Pages

Tuesday 12 April 2011

ಗಾಂಧಿವಾದದ ಪಾಯಸಕ್ಕೆ ಗೋಡ್ಸೇವಾದದ ಸಕ್ಕರೆ

ಮಂಗಳವಾರ - ಏಪ್ರಿಲ್ -12-2011

ಅಣ್ಣಾ ಹಝಾರೆಯವರನ್ನು ಮುಂದಿಟ್ಟು ಕಳೆದ ಕೆಲ ದಿನಗಳಿಂದ ನಡೆಯುತ್ತಿರುವುದು ಯಾವುದೋ ಟಿ.ವಿ. ಚಾನೆಲ್ ಒಂದರ ರಿಯಾಲಿಟಿ ಶೋ ಆಗಿರಬಹುದೇ? ಇತ್ತೀಚೆಗೆ ರಿಯಾಲಿಟಿ ಶೋ ಮತ್ತು ಜಾಹೀರಾತುಗಳಲ್ಲಿಯೇ ಹೆಚ್ಚು ಗುರುತಿಸಿಕೊಂಡಿರುವ ಕಿರಣ್ ಬೇಡಿ, ಯೋಗದ ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣೆರಚುತ್ತಾ ಸದಾ ವಿವಿಧ ಚಾನೆಲ್‌ಗಳಲ್ಲಿ ಕಂಗೊಳಿಸುವ ರಾಮ್‌ದೇವ್, ‘ರಂಗ್ ದೇ ಬಸಂತಿ’ ಚಿತ್ರದಿಂದ ಪ್ರಭಾವಿತರಾಗಿ ಕ್ಯಾಂಡಲ್ ಹಿಡಿದು ‘ಥ್ರಿಲ್’ ಆಗಿರುವ ಐಟಿ ಹುಡುಗರು... ಹರಿದಾಡುತ್ತಿರುವ ಎಸ್ಸೆಮ್ಮೆಸ್‌ಗಳು... ಕುಣಿದಾಡುತ್ತಿರುವ ಟಿ.ವಿ. ಯಾಂಕರ್‌ಗಳು...
ಈ ಶೋಗೆ ಪರೋಕ್ಷವಾಗಿ ‘ಇನ್‌ವೆಸ್ಟ್‌’ ಮಾಡುತ್ತಿರುವ ಉದ್ಯಮಪತಿಗಳು... ಹಝಾರೆಗೆ ಶರಬತ್ ಕುಡಿಸುತ್ತಿರುವ ಪುಟಾಣಿಯ ಮುಖದ ಗಾಬರಿ... ಇವೆಲ್ಲವನ್ನು ನೋಡುತ್ತಿರುವಾಗ ನನಗೆ ಒಂದು ಟಿ.ವಿ. ರಿಯಾಲಿಟಿ ಶೋವನ್ನು ನೋಡುತ್ತಿರುವ ಅನುಭವವಾಗುತ್ತಿದೆಯೇ ಹೊರತು, ಅದರಾಚೆಗೆ ಇನ್ನಾವ ಅನುಭವವೂ ನನಗಾಗಿಲ್ಲ.

