ತುಮಕೂರು, ಮೇ 17: ಮನುಷ್ಯನ ಉನ್ನತಿಗೆ ಬೇಕಾದ ಸರಳ ಹಾಗೂ ನಿಸರ್ಗ ತರ್ಕವನ್ನು ಅನ್ವೇಷಿಸಿದ ಮೊದಲ ವ್ಯಕ್ತಿಯೆಂದರೆ ಭಗವಾನ್ ಬುದ್ಧ. ಬೌದ್ಧ ತಾತ್ವಿಕತೆಯನ್ನು ಅರಿಯಲು ಯಾರೊಬ್ಬರ ಸಹಾಯವೂ ಬೇಕಿಲ್ಲ ಎಂದು ಸಾಹಿತಿ ಹಾಗೂ ಉಪನ್ಯಾಸಕ ನಟರಾಜ್ ಬೂದಾಳ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಉಪ್ಪಾರಹಳ್ಳಿಯಲ್ಲಿರುವ ಸಾಹಿತಿ ಕೆ.ಬಿ.ಸಿದ್ದಯ್ಯರ ನಿವಾಸದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಕವಿಗೋಷ್ಠಿ ಕಾರ್ಯ ಕ್ರಮದಲ್ಲಿ ಬುದ್ಧನ ಕುರಿತು ಮಾತನಾಡುತ್ತಿದ್ದ ಅವರು, ಸಾಮಾನ್ಯ ಬದುಕಿನ ಪ್ರಶ್ನೆಯೇ ಬೌದ್ಧ ತಾತ್ವಿಕತೆಯ ಹುಟ್ಟಿಗೆ ಕಾರಣ. ಭಂತೆ ಮಿಲಿಂದ ಮತ್ತು ನಾಗಸೇನನ ನಡುವಿನ ಪ್ರಶ್ನಾವಳಿಯೇ ಇಡೀ ಮನುಜರ ಬದುಕನ್ನು ಅವಲಂಬಿಸಿದೆ. ಇದನ್ನು ಪ್ರತಿಯೊಬ್ಬ ವ್ಯಕ್ತಿಯೂ ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ ಭ್ರಷ್ಟತೆಯನ್ನು ಅರಿತು ನಡೆದರೆ ಅದೇ ಭೌದ್ದ ತಾತ್ವಿಕತೆಯಾಗುತ್ತದೆ ಎಂದರು.
ಭೌದ್ಧ ಧರ್ಮ ಮತ್ತು ಅದರ ತತ್ವಗಳು ಹಾಗೂ ಇತರ ಪರಂಪರೆಗಳ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಹಲವಾರು ಮಂದಿ ಇಂದು ನಮ್ಮ ನಡುವೆ ಇದ್ದಾರೆ. ಅನಾದಿ ಕಾಲದಿಂದಲೂ ಈ ಕಾರ್ಯ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಲೇ ಬಂದಿದೆ. ಇದನ್ನು ಮೆಟ್ಟಿ ನಿಲ್ಲಬೇಕಾದರೆ ಮೊದಲು ನಾವು ಭೌದ್ಧ ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಇದನ್ನು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ 12 ವ್ಯಾಲೂಮ್‌ಗಳ ಮೂಲಕ ಜನರಿಗೆ ತಿಳಿಯುವಂತೆ ವಿವರಿಸಿದ್ದಾರೆ. ಅವರ ಪ್ರಕಾರ ಸಾಮಾನ್ಯ ವಿವೇಕವೇ ಭೌದ್ಧ ತಾತ್ವಿಕತೆ. ಇದನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಟರಾಜ್ ಬೂದಾಳ್ ನುಡಿದರು.
ಕವಿಗೋಷ್ಠಿ ಉದ್ಘಾಟಿಸಿದ ಕವಯತ್ರಿ ಡಿ.ಬಿ.ರಜಿಯಾ ಮಾತನಾಡಿ, ಭಗವಾನ್ ಬುದ್ಧ ಸಮಾಜವನ್ನು ಅರಿಯಲು ನಮಗೆ ತೋರಿಸಿದ ವಿವೇಕ ಎಂಬ ಅಸ್ತ್ರಕ್ಕೆ ಇಂದು ಮಂಕು ಕವಿದಿದೆ.ಇದರಿಂದ ಹೊರಬರುವ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಅನ್ನಪೂರ್ಣ ವೆಂಕಟನಂಜಪ್ಪ ಮಾತನಾಡಿ, ಹಣ, ಅಧಿಕಾರವೆಂಬ ಪ್ರಬಲ ಶಕ್ತಿಗಳು ಇಂದು ನಮ್ಮನ್ನು ಆಳುತ್ತಿದ್ದು, ಚಿಂತಕರು, ಪ್ರಗತಿಶೀಲರೆನಿಸಿಕೊಂಡ ಬುದ್ಧಿಜೀವಿಗಳು ಇಂದು ಅಧಿಕಾರ ಇರುವವರ ಬೆಂಬಲಕ್ಕೆ ನಿಂತಿರುವುದನ್ನು ನೋಡಿದರೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗುತ್ತದೆ. ಅಧಿಕಾರದ ಆಸೆಗೆ ಭ್ರಷ್ಟತೆಯಲ್ಲಿ ತೊಡಗಿರುವವರನ್ನೇ ಇಂದ್ರ, ಚಂದ್ರರೆಂದು ಬಸವಣ್ಣನಂತಹ ಕಾಂತ್ರಿಕಾರಿ ವ್ಯಕ್ತಿಗಳಿಗೆ ಹೋಲಿಸಿ ಮಾತನಾಡುತ್ತಿರುವುದನ್ನು ನೋಡಿದರೆ ನಾವು ಯಾವ ಹಂತ ತಲುಪಿದ್ದೇವೆ ಎಂಬುದು ಅರ್ಥವಾಗುತ್ತದೆ. ಧಾರ್ಮಿಕ ಭಯೋತ್ಪಾಧನೆಯನ್ನು ತಡೆಯಲು ನಾವೆಲ್ಲರೂ ಮುಂದಾಗಬೇಕಿದೆ ಎಂದರು.
ಸಂತ ಶಿಶುನಾಳ ಷರೀಫರ ಹಾಡುಗಳ ಮೂಲಕವೇ ಜನಪ್ರಿಯರಾಗಿರುವ ನರಸಿಂಹಮೂರ್ತಿ ಷರೀಫರ ತತ್ವಪದಗಳನ್ನು ಹಾಡುವ ಮೂಲಕ ರಂಜಿಸಿದರು. ಪ್ರೊ. ಸಿ.ಎಚ್.ಮರಿದೇವರು, ಡಾ.ರವಿಕುಮಾರ್ ನೀ.ಹ., ಜಿ.ಇಂದ್ರಕುಮಾರ್, ಉಗಮ ಶ್ರೀನಿವಾಸ್, ಪದ್ಮಕೃಷ್ಣಮೂರ್ತಿ ಸೇರಿದಂತೆ ಹತ್ತಾರು ಮಂದಿ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು.
No comments:
Post a Comment