ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ‘ಡಾ.ಬಿ.ಆರ್.ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ’ ಕುರಿತು ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಶಾಸಕ ವಿ.ಶ್ರೀನಿವಾಸ ಪ್ರಸಾದ್ ಉದ್ಘಾಟಿಸಿದರು. ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಪ್ರೊ.ಸುಮಿತ್ರಾಬಾಯಿ, ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ರಮೇಶ್, ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್ ಇದ್ದಾರೆ. |
ಮೈಸೂರು: ‘ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕು. ಒಂದು ವೇಳೆ ಅವರ ಆಶಯ ಈಡೇರಿದರೆ ದೇಶ ಸ್ವರ್ಗವಾಗುತ್ತದೆ’ ಎಂದು ಶಾಸಕ ವಿ.ಶ್ರೀನಿವಾಸ ಪ್ರಸಾದ್ ಇಲ್ಲಿ ತಿಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ‘ಡಾ.ಬಿ.ಆರ್.ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಹೊರಗುಳಿಯುವಿಕೆ ಮತ್ತ ಒಳಗೊಳ್ಳುವಿಕೆ’ ಕುರಿತು ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
‘ದೇಶಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ, ಪ್ರತಿಯೊಬ್ಬ ಪ್ರಜೆಯು ಸ್ವತಂತ್ರವಾಗಿ ಬದುಕಲು ಸಂವಿಧಾನ ರಚನೆ ಮಾಡಲಾಗಿದೆ. ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನತೆಯಿಂದ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿದ್ದಾರೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಹೇಳಿದರು.
‘ಅಸ್ಪೃಶ್ಯತೆಯನ್ನು ಅಂಬೇಡ್ಕರ್ ಅವರು ತೀವ್ರವಾಗಿ ವಿರೋಧಿಸುತ್ತಿದ್ದರು. ಅದನ್ನು ಸ್ವತಃ ಅವರೇ ಅನುಭವಿಸಿದ್ದರು. ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನತೆಯಿಂದ ಬದುಕುವ ಹಕ್ಕನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅವರು ಜೀವನದ ಉದ್ದಕ್ಕೂ ಹೋರಾಟ ನಡೆಸಿದರು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ನಾವು ಮುಂದುವರೆದಿದ್ದರೂ ಅಸ್ಪೃಶ್ಯತೆ, ಜಾತಿಯತೆ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ. ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಕೀಳಾಗಿ, ನಿಕೃಷ್ಟವಾಗಿ ಕಾಣುವುದು ಸರಿಯಲ್ಲ. ಮಾನವೀಯತೆಯಿಂದ ಕಾಣಬೇಕು’ ಎಂದರು.
ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ರಮೇಶ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಪ್ರೊ.ಸುಮಿತ್ರಾಬಾಯಿ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್ ಉಪಸ್ಥಿತರಿದ್ದರು. ‘ಅಂಬೇಡ್ಕರ್ ಸ್ಮರಣಾರ್ಥ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಲು ಸಿದ್ಧತೆ’
ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಸಿದ್ಧತೆ ನಡೆಯುತ್ತಿದೆ ಎಂದು ಶಾಸಕ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಅಂತರ ವಲಯ ಫುಟ್‌ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂರು ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟಿದೆ. ಆದರೆ ಬೆಂಗಳೂರು ರಾಜಧಾನಿಯಾದ ಮೇಲೆ ಅವಕಾಶಕ್ಕಾಗಿ ಮೈಸೂರಿನ ಕ್ರೀಡಾಪಟುಗಳು ಬೆಂಗಳೂರಿಗೆ ಹೋಗುತ್ತಿದ್ದಾರೆ. ಆದ್ದರಿಂದ ಹೆಚ್ಚು ಪಂದ್ಯಾವಳಿಗಳನ್ನು ಆಯೋಜಿಸಿ ಅರ್ಹ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.
ದಿನದ 24 ಗಂಟೆಯೂ ರಾಜಕೀಯದಲ್ಲಿ ಮುಳುಗಿರುವ ರಾಜಕಾರಣಿಗಳಿಗೆ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿ, ಸಂತೋಷ ಸಿಗುತ್ತದೆ. ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಫುಟ್ ಬಾಲ್ ಸಂಸ್ಥೆಯ ಕೆ.ಜಿ.ಸುಬ್ರಮಣ್ಯಸ್ವಾಮಿ, ಕೆಎಸ್ ಎಫ್‌ಎ ಕಾರ್ಯದರ್ಶಿ ಇ.ಕೃಷ್ಣನಾರಾಯಣ್, ಖಜಾಂಚಿ ಎ.ಡಿ.ನಾಗೇಂದ್ರ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್, ಸಂಘಟನಾ ಕಾರ್ಯದರ್ಶಿ ಎಲ್.ಮಂಜುನಾಥ್, ಪಂದ್ಯಾವಳಿಯ ಕಾರ್ಯದರ್ಶಿಗಳಾದ ಎಸ್.ಎ.ಬಷೀರ್, ಎಸ್.ಕೃಷ್ಣೋಜಿ ರಾವ್, ಪಿ.ನರಸಿಂಹಯ್ಯ ಇತರರು ಉಪಸ್ಥಿತರಿದ್ದರು.
No comments:
Post a Comment