ಆದರೆ ರವಿವಾರ ಅಣ್ಣಾ ಹಝಾರೆಯವರು ನೀಡಿರುವ ಒಂದು ಹೇಳಿಕೆ ಮಾತ್ರ ನನ್ನಲ್ಲಿ ಗಾಬರಿ ಹುಟ್ಟಿಸಿತು. ಗಾಂಧಿವಾದದ ಹೆಸರಿನಲ್ಲಿ ಹುಟ್ಟಿಕೊಂಡಿರುವ ಈ ಚಳವಳಿ, ಇಡೀ ಗಾಂಧಿವಾದವನ್ನೇ ದಾರಿತಪ್ಪಿಸುವುದಕ್ಕಾಗಿ ಹುಟ್ಟು ಹಾಕಿರುವ ಸಂಚೆ? ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಳ್ಳುವಂತೆ ಮಾಡಿದೆ. ಗಾಂಧಿವಾ ದದ ಕುರಿತಂತೆ ಅಪಕ್ವರಾಗಿರುವ ಕೆಲವು ಹಿತಾಸಕ್ತಿಗಳು ಕುಣಿಸಿದಂತೆ ಕುಣಿಯುತ್ತಿರುವ ಹಝಾರೆ, ದೇಶಕ್ಕೆ ಅದೇನೋ ಒಳಿತನ್ನು ಮಾಡಲು ಹೊರಟಂತೆ ಕಾಣುತ್ತಿದ್ದರೂ, ಅವರು ಈ ದೇಶದ ಅಳಿದುಳಿದ ಗಾಂಧಿವಾದದ ಅವ ಶೇಷಗಳು ಶಾಶ್ವತವಾಗಿ ಸಂಘಪರಿವಾರವೆನ್ನುವ ಹೆಬ್ಬುಲಿಯ ಬಾಯಿಗೆ ಹಾಕಿ ಬಿಡುವುದಕ್ಕೆ ಹೊರಟಿದ್ದಾರೆಯೇ ಎನ್ನುವುದು ನನ್ನ ದೊಡ್ಡ ಆತಂಕ. ಇದೇ ಸಂದರ್ಭದಲ್ಲಿ ಅವರ ಸುತ್ತಮುತ್ತಲಿರುವ ಕೆಲವು ‘ಗಿರಾಕಿ’ಗಳು ನನ್ನ ಅನುಮಾನಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತಿವೆ.

ಅಣ್ಣಾ ಹಝಾರೆ ತನ್ನ ಹದಿ ಹರೆಯದಲ್ಲೇ ಸೇನೆಯನ್ನು ಸೇರಿದವರು. ಗಾಂಧೀಜಿಯ ‘ಅಹಿಂಸೆ’ ‘ಸತ್ಯ’ ಇತ್ಯಾದಿಗಳ ಕುರಿತಂತೆ ಯಾವ ರೀತಿಯ ಪ್ರಭಾವವೂ ಇಲ್ಲದ ಹಝಾರೆ ಕೆಲವು ವರ್ಷಗಳಲ್ಲೇ ಸೇನೆಯ ಬರ್ಬರತೆಗೆ ಹಣ್ಣಾ ದವರು. ವಿಪರ್ಯಾಸವೆಂದರೆ ಸೇನೆಯನ್ನು ತ್ಯಜಿ ಸುವ ನಿರ್ಧಾರಕ್ಕೆ ಬಂದರೆ, ಅವರ ಮುಂದೆ ಕಾಳ ಭವಿಷ್ಯ ಧುತ್ತೆಂದು ನಿಂತಿತ್ತು. ಸೇನೆ ಪ್ರತಿಪಾದಿಸುವ ಹಿಂಸೆ, ಅದರ ಶಿಸ್ತು ಇತ್ಯಾದಿಗಳು ಅವರ ಖಿನ್ನತೆಯನ್ನು ಸೃಷ್ಟಿಸಿತು. ಮಾತ್ರವಲ್ಲ, ಅವರು ಆತ್ಮ ಹತ್ಯೆಯ ನಿರ್ಧಾರಕ್ಕೂ ಬಂದರಂತೆ. ಅಷ್ಟೇ ಅಲ್ಲ ‘ಎರಡು ಪುಟ’ಗಳ ಡೆತ್ ನೋಟನ್ನು ಅವರು ಬರೆದಿಟ್ಟಿದ್ದರು.

