Pages

Monday 31 October 2011

ಅಂಬೇಡ್ಕರ್ ಎಂಬ ಜ್ಯೋತಿ ಮತ್ತು ಕೋಮುವಾದ ಎಂಬ ಕೋತಿ

ಸೋಮವಾರ - ಅಕ್ಟೋಬರ್ -31-2011

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಅಸ್ತಿತ್ವಕ್ಕೆ ಬಂದು 86 ವರ್ಷಗಳು ಗತಿಸಿದರೂ ಅದು ತನ್ನದೇ ಆದ ಹೆಮ್ಮೆಪಡುವ, ಅಭಿಮಾನದಿಂದ ಹೇಳಿಕೊಳ್ಳುವ ಪರಂಪರೆಯನ್ನು ಕಟ್ಟಿಸಿಕೊಳ್ಳಲು ಅದಕ್ಕೆ ಆಗಲೇ ಇಲ್ಲ. ಇಡೀ ರಾಷ್ಟ್ರ ಒಪ್ಪಿಕೊಳ್ಳುವ ಒಬ್ಬನೇ ಒಬ್ಬ ನಾಯಕನೂ ಈ ಸಂಘದಿಂದ ಬರಲಿಲ್ಲ.ದೇಶಕ್ಕಾಗಿ, ಜನತೆಗಾಗಿ ಹೋರಾಟ ನಡೆಸಿದ ಚರಿತ್ರೆಯೂ ಇದಕ್ಕಿಲ್ಲ.ಇಡೀ ರಾಷ್ಟ್ರ ಸ್ವಾತಂತ್ರ್ಯ ಆಂದೋಲನದ ಅಗ್ನಿಕುಂಡದಲ್ಲಿದ್ದಾಗ ಈ ಕರಿಟೋಪಿ ಕೂಟ ಬ್ರಿಟಿಷರ ಆಳರಸರ ಫಲಾನುಭವಿಯಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರನ್ನು ಪೊಲೀಸರಿಗೆ ಹಿಡಿದು ಕೊಡುವುದೇ ಆಗ ಈ ಸಂಘದ ‘ರಾಷ್ಟ್ರಸೇವೆ’ಯಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಗಾಂಧೀಜಿಯವರನ್ನು ಮುಗಿಸಿದ್ದು, ಗುಜರಾತನ್ನು ರಕ್ತದಲ್ಲಿ ತೋಯಿಸಿದ್ದು, ರಥಯಾತ್ರೆ ಎಂಬ ರಕ್ತಯಾತ್ರೆ ನಡೆಸಿದ್ದು ಇವರ ಸಾಧನೆ.ಅಂತಲೇ ಸಂಘದಿಂದ ಒಬ್ಬನೇ ಒಬ್ಬ ರಾಷ್ಟ್ರನಾಯಕ ಹೊರಹೊಮ್ಮಲಿಲ್ಲ. ಉದುರಿ ಬಿದ್ದವರೆಲ್ಲ ನಾತೂರಾಮ ಗೋಡ್ಸೆ, ಆಪ್ಟೆ, ಗೋಳ್ವಲ್ಕರ್, ನರೇಂದ್ರ ಮೋದಿ, ಅಡ್ವಾಣಿ,ಬಿ.ಎಸ್.ಯಡಿಯೂರಪ್ಪ, ತೊಗಾಡಿಯಾ, ಮುತಾಲಿಕ್, ಸಾಧ್ವಿ ಪ್ರಜ್ಞಾಸಿಂಗ್‌ಳಂಥ ಕಪ್ಪೆಚಿಪ್ಪುಗಳು. ಇಂಥವರಿನ್ನುಟ್ಟುಕೊಂಡು ಜನರ ಬಳಿ ಹೋಗಲು ಅದಕ್ಕೆ ಮುಖವಿಲ್ಲ.
