Pages

Monday 25 April 2011

ಮಠಾಧೀಶರ ಮಾತು ಅತಿಯಾಯಿತು!!

ಮಂಗಳವಾರ - ಏಪ್ರಿಲ್ -26-2011

ಇತ್ತೀಚೆಗೆ ಸುತ್ತೂರಿನಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧಿವೇಶನದಲ್ಲಿ ಕೆಲವು ಮಠಾಧಿಪತಿಗಳು ರಾಜ್ಯ ಸರಕಾರದ ಪರವಾಗಿ ವಕ್ತಾರರಂತೆ ನಿಂತು ಮುಖ್ಯಮಂತ್ರಿಯವರ ಪರವಾಗಿ ವೀರಾವೇಶದ ಮಾತುಗಳನ್ನಾಡಿದ್ದು, ಬಸವಣ್ಣನವರ ತತ್ವವನ್ನು ಒಪ್ಪುವಂತಹ ಯಾವುದೇ ಒಬ್ಬ ನಾಗರಿಕನಿಗೂ ಇದು ಸರಿ ಎನಿಸುವುದಿಲ್ಲ. ಬಸವಣ್ಣನವರ ವಿಚಾರ ಧಾರೆಯಲ್ಲಿ ನಂಬಿಕೆ ಇಟ್ಟು ವೀರಶೈವ ಧರ್ಮವು ನಡೆಯುತ್ತಿದೆ ಎಂದು ಭಾವಿಸಿರುವ ಅನೇಕರಿಗೆ ಇಲ್ಲಿನ ನಡವಳಿಕೆಗಳು ನಿರಾಶೆಯನ್ನುಂಟು ಮಾಡಿದೆ.

ಬಸವಣ್ಣನವರು ಒಬ್ಬ ಮಂತ್ರಿಯಾಗಿ ಹಣಕಾಸಿನ ನಿರ್ವಹಣೆಯನ್ನು ಅತ್ಯಂತ ಶಿಸ್ತಿನಿಂದ ನಿರ್ವಹಿಸಿ, ಪ್ರಾಮಾಣಿಕ ರಾಗಿ ತಮ್ಮ ತಮ್ಮ ನಿಲುವು ಮತ್ತು ವಿಚಾರ ಧಾರೆಗಳಿಗಾಗಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸುವ ಪ್ರಸಂಗಗಳು ಬಂದರೂ ಎಂದೂ ರಾಜಿಯಾಗದೇ, ರಾಷ್ಟ್ರದ ಜನತೆಯ ದೃಷ್ಟಿಯಲ್ಲಿ ನಿಜವಾದ ವಿಶ್ವಮಾನವರಾದರು. ಆದರೆ ಸುತ್ತೂರಿನಲ್ಲಿ ಮಾನ್ಯ ಮುಖ್ಯಮಂತ್ರಿಯವರಿಗೆ ಬಹಿರಂಗವಾಗಿ ಬೆಂಬಲವನ್ನು ನೀಡಿ ಇವರ ತಂಟೆಗೆ ಬಂದರೆ ನಾವು ಬಿಡುವುದಿಲ್ಲ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ. ಇದೇ ರೀತಿ ಅನ್ಯ ಜಾತಿಯ ಜನರೂ ಸಹ ತಮ್ಮ ಜನಾಂಗದ ನಾಯಕರುಗಳ ತಪ್ಪುಗಳನ್ನು ಒಪ್ಪಿಕೊಂಡು ಬೆಂಬಲಕ್ಕೆ ನಿಲ್ಲುವಂತಹ ಸ್ಥಿತಿ ನಿರ್ಮಾಣವಾದರೆ, ಸಮಾಜವನ್ನು ದೇವರೇ ಕಾಪಾಡಬೇಕು.

