Pages

Monday 9 May 2011

‘ಹೊಲೆಯ’ರು ಯಾರು?

ಮಂಗಳವಾರ - ಡಿಸೆಂಬರ್-14-2010

ಭಾರತದ ಇತಿಹಾಸದ ಪುಟಗಳನ್ನು ತೆರೆಯು ತ್ತಾ ಹೋದಂತೆ ಅಲ್ಲಿ ಪ್ರಧಾನವಾಗಿ ಕಾಣು ವುದು ಮೂರೇ ಮೂರು ಜನಾಂಗ. 1.ಬ್ರಾಹ್ಮಣರು 2.ಮುಸಲ್ಮಾನರು 3.ಬ್ರಿಟಿಷರು. ಮುಸಲ್ಮಾನರು ಮತ್ತು ಬ್ರಿಟಿಷರು ಕೇವಲ ಧಾಳಿಕೋರರಾಗಿ ಚಿತ್ರಿಸಲ್ಪಟ್ಟಿದ್ದರೆ ಬ್ರಾಹ್ಮಣರು ಎಲ್ಲ ರಾಜರ, ರಾಜವಂಶಗಳ ಮಾರ್ಗದರ್ಶಕರಾಗಿ, ಕೆಲವೊಮ್ಮೆ ಅವರೇ ರಾಜರುಗಳಾಗಿ ಒಟ್ಟಾರೆ ಇಡೀ ಭಾರತದ ವಾರಸುದಾರರಾಗಿ ಚಿತ್ರಿಸಲ್ಪಟ್ಟಿದ್ದಾರೆ.

ಹಾಗಿದ್ದರೆ ಇಷ್ಟೊಂದು ಬೃಹತ್ ಭಾರತ ಮತ್ತದರ ಸುಮಾರು ಐದು ಸಾವಿರ ವರ್ಷಗಳ ಇತಿಹಾಸ ಕೇವಲ 3% ಜನರಿಗೆ ಮಾತ್ರ ಸೀಮಿತವಾದುದೇ? ಮತ್ತು ಇನ್ನುಳಿದ 97% ಜನರಿಗೆ ಈ ಭಾರತ ಮತ್ತದರ ಇತಿಹಾಸ ದಲ್ಲಿ ಯಾವುದೇ ಸ್ಥಾನವಿರಲಿಲ್ಲವೇ? ಖಂಡಿತ ಸುಳ್ಳು. ಬರೆದವರು ‘‘ಅವರು’’ ಮಾತ್ರ ಆದ್ದರಿಂದ ಈ ದೇಶದ ಇತಿಹಾಸವನ್ನು ಅವರಿಗೆ ಒಪ್ಪಿಗೆ ಯಾಗುವ ಹಾಗೆ, ಅವರ ಮೂಗಿನ ನೇರಕ್ಕೆ, ಆ ಮೂಗಿನ ಮೇಲೆ ಇರುವ ನಾಮದ ನೇರಕ್ಕೆ ಬರೆದುಕೊಂಡಿದ್ದಾರೆ ಅಷ್ಟೆ.

ದುರಂತವೆಂದರೆ ಅಂತಹ ಏಕಪಕ್ಷೀಯ ವಿಶ್ಲೇಷಣೆಯ, ಧಗಾಕೋರ ಕಥೆ ಯನ್ನು ಶೂದ್ರ ಮತ್ತು ಅಸ್ಪಶ್ಯ ಸಮುದಾಯಗ ಳಾದ ನಾವು ನಮ್ಮ ಇತಿಹಾಸವೆಂದು ಓದುತ್ತಿ ದ್ದೇವೆ. ಹಾಗಿದ್ದರೆ ‘‘ನಮ್ಮದಲ್ಲದ’’ ಆ ನಮ್ಮ ಇತಿ ಹಾಸದಿಂದ ನಮಗೇನು ಧಕ್ಕುತ್ತದೆ? ಇನ್ನೇನು ಧಕ್ಕುತ್ತದೆ? ನಮ್ಮ ಆ ಅಸ್ಪಶ್ಯ ಸಮುದಾಯವನ್ನು ನಾವೆ ‘ಹೊಲಸು’ ‘ಕಸ’ ಎಂದು ಕೊಳ್ಳಬೇಕು. ಅಥವಾ ಹಾಗೆ ಹೇಳಿಕೊಳ್ಳಲಾಗದೆ ನಮ್ಮ ಜಾತಿಯನ್ನು ನಾವೇ ಮರೆಮಾಚುತ್ತಾ ಸದಾ ಕೀಳರಿಮೆಯಿಂದ ನರಳಬೇಕು.