ವಾಜಪೇಯಿಯಂಥ ಮುಖವಾಡ ಬೇಕು. ಅಂತಲೇ ಆರ್‌ಎಸ್‌ಎಸ್, ವಿಎಚ್‌ಪಿ ಮುಂತಾದ ಸಂಘಟನೆ ಗಳು ವೇದಿಕೆಗಳ ಮೇಲೆ ತಮ್ಮ ನಾಯಕರ ಬದಲಿಗೆ ಗಾಂಧೀಜಿ, ಅಂಬೇಡ್ಕರ್, ಭಗತ್ ಸಿಂಗ್, ಕನಕದಾಸ, ನಾರಾಯಣಗುರು, ಬಸವಣ್ಣ ಮೊದಲಾದ ಸಮಾಜ ಸುಧಾರಕರ, ಕ್ರಾಂತಿಕಾರರ ಭಾವಚಿತ್ರ ಹಾಕಿ ತಮ್ಮದಲ್ಲದ ಪರಂಪರೆಯ ವಾರಸುದಾರಿಕೆಗಾಗಿ ಯತ್ನಿಸುತ್ತಲೇ ಬಂದಿದೆ.
ಆರ್‌ಎಸ್‌ಎಸ್ ಇಂಥ ಹುನ್ನಾ ರಕ್ಕೆ ಬಳಸಿಕೊಂಡ ಮಹಾಚೇತನ ಗಳಲ್ಲಿ ಡಾ. ಅಂಬೇಡ್ಕರ್ ಕೂಡ ಒಬ್ಬರು. ಒಂದೆಡೆ ಅದೇ ಪರಿವಾರದ ಚಿಂತನ ಚಿಲುಮೆ ಅರುಣ್‌ಶೌರಿ ‘ವರ್ಷಿಪಿಂಗ್ ಫಾಲ್ಸ್‌ಗಾಡ್’ ಎಂಬ ಪುಸ್ತಕ ಬರೆದು ಬಾಬಾ ಸಾಹೇಬರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಾರೆ.ಇನ್ನೊಂದೆಡೆ ಅದೇ ಸಂಘದ ಇನ್ನೊಂದು ಚಿಂತನ ಚಿಲುಮೆ ದತ್ತೋಪಂತ ಠೇಂಗಡಿ ‘ಸಾಮಾಜಿಕ ಕ್ರಾಂತಿಸೂರ್ಯ ಅಂಬೇಡ್ಕರ್’ ಎಂಬ ಪುಸ್ತಕ ಬರೆದು ಅಂಬೇಡ್ಕರ್‌ರನ್ನು ಹಿಂದುತ್ವದ ಗಲ್ಲುಗಂಬಕ್ಕೆ ಏರಿಸುತ್ತಾರೆ.ಇವೆರಡು ಇಮ್ಮುಖ ಕುತಂತ್ರಗಳನ್ನು ಈ ದೇಶದ ಮನುವಾದಿ ಶಕ್ತಿಗಳು ಮೂರು ಸಾವಿರ ವರ್ಷದಿಂದ ನಡೆಸುತ್ತ ಬಂದಿವೆ. ಈಗಲೂ ನಿರ್ಲಜ್ಯವಾಗಿ ಮುಂದುವರಿಸಿವೆ. ಆರ್‌ಎಸ್‌ಎಸ್ ಮನುವಾದದ ಆಧುನಿಕ ರೂಪ.
ಆರ್‌ಎಸ್‌ಎಸ್ ಹಿರಿಯ ನಾಯಕರಾಗಿದ್ದ ದತ್ತೋಪಂತ ಠೇಂಗಡಿಯವರು ಬರೆದ ಈ ಪುಸ್ತಕವನ್ನು (ಸಾಮಾಜಿಕ ಕ್ರಾಂತಿಸೂರ್ಯ ಅಂಬೇಡ್ಕರ್) ಇತ್ತೀಚೆಗೆ ಕನ್ನಡಕ್ಕೆ ಅನುವಾದಿಸಿ ಬಿಡುಗಡೆ ಮಾಡಲಾಯಿತು. ಈ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆ ದಿನ ಭಾಷಣ ಮಾಡುತ್ತಾ, ‘ಡಾ. ಅಂಬೇಡ್ಕರ್ ಹಿಂದೂರಾಷ್ಟ್ರ ರಚನೆ ಬಗ್ಗೆ ಮಾತನಾಡಿದ್ದರು, ಸಂಸ್ಕೃತ ರಾಷ್ಟ್ರಭಾಷೆಯಾಗಬೇಕು ಎಂದಿದ್ದರು. ಕೇಸರಿ ಧ್ವಜ ರಾಷ್ಟ್ರಧ್ವಜ ಆಗಬೇಕು ಎಂದು ಹೇಳಿದ್ದರು’ ಎಂದು ಹಾಡಹಗಲೇ ಹಸಿ ಸುಳ್ಳು ಹೇಳಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರದುರ್ಗ ಮುರುಘಾಮಠದ ಶರಣರು ಹೊಸಬಾಳೆ ಮಾತಿಗೆ ಗೋಣು ಆಡಿಸಿದರು.

