Pages

Tuesday 1 November 2011

ಬಿಎಸ್‌ವೈ ಭೂ ಹಗರಣದಲ್ಲಿ ಸಂಘಪರಿವಾರಕ್ಕೆ ಸಿಂಹ ಪಾಲು : ಆರೆಸೆಸ್ಸ್ ನಾಯಕರು, ಸಂಸ್ಥೆಗಳಿಗೆ 50 ಕೋಟಿ ರೂ. ವೌಲ್ಯದ ಭೂಮಿ ಪರಭಾರೆ

ಬುಧವಾರ - ನವೆಂಬರ್ -02-2011

ಬೆಂಗಳೂರು, ನ.1: ಭ್ರಷ್ಟಾಚಾರ, ಭೂ ಹಗರಣದ ಆರೋಪಗಳನ್ನು ಹೊತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಇತರ ಬಿಜೆಪಿ ಮುಖಂಡರು ಸಾಲಾಗಿ ಜೈಲಿಗೆ ಸೇರುತ್ತಿರುವ ಈ ಸಂದರ್ಭದಲ್ಲೇ ಸಂಘಪರಿವಾರಕ್ಕೂ ಭ್ರಷ್ಟತೆಯಲ್ಲಿ ಸಿಂಹ ಪಾಲು ದಕ್ಕಿರುವುದನ್ನು ‘ಮೇಲ್ ಟುಡೆ’ ಪತ್ರಿಕೆ ವರದಿ ಮಾಡಿದೆ. ರಾಜ್ಯ ಸರಕಾರದ ವಿವಿಧ ಪ್ರಾಧಿಕಾರ, ಮಂಡಳಿಗಳಿಗೆ ಅರ್ಜಿ ಸಲ್ಲಿಸಿ ನಿವೇಶನಕ್ಕಾಗಿ ಸುಮಾರು 3.50 ಲಕ್ಷ ಮಂದಿ ಕಾದು ಕುಳಿತಿದ್ದಾರೆ. ಆದರೆ, ಈ ಬಗ್ಗೆ ಗಮನ ಹರಿಸದ ಯಡಿಯೂರಪ್ಪ, ತನ್ನ ಅಧಿಕಾರಾವಧಿಯಲ್ಲಿ ಸುಮಾರು 50 ಕೋಟಿ ರೂ. ವೌಲ್ಯದ ವಾಣಿಜ್ಯ ಭೂಮಿ ಹಾಗೂ ನಿವೇಶನಗಳನ್ನು ಸಂಘ ಪರಿವಾರದ ಆರು ಅಧೀನ ಸಂಸ್ಥೆಗಳು ಹಾಗೂ 7 ಮುಖಂಡರಿಗೆ ದಯಪಾಲಿಸಿದ್ದಾರೆ ಎನ್ನುವ ವಿವರವನ್ನು ಈ ಪತ್ರಿಕೆ ಬಹಿರಂಗಪಡಿಸಿದೆ.
ಬಿಡಿಎ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಸಂಘಪರಿವಾರದ ಅಧೀನ ಸಂಸ್ಥೆಗಳಾದ ರಾಷ್ಟ್ರೋತ್ಥಾನ ಪರಿಷತ್, ಜನ ಸೇವಾ ವಿದ್ಯಾ ಕೇಂದ್ರ, ಸಂಸ್ಕಾರ ಭಾರತಿ, ಹಿಂದೂ ಜಾಗರಣ ವೇದಿಕೆ, ಮಹಿಳಾ ದಕ್ಷತಾ ಸಮಿತಿ ಹಾಗೂ ಅನಂತ ಶಿಶು ನಿವಾಸಗಳಿಗೆ ಕೋಟ್ಯಂತರ ರೂ. ವೌಲ್ಯದ ಭೂಮಿಯನ್ನು ಕೇವಲ ಒಂದರಿಂದ ಎರಡು ಲಕ್ಷ ರೂ. ಗಳಿಗೆ ಮಂಜೂರು ಮಾಡಲಾಗಿದೆ ಎಂದು ಆಂಗ್ಲ ಪತ್ರಿಕೆ ‘ಮೇಲ್ ಟುಡೆ’ ವರದಿ ಮಾಡಿದೆ.
ಬಿಜೆಪಿಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಸಂಘ ಪರಿವಾರದ ಋಣ ತೀರಿಸಲು, ತನ್ನ ಕುರ್ಚಿಯನ್ನು ಉಳಿಸಿ ಕೊಳ್ಳಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಅಧಿಕಾರ ವಧಿಯಲ್ಲಿ ಸರಕಾರದ ಸಂಸ್ಥೆಗಳಿಂದ ಕಡಿಮೆ ಬೆಲೆಯಲ್ಲಿ ಭೂಮಿ ಮಂಜೂರಾಗುವಂತೆ ಮಾಡಿದ್ದಾರೆ ಎನ್ನಲಾಗಿದೆ.  ಯಡಿಯೂರಪ್ಪ ಕೃಪೆಗೆ ಪಾತ್ರವಾಗಿರುವ ಪ್ರಮುಖ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್‌ಗೆ 13 ಕೋಟಿ ರೂ.ವೌಲ್ಯದ 906.2 ಚದರ ಮೀಟರ್ ಜಮೀನನ್ನು ಬಿಡಿಎ ಮೂಲಕ ಮಂಜೂರು ಮಾಡಲಾಗಿದೆ. ಜನಸೇವಾ ವಿದ್ಯಾಕೇಂದ್ರಕ್ಕೆ ಬೆಂಗಳೂರು ಹೊರ ವಲಯದಲ್ಲಿ 15 ಕೋಟಿ ರೂ.ವೌಲ್ಯದ 10 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ.
ಸಂಸ್ಕಾರ ಭಾರತಿಗೆ 2.5 ಕೋಟಿ ರೂ.ವೌಲ್ಯದ 2 ಸಾವಿರ ಚ.ಅಡಿ ಹಾಗೂ ಹಿಂದೂ ಜಾಗರಣ ವೇದಿಕೆಗೆ 2.5 ಕೋಟಿ ರೂ.ವೌಲ್ಯದ 2 ಸಾವಿರ ಚ.ಅಡಿ, ಮಹಿಳಾ ದಕ್ಷತಾ ಸಮಿತಿಗೆ ವಿದ್ಯಾರಣ್ಯಪುರದಲ್ಲಿ 2.5 ಕೋಟಿ ರೂ.ವೌಲ್ಯದ 396 ಚ.ಮೀ ಹಾಗೂ ಅನಂತ ಶಿಶು ನಿವಾಸಕ್ಕೆ ಪೂರ್ಣ ಪ್ರಜ್ಞಾ ಗೃಹ ನಿರ್ಮಾಣ ಸಹಕಾರ ಸಂಘದ 2.5 ಕೋಟಿ ರೂ.ವೌಲ್ಯದ 3,585 ಚ.ಅಡಿ ಭೂಮಿ ಲಭ್ಯವಾಗುವಂತೆ ಮಾಡಲಾಗಿದೆ.