ಒಟ್ಟಿನಲ್ಲಿ ನಮ್ಮ ಸ್ವಾಭಿಮಾನವನ್ನು ಬದಿಗೊತ್ತಿ ಸದಾ ಇನ್ನೊಬ್ಬರ ಜೀತ ಗಾರರಾಗಲು ನಾವು ಸಿದ್ಧರಿರಬೇಕು. ಇದೇ ಈ ದೇಶದ ಬ್ರಾಹ್ಮಣರಚಿತ ಇತಿಹಾಸ ಈ ದೇಶದ ಅಸ್ಪಶ್ಯರಿಗೆ ನೀಡಿರುವ ಮಹಾನ್ ಕೊಡುಗೆ! ಇರಲಿ, ಇದನ್ನೆಲ್ಲಾ ಯಾಕೆ ಹೇಳಬೇಕಾಯಿ ತೆಂದರೆ ಕಳೆದ ನವೆಂಬರ್ 4ರಂದು ಪತ್ರಿಕೆ ಯೊಂದರಲ್ಲಿ ಆ ಪತ್ರಿಕೆಯ ಸಂಪಾದಕರು ತಮ್ಮ ‘‘ನೂರೆಂಟು ಮಾತು’’ ಎಂಬ ಅಂಕಣ ಬರಹದಲ್ಲಿ ಪ್ರಸ್ತುತ ರಾಜಕೀಯ ಸ್ಥಿತಿಗತಿಯ ಬಗ್ಗೆ ಬರೆಯುತ್ತಾ ‘‘ಆದುನಿಕ ಭಾರತವನ್ನು ನಮ್ಮ ನಾಯಕರು ಹೊಲಗೇರಿ ಮಾಡಿದ್ದಾರೆ’’ ಎಂದು ಬರೆದಿದ್ದಾರೆ!


ಅರೆ, 6ಕೋಟಿ ಜನಸಂಖ್ಯೆ ಇರುವ ರಾಜ್ಯದ ಜನರಲ್ಲಿ ದಲಿತರೇ ಸುಮಾರು 1ಕೋಟಿಗೂ ಮಿಕ್ಕಿ ಇದ್ದಾರೆ. ಅದರಲ್ಲಿ ‘ಹೊಲೆಯ’ರೆಂಬ ಆ ಬೃಹತ್ ಜನ ಸಮುದಾ ಯ ಸುಮಾರು 60 ರಿಂದ 70ಲಕ್ಷದಷ್ಟಿದೆ. ಇಂತಹ ಬೃಹತ್ ಜನಸಮುದಾಯವನ್ನು ತಾನು ಅವಮಾನಿಸುತ್ತಿದ್ದೇನೆಂದು ಆ ಸಂಪಾದಕರಿಗೆ ಅನಿಸಲಿಲ್ಲವೇ? ಅದ್ಹೇಗೆ ಅನಿಸುತ್ತದೆ? ಅವರ ಪ್ರಕಾರ ‘ಹೊಲಗೇರಿ’ ಎಂದರೆ ಕಸ ಎಂದರ್ಥ! ಏಕೆಂದರೆ ಸಂಪಾದಕರ ಈ ಕೃತ್ಯದ ವಿರುದ್ಧ ಬಹುಜನ ಸಮಾಜ ಪಕ್ಷದ ಮುಖಂಡರು ಮೈಸೂರಿನ ಕೆ.ಆರ್.ಪೋಲಿಸ್ ಠಾಣೆಯಲ್ಲಿ ನವೆಂಬರ್ 11ರಂದು ಜಾತಿ ನಿಂದನೆ ದೂರು ದಾಖಲಿಸಿದಾಗ ಆ ಠಾಣೆಯ ಇನ್ಸ್ ಪೆಕ್ಟರ್ ಶ್ರೀನಿವಾಸ್ ಎಂಬವರು ದಿನಾಂಕ 29-11-2010 ರಂದು ನೀಡಿದ ಹಿಂಬರಹದ ವಿವರಣೆ ಏನು ಗೊತ್ತೆ? ಹೊಲಗೇರಿ ಎಂಬ ಪದವನ್ನು ಕಸಕ್ಕೆ ಸಮನಾಗಿ ಉಪಯೋಗಿಸಿ ಬರೆಯಲಾಗಿದೆ. ಅದರಲ್ಲಿ ತಪ್ಪೇನಿಲ್ಲ ಎಂದು!