ಶಿವಮೊಗ್ಗ ಜಲ್ಲೆಯ ಈ ಹೊಸಬಾಳೆ ಎಂಬತ್ತರ ದಶಕದಲ್ಲಿ ಎಬಿವಿಪಿ ಕರ್ನಾಟಕ ಘಟಕದ ಕಾರ್ಯ ದರ್ಶಿಯಾಗಿದ್ದರು. ಆಗ ಒಮ್ಮೆ ಜಮಖಂಡಿಗೆ ಬಂದಿದ್ದ (ಅನಂತಕುಮಾರ್ ಜೊತೆಗಿದ್ದರು) ಅವರು ಇದೇ ರೀತಿ ಸುಳ್ಳಿನ ಬುರುಡೆಯನ್ನು ಬಿಚ್ಚಿಟ್ಟಿದ್ದರು. ಆಗ ಸಭೆಯಲ್ಲಿದ್ದ ಎಐಎಸ್‌ಎಫ್ ಕಾರ್ಯಕರ್ತರು ಕೆಲ ಪ್ರಶ್ನೆಗಳಿಗೆ ಉತ್ತರಿಸುವಂತೆ ಪಟ್ಟು ಹಿಡಿದರು. ಇಲ್ಲದ್ದನ್ನು ಇದೆ ಎಂದು ಹೇಳಿ ಪಾರಾಗಬಹುದು. ಆದರೆ ಅದನ್ನು ತೋರಿಸು ಅಂದರೆ ಎಲ್ಲಿಂದ ತೋರಿಸಬೇಕು ಅಂತಲೇ ಅಂದು ಫಜೀತಿಪಟ್ಟಿದ್ದ ಹೊಸಬಾಳೆ ಮತ್ತೆ ಉತ್ತರಿಸಲು ಹೋಗಿರಲಿಲ್ಲ.

ದತ್ತಾತ್ರೇಯ ಹೊಸಬಾಳೆ ಅವರೇ ಯಾಕೆ ಇಂಥ ಸುಳ್ಳು ಹೇಳುತ್ತೀರಿ? ಅಂಬೇಡ್ಕರ್, ಶಿವಾಜಿ, ಭಗತ್‌ಸಿಂಗ್‌ರಂಥವರ ಹೆಸರನ್ನು ಯಾಕೆ ಈ ಪರಿ ಲಜ್ಜೆಗೆಟ್ಟು ದುರುಪಯೋಗ ಮಾಡಿಕೊಳ್ಳುತ್ತೀರಿ? ಹಿಂದೂರಾಷ್ಟ್ರ ಕಲ್ಪನೆಯನ್ನು ಅಂಬೇಡ್ಕರ್ ಅತ್ಯುಗ್ರವಾಗಿ ವಿರೋಧಿಸಿದ್ದರು. ‘ಒಂದು ವೇಳೆ ಹಿಂದೂರಾಷ್ಟ್ರ ಸ್ಥಾಪಿಸಲ್ಪಟ್ಟರೆ, ಅದು ದೇಶಕ್ಕೆ ಒದಗಿದ ಮಹಾವಿಪತ್ತು ಆಗಿರುತ್ತದೆ. ಹಿಂದೂಗಳೇನೆ ಹೇಳಲಿ, ಹಿಂದೂಧರ್ಮ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವದ ವಿರೋಧಿಯಾಗಿದೆ. ಆದ್ದರಿಂದ ಯಾವುದೇ ಬೆಲೆ ತೆತ್ತಾದರೂ ಹಿಂದೂರಾಷ್ಟ್ರ ಸ್ಥಾಪನೆಯಾಗದಂತೆ ತಡೆಯಬೇಕು’ ಎಂದು ಹೇಳಿದ್ದರು. ಇದು ‘ಪಾಕಿಸ್ತಾನದ ಆರ್ ದಿ ಪಾರ್ಟಿಷನ್ ಆಫ್ ಇಂಡಿಯಾ’ (ಪುಟ-538) ಎಂಬ ಪುಸ್ತಕದಲ್ಲಿ ದಾಖಲಾಗಿದೆ.