ಹೀಗೆ ಅವರು ಆತ್ಮಹತ್ಯೆಯ ದಾರಿ ಯಲ್ಲಿದ್ದಾಗ, ಬಸ್‌ಸ್ಟಾಂಡ್ ಒಂದರ ಬುಕ್‌ಸ್ಟಾಲಿ ನಲ್ಲಿ ‘ವಿವೇಕಾನಂದ’ರ ಪುಸ್ತಕವನ್ನು ನೋಡಿದ ರಂತೆ. ಅದರ ಪ್ರಭಾವಕ್ಕೆ ಸಿಲುಕಿದ ಹಝಾರೆ ತನ್ನ ಆತ್ಮಹತ್ಯೆಯ ಪ್ರಯತ್ನದಿಂದ ಹಿಂದೆ ಸರಿದರು. ಸೇನೆಯಿಂದ ನಿವೃತ್ತಿಯಾಗುವ ಆಸೆಯಿತ್ತಾದರೂ, ಅವರ ಅವಧಿ ಪೂರ್ತಿಯಾಗಿರಲಿಲ್ಲ. ಅರ್ಧದಲ್ಲೇ ಬಿಟ್ಟು ಬಂದರೆ ಪಿಂಚಣಿ ಸಿಗುವುದಿಲ್ಲ. ಈ ಕಾರ ಣಕ್ಕೆ ಅವರು ಸೇನೆಯಲ್ಲಿ ಮತ್ತೂ ಕೆಲವು ವರ್ಷ ಗಳ ಕಾಲ ಮುಂದುವರಿದರಂತೆ. ಇದು ಅಣ್ಣಾ ಹಝಾರೆಯವರ ವಿರೋಧಾಭಾಸಗಳಿಂದ ಹಾಗೂ ಹಲವು ನಾಟಕೀಯತೆಯನ್ನೊಳಗೊಂಡ ಹದಿಹರೆಯದ ಬದುಕು. ಅಲ್ಲಿಂದ ಅವರು ತನ್ನ ಗ್ರಾಮಕ್ಕೆ ತೆರಳಿ ಅಲ್ಲಿನ ಜನರೊಂದಿಗೆ ಸೇರಿ ಆ ಗ್ರಾಮದ ಉದ್ಧಾರವನ್ನು ಕೈಗೆತ್ತಿಕೊಂಡರು.