ಕ್ರೀಡೆ, ಸಂಸ್ಕೃತಿ, ಕಲೆ ಹಾಗೂ ಸಾಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗಾಗಿ ಮೀಸಲಿಟ್ಟಿದ್ದ ‘ಜಿ’ ಕೆಟಗರಿಯ ನಿವೇಶನಗಳನ್ನು ಸಂಘಪರಿವಾರದವರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಅಲ್ಲದೆ, ಆರೆಸೆಸ್ಸ್ ನಾಯಕ, ಭಾರತೀಯ ಮಜ್ದೂರ್ ಸಂಘದ ಉಪಾಧ್ಯಕ್ಷ ಡಿ.ಕೆ.ಸದಾಶಿವ ನಗರದ ವಲ್ಗೇರಹಳ್ಳಿಯಲ್ಲಿ ಸುಮಾರು 1 ಕೋಟಿ ರೂ. ಬೆಲೆ ಬಾಳುವ 2400 ಚ.ಅಡಿ ನಿವೇಶನವನ್ನು ಕೇವಲ 10 ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ. ಪುತ್ತೂರಿನ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಪತಿ, ದಕ್ಷಿಣ ಕನ್ನಡ ಜಿಲ್ಲಾ ಆರೆಸೆಸ್ಸ್‌ನ ಪ್ರಚಾರಕ ಪ್ರಸಾದ್ ಭಾರತಿ ಜೆ.ಪಿ.ನಗರದಲ್ಲಿ 4 ಕೋಟಿ ರೂ. ಮೊತ್ತದ 4000 ಅಡಿ ವಿಸ್ತೀರ್ಣದ ನಿವೇಶನವನ್ನು ಕಡಿಮೆ ಬೆಲೆಗೆ ಖರೀದಿಸಿದ್ದಾರೆ.
ಬೆಂಗಳೂರಿನ ಆರೆಸೆಸ್ಸ್ ಕಾರ್ಯಕರ್ತ ಶ್ರೀಧರ್ ಪಾಟ್ಲ್ಲ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ 1.20 ಕೋಟಿ ರೂ.ಮೊತ್ತದ 400 ಚ.ಅಡಿ ನಿವೇಶನವನ್ನು 10 ಲಕ್ಷ ರೂ.ಗಳಿಗೆ ಖರೀದಿ ಮಾಡಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್‌ನ ಪಿ.ಮಾಲತಿ ಎಂಬವರು ಎಚ್‌ಎಸ್‌ಆರ್ ಲೇಔಟ್‌ನಲ್ಲಿ 1200 ಚ.ಅಡಿ ಜಮೀನು ಖರೀದಿಸಿದ್ದಾರೆ ಎಂದು ಪತ್ರಿಕೆ ಪ್ರಕಟಿಸಿದೆ.
ಎಚ್‌ಎಸ್‌ಆರ್ ಬಡಾವಣೆಯಲ್ಲಿ ವಿಧಾನಪರಿಷತ್ ಸದಸ್ಯ ಕೆ.ಆರ್.ಮಲ್ಲಿಕಾರ್ಜುನಪ್ಪ 4000 ಚ.ಅಡಿ ನಿವೇಶನ, ಯಡಿಯೂರಪ್ಪರ ಆಪ್ತರೆನ್ನಲಾದ ಆರೆಸ್ಸೆಸ್ ಕಾರ್ಯಕರ್ತ ಡಾ.ಬಿ.ವಿಜಯಸಂಗದೇವ 2400 ಚ.ಅಡಿ ಮತ್ತು ಶೈಲಜಾ ಶ್ರೀನಿವಾಸ್ ಎಂಬವರು 2400 ಚ.ಅಡಿ ವಿಸ್ತೀರ್ಣದ ನಿವೇಶನಗಳನ್ನು ಪಡೆದಿರುವುದು ಬಹಿರಂಗಗೊಂಡಿದೆ.

