Pages

Wednesday 18 May 2011

ದಲಿತ ಚಳವಳಿ ಚರಿತ್ರೆ



ಸ್ಪಷ್ಟತೆ ಕಾಣದ ರಾಶಿ ಬರಹ ಸಂಗ್ರಹ

ಎಸ್. ಗಣೇಶನ್
March 27, 2011

ಮನುಷ್ಯ ಮನುಷ್ಯರ ನಡುವೆ ಶೋಷಣೆ, ಮೇಲುಕೀಳೆಂಬ ಭೇದ, ಅಸ್ಪೃಶ್ಯತೆ ಆಚರಣೆ, ಜಾತೀಯತೆ ಮತ್ತು ಮೌಢ್ಯ ಮನೆಮಾಡಿರುವ ಹಿಂದೂ ಧರ್ಮದಲ್ಲಿ ದಲಿತರು ಮನುಷ್ಯರಾಗಿ ಸ್ವಾಭಿಮಾನದಿಂದ ಬದುಕಲು ಇನ್ನೂ ಸಾಧ್ಯವಾಗಿಲ್ಲ.

ಇಂತಹ ವ್ಯವಸ್ಥೆಯ ನಡುವೆ ಅಲ್ಲಲ್ಲಿ ಶೋಷಣೆಯ ವಿರುದ್ಧ ನಿರಂತರವಾಗಿ ದನಿ ಎದ್ದಿದೆ. ಅದು ಬುದ್ಧ, ಬಸವ, ಜ್ಯೋತಿ ಬಾಫುಲೆ, ನಾರಾಯಣಗುರು, ಪೆರಿಯಾರ್ ಮುಂತಾದವರ ಕಾಲದಲ್ಲಿ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಪ್ರಯತ್ನ ನಡೆದಿದೆ. ಇವರೆಲ್ಲರ ಆಶಯಕ್ಕೆ ಒಂದು ಹೋರಾಟದ ದಿಕ್ಕು ತೋರಿಸಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಅವರು ಅನುಭವಿಸಿದ ಅಸ್ಪೃಶ್ಯತೆಯ ಯಾತನೆ, ಹೋರಾಟ, ಅಗಾಧವಾದ ಪಾಂಡಿತ್ಯ, ದೂರದೃಷ್ಟಿ, ಸಾಮಾಜಿಕ ಮತ್ತು ರಾಜಕೀಯವಾಗಿ ನಡೆಸಿದ ಹೋರಾಟವೇ ಈಗಿನ ದಲಿತ ಚಳವಳಿಗೆ ದಿಕ್ಸೂಚಿ.

ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿನ ದಲಿತ ಚಳವಳಿ ಮತ್ತು ದಲಿತ ಸಾಹಿತ್ಯದ ಹುಟ್ಟು, ಚಾರಿತ್ರಿಕವಾಗಿ ಒಂದು ಮಹತ್ವದ  ಘಟ್ಟ. ಈ ನಾಲ್ಕು ದಶಕಗಳಲ್ಲಿ ಕಂಡುಬಂದ ದಲಿತ ಜಾಗೃತಿಯ ಪ್ರಜ್ಞೆಯನ್ನು ಲೇಖಕ ಡಾ. ವಿ. ಮುನಿವೆಂಕಟಪ್ಪ ಅವರು, ತಾವು ಸಂಪಾದಿಸಿರುವ ‘ದಲಿತ ಚಳವಳಿ ಚರಿತೆ’ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ.

ಈ ಬೃಹತ್ ಕೃತಿಯ ಜೀವಾಳ ಎಂದರೆ ಹಲವಾರು ಲೇಖಕರು ಅಲ್ಲಲ್ಲಿ ಬರೆದಿರುವ ಲೇಖನಗಳ ಸಂಗ್ರಹ. ಇಂತಹದೊಂದು ಕೃತಿ ರಚನೆಗಾಗಿಯೇ ಸ್ವತಃ ಮುನಿವೆಂಕಟಪ್ಪನವರಾಗಲಿ ಅಥವಾ ಇಲ್ಲಿನ ಲೇಖನಗಳ ಬರಹಗಾರರಾಗಲಿ ಬರೆದವರಲ್ಲ.