ಹೇಗಿದೆ ನೋಡಿ ಇವರ ವರಸೆ! ಹೊಲಗೇರಿ ಎಂದರೆ ಕಸವಂತೆ! ಇನ್ನೊಂದಿಷ್ಟು ದಿನ ಹೀಗೆ ಮುಂದುವರಿದರೆ ಹೊಲಗೇರಿಯನ್ನು ಬರಿ ಕಸ ಎಂದಲ್ಲ ಕಾಲಕಸ ಎಂದು ಹಿಂಬರಹ ನೀಡ ಲೂ ಇವರು ಹಿಂಜರಿಯುವುದಿಲ್ಲ! ಹೊಲಗೇರಿ ಯೇನೊ ಕಸ ಸರಿ. ಹಾಗಿದ್ದರೆ ಬ್ರಾಹ್ಮಣಕೇರಿ, ಒಕ್ಕಲಗೇರಿ ಇತ್ಯಾದಿ ಕೇರಿಗಳೆಲ್ಲಾ ಏನು? ವೇಶ್ಯಾಗೃಹಗಳೇ? ಇದನ್ನು ಓದಿದರೆ ಕೆಲವರಿಗೆ ಆಘಾತವಾಗಬಹುದು. ಪ್ರಶ್ನೆಯೇನೆಂದರೆ ಅಂತಹದ್ದೆ ಆಘಾತ ‘ಹೊಲೆಯ’ ಸಮುದಾ ಯಕ್ಕೆ ಆಗುತ್ತದೆ ಎಂಬ ಸಣ್ಣ ಪರಿಜ್ಞಾನ ‘ಹೊಲಗೇರಿ’ ಎಂದು ಬರೆದ ಆ ಸಂಪಾದಕರಿಗೆ ಇರುವುದು ಬೇಡವೇ? ಅಥವಾ ಅವರ ಪ್ರಕಾರ ಶೋಷಿತರೇನು ಬಿಟ್ಟಿಗೆ ಬಿದ್ದಿದ್ದಾದರೆಯೇ? ಏನು ಹೇಳಿದರೂ ನಡೆಯುತ್ತದೆ ಎನ್ನಲಿಕ್ಕೆ?


ಅಂದಹಾಗೆ ಶೋಷಿತ ಸಮುದಾಯಗಳನ್ನು ಹೀಗೆ ಕೀಳಾಗಿ ಚಿತ್ರಿಸುವ ಇಂತಹ ಚಾಳಿ ಇದಿಷ್ಟಕ್ಕೆ ಸೀಮಿತವಾಗುವುದಿಲ್ಲ. ಸಿನಿಮಾ, ನಾಟಕ, ಸಾಹಿತ್ಯ ಇಲ್ಲೆಲ್ಲಾ ಆಗಾಗ ನಡೆಯುತ್ತಲೇ ಇರುತ್ತದೆ. ಉದಾಹರಣೆಗೆ ಕೆಲದಿನಗಳ ಹಿಂದೆ ‘ಈ ಟೀವಿ’ಯಲ್ಲಿ ಪ್ರಸಾರವಾಗುವ ‘‘ಮನೆ ಯೊಂದು ಮೂರು ಬಾಗಿಲು’’ ಎಂಬ ಧಾರಾವಾಹಿಯಲ್ಲಿ ಆ ಧಾರವಾಹಿಯ ಮುಖ್ಯ ಪಾತ್ರ ಧಾರಿಯೊಬ್ಬರು ಆ ಧಾರಾವಾಹಿಯಲ್ಲಿ ಬರುವ ಖಳ ಪಾತ್ರಧಾರಿಯೊಬ್ಬರ ಬಗ್ಗೆ ಮಾತನಾಡುತ್ತಾ ಕುಟುಂಬದಲ್ಲಿ ಹೀಗೆಯೇ ಒಂದಿಬ್ಬರು ಸೇರಿಕೊಂಡು ಇಡೀ ಕುಟುಂಬವನ್ನು ಹೊಲಗೇರಿ ಮಾಡುತ್ತಾರೆ ಎಂದರು!


ಮತ್ತೊಂದು ಉದಾಹರಣೆ ಹೇಳುವುದಾದರೆ ದಿವಂಗತ ರಾಷ್ಟ್ರ ಕವಿ ಗೋವಿಂದ ಪೈಯವರು ತಮ್ಮ ‘‘ಹೊಲೆಯರು ಯಾರು?’’ ಎಂಬ ಕವನ ದಲ್ಲಿ ‘‘ಇಬ್ಬರಾಡುವ ಮಾತು ಕದ್ದು ಕೇಳುವವ ಹೊಲೆಯ, ಹೊಲಸು ತಿಂಬವ ಹೊಲೆಯ....’’ ಹೀಗೆ ಹೊಲೆಯರು ಯಾರು ಎಂಬುದನ್ನು ವರ್ಣಿಸುತ್ತಾ, ಪರೋಕ್ಷವಾಗಿ ಹೊಲೆಯರೇ ಹೀಗೆ ಮಾಡುವವರು ಎಂದು ಬರೆದಿದ್ದರು! ದುರಂತವೆಂದರೆ ಈ ಪದ್ಯವನ್ನು ಪಠ್ಯ ಪುಸ್ತಕದಲ್ಲಿ ಪಠ್ಯವಾಗಿಯೂ ಕೂಡ ಅಳವಡಿಸಲಾಗಿತ್ತು!