2ಜಿ ಸ್ಟೆಕ್ಟ್ರಂ ಹಗರಣದಲ್ಲಿ ಭಾಗಿಯಾಗಿರುವ ರಾಜನ ಪರವಾಗಿ ಈ ರಾಷ್ಟ್ರದ ದಲಿತ ಸ್ವಾಮಿಗಳು ಬೆಂಬಲಕ್ಕೆ ನಿಂತರೆ ಅಚ್ಚರಿ ಪಡಬೇಕಿಲ್ಲ. ಅದೇ ರೀತಿಯಲ್ಲಿ ಲಾಲೂ ಪ್ರಸಾದ್ ಯಾದವರ ಪರವಾಗಿ ಹಿಂದುಳಿದ ವರ್ಗದವರ ಮಠಾಧಿಪತಿಗಳು ನಿಂತರೆ ಅಚ್ಚರಿಯಿಲ್ಲ. ಇನ್ನು ಕಾಮನ್‌ವೆಲ್ತ್ ಹಗರಣದ ರೂವಾರಿ ಕಲ್ಮಾಡಿಯ ಪರವಾಗಿ ಒಂದಷ್ಟು ಬ್ರಾಹ್ಮಣ ಮಠಗಳು ಬೆಂಬಲಕ್ಕೆ ನಿಂತರೆ ಅದೂ ಅಚ್ಚರಿಯ ಸಂಗತಿಯಲ್ಲ. ಹೀಗೆ ಆಯಾ ಜಾತಿಯ ಮಠಾಧಿಪತಿಗಳು ಅವರ ಜನಾಂಗದ ರಾಜಕಾರಣಿಗಳ ಪರವಾಗಿ ರಸ್ತೆಗೆ ಇಳಿದರೆ ಸಮಾಜದ ಸ್ಥಿತಿ ಅಯೋಮಯವಾಗುತ್ತದೆ.

ಈ ಹಿಂದೆ ಮಾನ್ಯ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಿದರು. ಆಗ ಯಾವ ಮಠಾಧೀಶರೂ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಅದೇ ರೀತಿಯಲ್ಲಿ ಎಸ್.ಆರ್.ಕಂಠಿಯವರು ಕೆಲವೇ ತಿಂಗಳುಗಳಲ್ಲಿ ಅಧಿಕಾರ ಕಳೆದುಕೊಂಡರು. ಆಗಲೂ ಯಾರೂ ಧ್ವನಿ ತೆಗೆಯಲಿಲ್ಲ. ಎಸ್.ಆರ್.ಬೊಮ್ಮಾಯಿಯವರ ಸರಕಾರ ಕೆಲವೇ ಕೆಲವು ತಿಂಗಳುಗಳಲ್ಲಿ ಪತನವಾ ಯಿತು. ಆದರೂ ಯಾರೂ ಮಾತನಾಡಲಿಲ್ಲ. ಜೆ.ಎಚ್.ಪಟೇಲರಿಗೆ ಅನೇಕ ರಾಜಕೀಯವಾದ ಸಮಸ್ಯೆಗಳು ಎದುರಾದವು. ಆಗಲೂ ಯಾರೂ ಮಾತನಾಡಲಿಲ್ಲ. ಇವೆಲ್ಲವೂ ಹೋಗಲಿ. ಪ್ರಾಮಾಣಿಕತೆಯಿಂದ ಹೋರಾಟ ಮಾಡುತ್ತಿರುವ ಗುಲಬರ್ಗಾದ ಕಾಂತಾರ ಪರವಾಗಿ ಯಾವ ಮಠಾಧಿಪತಿಗಳೂ ನಿಲ್ಲುವುದಿಲ್ಲ. ಇನ್ನು ಏಕಾಂತಯ್ಯನವರ ಹೋರಾಟ ಏಕಾಂಗಿಯಾಗಿದೆ. ಅನೇಕ ಪ್ರಾಮಾಣಿಕರು ವೀರಶೈವ ಜನಾಂಗದಲ್ಲಿದ್ದಾರೆ. ಅವರ ಪರವಾಗಿ ಯಾರೂ ಧ್ವನಿ ತೆಗೆಯುವುದಿಲ್ಲ.

ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದ ಸಂದರ್ಭದಲ್ಲಿ ಈ ರಾಜ್ಯದ ಮುತ್ಸದ್ದಿ ರಾಜಕಾರಣಿ ಎಂ.ಪಿ. ಪ್ರಕಾಶ್‌ರ ಬಗ್ಗೆ ರಾಜ್ಯದ ಸಚಿವ ಸಂಪುಟದ ಸದಸ್ಯರುಗಳು ಅತ್ಯಂತ ಲಘುವಾಗಿ ಮಾತನಾಡಿದರು. ಆಗ ಯಾವ ವೀರಶೈವ ಮಠದವರೂ ಇದನ್ನು ಖಂಡಿಸಲಿಲ್ಲ. ಎಂ.ಪಿ.ಪ್ರಕಾಶ್‌ರಿಗೆ ಸಾಂತ್ವನ ಹೇಳಲಿಲ್ಲ. ಆದರೆ, ಯಡಿಯೂರಪ್ಪನ ವಿಚಾರದಲ್ಲಿ ಮಾತ್ರ ಅದೇನು ಒಗ್ಗಟ್ಟು. ಅದೇನು ಬೆಂಬಲ. ಬಹುಷಃ ಯಡಿಯೂರಪ್ಪನವರು ಮಠ ಮಾನ್ಯಗಳ ಬಗ್ಗೆ ಮತ್ತು ಮಠಾಧೀಶರುಗಳ ಬಗ್ಗೆ ಆರ್ಥಿಕವಾಗಿ ತೋರುತ್ತಿರುವ ವಿಶಾಲ ಮನೋಭಾವ ಇವರನ್ನು ಅವರ ಪರವಾಗಿ ನಿಲ್ಲುವಂತೆ ಮಾಡಿರಬಹುದು. ಇದೇ ಸಮಾವೇಶದಲ್ಲಿ ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋರಾಡಬೇಕೆಂದು ಹೇಳಿಕೆ ನೀಡಿರುವುದು ಬಹಳ ಸಂತೋಷದ ಸಂಗತಿಯಾಗಿದೆ.

ಯಾರ ಭ್ರಷ್ಟಾಚಾರದ ವಿರುದ್ಧ ಎಂದು ಹೇಳದೇ ಕೇವಲ ಭ್ರಷ್ಟಾಚಾರದ ವಿರುದ್ಧ ಎಂದು ಹೇಳಿರುವುದು ಮತ್ತಷ್ಟು ಗೊಂದಲವಾಗಿರುತ್ತದೆ. ಯಾವುದೇ ಜಾತಿ ಮತ್ತು ಧರ್ಮದ ಸಂಸ್ಥೆಗಳು ಇರುವುದು ಪ್ರಾಮಾಣಿಕರನ್ನು ಬೆಂಬಲಿಸಲು ಅಪ್ರಮಾಣಿಕರನ್ನು ಶಿಕ್ಷಿಸಲು ಮಾತ್ರ. ಕೇವಲ ಅಧಿಕಾರದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಒಂದು ವ್ಯಕ್ತಿಯ ಪರವಾಗಿ ಇಡೀ ಜನಾಂಗವೇ ಕೇಂದ್ರೀಕೃತವಾಗುವುದಾದರೆ ಅನ್ಯ ಜನಾಂಗದ ಜನರಿಗೆ ಬೇರೆಯ ಭಾವನೆಗಳು ಮೂಡಿ ಸಮಾಜದ ಸಾಮರಸ್ಯ ಖಂಡಿತವಾಗಿಯೂ ಹಾಳಾಗುತ್ತದೆ.

ಕೆ.ಎಸ್.ನಾಗರಾಜ್, ಬೆಂಗಳೂರು

No comments:

Post a Comment

html