ಈ ಸಂದರ್ಭದಲ್ಲಿ ಅವರೊಂದಿಗೆ ಕೆಲವು ವಿದೇಶಿ ಎನ್‌ಜಿಓ ಸಂಸ್ಥೆಗಳೂ ಕೈ ಜೋಡಿಸಿವೆ ಎನ್ನುವುದನ್ನು ನಾವಿಲ್ಲಿ ಮರೆಯಬಾರದು. ಅಮೆರಿಕದ ‘ಕ್ಯಾರ್’ ಎಂಬ ಎನ್‌ಜಿಒ ಸಂಸ್ಥೆಯೊಂದಿಗೂ ಅವರಿಗೆ ಸಂಬಂಧವಿದೆ. ಅವರಿಗೆ ಈ ಸಂಸ್ಥೆ ಸನ್ಮಾನವನ್ನು ಮಾಡಿ, ಪ್ರಶಸ್ತಿ ನೀಡಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಆದರೆ ಇವೆಲ್ಲದರ ನಡುವೆಯೂ ಮಹಾರಾಷ್ಟ್ರದ ರಿಲೆಗಾನ್ ಸಿದ್ಧಿ ಗ್ರಾಮದಲ್ಲಿ ಅವರು ನಡೆಸಿದ ಸುಧಾರಣೆ ಮತ್ತು ಆಗಾಗ ಸರಕಾರದೊಂದಿಗೆ ನಡೆಸುತ್ತಿದ್ದ ತಿಕ್ಕಾಟ ಇವನ್ನು ನಾವು ಒಪ್ಪಲೇಬೇಕು. ಆದರೆ ಇಡೀ ದೇಶದ ಚಳವಳಿಯ ನಾಯಕತ್ವವನ್ನು ವಹಿಸುವ ಪಕ್ವತೆಯಾಗಲಿ, ಗಾಂಧೀಜಿಯ ಮುತ್ಸದ್ಧಿತನ ವಾಗಲಿ ಅವರಲ್ಲಿಲ್ಲ. ಆದುದರಿಂದಲೇ 97 ಗಂಟೆಗಳಲ್ಲೇ ಗಾಂಧಿವಾದಿ ಚಳವಳಿಯನ್ನು ಗೋಡ್ಸೇವಾದಿಗಳು ಅಪಹರಿಸಿದ್ದಾರೆ.
ಹಝಾರೆ ಪ್ರಾಮಾಣಿಕರೇ ಇರಬಹುದು. ಆದರೆ ಅವರು ಗಾಂಧಿವಾದಿಗಳಂತೂ ಅಲ್ಲ. ಅಥವಾ ಅವರೇನು ತಿಳಿದುಕೊಂಡಿದ್ದಾರೆಯೋ ಅದು ಗಾಂಧೀವಾದವಲ್ಲ. ಗಾಂಧೀಜಿ ಯಾವತ್ತೂ ಬಾಬಾ ರಾಮ್‌ದೇವ್‌ನಂತಹ ಢೋಂಗಿ ಸನ್ಯಾಸಿಗಳನ್ನು ತನ್ನ ಕಾಂಪೌಂಡ್‌ನ ಒಳಕ್ಕೂ ಸೇರಿಸಿರಲಿಲ್ಲ. ತಮಾಷೆ ನೋಡಿ. ಈ ರಾಮದೇವ್ ಒಬ್ಬ ನಕಲಿ ಆಯುರ್ವೇದ ಪಂಡಿತ. ಅದರಿಂದ ಕೋಟಿಗಟ್ಟಲೆ ಲಾಭವನ್ನು ಮಾಡುತ್ತಿದ್ದಾನೆ. ಜೊತೆಗೆ ಯೋಗವನ್ನು ಒಂದು ‘ಉದ್ಯಮ’ವಾಗಿ ಪರಿವರ್ತಿಸಿ ಅದನ್ನು ಮೇಲ್ಮಧ್ಯಮ ವರ್ಗಕ್ಕೆ ಮಾರುತ್ತಿರುವ ಒಬ್ಬ ವ್ಯಾಪಾರಿ. ಇಲ್ಲಿ ಇದಲ್ಲ ಮುಖ್ಯ. ಎಲ್ಲಕ್ಕಿಂತ ಅಪಾಯಕಾರಿಯೆಂದರೆ, ಈತನ ಬೆನ್ನಿಗೆ ಸಂಘಪರಿವಾರದ ಜನರಿದ್ದಾರೆ.

ಬಿಜೆಪಿಯ ಹಲವು ನಾಯಕರೊಂದಿಗೆ ಈತನಿಗೆ ನಿಕಟ ಸಂಪರ್ಕವಿದೆ. ಬಿಜೆಪಿಯ ‘ಚಿಂತಕ’ ಎಂದೇ ಖ್ಯಾತಿ ಪಡೆದ ಗೋವಿಂದಾಚಾರ್ಯ ಈತನ ಮೂಲಕ ಆರೆಸ್ಸೆಸ್‌ನ ‘ಗೋ ಗ್ರಾಮ ಯಾತ್ರೆ’ಯನ್ನು ಸಕ್ರಿಯವಾಗಿ ಸಂಘಟಿಸಿದ್ದರು. ಇವನ ಒಂದು ಹೆಗಲಲ್ಲಿ ಉದ್ಯಮಿಗಳಿದ್ದರೆ ಇನ್ನೊಂದು ಹೆಗಲಲ್ಲಿ ಆರೆಸ್ಸೆಸ್‌ನ ಚಿಂತನೆಗಳಿವೆ. ಜೊತೆಗೆ ಹೊಸತೊಂದು ಪಕ್ಷವನ್ನು ಕಟ್ಟುವ ಕುರಿತಂತೆಯೂ ಈಗಾಗಲೇ ಹೇಳಿಕೆಯನ್ನು ನೀಡಿದ್ದಾನೆ. ಹೀಗಿರುವಾಗ, ಹಝಾರೆಯವರ ಹೋರಾಟ ‘ಪಕ್ಷರಹಿತ’ ಹೇಗಾಗುತ್ತದೆ? ಇದು ಮೊದಲ ಪ್ರಶ್ನೆ. ಈ ಚಳವಳಿಯ ಆಳದಲ್ಲಿ ಟೊಳ್ಳುತನ ಮಾಧ್ಯಮಗಳ ಗದ್ದಲದಲ್ಲಿ ಮುಚ್ಚಿ ಹೋಗಿದೆ. ಹಝಾರೆಯ ಬೆನ್ನಿಗೆ ಕಾರ್ಪೊರೇಟ್ ವಲಯದ ಒಂದು ವಿಭಾಗ ನಿಂತಿದೆ.