ಸಾಹಿತ್ಯದಲ್ಲಿ ‘ಹೊಲೆಯ’ರನ್ನು ಕೀಳಾಗಿ ಕಾಣುವ ಪರಿಪಾಠ ಇಲ್ಲಿಗೇ ನಿಲ್ಲುವುದಿಲ್ಲ. ಈ ಕೆಳಗಿನ ಪುರಂದರದಾಸರ ಕೀರ್ತನೆ ನೋಡಿ. ದಾಸ ಸಾಹಿತ್ಯದಲ್ಲಿಯೂ ಕೂಡ ಅಂತಹ ಚಾಳಿ ಹೇಗೆ ಬೆಳೆದುಬಂದಿತ್ತೆಂಬುದಕ್ಕೆ.
ಹೊಲೆಯ ಬಂದಾನೆಂದು ಒಳಗೆ ದೇವರ ಮಾಡಿ ಘಣಘಣ ಘಂಟೆ ಬಾರಿಸುತ
ತನುವಿನ ಕೋಪ ಹೊಲೆಯಲ್ಲವೇನಯ್ಯ
ಮನಸಿನ ವಂಚನೆ ಹೊಲೆಯಲ್ಲವೇನಯ್ಯ
ಇಂಥಾ ಹೊರಗಿದ್ದ ಹೊಲೆಯನ್ನೆ ಒಳಗೆ ತುಂಬಿಟ್ಟುಕೊಂಡು
ಇದಕ್ಕೇನು ಮದ್ದು ಶ್ರೀ ಪುರಂದರವಿಠಲ
ಹೀಗೆ ಸಾಗುತ್ತದೆ ಕನ್ನಡ ಸಾಹಿತ್ಯದಲ್ಲಿ ‘ಹೊಲೆಯ’ ಎಂಬ ಪದವನ್ನು ಬೇಕಾಬಿಟ್ಟಿ ಯಾಗಿ ಬಳಸುವ ಚಾಳಿ.


ವಾಸ್ತವವಾಗಿ ಹೇಳುವುದಾದರೆ ‘ಹೊಲ ಗೇರಿ’ ಎಂದರೆ ‘ಹೊಲೆಯ’ರು ವಾಸಿಸುವ ಕೇರಿ ಅಥವಾ ಬೀದಿ ಎಂದರ್ಥ. ಹೀಗಿರುವಾಗ ಅದು ಕಸ ಹೇಗಾಗುತ್ತದೆ? ಅದನ್ನು ಕಸ ಎನ್ನುವುದಾದರೆ ಹೊಲಗೇರಿ ಎಂಬ ಆ ಇಡೀ ಬೀದಿ ಅಥವಾ ಕೇರಿಯೇ ಕಸಕ್ಕೆ ಸಮ ಎಂದು ಅರ್ಥ! ಒಂದು ಸಮುದಾಯವನ್ನು ಜೀತಗಾರಿಕೆಗೆ ತಳ್ಳಲು, ನಿರಂತರ ಮಾನಸಿಕ ಗುಲಾಮಗಿರಿಗೆ ನೂಕಲು ಇದಿಷ್ಟು ಮಾತ್ರ ಸಾಕು.

ಸಿಂಪಲ್, ಆ ಸಮುದಾಯದ ಹೆಸರಿನ ಅರ್ಥವನ್ನು ಕೀಳು ಎಂದು ಬಿಂಬಿಸುವುದು. ಹೊಲಸು ಎಂದು ತುಚ್ಛೀಕರಿಸುವುದು! ತನ್ಮೂ ಲಕ ಅವರಲ್ಲಿ ತಮ್ಮ ಸಮುದಾಯದ ಬಗ್ಗೆಯೇ ಕೀಳರಿಮೆ ಹುಟ್ಟುವಂತೆ ಮಾಡುವುದು! ಇನ್ನು ಆ ಸಮುದಾಯ ಇತಿಹಾಸದಲ್ಲಿ ತಲೆ ಎತ್ತಿ ಹೇಗೆ ಬಾಳಲು ಸಾಧ್ಯ? ಬ್ರಾಹ್ಮಣವಾದದ ಇಂತಹ ಕ್ರೂರ ಹುನ್ನಾರ ನಿಜಕ್ಕೂ ದಿಗ್ಭ್ರಮೆ ಗೊಳಿಸುವಂತಹದ್ದು!


ಹಾಗಿದ್ದರೆ ಬ್ರಾಹ್ಮಣರಿಂದ ಕಸ, ಹೊಲಸು ಎಂದು ಕರೆಸಿಕೊಳ್ಳುವ ಹೊಲಗೇರಿ ಮತ್ತು ಅಲ್ಲಿ ವಾಸಿಸುವ ‘ಹೊಲೆಯ’ ಸಮುದಾಯದ ಇತಿ ಹಾಸ ಅಷ್ಟೊಂದು ಹೀನವಾದುದೇ? ಖಂಡಿತ ಇಲ್ಲ. ಹೀನದ ಪ್ರಶ್ನೆ ಒತ್ತಟ್ಟಿಗಿರಲಿ, ವಾಸ್ತವ ವೆಂದರೆ ‘ಹೊಲೆಯ’ರು ಈ ದೇಶದ ಮೂಲ ನಿವಾಸಿಗಳಾಗಿದ್ದವರು.