ಕೃತಿಯಲ್ಲಿನ ಬರಹಗಳನ್ನು ಪ್ರಮುಖವಾಗಿ ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಬುದ್ಧ, ಬಸವ, ವಚನಕಾರರು, ದಾರ್ಶನಿಕರು ಮುಂತಾದವರ ಬಗೆಗೆ ಪ್ರಕಟಗೊಂಡ ಲೇಖನಗಳ ಭಾಗ. ಇಲ್ಲಿನ ಲೇಖನಗಳು ಓದುಗರಿಗೆ ಇತಿಹಾಸದಲ್ಲಿ ದಲಿತ ಜಾಗೃತಿಗಾಗಿ ನಡೆದಿರುವ ಚಿಂತನೆಯ ದರ್ಶನವಾಗುತ್ತದೆ.

ಕರ್ನಾಟಕದ ದಲಿತ ಚಳವಳಿಯ ಮಟ್ಟಿಗೆ ಎರಡನೆಯ ಭಾಗ ಪ್ರಮುಖವಾದದ್ದು. ಅದು ದಲಿತ ಹೋರಾಟದ ದರ್ಶನ. 1973ರಲ್ಲಿ ನಡೆದ ಬೂಸಾ ಚಳವಳಿಯ ಹಿನ್ನೆಲೆಯಲ್ಲಿ ಆರಂಭವಾದ ದಲಿತ ಚಳವಳಿಯ ವಿವಿಧ ಮಜಲುಗಳ ದರ್ಶನ ಇಲ್ಲಿ ಆಗುತ್ತದೆ. ದಲಿತ ಯುವಕರನ್ನು ಜಿಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಬಡಿದೆಬ್ಬಿಸಿದ ಡಿ. ದೇವರಾಜ ಅರಸು ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರ ವೈಚಾರಿಕ ಭಾಷಣಗಳೇ ದಲಿತ ಚಳವಳಿಯು ಮೊಳಕೆ ಒಡೆಯಲು ಕಾರಣ ಎನ್ನುವುದು ಐತಿಹಾಸಿಕ ಸತ್ಯ.

ಎಪ್ಪತ್ತರ ದಶಕ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ ಮತ್ತು ರಾಜಕೀಯದ ಬಗೆಗೆ ಯುವಕರಲ್ಲಿ ವೈಚಾರಿಕತೆಯನ್ನು ಬೆಳೆಸಿದ ಕಾಲ. ಹಾಗಾಗಿ ಅದೊಂದು ಚಳವಳಿಯ ಯುಗ. ಅದು ದಲಿತ ವಿದ್ಯಾರ್ಥಿಗಳು ಶೋಷಿತರ ವಿಮೋಚನೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ದಿನಗಳು. ಅಂಬೇಡ್ಕರ್, ಲೋಹಿಯಾ, ಜಯಪ್ರಕಾಶ್ ನಾರಾಯಣ, ಕಾರ್ಲ್ ಮಾರ್ಕ್ಸ್, ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಬ್ಲ್ಯಾಕ್ ಪ್ಯಾಂಥರ್ಸ್‌ ಮತ್ತು ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್‌ ಹೋರಾಟಗಳನ್ನು ಅಧ್ಯಯನ ಮಾಡಿ ಇಡೀ ಒಟ್ಟಾರೆ ಸಮಾಜದಲ್ಲಿ ಸಮಾನತೆಯನ್ನು ತರುವ ಆಸೆಯಿಂದ ಕಟ್ಟಿದ ಚಳವಳಿ. ಆ ದಿನಗಳಲ್ಲಿ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ನಡೆಸಿದ ಹೋರಾಟದ ಹೆಜ್ಜೆಗಳು ಕರ್ನಾಟಕದ ಇತಿಹಾಸದಲ್ಲಿ ಮರೆಯಲಾಗದು.