ಆದರೆ ಇಂದು ರಾಜಕಾರಣಿಗಳನ್ನು ಭ್ರಷ್ಟರನ್ನಾಗಿ ಮಾಡುತ್ತಿರುವವರೇ ಈ ಉದ್ಯಮಪತಿಗಳು. ಈ ದೇಶದ ರೈತರ ಭೂಮಿಯನ್ನು ಅರ್ಧಕ್ಕರ್ಧ ನುಂಗಿ ಹಾಕಿದವರು ಇದೇ ಉದ್ಯಮಿಗಳು. ‘ಹಳ್ಳಿಗಳಿಂದ ಭಾರತ’ ಎಂದು ಹೇಳಿದವರು ಗಾಂಧೀಜಿ. ಆದರೆ ಹಳ್ಳಿಗಳು ಇದೇ ಉದ್ಯಮಪತಿಗಳಿಂದ ಸಾಯುತ್ತಿವೆ. ಇಂತಹ ಕಾರ್ಪೊರೇಟ್ ಜನರನ್ನು ಕಟ್ಟಿಕೊಂಡು ಹಝಾರೆ ಯಾವ ಚಳವಳಿಯನ್ನು ಕಟ್ಟಲು ಹೊರಟಿದ್ದಾರೆ? ಬಾಯಲ್ಲಿ ಟಸ್‌ಪುಸ್ ಎಂದು ಇಂಗ್ಲಿಷ್ ಮಾತನಾಡುತ್ತಾ, ಅಮೆರಿಕದ ಕನಸು ಕಾಣುತ್ತಿರುವ ಹುಡುಗರು ಒಂದು ದಿನ ಕ್ಯಾಂಡಲ್ ಹಚ್ಚಿ ಥ್ರಿಲ್ ಆದರೆ ಕ್ರಾಂತಿಯಾಗುವುದಕ್ಕೆ ಸಾಧ್ಯವೆ?
ಏನಾಗಬೇಕಿತ್ತೋ ಅದೇ ಆಗಿದೆ.