‘ಹೊಲೆಯ’ ಎಂದರೆ ‘‘ಹೊಲದ ಒಡೆಯ’’ ಎಂದರ್ಥವೇ ಹೊರತು ಹೊಲಸು ತಿಂದವ ಎಂದಲ್ಲ! ಏಕೆಂದರೆ ‘ಹೊಲೆಯ’ ಎಂಬ ಪದದ ಮೂಲ ‘ಹೊಲ’ವೇ ಹೊರತು ಹೊಲಸು ಎಂದಲ್ಲ. ಇದಕ್ಕೆ ಸಾಕ್ಷಿ ಯಾಗಿ ಕರ್ನಾಟಕ ಗೆಜೆಟಿಯರ್ (vol 3, Castes and tribes in mysore) ನಲ್ಲಿ Holeya means owner of land ಎಂದಿದೆ. ಅಲ್ಲದೆ 1901 ರ ಜನಗಣತಿ ವರದಿ ಹೀಗೆ ಹೇಳುತ್ತದೆ, HOLA is the canarese name for a dry crop field and HOLEYA means man of such field! ಹೀಗಿರುವಾಗ ‘ಹೊಲೆಯ’ ಎಂದರೆ ಹೊಲಸು ಹೇಗಾಗುತ್ತದೆ?


ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್‌ರ ಪ್ರಕಾರ ಮಾದಿಗ, ಹೊಲೆಯ, ಸಮಗಾರ, ಚಮ್ಮಾರ, ಛಲವಾದಿ, ಮಹಾರ್, ಮಾಲ, ಪರಯ್ಯಾ ಇತ್ಯಾದಿ ಅಸ್ಪಶ್ಯ ಸಮುದಾಯಗಳು ಪುರಾತನ ನಾಗವಂಶಕ್ಕೆ ಸೇರಿದವರು. ಸುಪ್ರಸಿದ್ಧ ಸಿಂಧೂ ನದಿಯ ನಾಗರಿಕತೆಯನ್ನು ಕಟ್ಟಿದವರು ಇದೇ ನಾಗ ಜನರು. ನಾಗ ಜನರು ವಾಸಿಸುತ್ತಿದ್ದ ಸ್ಥಳಗಳನ್ನು ‘‘ನಗರ’’ಗಳೆಂದು ಕರೆಯಲಾಗುತ್ತಿತ್ತು.


‘‘ನಾಗಜನರ’’ ಸುಂದರ ಜೀವನ ಶೈಲಿಯೇ ‘‘ನಾಗರಿಕತೆ’’ ಎನಿಸಿಕೊಂಡಿತ್ತು ಮತ್ತು ನಗರ ವಾಸಿ ನಾಗ ಜನರನ್ನು ‘‘ನಾಗರಿಕ’’ ಎನ್ನಲಾಗುತ್ತಿತ್ತು. ವಸ್ತುಸ್ಥಿತಿ ಹೀಗಿರುವಾಗ, ಅಂದರೆ ನಾಗರಿಕತೆಯ ಮೂಲವಾರಸುದಾರ ರಾದ ನಾಗಜನರು ಆಧುನಿಕ ‘ಹೊಲೆಯ’ರಾಗಿ ರುವಾಗ ಅವರು ‘‘ಕಸ’’ ಅಥವಾ ‘‘ಹೊಲಸು’’ ಹೇಗಾಗುತ್ತಾರೆ?


ಹಾಗಿದ್ದರೆ ಬ್ರಾಹ್ಮಣರು ನಾಗವಂಶಸ್ಥರಾದ ‘ಹೊಲೆಯ’ರನ್ನು ಹಾಗೆ ಕೀಳಾಗಿ ಕಾಣಲು ಕಾರಣವಾದರೂ ಏನು? ಖ್ಯಾತ ಅಂಬೇಡ್ಕರ್ ವಾದಿ ಎಂ. ಗೋಪಿನಾಥ್‌ರವರು ತಮ್ಮ ‘‘ನಾಗ ಲೋಕ’’ ಕೃತಿಯಲ್ಲಿ ಇದಕ್ಕೆ ಹೀಗೆ ವಿವರಣೆ ನೀಡುತ್ತಾರೆ. ಅದೇನೆಂದರೆ ಕ್ರಿ,ಪೂ.2000ನೆ ವರ್ಷದ ಸುಮಾರಿನಲ್ಲಿ ಬಿಳಿ ತೊನ್ನಿನಂತೆ ತೊಗಲು ಹೊಂದಿದ್ದ ಆರ್ಯರು ಎಂಬ ಅಲೆ ಮಾರಿ ತಂಡವೊಂದು ನಾಗಮಂಡಲ (ಭಾರತ) ಕ್ಕೆ ದನಕಾಯುತ್ತಾ ಅನ್ನ, ನೀರು ಹುಡುಕಿಕೊಂಡು ಬಂದಿತು.