ಇಂಥ ಮಹಾಚೇತನ ಅಂಬೇಡ್ಕರ್ ಬಗ್ಗೆ ಮಾತನಾಡುವಾಗ ಹೊಸಬಾಳೆಯಂಥ ನಾಯಕರು ಎಚ್ಚರ ವಹಿಸಬೇಕು. ಕನ್ನಡಕ್ಕೆ ಬಂದ ಈ ಪುಸ್ತಕವನ್ನು ಬರೆದ ದತ್ತೋಪಂತ ಠೇಂಗಡಿ ಆರ್‌ಎಸ್‌ಎಸ್ ನಾಯಕರಾಗಿದ್ದಾರೆಂದು ಗೊತ್ತು. ಕೊನೆಯ ಐದು ವರ್ಷ ಈ ಠೇಂಗಡಿ ಅಂಬೇಡ್ಕರ್ ಒಡನಾಟ ಹೊಂದಿದ್ದರೆಂದು ಸಂಘದ ನಾಯಕರು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವಾವಗಿ ಈ ಠೇಂಗಡಿಯನ್ನು ಗೂಢಚಾರಿಕೆ ಮಾಡಲು ಆರ್‌ಎಸ್‌ಎಸ್, ಅಂಬೇಡ್ಕರ್ ಬಳಿ ಕಳುಹಿಸಿತ್ತು. ಹಿಂದೂತ್ವದ ಹುನ್ನಾರದ ವಿರುದ್ಧ ಪ್ರತ್ಯೇಕ ದಲಿತ ಸಂಘಟನೆಯನ್ನು ಕಟ್ಟಲು ಅಂಬೇಡ್ಕರ್ ಆಗ ಕ್ರಿಯಾಶೀಲರಾಗಿದ್ದರು. ಅಂಥ ಸಭೆಗಳಲ್ಲಿ ಸಂಘಟಕರ ಕಣ್ಣುತಪ್ಪಿಸಿ, ಆಗಿನ್ನೂ ಯುವಕರಾಗಿದ್ದ ಠೇಂಗಡಿ ಓಡಾಡುತ್ತಿದ್ದರಂತೆ. ಇದರ ಬಗ್ಗೆ ವಿವರವಾಗಿ ಇನ್ನೊಮ್ಮೆ ಬರೆಯ ಬೇಕಾಗಿದೆ.
ಡಾ. ಅಂಬೇಡ್ಕರ್‌ರ ಸಂಘಟನೆಯನ್ನು ನಾಶಪಡಿಸಲು ಗೂಢಚಾರಿಕೆ ಮಾಡಿದ ಈ ವ್ಯಕ್ತಿ ಮುಂದೆ ಕಮ್ಯುನಿಸ್ಟ್ ಸಂಘಟನೆಗಳಲ್ಲೂ ನುಸುಳಿ ಅಲ್ಲೂ ಇದೇ ಕೆಲಸ ಮಾಡಿದರು. ಕಮ್ಯುನಿಸ್ಟರು ಕಾರ್ಮಿಕರನ್ನು, ರೈತರನ್ನು, ಮಹಿಳೆಯರನ್ನು ಹೇಗೆ ಸಂಘಟಿಸುತ್ತಾರೆ ಎಂಬುದನ್ನು ತಿಳಿದುಕೊಂಡ ಠೇಂಗಡಿ ಮುಂದೆ ಭಾರತೀಯ ಮಜದೂರ ಸಂಘ, ಎಬಿವಿಪಿ, ಕಿಸಾನ ಸಂಘ ಮುಂತಾದವು ಕಟ್ಟಿ ಸಂಘಪರಿವಾರದ ಜಾಲ ವಿಸ್ತರಿಸಲು ನೆರವಾದರು. ಈ ಠೇಂಗಡಿಯನ್ನು ಕೆಲ ಬಾರಿ ಹತ್ತಿರದಿಂದ
ನೋಡಿ ಭಾಷಣ ಕೇಳಿದ ನನಗೆ ಆ ಮಾತುಗಳು ಎರವಲು ಮಾತುಗಳು ಎಂದು ತಿಳಿಯಿತು.ಆರ್‌ಎಸ್‌ಎಸ್ ಈಗ ಹತಾಶ ಸ್ಥಿತಿಗೆ ತಲುಪಿದೆ.ಮಾಲೆಗಾಂವ್, ನಾಂದೇಡ, ಸಂಜೋತಾ ಮುಂತಾದ ಬಾಂಬ್ ಸ್ಫೋಟದಲ್ಲಿ ಈ ನಕಲಿ ರಾಷ್ಟ್ರಪ್ರೇಮಿ ಸಂಘದ ಸಾಧ್ವಿಗಳು ಸಿಕ್ಕು ವಿಲಿವಿಲಿ ಒದ್ದಾಡುತ್ತಿದ್ದಾರೆ. ಇನ್ನೊಂದೆಡೆ ಆಕಸ್ಮಿಕವಾಗಿ ದೊರೆತ ಅಧಿಕಾರ ಬಳಸಿಕೊಂಡು ತಿನ್ನಬಾರದ್ದನ್ನು ತಿಂದು ಸಂಘದ ಸ್ವಯಂಸೇವಕರಾದ ಬಿ.ಎಸ್. ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ನೀರಾ ರಾಡಿಯಲ್ಲಿ ಮುಳುಗಿ ಮೇಲೆದ್ದ ಅನಂತಕುಮಾರ್ ಎಂಬ ಸ್ವಯಂಸೇವಕ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ ಎಂದು ಯಡಿಯೂರಪ್ಪ ಗುಂಪಿನವರೇ ಹೇಳುತ್ತಿದ್ದಾರೆ.
