Pages

Sunday 10 April 2011

ದಲಿತರು ಮತ್ತು ಶೋಷಿತರಿಗೆ ನಿಜವಾದ ಸ್ವಾತಂತ್ರ, ಸಮಾನತೆ ಸಿಗುವುದು ಎಂದು..?


ಸೋಮವಾರ - ಏಪ್ರಿಲ್ -11-2011

1932ರಲ್ಲಿ ಮುಂಬೈಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರು ದಲಿತರ ಕುರಿತು ಮಾಡಿದ ಭಾಷಣ ಇಡೀ ಭಾರತದ ದಲಿತ ಸಮುದಾಯ ಎಂದೂ ಮರೆಯಲಾಗದ ಮಾತುಗಳು. ‘ದಲಿತ ಶೋಷಿತ ಸಮುದಾಯಗಳಿಗೆ ಎಂದು ಬೇರೆ ಜಾತಿಯವರಿಂದ ಬಿಡುಗಡೆ ಸಿಗುತ್ತದೆಯೋ ಆ ದಿನ ಅವರ ಪಾಲಿಗೆ ಸ್ವಾತಂತ್ರದ ದಿನ ಬಂದ ಹಾಗೆ’ ಎಂದು ಹೇಳಿದ್ದಾರೆ.21ನೆ ಶತಮಾನದಲ್ಲೂ ಸಹಾ ಮಾನಭಂಗ ಹತ್ಯೆ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇರುವುದು ತುಂಬಾ ನೋವಿನ ಸಂಗತಿ. ಮೂಲಭೂತ ವಾದಿಗಳು ಇವರನ್ನು ಯಾವುದೇ ರಂಗದಲ್ಲಿಯೂ ಸಹ ಮುಂದೆ ಬಿಡದೆ ಅವರನ್ನು ಹಿಂದೆ ತಳ್ಳುತ್ತಿರುವುದು ಮತ್ತೊಂದು ನೋವಿನ ಸಂಗತಿ.
ಇದಕ್ಕೆ ಪೂರಕವೆಂಬಂತೆ ಮಹಾರಾಷ್ಟ್ರದ ಬಿಲ್ಹಾ ಎಂಬ ಚಿಕ್ಕ ಗ್ರಾಮದಲ್ಲಿ ನಡೆದ ಬಹಿಷ್ಕಾರ ಆಗಿರಬಹುದು ಹಾಗೂ ಬಿಹಾರದ ರಾಹರ್ ಎಂಬಲ್ಲಿ ನಡೆದ ದೌರ್ಜನ್ಯವಾಗಿರಬಹುದು, ಕರ್ನಾಟಕದಲ್ಲಿ ಭಂಗಿ ಸಮುದಾಯದವರ ಮೇಲೆ ನಡೆದಂತಹ ಅನ್ಯಾಯವಾಗಿರಬಹುದು. ಹೀಗೆ ನೋಡುತ್ತಾ ಹೋದರೆ ಇಡೀ ಭಾರತದಲ್ಲಿರುವ ದಲಿತರಿಗೆ ಬೇರೆ ಜಾತಿಯವರಿಂದ ಒಂದಲ್ಲಾ ಒಂದು ರೀತಿಯ ಶೋಷಣೆ, ದೌರ್ಜನ್ಯಗಳು ನಡೆಯುತ್ತಲೇ ಇವೆ.
ಕರ್ನಾಟದಲ್ಲೂ ಬಿಜೆಪಿ ಸರಕಾರವು ಆಡಳಿತಕ್ಕೆ ಬಂದ ನಂತರವಂತೂ ದಲಿತರು ಯಾವುದೇ ರಂಗಕ್ಕೂ ಪ್ರವೇಶವನ್ನು ಪಡೆಯಲು ಬಿಡುತ್ತಿಲ್ಲ. ದಲಿತರ ಸಂಕಷ್ಟಗಳು ಕೇವಲ ಕನಸಿನ ಮಾತುಗಳಾಗೇ ಉಳಿದಿವೆ. ಇದರ ಮತ್ತೊಂದು ಮುಖವೆಂದರೆ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತರಿಗೆ ಮುಖ್ಯ ವೇದಿಕೆಯಿಂದ ಸುಮಾರು 5-6 ಕಿ.ಮೀ. ದೂರದಲ್ಲಿ ಪ್ರತ್ಯೇಕ ವೇದಿಕೆಯನ್ನು ಸಿದ್ಧಗೊಳಿಸಿ ಇವರಿಗೆ ಮತ್ತೆ ಅವಮಾನ ಮಾಡುವುದರ ಮೂಲಕ ನೀವು ದೂರವಿರುವುದೇ ಉತ್ತಮವೆಂಬ ಹಾದಿಯನ್ನು ತೋರಿಸಿರುವುದು ವಿಷಾದಕರ ಸಂಗತಿ.
ವಿಕಿಲೀಕ್ಸ್ ಮಾಡಿರುವ ವರದಿಯೇ ಇದಕ್ಕೆ ನೈಜ ಸಾಕ್ಷಿ. ಇವರು ವರದಿ ಮಾಡಿರುವ ಹಾಗೆ ನೋಡಿದರೆ ಯುಪಿಎ ಸರಕಾರದಲ್ಲಿ ದಲಿತರ ಬಗ್ಗೆ ಕಾಳಜಿ ಇರುವಂತಹವರು ಯಾರೊಬ್ಬರು ಇಲ್ಲವೆನ್ನುವುದು ನೂರಕ್ಕೆ ನೂರು ಸತ್ಯದ ಸಂಗತಿ. ಈ ರೀತಿ ದೇಶದಲ್ಲಿ ಶೋಷಣೆ, ದೌರ್ಜನ್ಯಗಳು ಮುಂದುವರಿಯುತ್ತಾ ಹೋದರೆ, ಇವರನ್ನು ನಾಯಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ದೇಶದಲ್ಲಿ ಇವರ ಅಭಿವೃದ್ಧಿ ಹೇಗೆ ಎಂಬುದನ್ನು ಪ್ರತಿಯೊಬ್ಬ ಶೋಷಿತನೂ ಚಿಂತಿಸಬೇಕಾಗಿರುವುದಂತೂ ಸತ್ಯ.

- ಗಂಗರಾಜು

ಕನ್ನಮೇಡಿ ಪಾವಗಡ

Varthabharathi

No comments:

Post a Comment

html