ಆ ಆರ್ಯರೇ ಬ್ರಾಹ್ಮಣ, ಬನಿಯಾಗಳ ಪೂರ್ವಿಕರು. ನಾಗ ಜನಾಂಗದ ಅಸುರ, ರಾಕ್ಷಸ, ದಾನವ ರಾಜರುಗಳು ಮಹಾ ಕರುಣಾಮಯಿಗಳಾಗಿದ್ದರು. ಅವರು ಆ ಪರದೇಶಿ ಆರ್ಯರಿಗೆ ಅನ್ನ ನೀರು ನೀಡಿದ್ದಲ್ಲದೆ ತಮ್ಮ ರಾಜ್ಯಗಳಲ್ಲಿ ತಂಗುವುದಕ್ಕೂ ಅವಕಾಶ ಮಾಡಿಕೊಟ್ಟರು. ಭೂಮಿಯ ಒಡೆಯರಾದ ನಾಗ ಜನಾಂಗದವರು ಸ್ವತಂತ್ರವಾಗಿ ಬದುಕಲು ಆರ್ಯರಿಗೆ ಭೂಮಿ ನೀಡಿದ್ದಲ್ಲದೆ, ಹಿಂದು ಮುಂದು ಯೋಚಿಸದೆ ಅಪರಿಚಿತ ಆರ್ಯರಿಗೆ ದಯೆ ತೋರಿಸಿದರು!


ಹೀಗೆ ನಾಗ ಜನಾಂಗದವರಿಂದ ಭೂಮಿ ಮತ್ತು ಬದುಕುವ ಹಕ್ಕು ಪಡೆದ ಆರ್ಯರು ನಾಗ ಜನಾಂಗದ ರಾಜರುಗಳ ನಡುವೆ ಹುಳಿಹಿಂಡಿ, ಅವರು ಪರಸ್ಪರ ಕಚ್ಚಾಡುವಂತೆ ಮಾಡಿದ್ದು, ಅಂತಹ ಕಚ್ಚಾಡುವಿಕೆಯ ಲಾಭ ಪಡೆದು ಇಡಿ ನಾಗಮಂಡಲವನ್ನು ಆಕ್ರಮಿ ಸಿದ್ದು ಮತ್ತು ನಾಗಜನಾಂಗದ ಹಲವಾರು ಕುಲಗಳನ್ನು ಸಣ್ಣ ಪುಟ್ಟ ಜಾತಿಗಳಾಗಿ ವಿಂಗಡಿಸಿ ಜಾತಿ ಎಂಬ ವಿಷದ ಬೀಜವ ಬಿತ್ತಿದ್ದು ಈಗ ಇತಿಹಾಸ.


ಅಂದಹಾಗೆ ನಾಗವಂಶದ ರಾಜರುಗಳನ್ನು ಅಸುರ ಎಂದರೆ ಸುರೆಯನ್ನು ಕುಡಿಯದವ, ರಾಕ್ಷಸ ಎಂದರೆ ರಕ್ಷಿಸುವವ, ದಾನವ ಎಂದರೆ ದಾನ ನೀಡುವವ ಎನ್ನಲಾಗುತ್ತಿತ್ತು. ಆದರೆ ಆರ್ಯರು ಆ ಪದಗಳಿಗೆ ಕೆಟ್ಟ ಕಥೆಗಳನ್ನು ಕಟ್ಟಿ ಅವರನ್ನು ಕ್ರೂರಿಗಳು ಎಂದು ಪ್ರಚಾರ ಮಾಡಿ ದರು ಮತ್ತು ಅವರನ್ನು ಮೋಸದಿಂದ ಕೊಂದ ತಮ್ಮನ್ನು ದೇವತೆಗಳು ಎಂದು ಕರೆದುಕೊಂಡರು! ಶಾಂತಿ ಸೌಹಾರ್ದತೆಯ ನಾಡಾಗಿದ್ದ ನಾಗ ಮಂಡಲದಲ್ಲಿ ಪ್ರಾಣಿಬಲಿ ಯಜ್ಞ ಯಾಗಾದಿ ಗಳು ಪ್ರಾರಂಭವಾದವು. ದನ ಕಾಯುತ್ತಾ ಬಂದ ಆರ್ಯರು ದನದ ಮಾಂಸ ತಿನ್ನುತ್ತಿದ್ದದ್ದು ಈ ಸಂದರ್ಭದಲ್ಲೇ! ಅನೈತಿಕತೆ, ಅರಾಜಕತೆ ಈ ಸಂದರ್ಭದಲ್ಲಿ ತಾಂಡವವಾಡುತ್ತಿತ್ತು.


