣೆ ಮಾಡುವುದು ಒಂದನೆಯ ಜವಾಬ್ದಾರಿ. ಶೈಕ್ಷಣಿಕ ಯೋಜನೆಗಳಲ್ಲಿ ಮುಖ್ಯವಾಗಿ ಸ್ಕಾಲರ್‌ಶಿಪ್, ವಸತಿ ನಿಲಯಗಳ ಸವಲತ್ತುಗಳು, ದಲಿತ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಎರಡನೆಯ ಜವಾಬ್ದಾರಿ. ಮತ್ತು ಶಾಸಕಾಂಗ, ಶೈಕ್ಷಣಿಕ ಮತ್ತು ಉದ್ಯೋಗ ರಂಗದಲ್ಲಿ ಮೀಸಲಾತಿ ಮೂರನೆಯ ಜವಾಬ್ದಾರಿ.
ಈ ಬಗೆಯ ಸಂವಿಧಾನಾತ್ಮಕ ಸುಧಾರಣೆಗಳು ದಲಿತರ ಏಳಿಗೆಗೆ ಅತೀ ಜರೂರಾಗಿ ಅನುಷ್ಠಾನ ಮಾಡಬೇಕಾದುದು ಸರಕಾರದ ಕರ್ತವ್ಯ ವಾಗಿದ್ದು, ಇದನ್ನು ಈಡೇರಿಸಲು ಎದುರಾಗುವ ಎಡರುತೊಡರುಗಳು ಈ ಸಮುದಾಯದ ಮತ್ತು ಒಟ್ಟಾರೆ ನಾಗರಿಕ ಸಮಾಜದ ಬೆಳವಣಿಗೆಗೆ ಶೋಭೆ ತರುವಂತಹದ್ದಾಗದು. ಆದರೆ, ಕಳೆದ ಆರು ದಶಕಗಳಲ್ಲಿ ಈ ಸಮುದಾಯದ ಬೆಳವಣಿಗೆಗೆ ಮತ್ತು ಅವರ ಆಸ್ತಿ ರಕ್ಷಣೆ ವಿಚಾರವಾಗಿ ಸರಕಾರ ಹಮ್ಮಿಕೊಂಡ ಕಾರ್ಯಕ್ರಮಗಳು ಮತ್ತು ಅದರ ಫಲಿತಾಂಶಗಳು ನಿರಾಶೆಯನ್ನುಂಟು ಮಾಡುತ್ತದೆ. ಈ ಜನತೆಯ ಜೀವನ ಕ್ರಮದಲ್ಲಿ ಆದ ಬದಲಾವಣೆಯನ್ನು ಗಮನಿಸಿದರೆ ಭಾರತದ ನಾಗರಿಕ ಸಮಾಜ ಶ್ರೇಷ್ಠವಾದುದೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
Source: Varthabharathi Kannada daily 

html