ಪುತ್ತೂರು ಶಾಸಕಿಯ ಪತಿಗೂ ನಿವೇಶನ

 ಶಾಸಕಿಯೊಬ್ಬರು ತನ್ನ ಪತಿಗೂ ಕಡಿಮೆ ಬೆಲೆಗೆ ನಿವೇಶನ ಖರೀದಿಸಿ ರುವುದನ್ನು ಪತ್ರಿಕೆ ವರದಿ ಮಾಡಿದೆ.


ಬೆಂಗಳೂರು: ಪುತ್ತೂರಿನ ಶಾಸಕಿ ಮಲ್ಲಿಕಾ ಪ್ರಸಾದ್‌ರ ಪತಿ, ದಕ್ಷಿಣ ಕನ್ನಡ ಜಿಲ್ಲಾ ಆರೆಸೆಸ್ಸ್‌ನ ಪ್ರಚಾರಕ ಪ್ರಸಾದ್ ಭಂಡಾರಿ ಜೆ.ಪಿ.ನಗರದಲ್ಲಿ 4 ಕೋಟಿ ರೂ. ವೌಲ್ಯದ 4000 ಅಡಿ ವಿಸ್ತೀರ್ಣದ ನಿವೇಶನವನ್ನು ಕಡಿಮೆ ಬೆಲೆಗೆ ಖರೀದಿಸಿದ್ದಾರೆ. ಪ್ರಸಾದ್ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರ ಮುಖ್ಯಸ್ಥರು. ಅವರು ಪುತ್ತೂರಿನಲ್ಲಿ ಕೋಮುಪ್ರಚೋದಕ ಭಾಷಣ ಮಾಡಿರುವುದಕ್ಕಾಗಿ ಭಾರೀ ಟೀಕೆಗೆ ಗುರಿಯಾಗುತ್ತಾ ಬಂದಿದ್ದಾರೆ.

No comments:

Post a Comment

html