ಇಷ್ಟೆಲ್ಲಾ ಆದರೂ ನಾಗಜನಾಂಗದಲ್ಲಿ ಇನ್ನೂ ಆ ಸಾತ್ವಿ ಕತೆ, ಹೋರಾಟದ ಕೆಚ್ಚು ಮಾಯವಾಗಿರಲಿಲ್ಲ. ಈ ಸಂಧರ್ಭಲ್ಲಿಯೇ ಕ್ರಿ.ಪೂ. 584 ರಲ್ಲಿ ನಾಗಜನಾಂಗದ ಶಾಕ್ಯ ಕುಲದಲ್ಲಿ ಭಗವಾನ್ ಗೌತಮಬುದ್ಧ ಜನಿಸಿದ್ದು. ಬುದ್ಧನ ನಂತರ ಆರ್ಯರ ಪ್ರಭಾವ ತುಸು ಕಡಿಮೆಯಾಯಿತು. ನಾಗ ಜನಾಂಗದ ಪಾರುಪತ್ಯ ಮತ್ತೆ ಹೆಚ್ಚಿತು. ಮುಂದೆ ಸಿಸುನಾಗ ವಂಶಕ್ಕೆ ಸೇರಿದ ಚಂದ್ರ ಗುಪ್ತ ಮೌರ್ಯನು ಮೌರ್ಯ ಸಂತತಿ ಸ್ಥಾಪಿಸಿ ದ್ದು, ಆ ಸಂತತಿಯ ಶ್ರೇಷ್ಠ ಚಕ್ರವರ್ತಿ ಸಾಮ್ರಾ ಟ ಅಶೋಕನು ಬೌದ್ಧ ಧರ್ಮವನ್ನು ಜಗತ್ತಿನಾದ್ಯಂತ ಹರಡಿದ್ದು ನಾಗಜನರ ಪಾಬಲ್ಯಕ್ಕೆ ಪ್ರಬಲ ಉದಾಹರಣೆ.


ಆದರೆ ಕ್ರಿ.ಪೂ. 185ರಲ್ಲಿ ಮೌರ್ಯ ವಂಶದ ಕೊನೆಯ ದೊರೆ ಬೃಹದ್ರಥ ಮೌರ್ಯನನ್ನು ಶುಂಗ ಬ್ರಾಹ್ಮಣನಾದ ಪುಷ್ಯಮಿತ್ರ ಶುಂಗನು ಸಂಚು ಮಾಡಿ ಕೊಂದು ಆ ಮೂಲಕ ಬ್ರಾಹ್ಮಣರ ಆಳ್ವಿಕೆಗೆ ಅಡಿಗಲ್ಲಿಟ್ಟದ್ದು ಭಾರತದ ಇತಿಹಾಸದ ಬಹುದೊಡ್ಡ ದುರಂತ. ವಿಶೇಷವಾಗಿ ಅಸ್ಪಶರ ದೃಷ್ಟಿಯಲ್ಲಿ. ಏಕೆಂದರೆ ಸಾವಿರಾರು ಬೌದ್ಧ ಭಿಕ್ಷುಗಳ ತಲೆ ಕಡಿಸಿ, ಸುಮತಿ ಭಾರ್ಗವನೆಂಬ ಬ್ರಾಹ್ಮಣನಿಂದ ಕುಖ್ಯಾತ ‘‘ಮನುಸ್ಮತಿ’’ ಬರೆಸಿದ್ದು ಈ ಕಾಲದಲ್ಲೇ ಅದಕ್ಕೆ.


ಮುಂದೆ ಕ್ರಿ.ಶ.4ನೆ ಶತಮಾನದಲ್ಲಿ ಸಮುದ್ರಗುಪ್ತನ ಕಾಲದಲ್ಲಿ ಬೌದ್ಧ ಧರ್ಮ ಮತ್ತು ಬೌದ್ಧ ಭಿಕ್ಕುಗಳ ಮೇಲೆ ಇನ್ನಿಲ್ಲದ ದಬ್ಬಾಳಿಕೆ ನಡೆಸಿ, ಆ ಧರ್ಮದ ಅನುಯಾಯಿ ಗಳಾದ ನಾಗಜನಾಂಗದವರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿ ಅಸ್ಪಶರನ್ನಾಗಿ ಮಾಡಲಾಯಿತು. ತನ್ಮೂಲಕ ನಾಗ ಜನಾಂಗವೆಂಬ ಮೂಲ ಬೌದ್ಧರನ್ನು ಇತಿಹಾಸದ ಮೂಲೆಗೆ ತಳ್ಳಲಾಯಿತು.