ತನ್ನ ಬೇಡಿಕೆಗಳನ್ನು ಕೇಂದ್ರ ಒಪ್ಪಿದ ಮರುದಿನವೇ ಈ ‘ಗಾಂಧಿವಾದಿ’ ಹಝಾರೆ ‘ಗೋಡ್ಸೇವಾದಿ’ ಮೋದಿಯನ್ನು ತಬ್ಬಿಕೊಂಡಿದ್ದಾರೆ. ಗುಜರಾತ್‌ನ ಅಭಿವೃದ್ಧಿಯನ್ನು ಕೊಂಡಾಡಿದ್ದಾರೆ. ವಿದೇಶಿ ಉದ್ಯಮಿಗಳಿಗೆ ಗುಜರಾತ್‌ನ ಬಾಗಿಲನ್ನು ತೆರೆದುಕೊಟ್ಟದ್ದು ಹಝಾರೆಗೆ ಅಭಿವೃದ್ಧಿಯಾಗಿ ಕಂಡಿದೆ. ಉದ್ಯಮದಿಂದ ಭೂಮಿ ಕಳೆದುಕೊಳ್ಳುತ್ತಿರುವ ಸಾವಿರಾರು ರೈತರು ಈ ಗಾಂಧಿ ವಾದಿಯ ಕಣ್ಣಿಗೆ ಬಿದ್ದಿಲ್ಲ. ‘ಅಭಿವೃದ್ಧಿ’ಯ ಕುರಿತಂತೆ ಮಹಾತ್ಮಗಾಂಧೀಜಿಯ ಕಲ್ಪನೆ ದೊಡ್ಡದಿತ್ತು. ಆ ಅಭಿವೃದ್ಧಿಯಲ್ಲಿ ರೈತರಿಗೆ, ದಲಿತರಿಗೆ, ಶೋಷಿ ತರಿಗೆ ಪಾಲಿತ್ತು. ಹಝಾರೆ ಮೋದಿಯನ್ನು ಶ್ಲಾಘಿಸುವ ಮೂಲಕ ‘ಗಾಂಧಿವಾದ’ವನ್ನು ತಮಾಷೆಯ ವಸ್ತುವಾಗಿಸಿದರು. ಎಲ್ಲಕ್ಕಿಂತ ವಿಷಾದನೀಯ ಸಂಗತಿಯೆಂದರೆ, ‘ಗುಜರಾತ್ ಹತ್ಯಾಕಾಂಡ’ದ ಮೂಲಕ ಗಾಂಧಿಯನ್ನು ಎರಡನೆ ಬಾರಿ ಕೊಂದು ಹಾಕಿದ ನರೇಂದ್ರ ಮೋದಿಗೆ ತನ್ನ ‘ಗಾಂಧಿವಾದ’ದ ಶಾಲನ್ನು ಹೊದಿಸಿದ್ದು. ನಿಜಕ್ಕೂ ಹಝಾರೆಯೆನ್ನುವ ಅಪಕ್ವ ಗಾಂಧಿವಾದಿ ಈ ದೇಶಕ್ಕೆ ಭಾರೀ ಅಪಾಯವನ್ನು ತಂದೊಡ್ಡಲಿದ್ದಾರೆ.

ಅಂತಲೇ ತಾವಿನ್ನು ಸುರಕ್ಷಿತ ಎಂದು ಕಾರ್ಪೊರೇಟ್ ಧಣಿಗಳು ಈ ಚಳವಳಿಗೆ ಬೆಂಬಲ ನೀಡಿದರು. ಹುತ್ತವ ಬಡಿದರೆ ಹಾವು ಸಾಯುವುದಿಲ್ಲ. ಜನಲೋಕಪಾಲ ಮಸೂದೆ ಅಂಗೀಕಾರವಾದರೂ ಈ ಭ್ರಷ್ಟಾಚಾರ ತೊಲಗುವುದಿಲ್ಲ. ಅದರ ಬೇರುಗಳು ನಮ್ಮ ಬಂಡವಾಳಶಾಹಿ ಸಮಾಜ ವ್ಯವಸ್ಥೆಯಲ್ಲಿವೆ. ನಮ್ಮ ದೇಶದಲ್ಲಿ ಸಾರ್ವಜನಿಕ ಸಂಪತ್ತಿನ ಲೂಟಿಗೆ ಅವಕಾಶ ನೀಡಿರುವ ಈ ವ್ಯವಸ್ಥೆ ಈಗ ತನ್ನೆಲ್ಲ ವಿಕಾರಗಳೊಂದಿಗೆ ವಿಜೃಂಭಿಸುತ್ತಿದೆ. ತೊಂಬತ್ತರ ದಶಕದ ಹಿಂದೆ ಸಮ್ಮಿಶ್ರ ಆರ್ಥಿಕತೆಯ ಹೆಸರಿನಲ್ಲಿ ಕೆಲ ಮೂಗುದಾರವಾದರೂ ಇತ್ತು. ಆದರೆ ಉದಾರೀಕರಣ, ಖಾಸಗೀಕರಣದ ಕರಾಳ ಶಕೆ ಆರಂಭವಾದ ನಂತರ ದುಡ್ಡಿದ್ದವನು ಲಂಗು ಲಗಾಮಿಲ್ಲದೆ ಲೂಟಿ ಮಾಡಲು ಮುಕ್ತ ಅವಕಾಶ ದೊರಕಿದೆ.