ಹೋರಾಟದ ಮುಂಚೂಣಿಯಲ್ಲಿದ್ದ ಯುವಕರಲ್ಲಿ ಅಂಬೇಡ್ಕರ್‌ವಾದ, ಲೋಹಿಯಾ ವಿಚಾರ, ಮಾರ್ಕ್ಸ್‌ವಾದ ಮತ್ತು ನಕ್ಸಲೀಯವಾದದ ಬಗೆಗಿನ ಒಲವು, ಬದ್ಧತೆ ಆರಂಭದ ವರ್ಷಗಳಲ್ಲಿ ಕಾಣುತ್ತಿತ್ತು. ಅದಕ್ಕಾಗಿ ಅವರವರಲ್ಲಿಯೇ ನಡೆಯುತ್ತಿದ್ದ ಸೈದ್ಧಾಂತಿಕ ಚರ್ಚೆ ದಲಿತ ಯುವಕರಲ್ಲಿ ವೈಚಾರಿಕತೆಯನ್ನು ತಂದುಕೊಟ್ಟಿತು. ಇವರೆಲ್ಲರ ಒಟ್ಟು ಆಶಯ ದಲಿತರನ್ನು ಶೋಷಣೆಯಿಂದ ವಿಮೋಚನೆಗೊಳಿಸುವ ಹೋರಾಟವನ್ನು ಬಲಗೊಳಿಸುವುದು. ಈ ದಿಕ್ಕಿನಲ್ಲಿ ಮೊದಲು ಕೈಗೆತ್ತಿಕೊಂಡದ್ದು ಭೂ ಹೋರಾಟ.

ಎಂಬತ್ತರ ದಶಕಪೂರ್ತಿ ರಾಜ್ಯದ ಹಲವಾರು ಕಡೆ ಯಶಸ್ವಿಯಾಗಿ ಭೂ ಹೋರಾಟಗಳು ನಡೆದವು. ಈ ಹೋರಾಟದ ಫಲವಾಗಿ ಸಾವಿರಾರು ದಲಿತರಿಗೆ ಉಳಲು ಭೂಮಿಯ ಮೇಲಿನ ಹಕ್ಕನ್ನು ದೊರಕಿಸಿಕೊಟ್ಟದ್ದು ಸಾಮಾನ್ಯ ಸಂಗತಿಯೇನಲ್ಲ. ಈ ಹೋರಾಟಗಳಲ್ಲಿ ದಲಿತರಲ್ಲದೆ ಇತರ ಹಿಂದುಳಿದ ಮತ್ತು ಶೋಷಿತ ಜಾತಿಗಳನ್ನು ಒಳಗೊಂಡದ್ದು ದಲಿತ ಚಳವಳಿಯ ಒಂದು ಮಹತ್ವದ ಬೆಳವಣಿಗೆ.

ಇಂತಹ ಒಂದು ಚಾರಿತ್ರಿಕ ಹೋರಾಟ ದಿನಕಳೆದಂತೆ ಸಾಮೂಹಿಕ ಚಳವಳಿಯಾಗಿ ಬೆಳೆಯುತ್ತಾ, ಹೋಳಾಗುತ್ತಾ ಹೋಯಿತು. ಈ ಚಳವಳಿಯ ಗೊತ್ತು ಗುರಿ ಮತ್ತು ಸೋಲು ಗೆಲುವಿನ ಹೆಜ್ಜೆಗಳನ್ನು ಕರಾರುವಕ್ಕಾಗಿ ಗುರುತಿಸುವಲ್ಲಿ ಲೇಖಕ ಮುನಿವೆಂಕಟಪ್ಪ ತಮ್ಮ ಸಂಪಾದಿತ ಕೃತಿಯಲ್ಲಿ ಹಿಡಿದಿಡುವಲ್ಲಿ ವಿಫಲರಾಗಿದ್ದಾರೆ. ದಲಿತ ಚಳವಳಿ ಮತ್ತು ದಲಿತ ಸಾಹಿತ್ಯದಲ್ಲಿ ಬಿ.ಕೃಷ್ಣಪ್ಪ, ದೇವನೂರ ಮಹಾದೇವ ಮತ್ತು ಸಿದ್ಧಲಿಂಗಯ್ಯ ಅತ್ಯಂತ ಪ್ರಮುಖರು.

ಇವರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದಿತಾದರೂ, ಹೋರಾಟದಲ್ಲಿ ಎಂದೂ ಬೇರೆ ಬೇರೆ ದಿಕ್ಕುಗಳನ್ನು ಹಿಡಿದವರಲ್ಲ. ಇವರಲ್ಲಿ ದೇವನೂರು ಮತ್ತು ಸಿದ್ಧಲಿಂಗಯ್ಯನವರ ಬಗೆಗೆ ಕೆಲವು ಹತಾಶ ಮನೋಭಾವದ ಬರಹಗಾರರು ಪೂರ್ವಗ್ರಹಪೀಡಿತರಾಗಿ ಅಸಹನೆಯಿಂದ ವಿವಿಧ ಕಡೆಗಳಲ್ಲಿ ಬರದಿರುವ ಲೇಖನಗಳನ್ನು ಈ ಕೃತಿಯಲ್ಲಿ ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ಈ ವಿಕೃತಿಯ ಲೇಖನಗಳೇ ಹೆಚ್ಚಿರುವುದರಿಂದ ದಲಿತ ಚಳವಳಿಯ ನಿಜವಾದ ಸ್ವರೂಪ ಮತ್ತು ಇತಿಹಾಸವನ್ನು ಕಟ್ಟಿಕೊಡುವಲ್ಲಿ ಮುನಿವೆಂಕಟಪ್ಪ ಯಶಸ್ವಿಯಾದಂತೆ ಕಾಣುವುದಿಲ್ಲ.

ಇನ್ನು ಮೂರನೇ ಅಧ್ಯಯವಾದ ‘ದಲಿತ ಸಾಹಿತ್ಯ ದರ್ಶನ’ ವಿಭಾಗದಲ್ಲಿ ಕೆಲವು ಉತ್ತಮ ಮತ್ತು ಅಧ್ಯಯನಕ್ಕೆ ಯೋಗ್ಯವಾದ ಲೇಖನಗಳು ಇವೆ. ಆದರೂ ಅಲ್ಲಿಯೂ ದೇವನೂರ ಮಹಾದೇವ ಮತ್ತು ಸಿದ್ಧಲಿಂಗಯ್ಯನವರ ಯಾವ ಬರಹಗಳ ಬಗೆಗೂ ಪ್ರಸ್ತಾಪವಿಲ್ಲದಿರುವುದು ಈ ಕೃತಿಯಲ್ಲಿನ ಬಹುದೊಡ್ಡ ಲೋಪ. ಹಾಗಾಗಿ ಎಂಟು ಮಂದಿ ಕುರುಡರು ಆನೆ ಮುಟ್ಟಿದ ಕಥೆಯಂತೆ ಈ ಕೃತಿಯು ದಲಿತ ಚಳವಳಿಯ ಇತಿಹಾಸವನ್ನು ತೆರೆದಿಟ್ಟಿದೆ.

ಈ ಚಳವಳಿಯನ್ನು ಕಂಡಿರದ ಓದುಗರಿಗೆ ಚಳವಳಿಯ ಸ್ಪಷ್ಟ ಚಿತ್ರ ಸಿಗುವುದಿಲ್ಲ. ಆದರೂ ಇಷ್ಟೆಲ್ಲ ಲೇಖನಗಳನ್ನು ಕಲೆಹಾಕಿ ಒಂದು ಬೃಹತ್ ಕೃತಿಯನ್ನು ನೀಡಿರುವ ಮುನಿವೆಂಕಟಪ್ಪ ಅವರ ಶ್ರಮ ಮೆಚ್ಚುವಂಥದ್ದು.
ದಲಿತ ಚಳವಳಿ ಚರಿತ್ರೆ
ಸಂ: ಡಾ. ವಿ. ಮುನಿವೆಂಕಟಪ್ಪ
ಪು: 556; ಬೆ: ರೂ. 600
ಪ್ರ: ತನು ಮನು ಪ್ರಕಾಶನ, ಕಾವ್ಯಲೋಕ-   ಎಚ್‌ಐಜಿ 1267, 1ನೇ ಕ್ರಾಸ್, ಶ್ರೀರಾಂಪುರ ಬಡಾವಣೆ, 2ನೇ ಹಂತ, ಮೈಸೂರು- 570023



http://prajavani.net/web/include/story.php?news=1390&section=156&menuid=13

1 comment:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete

html