ಹೀಗೆ ತನ್ನ ಮೈತುಂಬ ಹೊಲಸು ಮತ್ತಿಕೊಂಡು ನಿಂತ ಪರಿವಾರದ ರಕ್ಷಣೆಗೆ ಈಗಿರುವುದು ದೇಶ-ವಿದೇಶಿ ಲೂಟಿಕೋರ, ಬಂಡವಾಳಶಾಹಿಗಳಿಂದ ಸಂಗ್ರಹಿಸಿದ ಗುರುದಕ್ಷಿಣೆ ಎಂಬ ಕಪ್ಪುಹಣ. ಈ ಕಪ್ಪು ಹಣಕ್ಕೆ ರಕ್ಷಣೆ ನೀಡುತ್ತಿರುವವರು ಕಪಟ ಮಠಾಧೀಶರುಗಳು. ಈ ಹಣವನ್ನು ಬಳಸಿಕೊಂಡೇ ಜನರನ್ನು ಇನ್ನಷ್ಟು ದಾರಿ ತಪ್ಪಿಸಲು ಮತ್ತು ಕಲಹದ ಕಿಡಿ ಹೊತ್ತಿಸಲು ಈ ಸಂಘ ಪಿತೂರಿ ನಡೆಸುತ್ತಲೇ ಬಂದಿದೆ. ಅದಕ್ಕಾಗಿ ಅಂಬೇಡ್ಕರ್, ಭಗತ್ ಸಿಂಗ್‌ರ ಹೆಸರುಗಳನ್ನು ಬಳಸಿಕೊಳ್ಳುತ್ತಿದೆ. ಆದರೆ ಇಂಥ ಕೇಸರಿ ಖೆಡ್ಡಾಕ್ಕೆ ಬೀಳುವಷ್ಟು ದಲಿತ, ಶೂದ್ರ ಸಮುದಾಯದವರು ಪ್ರಜ್ಞಾಹೀನ ರಾಗಿಲ್ಲ ಎಂಬುದನ್ನು ಈ ನಕಲಿ ರಾಷ್ಟ್ರಭಕ್ತರು ಮರೆಯಬಾರದು.