ಹತ್ತು ವರ್ಷಗಳ ಹಿಂದೆ ಲೂನಾದಲ್ಲಿ ಓಡಾಡುತ್ತಿದ್ದ ಜನಾರ್ದನ ರೆಡ್ಡಿ ಇಂದು ಸಾವಿರಾರು ಕೋಟಿ ರೂಪಾಯಿ ಸಂಪತ್ತಿನ ಒಡೆಯನಾಗಲು ಸಾಧ್ಯವಾಗಿದ್ದು ಈ ಉದಾರೀಕರಣ, ಜಾಗತೀಕರಣ ನೀತಿಯಿಂದ. ಈ ಭ್ರಷ್ಟಾಚಾರ ಎಂಬ ಕಾಯಿಲೆಯ ಮೂಲಕ್ಕೆ ಔಷಧಿ ನೀಡದೆ ಬರೀ ಲಕ್ಷದೊಂದಿಗೆ ಗುದ್ದಾಡಿದರೆ ಪ್ರಯೋಜನವಿಲ್ಲ. ಜನಲೋಕಪಾಲ ಮಸೂದೆ ಬಂದರೂ ಅದು ಬರೀ ಸಂಸದರಿಗೆ ಮಾತ್ರ ಸೀಮಿತವಾಗಿರುತ್ತದೆ. ರಾಜಕಾರಣಿಗಳೊಂದಿಗೆ ಶಾಮೀಲಾಗಿ ಅವರಿಗಿಂತ ಹೆಚ್ಚು ಕಬಳಿಸುವ ಅಧಿಕಾರಿಶಾಹಿಯನ್ನು ಅದರ ವ್ಯಾಪ್ತಿಗೆ ಒಳಪಡಿಸಿದರೆ ಮಾತ್ರ ಅದು ಸಾರ್ಥಕವಾಗುತ್ತದೆ.

ನಮ್ಮ ಬಂಡವಾಳಶಾಹಿ ರಾಜಕಾರಣಿಗಳು ಬರೀ ಸ್ವಿಸ್ ಬ್ಯಾಂಕ್‌ನಲ್ಲಿ ಮಾತ್ರ ಹಣವಿಟ್ಟಿಲ್ಲ. ನಮ್ಮ ದೇಶದ ಅನೇಕ ಮಠ, ಪೀಠಗಳು, ಅಕ್ರಮ ಕಪ್ಪು ಹಣದ ಕೇಂದ್ರಗಳಾಗಿವೆ. ಅವುಗಳನ್ನು ಬಯಲಿಗೆಳೆಯಲು ಬರೀ ಜನಲೋಕಪಾಲ, ಲೋಕಾಯುಕ್ತದಿಂದ ಸಾಧ್ಯವಿಲ್ಲ. ಉದಾರೀಕರಣ, ಖಾಸಗೀಕರಣ ಸೇರಿದಂತೆ ಮನುಷ್ಯನನ್ನು ಆಸೆ ಬುರುಕನನ್ನಾಗಿ, ಲಾಭಕೋರನನ್ನಾಗಿ ಮಾಡಿದ ಬಂಡವಾಳ ಶಾಹಿ ವ್ಯವಸ್ಥೆಯನ್ನು ನಿರ್ನಾಮ ಮಾಡಲು ಈಗ ದಣಿವಿಲ್ಲದ ಹೋರಾಟ 


ನಡೆಯಬೇಕಾಗಿದೆ.

- ಅಣ್ಣು ಕೆ.ಬೆಳ್ತಂಗಡಿ












Source: http://vbnewsonline.com/Writer/50617/

No comments:

Post a Comment

html