ಒಂದಂತು ನಿಜ, ಒಂದು ಕಾಲದಲ್ಲಿ ರಾಜರಾಗಿ, ಬೌದ್ಧ ಧರ್ಮವೆಂಬ ಪ್ರಬಲ ಧರ್ಮದ ಸ್ಥಾಪನೆಗೆ ಕಾರಣರಾಗಿ ಹಾಲಿ ಅಸ್ಪಶರಾಗಿರುವ ಹೊಲೆಯರ ಇತಿಹಾಸ ಇಷ್ಟೊಂದು ಭವ್ಯವಾಗಿರಬೇಕಾದರೆ ಅವರು ‘‘ಕಸ’’ ಅಥವಾ ‘‘ಹೊಲಸು’’ ಹೇಗಾಗುತ್ತಾರೆ? ಅಂದಹಾಗೆ ಅಸ್ಪಶರ ಈ ಭವ್ಯ ಇತಿಹಾಸವನ್ನು ಹೆಕ್ಕಿ ತೆಗೆದದ್ದು ನಾಗ ಜನಾಂಗದ ಆಧುನಿಕ ಯುಗದ ಪ್ರತಿನಿಧಿಯಾದ ಬಾಬಾಸಾಹೇಬ್ ಅಂಬೇಡ್ಕರ್. ತಮ್ಮ ‘‘ಅಸ್ಪಶ್ಯರು ಯಾರು?’’ ಎಂಬ ಕೃತಿಯಲ್ಲಿ ಅಂಬೇಡ್ಕರ್ ‘‘ಅನಾರ್ಯರಾದ ನಾಗರಿಗೂ, ಅರ್ಯರಿಗೂ ಭೀಕರ ಶತ್ರುತ್ವವಿತ್ತು. ನಾವು(ಅಸ್ಪಶರು) ಅನಾರ್ಯರಾದ ನಾಗವಂಶದ ಪೀಳಿಗೆಯವರಾಗಿದ್ದೇವೆ. ಇದೇ ನಾಗ ಜನರೇ ಜಗತ್ತಿನಾದ್ಯಂತ ಬೌದ್ಧ ಧರ್ಮವನ್ನು ಹರಡಿದವರು’’ ಎನ್ನುತ್ತಾರೆ.


ಅಸ್ಪಶ ಜಾತಿಗಳನ್ನು ಭಾರತ ದಾದ್ಯಂತ ‘ಆದಿಕರ್ನಾಟಕ’, ‘ಆದಿಆಂಧ್ರ’, ‘ಆದಿಕೇರಳ’ ಎನ್ನುತ್ತಾರೆ. ಇದರ ಅರ್ಥವಾದರೂ ಏನು? ಆ ಜನರು ಅಲ್ಲಿಯ ಮೂಲನಿವಾಸಿಗಳೆಂದೇ ಹೊರತು ಬೇರೇನಲ್ಲ! ಕಡೆಯದಾಗಿ ಬಾಬಾಸಾಹೇಬ್ ಅಂಬೇಡ್ಕರ್ ಒಂದೆಡೆ ಹೀಗೆ ಹೇಳುತ್ತಾರೆ. "I am proud of my caste mahar, in which I was born'' . ಅಂದರೆ ‘‘ನಾನು ಜನಿಸಿದ ಮಹಾರ್ ಜಾತಿಯ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ’’ ಈ ನಿಟ್ಟಿನಲ್ಲಿ ಬಾಬಾಸಾಹೇಬರ ಅನು ಯಾಯಿಗಳಾದ ನಾವು (‘ಹೊಲೆಯ’ರು) ಕೂಡ ‘‘ನಾವು ಜನಿಸಿದ ‘ಹೊಲೆಯ’ ಜಾತಿಯ ಬಗ್ಗೆ, ನಾವು ಹೆಮ್ಮೆ ಪಡುತ್ತೇವೆ’’ ಎಂದು ಘಂಟಾಘೋಷವಾಗಿ ಹೇಳುತ್ತೇವೆ.

ಏಕೆಂದರೆ ಬಾಬಾಸಾಹೇಬರ ಅಂತಹ ಆತ್ಮವಿಶ್ವಾಸ ತುಂಬಿದ ಮಾತುಗಳ ಅನುಕರಣೆಯಷ್ಟೆ ಅಸ್ಪಶರಾದ ನಮಗೆ ನವ ಚೈತನ್ಯ ತುಂಬಲು ಸಾಧ್ಯ. ‘ಹೊಲಸು’ ‘ಕಸ’ ಎಂಬ ಗೊಡ್ಡು ಬ್ರಾಹ್ಮಣ್ಯವಲ್ಲ. 

ಬುಧವಾರ - ಡಿಸೆಂಬರ್-15-2010
By: H B Raghothama
Chamarajanagar
___
Courtesy : Varthabharathi


1 comment:

html