ಹಿಂದುತ್ವದ ಮುಸುಕಿನಲ್ಲಿ ಕೆಲ ಹಿಂದುಳಿದ ವರ್ಗಗಳನ್ನು ಆಪೋಶನ ಮಾಡಿಕೊಳ್ಳುವಲ್ಲಿ ಈ ಕರಾಳ ಫ್ಯಾಸಿಸ್ಟ್ ಪರಿವಾರ ಕೊಂಚ ಯಶಸ್ವಿಯಾಗಿದೆ. ಕರ್ನಾಟಕ ಕರಾವಳಿ ಪ್ರದೇಶದ ಬಿಲ್ಲವ, ಮೊಗವೀರ ಯುವಕರಿಗೆ ಮತಾಂಧತೆಯ ಮತ್ತೇರಿಸಿ ಅಮಾಯಕರ ಮೇಲೆ ಅವರ ಮೂಲಕ ಹಲ್ಲೆ ನಡೆಸಿ, ಈ ಶೂದ್ರ ಯುವಕರು ಜೈಲು ಮತ್ತು ಕೋರ್ಟ್‌ಗೆ ಎಡತಾಕುವಂತೆ ಮಾಡಿದ್ದು ಇದೇ ಈ ಕಲ್ಲಡ್ಕ ಭಟ್ಟರ ಪರಿವಾರ. ಆದರೆ ಈ ಪರಿವಾರದ ವಂಚನೆಯ ಜಾಲಕ್ಕೆ ದಲಿತ ಸಮುದಾಯ ಈವರಗೆ ಬಲಿ ಬಿದ್ದಿಲ್ಲ. ಆದರೂ ಆರ್‌ಎಸ್‌ಎಸ್ ಈ ಯತ್ನ ಕೈಬಿಟ್ಟಿಲ್ಲ. ದಲಿತರನ್ನು ಬಲಗೈ ಮತ್ತು ಎಡಗೈ ಎಂದು ವಿಭಜಿಸಲು ಮತ್ತು ವಿಭಜಿಸಿ ಒಡೆದಾಳಲು ಕಸರತ್ತು ನಡೆಸುತ್ತಲೇ ಇದೆ.
ಅದೆಲ್ಲ ವಿಫಲವಾದಾಗ ಅಂಬೇಡ್ಕರ್ ಭಜನೆ ಶುರುವಾಗುತ್ತದೆ. ದಲಿತ ಸಮುದಾಯದ ಬಂಧುಗಳು ಸಂಘ ಪರಿವಾರದ ಹಿಂದುತ್ವವಾದಿ ಕತ್ತಲಕೂಪಕ್ಕೆ ಬೀಳದಂತೆ ತಡೆದದ್ದು ಡಾ. ಅಂಬೇಡ್ಕರ್ ಎಂಬ ಬೆಳಕು. ಅಂಬೇಡ್ಕರ್ ಸಾಹಿತ್ಯವನ್ನು ಓದಿದ ಯಾವುದೇ ಸಮುದಾಯದ ವ್ಯಕ್ತಿಯಿರಲಿ, ಆತ ನಿದ್ದೆಗಣ್ಣಿನಲ್ಲೂ ಆರ್‌ಎಸ್‌ಎಸ್ ಎಂಬ ಹಾಳು ಬಾವಿಗೆ ಬೀಳುವುದಿಲ್ಲ. ‘ನಾನು ಹಿಂದುವಾಗಿ ಜನಿಸಿದ್ದರೂ ಹಿಂದುವಾಗಿ ಸಾಯುವುದಿಲ್ಲ’ ಎಂಬ ಅಂಬೇಡ್ಕರ್ ಅವರ ಒಂದೇ ನುಡಿಮುತ್ತು ಸಾಕು, ಯಾವ ದಲಿತನೂ ಆರೆಸ್ಸೆಸ್ ಶಾಖೆ ಎಂಬ ಖೆಡ್ಡಾಕ್ಕೆ ಬೀಳಲು ಇಷ್ಟಪಡುವುದಿಲ್ಲ.
ಅಂಬೇಡ್ಕರ್ ಎಂಬ ಚೇತನ ಬೆಂಕಿ ಇದ್ದಂತೆ. ಅದು ಜ್ಯೋತಿಯಾಗಿ ಬೆಳಕನ್ನು ನೀಡುತ್ತದೆ. ಆ ಬೆಳಕಿನ ಜ್ಯೋತಿ ಈ ದೇಶದ ಶೋಷಿತ ವರ್ಗಗಳ ಕೈದೀವಿಗೆಯಾಗಿದೆ. ಈ ಬೆಳಕನ್ನು ನಂದಿಸಲು ಕೇಸರಿ ಪರಿವಾರ ಕೈ ಹಾಕಿದರೆ, ಆ ಜ್ಯೋತಿ ಉರಿಯುವ ಪಂಜಾಗಿ ನಂದಿಸಲು ಬಂದ ಹಸ್ತವನ್ನೇ ಸುಟ್ಟು ಹಾಕುತ್ತದೆ ಎಂಬುದನ್ನು ಈ ನಯವಂಚಕರು ಮರೆಯಬಾರದು.
- ಸನತ್‌ಕುಮಾರ ಬೆಳಗಲಿ
crtsy: vbnews

No comments:

Post a Comment

html